ಹಿಂದುಳಿದ ಬಿಹಾರದಲ್ಲಿ ಎರಡು ಭಿನ್ನ ‘ಅಭಿವೃದ್ಧಿ’ ಮಾದರಿಗಳ ನಡುವೆ ಸಮರ
ನಿತೀಶ್ ಕುಮಾರ್ ಬಿಹಾರದ ‘ಅಜಾತಶತ್ರು’. ಯಾರೂ ಅವರನ್ನು ಕಟುವಾಗಿ ಟೀಕಿಸುವುದಿಲ್ಲ. ರಾಜಕೀಯ ವಿರೋಧಿಗಳೂ ವೈಯಕ್ತಿಕ ನೆಲೆಯಲ್ಲಿ ಆರೋಪಗಳನ್ನು ಮಾಡುವುದಿಲ್ಲ. ಅವರು ಸೌಮ್ಯ ಸ್ವಭಾವದ ನಾಯಕ. ಮಾತನಾಡಿದ್ದಕ್ಕಿಂತ ಮಾಡಿರುವ ಕೆಲಸಗಳೇ ಹೆಚ್ಚು. ಇದರಿಂದ ರಾಜ್ಯದಲ್ಲಿ ಅವರನ್ನು ನೋಡುವ ವಿಧಾನವೇ ಬದಲಾಗಿದೆ. ಮುಖ್ಯಮಂತ್ರಿ ಹೆಸರು ಎತ್ತಿದರೆ ಬಿಹಾರದ ಜನರ ಅಭಿಮಾನ ಉಕ್ಕಿ ಹರಿಯುತ್ತದೆ.
ಕಳೆದ ಐದು ವರ್ಷಗಳಲ್ಲಿ ದೆಹಲಿ, ಜಮ್ಮು– ಕಾಶ್ಮೀರ, ಉತ್ತರಪ್ರದೇಶ, ರಾಜಸ್ತಾನ, ಛತ್ತೀಸಗಡ, ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್ ಚುನಾವಣೆಗಳನ್ನು ಸಮೀಪದಿಂದ ನೋಡಿದ್ದೇನೆ. ಯಾವ ರಾಜ್ಯದಲ್ಲೂ ತಮ್ಮ ಮುಖ್ಯಮಂತ್ರಿ ಬಗ್ಗೆ ಇಷ್ಟೊಂದು ಅಭಿಮಾನ ತೋರುವುದನ್ನು ಕಂಡಿಲ್ಲ. ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಗ್ಗೆ ಅಲ್ಲಲ್ಲಿ ಮೆಚ್ಚುಗೆ ವ್ಯಕ್ತವಾಗುವುದನ್ನು ಕೇಳಿದ್ದೇನೆ.
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಇಷ್ಟೊಂದು ಜನಪ್ರಿಯವಾಗಿರಲಿಲ್ಲ. ಆರೇಳು ವರ್ಷಗಳಲ್ಲಿ ಅವರು ಮಾಡಿರುವ ಕೆಲಸಗಳಿಂದಾಗಿ ಅವರ ಬಗೆಗಿನ ಅಭಿಪ್ರಾಯ ಬದಲಾಗಿದೆ. ರಾಜ್ಯದ ಉದ್ದಗಲಕ್ಕೂ ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಆಶಯ ವ್ಯಕ್ತವಾಗುತ್ತಿದೆ. ಕೆಲವರು ಮಾತ್ರ ಅಪಸ್ವರ ತೆಗೆದಿದ್ದಾರೆ.
ಈ ಅಪಸ್ವರದ ಹಿಂದೆ ನಿತೀಶ್ ಅವರ ಜನಪ್ರಿಯತೆಯನ್ನು ಸಹಿಸಲಾಗದ ಅಸಹನೆ ಇದೆ. ಕುಯುಕ್ತಿ–ಕುತಂತ್ರಗಳಿವೆ. ಅವರನ್ನು ಸೋಲಿಸುವ ಹುನ್ನಾರವಿದೆ. ‘ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರೊಂದಿಗೆ ಮುಖ್ಯಮಂತ್ರಿ ಕೈಜೋಡಿಸಿದ್ದಾರೆ. ಅವರನ್ನು ಗೆಲ್ಲಿಸಿದರೆ ಮತ್ತೆ ಜಂಗಲ್‌ರಾಜ್ ತಲೆ ಎತ್ತಲಿದೆ’ ಎಂದೂ ಅಪಪ್ರಚಾರ ನಡೆಯುತ್ತಿದೆ. ಬಿಜೆಪಿ ನಾಯಕರು ಆರಂಭಿಸಿದ ಅಪಪ್ರಚಾರ ಕೆಲವು ಹಿಂದುಳಿದ ಹಾಗೂ ದಲಿತ ಮತದಾರರ ತಲೆ
ಯೊಳಗೂ ಹೊಕ್ಕಿದೆ. ಇದರಿಂದ, ಲಾಲು ಜತೆ ನಿತೀಶ್ ಕೈಜೋಡಿಸಿ ಎಡವಿದ್ದಾರೆಯೇ? ಈ ಮೈತ್ರಿಯಿಂದ ನಿತೀಶ್ ರಾಜಕೀಯ ಭವಿಷ್ಯ ಮಸುಕಾಗುವುದೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ರಾಜ್ಯದಲ್ಲಿ ಲಾಲು ಅಧಿಕಾರ ಕಳೆದುಕೊಂಡು ಹತ್ತು ವರ್ಷ ಕಳೆದರೂ ಜನರ ಸಿಟ್ಟು ತಣ್ಣಗಾಗಿಲ್ಲ. ಆರ್‌ಜೆಡಿ ಆಡಳಿತದಲ್ಲಿ ನಡೆದಿದ್ದ ಗೂಂಡಾಗಿರಿ, ದರೋಡೆ– ಸುಲಿಗೆಗಳ ಕರಾಳ ನೆನಪು ಇನ್ನೂ ಮಾಸಿಲ್ಲ. ಲಾಲು ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಿರುವ ಮೇವು ಹಗರಣ ಈಗಲೂ ಚರ್ಚೆ ವಸ್ತು. ಈ ಕಾರಣಕ್ಕೆ ಲಾಲು ಅವರ ಜತೆ ನಿತೀಶ್ ಹೊಂದಾಣಿಕೆ ಮಾಡಿಕೊಂಡಿದ್ದು ಕೆಲವರಿಗೆ ಸರಿ ಕಾಣುತ್ತಿಲ್ಲ.
ಲಾಲು, ಒಳ್ಳೆಯ ಆಡಳಿತ ಕೊಟ್ಟಿದ್ದರೆ ಪ್ರಶ್ನಾತೀತ ನಾಯಕರಾಗಬಹುದಿತ್ತು. ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ದಿದ್ದರೆ ರಾಜಕೀಯ ಎದುರಾಳಿಗಳು ಅವರನ್ನು ಮುಟ್ಟಲು ಸಾಧ್ಯವಿರಲಿಲ್ಲ. ಆ ಅವಕಾಶ ತಪ್ಪಿಸಿಕೊಂಡರು. ಅವರೀಗ ಬರೀ ಯಾದವರ ನಾಯಕರಾಗಿ ಉಳಿದುಕೊಂಡಿದ್ದಾರೆ. ಬಿಜೆಪಿಯನ್ನು ವಿರೋಧಿಸುತ್ತಿರುವುದರಿಂದ ಮುಸ್ಲಿಮರು ಅವರನ್ನು ಉಳಿದವರಿಗಿಂತ ಹೆಚ್ಚು ನಂಬುತ್ತಿದ್ದಾರೆ.
ಬಿಹಾರದಲ್ಲಿ ಲಾಲು ಅವರ ರಾಜಕೀಯ ಸ್ಥಿತಿ ಶೋಚನೀಯವಾಗಿದೆ. ಮೇವು ಹಗರಣದಲ್ಲಿ ಶಿಕ್ಷೆಗೊಳಗಾದ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ 2010ರಲ್ಲಿ ರಾಘೋಪುರದಲ್ಲಿ ಸೋತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪುತ್ರಿ ಮೀಸಾ ಭಾರತಿ ಅವರಿಗೆ ಹಿನ್ನಡೆಯಾಗಿದೆ. ಲಾಲು ರಾಜಕೀಯ ಪರಂಪರೆ ಮುಂದುವರಿಕೆಗೆ ಅವರ ಪುತ್ರರಾದ ತೇಜ್ ಪ್ರತಾಪ್ ಯಾದವ್ ಹಾಗೂ ತೇಜಸ್ವಿ ಯಾದವ್ ಚುನಾವಣೆ ಕಣದಲ್ಲಿದ್ದಾರೆ. ಅವರನ್ನು ದಡ ಮುಟ್ಟಿಸಲು ಲಾಲು ಅವರಿಗೆ ಶುದ್ಧ ವರ್ಚಸ್ಸಿನ ನಿತೀಶ್ ಅವರ ಆಶ್ರಯ ಅನಿವಾರ್ಯ. ಮುಖ್ಯಮಂತ್ರಿಗೂ ಆರ್‌ಜೆಡಿ ಬೆಂಬಲ ಅಗತ್ಯವಿದೆ. ಅದೇ ಕಾರಣಕ್ಕೆ ಹಳೇ ಗೆಳೆಯರಿಬ್ಬರೂ ಜತೆಗೂಡಿದ್ದಾರೆ. ಕಾಂಗ್ರೆಸ್ ಅವರ ಜತೆ ಸೇರಿದೆ.
ರಾಜಕೀಯ ಲಾಭ– ನಷ್ಟಗಳು, ಸಾಧಕ– ಬಾಧಕಗಳನ್ನು ನೋಡಿಕೊಂಡೇ ಈ ಮೂರೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಲೋಕಸಭೆ ಚುನಾವಣೆಯಲ್ಲಿ ಈ ಪಕ್ಷಗಳಿಗೆ, ಎನ್‌ಡಿಎಗಿಂತ ಹೆಚ್ಚು ಮತಗಳು ಬಂದಿವೆ. ಆರ್‌ಜೆಡಿಗೆ ಶೇ 20, ಜೆಡಿಯುಗೆ ಶೇ 15.8, ಕಾಂಗ್ರೆಸ್‌ಗೆ ಶೇ 8.2ರಷ್ಟು ಮತಗಳು ಬಿದ್ದಿವೆ. ಲಾಲುಗೆ ನಾಲ್ಕು, ಉಳಿದೆರಡು ಪಕ್ಷಗಳಿಗೆ ತಲಾ ಎರಡು ಸೀಟುಗಳು ಸಿಕ್ಕಿವೆ. ಈ ಪಕ್ಷಗಳಿಗಿಂತ ಕಡಿಮೆ ಮತ ಪಡೆದ ಎನ್‌ಡಿಎಗೆ ದೊರೆತಿದ್ದು ಶೇ 40ರಷ್ಟು ಮತಗಳು. ಸಿಕ್ಕ ಸ್ಥಾನಗಳು 31. ಆನಂತರದ ವಿಧಾನಸಭೆ ಉಪ ಚುನಾವಣೆಯಲ್ಲಿ ದೊರೆತಿರುವ ಯಶಸ್ಸು ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಗ್ಗೂಡಿಸಿದೆ. ಹತ್ತು ಕ್ಷೇತ್ರಗಳಲ್ಲಿ ಆರು ಈ ಪಕ್ಷಗಳ ಪಾಲಾಗಿವೆ. ಬಿಜೆಪಿಗೆ ಬರೀ ನಾಲ್ಕು ಸ್ಥಾನಗಳು ದೊರೆತಿವೆ.
ಲಾಲು ಅವರೊಂದಿಗೆ ನಿತೀಶ್ ಕೈಜೋಡಿಸಿರುವುದರಿಂದ ತೊಂದರೆಯಾಗಲಿದೆ ಎಂಬ ವಾದಗಳಿಗೆ ಯಾವುದೇ ಆಧಾರಗಳಿಲ್ಲ. ಅವರ ಅಭಿಪ್ರಾಯಗಳು ನಿಜವಾಗಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ನಿತೀಶ್ ಅವರಿಗೆ ಲಾಲು ಅವರಿಗಿಂತ ಕಡಿಮೆ ಮತ– ಸೀಟುಗಳು ಬರುತ್ತಿರಲಿಲ್ಲ. ಆರ್‌ಜೆಡಿ ಪಕ್ಷ ಎರಡನೇ ಸ್ಥಾನಕ್ಕೆ ಏರುತ್ತಿರಲಿಲ್ಲ. ನಿತೀಶ್ ಮೂರನೇ ಸ್ಥಾನಕ್ಕೆ ಕುಸಿಯುತ್ತಿರಲಿಲ್ಲ. ಲೋಕಸಭೆ ಚುನಾವಣೆ ಅಂಕಿಸಂಖ್ಯೆ ಜೆಡಿಯುಗೆ ನಿಷ್ಠವಾಗಿರುವ ಮತಗಳು ಬಿಜೆಪಿ ಪಾಲಾಗಿರುವುದನ್ನು ಖಚಿತಪಡಿಸುತ್ತದೆ. ಆರ್‌ಜೆಡಿಗೆ ನಿಷ್ಠವಾದ ಮುಸ್ಲಿಂ ಮತ್ತು ಯಾದವ ಮತಗಳು ಗಟ್ಟಿಯಾಗಿ ಉಳಿದಿವೆ.
ಬಿಹಾರದಲ್ಲಿ ಯಾದವರು ಮತ್ತು ಮುಸ್ಲಿಮರ ಶೇಕಡ 30ರಷ್ಟು ಮತಗಳಿವೆ. ಇದರಲ್ಲಿ ಶೇ 5ರಷ್ಟು ಮತಗಳನ್ನು ಬಿಟ್ಟರೂ, ಶೇ 25ರಷ್ಟು ಸುಲಭವಾಗಿ ಮಹಾ ಮೈತ್ರಿಗೆ ವರ್ಗಾವಣೆ ಆಗುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ಕುರ್ಮಿ ಜಾತಿ ಮತಗಳೂ ಬಹುತೇಕ ಜೆಡಿಯು ನೇತೃತ್ವದ ಮೈತ್ರಿಗೆ ಬೀಳಬಹುದು. ಬ್ರಾಹ್ಮಣರು, ಠಾಕೂರರು, ಭೂಮಿಹಾರರು ಮತ್ತು ಕಾಯಸ್ಥರ ಬೆಂಬಲ ಯಾರಿಗೆಂಬ ಅನುಮಾನ ಅನಗತ್ಯ. ಏಕೆಂದರೆ ಈ ಸಮಾಜಗಳು ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಹೋಗುವುದು ಶತಸಿದ್ಧ. ಬಿಹಾರದಲ್ಲಿ ಸುಮಾರು ಶೇ 15ರಷ್ಟು ಮೇಲ್ಜಾತಿ ಮತಗಳಿವೆ. ಉಳಿದ ಶೇ 85ರಷ್ಟು ಮಂದಿ ಹಿಂದುಳಿದವರು, ಅತೀ ಹಿಂದುಳಿದವರು, ದಲಿತರು, ಮಹಾ ದಲಿತರು ಹಾಗೂ ಮುಸ್ಲಿಮರು.
ಬಿಜೆಪಿ, ನಿತೀಶ್ ಅವರನ್ನು ತ್ಯಜಿಸಿದ ಮಹಾದಲಿತ ಸಮಾಜದ ನಾಯಕ, ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರ ಹಿಂದುಸ್ತಾನ್ ಅವಾಮಿ ಮೋರ್ಚಾ, ಇನ್ನೊಬ್ಬ ದಲಿತ ನಾಯಕ, ಕೇಂದ್ರ ಸಚಿವ ರಾಂವಿಲಾಸ್ ಪಾಸ್ವಾನ್ ಅವರ ಲೋಕ ಜನತಂತ್ರ ಪಾರ್ಟಿ ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಜತೆ ಮೈತ್ರಿ ಮಾಡಿಕೊಂಡು, ಮೇಲ್ಜಾತಿ, ಹಿಂದುಳಿದವರು, ದಲಿತರು, ಮಹಾದಲಿತರನ್ನು ಸಮೀಕರಿಸಲು ಪ್ರಯತ್ನಿಸಿದೆ.
ಮಹಾದಲಿತರಲ್ಲಿ ಹತ್ತಾರು, ಅತೀ ಹಿಂದುಳಿದವರಲ್ಲಿ ಐವತ್ತಕ್ಕೂ ಅಧಿಕ ಜಾತಿಗಳಿವೆ. ಬದಲಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಅತೀ ಹಿಂದುಳಿದವರು, ದಲಿತರು ಹಾಗೂ ಮಹಾದಲಿತರು ಯಾರಿಗೆ ನಿಷ್ಠೆ ತೋರುತ್ತಾರೆಂದು ಊಹಿಸುವುದು ಕಷ್ಟ. ಅತೀ ಹಿಂದುಳಿದ ಕೆಲ ಜಾತಿಗಳು ನಿತೀಶ್‌ರನ್ನು ಬೆಂಬಲಿಸುವುದಾಗಿ ಹೇಳುತ್ತಿವೆ. ಕೆಲವು ಮಹಾ ದಲಿತ ಜಾತಿಗಳೂ ಮಹಾಮೈತ್ರಿ ಪರ ಒಲವು ತೋರುತ್ತಿವೆ.
‘ಬಿಹಾರ ರಾಜಕಾರಣ ಸಂಪೂರ್ಣ ಜಾತಿ ಮೇಲೆ ನಿಂತಿದೆ. ವಿಕಾಸವೇ ಚುನಾವಣೆಗೆ ಮಾನದಂಡವಾಗಿದ್ದರೆ ನಿತೀಶ್ ಅವರನ್ನು ಎಲ್ಲ ಜಾತಿ, ವರ್ಗದ ಜನ ಬೆಂಬಲಿಸಬೇಕಿತ್ತು. ಏಕೆಂದರೆ ಹತ್ತು ವರ್ಷಗಳಲ್ಲಿ ನಿತೀಶ್ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಯಾರೂ ನಿತೀಶ್ ಅವರನ್ನು ಸರಿಗಟ್ಟಲು ಸಾಧ್ಯವಿಲ್ಲ’ ಎಂದು ದಾನಪುರ ಬಿ.ಎಸ್. ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಅಶುತೋಷ್ ಕುಮಾರ್ ವಿಶ್ಲೇಷಿಸಿದರು. ಅವರ ಮಾತು ಸುಳ್ಳೇನಲ್ಲ. ಜೆಡಿಯು ಸರ್ಕಾರದ ಸಾಧನೆ ಕುರಿತು ಯಾರೂ ಬೆರಳು ತೋರುವುದಿಲ್ಲ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಡಿರುವ ಕೆಲಸಗಳು ಹತ್ತಾರು. ಅತ್ಯಂತ ಕುಗ್ರಾಮಗಳಿಗೂ ಉತ್ತಮ ರಸ್ತೆ ಸೌಲಭ್ಯವಿದೆ. ಗ್ರಾಮೀಣ ಪ್ರದೇಶಗಳಿಗೆ ದಿನಕ್ಕೆ 18ರಿಂದ 22 ಗಂಟೆವರೆಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಪಟ್ನಾದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ರಾಜ್ಯದ ಉದ್ದಗಲಕ್ಕೂ ನಿರ್ಮಾಣ ಮಾಡಿರುವ ಮೇಲ್ಸೇತುವೆಗಳು ಲೆಕ್ಕವಿಲ್ಲದಷ್ಟು.
ಒಂಬತ್ತನೇ ತರಗತಿ ಓದುವ ಸರ್ಕಾರಿ ಶಾಲೆ ಹೆಣ್ಣು ಮಕ್ಕಳು, ಹಿಂದುಳಿದ ಮತ್ತು ದಲಿತ ಜಾತಿ ವಿದ್ಯಾರ್ಥಿಗಳಿಗೆ ಬೈಸಿಕಲ್, ಶೇ 75ರಷ್ಟು ಹಾಜರಾತಿ ದಾಖಲಿಸುವ ಮಕ್ಕಳಿಗೆ ಪ್ರೋತ್ಸಾಹ ಧನ, ಸಮವಸ್ತ್ರಕ್ಕೆ ₹ 1 ಸಾವಿರ. ಹತ್ತನೇ ತರಗತಿ ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡುವ ಎಲ್ಲ ಜಾತಿಯ ವಿದ್ಯಾರ್ಥಿನಿಯರು, ಹಿಂದುಳಿದ ಮತ್ತು ದಲಿತ ಗಂಡು ಮಕ್ಕಳಿಗೆ ₹ 10 ಸಾವಿರ ಉಡುಗೊರೆ, ಮಧ್ಯಾಹ್ನದ ಬಿಸಿಯೂಟ, ವೃದ್ಧರಿಗೆ ಪಿಂಚಣಿ, ಬಡ ಕುಟುಂಬಗಳಿಗೆ ₹ 3ಕ್ಕೆ ಕೆ.ಜಿ. ಅಕ್ಕಿ, ₹ 2ಕ್ಕೆ ಕೆ.ಜಿ. ಗೋಧಿ, ₹ 20ಕ್ಕೆ ಲೀಟರ್ ಅಡುಗೆ ಎಣ್ಣೆ...
ನಿತೀಶ್ ಸಾಧನೆ ಪಟ್ಟಿ ಮಾಡಿದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. ಸರ್ಕಾರದ ಒಂದೊಂದು ಕಾರ್ಯಕ್ರಮಕ್ಕೂ ನೂರಾರು ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ರಾಜ್ಯ ಸರ್ಕಾರಕ್ಕಿರುವ ಸೀಮಿತ ಸಂಪನ್ಮೂಲದಲ್ಲಿ ಇಷ್ಟೊಂದು ಯೋಜನೆಗಳಿಗೆ ಹಣ ಹೇಗೆ ಹೊಂದಿಸುತ್ತಿದ್ದಾರೆಂದು ಅಚ್ಚರಿಯಾಗುತ್ತದೆ. ಮುಖ್ಯಮಂತ್ರಿಗಳ ಯೋಜನೆಗಳಿಂದ ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣ ಏರಿಕೆ ಆಗಿದೆ. ಕಾನೂನು ಸುವ್ಯವಸ್ಥೆ ಸುಧಾರಣೆ ಆಗಿದೆ. ಹಗರಣಮುಕ್ತ ಸರ್ಕಾರ ಕೊಟ್ಟಿರುವುದು ಅವರ ಹೆಗ್ಗಳಿಕೆ.
ಅಶುತೋಷ್ ಕುಮಾರ್ ಹೇಳುವಂತೆ ರಾಜ್ಯದ ವಿಕಾಸ ಕುರಿತು ಯಾರೂ ಅಪಸ್ವರ ತೆಗೆಯಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ‘ನಿತೀಶ್ ಆಳ್ವಿಕೆಯಲ್ಲಿ ಬಿಹಾರ ವಿಕಾಸವಾಗಿಲ್ಲ’ ಎಂದು ಆರೋಪಿಸಿದ್ದರು. ಸ್ಥಳೀಯ ಬಿಜೆಪಿ ನಾಯಕರು ವಿಕಾಸ ಕುರಿತು ಪ್ರಸ್ತಾಪಿಸುವುದು ಬೇಡ ಎಂದು ಅವರಿಗೆ ಸಲಹೆ ಮಾಡಿರಬೇಕು. ಈಗ ಯಾರೂ ಆ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡುತ್ತಿಲ್ಲ.
‘ನರೇಂದ್ರ ಮೋದಿ ಅನಗತ್ಯವಾಗಿ ಬಿಹಾರ ವಿಕಾಸ ಕುರಿತು ಮಾತನಾಡುತ್ತಿದ್ದಾರೆ. ಯಾರೂ ಅವರ ಮಾತು ಕೇಳುವುದಿಲ್ಲ. ಕಳೆದ ಒಂದೂವರೆ ವರ್ಷದಿಂದ ಅವರು ಮಾತನಾಡಿಕೊಂಡೇ ಕಾಲ ಕಳೆದಿದ್ದಾರೆ. ಆದರೆ, ಮೋದಿ ಅವರೇನು, ನಿತೀಶ್ ಅವರೇನು ಎಂದು ನಮ್ಮ ಜನರಿಗೆ ಚೆನ್ನಾಗಿ ಗೊತ್ತಿದೆ. ಲೋಕಸಭೆ ಚುನಾವಣೆಯಲ್ಲಿ ನಾನೂ ಬಿಜೆಪಿ ಬೆಂಬಲಿಸಿದ್ದೆ. ಮತ್ತೆ ಆ ತಪ್ಪು ಮಾಡುವುದಿಲ್ಲ. ನಿತೀಶ್ ನೇತೃತ್ವದ ಮೈತ್ರಿ ಕೂಟವನ್ನು ಬೆಂಬಲಿಸುತ್ತೇನೆ’ ಎಂದು ಮಹೂವಾದ 25 ವರ್ಷದ ಸುನೀಲ್ ಕುಮಾರ್ ಯಾದವ್ ಖಚಿತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಮಾತಿಗೆ ಮರುಳಾಗಿದ್ದ ಬಹಳಷ್ಟು ಗ್ರಾಮೀಣ ಯುವಕರಿಗೆ ಭ್ರಮನಿರಸನ ಆಗಿದೆ.
ಆದರೆ, ಪಟ್ನಾ ಮತ್ತಿತರ ನಗರಗಳ ಹೊಸ ಪೀಳಿಗೆ ಮತದಾರರು ಇನ್ನೂ ಮೋದಿ ಅವರ ಮೇಲೆ ವಿಶ್ವಾಸ ಕಳೆದುಕೊಂಡಿಲ್ಲ. ಬಿಹಾರದಲ್ಲಿ ನಿತೀಶ್ ಪುನಃ ಆಯ್ಕೆಯಾಗಬೇಕು. ಬಿಹಾರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಪರ್ವ ಮುಂದುವರಿಯಬೇಕು. ಒಕ್ಕೂಟ ವ್ಯವಸ್ಥೆ ಬಲಪಡಿಸುವ ನೆಲೆಯಲ್ಲಿ ಯೋಚಿಸಿದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇರುವುದು ಒಳ್ಳೆಯದು.
ಈಗ ಒಕ್ಕೂಟ ವ್ಯವಸ್ಥೆ ಕುರಿತು ಮಾತನಾಡುತ್ತಿರುವವರು ಕೆಲವೇ ಮುಖ್ಯಮಂತ್ರಿಗಳು. ಅವರಲ್ಲಿ ನಿತೀಶ್ ಒಬ್ಬರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯದಲ್ಲೂ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬ ಭಾವನೆ ಅನೇಕರಿಗಿದೆ. ಅದೊಂದು ತಪ್ಪು ಕಲ್ಪನೆ. ಒಟ್ಟಾರೆ ಬಿಹಾರ ಚುನಾವಣೆ ಮೋದಿ ಮತ್ತು ನಿತೀಶ್ ಅವರೂ ಸೇರಿದಂತೆ ಅನೇಕರಿಗೆ ಅಗ್ನಿಪರೀಕ್ಷೆ. ಈ ಪರೀಕ್ಷೆಯಲ್ಲಿ ಯಾರು ಪಾಸಾಗುತ್ತಾರೆ ಎಂಬ ಪ್ರಶ್ನೆ ಆಸಕ್ತಿ ಕೆರಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.