ADVERTISEMENT

ಡಾ. ಎಚ್.ಆರ್.ಕೃಷ್ಣಮೂರ್ತಿ ಅಂಕಣ| ವಾಯುಗುಣ ನಿರಾಶ್ರಿತರ ವಲಸೆ

ವಾಯುಗುಣ ಪುನಶ್ಚೇತನ ಸಾಮರ್ಥ್ಯ ವೃದ್ಧಿ ಇಂದಿನ ತುರ್ತು ಅಗತ್ಯ

ಡಾ.ಎಚ್.ಆರ್.ಕೃಷ್ಣಮೂರ್ತಿ
Published 17 ಸೆಪ್ಟೆಂಬರ್ 2021, 17:23 IST
Last Updated 17 ಸೆಪ್ಟೆಂಬರ್ 2021, 17:23 IST
   

ನಮ್ಮ ದೇಶದ ಅರಣ್ಯ ಸಂರಕ್ಷಣೆಯ ಅಹಿಂಸಾತ್ಮಕ ಚಳವಳಿಯ ಇತಿಹಾಸದಲ್ಲಿ ಎದ್ದು ಕಾಣುವ ಹೆಸರೆಂದರೆ ಚಿಪ್ಕೊ. ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ‘ರೇನಿ’ ಈ ಚಿಪ್ಕೊ ಚಳವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಒಂದು ಹಳ್ಳಿ.

ಡಾ. ಎಚ್.ಆರ್.ಕೃಷ್ಣಮೂರ್ತಿ

1974ರ ಮಾರ್ಚ್ 25ರಂದು, ಹಳ್ಳಿಯ ಸಮೀಪದ ಅರಣ್ಯದಲ್ಲಿ ಮರಗಳನ್ನು ಕಡಿಯಲೆಂದು ಗುತ್ತಿಗೆದಾರ ತನ್ನ ಸಿಬ್ಬಂದಿಯೊಂದಿಗೆ ಬಂದಾಗ, ಆ ಹಳ್ಳಿಯ ಮಹಿಳಾ ಮಂಗಳ ದಳದ ಮುಖ್ಯಸ್ಥೆ ಗೌರಾದೇವಿ, ಇಪ್ಪತ್ತೇಳು ಮಹಿಳಾ ಸದಸ್ಯರೊಂದಿಗೆ ಮರಗಳನ್ನು ತಬ್ಬಿ ನಿಲ್ಲುತ್ತಾಳೆ. ಯಾವ ಬೆದರಿಕೆಗೂ ಬಗ್ಗದೆ, ನಾಲ್ಕು ದಿನಗಳ ಕಾಲ ಹಗಲಿರುಳೂ ಸರದಿಯಲ್ಲಿ ಮರಗಳನ್ನು ಅಪ್ಪಿ ನಿಂತ ರೇನಿ ಹಳ್ಳಿಯ ಅನಕ್ಷರಸ್ಥ ಮಹಿಳೆಯರ ಅಹಿಂಸಾತ್ಮಕ ಪ್ರತಿಭಟನೆಯನ್ನು ಎದುರಿಸಲಾರದೇ, ಮರ ಕಡಿಯಲೆಂದು ಬಂದಿದ್ದ ತಂಡ ಸೋತು ಅಲ್ಲಿಂದ ಹೊರಡುತ್ತದೆ. ಈ ವಿನೂತನ ಯಶಸ್ವಿ ಪ್ರತಿಭಟನೆಯ ವಿವರಗಳು ಹಿಮಾಲಯದ ಹಳ್ಳಿ ಹಳ್ಳಿಗಳಿಗೆ ಹರಡಿ, ಅರಣ್ಯ ಸಂರಕ್ಷಣೆಯ ಪ್ರಬಲ ಶಕ್ತಿಯಾಗಿ ರೂಪುಗೊಳ್ಳುತ್ತವೆ.

ನಲವತ್ತೆಂಟು ವರ್ಷಗಳ ನಂತರ ಇದೇ ರೇನಿ ಹಳ್ಳಿಯ ಜನ ಮತ್ತೊಮ್ಮೆ ಸಂಘಟಿತರಾಗಿ ಹೊಸ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ವಾಯುಗುಣ ಬದಲಾವಣೆಯಿಂದಾಗಿ ಮತ್ತೆ ಮತ್ತೆ ಸಂಭವಿಸುತ್ತಿರುವ ಮೇಘ ಸಿಡಿತ, ದಿಢೀರ್ ಪ್ರವಾಹ ಮುಂತಾದ ಪ್ರಾಕೃತಿಕ ಅವಘಡಗಳಿಂದ ತತ್ತರಿಸಿಹೋಗಿರುವ ಅವರು ತಮ್ಮೆಲ್ಲ ಮನೆಮಠ ಗಳನ್ನು ತೊರೆದು ಬೇರೆಡೆಗೆ ವಾಯುಗುಣ ವಲಸಿಗರಾಗಿ (ಕ್ಲೈಮೇಟ್‍ ಮೈಗ್ರೆಂಟ್ಸ್) ಹೊರಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ತಮ್ಮ ಆರಾಧ್ಯದೈವ ಗೌರಾದೇವಿಯ ಪುತ್ಥಳಿಯನ್ನು ಜೋಪಾನವಾಗಿ ರೇನಿಯಿಂದ ಹೊರಗೆ ಜೋಶಿಮಠದ ಸುರಕ್ಷಿತ ಸ್ಥಾನಕ್ಕೆ ಸಾಗಿಸಿದ್ದಾರೆ. ಇಡೀ ಹಳ್ಳಿಯನ್ನು ಬೇರೊಂದು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ, ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂಬ ಸಮುದಾಯದ ಬೇಡಿಕೆಗೆ ತ್ವರಿತಗತಿಯಲ್ಲಿ ಸ್ಪಂದಿಸದ ಸರ್ಕಾರದ ವಿರುದ್ಧ ದನಿಯೆತ್ತಿದ್ದಾರೆ. ಉತ್ತರಾಖಂಡದ 421 ಹಳ್ಳಿಗಳ ಜನ ಇದೇ ರೀತಿ ಸ್ಥಳಾಂತರಕ್ಕಾಗಿ ಕಾದಿದ್ದಾರೆ.

ADVERTISEMENT

ದೇಶ ಇಬ್ಭಾಗವಾದಾಗ, ಯುದ್ಧ ನಡೆದ ಸಂದರ್ಭಗಳಲ್ಲಿ ನೆಲೆ ಕಳೆದುಕೊಂಡ ನಿರಾಶ್ರಿತರು ಬೇರೆಡೆಗೆ ವಲಸೆ ಹೋಗುವ ಸಾವಿರಾರು ನಿದರ್ಶನಗಳು ಪ್ರಪಂಚದಾದ್ಯಂತ ನಮಗೆ ದೊರೆಯುತ್ತವೆ.

ಅಭಿವೃದ್ಧಿ ಯೋಜನೆಗಳೂ ಸ್ಥಳೀಯ ಸಮುದಾಯಗಳನ್ನು ಒಕ್ಕಲೆಬ್ಬಿಸಿ ಪರಿಸರ ನಿರಾಶ್ರಿತರ (ಎನ್‍ವೈರನ್ಮೆಂಟಲ್ ರೆಫ್ಯುಜೀಸ್) ಸಮಸ್ಯೆಗಳನ್ನು ಸೃಷ್ಟಿಸುವುದು ಹೊಸದೇನಲ್ಲ. ವಿಶ್ವಬ್ಯಾಂಕ್ ವರದಿಯಂತೆ, ದೇಶದಲ್ಲಿರುವ 3,600ಕ್ಕೂ ಹೆಚ್ಚಿನ ಬೃಹತ್ ಅಣೆಕಟ್ಟೆಗಳು 4 ಕೋಟಿ ಜನರ ಸ್ಥಳಾಂತರಕ್ಕೆ ಕಾರಣವಾಗಿವೆ. ಬೃಹತ್ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಎಂಜಿನಿಯರಿಂಗ್ ವಿವರಗಳು, ವಿದ್ಯುತ್‌ ಉತ್ಪಾದನೆ, ನೀರಾವರಿ ಸೌಲಭ್ಯಗಳು ಮುಖ್ಯವಾಗುತ್ತವೆಯೇ ವಿನಾ ಯೋಜನೆಯಿಂದ ಸ್ಥಳಾಂತರ ಗೊಳ್ಳುವ ಜನಸಮುದಾಯದ ಪುನರ್ವಸತಿಗೆ ಅದೇ ಮಟ್ಟದ ಆದ್ಯತೆ ದೊರೆಯುವುದಿಲ್ಲ. ಸಾರ್ವಜನಿಕವಾಗಿ ಲಭ್ಯವಿರುವ ಸರ್ಕಾರಿ ದಾಖಲೆಗಳಂತೆ, ಇದುವರೆವಿಗೂ ನೆಲೆ ಕಳೆದುಕೊಂಡು ಸ್ಥಳಾಂತರಗೊಂಡ ಸುಮಾರು 4 ಕೋಟಿ ಜನರಲ್ಲಿ ಸಂಪೂರ್ಣ ಪುನರ್ವಸತಿ ಸಾಧ್ಯವಾಗಿರುವುದು ಸುಮಾರು 1 ಕೋಟಿ ಜನರಿಗೆ ಮಾತ್ರ.

ಯುದ್ಧ ಮತ್ತು ಅಭಿವೃದ್ಧಿ ಯೋಜನೆಗಳಿಂದ ನಿರಾಶ್ರಿತರಾಗಿ ಸ್ಥಳಾಂತರಗೊಂಡು ವಲಸೆ ಹೋಗುವ ಜನರೊಂದಿಗೆ ಇದೀಗ ವಾಯುಗುಣ ಬದಲಾವಣೆ ತರುತ್ತಿರುವ ಸಮಸ್ಯೆಗಳೂ ಸೇರಿ, ವಾಯುಗುಣ ನಿರಾಶ್ರಿತರು ಮತ್ತು ವಲಸಿಗರ ಸಂಖ್ಯೆ ಏರುತ್ತಿದೆ.

ವಾಯುಗುಣ ಬದಲಾವಣೆಯ ನೇರ ಪರಿಣಾಮವಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಚಂಡಮಾರುತಗಳು, ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚಿನ ಮಳೆ ಸುರಿಸುವ ಮೇಘಸಿಡಿತ, ದಿಢೀರ್ ಪ್ರವಾಹ, ಕಾಳ್ಗಿಚ್ಚು, ಭೂಸರಿತ, ಮಣ್ಣಿನಕುಸಿತ ಮುಂತಾದ ವಿದ್ಯಮಾನಗಳ ಜೊತೆಗೆ ಮರುಭೂಮೀಕರಣ, ಬರಗಾಲ, ಸಾಗರದ ನೀರಿನ ಮಟ್ಟ ಏರಿಕೆ ಮುಂತಾದವು ವರ್ಷ ವರ್ಷವೂ ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸುತ್ತಿವೆ. ವಾಯುಗುಣಪ್ರೇರಿತ ಜನವಲಸೆಯ ಬಗ್ಗೆ ದೇಶದಲ್ಲಿ ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ ವರ್ಲ್ಡ್‌ ಎಕನಾಮಿಕ್ ಫೋರಂ, ವಿಶ್ವಬ್ಯಾಂಕ್, ಯುನಿಸೆಫ್‍ ಅಧ್ಯಯನ ವರದಿಗಳು ಸಮಸ್ಯೆಯ ತೀವ್ರತೆಯ ಮೇಲೆ ಬೆಳಕು ಚೆಲ್ಲುತ್ತವೆ.

2008- 2018ರ ಅವಧಿಯಲ್ಲಿ, ಬದಲಾಗುತ್ತಿರುವ ವಾಯುಗುಣದ ಪರಿಣಾಮವಾಗಿ ಸಂಭವಿಸಿದ ಅವಘಡಗಳಿಂದ ಪ್ರಪಂಚದಾದ್ಯಂತ 25.3 ಕೋಟಿ ಜನ ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದು ಅದೇ ಅವಧಿಯಲ್ಲಿ ಯುದ್ಧಗಳಿಂದ ನೆಲೆ ಕಳೆದುಕೊಂಡು ವಲಸೆ ಹೋದವರಿಗಿಂತ ಹತ್ತು ಪಾಲು ಹೆಚ್ಚು. 2018ರ ಒಂದೇ ವರ್ಷದಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ, ವಾಯುಗುಣ ಬದಲಾವಣೆಯ ಕಾರಣದಿಂದ ನೆಲೆ ಕಳೆದುಕೊಂಡು ಸ್ಥಳಾಂತರಗೊಂಡವರ ಸಂಖ್ಯೆ 33 ಲಕ್ಷ. 2050ರ ಒಳಗಾಗಿ ಮೊಜಾಂಬಿಕ್, ಜಿಂಬಾಬ್ವೆ, ಬಹಮಾಸ್, ಜಪಾನ್ ಮತ್ತು ಅಫ್ಗಾನಿಸ್ತಾನದಲ್ಲಿ ವಾಯುಗುಣ ಬದಲಾವಣೆ ಪ್ರೇರಿತ ವಿದ್ಯಮಾನಗಳಿಂದ 120 ಕೋಟಿ ಜನ ನಿರಾಶ್ರಿತರಾಗಿ ಸ್ಥಳಾಂತರಗೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.

ಈಗಾಗಲೇ ವಾಯುಗುಣ ನಿರಾಶ್ರಿತರಾಗಿ ಸ್ಥಳಾಂತರಗೊಂಡಿರುವ ಕೋಟ್ಯಂತರ ಮಂದಿ ಕೊಳೆಗೇರಿ ಗಳಲ್ಲಿ, ನಿರಾಶ್ರಿತರ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರದಿಯಂತೆ, ವಾಯುಗುಣ ನಿರಾಶ್ರಿತ ವಲಸಿಗರ ಒಟ್ಟು ಸಂಖ್ಯೆಯ ಶೇ 80ರಷ್ಟು ಭಾಗ ಬದುಕಲು ಬೇಕಾದ ಮೂಲಭೂತ ಅಗತ್ಯಗಳಿಗೂ ಹೋರಾಡಬೇಕಾದ ಪರಿಸ್ಥಿತಿ ಬರುವುದರಿಂದ, ಘನತೆಯಿಂದ ಜೀವಿಸಬೇಕೆನ್ನುವ ಅವರ ಹಂಬಲ ಕನಸಾಗಿಯೇ ಉಳಿಯಲಿದೆ.

ಜಾಗತಿಕ ಮಟ್ಟದಲ್ಲಿ ನಡೆದಿರುವ ಎಲ್ಲ ಅಧ್ಯಯನಗಳೂ ಒಟ್ಟಾರೆಯಾಗಿ ನಿರಾಶಾದಾಯಕವಾದ ಮುನ್ನೋಟವನ್ನು ನೀಡಿವೆ ನಿಜ. ಹಾಗಾದರೆ ಅಂತಹ ವಿಷಮ ಪರಿಸ್ಥಿತಿಯಿಂದ ಪಾರಾಗುವುದು ಹೇಗೆ? ವಾಯುಗುಣ ಬದಲಾವಣೆಗೆ ಮುಖ್ಯ ಕಾರಣವಾದ ಜಾಗತಿಕ ತಾಪಮಾನದ ಏರಿಕೆಯನ್ನು ನಿಯಂತ್ರಿಸುವುದರ ಜೊತೆಗೇ ವಾಯುಗುಣ ಬದಲಾವಣೆಗಳು ತರುತ್ತಿರುವ ಪರಿಣಾಮಗಳ ವಾಸ್ತವವನ್ನು ಒಪ್ಪಿಕೊಂಡು, ವಾಯುಗುಣ ನಿರಾಶ್ರಿತರು ಮತ್ತು ವಲಸೆಯ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಲು ಬೇಕಾದ ‘ಕ್ಲೈಮೇಟ್ ರೆಸಿಲಿಯನ್ಸ್’ ಸಾಮರ್ಥ್ಯವನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕೆಂಬುದು ವಿಜ್ಞಾನಿಗಳ ಅಭಿಪ್ರಾಯ.

ಅಪಾಯಕಾರಿ ಹವಾವಿದ್ಯಮಾನಗಳನ್ನು ಎದುರಿ ಸಲು ಸನ್ನದ್ಧರಾಗಿ, ಸ್ಥಳೀಯ ಆರ್ಥಿಕತೆ, ಜೀವನೋಪಾಯ ಗಳಿಗೆ ತೊಂದರೆಯಾಗದಂತೆ ಪರ್ಯಾಯಗಳನ್ನು ಮೊದಲೇ ರೂಪಿಸಿ, ಅವಘಡಗಳ ಪರಿಣಾಮಗಳಿಂದ ಆದಷ್ಟು ಬೇಗ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಸ್ಥಳೀಯವಾಗಿ ಬೆಳೆಸುವುದೇ ವಾಯುಗುಣ ಪುನಶ್ಚೇತನದ (ಕ್ಲೈಮೇಟ್ ರೆಸಿಲಿಯನ್ಸ್) ಮುಖ್ಯ ಗುರಿ. ದೇಶದಲ್ಲಿ 2005ರಲ್ಲಿ, ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಅಥಾರಿಟಿ ಅಸ್ತಿತ್ವಕ್ಕೆ ಬಂದಾಗಿನಿಂದಲೇ ಈ ಕೆಲಸಗಳು ನಿಧಾನವಾಗಿ ಪ್ರಾರಂಭವಾಗಿವೆ.

ಒಡಿಶಾ ರಾಜ್ಯದ 480 ಕಿ.ಮೀ. ಕರಾವಳಿಯಲ್ಲಿ ಇದುವರೆವಿಗೂ ನಿರ್ಮಿಸಲಾಗಿರುವ ಸುಮಾರು 200 ಚಂಡಮಾರುತ ಆಶ್ರಯ ತಾಣಗಳು (ಸೈಕ್ಲೋನ್ ಶೆಲ್ಟರ್ಸ್) ಇದಕ್ಕೊಂದು ನಿದರ್ಶನ. 15 ರಾಜ್ಯಗಳಲ್ಲಿ, ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್‍ವಿರಾನ್ಮೆಂಟ್‌ ಸಂಸ್ಥೆ ಮತ್ತು ಡೌನ್ ಟು ಅರ್ಥ್‌ ಪತ್ರಿಕೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ನಡೆಸಿದ ವಿಸ್ತೃತ ಅಧ್ಯಯನವು ಈ ಯೋಜನೆಯಲ್ಲಿರುವ ನೀರು ಮತ್ತು ಸಂಪನ್ಮೂಲಗಳ ಸಂರಕ್ಷಣೆ, ನೀರಾವರಿ, ಪ್ರವಾಹ ನಿರ್ವಹಣೆ, ಕೃಷಿ ಮತ್ತು ಜಾನುವಾರು, ಮೀನುಗಾರಿಕೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಗಳಿಗೆ ಸಂಬಂಧಿತ ಕೆಲಸಗಳಲ್ಲಿ ಹಣ ತೊಡಗಿಸಿ, ವಾಯುಗುಣ ಪುನಶ್ಚೇತನದ ಸಾಮರ್ಥ್ಯವನ್ನು ಬೆಳೆಸುವುದು ಸಾಧ್ಯವೆಂಬುದನ್ನು ತೋರಿಸಿದೆ. ಅಂತಹ ಹಲವಾರು ನಿದರ್ಶನಗಳೂ ಈ ಅಧ್ಯಯನದಲ್ಲಿವೆ.

ಬದಲಾಗುತ್ತಿರುವ ವಾಯುಗುಣದಿಂದ ಮತ್ತೆ ಮತ್ತೆ ಪ್ರಾಕೃತಿಕ ಅವಘಡಗಳಿಗೆ ಈಡಾಗುತ್ತಿರುವ ಪ್ರದೇಶ ಗಳಲ್ಲಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು, ವಾಯುಗುಣ ಪುನಶ್ಚೇತನ ಸಾಮರ್ಥ್ಯವನ್ನು ಬೆಳೆಸುವ ದಿಕ್ಕಿಗೆ ಮರುಹೊಂದಿಸಿ ಕಾರ್ಯಗತಗೊಳಿಸಿದಲ್ಲಿ, ವಾಯುಗುಣ ನಿರಾಶ್ರಿತರ ವಲಸೆ ಹಾಗೂ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ ಎಂಬುದು ತಜ್ಞರ ಖಚಿತ ನಿಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.