2019ರ ಲೋಕಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ, ರಾಜಕೀಯ ಪಕ್ಷಗಳು ಮಿತ್ರಪಕ್ಷಗಳಿಗೆ ಹುಡುಕಾಟ ಆರಂಭಿಸಿವೆ. ಮಿತ್ರಪಕ್ಷಗಳ ಜೊತೆ ಆದಷ್ಟೂ ಹೆಚ್ಚು ಸೀಟುಗಳನ್ನು ಪಡೆಯುವ ಚೌಕಾಶಿ ನಡೆಸಿವೆ. ಬಿಹಾರದಲ್ಲಿ ಬಿಜೆಪಿ ತನ್ನ ಮಿತ್ರಪಕ್ಷ ಸಂಯುಕ್ತ ಜನತಾದಳದ ಜೊತೆ ಸದ್ದುಗದ್ದಲ ಇಲ್ಲದೆ ಸೀಟು ಹೊಂದಾಣಿಕೆ ಮಾಡಿಕೊಂಡಿದೆ. ವಿವರಗಳು ಇನ್ನೂ ಬಹಿರಂಗ ಆಗಿಲ್ಲ.
ಬಿಜೆಪಿಯ ದೈತ್ಯ ಚುನಾವಣಾ ಶಕ್ತಿ ಮತ್ತು ಮಿಂಚಿನ ವೇಗವನ್ನು ಸರಿಗಟ್ಟಬೇಕಿದ್ದರೆ ಹಾಗೂ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಮತಗಳನ್ನು ಸೆಳೆಯಬೇಕಿದ್ದರೆ ಅರ್ಥಪೂರ್ಣ ಮೈತ್ರಿಕೂಟ ರಚಿಸಿಕೊಳ್ಳದೆ ವಿರೋಧಪಕ್ಷಗಳಿಗೆ ಬೇರೆ ದಾರಿ ಇಲ್ಲ.
ನಿತೀಶ್ ಕುಮಾರ್ ಎರಡು ವರ್ಷಗಳ ಹಿಂದೆ ಪುನಃ ನರೇಂದ್ರ ಮೋದಿ ಅವರ ಬಿಜೆಪಿಗೆ ಶರಣಾದಾಗ ಭಾರತೀಯ ಜನತಾ ಪಾರ್ಟಿಯ ವಿರುದ್ಧ ದೇಶದಲ್ಲಿ ಮಹಾಮೈತ್ರಿಯೊಂದು ಎದ್ದು ನಿಲ್ಲುವ ನಿರೀಕ್ಷೆ ಮುರಿದು ಬಿದ್ದಿತ್ತು. ಉತ್ತರಪ್ರದೇಶದ ಲೋಕಸಭಾ ಉಪಚುನಾವಣೆಗಳಲ್ಲಿ ಅಖಿಲೇಶ್- ಮಾಯಾವತಿ ಮೈತ್ರಿಯು ಬಿಜೆಪಿಯನ್ನು ದೊಡ್ಡ ಅಂತರದಲ್ಲಿ ಸೋಲಿಸಿದಾಗ ಈ ನಿರೀಕ್ಷೆ ಪುನಃ ಗರಿಗೆದರಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಿ ಕಾಂಗ್ರೆಸ್, ಜಾತ್ಯತೀತ ಜನತಾದಳ ಹಾಗೂ ಬಿ.ಎಸ್.ಪಿ. ಕೈಜೋಡಿಸಿ ಸರ್ಕಾರ ರಚಿಸಿದಾಗ ಈ ನಿರೀಕ್ಷೆಗೆ ಮತ್ತಷ್ಟು ಶಕ್ತಿ ಬಂದಿತ್ತು. ಸದ್ಯದಲ್ಲೇ ನಡೆಯಲಿರುವ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿ.ಎಸ್.ಪಿ. ಚುನಾವಣಾ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಮತ್ತಷ್ಟು ಗಟ್ಟಿಯಾಗಿತ್ತು.
ಆದರೆ ಮಾಯಾವತಿ ಅವರ ಅನಿರೀಕ್ಷಿತ ನಡೆಯು ಈ ನಿರೀಕ್ಷೆಯನ್ನು ಪುನಃ ಅಸ್ಥಿರಗೊಳಿಸಿದೆ. ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಛತ್ತೀಸಗಡ (ಜೆ.ಸಿ.ಸಿ.) ಪಕ್ಷದೊಡನೆ ಹಠಾತ್ ಮೈತ್ರಿ ಸಾರಿದ ಮಾಯಾವತಿ, ಕಾಂಗ್ರೆಸ್ ಜೊತೆಗೆ ಮಾತುಕತೆಗಳು ನಡೆಯುತ್ತಿರುವಂತೆಯೇ ಮಧ್ಯಪ್ರದೇಶದಲ್ಲಿ ಏಕಪಕ್ಷೀಯವಾಗಿ 22 ಸೀಟುಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು. ಈ ಬೆಳವಣಿಗೆಯು ಉತ್ತರಪ್ರದೇಶದ ಮಹಾಮೈತ್ರಿಗೆ ಗಂಡಾಂತರವನ್ನು ಕಡೆದು ನಿಲ್ಲಿಸಿದೆ ಎಂಬ ಆತಂಕ ಮೋದಿ ವಿರೋಧಿ ಪಾಳೆಯವನ್ನು ಕಾಡಿದೆ.
ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಹೃದಯ ತೋರದೆ ಇದ್ದುದೂ ಮಾಯಾ ಅವರ ಈ ನಡೆಗೆ ಕಾರಣ ಎಂದೂ ಹೇಳಲಾಗುತ್ತಿದೆ. ಛತ್ತೀಸಗಡದಲ್ಲಿ ಕಳೆದ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆದ್ದಿದ್ದ ಬಿ.ಎಸ್.ಪಿ.ಯ 15 ಸೀಟುಗಳ ಬೇಡಿಕೆಗೆ ಕಾಂಗ್ರೆಸ್ ಮಣಿಯಲಿಲ್ಲ. ಮಧ್ಯಪ್ರದೇಶದಲ್ಲಿ 50 ಸೀಟುಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಬಿ.ಎಸ್.ಪಿ. ಬಯಸಿತ್ತು. ಆದರೆ 30ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಕಾಂಗ್ರೆಸ್ ತಯಾರಿರಲಿಲ್ಲ.
ಛತ್ತೀಸಗಡದ ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಮತಗಳಿಕೆ ಪ್ರಮಾಣದ ಅಂತರ ಶೇ 1.5ರಿಂದ ಶೇ 2 ಮಾತ್ರ. ಮಾಯಾವತಿ ಅವರು ಅಜಿತ್ ಜೋಗಿ ಜೊತೆ ಮೈತ್ರಿ ಮಾಡಿಕೊಂಡರೆ ತ್ರಿಕೋಣ ಸ್ಪರ್ಧೆ ಏರ್ಪಡಲಿದೆ. ಈ ಸ್ಥಿತಿ ಬಿಜೆಪಿ ಪಾಲಿಗೆ ವರದಾನ. ನಾಲ್ಕನೆಯ ಬಾರಿಗೆ ಬಿಜೆಪಿ ಸರ್ಕಾರ ರಚನೆಗೆ ಅಡ್ಡಿಯಿಲ್ಲ. ಮಾಯಾ ಮತ್ತು ಕಾಂಗ್ರೆಸ್ ಮೈತ್ರಿ ಆಗಿದ್ದರೆ ಬಿಜೆಪಿ ಗೆಲುವು ಸುಲಭ ಇರಲಿಲ್ಲ.
ಶಕ್ತಿ ರಾಜಕಾರಣದ ಹಲ್ಲಾಹಲ್ಲಿಯಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಕಪಾಟುಗಳಲ್ಲಿ ಅಸ್ಥಿಪಂಜರಗಳು ಅಡಗಿರುವುದು ಅಪರಾಧ ಇದ್ದೀತು, ಆದರೆ ಅತಿಶಯ ಅಲ್ಲ. ಕಪ್ಪು ಕೆಲಸಗಳಿಲ್ಲದ ಸ್ವಚ್ಛ ಕಪಾಟುಗಳು ತನ್ನ ಬಳಿ ಇವೆ ಎಂದು ಮುಖ್ಯವಾಹಿನಿಯ ರಾಜಕೀಯ ಪಕ್ಷವೊಂದು ಎದೆ ಬಡಿದುಕೊಂಡು ಹೇಳೀತು. ಆದರೆ ಅಂತಹ ಬಿಳಿ ಸುಳ್ಳನ್ನು ಕಣ್ಣುಮುಚ್ಚಿ ನಂಬುವಷ್ಟು ಅಮಾಯಕ ಅಲ್ಲ ಭಾರತೀಯ ಮತದಾರ ಸಮೂಹ. ಅಧಿಕಾರ ಹಿಡಿದ ರಾಜಕೀಯ ಪಕ್ಷ ಇತರೆ ಪಕ್ಷಗಳನ್ನು ತನ್ನ ಅನುಕೂಲಕ್ಕೆ ಬಗ್ಗಿಸಿಕೊಳ್ಳಲು ಇಂತಹ ಅಸ್ಥಿಪಂಜರಗಳನ್ನು ಹೊರಗೆಳೆಯುವ ಬೆದರಿಕೆ ಹಾಕುವುದು ಹಳೆಯ ತಂತ್ರ. ಇಂತಹ ಅಸ್ತ್ರವೊಂದನ್ನು ಮೋದಿ- ಅಮಿತ್ ಶಾ ಬಳಸದೆ ಕೆಳಗಿಡುವವರಲ್ಲ.
ಬಿಜೆಪಿಯ ಪಾಲಿಗೆ 2019ರ ಲೋಕಸಭಾ ಚುನಾವಣೆಗಳಲ್ಲಿ ಮರಳಿ ಗೆದ್ದು ಬರಲು ಒದಗಬಹುದಾದ ಬಹುದೊಡ್ಡ ಅಡ್ಡಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಾರ್ಟಿ (ಬಿ.ಎಸ್.ಪಿ.), ಕಾಂಗ್ರೆಸ್ ಹಾಗೂ ಇನ್ನೂ ಹಲವಾರು ಸಣ್ಣ ಪಕ್ಷಗಳು ಸೇರಿ ರಚಿಸಬಹುದಾದ ವಿರೋಧಪಕ್ಷಗಳ ಮಹಾಮೈತ್ರಿ ಕೂಟ. ಈ ಕೂಟದಿಂದ ಮಾಯಾ ಅವರನ್ನು ದೂರ ಇರಿಸಿದರೆ ಕೂಟದ ಸ್ಥೈರ್ಯವೇ ಕುಸಿದು ಹೋಗಲಿದೆ. ಮಾಯಾವತಿ ಮತ್ತು ಅವರ ಸೋದರನ ವಿರುದ್ಧ ಈಗಾಗಲೆ ಆರ್ಥಿಕ ಅಪರಾಧಗಳ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಮೋದಿ- ಶಾ ಜೋಡಿ ಪರೋಕ್ಷ ಒತ್ತಡ ಹೇರತೊಡಗಿದೆ ಎಂಬ ವಾದವನ್ನು ಕಾಂಗ್ರೆಸ್ ಕೂಡ ನಿರಾಕರಿಸಿಲ್ಲ.
ಆದರೆ ಈ ವಾದವನ್ನು ತಳ್ಳಿ ಹಾಕುವ ಇನ್ನೊಂದು ವರ್ಗವಿದೆ. ಆ ವರ್ಗದ ಪ್ರಕಾರ ಅತಿ ಆತ್ಮವಿಶ್ವಾಸ ಹೊಂದಿರುವ ಮಾಯಾವತಿ ಅವರದು ಅಪರಿಮಿತ ರಾಜಕೀಯ ಮಹತ್ವಾಕಾಂಕ್ಷೆ. ಈ ಅಂಶವೇ ಕಾಂಗ್ರೆಸ್ ಪಕ್ಷವನ್ನು ಚಿವುಟಿ ಹಾಕಲು ಮುಂದಾಗಿದೆ ಎಂಬುದು ಈ ವರ್ಗದ ವ್ಯಾಖ್ಯಾನ. ದೇಶದ 200ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಈ ಪಕ್ಷ ಸಲೀಸಾಗಿ ಹೊಂದಿರುವ ಮತಗಳ ಪ್ರಮಾಣ ಶೇ 1. ತೀವ್ರ ಸಮ-ಸಮ ಸ್ಪರ್ಧೆಯಿರುವ ಸನ್ನಿವೇಶದಲ್ಲಿ ಬಿ.ಎಸ್.ಪಿ. ಜೊತೆ ಚುನಾವಣಾಪೂರ್ವ ಮೈತ್ರಿಯು
ಸಾಕಷ್ಟು ಸೀಟುಗಳನ್ನು ಗೆಲ್ಲಿಸಿಕೊಡಬಲ್ಲದು. ಇಲ್ಲವೇ ಎದುರಾಳಿಯನ್ನು ಸಾಕಷ್ಟು ಸೀಟುಗಳಲ್ಲಿ ಸೋಲಿಸಬಲ್ಲದು. ಈ ಅಂಶವೇ ಮಾಯಾ ಅವರ ಮಹತ್ವಾಕಾಂಕ್ಷೆಯ ಮೂಲ.
‘ಗೌರವಾನ್ವಿತ ಪ್ರಮಾಣದ ಸೀಟುಗಳ’ ಅರ್ಥ ‘ಸಿಂಹಪಾಲಿನ’ ಸೀಟುಗಳು ಎನ್ನುವಲ್ಲಿ ಯಾವುದೇ ಸಂದೇಹ ಬೇಡ. ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟರೆ ನಿಜಾರ್ಥದಲ್ಲಿ ರಾಷ್ಟ್ರೀಯ ಹೆಜ್ಜೆಗುರುತುಗಳನ್ನು ಮೂಡಿಸಿರುವ ಮೂರನೆಯ ರಾಜಕೀಯ ಪಕ್ಷ ಬಿ.ಎಸ್.ಪಿ. ಉತ್ತರಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ 4- 5ಕ್ಕಿಂತ ಹೆಚ್ಚು ಸೀಟುಗಳನ್ನು ಕಾಂಗ್ರೆಸ್‌ಗೆ ನೀಡುವುದು ಮಾಯಾವತಿ ಅವರಿಗೆ ಸಮ್ಮತವಿಲ್ಲ. ಉತ್ತರ ಭಾರತದಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಮತ್ತೆ ತಲೆ ಎತ್ತುವುದನ್ನು ಅವರು ಬಯಸುವುದಿಲ್ಲ. ಕಾಂಗ್ರೆಸ್ ಪಕ್ಷ ಅವನತಿಯ ಹಾದಿ ಹಿಡಿದಿರುವ ಕಾರಣ ದೇಶದಲ್ಲಿ ಪ್ರಬಲ ಪ್ರತಿಪಕ್ಷದ ಆವರಣ ಕ್ರಮೇಣ ತೆರವಾಗತೊಡಗಿದೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದರೆ ನಾನಾ ರಾಜ್ಯಗಳಲ್ಲಿ ಅದರ ಜಾಗವನ್ನು ತುಂಬುವುದು ಮಾಯಾ ಮಹತ್ವಾಕಾಂಕ್ಷೆ. ಉತ್ತರಪ್ರದೇಶದಲ್ಲಿ ಮಾಯಾವತಿಯವರಿಗೆ ಕಾಂಗ್ರೆಸ್ ಬೇಕಿರುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸಿಗೆ ಮಾಯಾ ಮೈತ್ರಿಯ ಅಗತ್ಯವಿದೆ.
2014ರಲ್ಲಿ ಬಿ.ಎಸ್.ಪಿ. ಉತ್ತರಪ್ರದೇಶದ ಒಂದೇ ಒಂದು ಲೋಕಸಭಾ ಸೀಟನ್ನೂ ಗೆದ್ದಿರಲಿಲ್ಲ. 2017ರ ವಿಧಾನಸಭಾ ಚುನಾವಣೆಗಳಲ್ಲಿ ಗಳಿಸಿದ್ದು ಕೇವಲ 19 ಸೀಟು. ಹೀಗಾಗಿ ಮುಂಬರುವ ಚುನಾವಣೆಗಳು ಮಾಯಾವತಿ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಬಲ್ಲವು. ಹೀಗಾಗಿಯೇ ಗೌರವಾನ್ವಿತ ಸಂಖ್ಯೆಯ ಸೀಟುಗಳು ತನಗೆ ಹಂಚಿಕೆ ಆಗದೆ ಹೋದರೆ ಮೈತ್ರಿಗೆ ತಾನು ಸಿದ್ಧವಿಲ್ಲ ಎಂದು ಬಿ.ಎಸ್.ಪಿ. ಸಾರಿದೆ ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಆಕೆ ಕಾಂಗ್ರೆಸ್ ತಲೆಯ ಮೇಲೆ ಮೊಟಕಿದ್ದಾರೆಯೇ ವಿನಾ ಮೋದಿ-ಶಾ ಅವರ ಸಿಬಿಐಗೆ ಹೆದರಿಲ್ಲ ಎಂಬುದು ಈ ವರ್ಗದ ವಿಶ್ಲೇಷಣೆ. ಬಿಜೆಪಿಗೆ ಅಥವಾ ಮತ್ತೊಂದು ಮೈತ್ರಿಕೂಟಕ್ಕೆ ಬಹುಮತ ಸಿಗದೆ, ಮಾಯಾವತಿ ಅಜಮಾಸು 40 ಸೀಟುಗಳನ್ನು ಗೆದ್ದುಬಿಟ್ಟರೆ, ಅಧಿಕಾರ ಹಂಚಿಕೆಗಾಗಿ ದೊಡ್ಡ ಚೌಕಾಶಿ ನಡೆಸುವ ಅವಕಾಶ ತಾನೇ ತಾನಾಗಿ ಹುಡುಕಿಕೊಂಡು ಬರಲಿದೆ ಎಂಬುದು ಅವರ ಲೆಕ್ಕಾಚಾರ ಎನ್ನುವವರೂ ಇದ್ದಾರೆ.
ಈ ನಡುವೆ ಗೌರವಾನ್ವಿತ ಸಂಖ್ಯೆಯ ಸೀಟುಗಳು ಬೇಕೆಂಬ ಮಾಯಾ ಮಾತುಗಳು ಇನ್ನೂ ಗಾಳಿಯಲ್ಲಿ ತೂಗಿರುವಾಗಲೇ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರತಿಕ್ರಿಯೆ ಮಹಾಮೈತ್ರಿಕೂಟ ಬಯಸುವ ಬಹುಮಂದಿಯ ಮನಗೆದ್ದಿದೆ. ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಮೈತ್ರಿಕೂಟದಲ್ಲಿ ಎರಡು ಹೆಜ್ಜೆ ಹಿಂದೆ ಸರಿಯಲೂ ತಯಾರು, ಈ ಮಾತುಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಅಖಿಲೇಶ್ ಸಾರಿದ್ದಾರೆ.
ಕಾಂಗ್ರೆಸ್ ದೊಡ್ಡ ಹೃದಯ ತೋರಬೇಕು, ಎಲ್ಲ ಪಕ್ಷಗಳೊಂದಿಗೆ ತಾನಾಗಿಯೇ ಮಾತಾಡಿ ದೇಶಕ್ಕೊಂದು ದಾರಿ ಕಾಣಿಸಬೇಕು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಮತ್ತು ದೊಡ್ಡಪಕ್ಷ. ಬಿಜೆಪಿ ತನ್ನ ಎದೆ ದೊಡ್ಡದೆಂದು ಹೇಳಿಕೊಂಡಿರುವಾಗ, ದೊಡ್ಡ ಹೃದಯ ತನಗಿದೆ ಎಂದು ಕಾಂಗ್ರೆಸ್ ಪಕ್ಷ ಸಾಬೀತು ಮಾಡಬೇಕಿದೆ ಎಂಬ ಅಖಿಲೇಶ್ ಮಾತುಗಳು ರಾಜಕೀಯ ಪಕ್ವತೆಯನ್ನು ಧ್ವನಿಸಿವೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಟ್ಟ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಮಾಯಾ ಅವರೊಂದಿಗೆ ಇನ್ನಷ್ಟು ರಾಜಕೀಯ ಪ್ರಬುದ್ಧತೆ ತೋರಬಹುದಿತ್ತು.
ರಾಜಕಾರಣದಲ್ಲಿ ಬಹುದೂರ ನಡೆದು ಬಂದಿರುವ ಈ ದಲಿತ ಮಹಿಳೆ ಹೊಸ ಎತ್ತರ ಏರುವ ಮಹದಾಸೆಯನ್ನು ಎದೆಯಲ್ಲಿ ಇನ್ನೂ ಜೀವಂತ ಇರಿಸಿಕೊಂಡವರು. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಅವರನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಒಲಿಸಿಕೊಳ್ಳುವ ಪ್ರಯತ್ನ ನಡೆಸಿರುವುದು, ಈಕೆಯ ಯಶಸ್ವೀ ದಲಿತ ನಾಯಕತ್ವದ ಜೀವಂತ ಪುರಾವೆ.
ತಾಜ್ ಕಾರಿಡಾರ್ ವಿವಾದ ಅವರ ರಾಜಕೀಯ ಬದುಕನ್ನು ಬಲಿ ತೆಗೆದುಕೊಳ್ಳಲಿದೆ ಎಂದವರಿದ್ದರು. 2003ರಲ್ಲಿ ಕಾನ್ಶೀರಾಂ ಅವರಿಗೆ ಪಾರ್ಶ್ವವಾಯು ಹೊಡೆದಾಗ ಮಾಯಾ ಅವರ ರಾಜಕಾರಣ ಮುಗಿಯಿತು ಎಂದು ಭಾವಿಸಲಾಗಿತ್ತು. ಆದರೆ 2007ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವಿಜಯದ ನಂತರ ಮಾಯಾ ಕುರಿತ ರಾಜಕೀಯ ವೀಕ್ಷಕರು ಮತ್ತು ವಿಶ್ಲೇಷಕರ ಗ್ರಹಿಕೆ ಬದಲಾಯಿತು. ಒಂದಾನೊಂದು ದಿನ ಭಾರತದ ಪ್ರಧಾನಿಯೂ ಆಗಬಲ್ಲರು ಎನ್ನಲಾಯಿತು. ಮಾಯಾವತಿ ಎಂಬ ಯುವ ಮುಂದಾಳು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಕಾನ್ಶೀರಾಂ ಘೋಷಿಸಿದಾಗ, ದೆಹಲಿಯ ಪತ್ರಿಕಾಲೋಕ ಅದರಲ್ಲೂ ಸವರ್ಣೀಯ ಜಾತಿಗಳ ಪ್ರಾಬಲ್ಯದ ಹಿಂದೀ ಪತ್ರಿಕಾ ಪ್ರಪಂಚ ಆಕೆಯನ್ನು ಬಹುಕಾಲ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅತಿ ಹೆಚ್ಚು ಪ್ರಸಾರವುಳ್ಳ ಹಿಂದಿ ದಿನಪತ್ರಿಕೆಯೊಂದರ ಸುದ್ದಿಯ ತಲೆಬರೆಹದಲ್ಲಿ ‘ಚಮ್ಮಾರಿಣಿ’ ಎಂದು ಮಾಯಾವತಿ ಅವರನ್ನು ಜರೆಯಲಾಗಿತ್ತು. ಪ್ರತಿಭಟನೆಯ ನಂತರ ಪತ್ರಿಕೆಯು ಕ್ಷಮಾಪಣೆ ಕೋರಿತು. ಅದೇ ಪತ್ರಿಕೆಯಲ್ಲಿ ಇಂತಹುದೇ ಪ್ರಸಂಗಗಳು ಬಾರಿ ಬಾರಿ ಜರುಗಿದ್ದವು. 2007ರಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತದ ಸರ್ಕಾರ ರಚಿಸಿದ ನಂತರ ಈ ಮನೋವೃತ್ತಿ ಬದಲಾಯಿತು. ಅವರು ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಬೆಂಕಿ ಉಗುಳುವ ಕೋಪ ಹಟದ ಪ್ರವೃತ್ತಿಯವರಾದರೂ, ಅಸಾಂಪ್ರದಾಯಿಕ ಆಡಳಿತ ಶೈಲಿ ಅನುಸರಿಸಿದರೂ, ತಮಗಿಂತ ಮೊದಲು ಉತ್ತರಪ್ರದೇಶವನ್ನು ಆಳಿದ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಭ್ರಷ್ಟರಾಗದೆ ಉಳಿದರು. ಅವರೆಲ್ಲರಿಗಿಂತ ಹೆಚ್ಚು ದಕ್ಷತೆಯಿಂದ ಆಡಳಿತ ನಡೆಸಿದರು ಎಂಬ ಮೆಚ್ಚುಗೆಯನ್ನು ಉತ್ತರಪ್ರದೇಶದ ಹಲವು ಪ್ರಾಮಾಣಿಕ ಹಿರಿಯ ಅಧಿಕಾರಿಗಳು ಹೇಳಿರುವುದನ್ನು ಅವರ ಆತ್ಮಚರಿತ್ರೆ ಬರೆದಿರುವ ಹಿರಿಯ ಪತ್ರಕರ್ತ ಅಜಯ್ ಬೋಸ್ ನೆನೆದಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಬಿ.ಎಸ್.ಪಿ. ಪಾಲಿಗೆ ಕಾಂಗ್ರೆಸ್‌ಗಿಂತ ಬಿಜೆಪಿಯೇ ಬಹುದೊಡ್ಡ ಬೆದರಿಕೆ ಎಂಬುದು ವಾಸ್ತವ. ಆದರೆ ಈ ಸ್ಥಿತಿಯಲ್ಲಿ ಕೊಂಚ ಸ್ಥಿತ್ಯಂತರ ಉಂಟಾಗಿದೆ. ಸವರ್ಣೀಯರು, ಯಾದವೇತರ ಹಿಂದುಳಿದ ವರ್ಗಗಳು ಹಾಗೂ ಜಾಟವರಲ್ಲದ ದಲಿತರು (ಮಾಯಾವತಿ ಅವರದು ಜಾಟವ ದಲಿತ ಜನಾಂಗ) ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬೆನ್ನುಲುಬು ಆಗಿದ್ದರು. ಈ ಪೈಕಿ ಜಾಟವರಲ್ಲದ ದಲಿತರು ಮತ್ತು ಯಾದವೇತರ ಹಿಂದುಳಿದವರಲ್ಲಿ ಬಹುಪಾಲು ಭ್ರಮನಿರಸನ ಹೊಂದಿ ಬಿಜೆಪಿಗೆ ಬೆನ್ನು ತಿರುಗಿಸುತ್ತಿರುವ ವರದಿಗಳಿವೆ. ಈ ವರ್ಗಗಳ ವಾಪಸಾತಿಯ ಹಿನ್ನೆಲೆಯಲ್ಲಿ ಮಾಯಾವತಿ ಅವರಿಗೆ ಕಾಂಗ್ರೆಸ್ ಆಸರೆಯ ಅಗತ್ಯ ಇಲ್ಲ.
ಮುಂದೆ ಇರಿಸುವ ರಾಜಕೀಯ ಹೆಜ್ಜೆಯ ಗುಟ್ಟನ್ನು ಬಿಟ್ಟುಕೊಡದಿರುವ ಮತ್ತು ರಾಜಕೀಯ ಶತ್ರುಗಳು- ಮಿತ್ರರಿಗೆ ಆಘಾತ ನೀಡುವ ರಣ ತಂತ್ರವನ್ನು ಮಾಯಾವತಿ ಮೈಗೂಡಿಸಿಕೊಂಡದ್ದು ತಮ್ಮ ಗುರು ಕಾನ್ಶೀರಾಂ ಅವರಿಂದ. ಮೋದಿ- ಶಾ ನೇತೃತ್ವದ ಬಿಜೆಪಿಯ ಜೈತ್ರಯಾತ್ರೆಯ ಮುಂದೆ ಮಾಯಾವತಿ ಅವರಂತೆಯೇ ಅಖಿಲೇಶ್ ಯಾದವ್ ಕೂಡ ಅಳಿವು- ಉಳಿವಿನ ಹೋರಾಟ ನಡೆಸಿದ್ದಾರೆ. ಮುಂಬರುವ ದಿನಗಳಲ್ಲಿ ಇಬ್ಬರೂ ಒಂದಾಗುವರೇ ಅಥವಾ ಮತ್ತೊಂದು ಆಘಾತ ಕಾದಿದೆಯೇ ಎಂಬುದನ್ನು ಕಾಲವೇ ಹೇಳಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.