ಮಾಲಿನ್ಯ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಬಳಲಿ ಏದುಸಿರು ಬಿಡುತ್ತಿರುವ ಜೀವ ಗಂಗೆಗಾಗಿ ಸ್ವಾಮಿ ಜ್ಞಾನಸ್ವರೂಪ ಸಾನಂದರು ನೂರಕ್ಕೂ ಹೆಚ್ಚು ದಿನ ಉಪವಾಸ ಸತ್ಯಾಗ್ರಹದ ನಂತರ ನಿಧನ ಹೊಂದಿದರು. ಹೆಸರಿಗೆ ನಿಧನ ಎಂದರೂ ಇದು ಒಂದು ಬಗೆಯ ಪ್ರಭುತ್ವ ಪ್ರಾಯೋಜಿತ ಹತ್ಯೆ.ಸ್ವಾಮಿ ಸಾನಂದರು ಬರೆದ ಮೂರು ಪತ್ರಗಳ ಪೈಕಿ ಪ್ರಧಾನಿಯವರು ಒಂದಕ್ಕಾದರೂ ಉತ್ತರ ಕೊಡಲಿಲ್ಲ.ನಿಧನದ ನಂತರ ಧಾರಾಳ ಶ್ರದ್ಧಾಂಜಲಿ ಸಲ್ಲಿಸಿದರು.
ಪತ್ರದಲ್ಲಿ ತಾವು ಬರೆದ ಕೆಲವು ವಾಕ್ಯಗಳಿಂದ ಪ್ರಧಾನಿಯವರ ಅಹಮಿಕೆಗೆ ಪೆಟ್ಟು ಬಿದ್ದಿರುವ ಸೂಚನೆಗಳು ತಮಗೆ ಸಿಕ್ಕಿರುವುದಾಗಿ ಸ್ವಾಮಿ ಸಾನಂದರು ಹಿರಿಯ ಹಿಂದಿ ಪತ್ರಕರ್ತ ಅಭಯ ಮಿಶ್ರಾ ಜೊತೆ ಹಂಚಿಕೊಂಡಿದ್ದರು.ಈ ಕಾರಣಕ್ಕಾಗಿಯೇ ಮುನಿದು ಉತ್ತರ ನೀಡಲಿಲ್ಲ ಎನ್ನಲಾಗಿದೆ.
ಆರೆಸ್ಸೆಸ್‌ನ ಹಿರಿಯರಾದ ಕೃಷ್ಣಗೋಪಾಲರ ಪ್ರಯತ್ನದ ನಂತರ ಸ್ವಾಮೀಜಿಗೆ ಗಂಗಾ ಸಂರಕ್ಷಣ ಸಚಿವ ನಿತಿನ್ ಗಡ್ಕರಿ ಪತ್ರವೊಂದನ್ನು ಬರೆದರು.ಆದರೆ ಈ ಪತ್ರದಲ್ಲಿ ಅವರು ಉಪವಾಸ ಕೈಬಿಡಲು ಪೂರಕ ಆಗುವಯಾವ ಭರವಸೆಯೂ ಇರಲಿಲ್ಲ.ಗಂಗೆಯ ಪರಿಸರ ಹರಿವಿನ(ಇ–ಫ್ಲೋ) ಕುರಿತು ಕಾಳಜಿ ವಹಿಸುವ ಪ್ರಸ್ತಾಪವಷ್ಟೇ ಇತ್ತು.ಉಳಿದಂತೆ ಪರಿಶೀಲಿಸಲಾಗುವ ಅಪ್ಪಟ ಸರ್ಕಾರಿ-ದೇಶಾವರಿ ಉತ್ತರವಿತ್ತು. ಪರಿಸರ ಹರಿವಿನ ಶೇಕಡಾವಾರು ಪ್ರಮಾಣ ಕುರಿತು ಮೌನವಹಿಸಲಾಗಿತ್ತು.ಈಗಾಗಲೇ ನೀಡಲಾಗಿದ್ದ ಅನೇಕ ವೈಜ್ಞಾನಿಕ ವರದಿಗಳಿಗೆ ಅನುಗುಣವಾಗಿ ಪರಿಸರ ಹರಿವಿನ ಪ್ರಮಾಣ ಶೇ 50ರಷ್ಟಿರಬೇಕು ಎಂಬುದು ಸ್ವಾಮೀಜಿ ಆಗ್ರಹವಾಗಿತ್ತು.
ಪ್ರಧಾನಿ ನೇತೃತ್ವದ ರಾಷ್ಟ್ರೀಯ ಗಂಗಾ ಪರಿಷತ್ತು ವರ್ಷಕ್ಕೊಮ್ಮೆಯಾದರೂ ಸೇರಬೇಕು.ಈವರೆಗೆ ಒಂದು ಸಭೆಯೂ ನಡೆದಿಲ್ಲ.ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಿಂದ ಮೂರು ತಿಂಗಳ ಹಿಂದಷ್ಟೇ ಸರ್ಕಾರಕ್ಕೆ ತಪರಾಕಿ ಬಿದ್ದಿತ್ತು.ಗಂಗೆಯ ಮೇಲೆ ಭಾರಿ ಪ್ರಮಾಣದ ನಿರ್ಮಾಣ ಚಟುವಟಿಕೆಗಳು ಇನ್ನೂ ನಿಂತಿಲ್ಲ.ಶುದ್ಧೀಕರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ.ಕಾಗದದ ಮೇಲೆ ಸಲ್ಲಿಸಿರುವ ಮಾಹಿತಿಯು ನೆಲದ ವಾಸ್ತವದಿಂದ ಬಹುದೂರ.ಪರಿಸ್ಥಿತಿ ಅಸಾಧಾರಣವಾಗಿ ವಿಷಮಿಸಿದೆ. ಕೆಲಸ ನಡೆದಿದೆಯೆಂದು ಒಪ್ಪಲು ಸಾಧ್ಯವಿಲ್ಲ ಎಂದಿತ್ತು.
ಸರ್ಕಾರದ ಪ್ರಮಾಣಪತ್ರಗಳ ಪ್ರಕಾರವೇ ಗಂಗೆಯ ಶೇ 52ರಷ್ಟು ಹರಿವು ಈಗಾಗಲೇ ಹರಿದು ಹಂಚಿ ಹೋಗಿದೆ.ಪ್ರಸ್ತಾವಿತ ನಿರ್ಮಾಣಗಳು ಮುಂದುವರೆದರೆ ಈ ಪ್ರಮಾಣ ಶೇ 82ನ್ನು ಮುಟ್ಟಲಿದೆ.ಭಾಗೀರಥೀ ನೈಸರ್ಗಿಕ ಸ್ವರೂಪ ಕಳೆದುಕೊಳ್ಳಲಿದ್ದಾಳೆ. ಕೋಟೇಶ್ವರದಿಂದ ದೇವಪ್ರಯಾಗದವರೆಗೆ110ಕಿ.ಮೀ.ತನಕ ಸ್ನಾನ-ಅಚಮನಕ್ಕೂ ಗಂಗೆ ಇಲ್ಲ... ಗುಹೆ ಸುರಂಗಗಳಲ್ಲಿ ಹರಿದಿದ್ದಾಳೆ... ಇಲ್ಲವೇ ಸರೋವರವಾಗಿ ಸ್ಥಗಿತಗೊಂಡಿದ್ದಾಳೆ.ವಾತಾವರಣಕ್ಕೆ ದುರಸ್ತಿ ಮಾಡಲಾಗದಂತಹ ಹಾನಿ ಆಗಿಹೋಗಿದೆ.
‘ಗಂಗೆ ಯಮುನೆ ನನ್ನ ತಾಯಂದಿರು.ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ.ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ’ ಎಂದಿದ್ದರು ಪ್ರಧಾನಿ.ಅವರ ಮಾತಿನಲ್ಲಿ ಎಳ್ಳಷ್ಟು ಸತ್ಯಾಂಶ ಇದ್ದಿದ್ದರೂ ಸ್ವಾಮಿ ಸಾನಂದರು ಪ್ರಾಣ ತ್ಯಾಗ ಮಾಡಬೇಕಿರಲಿಲ್ಲ.
ಸ್ವಾಮೀಜಿ ಪತ್ರಗಳು ಗಂಗೆಯ ಕುರಿತು ಪ್ರಧಾನಿಯವರ ನುಡಿ-ನಡೆಯ ನಡುವಣ ಅಂತರದ ಮೇಲೆ ಹೊನಲು ಬೆಳಕನ್ನು ಹರಿಸಿ ಬೆತ್ತಲಾಗಿಸಿವೆ.ಕಡುಕಠೋರ ಮಾತು ಗಳಿಗೆ ದೈಹಿಕವಾಗಿ ಸುಡುವ ಶಕ್ತಿ ಇದ್ದಿದ್ದರೆ ಆಡಿಸಿಕೊಂಡವರ ಮೈ ಮೇಲೆ ಬೊಬ್ಬೆಗಳೇ ಏಳಬೇಕಿತ್ತು.
ಉತ್ತರಕಾಶಿಯಿಂದ2018ರ ಫೆಬ್ರುವರಿಯಲ್ಲಿ ಸ್ವಾಮಿ ಸಾನಂದರು ಬರೆದಿದ್ದ ಮೊದಲ ಪತ್ರ ಹೀಗಿತ್ತು-
‘ಭಾಯೀ,ನೀವು ಪ್ರಧಾನಿ ಆದದ್ದು ಆನಂತರದ ಬೆಳವಣಿಗೆ,ತಾಯಿ ಗಂಗಾಜೀ ಪುತ್ರರ ಪೈಕಿ ನಾನು ನಿಮಗಿಂತ18ವರ್ಷ ಹಿರಿಯನಿದ್ದೇನೆ. 2014ರ ಲೋಕಸಭಾ ಚುನಾವಣೆಗಳ ನಡೆಯುವ ತನಕ ನೀವು ಸ್ವಯಂ ತಾಯಿ ಗಂಗಾಜೀಯ ಮುದ್ದಿನ,ತಿಳಿವಳಿಕೆಯುಳ್ಳ ಸಮರ್ಪಿತ ಪುತ್ರನೆಂದು ಹೇಳಿಕೊಳ್ಳುತ್ತಿದ್ದಿರಿ.ಆದರೆ ತಾಯಿಯ ಮತ್ತು ಪ್ರಭು ಶ್ರೀರಾಮನ ಕೃಪೆಯಿಂದ ಚುನಾವಣೆ ಗೆದ್ದು,ಈಗಲಾದರೋ ನೀವು ತಾಯಿಯ ಕೆಲವು ಆಶೆಬುರುಕ,ವಿಲಾಸಪ್ರಿಯ ಪುತ್ರ ಪುತ್ರಿಯರ ಸಮೂಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ ಮತ್ತು ನೀವುಗಳು ವಿಕಾಸವೆಂದು ಕರೆಯುವ ಆ ನಾಲಾಯಕರ ವಿಲಾಸದ ಸಾಧನಗಳನ್ನು(ಉದಾ- ಹೆಚ್ಚುವರಿ ವಿದ್ಯುತ್) ಹೊಂದಿಸಲು,ಕೆಲವೊಮ್ಮೆ ಜಲಮಾರ್ಗದ ಹೆಸರಿನಲ್ಲಿ ವಯಸ್ಸಾದ ತಾಯಿಯನ್ನು ಒಜ್ಜೆ ಹೊರುವ ಹೇಸರಗತ್ತೆ ಆಗಿಸಬಯಸುವಿರಿ,ಮತ್ತೊಮ್ಮೆ ಊರ್ಜೆಯ ಅಗತ್ಯ ಪೂರೈಸಲು ನೊಗ-ನೇಗಿಲು-ಗಾಣಕ್ಕೆ ಬಿಗಿಯುವ ಎತ್ತು ಆಗಿಸುವಿರಿ.ತಾಯಿಯ ಒಡಲಿನ ರಕ್ತವೆಲ್ಲ ಲೆಕ್ಕವಿಲ್ಲದಷ್ಟು ಹಸಿದ ಪುತ್ರ ಪುತ್ರಿಯರ ಹಿಂಡನ್ನು ಪಾಲಿಸಿ ಪೋಷಿಸಲು ವ್ಯರ್ಥವಾಗುತ್ತಿದೆ.ಈ ನಾಲಾಯಕರ ಹಸಿವು ಇಂಗುವುದೇ ಇಲ್ಲ.ಹೆತ್ತಮ್ಮನ ಆರೋಗ್ಯ ಹಾಳಾದ ಕುರಿತು ಇವರಿಗೆ ಕೊಂಚವೂ ಗಮನವಿಲ್ಲ. ತಾಯಿಯ ರಕ್ತಬಲದಿಂದಲೇ ಸರದಾರರಾದ ನಿಮ್ಮ ಚಾಂಡಾಲ-ಚೌಕಡಿಯ ಹಲವು ಸದಸ್ಯರ ನಜರು ಅಮ್ಮನ ಅಳಿದುಳಿದ ರಕ್ತ ಹೀರುವುದರ ಮೇಲೆಯೇ ಸದಾ ನೆಟ್ಟಿರುತ್ತದೆ.ಅಮ್ಮ ಜೀವಂತ ಇದ್ದರೇನು,ಸತ್ತೇ ಹೋದರೇನು ಅವರಿಗೆ ತಮ್ಮ ಸಂಪತ್ತಿನದೇ ಚಿಂತೆ.ನಿಮ್ಮ ಅಗ್ರಜನಾಗಿ,ವಿದ್ಯಾ-ಬುದ್ಧಿಯಲ್ಲಿ ನಿಮಗಿಂತ ಹಿರಿಯನಾಗಿ,ಎಲ್ಲಕ್ಕೂ ಮಿಗಿಲಾಗಿ ತಾಯಿ ಗಂಗೆಯ ಸ್ವಾಸ್ಥ್ಯ-ಸುಖ-ಪ್ರಸನ್ನತೆಗಾಗಿ ಎಲ್ಲವನ್ನೂ ಪಣಕ್ಕಿಡಲು ನಿಮಗಿಂತ ಮುಂದಿರುವೆನಾದ ಕಾರಣ,ಗಂಗಾಜೀ ಕುರಿತ ವಿಷಯಗಳ ಕುರಿತು ನಿಮಗೆ ಬುದ್ಧಿ ಹೇಳಿ ತಿಳಿಸುವ,ನಿರ್ದೇಶನ ನೀಡುವುದು ನನ್ನ ಹಕ್ಕು.ತಾಯಿಯ ಆಶೀರ್ವಾದ,ನಿಮ್ಮ ಅದೃಷ್ಟ ಹಾಗೂ ಆಸೆ ಆಮಿಷಗಳ ಚಾಲಾಕಿತನದ ಬಲದಿಂದ ನೀವು ಸಿಂಹಾಸನಾರೂಢ ಆಗಿದ್ದೀರಿ.ಆದರೂ ನಿರ್ದೇಶನ ನೀಡುವ ನನ್ನ ಹಕ್ಕು ಕಡಿಮೆಯಾಗುವುದಿಲ್ಲ.ಇದೇ ಹಕ್ಕಿನ ಬಲದಿಂದ ಕೆಲವು ಅಪೇಕ್ಷೆಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ’.
ಹರಿದ್ವಾರದ ಕನಖಾಲದಿಂದ ಅವರು ಬರೆದ ಪತ್ರದ ತೇದಿ2018ರ ಜೂನ್13.ತಮ್ಮ ಮೊದಲನೆಯ ಪತ್ರಕ್ಕೆ ಈವರೆಗೆ ಉತ್ತರ ಬಂದಿಲ್ಲವೆಂದು ಸಾನಂದರು ಪ್ರಧಾನಿಗೆ ನೆನಪಿಸುತ್ತಾರೆ.ಗಂಗೆಯನ್ನು ಸ್ವಚ್ಛಗೊಳಿಸುವ ಬೇಡಿಕೆಗಳನ್ನು ಈ ಪತ್ರದಲ್ಲೂ ಮಂಡಿಸುತ್ತಾರೆ.ಬೇಗನೆ ಪ್ರತಿಕ್ರಿಯೆ ನೀಡುವಂತೆ ಕೋರುತ್ತಾರೆ.ಈ ನಡುವೆ ಕೇಂದ್ರ ಮಂತ್ರಿ ಉಮಾ ಭಾರತಿ ಭೇಟಿಯಾಗಿ ನಿತಿನ್ ಗಡ್ಕರಿಯವರ ಜೊತೆ ದೂರವಾಣಿಯಲ್ಲಿ ಮಾತಾಡಿಸುತ್ತಾರೆ.ಆದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. 2018ರಂದು ಮೋದಿಯವರಿಗೆ ಮೂರನೆಯ ಪತ್ರ ಬರೆಯುತ್ತಾರೆ.ಈ ಪತ್ರದಲ್ಲಿ ಪ್ರಧಾನಿ ಕುರಿತ ಸಂಬೋಧನೆಯು ‘ತುಮ್’ (ನೀವು)ಬದಲಿಗೆ ‘ಆಪ್’ (ತಾವು)ಎಂದಾಗಿರುತ್ತದೆ.
‘ಆದರಣೀಯ ಪ್ರಧಾನಮಂತ್ರಿಜೀ,
ಗಂಗಾಜೀ ಸಂಬಂಧ ತಮಗೆ ಹಲವು ಪತ್ರ ಬರೆದೆ.ಆದರೆ ಒಂದಕ್ಕೂ ಜವಾಬು ಸಿಗಲಿಲ್ಲ.ತಾವು ಪ್ರಧಾನಿ ಆದ ನಂತರ ಗಂಗಾಜೀ ಕುರಿತು ಆಲೋಚಿಸುವಿರಿ ಎಂದು ನಂಬಿದ್ದೆ.ಯಾಕೆಂದರೆ2014ರ ಲೋಕಸಭಾ ಚುನಾವಣೆ ಗೆದ್ದ ನಂತರ ತಾವು ತಾಯಿ ಗಂಗಾ ತಮ್ಮನ್ನು ಬನಾರಸಿಗೆ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಿದ್ದಿರಿ.ಏನಾದರೂ ಮಾಡುವಿರೆಂದು ನಂಬಿದ್ದೆ.ಹೆಚ್ಚು ಕಡಿಮೆ ನಾಲ್ಕೂವರೆ ವರ್ಷ ಕಾಲ ಶಾಂತಿಯಿಂದ ಎದುರು ನೋಡಿದೆ.ಗಂಗಾಜೀ ಸಲುವಾಗಿ ನಾನು ಈ ಹಿಂದೆಯೂ ಉಪವಾಸ ಸತ್ಯಾಗ್ರಹ ಮಾಡಿದ್ದು ನಿಮಗೆ ಗೊತ್ತೇ ಇರುತ್ತದೆ.ನನ್ನ ಆಗ್ರಹವನ್ನು ಮನ್ನಿಸಿ ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರು ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದ ಲೋಹಾರಿ-ನಾಗಪಾಲಾದಂತಹ ಬೃಹತ್ ವಿದ್ಯುತ್ ಯೋಜನೆಯನ್ನು ರದ್ದು ಮಾಡಿದರು.ಸಾವಿರಾರು ಕೋಟಿ ರೂಪಾಯಿಗಳ ನಷ್ಟವನ್ನು ಸರ್ಕಾರ ಭರಿಸಬೇಕಾಯಿತು.ಆದರೆ ಗಂಗಾಜೀ ಸಲುವಾಗಿ ಮನ ಮೋಹನ ಸಿಂಗ್ ಸರ್ಕಾರ ಈ ಹೆಜ್ಜೆ ಇರಿಸಿತ್ತು.ಜೊತೆ ಜೊತೆಗೆ ಆ ಸರ್ಕಾರ ಉತ್ತರಕಾಶಿಯ ತನಕ ಭಾಗೀರಥೀಜೀ ಹರಿವನ್ನು ಪರಿಸರ-ಸೂಕ್ಷ್ಮ ವಲಯವೆಂದೂ ಘೋಷಿಸಿ,ಗಂಗಾಜೀಗೆ ಹಾನಿಯಾಗುವ ಯಾವ ಕೆಲಸವೂ ಜರುಗದಂತೆ ತಡೆದಿತ್ತು.
ತಾವು ಇನ್ನೂ ಎರಡು ಹೆಜ್ಜೆ ಮುಂದೆ ಇಟ್ಟು ಗಂಗಾಜೀಯ ಉಳಿವಿಗೆ ವಿಶೇಷ ಪ್ರಯತ್ನ ಮಾಡುವಿರಿ ಎಂಬುದು ನನ್ನ ಅಪೇಕ್ಷೆಯಾಗಿತ್ತು. ಯಾಕೆಂದರೆ ತಾವು ಗಂಗಾ ನದಿಗಾಗಿ ಪ್ರತ್ಯೇಕ ಸಚಿವ ಖಾತೆಯನ್ನೇ ತೆರೆದಿರಿ. ಆದರೆ ಈ ನಾಲ್ಕು ವರ್ಷಗಳಲ್ಲಿ ನಿಮ್ಮ ಸರ್ಕಾರ ಏನೇ ಮಾಡಿದ್ದರೂ,ಅದರಿಂದ ಗಂಗಾಜೀಗೆ ಏನೇನೂ ಲಾಭ ಆಗಲಿಲ್ಲ.ಬದಲಾಗಿ ಕಾರ್ಪೊರೇಟ್ ವಲಯ ಮತ್ತು ವ್ಯಾಪಾರಿ ಮನೆತನಗಳಿಗೇ ಲಾಭವಾಗುವುದು ಕಂಡು ಬರುತ್ತಿದೆ.ಈವರೆಗೆ ಗಂಗಾ ನದಿಯಿಂದ ಲಾಭ ಗಳಿಸುವ ವಿಚಾರವನ್ನೇ ತಾವು ಮಾಡಿದ್ದೀರಿ.ಗಂಗಾಜೀಗೆ ನೀವು ಏನನ್ನೂ ಕೊಡುತ್ತಿಲ್ಲ.ನಿಮ್ಮ ಎಲ್ಲ ಯೋಜನೆಗಳಿಂದ ಕಾಣಬರುತ್ತಿರುವುದು ಇದೇ ಸಂಗತಿ.ಇನ್ನು ಗಂಗಾಜೀಯಿಂದ ಪಡೆದುಕೊಳ್ಳುವುದೇನೂ ಇಲ್ಲ,ಕೊಡುವುದೇ ಎಲ್ಲ ಎಂಬ ನಿಮ್ಮ ಮಾತು ತುಟಿ ಮೇಲಿನದು ಮಾತ್ರ.
ಗಂಗಾಜೀ ಕುರಿತು ಈಗಾಗಲೇ ತಮ್ಮ ಮುಂದೆ ಮಂಡಿಸಿರುವ ನಾಲ್ಕು ಬೇಡಿಕೆಗಳನ್ನು ಸ್ವೀಕರಿಸಿ, ಇಲ್ಲವಾದರೆ ಗಂಗಾಜೀಗಾಗಿ ಉಪವಾಸ ಮಾಡುತ್ತಿರುವ ನಾನು ಪ್ರಾಣ ತ್ಯಾಗ ಮಾಡುತ್ತೇನೆ.
ಪ್ರಾಣ ತ್ಯಾಗದ ಚಿಂತೆ ನನಗಿಲ್ಲ.ಗಂಗಾಜೀ ಕೆಲಸ ನನಗೆ ಎಲ್ಲಕ್ಕಿಂತ ಮಹತ್ವಪೂರ್ಣ.ನಾನು ಐಐಟಿ ಪ್ರೊಫೆಸರ್ ಆಗಿದ್ದವನು.ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂತಾದ ಗಂಗಾಜೀ ಜೊತೆ ಸಂಬಂಧವಿದ್ದ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದವನು.ಈ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ-ನೀವು ಕಳೆದ ನಾಲ್ಕು ವರ್ಷಗಳಲ್ಲಿ ಗಂಗಾಜೀ ಉಳಿಸಲು ಯಾವುದೇ ಸಾರ್ಥಕ ಪ್ರಯತ್ನ ಮಾಡಲಿಲ್ಲ.ಉಮಾ ಭಾರತಿಯವರ ಮೂಲಕ ಕಳಿಸುತ್ತಿರುವ ಈ ಪತ್ರದಲ್ಲಿನ ನಾಲ್ಕು ಬೇಡಿಕೆಗಳನ್ನು ಸ್ವೀಕರಿಸುವಂತೆ ಕೋರುತ್ತಿದ್ದೇನೆ.
ನ್ಯಾಯಮೂರ್ತಿ ಗಿರಿಧರ ಮಾಳವೀಯ,ನ್ಯಾಯವಾದಿ ಎಂ.ಸಿ.ಮೆಹ್ತಾ,ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಅಧ್ಯಕ್ಷ ಪರಿತೋಷ್ ತ್ಯಾಗಿ ನೆರವಿನಿಂದ ಒಕ್ಕಣೆ ಮಾಡಿ ಸಲ್ಲಿಸಲಾಗಿರುವ ಮಸೂದೆಯ ಕರಡನ್ನು ಆಧರಿಸಿ ಗಂಗಾ ನದಿ ಸಂರಕ್ಷಣೆಗೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಅಂಗೀಕರಿಸಬೇಕು.
ಅಲಕಾನಂದಾ,ಧೌಳಗಂಗಾ,ನಂದಾಕಿನಿ,ಪಿಂಡರ್ ತಥಾ ಮಂದಾಕಿನೀ ನದಿಗಳ ಎಲ್ಲ ನಿರ್ಮಾಣಾಧೀನ-ಪ್ರಸ್ತಾವಿತ ಜಲವಿದ್ಯುತ್ ಉತ್ಪಾದನಾ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕು ಮತ್ತು ಗಂಗಾಜೀಯ ಇತರೆ ಉಪನದಿಗಳ ಪ್ರಸ್ತಾವಿತ ಜಲವಿದ್ಯುತ್ ಯೋಜನೆಗಳನ್ನೂ ರದ್ದು ಮಾಡಬೇಕು.
ಈ ಉದ್ದೇಶಕ್ಕಾಗಿ ಈ ಎಲ್ಲ ನದಿಗಳ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಅದರಲ್ಲೂ ವಿಶೇಷವಾಗಿ ಹರಿದ್ವಾರದ ಕುಂಭ ಕ್ಷೇತ್ರದಲ್ಲಿ ಕಾಡು ಕಡಿಯುವ ಮತ್ತು ಗಣಿಗಾರಿಕೆ ನಡೆಸುವ ಇಲ್ಲವೆ ಯಾವುದೇ ಬಗೆಯ ಅಗೆಯುವ ಕೆಲಸದ ಮೇಲೆ ಪೂರ್ಣ ತಡೆ ಹೇರಬೇಕು.ಗಂಗಾ ಭಕ್ತ ಪರಿಷತ್ತು ರಚಿಸಬೇಕು.ಗಂಗಾಜೀ ಹಿತದ ಕೆಲಸವನ್ನು ಮಾತ್ರವೇ ಮಾಡುವುದಾಗಿ ಈ ಪರಿಷತ್ತಿನ ಸದಸ್ಯರು ಗಂಗೆಯಲ್ಲಿ ನಿಂತು ಶಪಥ ಸ್ವೀಕರಿಸಬೇಕು. ಗಂಗೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಪರಿಷತ್ತಿನ ನಿರ್ಣಯವೇ ಅಂತಿಮ ಆಗತಕ್ಕದ್ದು.
ಪ್ರಭು ನಿಮಗೆ ಸದ್ಬುದ್ಧಿ ನೀಡಲಿ,ಜೊತೆಗೆ ತಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಫಲವನ್ನೂ ಕರುಣಿಸಲಿ. ತಾಯಿ ಗಂಗಾಜೀಗೆ ಅವಹೇಳನ-ಮೋಸ ಮಾಡುವವರನ್ನು ಯಾವುದೇ ಸ್ಥಿತಿಯಲ್ಲಿ ಕ್ಷಮಿಸದಿರಲಿ. 2018ರ ಜೂನ್13ರ ಪತ್ರಕ್ಕೆ ತಾವು ಉತ್ತರ ನೀಡಿಲ್ಲವಾದ ಕಾರಣ2018ರ ಜೂನ್22ರಂದು ನನ್ನ ಉಪವಾಸ ಸತ್ಯಾಗ್ರಹ ಆರಂಭ ಆಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರುತ್ತಿದ್ದೇನೆ.
ಧನ್ಯವಾದಗಳು’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.