ಗಾರೆಗಚ್ಚೇನಲ್ಲ ದಾರು ದೂಲಗಳಲ್ಲ |
ಪಾರದ ದ್ರವದವೊಲು ಮನುಜ ಸ್ವಭಾವ ||
ವೀರಶಪಥಗಳಿಂದೆ ಘನರೂಪಿಯಾಗದದು |
ಸೈರಿಸದನಿನಿತು ನೀಂ – ಮಂಕುತಿಮ್ಮ || 298 ||
ಪದ-ಅರ್ಥ: ಗಾರೆಗಚ್ಚೇನಲ್ಲ=ಗಾರೆ, ಗಚ್ಚು+
ಏನಲ್ಲ, ದಾರುದೂಲ=ಮರದ ತೊಲೆಗಳು, ಪಾರದ ದ್ರವ=ಪಾದರಸ, ಸೈರಿಸದನಿನಿತು=
ಸೈರಿಸು+ಅದನು+ಇನಿತು.
ವಾಚ್ಯಾರ್ಥ: ಮನುಷ್ಯನ ಸ್ವಭಾವ ಗಾರೆ, ಗಚ್ಚು ಅಲ್ಲ, ಮರದ ತೊಲೆಯೂ ಅಲ್ಲ, ಅದು ಪಾದರಸದ ಹಾಗೆ. ಕೇವಲ ವೀರ ಪ್ರತಿಜ್ಞೆಗಳಿಂದ ಗಟ್ಟಿಯಾಗುವುದಿಲ್ಲ. ಅದರ ಚಂಚಲತೆಯನ್ನು ನೀನು ಸೈರಿಸಬೇಕು.
ವಿವರಣೆ: ಮನುಷ್ಯನ ಮನಸ್ಸು ಚಂಚಲತೆಯ ಮಾದರಿ. ಅದು ಸ್ಥಿರವಾಗಿ ಇರುವುದು ಬಹಳ ಕಷ್ಟ. ‘ಮನವ ನಿಲಿಸುವುದು ಬಲು ಕಷ್ಟ’ ಎಂದರು ದಾಸರು. ‘ಕೊಂಬೆಯ ಮೇಲಣ ಮರ್ಕಟದಂತೆ ಲಂಘಿಸುವುದೆನ್ನ ಮನವು, ನಿಂದಲ್ಲಿ ನಿಲಲೀಯದೆನ್ನ ಮನವು’ ಎಂದರು ಬಸವಣ್ಣನವರು.
‘ಮನಸೋ ನಿಗ್ರಹಾಯತ್ತಂ ಅಭಯಂ ಸರ್ವಯೋಗಿನಾಮ್ |
ದುಃಖಕ್ಷಯ ಪ್ರಬೋಧಶ್ಚಾಪ್ಯಕ್ಷಯಾ
ಶಾಂತಿರೇವ ಚ ||
ಎನ್ನುತ್ತದೆ ಮಾಂಡೂಕ್ಯ ಕಾರಿಕಾ. ‘ಎಲ್ಲ ಯೋಗಿಗಳ ಲಕ್ಷಣವಾದ ಅಭಯವು ಅವರ ಮನೋನಿಗ್ರಹದ ಫಲ. ಲೋಕದ ಎಲ್ಲ ನಾಶಕ್ಕೂ, ಆತ್ಮಜ್ಞಾನ ಪ್ರಾಪ್ತಿಗೂ, ಶಾಶ್ವತ ಶಾಂತಿಗೂ ಕಾರಣವಾದ ಸಾಧನವೆಂದರೆ ಮನಸ್ಸೇ’.
ಶತದಿಕ್ಕುಗಳಲ್ಲಿ ಏಕಕಾಲಕ್ಕೆ, ಅಸಾಧ್ಯವಾದ ವೇಗದಲ್ಲಿ ಮುನ್ನುಗ್ಗುವ ಈ ಮನಸ್ಸನ್ನು ಒಂದು ಚಿಂತನೆಯ ಮೇಲೆ ಕೇಂದ್ರೀಕರಿಸುವ ತಂತ್ರವೇ ಧ್ಯಾನ ಅಥವಾ ಯೋಗ. ಅದಕ್ಕೆಂದೇ ಮಹರ್ಷಿ ಪತಂಜಲಿಗಳು, ‘ಯೋಗಃ ಚಿತ್ತವೃತ್ತಿ ನಿರೋಧಃ’ ಎಂದು ಘೋಷಿಸಿದರು. ಸದಾ ಹರಿದಾಡುವ, ಚಂಚಲವಾದ ಮನಸ್ಸಿನ ಸ್ವಭಾವವನ್ನು ತಡೆದು ನಿಲ್ಲಿಸುವುದೇ ಯೋಗ. ಮನೆಯನ್ನು ಕಟ್ಟುವಾಗ ಗಾರೆಗಚ್ಚುಗಳನ್ನು ಚೆನ್ನಾಗಿ ಅರೆದು ನೀರು ಹಾಕಿ ಹದವಾಗಿ ಕಲೆಸಿ ಸ್ವಲ್ಪ ಕಾಲ ಬಿಟ್ಟರೆ ಗಟ್ಟಿಯಾಗಿ ಬಿಡುತ್ತದೆ. ಮರದಿಂದ ಮಾಡಿದ ಭಾರಿ ತೊಲೆಗಳನ್ನು ಒಂದೆಡೆಗೆ ಸರಿಯಾಗಿ ಕೂಡ್ರಿಸಿಬಿಟ್ಟರೆ ಅಲುಗಾಡದೆ ಅಲ್ಲಿಯೇ ನೂರಾರು ವರ್ಷಗಳ ಕಾಲ ನಿಂತುಬಿಡುತ್ತವೆ. ಅಂದರೆ ಪ್ರಪಂಚದ ಯಾವುದೇ ವಸ್ತುವನ್ನು ಖಚಿತವಾದ ಸ್ಥಳದಲ್ಲಿ ಅಚಲವಾಗಿ ನಿಲ್ಲಿಸಿ ಬಿಡಬಹುದು. ಆದರೆ ಮನಸ್ಸು ಪಾದರಸದಂತೆ ಸದಾ ಚಲನಶೀಲವಾಗಿಯೇ ಇರುತ್ತದೆ.
ಅದನ್ನು ಶಪಥಗಳಿಂದ ನಿಲ್ಲಿಸುವುದು ಕಷ್ಟ. ನನಗೆ ಪರಿಚಯವಿದ್ದ ಖ್ಯಾತ ಹಾಸ್ಯ ಸಾಹಿತಿಗಳಿಗೆ ಮದ್ಯಪಾನ ಅಭ್ಯಾಸವಾಗಿ ಬಿಟ್ಟಿತ್ತು. ಒಂದು ಬಾರಿ ವರ್ತಮಾನ ಪತ್ರಿಕೆಯಲ್ಲಿ, ಅವರು ಯಾವುದೋ ಕಾರ್ಯಕ್ರಮದಲ್ಲಿ ಇನ್ನು ಮದ್ಯಪಾನ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು ಎಂದು ಓದಿದೆ. ಆದರೆ ಆರು ತಿಂಗಳಿನ ನಂತರ ಅವರನ್ನು ಭೇಟಿಯಾದಾಗ ಕುಡಿಯಲು ಶುರು ಮಾಡಿದಾಗ ಪ್ರತಿಜ್ಞೆ ಏನಾಯಿತು ಎಂದು ಕೇಳಿದೆ. ಅದಕ್ಕೆ, ‘ಹೌದು, ನಿಜವಾಗಿಯೂ ಬಿಟ್ಟಿದ್ದೇನೆ. ಅಂದು ಕುಡಿಯುತ್ತಿದ್ದ ಬಾಟಲಿಯಲ್ಲಿಯ ಮದ್ಯವನ್ನು ಕುಡಿಯಲೇ ಇಲ್ಲ. ಇದು ಬೇರೆ ಬಾಟಲಿ’ ಎಂದರು! ಪ್ರತಿಜ್ಞೆ ಮಾಡುವುದರಿಂದ ಮನ ಸ್ಥಿರವಾಗದು. ಅದಕ್ಕೆ ಸದಾ ಕಾಲದ ಎಚ್ಚರ, ಪ್ರಯತ್ನ ಎರಡೂ ಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.