ADVERTISEMENT

ಪ್ರಧಾನಿ ಮೋದಿ ಅವರಿಗೊಂದು ಪತ್ರ

ಹೊನಕೆರೆ ನಂಜುಂಡೇಗೌಡ
Published 24 ಮೇ 2015, 19:30 IST
Last Updated 24 ಮೇ 2015, 19:30 IST
ಪ್ರಧಾನಿ ಮೋದಿ ಅವರಿಗೊಂದು ಪತ್ರ
ಪ್ರಧಾನಿ ಮೋದಿ ಅವರಿಗೊಂದು ಪತ್ರ   

ನರೇಂದ್ರ ಮೋದಿ ಅವರೇ, ನಿಮಗೆ ಅಭಿನಂದನೆಗಳು. ನಿಮ್ಮ ನೇತೃತ್ವದ ಸರ್ಕಾರಕ್ಕೀಗ ಒಂದು ವರ್ಷ. 2014ರ ಮೇ 26ರಂದು ನೀವು ಪ್ರಧಾನಿ ಪಟ್ಟಕ್ಕೇರಿದ ಸಂದರ್ಭದಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿತ್ತು. ಯುಪಿಎ ಸರ್ಕಾರದ 10 ವರ್ಷದ ದುರಾಡಳಿತ, ಹಗರಣಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರ್ಮೋಡ ಕವಿದಿದ್ದ ಸಂದರ್ಭದಲ್ಲಿ ಹೊಸ ಭರವಸೆಯ ಬೆಳಕಾಗಿ ನೀವು ಕಂಡಿರಿ.

ಹೊಸ ಕನಸುಗಳೊಂದಿಗೆ ಜನ ನಿಮ್ಮನ್ನು ಬೆಂಬಲಿಸಿದರು. ಲೋಕಸಭೆ ಚುನಾವಣೆ ಸಮಯದಲ್ಲಿ ನೀವು ಲೆಕ್ಕವಿಲ್ಲದಷ್ಟು ಪ್ರಚಾರ ಭಾಷಣ ಮಾಡಿದ್ದೀರಿ. ಬೇಕಾದಷ್ಟು ಭರವಸೆಗಳನ್ನು ಕೊಟ್ಟಿದ್ದೀರಿ. ಅವುಗಳಲ್ಲಿ ಎಷ್ಟು ಈಡೇರಿವೆ, ಎಷ್ಟು ಉಳಿದಿವೆ ಎಂಬ ಮೌಲ್ಯಮಾಪನ ನಡೆಯುತ್ತಿದೆ. ಯಾವುದೇ ಸರ್ಕಾರದ ಸಾಧನೆ ಅಳೆಯಲು ಒಂದು ವರ್ಷ ಸಾಕಾಗದು. ಕನಿಷ್ಠ ಎರಡು ವರ್ಷವಾದರೂ ಬೇಕು. ಆದರೆ, ಸರ್ಕಾರದ ಚಿಂತನೆಗಳೇನು,  ಒಲವು ನಿಲುವುಗಳೇನು, ಯಾವ ಹಾದಿಯಲ್ಲಿ ಅದು ಮುನ್ನಡೆದಿದೆ ಎಂದು ಅರ್ಥ ಮಾಡಿಕೊಳ್ಳಲು ಈ ಒಂದು ವರ್ಷ ಬೇಕಾದಷ್ಟು.

ವರ್ಷದ ನಿಮ್ಮ ಸಾಧನೆಯನ್ನು ಬೆರಳೆಣಿಕೆಯಷ್ಟು ಉದ್ಯಮಿಗಳು, ಆರ್ಥಿಕ ತಜ್ಞರು ಹಾಡಿಹೊಗಳುತ್ತಿದ್ದಾರೆ. ಎಲೆಕ್ಟ್ರಾನಿಕ್‌ ಮಾಧ್ಯಮಗಳು ಸರ್ಕಾರದ ಪರ ತುತ್ತೂರಿ ಊದುತ್ತಿವೆ. ಬಿಜೆಪಿ ವರಿಷ್ಠರು, ಸಂಪುಟ ಸದಸ್ಯರು ಸರದಿ ಮೇಲೆ ಸಾಧನೆಗಳನ್ನು ಪಟ್ಟಿ ಮಾಡುತ್ತಿದ್ದಾರೆ. ನಿಮ್ಮ ಸರ್ಕಾರ ಬಿಟ್ಟರೆ ಇನ್ನಿಲ್ಲ, ಆರೂವರೆ ದಶಕಗಳಲ್ಲಿ ಇಂಥ ಮತ್ತೊಂದು ಸರ್ಕಾರ ಬಂದಿಲ್ಲವೆಂದು ಭ್ರಮೆ ಹುಟ್ಟಿಸಲಾಗುತ್ತಿದೆ. ಕೆಲವೇ ಜನರ ಅಭಿಪ್ರಾಯಗಳನ್ನು ಸಾರ್ವತ್ರಿಕವೆಂದು ಬಿಂಬಿಸುವ ಯತ್ನ ನಡೆಯುತ್ತಿದೆ. ನಿಮ್ಮ ಆರ್ಥಿಕ, ವಿದೇಶಾಂಗ ನೀತಿಗಳನ್ನು ಮೇಲ್ಮಟ್ಟದಲ್ಲಿ ವಿಮರ್ಶೆ ಮಾಡಲಾಗುತ್ತಿದೆ. ಸಾಮಾನ್ಯರ ಬದುಕನ್ನು ಪ್ರಧಾನವಾಗಿ ಇಟ್ಟುಕೊಂಡು ನೀತಿ– ನಿರ್ಧಾರಗಳ ವಿಶ್ಲೇಷಣೆ ಆಗುತ್ತಿಲ್ಲ.

ಮೋದಿ ಅವರೇ, ನಿಮಗೆ ನೆನಪಿದೆಯೇ? ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ಹಾಗೂ ಬೆಲೆ ಏರಿಕೆಗೆ ಕಡಿವಾಣ ಹಾಕುವ ಎರಡು ಪ್ರಮುಖ ವಾಗ್ದಾನಗಳನ್ನು ನೀವು ಜನರಿಗೆ ನೀಡಿದ್ದೀರಿ. ಇವೆರಡೂ ಅತ್ಯಂತ ಗಂಭೀರ ಸಮಸ್ಯೆಗಳು. ಅವುಗಳನ್ನು ಪರಿಹರಿಸುವ ಕಡೆ ನೀವಿನ್ನೂ ಗಮನಹರಿಸಿಲ್ಲ. ಮೊದಲ ವರ್ಷ ನೀವು ಮಾತನಾಡಿದ್ದೇ ಹೆಚ್ಚು. ಕೆಲಸ ಮಾಡಿದ್ದು ಕಡಿಮೆ. ಸರ್ಕಾರ ಏನೂ ಮಾಡಿಲ್ಲವೆಂದರೆ ಬಹುಶಃ ಪೂರ್ವಗ್ರಹಪೀಡಿತ ಅಭಿಪ್ರಾಯವಾಗಬಹುದು. ಚೀನಾ, ಪಾಕಿಸ್ತಾನ ಒಳಗೊಂಡಂತೆ ಬೇರೆ ಬೇರೆ ದೇಶಗಳೊಂದಿಗೆ ಸಂಬಂಧ ಸುಧಾರಿಸುವ ಕೆಲಸವನ್ನು ಅತ್ಯಂತ ಬದ್ಧತೆಯಿಂದ ಮಾಡಿದ್ದೀರಿ. ಬಿಡುವಿಲ್ಲದ 18 ರಾಷ್ಟ್ರಗಳ ನಿಮ್ಮ  ಪ್ರವಾಸಕ್ಕೆ ನಿರೀಕ್ಷೆ ಮೀರಿ ಪ್ರಚಾರ ಸಿಕ್ಕಿದೆ. ಆದರೆ, ಒಂದೇ ಭೇಟಿಗೆ ಫಲಶ್ರುತಿ ಅಳೆಯುವ ಪ್ರಯತ್ನ ನಡೆಯುತ್ತಿದೆ. ಪಾಕ್‌, ಚೀನಾದೊಂದಿಗಿನ ವಿವಾದಗಳು ಒಂದೇ ಸಲಕ್ಕೆ ಬಗೆಹರಿಯುವುದಿಲ್ಲ. ಅವು ಸುಲಭವಾಗಿ ಪರಿಹಾರಆಗುವ ಸಮಸ್ಯೆಗಳೂ ಅಲ್ಲ. 

ನೀವು ಅಧಿಕಾರ ಸ್ವೀಕಾರ ಮಾಡಿದ ತಕ್ಷಣವೇ ಮೇಲ್ಮಟ್ಟದಲ್ಲಿ, ಅಂದರೆ  ಸಚಿವಾಲಯದ ಮಟ್ಟದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದೀರಿ. ಸಚಿವರ ಕಚೇರಿಗಳಲ್ಲಿದ್ದ ಹಿರಿಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದೀರಿ. ಯುಪಿಎ ಸರ್ಕಾರದಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳ ನೆರಳೂ ನಿಮ್ಮ ಸರ್ಕಾರಕ್ಕೆ ಸೋಕದಂತೆ ಎಚ್ಚರ ವಹಿಸಿದ್ದೀರಿ. ಮನಮೋಹನ್ ಸಿಂಗ್‌ ನೇತೃತ್ವದ ಸರ್ಕಾರ ಮಾಡಿದ ಎಡವಟ್ಟುಗಳಿಂದ ಪಾಠ ಕಲಿತಿದ್ದೀರಿ. ನೀವು ಮಾಡಿದ ಇನ್ನೊಂದು ಉತ್ತಮ ಕೆಲಸವನ್ನು ಹೇಳಲೇಬೇಕು. ಸಚಿವರು, ಅಧಿಕಾರಿಗಳನ್ನು ಸುತ್ತುವರಿದಿದ್ದ ದಲ್ಲಾಳಿಗಳನ್ನು ದೂರವಿಟ್ಟಿದ್ದೀರಿ.

ಮಧ್ಯವರ್ತಿಗಳು ನಿಮ್ಮ ಸರ್ಕಾರದೊಂದಿಗೂ ಸಂಪರ್ಕ ಹೊಂದಲು ಪ್ರಯತ್ನ ಮಾಡಿದ್ದರು. ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕಿದ್ದೀರಿ. ಹಿಂದಿನ  ಯುಪಿಎ ಸರ್ಕಾರಕ್ಕೆ ಕಳಂಕ ಬಂದಿದ್ದೇ ದಲ್ಲಾಳಿಗಳಿಂದ. ಈ ಸಂಗತಿಯನ್ನು ಆರಂಭದಲ್ಲೇ ಅರ್ಥ ಮಾಡಿಕೊಂಡಿದ್ದೀರಿ. ನಿಮ್ಮ ಸುತ್ತಮುತ್ತಲೂ ಭ್ರಷ್ಟಾಚಾರ ನಡೆಯದೆ ಇರಬಹುದು. ನಿಮ್ಮ ಸಚಿವರು, ಅಧಿಕಾರಿಗಳನ್ನು ನೀವು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರಬಹುದು. ಅಂದಮಾತ್ರಕ್ಕೆ ಭ್ರಷ್ಟಾಚಾರವೇ ನಡೆಯುತ್ತಿಲ್ಲಎಂದು ಹೇಳುವುದು ಸರಿಯಲ್ಲ.  ಒಂದೇ ವರ್ಷದಲ್ಲಿ ಈ ಪಿಡುಗನ್ನು ತೊಲಗಿಸುವುದು ಕಷ್ಟ.

ಹಿಂದಿನ ಸರ್ಕಾರದಲ್ಲಿ ಡಾ. ಮನಮೋಹನ್‌ ಸಿಂಗ್‌ ಪ್ರಾಮಾಣಿಕರೆಂದು ಕರೆಸಿಕೊಂಡರು. ಅವರ ಸಂಪುಟದ ಕೆಲವು ಸಚಿವರ ವಿಷಯದಲ್ಲಿ ಹೀಗೆ ಹೇಳುವಂತಿರಲಿಲ್ಲ. ಹೆಸರಿಗೆ ಮಾತ್ರ ಸಿಂಗ್ ಪ್ರಧಾನಿ. ಅಧಿಕಾರ ಕೇಂದ್ರಗಳು ಬೇರೆ ಇದ್ದವು. ಅವರ ಸೌಜನ್ಯ, ಸಜ್ಜನಿಕೆಯನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಾಯಕರು ದುರ್ಬಳಕೆ ಮಾಡಿಕೊಂಡರು. ಈ ಸರ್ಕಾರದಲ್ಲಿ ನಿಮ್ಮ ಅನುಮತಿ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ನಿಮ್ಮ ಸಚಿವರಿಗೆ ಬಹಿರಂಗವಾಗಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ. ಇನ್ನು ಬೇರೆ ಸ್ವಾತಂತ್ರ್ಯಗಳು ಎಲ್ಲಿ ಸಿಗಬೇಕು? ಸಂಪುಟದ ಹಿರಿಯ ಸಚಿವರಾದ ಅರುಣ್‌ ಜೇಟ್ಲಿ, ಮನೋಹರ ಪರಿಕ್ಕರ್‌ ಮತ್ತು ಸುರೇಶ್‌ ಪ್ರಭು ಅವರಿಗೆ ಮಾತನಾಡುವ ಅಧಿಕಾರವಿದೆ.

ಇನ್ನುಳಿದಂತೆ ಬಹುತೇಕರು ಡಮ್ಮಿ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರಿಗೆ ವಿದೇಶಾಂಗ ಖಾತೆ ನೀಡಿದ್ದೀರಿ. ಅದೂ ನೆಪಕ್ಕೆ ಮಾತ್ರ. ಅವರಿಗೆ ಏನೇನೂ ಅಧಿಕಾರ ಇಲ್ಲ. ಎಲ್ಲ ವಿಷಯಗಳನ್ನು ನೀವೇ ಗಮನಿಸುತ್ತೀರಿ. ಸುಷ್ಮಾ ಅವರಿಗೇ ಈ ಗತಿಯಾದರೆ ಮಿಕ್ಕವರ ಪಾಡೇನು? ಪ್ರತೀ ಇಲಾಖೆಯ ಕಡತಗಳು ನಿಮಗೇ ಬರಬೇಕೆಂದು ಆದೇಶ ಹೊರಡಿಸಿದ್ದೀರಿ. ಸಚಿವರನ್ನು ಬಿಟ್ಟು ಅವರ ಕಾರ್ಯದರ್ಶಿಗಳ ಜತೆ ನೀವೇ ನೇರವಾಗಿ ಮಾತನಾಡುತ್ತೀರಿ. ಸರ್ಕಾರದಲ್ಲಿ ಅಷ್ಟೇ ಅಲ್ಲ, ಸಂಘ ಪರಿವಾರದ ಒಳಗೂ ನೀವು ಪ್ರಭಾವಿ ನಾಯಕರು. ಮೋಹನ್‌ ಭಾಗವತ್‌ ಮತ್ತಿತರರು ನೀವು ಹೇಳಿದ್ದಕ್ಕೆ ತಲೆಯಾಡಿಸುತ್ತಿದ್ದಾರೆ.

ಪಾರದರ್ಶಕ ಆಡಳಿತದ ವಿಷಯದಲ್ಲಿ ನೀವು ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. ಸರ್ಕಾರದೊಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಎಷ್ಟೋ ಸಲ ನಿಮ್ಮ ಸಚಿವ ಸಹೊದ್ಯೋಗಿಗಳಿಗೆ ಅವರ ಇಲಾಖೆಗಳ ತೀರ್ಮಾನಗಳು ತಿಳಿದಿರುವುದಿಲ್ಲ. ಸರ್ಕಾರದಲ್ಲಿ ಸಾಮೂಹಿಕ ನಿರ್ಧಾರಗಳು ಆಗುತ್ತಿಲ್ಲ. ಮೋದಿ ಅವರೇ, ನಿಮ್ಮ ಕಾರ್ಯವೈಖರಿ ಬಗ್ಗೆ ಅನೇಕ ಸಚಿವರಿಗೆ ಅಸಮಾಧಾನವಿದೆ. ಆದರೆ, ಅವರು ಬಹಿರಂಗವಾಗಿ ಹೇಳಲು ಹೆದರುತ್ತಿದ್ದಾರೆ. ಈಚೆಗಷ್ಟೇ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಉತ್ತರ ಪ್ರದೇಶದ ಬಲಿಯಾ ಲೋಕಸಭಾ ಕ್ಷೇತ್ರದ ಸದಸ್ಯ ಭರತ್‌ ಸಿಂಗ್‌ ಧೈರ್ಯ ಮಾಡಿ ನಿಮ್ಮ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ. ಒಂದು ವರ್ಷದಲ್ಲಿ ನಿಮ್ಮ ಸರ್ಕಾರ ಏನೇನೂ ಸಾಧನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

‘ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ’ (ಪಿಎಂಜಿಎಸ್‌ವೈ) ಅಡಿ ತಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಕಿ.ಮೀ. ರಸ್ತೆಯಾಗಿಲ್ಲ ಎಂದು ಹೇಳಿದ್ದಾರೆ. ‘ನಮ್ಮ ಕುಂದು– ಕೊರತೆಗಳನ್ನು ಹೇಳಿಕೊಳ್ಳಲು ಮಂತ್ರಿಗಳೇ ಕೈಗೆ ಸಿಗುವುದಿಲ್ಲ’ ಎಂದು ದೂರಿದ್ದಾರೆ. ಭರತ್‌ ಸಿಂಗ್‌ ಆರೋಪಕ್ಕೆ ಉಳಿದವರೂ  ದನಿಗೂಡಿಸಿದ್ದಾರೆ. ನೀವು ಅಂದಿನ  ಸಭೆಯಲ್ಲಿದ್ದರೂ ಏನೂ ಮಾತನಾಡದೆ ಮೌನವಾಗಿದ್ದುದು ಏಕೆ? ಇದು ಕೇವಲ ಅವರ ಅಭಿಪ್ರಾಯವಲ್ಲ, ಜನರ ಅಭಿಪ್ರಾಯವೂ ಹೌದು. ಭರತ್‌ ಸಿಂಗ್‌ ಮಾಡಿರುವ ಟೀಕೆಗಳನ್ನು ಸಕಾರಾತ್ಮಕ ಧೋರಣೆಯಿಂದ ಸ್ವೀಕರಿಸಿ. ನಿಮ್ಮ ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯಲು ಪ್ರಯತ್ನಿಸಿ. ನಿಮ್ಮ ಧೋರಣೆ ಬದಲಿಸಿಕೊಳ್ಳದಿದ್ದರೆ ಮನಮೋಹನ್‌ ಸಿಂಗ್‌ ಅವರ ಸ್ಥಿತಿ ನಿಮಗೂ ಬರಬಹುದು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ನೀವು ಕ್ರಮ ಕೈಗೊಂಡಿಲ್ಲ.

ಒಂದು ವರ್ಷವಾದರೂ ಅಗತ್ಯ ವಸ್ತುಗಳ ಬೆಲೆ ಇಳಿದಿಲ್ಲ. ತೀವ್ರ ಕಳವಳಕ್ಕೆ ಕಾರಣವಾಗಿದ್ದ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ, ಸಗಟು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದೆ ಎಂದು ಅರ್ಥ ಸಚಿವರು ಪ್ರತಿಪಾದಿಸುತ್ತಿದ್ದಾರೆ. ಹಣಕಾಸು ಸ್ಥಿತಿಗತಿ ನೋಡಿದರೆ ಅವರು ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸಲು ಹೊರಟಂತಿದೆ. ಅಗತ್ಯ ವಸ್ತುಗಳ ಬೆಲೆ ವಿಷಯದಲ್ಲಿ ಯುಪಿಎ, ಎನ್‌ಡಿಎ ಆಳ್ವಿಕೆ ನಡುವೆ ವ್ಯತ್ಯಾಸ ಇಲ್ಲ.  ನಿಮ್ಮ ಆಡಳಿತದಲ್ಲೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ.  ಇತ್ತೀಚೆಗೆ ರೂಪಾಯಿ ಮೌಲ್ಯ ಸ್ವಲ್ಪ ಚೇತರಿಸಿಕೊಂಡಿದೆ. ಉತ್ಪಾದನೆ– ರಫ್ತು ವಲಯದಲ್ಲೂ ಹಿನ್ನಡೆಯಾಗಿದೆ.

ಪ್ರಧಾನಿ ಅವರೇ, ಕೃಷಿ ಕ್ಷೇತ್ರವೂ ಸಂಕಷ್ಟಕ್ಕೆ ಸಿಕ್ಕಿದೆ. ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ರೈತರ ಆತ್ಮಹತ್ಯೆ ಪರಿಪಾಠ ಮುಂದುವರಿದಿದೆ.  ರೈತರ ಆತ್ಮಹತ್ಯೆ ಕುರಿತು ಈಚೆಗೆ ಸಂಸತ್ತಿನಲ್ಲಿ ಸಮಗ್ರವಾಗಿ ಚರ್ಚೆ ನಡೆದಿದೆ. ನಿಮಗೆ ಗೊತ್ತಿದೆಯೇ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಲೋಕಸಭೆಯಲ್ಲಿ ಕೃಷಿಕರ ಸಮಸ್ಯೆಗಳ ಮೇಲೆ ಅದ್ಭುತವಾಗಿ ಮಾತನಾಡಿದ್ದಾರೆ. ಆಗ ಸದನದಲ್ಲಿ ನೀವು ಇರಲಿಲ್ಲ. ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಪ್ರಧಾನಿ ಅವರು ಹೋಗಿ ನೋಡಿಕೊಂಡು ಬರಲಿ ಎಂದು ರಾಹುಲ್‌ ಸಲಹೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ನೀವೇ ಹೋಗಿ ಬರಬೇಕು ಎಂದು ಯಾರೂ ಅಪೇಕ್ಷಿಸುವುದಿಲ್ಲ. ಕನಿಷ್ಠಪಕ್ಷ ಸಮಸ್ಯೆಯ ತೀವ್ರತೆಯನ್ನಾದರೂ ಅರ್ಥ ಮಾಡಿಕೊಂಡು ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಬೇಕು. ರೈತರ ಆತ್ಮಹತ್ಯೆ ನಿರಂತರವಾದ ಸಮಸ್ಯೆ. ಪ್ರತಿವರ್ಷವೂ ಒಂದಲ್ಲ ಒಂದು  ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆಗುತ್ತಲೇ ಇವೆ. ಕೃಷಿ ಪ್ರಧಾನ ದೇಶದಲ್ಲಿ ಅವರ ಸಮಸ್ಯೆಗಳನ್ನು ಕೇಳುವವರಿಲ್ಲವೆಂದರೆ ಹೇಗೆ?

ಪ್ರಕೃತಿ ವಿಕೋಪಗಳಿಂದ ತೊಂದರೆಗೊಳಗಾಗಿರುವ ರೈತರಿಗೆ  ಪರಿಹಾರ ಮೊತ್ತ ಹೆಚ್ಚಿಸಿದ್ದೀರಿ. ಕೃಷಿ ಪದಾರ್ಥಗಳ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿದ್ದೀರಿ. ನೀವು ಮಾಡಿರುವ ಹೆಚ್ಚಳ ಏನೇನೂ ಸಾಲದು. ಉಪ್ಪು, ಮೆಣಸಿಗೂ ಎಟಕುವುದಿಲ್ಲ ಎಂಬ ಕೊರಗು ರೈತ ಸಮುದಾಯಕ್ಕಿದೆ. ಕೃಷಿಕರ ಹಕ್ಕುಗಳನ್ನು ಪ್ರತಿಪಾದಿಸಲು ರೈತ ಸಂಘಟನೆಗಳು ಬಲವಾಗಿಲ್ಲ. ಕರ್ನಾಟಕದಲ್ಲಿ ರೈತ ಸಮುದಾಯದ ಪರವಾಗಿ ನಿಲ್ಲುತ್ತಿದ್ದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಂಥ ನಾಯಕರು ಈಗಿಲ್ಲ. ಉತ್ತರ ಪ್ರದೇಶದ ರೈತರನ್ನು ದೆಹಲಿಗೆ ಕರೆತಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗುತ್ತಿದ್ದ ಮಹೇಂದ್ರ ಸಿಂಗ್ ಟಿಕಾಯತ್ ಅವರಿಲ್ಲ. ಇರುವ ರೈತ ನಾಯಕರಲ್ಲಿ ಒಗ್ಗಟ್ಟಿಲ್ಲ.

ಅದೇ ಕಾರಣಕ್ಕೆ ನೀವು ಶತಾಯಗತಾಯ ಜಾರಿಗೆ ತರಬೇಕೆಂದು ಹೊರಟಿರುವ ವಿವಾದಿತ ಭೂಸ್ವಾಧೀನ ತಿದ್ದುಪಡಿ ಮಸೂದೆ ವಿರುದ್ಧ ಬಲವಾದ ಚಳವಳಿ ರೂಪುಗೊಳ್ಳುತ್ತಿಲ್ಲ. ಈ ಸತ್ಯ ಅರ್ಥವಾಗಿರುವುದರಿಂದಲೇ ನೀವು ಛಲ ಬಿಡದೆ ಮಸೂದೆಗೆ  ಅಂಗೀಕಾರ ಪಡೆಯಲು  ಹೊರಟಿರುವುದು.  ದುರದೃಷ್ಟಕರ ವಿಷಯವೆಂದರೆ, ಭೂಸ್ವಾಧೀನ ಮಸೂದೆ ವಿಷಯದಲ್ಲಿ ನಿಮಗಿರುವ ಬದ್ಧತೆಯು ಲೋಕಪಾಲರ ನೇಮಕದ ವಿಷಯದಲ್ಲಿ ಯಾಕಿಲ್ಲ? ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಈ ಬಗ್ಗೆ ಕೊಟ್ಟಿರುವ ಆಶ್ವಾಸನೆ ನೆನಪಿಲ್ಲವೇ? ಲೋಕಪಾಲರ ನೇಮಕಕ್ಕೆ ಒಂದು ವರ್ಷ ಸಾಕಾಗುವುದಿಲ್ಲವೇ? ಮೇಲಿಂದ ಮೇಲೆ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸಿದ ನಿಮಗೆ ಕೆಲಸದ ಒತ್ತಡದಲ್ಲಿ ಲೋಕಪಾಲರ ನೇಮಕ ವಿಷಯ ಮರೆತುಹೋಯಿತೆ? ಇಲ್ಲವೆ, ಅದು ಅಷ್ಟೇನೂ ಮುಖ್ಯವಲ್ಲವೆಂದು ಉದಾಸೀನವೇ? ಗುಜರಾತಿನಲ್ಲಿ ನೀವು ಮುಖ್ಯಮಂತ್ರಿ ಆಗಿದ್ದಾಗ ಲೋಕಾಯುಕ್ತರನ್ನು ನೇಮಕ ಮಾಡಲು ಹಿಂದೇಟು ಹಾಕಿದ್ದು ನೋಡಿದರೆ ಈ ಅನುಮಾನ ಸಹಜ.

ಮೋದಿ ಅವರೇ, ‘ಮಾಹಿತಿ ಹಕ್ಕು ಕಾಯ್ದೆ’ಯ ಕತ್ತು ಹಿಸುಕಲು ನಿಮ್ಮ ಸರ್ಕಾರ ಪ್ರಯತ್ನಿಸುತ್ತಿದೆ.  ಸರ್ಕಾರಕ್ಕೆ ಮಾಹಿತಿ ಕೇಳಿ ಬರುವ ಯಾವುದೇ ಅರ್ಜಿಗಳಿಗೂ ಸರಿಯಾದ ಉತ್ತರ ಸಿಕ್ಕುತ್ತಿಲ್ಲ. ದೆಹಲಿಯ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್‌ಚಂದ್ರ ಅಗರವಾಲ್‌ ಅವರೇ ಈ ಆರೋಪ ಮಾಡಿದ್ದಾರೆ. ಇನ್ನೂ ಒಂದು ಅಚ್ಚರಿ ಸಂಗತಿ ಎಂದರೆ ನಿಮ್ಮ ಹತ್ತಿರದ ಬಂಧುಗಳ ಆರ್‌ಟಿಐ ಅರ್ಜಿಗಳಿಗೇ ಬೆಲೆ ಸಿಕ್ಕಿಲ್ಲ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಕೊಡುವುದಾಗಿ ಭರವಸೆ ಕೊಡುತ್ತಿರುವ ನಿಮಗೆ ಲೋಕಪಾಲ್‌, ಆರ್‌ಟಿಐ ವಿಷಯದಲ್ಲಿರುವ ನಿಲುವುಗಳನ್ನು ಗಮನಿಸಿದರೆ, ನಿಮ್ಮ ಮಾತು ಮತ್ತು ಕೃತಿ ನಡುವೆ ಅಂತರವಿರುವುದು ಅರಿವಿಗೆ ಬರುತ್ತದೆ. ಹೇಳುವುದು ಸುಲಭ, ಮಾಡಿ ತೋರಿಸುವುದು ಕಷ್ಟ. ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳದಿದ್ದರೆ ಉಳಿದ ನಾಯಕರ ಸಾಲಿಗೆ ನೀವೂ ಸೇರುತ್ತೀರಿ.
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.