ADVERTISEMENT

ಗಂಡುಗಾಜಿನ ಚಾವಣಿಗಳು ಮತ್ತು ಅರ್ಧ ಆಕಾಶ!

ಸರಿಸಮ ಅವಕಾಶ ಆಕೆಗೆ ದೊರೆತಿದ್ದರೆ ಎಂದೋ ಪುಡಿಯಾಗಬೇಕಿದ್ದ ಚಾವಣಿಗಳಿವು...

ಉಮಾಪತಿ
Published 14 ಅಕ್ಟೋಬರ್ 2018, 20:06 IST
Last Updated 14 ಅಕ್ಟೋಬರ್ 2018, 20:06 IST
   

ಒಂದು ಕಾಲಕ್ಕೆ ಸಮೂಹ ಮಾಧ್ಯಮಗಳೆಂದರೆ ಕೇವಲ ವೃತ್ತಪತ್ರಿಕೆಗಳು ಮತ್ತು ಸರ್ಕಾರಿ ಸ್ವಾಮ್ಯದ ಆಕಾಶವಾಣಿ ಮತ್ತು ಆನಂತರ ದೂರದರ್ಶನ. ಕಾಲಕ್ರಮೇಣ ಬಂದದ್ದು ಖಾಸಗಿ ಸುದ್ದಿವಾಹಿನಿಗಳು ಮತ್ತು ಇತ್ತೀಚೆಗಿನ ಸಾಮಾಜಿಕ ಜಾಲತಾಣಗಳ ಮಾಧ್ಯಮ. ಸಮೂಹ ಮಾಧ್ಯಮಗಳಲ್ಲಿ ಪುರುಷ ಮತ್ತು ಮಹಿಳೆಯ ಅನುಪಾತ ಈಗಲೂ ಆನೆ- ಆಡಿನ ಅಂತರದ್ದು. ಇಂಗ್ಲಿಷ್ ಸುದ್ದಿಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಸುದ್ದಿಮನೆಗಳು ಮಹಿಳೆಯರಿಗೆ ದೊಡ್ಡ ರೀತಿಯಲ್ಲಿ ಬಾಗಿಲು ತೆರೆದಿವೆ ಹೌದು. ಆದರೆ ಈ ಮನೆಗಳ ಯಜಮಾನಿಕೆ ಈಗಲೂ ಪುರುಷನ ಕೈಯಲ್ಲೇ ಉಳಿದಿರುವುದು ವಾಸ್ತವ. ಭಾಷಾ ಪತ್ರಿಕೆಗಳಲ್ಲಿ ವರದಿಗಾರಿಕೆ ವಿಭಾಗಕ್ಕೆ ಹೆಣ್ಣುಮಕ್ಕಳ ಪ್ರವೇಶ ಈಗಲೂ ದುಸ್ತರ.

ಅವೇಳೆಯಲ್ಲಿ ಕೆಲಸ ಮಾಡಬೇಕಾಗುತ್ತದೆ, ಪುರುಷ ವರದಿಗಾರರಂತೆ ಬಿಡುಬೀಸಾಗಿ ನುಗ್ಗಿ ಸುದ್ದಿ ಹೆಕ್ಕುವುದು ಅವರಿಂದಾಗದು ಎಂಬ ಮುಂತಾದ ಕಾರಣಗಳಿಗಾಗಿ ಈ ವಿಭಾಗದಿಂದ ಅವರನ್ನು ದೂರವೇ ಉಳಿಸಲಾಗಿದೆ. ಸವಾಲಿನ ಸುದ್ದಿ ಹೆಕ್ಕುವ ಕೆಲಸ ಆಕೆಯಿಂದ ಈಗಲೂ ದೂರ ದೂರ. ಮೆದು ಸುದ್ದಿವಲಯಗಳಲ್ಲೇ ಗಿರಕಿ ಹೊಡೆದಿದ್ದಾಳೆ. ತನ್ನ ಆಯ್ಕೆಯ ಕೆಲಸ ಮಾಡಲು ಪೂರಕ ಸುರಕ್ಷಿತ ವಲಯ ಆಕೆಯ ಹಕ್ಕು. ಅದನ್ನು ಆಗುಮಾಡುವುದು ಸಮಾಜದ ಜವಾಬ್ದಾರಿ. ಸುದ್ದಿ ಸಂಗ್ರಹದ ಪ್ರಧಾನಧಾರೆಯಿಂದ ದೂರ ಇರಿಸಿರುವುದಕ್ಕೆ ಆಕೆ ಹೆಣ್ಣಾಗಿರುವುದೇ ಕಾರಣ ಎಂದು ಪುರುಷಾಧಿಪತ್ಯ ತನ್ನ ಜವಾಬ್ದಾರಿಯಿಂದ ಕೈ ತೊಳೆದುಕೊಂಡಿದೆ. ಅದು ಆಕೆಗೆ ಆಗಿರುವ ಐತಿಹಾಸಿಕ ಮೋಸ. ವರ್ತಮಾನದಲ್ಲಿ ಮುಂದುವರೆದಿದೆ, ಭವಿಷ್ಯಕಾಲಕ್ಕೂ ಚಾಚಿ ಕವಿದಿದೆ.

ತನುಶ್ರೀ ದತ್ತಾ ಎಂಬ ಯುವನಟಿ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಹಾರಿಸಿದ ಕಿಡಿ ಪತ್ರಿಕಾ ಕ್ಷೇತ್ರದಲ್ಲಿ ‘#Me Too’ ಕಿಚ್ಚು ಹಚ್ಚಿದೆ. ಇಂತಹ ಲೈಂಗಿಕ ಕಿರುಕುಳದ ತವರು ಚಿತ್ರರಂಗ ಎಂಬುದು ಬಹಿರಂಗ ಸತ್ಯ. ಆದರೂ ತನುಶ್ರೀ ಬೆಂಕಿ ಅಲ್ಲಿ ಹಬ್ಬಿ ಹರಡಲಿಲ್ಲ. ಅತಿರಥ ಮಹಾರಥರು ಪರಸ್ಪರರನ್ನು ರಕ್ಷಿಸಿಕೊಳ್ಳುವ ಭದ್ರಕೋಟೆಯು ಹೆಣ್ಣುಬಾಕರ ರಹಸ್ಯಗಳನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಪುರುಷಾಧಿಪತ್ಯದ ಈ ಉಕ್ಕಿನ ಕೋಟೆಯಿಂದ ಲೈಂಗಿಕ ಕಿರುಕುಳದ ದನಿಗಳು ಹೊರಬೀಳುವುದು ಹಲವು ಕಾರಣಗಳಿಗಾಗಿ ಕಡುಕಷ್ಟ. ಆದರೆ ಕಿರುಕುಳದ ವಿರುದ್ಧದ ದನಿಗಳು ಸುದ್ದಿಮನೆಗಳ ಪಡಸಾಲೆ ದಾಟಿ ಬೀದಿಗೆ ಬೀಳತೊಡಗಿವೆ.

ADVERTISEMENT

ಶತಮಾನಗಳ ಗಂಡಾಳಿಕೆ ತುಳಿದು ಹೂತು ಹಾಕಿದ್ದ ಪಿಸುಮಾತುಗಳಿವು. ಕೆಲವಷ್ಟೇ ನೆಲಗರ್ಭ ಸೀಳಿ ಮೇಲೆ ತೇಲಿ ಮೊರೆಯತೊಡಗಿವೆ. ಅವಮಾನ, ನಿಂದೆಗೆ ಬೆಚ್ಚಿ, ಹಳೆಯ ಯಾತನೆಗಳ ಕೆಂಡಗಳನ್ನು ಮತ್ತೊಮ್ಮೆ ಮೈಮನದ ಮೇಲೆಳೆದು ಸುಟ್ಟುಕೊಳ್ಳುವ ಘೋರಕ್ಕೆ ಹೌಹಾರಿ ಮಾತು ಕಳೆದುಕೊಂಡಿರಬಹುದಾದ ಅಸಂಖ್ಯ ಹೆಣ್ಣು ಜೀವಗಳ ಲೆಕ್ಕವಿಟ್ಟವರು ಯಾರು?

ಅದುಮಿಟ್ಟಿದ್ದ ಕ್ರೋಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳೇ ಸಾರ್ವಜನಿಕ ನ್ಯಾಯಾಲಯಗಳು. ಗಂಡು– ಹೆಣ್ಣು ಒಂದೇ ಸೂರಿನಡಿ, ಒಂದೇ ಆವರಣದಲ್ಲಿ ಕೆಲಸ ಮಾಡುವ ಎಡೆಗಳಲ್ಲಿ ಮಾನವಸಹಜ ಸಂಬಂಧಗಳು ಏರ್ಪಡುವುದು ಸ್ವಾಭಾವಿಕ. ಪ್ರಕೃತಿ-ಪುರುಷನ ನಡುವೆ ಆಕರ್ಷಣೆ ನಿಸರ್ಗ ಸಹಜ. ಆದರೆ ಈ ಸೆಳೆತಗಳು ಸಮ್ಮತಿ- ಅಸಮ್ಮತಿ ಮತ್ತು ಸಭ್ಯ- ಅಸಭ್ಯ, ಹೂಂ- ಉಹುಂ ನಡುವಣ ಗೆರೆಗಳನ್ನು ಉಲ್ಲಂಘಿಸಬಾರದು. ತೋಳ್ಬಲ ಮತ್ತು ಅಧಿಕಾರವು ಅಸಹಾಯಕತೆಯ ಬೇಟೆಯಾಡುವುದು ಅರಣ್ಯ ನ್ಯಾಯವೇ ವಿನಾ ನಾಗರಿಕ ಸಮಾಜದ ಚಹರೆಯಲ್ಲ.

ಶ್ರಮಶಕ್ತಿ ವಿಭಜನೆ ಕುರಿತ ಸ್ತ್ರೀವಾದಿ ನೋಟದ ಪ್ರಕಾರ ಪಶುಗಳನ್ನು ಪಳಗಿಸಿದ ಪುರುಷ ಅವುಗಳನ್ನು ನೊಗಕ್ಕೆ ಹಚ್ಚಿ ದುಡಿಸಿದ. ಪಳಗಿಸಿದ ಪಶು ಸತ್ತಾಗ ಪುನಃ ನೊಗ-ನೇಗಿಲಿಗೆ ಹೆಗಲು ಕೊಟ್ಟವಳು ಆಕೆಯೇ. ಹಿಂದೆ ನಿಂತು ಆಕೆಯನ್ನು ನಡೆಸಿದ ಅಧಿಕಾರ ಆತನದೇ. ಎತ್ತುಗಳನ್ನು ನಡೆಸಿಕೊಂಡಷ್ಟು ಉತ್ತಮವಾಗಿ ಹೆಣ್ಣನ್ನು ನಡೆಸಿಕೊಳ್ಳುವುದಿಲ್ಲ ಎಂಬ ಮಾತು ಇಂದಿಗೂ ಸತ್ಯ. ಆಕೆ ಕಂತೆ ಒಗೆದರೆ ಮತ್ತೊಬ್ಬ ತೊತ್ತು ಬೇಡಿಕೊಂಡು ಬಂದಾಳು. ಆದರೆ ಎತ್ತುಗಳು ಸತ್ತರೆ ಮತ್ತೆ ತರಲು ಹಣ ಸುರಿಯಬೇಕಲ್ಲ!

ಪುರುಷನಿಗೆ ಸಮನಾಗಿ ಮೇಲೇರದಂತೆ ಅಡ್ಡ ಬರುವ ಅದೃಶ್ಯ ತಡೆಗೋಡೆಗೆ ಸ್ತ್ರೀವಾದಿ ಚಳವಳಿಯು ಇಂಗ್ಲಿಷಿನಲ್ಲಿ ‘ಗ್ಲ್ಯಾಸ್ ಸೀಲಿಂಗ್’ (ಗಾಜಿನ ಚಾವಣಿ) ಎಂಬ ಹೆಸರಿನ ರೂಪಕ ಕಟ್ಟಿದೆ. ಕಣ್ಣಿಗೆ ಕಾಣದ ಈ ತಡೆಗೋಡೆಗಳು ಅನುಭವಕ್ಕಷ್ಟೇ ಗೋಚರ ಆಗುವಂತಹವು. ಗಾಜಿನ ಚಾವಣಿಯ ಆಚೆ ಎತ್ತರೆತ್ತರದ ಅನಂತ ನೀಲಾಕಾಶವೇನೋ ಕಾಣುತ್ತದೆ. ಆದರೆ ಹಾರಲು ಹೋದರೆ ಅಗೋಚರ ಚಾವಣಿಗೆ ತಲೆ ಗಟ್ಟಿಸಿಕೊಂಡು ನೆಲಕ್ಕೆ ಬೀಳುವ ಯಾತನೆ ಆಕೆಯದು. ಮಹಿಳೆಯನ್ನು ಅರ್ಧ ಆಕಾಶ ಎಂದು ಕರೆದಿದ್ದ ಚೀನಿ ಕ್ರಾಂತಿಯ ಹರಿಕಾರ ಮಾವೊ ತ್ಸೆ ತುಂಗ್. ವಿಜ್ಞಾನ, ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆ ವಿಶಿಷ್ಟವಾದದ್ದನ್ನು ಸಾಧಿಸಿದಾಗ ಗಾಜಿನ ಚಾವಣಿ ಒಡೆದಾಕೆ ಎಂದು ಆಗಾಗ ಆಕೆಯನ್ನು ಬಣ್ಣಿಸುವುದು ರೂಢಿ. ಆದರೆ ಆಕೆ ಒಡೆಯಬೇಕಾದ ಪುರುಷಾಧಿಪತ್ಯದ ಗಡಸುಗಟ್ಟಿ ಗಾಜಿನ ಚಾವಣಿಗಳು ಇನ್ನೂ ನೂರಾರಿವೆ. ಸರಿಸಮನಾದ ಅವಕಾಶ ದೊರೆತಿದ್ದರೆ ಎಂದೋ ಪುಡಿಯಾಗಬೇಕಿದ್ದ ಚಾವಣಿಗಳಿವು.

ಧಾರ್ಮಿಕ- ಆಧ್ಯಾತ್ಮಿಕ ವಲಯ, ನ್ಯಾಯಾಂಗ, ಕಾರ್ಪೊರೇಟ್ ಜಗತ್ತು, ಸೇನೆ, ವೈದ್ಯಕೀಯ ಲೋಕ, ಶೈಕ್ಷಣಿಕ ವಲಯ, ಸಿನಿಮಾ- ನಾಟಕ, ಸಾಹಿತ್ಯ, ಸಂಗೀತ, ಲಲಿತಕಲೆಗಳು, ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರ, ರಾಜಕಾರಣ, ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು, ಔದ್ಯಮಿಕ ವಲಯ, ಬ್ಯಾಂಕಿಂಗ್, ಸಮೂಹ ಮಾಧ್ಯಮಗಳು, ಸ್ವಯಂಸೇವಾ ಸಂಸ್ಥೆಗಳು, ಕ್ರೀಡಾ ಲೋಕ... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೆಣ್ಣುಮಕ್ಕಳೂ ಅರ್ಧ ಆಕಾಶದ ಪಾಲು ಬಯಸಿ ಅಡಿಯಿಟ್ಟಿರುವ ಯಾವ ಕ್ಷೇತ್ರವೂ ಈ ಪಿಡುಗಿನಿಂದ ಮುಕ್ತವಲ್ಲ. ಪಿಡುಗಿನ ಪ್ರಮಾಣದಲ್ಲಿ ವ್ಯತ್ಯಾಸ ಆದೀತು. ಆದರೆ ಅದರ ಇರವು ಗಾಳಿ ಬೆಳಕಿನಷ್ಟೇ ವಾಸ್ತವ.

ಅಸಂಘಟಿತ ಮತ್ತು ಅರೆಸಂಘಟಿತ ಕಾರ್ಮಿಕ ಕ್ಷೇತ್ರಗಳು ಹಾಗೂ ಪಾಳೆಗಾರಶಾಹಿ ಕೃಷಿ ಜಗತ್ತಿನಲ್ಲಿ ಆಕೆಯ ಸ್ಥಿತಿ ಅತಿ ಅಧ್ವಾನದ್ದು. ನೂರಕ್ಕೆ 99ರಷ್ಟು ಲೈಂಗಿಕ ಶೋಷಿತ ಮಹಿಳೆಯರನ್ನು ಅವರ ಸಾಮಾಜಿಕ-ಆರ್ಥಿಕ- ಶೈಕ್ಷಣಿಕ ಸ್ಥಿತಿಗತಿಗಳು #Me Too ಆನ್‌ಲೈನ್ ವೇದಿಕೆಯ ಹತ್ತಿರಕ್ಕೂ ಬರಲಾರದಂತೆ ನಿರ್ಬಂಧಿಸಿವೆ. ಸಣ್ಣಪುಟ್ಟ ಊರು, ಪೇಟೆ, ಪಟ್ಟಣಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪತ್ರಕರ್ತರು ಭಯವಿಲ್ಲದೆ ದನಿಯೆತ್ತುವ ದಿನಗಳು ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ. ಸಾಮಾಜಿಕ ಜಾಲತಾಣದ ಆನ್‌ಲೈನ್ ಆಂದೋಲನದಲ್ಲಿ ಪ್ರಕಟ ಆಗಿರುವುದು ದೈತ್ಯ ನೀರ್ಗಲ್ಲಿನ ಅಂಗುಲಗಳಷ್ಟು ಅಗಲದ ತುತ್ತ ತುದಿ ಮಾತ್ರ. ಹಳ್ಳಿಗಾಡು, ಅರೆನಗರ ಪ್ರದೇಶಗಳ ಕೋಟ್ಯಂತರ ಮಹಿಳೆಯರು ‘ನಾನು ಕೂಡ ಇಂತಹ ಹಲ್ಲೆಯ ಬಲಿಪಶು’ ಎಂದು ದನಿಯೆತ್ತುವ ಅವಕಾಶ ಒದಗಿದರೆ ಪುರುಷಲೋಕ ನಿಂತ ನೆಲ ಸೀಳಿ ಹೋದೀತು!

ಪಶ್ಚಿಮ ದೇಶಗಳ ಸ್ತ್ರೀ ಜಗತ್ತು ಗಂಡಾಳಿಕೆ, ವರ್ಣಭೇದ ಹಾಗೂ ವರ್ಗಭೇದಗಳ ಹಿನ್ನೆಲೆಯಲ್ಲಿ ಸ್ತ್ರೀದ್ವೇಷವನ್ನು (Misogyny) ಎದುರಿಸಿದರೆ, ಭಾರತದ ನಾರೀಲೋಕ ಏಣಿಶ್ರೇಣಿ ವ್ಯವಸ್ಥೆ- ಜಾತಿಪದ್ಧತಿ- ಲಿಖಿತ- ಅಲಿಖಿತ ಮನುಸಂಹಿತೆಯ ಸಂಕೋಲೆಗಳಲ್ಲಿ ಸೆರೆಯಾಗಿದೆ. ಗಂಡು– ಹೆಣ್ಣಿನ ನಡುವೆ ಅತ್ಯಂತ ಅಸಮಾನ ಅಧಿಕಾರ ಹಂಚಿಕೆಯ ಅತಿ ಆಳದ ವ್ಯಾಧಿಯಿದು. ಬೇರನ್ನು ಹಿಡಿದು ಜಗ್ಗಿಸಹೊರಟರೆ ಧರ್ಮ-ಸಂಸ್ಕೃತಿ- ಪರಂಪರೆಯ ಬಾನೆತ್ತರದ ಸನಾತನ ಗುರಾಣಿಗಳನ್ನು ಅಡ್ಡ ಹಿಡಿದು ಯಥಾಸ್ಥಿತಿಯನ್ನು ಕಾಯುತ್ತವೆ ಪಟ್ಟಭದ್ರ ಹಿತಾಸಕ್ತಿಗಳು. ಶಬರಿಮಲೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇರಳದಲ್ಲಿ ಜರುಗಿರುವ ವಿದ್ಯಮಾನ ಉರಿದು ಸುಡುತ್ತಿರುವ ಉದಾಹರಣೆ. ಈ ಎಲ್ಲ ವಿದ್ಯಮಾನಗಳ ಹಿಂದೆ ಸಾಮಾಜಿಕ-ರಾಜಕೀಯ-ಆರ್ಥಿಕ ನೆಲೆಗಳಲ್ಲಿ ಹೆಣ್ಣಿನ ಸ್ಥಾನಮಾನವನ್ನು ತನ್ನಿಚ್ಛೆಗೆ ಅನುಸಾರ ಬಗ್ಗಿಸಿ ನಿಯಂತ್ರಿಸುವ ಪುರುಷಪ್ರಧಾನ ಹುನ್ನಾರವೇ ಹೆಡೆಯಾಡಿದೆ.

ಗೆದ್ದವರು ಇಲ್ಲವೇ ಬಲಿಷ್ಠರು ಬರೆದ ಇತಿಹಾಸವು ಕೆಳಗೆ ಬಿದ್ದವರ ಪರವಾಗಿರುವುದು ಸಾಧ್ಯವೇ? ಈ ಇತಿಹಾಸದಲ್ಲಿ ಸೋತವರು ಅನುಭವಿಸಿದ ಅಸಮಾನತೆ, ನೋವು, ಅವಮಾನ, ಅನಿಸಿಕೆ, ಸಂಸ್ಕೃತಿ ಪರಂಪರೆಗೆ ಜಾಗವಾದರೂ ಹೇಗೆ ದೊರೆತೀತು? ಸ್ತ್ರೀಯನ್ನು ಅದುಮಿಟ್ಟ ಪುರುಷಲೋಕದ ಪಾಲಿಗೆ ಪುರಾಣ, ಪುಸ್ತಕ, ವಿಗ್ರಹಗಳಲ್ಲಿ ಮಾತ್ರ ಆಕೆ ದೇವತೆ. ನಿಜ ಬದುಕಿನಲ್ಲಿ ಆಕೆ ಕೇವಲ ವಿಕೃತ ಮನರಂಜನೆಯ ಸುಖವೀಯುವ ಸಾಧನ, ಭೋಗದ ಸರಕು, ಊಳಿಗದ ತೊತ್ತು. ಪುರುಷ ಪ್ರತಿಷ್ಠೆಯ ಕದನ ಮೈದಾನ. ನೂರಾರು ವರ್ಷಗಳಿಂದ ಪುರುಷವಾದಿ ಧರ್ಮ- ದೇವರು- ಕಟ್ಟುಕಟ್ಟಳೆಗಳ ಅಚ್ಚಿನಲ್ಲಿ ಆಕೆಯ ಮಿದುಳನ್ನು ತೊಳೆದು ಎರಕ ಹೊಯ್ಯಲಾಗಿದೆ. ಇಲ್ಲವಾಗಿದ್ದರೆ ನಿಜ ನೆರಳೆಂದು ಭ್ರಮಿಸಿ ಸರ್ಪದ ಹೆಡೆಯ ನೆರಳಿಗೆ ಸರಿದ ಮಂಡೂಕದ ಸ್ಥಿತಿ ಆಕೆಗೆ ಬರಬೇಕಿತ್ತೇನು? ನ್ಯಾಯಾಲಯದ ಶಬರಿಮಲೆ ತೀರ್ಪಿನ ವಿರುದ್ಧ ಕೇರಳದಲ್ಲಿ ಮಹಿಳೆಯರು ಬೀದಿಗಿಳಿದಿರುವ ವ್ಯಂಗ್ಯ ವಿಪರ್ಯಾಸ ಈ ಮಾತಿಗೂ ತಾಜಾ ಉದಾಹರಣೆ. ಇದೇ ತೀರ್ಪು ನೀಡಿದ ನ್ಯಾಯಪೀಠದ ಏಕೈಕ ಮಹಿಳಾ ನ್ಯಾಯಮೂರ್ತಿ ಹೆಣ್ಣುಮಕ್ಕಳ ಪ್ರವೇಶ ನಿಷೇಧವನ್ನು ಸಮರ್ಥಿಸಿ ನೀಡಿದ ಭಿನ್ನಮತದ ತೀರ್ಪು ಹೊರಟದ್ದೂ ಇದೇ ಪುರುಷವಾದಿ ನೆಲೆಯಿಂದ.

ದೇಶದ ಅತಿಹೆಚ್ಚು ಜನಸಂಖ್ಯೆಯನ್ನು ತಲುಪುವ ಹಿಂದಿ ಪತ್ರಿಕೆಗಳಲ್ಲಿ ‘#Me Too’ ಸುದ್ದಿ ಮೂಲೆಗುಂಪಾಯಿತು. ನಟ ಅಲೋಕನಾಥ್ ಮುಂತಾದವರ ಕುರಿತ ಸುದ್ದಿ ಅಷ್ಟಿಷ್ಟು ಬಂದರೂ ಬಿಜೆಪಿ ಕೇಂದ್ರ ಮಂತ್ರಿ ಎಂ.ಜೆ. ಅಕ್ಬರ್ ತಮ್ಮ ಪತ್ರಿಕೋದ್ಯಮದ ಪೂರ್ವಾಶ್ರಮದಲ್ಲಿ ನಡೆಸಿದರೆನ್ನಲಾದ ಲೈಂಗಿಕ ಹಲ್ಲೆಗಳ ಕುರಿತ ಸುದ್ದಿಯನ್ನು ಬಹುತೇಕ ಪತ್ರಿಕೆಗಳು ನಿರ್ಲಕ್ಷಿಸಿದವು. ‘ಫೋರ್ಸ್ ನ್ಯೂಸ್’ ನಿಯತಕಾಲಿಕದ ಕಾರ್ಯನಿರ್ವಾಹಕ ಸಂಪಾದಕಿ ಗಝಾಲಾ ವಹಾಬ್ ಅವರು ‘ದಿ ವೈರ್’ ಅಂತರ್ಜಾಲ ಸುದ್ದಿ ತಾಣದಲ್ಲಿ ಬರೆದಿರುವ ಅನುಭವದ ಕಥಾನಕ ಭಯಾನಕ. ಮೋದಿ ನೇತೃತ್ವದ ಸರ್ಕಾರದ ಮಂತ್ರಿ ಅಕ್ಬರ್ ಕೂದಲೂ ಕೊಂಕಿಲ್ಲ. ಸುಷ್ಮಾ ಸ್ವರಾಜ್ ಅವರಂತಹ ಹಿರಿಯ ಮಹಿಳಾ ಮಂತ್ರಿ ಕೂಡ ತುಟಿ ಹೊಲಿದುಕೊಂಡಿದ್ದಾರೆ. ‘ಬೇಟಿ ಬಚಾವೊ ಬೇಟಿ ಪಢಾವೊ’ ಎಂಬುದು ಕೇವಲ ಪೊಳ್ಳು ಘೋಷಣೆಯೇ?

ಹೌದು, #Me Too ಆಂದೋಲನವು ಮುಯ್ಯಿ ತೀರಿಸಿಕೊಳ್ಳುವ ಹುಸಿ ಆರೋಪಗಳಿಗೂ ದಾರಿ ಮಾಡಿದೆ ಎಂಬ ಆಪಾದನೆಗಳಿವೆ. ಆದರೆ ಅಂತಹ ವಿರಳ ಆಪಾದನೆಗಳಿಗಾಗಿ ಆಂದೋಲನವನ್ನೇ ಗುಮಾನಿಯ ಗಲ್ಲಿಗೇರಿಸುವುದು ಸೂಕ್ತವಲ್ಲ. ನೆಗಡಿಯ ನೆಪ ಹೇಳಿ ಮೂಗನ್ನು ಕೊಯ್ದುಕೊಂಡವರುಂಟೇ?

ಆಪಾದನೆ ಮಾಡುವವರು ಕಾನೂನಿನ ದಾರಿ ಹಿಡಿದು ಅವುಗಳನ್ನು ತಾರ್ಕಿಕ ಅಂತ್ಯ ಮುಟ್ಟಿಸಬೇಕು. ಕೇವಲ ಬಹಿರಂಗವಾಗಿ ಹೆಸರಿಸಿ ಅವಮಾನಿಸಿದರೆ ಸಾಲದು ಎನ್ನುವ ವಾದವಿದೆ. ಅನ್ಯಾಯದ ವಾದವಿದು. ಪೊಲೀಸ್ ಅಥವಾ ನ್ಯಾಯಾಲಯಗಳಿಂದ ನ್ಯಾಯ ಸಿಕ್ಕೀತೆಂಬ ವಿಶ್ವಾಸವನ್ನು ನಮ್ಮ ವ್ಯವಸ್ಥೆಯು ಲೈಂಗಿಕ ಹಲ್ಲೆಗೀಡಾದ ಹೆಣ್ಣುಮಕ್ಕಳಲ್ಲಿ ಇನ್ನೂ ಮೂಡಿಸಿಲ್ಲ. ಪೊಲೀಸ್ ಠಾಣೆ ಮತ್ತು ನ್ಯಾಯಾಲಯ ಆಕೆಯ ಪಾಲಿನ ದುರ್ಗಮ ದುರ್ಗಗಳು. ದೂರು ನೀಡಿಕೆ-ಪಾಟೀಸವಾಲು- ಪುರಾವೆಗಳ ಜಟಿಲ ಬಲೆ ಅದು. ವ್ಯವಸ್ಥೆಯು ಬೇಟೆಗಾರನ ಜೊತೆಗೆ ನಿಂತಿದೆಯೇ ವಿನಾ ಬಲಿಪಶುವಿನ ಜೊತೆಗಲ್ಲ ಎಂಬ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಈಗಲೂ ಆಗಿಲ್ಲ. ಲೈಂಗಿಕ ಹಲ್ಲೆಯ ಆರೋಪ ಹೊತ್ತ ತೆಹಲ್ಕಾ ಸಂಪಾದಕ ತರುಣ್ ತೇಜಪಾಲ್ ಅವರನ್ನು 2013ರ ಅಂತ್ಯದಲ್ಲಿ ಬಂಧಿಸಿದರೂ ಆರೋಪಪಟ್ಟಿ ಸಂದಿದ್ದು 2017ರಲ್ಲಿ. ಈ ಪ್ರಕರಣದ ವಿಚಾರಣೆ ಇನ್ನೂ ತೆವಳುತ್ತ ಸಾಗಿದೆ. ಠಾಣೆಯ ಮೆಟ್ಟಿಲು ತುಳಿದರೆ ಅಸೂಕ್ಷ್ಮತೆ ಮತ್ತು ಅವಮಾನದ ಬೆಂಕಿಯಲ್ಲಿ ಮತ್ತೊಮ್ಮೆ ಆಕೆ ಸುಟ್ಟುಕೊಳ್ಳುವ ಸ್ಥಿತಿ ಇಲ್ಲವೆಂದು ಹೇಳುವ ಧೈರ್ಯ ಯಾರಿಗಿದೆ? ತಾನು ಅನುಭವಿಸಿದ ಲೈಂಗಿಕ ಅತ್ಯಾಚಾರ ಅಥವಾ ಹಲ್ಲೆಗಿಂತಲೂ ಹೆಚ್ಚು ಯಾತನಾಮಯ ಈ ಹಂತ. ಆಕೆಯನ್ನು ಸೂಕ್ಷ್ಮವಾಗಿ, ಮಾನವೀಯವಾಗಿ ನಡೆಸಿಕೊಳ್ಳುವ ಕಾನೂನು ವ್ಯವಸ್ಥೆಯನ್ನು ರೂಪಿಸದೆ, ತಾರ್ಕಿಕ ಅಂತ್ಯ ತಲುಪಿಸುವ ಭಾರವನ್ನು ಆಕೆಯ ಮೇಲೆ ಹೇರುವುದು ನ್ಯಾಯವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.