ದೈವವೆನಿಸಿರುತೆ ವಿಶ್ವ ಪ್ರಕೃತಿ ಶಕ್ತಿಯಲಿ |
ಜೀವವಾಸನೆಗಳಲಿ ಪೂರ್ವಕೃತವೆನಿಸಿ ||
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ |
ತ್ರೈವಿಧದೊಳಿರುತಿಹುದು – ಮಂಕುತಿಮ್ಮ || 151 ||
ಪದ-ಅರ್ಥ: ದೈವವೆನಿಸಿರುತೆ=ದೈವ+ಎನಿಸಿರುತೆ, ವಾಸನೆ=ಆಸೆಯ ಸೆಳೆತ, ಪೂರ್ವಕೃತ=ಪೂರ್ವ ಜನ್ಮದ ಕರ್ಮ, ಧೀವರ್ತನೆ=ಬುದ್ಧಿಶಕ್ತಿಯ ನಡತೆ, ತ್ರೈವಿಧದೊಳಿರುತಿಹುದು=ತ್ರೈವಿಧದೊಳು(ಮೂರು ರೀತಿಗಳಲ್ಲಿ)+ಇರುತಿಹುದು.
ವಾಚ್ಯಾರ್ಥ: ವಿಶ್ವವನ್ನು ನಡೆಸುವ ಪ್ರಕೃತಿಯ ಶಕ್ತಿಯಲ್ಲಿ ದೈವವೆಂದು, ನಮ್ಮ ಬದುಕಿನ, ಆಸೆಗಳ ಸೆಳೆತದಲ್ಲಿ ಪೂರ್ವಕರ್ಮವೆಂದು, ಬುದ್ಧಿಶಕ್ತಿಯ ನಡೆಗಳಲ್ಲಿ ಪೌರುಷವೆಂದು ಕೆಲಸ ಮಾಡುವುದು ಒಂದೇ ಪರಸತ್ವ. ಅದೇ ಮೂರು ರೀತಿಗಳಲ್ಲಿ ಕಾರ್ಯಮಾಡುತ್ತದೆ.
ವಿವರಣೆ: ಕೆಲದಶಕಗಳ ಹಿಂದೆ ಬಂಗಾಲದ ಅತ್ಯಂತ ಶ್ರೇಷ್ಠ ಕಲಾವಿದೆ ಸಾವ್ಲಿ ಮಿತ್ರಾರವರ ಏಕವ್ಯಕ್ತಿ ಪ್ರದರ್ಶನವನ್ನು ನೋಡಿದ್ದೆ. ಅದರ ಹೆಸರು ‘ನಾಥವತೀ ಅನಾಥವತ್’. ದ್ರೌಪದಿಯ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು, ಅವಳ ದೃಷ್ಟಿಯಲ್ಲಿ ಇಡೀ ಮಹಾಭಾರತವನ್ನು ನೋಡುವ ಪ್ರಯತ್ನ. ಅದೊಂದು ಅತ್ಯದ್ಭುತ, ಎಂದೆಂದಿಗೂ ಮರೆಯಲಾಗದ ಅನುಭವ. ಒಬ್ಬಳೇ ಕಲಾವಿದೆ ಸಾವ್ಲಿ, ಭೀಷ್ಮನಾಗಿ, ಧೃತರಾಷ್ಟ್ರನಾಗಿ, ಗಾಂಧಾರಿಯಾಗಿ, ದುರ್ಯೋಧನ, ದುಶ್ಯಾಸನನಾಗಿ ಕೊನೆಗೆ ಕೃಷ್ಣನಾಗಿ ದ್ರೌಪದಿಯ ಕಷ್ಟಗಳನ್ನು, ದ್ವಂದ್ವಗಳನ್ನು, ಅಸಹಾಯಕತೆಯನ್ನು, ರೋಷವನ್ನು ತೋರಿದ್ದು ಅವಿಸ್ಮರಣೀಯ. ತಾನೇ ದುಶ್ಯಾಸನನಾಗಿ ಗರ್ವದಿಂದ, ದ್ವೇಷದ ಉರಿಯನ್ನು ತೂರುತ್ತ ಮರುಕ್ಷಣದಲ್ಲೇ ದ್ರೌಪದಿಯಾಗಿ ಅಸಹಾಯಕತೆಯನ್ನು, ಕೋಪವನ್ನು, ಮುಜುಗರವನ್ನು ತೋರಿದಾಗ ಅವು ನಿಜವಾಗಿಯೂ ಎರಡು ಪಾತ್ರಗಳೇ ಬೇರೆ ಎನ್ನಿಸುವಂತಿತ್ತು. ಆದರೆ ಎರಡನ್ನು ಮಾಡಿದ್ದು ಅದೇ ಕಲಾವಿದೆ. ಈ ಕಗ್ಗ ಹೆಚ್ಚು ಅಪ್ಯಾಯಮಾನವೆನ್ನಿಸಿತು. ಒಬ್ಬ ಕಲಾವಿದೆಗೇ ಹೀಗೆ ಬೇರೆ ಪಾತ್ರಗಳಲ್ಲಿ ಮೈದುಂಬಿ ಭಾವಸ್ಫುರಣೆ ಮಾಡುವುದು ಸಾಧ್ಯವಾದರೆ, ಪ್ರಪಂಚವನ್ನೇ ಸೃಷ್ಟಿಸಿದ ಮಹಾಶಕ್ತಿಗೆ ಪರಸತ್ವಕ್ಕೆ ಯಾವುದು ಅಸಾಧ್ಯ?
ಇಡೀ ಪ್ರಕೃತಿಯನ್ನು ಚಾಲಿಸುವಾಗ ತೋರಿದ ಶಕ್ತಿಯನ್ನು ಜ್ಞಾನಿಗಳು ದೈವ ಎಂದು ಕರೆದರು. ಬದುಕಿನಲ್ಲಿ ಮನುಷ್ಯ ತನ್ನ ಆಸೆಗಳಿಗೆ ಸಿಕ್ಕು ಒದ್ದಾಡಿ, ಸುಖ, ದುಃಖಗಳ ಒದೆಗೆ ತನ್ನನ್ನೊಡ್ಡಿಕೊಂಡಾಗ, ಯಾಕೆ ಹೀಗಾಯಿತು ಎಂದು ದೈನ್ಯನಾಗಿ ಕೇಳುತ್ತಿದ್ದಾಗ ಅದಕ್ಕೆ ಕಾರಣ ಪೂರ್ವಜನ್ಮದ ಕರ್ಮ ಎಂದರು. ನಮ್ಮ ವಾಸನೆಗಳ ಎಳೆತಕ್ಕೆ ಪೂರ್ವಜನ್ಮದಲ್ಲಿ ನಾವು ಮಾಡಿದ ಕರ್ಮಫಲವೇ ಕಾರಣ ಎನ್ನುವುದು ಸಮಾಧಾನ. ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬೆಳೆಸಿ ಎತ್ತರದ ಸಾಧನೆಗಳನ್ನು ಮಾಡಿದಾಗ ಅದನ್ನು ಪೌರುಷ ಎಂದು ಕರೆದರು. ಈ ಮೂರೂ ಬೇರೆ ಬೇರೆಯೇ? ಅಲ್ಲ ಎನ್ನುತ್ತದೆ ಕಗ್ಗ. ಈ ಮೂರೂ ಶಕ್ತಿಗಳು ಒಂದೇ ಪರಸತ್ವದ ರೂಪಗಳು. ಜಗತ್ತನ್ನು ನಡೆಸುವಾಗ ದೈವವಾಗಿ, ಮನುಷ್ಯನನ್ನು ಆಸೆಗಳ ಎಳೆತಕ್ಕೆ ಸಿಕ್ಕಿಸಿ, ಒದ್ದಾಡಿಸಿ, ಅದನ್ನು ಪಕ್ವಗೊಳಿಸುವ ಕ್ರಿಯೆಯಲ್ಲಿ ಪೂರ್ವಜನ್ಮದ ಕರ್ಮ – ಅದೃಷ್ಟವಾಗಿ, ಕೊನೆಗೆ ಮನುಷ್ಯನ ಸಾಧನೆಯಲ್ಲಿ ಪೌರುಷವಾಗಿ ನಿಂತಿರುವುದು, ಮೂರು ರೂಪಗಳಲ್ಲಿರುವ ಪರಸತ್ವವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.