ಚಿನುವಾ ಅಚಿಬೆ 20ನೆಯ ಶತಮಾನದ ಆಫ್ರಿಕನ್ ಸಾಹಿತ್ಯದ ಪಿತಾಮಹ. ‘ಎ ಮ್ಯಾನ್ ಆಫ್ ದಿ ಪೀಪಲ್’ ಅವರ ವಿಶಿಷ್ಟ ಕಾದಂಬರಿಗಳಲ್ಲೊಂದು. ಅದರ ಎರಡು ಮುಖ್ಯ ಪಾತ್ರಗಳಲ್ಲಿ ಒಬ್ಬನು ನಾಂಗಾ. ಜನನಾಯಕ, ಸಂಸ್ಕೃತಿ ಸಚಿವ. ಜನತೆಗೆ ಆತನಲ್ಲಿ ಅಪರಿಮಿತ ವಿಶ್ವಾಸ.
ಆತ ಕೂಡ ಜನಸಾಮಾನ್ಯರಿಗೆ ತಾನು ಹತ್ತಿರವೆಂದೂ, ಐರೋಪ್ಯ ಶೈಲಿಯಲ್ಲಿ ಬದುಕುವ ಮತ್ತು ಆಲೋಚಿಸುವ ಬುದ್ಧಿಜೀವಿಗಳಿಂದ ತಾನು ಬಹುದೂರ ಎಂದು ಬಗೆಯುತ್ತಾನೆ. ತಾನು ಜನನಾಯಕ ಮಾತ್ರವೇ ಅಲ್ಲ, ಅವರ ಏಕಮೇವ ರಾಜಕೀಯ ದನಿ ಕೂಡ ಎಂದು ನಂಬಿರುತ್ತಾನೆ. ಜನತೆ ಏನನ್ನು ಮತ್ತು ಎಷ್ಟನ್ನು ತಿಳಿದುಕೊಳ್ಳಬೇಕು ಎಂದು ಆತ ಭಾವಿಸುತ್ತಾನೆಯೋ ಅದನ್ನು ಮತ್ತು ಅಷ್ಟನ್ನು ಮಾತ್ರವೇ ಅವರಿಗೆ ತಿಳಿಸುತ್ತಾನೆ. ಅವನ ಒಂದು ದನಿ ಎಲ್ಲರನ್ನೂ ಪ್ರತಿನಿಧಿಸುವ ದನಿ ಎಂದು ನಂಬುವಂತೆ ಅವರ ಮನ ಒಲಿಸುತ್ತಾನೆ. ತಾನು ಹೇಳಿದ್ದಕ್ಕೆಲ್ಲ ಅವರ ಒಪ್ಪಿಗೆ ಪಡೆಯುವುದು ಅವನ ಉದ್ದೇಶ. ಐರೋಪ್ಯ ಶೈಲಿಯ ಬದುಕು ಮತ್ತು ಆಲೋಚನೆಗಳಿಂದ ಆಫ್ರಿಕಾದ ಸಂಸ್ಕೃತಿಯ ಸಂರಕ್ಷಕ ತಾನು ಎಂದು ಬಿಂಬಿಸಿಕೊಳ್ಳುತ್ತಾನೆ. ತನಗೆ ಮತ ನೀಡುವಂತೆ ಜನರನ್ನು ಒಪ್ಪಿಸುವುದಕ್ಕೆ ಬೇಕಾದ ವಿಧಾನಗಳನ್ನೆಲ್ಲ ಅನುಸರಿಸುತ್ತಾನೆ. ಜನತೆಯ ನೆರವಿಗೆ ಏನೇನು ಮಾಡಬೇಕೋ ಅದನ್ನೆಲ್ಲ ತಾನು ಮಾಡುತ್ತಿರುವುದಾಗಿ ಅವರನ್ನು ನಂಬಿಸುವುದೂ ಈ ವಿಧಾನಗಳ ಗುರಿ. ಆದರೆ ಆತ ಹೇಳುವುದು ಒಂದು, ಮಾಡುವುದು ಮತ್ತೊಂದು. ಒಂದು ರೀತಿಯಲ್ಲಿ ನಾಂಗಾ ಮತ್ತು ಅತನ ಬಂಟರು ತಮಗೆ ಬೇಕಾದಂತೆ ನಿಯಂತ್ರಿಸುವ ಬೊಂಬೆಗಳು ಜನತೆ.
ಜೋಸೆಫ್ ಕೋನ್ರಾಡನ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕೃತಿಯ ನಾಯಕ ಕುರ್ಟ್ಜ್ ಮಹಾಶಯನ ದನಿ ಕೂಡ ಆತನ ಅನುಯಾಯಿಗಳ ಪಾಲಿಗೆ ಆಫ್ರಿಕಾದ ದಟ್ಟಕಾಡುಗಳ ನಡುವೆ ಕಿವಿಗಪ್ಪಳಿಸುವ ನಗಾರಿ ಬಡಿತ. ನಾಂಗಾನ ದನಿಯಂತೆ ಆತನದೂ ಜನತೆಯ ದನಿ. ಜನ ತಾವು ಆಲಿಸಿದ್ದನ್ನು ಕಾರ್ಯರೂಪಕ್ಕೆ ಇಳಿಸಿಯೇ ತೀರುವರು.
ಪ್ರಚಂಡ ಅಧಿಕಾರ ಮತ್ತು ಸತ್ಯವನ್ನು ಮರೆಮಾಚುವ ಕಾರಣ ನಾಂಗಾನ ಕೇಡಿನ, ಭ್ರಷ್ಟತೆ-ಲಾಲಸೆ- ಪಿಪಾಸುವಿನ ನಿಜಮುಖ ಬೇರೆ ಯಾರಿಗೂ ಕಾಣುವುದಿಲ್ಲ. ಅವನ ಒಂದು ಕಾಲದ ಅನುಯಾಯಿಯೂ ಆದ ಕಾದಂಬರಿಯ ಮತ್ತೊಂದು ಪ್ರಧಾನ ಪಾತ್ರ ಓಡಿಲಿ. ಆತನಿಗೆ ನಾಂಗಾನ ನಿಜಮುಖ ಒಡಮೂಡಿರುತ್ತದೆ.
ದನಿಗಳ ಪ್ರಚಂಡ ಶಕ್ತಿ ಮತ್ತು ಮಹತ್ವವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ತಿಳಿಸಿಕೊಟ್ಟಿದೆ ಇಳೆಯ ಚರಿತ್ರೆ. ಆಲಿಸುವ ಜನಸಮೂಹಗಳ ನಡವಳಿಕೆಗಳನ್ನು ಪ್ರಭಾವಿಸಿ ನಿಯಂತ್ರಿಸಿವೆ ಈ ದನಿಗಳು. ಸಮ ಸಮಾಜಕ್ಕೆ, ಸಹಜೀವನಕ್ಕೆ, ಕರುಣೆಗಾಗಿ, ಒಳಿತಿಗಾಗಿ ಎತ್ತಲಾದ ದನಿಗಳು ತಂದ ಮಹತ್ತರ ಬದಲಾವಣೆಗಳು ನಮ್ಮ ಕಣ್ಣಮುಂದಿವೆ. ಅಂತೆಯೇ ಲಕ್ಷಾಂತರ ಜನರನ್ನು ಕೊಲ್ಲಲು ಬಳಕೆಯಾದ ಅಡಾಲ್ಫ್ ಹಿಟ್ಲರನಂತಹ ದನಿಗಳೂ ಉಂಟು.
ಜನತೆಯನ್ನು ನಾಂಗಾ ಎಷ್ಟು ಗಾಢವಾಗಿ ನಂಬಿಸುತ್ತಾನೆಂದರೆ ಅವರು ಅವನನ್ನು ಪ್ರಶ್ನಿಸುವುದೇ ಇಲ್ಲ. ಜನ ಕೇವಲ ವಾಸ್ತವಾಂಶಗಳನ್ನು ತಿಳಿದರೆ ಸಾಕು, ದೇಶ ಎಷ್ಟೋ ಸುಧಾರಿಸುತ್ತದೆ ಎಂಬುದು ಓಡಿಲಿಯ ಕಳಕಳಿ. ವಸಾಹತುಶಾಹಿಯ ಹಿಡಿತದಿಂದ ಬಿಡಿಸಿಕೊಳ್ಳುವ ಕಪ್ಪು ಜನರ ಆಫ್ರಿಕಾ ಇಂದಿಗೂ ಸರ್ವಾಧಿಕಾರಿಗಳ ಹಿಡಿತಗಳಲ್ಲಿ ಮತ್ತು ಅಂತರ ಬುಡಕಟ್ಟು ಕಲಹಗಳಲ್ಲಿ ನರಳಿದೆ.
ಧರ್ಮ, ದೇಶ, ಅಧಿಕಾರ, ನಂಬಿಕೆಗಳು ಹಾಗೂ ಜನಾಂಗೀಯ ಶ್ರೇಷ್ಠತೆಯ ಭಾವನೆಯನ್ನು ಆಧರಿಸಿ ಒಂದು ಗುಂಪು ಮತ್ತೊಂದರ ಮೇಲೆ ಅಧಿಕಾರ ಸಾಧಿಸಿ ತನ್ನನ್ನು ವಿಸ್ತರಿಸಿಕೊಳ್ಳುವುದು ವಸಾಹತುಶಾಹಿ. ಮೈಬಣ್ಣವನ್ನು ಆಧರಿಸಿ ತನಗೆ ಇತರರಿಗಿಂತ ಹೆಚ್ಚು ಅಧಿಕಾರ ಮತ್ತು ಹೆಚ್ಚು ಹಕ್ಕುಗಳಿವೆ, ತನ್ನ ನಂಬಿಕೆಗಳೇ ಶ್ರೇಷ್ಠ ಎಂದು ಬಗೆದು ಅವುಗಳನ್ನು ವಿಸ್ತರಿಸಲು ಮತ್ತೊಬ್ಬ ವ್ಯಕ್ತಿ ಅಥವಾ ಗುಂಪಿನ ಮೇಲೆ ದೈಹಿಕ ಅಥವಾ ಮಾತಿನ ಬಲಪ್ರಯೋಗ ಮಾಡುವುದು ವರ್ಣಭೇದ ನೀತಿ. ವಸಾಹತುಶಾಹಿ ಮತ್ತು ವರ್ಣಭೇದ ನೀತಿ ಒಂದಕ್ಕೊಂದು ಬಲು ಹತ್ತಿರ. ಇವೆರಡೂ ಸಂಗಮಿಸಿದ ದುಃಸ್ಥಿತಿ ಭಾರತದ್ದು.
ಅಚಿಬೆ ಸೃಷ್ಟಿಸಿರುವ ನಾಂಗಾ ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಆತನಿಗೆ ದೇಶ ಕಾಲಗಳ ಗೆರೆಗಳಿಲ್ಲ. ಎಲ್ಲಿ ಬೇಕಾದರೂ ತಲೆಯೆತ್ತಬಲ್ಲ. ‘ಧರ್ಮ ಸಂಸ್ಥಾಪನೆಗಾಗಿ ಸಂಭವಿಸುತ್ತೇನೆ ಯುಗ ಯುಗದಲ್ಲಿ’ ಎಂದು ಭಗವದ್ಗೀತೆಯ ದುರ್ಬಳಕೆಗೂ ಹಿಂಜರಿಯುವುದಿಲ್ಲ. ವಿಷ್ಣುವಿನ ಹನ್ನೊಂದನೆಯ ಅವತಾರ, ಭಾರತಕ್ಕೆ ದೇವರು ನೀಡಿದ ಕೊಡುಗೆ ಎಂದು ಪ್ರಧಾನಮಂತ್ರಿ ಮೋದಿಯವರನ್ನು ಬಣ್ಣಿಸಲು ಅಳುಕುವುದಿಲ್ಲ. ಇಂದಿರಾ ಗಾಂಧಿಯವರನ್ನು ಹೀಗೆಯೇ ‘ದುರ್ಗೆ’ ಎಂದೂ, ‘ಇಂದಿರಾ ಈಸ್ ಇಂಡಿಯಾ- ಇಂಡಿಯಾ ಈಸ್ ಇಂದಿರಾ’ ಎಂದು ಕೊಂಡಾಡಿದ ದೇವಕಾಂತ ಬರೂವಾಗಳಿದ್ದರು.
ಅಚಿಬೆ ಅವರ ನಾಂಗಾನಂತಹ ಜನನಾಯಕರು ಜನದನಿಯೂ ತಾವೇ ಎಂದು ಭ್ರಮಿಸುವ ಅಪಾಯಕಾರಿಗಳು. ದುರಂತವೆಂದರೆ ತಮ್ಮ ದನಿಯನ್ನು ತಮ್ಮ ನೆಚ್ಚಿನ ಜನನಾಯಕ ಅಪಹರಿಸಿದ್ದಾನೆ ಎಂಬ ಅರಿವೂ ಜನತೆಗೆ ಇರುವುದಿಲ್ಲ.
ಧ್ವನಿಗಾರುಡಿ ಎಂಬ ವಿದ್ಯೆಯೊಂದಿದೆ. ಇಂಗ್ಲಿಷಿನಲ್ಲಿ ಅದನ್ನು ‘ವೆಂಟ್ರಿಲಾಕಿಸಂ’ (Ventriloquism) ಎಂದು ಕರೆಯುತ್ತಾರೆ. ಜನಸಾಮಾನ್ಯರ ಕನ್ನಡದಲ್ಲಿ ಹೇಳುವುದಾದರೆ ಅದು ಮಾತನಾಡುವ ಗೊಂಬೆ. ಕರ್ನಾಟಕದಲ್ಲಿ ಉದಯ ಜಾದೂಗಾರ್ ಮಾತನಾಡುವ ಗೊಂಬೆ ಸಾಕಷ್ಟು ಪ್ರಸಿದ್ಧ.
ತೋರಿಕೆಗೆ ಮನುಷ್ಯ ಮತ್ತು ಗೊಂಬೆಯ ನಡುವಿನ ಸಂಭಾಷಣೆ ಅದು. ಆದರೆ ಅದರಲ್ಲಿ ಸ್ವಗತದ ಮಾತುಗಳಿರುತ್ತವೆಯೇ ವಿನಾ ಸಂಭಾಷಣೆ ಇರುವುದಿಲ್ಲ. ಗೊಂಬೆ ಮಾತಾಡುವುದೂ ಇಲ್ಲ. ಧ್ವನಿಗಾರುಡಿಗ ಮನುಷ್ಯ ತನ್ನ ಮಾತನ್ನಷ್ಟೇ ಅಲ್ಲದೆ ಗೊಂಬೆಯ ಮಾತನ್ನೂ ಆಡುತ್ತಿರುತ್ತಾನೆ. ಧ್ವನಿ ಬದಲಿಸಿ ತುಟಿ ಮುಚ್ಚಿ ಆಡುವ ಮಾತುಗಳ ವಿದ್ಯೆಯಲ್ಲಿ ಆತ ಪಾರಂಗತ ಆಗಿರುತ್ತಾನೆ. ಆತ ಪ್ರಶ್ನೆಯನ್ನೂ ಕೇಳುತ್ತಾನೆ, ಉತ್ತರವನ್ನೂ ಹೇಳುತ್ತಾನೆ. ಉತ್ತರ ಹೇಳುವಾಗ ತಾನು ಮಾತೇ ಆಡುತ್ತಿಲ್ಲ ಎಂಬಂತೆ ತುಟಿ ಹೊಲಿದುಕೊಂಡು ಮಾತು ಹೊರಡಿಸುತ್ತಾನೆ.
ನಿರ್ಜೀವ ಬೊಂಬೆ ಮಾತಾಡಿತು ಎಂದು ಭ್ರಮೆ ಹುಟ್ಟಿಸುವ ಈ ವಿದ್ಯೆ ನಮ್ಮ ಜನತಂತ್ರಕ್ಕೆ ಬಲು ಸಮೀಪ. ಪ್ರಚಂಡ ನಾಯಕರು ಜನತೆಯನ್ನು ಅದರ ದನಿಯನ್ನು ಕೈಗೊಂಬೆ ಮಾಡಿಕೊಳ್ಳುತ್ತಾರೆ. ಥೇಟ್ ಧ್ವನಿಗಾರುಡಿಗ ಮತ್ತು ಆತನ ನಿರ್ಜೀವ ಗೊಂಬೆಯಂತೆ. ತುಟಿ ಬಿಚ್ಚದೆ ಆಡಿದ ತಮ್ಮ ಮಾತನ್ನು ಜನರೆಂಬ ‘ನಿರ್ಜೀವ ಗೊಂಬೆ’ಗಳೇ ಆಡಿದರೆಂದು ಭ್ರಮೆ ಹುಟ್ಟಿಸುತ್ತಾರೆ. ಜನತಂತ್ರ ಎಂಬುದನ್ನು ಬಹುದೊಡ್ಡ ಪ್ರಹಸನದ ಆಳಕ್ಕೆ ತುಳಿಯುತ್ತಾರೆ. ಇಂದಿರಾ ಗಾಂಧಿ ಕೂಡ ತುರ್ತು ಪರಿಸ್ಥಿತಿಯ ಸಮರ್ಥನೆಗೆಂದು ಈ ತಂತ್ರ ಅನುಸರಿಸಿದ್ದು ಉಂಟು. ಆದರೆ ಜನರನ್ನು ಎತ್ತಿ ಕಟ್ಟಿ ದ್ವೇಷದ ಬೆಂಕಿ ಕಾರುವ ಹಂತಕ್ಕೆ ಅದನ್ನು ಬಳಸಲಿಲ್ಲ. ನೋಟು ರದ್ದತಿ ಕ್ರಮದಿಂದ ಗಾಯಗೊಂಡವರಿಂದಲೇ ಅದರ ಇಲ್ಲ ಸಲ್ಲದ ‘ಸದ್ಗುಣ’ಗಳನ್ನು ಕೊಂಡಾಡಿಸುವಂತಹ ಹಸಿ ಕ್ರೌರ್ಯಕ್ಕೆ ಕೈ ಹಾಕಲಿಲ್ಲ. ಕೃಷಿ ಸಂಕಟದ ಬೆಂಕಿ ಕೋಟಿ ಕೋಟಿ ರೈತರನ್ನು ಸುಡುತ್ತಿದ್ದರೂ, ಅದರತ್ತ ಕುರುಡಾಗಿ ಮಂದಿರ ಕಟ್ಟುವುದೇ ದೇಶದ ಮುಂದಿನ ಅತಿ ತುರ್ತಿನ ಕಾರ್ಯ, ‘ನಮಗೆ ಉದ್ಯೋಗ ಬೇಡ, ಮಂದಿರ ಬೇಕು’ ಎಂದು ಗೊಂಬೆಗಳ ಬಾಯಲ್ಲಿ ಹೇಳಿಸುತ್ತಿರಲಿಲ್ಲ. ಜನನಿಯ ದೂರ ಇರಿಸುವುದು ಸರಿಯೆಂದು ‘ಹೆಣ್ಣುಗೊಂಬೆ’ಗಳ ನಂಬಿಸಿ ಆಕೆಯನ್ನು ಅದೇ ದೇವಾಲಯದ ಕಾವಲಿಗೆ ಇರಿಸುವ ಮೋಸವನ್ನು ಮಾಡಿಸುತ್ತಿರಲಿಲ್ಲ... ‘ಇಲ್ಲ’ಗಳ ಈ ಪಟ್ಟಿ ಸುಲಭಕ್ಕೆ ಮುಗಿಯುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.