ದೇಶದ ಎರಡನೆಯ ಅತಿ ಹೆಚ್ಚು ಸರ್ವಶಕ್ತ ವ್ಯಕ್ತಿ ಎಂದು ಬಣ್ಣಿಸಲಾಗುವ ಬಿಜೆಪಿ ಅಧ್ಯಕ್ಷ ಅಮಿತ್ ಅನಿಲಚಂದ್ರ ಶಾ ಅವರ ಹೆಗಲ ಭಾರ ಮುಂಬರುವ ದಿನಗಳಲ್ಲಿ ಹೆಚ್ಚಲಿದೆ. ದೆಹಲಿಯ ಅಕ್ಬರ್ ರಸ್ತೆಯ ಹನ್ನೊಂದನೆಯ ನಂಬರಿನ ಅವರ ಬಂಗಲೆಯ ಇರುಳ ದೀಪ ದೀರ್ಘಕಾಲ ಉರಿಯಲಿದೆ. ಹಜಾರದ ಗೋಡೆಯನ್ನು ಅಲಂಕರಿಸಿರುವ ‘ಆರ್ಯ ಚಾಣಕ್ಯ’ನ ಚಿತ್ರಪಟದಿಂದ ಹೆಚ್ಚು ಪ್ರೇರಣೆಯ ಅಗತ್ಯ ಅವರಿಗೆ ಬೀಳಲಿದೆ.
ಉತ್ತರಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ 73ನ್ನು ಗೆದ್ದುಕೊಟ್ಟ ಈ ತಂತ್ರೋಪಾಯ ನಿಪುಣ, ಆ ನಂತರ ದೆಹಲಿ, ಬಿಹಾರ, ಪಂಜಾಬಿನಲ್ಲಿ ಸೋಲು ಕಾಣಬೇಕಾಯಿತು. ಆದರೆ ಪುನಃ ಹಲವು ರಾಜ್ಯಗಳಲ್ಲಿ ಬಿಜೆಪಿಯ ಗೆಲುವುಗಳನ್ನು ಕಟೆದು ಕೆತ್ತಿರುವುದು ಹೌದು.
ಭೂ ಮಾರ್ಗವಾಗಿ ಏಳು ಲಕ್ಷ ಕಿ.ಮೀ. ಪ್ರವಾಸ ಮಾಡಿದ್ದಾರಂತೆ. ಪ್ರತಿಯೊಂದು ಲೋಕಸಭಾ ಕ್ಷೇತ್ರವೂ ಖುದ್ದು ಅವರ ಕಣ್ಗಾವಲಿನಲ್ಲಿ ಇದೆಯಂತೆ. ‘ಹೊದ್ದು ಮಲಗಿರುವ ವಿರೋಧ ಪಕ್ಷಗಳಿಂದ ಹಿಡಿದು, ಮೋದಿ ನೇತೃತ್ವದ ಸರ್ಕಾರದ ಘನವಾದ ಅಭಿವೃದ್ಧಿ ಮತ್ತು ಸುಧಾರಣೆ ಕೆಲಸ ಕಾರ್ಯಗಳವರೆಗೆ ಎಲ್ಲವೂ ಸುಸೂತ್ರವಾಗಿವೆ, ಬಿಜೆಪಿಗೆ ಅನುಕೂಲವಾಗಿವೆ. ದೂರ ದೂರದ ತನಕ ಬಿಜೆಪಿಗೆ ಯಾವುದೇ ಸವಾಲು ಕಾಣಬರುತ್ತಿಲ್ಲ’ ಎಂಬುದು ಅವರ ಬಹಿರಂಗ ಹೇಳಿಕೆ. ಆದರೆ ನೆಲಮಟ್ಟದ ವಾಸ್ತವವೇ ಬೇರೆ ಎಂದು ಅವರ ಅಂತರಂಗ ಬಲ್ಲದು.
ಎಂಟು ತಿಂಗಳಾಚೆಗೆ ಲೋಕಸಭಾ ಚುನಾವಣೆಗಳು ಬಾಗಿಲು ಬಡಿದಿವೆ. ಕಳೆದ 18 ವರ್ಷಗಳಿಂದ ‘ಇಂಡಿಯಾ ಟುಡೇ’ ನಿಯತಕಾಲಿಕ ನಡೆಸಿಕೊಂಡು ಬಂದಿರುವ ‘ಮೂಡ್ ಅಫ್ ದಿ ನೇಶನ್’ ಸಮೀಕ್ಷೆ ಮತ್ತು ಎರಡು ತಿಂಗಳ ಹಿಂದೆ ಲೋಕನೀತಿ- ಸಿಎಸ್‌ಡಿಎಸ್- ಎಬಿಪಿ ಸಮೀಕ್ಷೆಗಳ ವರದಿ ಬಿಜೆಪಿ ಪಾಲಿಗೆ ಭಯಂಕರ ಕೆಟ್ಟ ಸುದ್ದಿಯೇನೂ ಅಲ್ಲ. ಹಾಗೆಂದು ಒಳ್ಳೆಯ ಸುದ್ದಿಯೂ ಅಲ್ಲ.
ವಿರೋಧ ಪಕ್ಷಗಳು ಮುಕ್ಕಾಲು ಪಾಲು ಒಗ್ಗಟ್ಟಾಗಿ ನಿಂತರೂ ಬಿಜೆಪಿಗೆ ಬಹುಮತ ದುಸ್ತರ. ಕಳೆದ ಸಲದಂತೆ 282 ಸೀಟುಗಳ (ಸರಳ ಬಹುಮತ 272) ಗೆಲುವು 2019ರಲ್ಲಿ ಅಸಾಧ್ಯ. ಬಿಜೆಪಿ ಅಧಿಕಾರದ ಗದ್ದುಗೆಗೆ ಹತ್ತಿರವೇ ನಿಲ್ಲಲಿದೆ. ಆದರೆ ಗದ್ದುಗೆಯತ್ತ ನಡೆದು ಕುಳಿತುಕೊಳ್ಳಲು ಊರುಗೋಲಿನ ನೆರವು ಬೇಕೇಬೇಕು. ಅರ್ಥಾತ್ ಸ್ವಂತ ಬಹುಮತ ಗಳಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಮಿತ್ರಪಕ್ಷಗಳ ಮುಂದೆ ಕೈಜೋಡಿಸಿ ನಡು ಬಾಗಿಸದೆ ವಿಧಿಯಿಲ್ಲ. ಬಿಜೆಪಿ ಜನಪ್ರಿಯತೆ ಕುಸಿಯುವ ಜೊತೆಗೆ ಮೋದಿ ಮೊದಲಿನಷ್ಟು ಹೊಳೆಯುತ್ತಿಲ್ಲ. ಆದರೆ ಏಕೈಕ ಬಹುದೊಡ್ಡ ಪಕ್ಷವಾಗಿ ಹೊಮ್ಮಲು ಮೋಸವಿಲ್ಲ. ತ್ರಿಶಂಕು ಲೋಕಸಭೆ ಏರ್ಪಡಲಿದೆ ಎಂಬುದು ಮತದಾರರ ‘ಮನ್ ಕೀ ಬಾತ್’ ಎಂದು ಇತ್ತೀಚಿನ ‘ಇಂಡಿಯಾ ಟುಡೇ ಮೂಡ್ ಅಫ್ ದಿ ನೇಶನ್’ ಜನಮತ ಸಮೀಕ್ಷೆ ಹೇಳಿದೆ.
19 ರಾಜ್ಯಗಳ 97 ಲೋಕಸಭಾ ಕ್ಷೇತ್ರಗಳು ಮತ್ತು 194 ವಿಧಾನಸಭಾ ಕ್ಷೇತ್ರಗಳಲ್ಲಿ ಜುಲೈ 18ರಿಂದ ಜುಲೈ 29ರ ತನಕ ನಡೆಸಿದ 12,100 ಸಂದರ್ಶನಗಳ ಫಲಿತಾಂಶಗಳನ್ನು ಈ ಸಮೀಕ್ಷೆ ಸಾರ್ವಜನಿಕಗೊಳಿಸಿದೆ.
ಇಂದು ಚುನಾವಣೆ ನಡೆದರೆ ಒಟ್ಟು 543 ಲೋಕಸಭಾ ಸೀಟುಗಳಲ್ಲಿ ಬಿಜೆಪಿ 245 ಸೀಟುಗಳನ್ನು ಮಾತ್ರ ಗೆಲ್ಲಲಿದೆ. ಎನ್.ಡಿ.ಎ.ಗೆ 281 ಸೀಟುಗಳು ದಕ್ಕಲಿವೆ. ಯುಪಿಎ 122 ಗೆಲ್ಲಲಿದೆ. ಈ ಪೈಕಿ ಕಾಂಗ್ರೆಸ್ ಸೀಟುಗಳು 83. ಇತರೆ ಪಕ್ಷಗಳು ಗೆಲ್ಲುವ ಸೀಟುಗಳ ಸಂಖ್ಯೆ 140 ಎಂದು ಸಮೀಕ್ಷೆ ಹೇಳಿದೆ.
ಎರಡು ತಿಂಗಳ ಹಿಂದೆ ಲೋಕನೀತಿ- ಸಿಎಸ್‌ಡಿಎಸ್- ಎಬಿಪಿ ಜನಮತ ಸಮೀಕ್ಷೆಯಲ್ಲೂ ಬಿಜೆಪಿಗೆ ಬಹುಮತ ದೊರೆತಿರಲಿಲ್ಲ. ಎನ್.ಡಿ.ಎಗೆ 274, ಯುಪಿಎಗೆ 164, ಇತರರಿಗೆ 105 ಸೀಟಿನ ಭವಿಷ್ಯ ಹೇಳಲಾಗಿತ್ತು. ಆಗಲೂ ಈಗಲೂ ಯುಪಿಎಗಿಂತ ಎನ್.ಡಿ.ಎ. ಬಲಿಷ್ಠ ಎನ್ನಲಾಗಿದೆ.
ಸಮಾಜವಾದಿ ಪಾರ್ಟಿ, ಬಿ.ಎಸ್.ಪಿ. ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಯುಪಿಎ ಸೇರಿ ಒಟ್ಟಿಗೆ ಚುನಾವಣೆ ಸೆಣಸಿದರೆ ಎನ್.ಡಿ.ಎ. ಮತ್ತು ಯುಪಿಎ ಅಂತರ ಬಹುತೇಕ ಅಳಿಸಿ ಹೋಗಲಿದೆ. ಎನ್.ಡಿ.ಎ.ಗೆ 228 (ಬಿಜೆಪಿ 194) ಮತ್ತು ಯುಪಿಎಗೆ 224 (ಕಾಂಗ್ರೆಸ್-96), ಇತರರಿಗೆ 91. ನಾಲ್ಕೇ ಸೀಟುಗಳ ಅಂತರ. ಆದರೆ ಇತರರಿಗೆ ದೊರೆಯುವ 91 ಸೀಟುಗಳು ಮಹತ್ವದ ಪಾತ್ರ ವಹಿಸಲಿವೆ. ಅಧಿಕಾರದ ಬೀಗದ ಕೈ ಹಿಡಿಯಲಿವೆ. 80 ಸೀಟುಗಳ ಭಾರಿ ನಷ್ಟವನ್ನು ಬಿಜೆಪಿ ಎದುರಿಸಲಿದೆ.
ಒಂದೆಡೆ ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್ ಯುಪಿಎ ಸೇರಿ, ಮತ್ತೊಂದೆಡೆ ಅಣ್ಣಾ ಡಿ.ಎಂ.ಕೆ. ಹಾಗೂ ವೈ.ಎಸ್.ಆರ್. ಕಾಂಗ್ರೆಸ್–ಎನ್.ಡಿ.ಎ. ಸೇರಿದರೆ, ಎನ್.ಡಿ.ಎ.ಗೆ 255 (ಬಿಜೆಪಿ 196), ಯುಪಿಎಗೆ 242 (ಕಾಂಗ್ರೆಸ್ 97) ಹಾಗೂ ಇತರರಿಗೆ 46 ಸೀಟುಗಳು ಲಭಿಸಲಿವೆ. ಆಗಲೂ ತ್ರಿಶಂಕು ಲೋಕಸಭೆ ಏರ್ಪಡಲಿದೆ ಮತ್ತು ಅಧಿಕಾರದಬೀಗದ ಕೈ ಇತರರ ಬಳಿಯೇ ಉಳಿಯಲಿದೆ.
ತ್ರಿಶಂಕು ಲೋಕಸಭೆಯ ಪರಿಸ್ಥಿತಿಯಲ್ಲಿ ಬಿಜು ಜನತಾದಳ, ತೆಲಂಗಾಣ ರಾಷ್ಟ್ರ ಸಮಿತಿ, ಭಾರತ ರಾಷ್ಟ್ರೀಯ ಲೋಕದಳ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂ.ಎನ್.ಎಸ್) ಎನ್.ಡಿ.ಎ. ಸೇರಬಹುದು. ಬಿಜೆಡಿ, ಟಿಆರ್‌ಎಸ್, ಭಾರತ ರಾಷ್ಟ್ರೀಯ ಲೋಕದಳವು ಎನ್.ಡಿ.ಎ. ಸರ್ಕಾರವನ್ನು ಬೆಂಬಲಿಸುವ ದಟ್ಟ ಸಾಧ್ಯತೆ ಕಾಣಲಾಗಿದೆ. ಎಡಪಕ್ಷಗಳು ಮತ್ತು ಆಮ್ ಆದ್ಮಿ ಪಾರ್ಟಿ ಯುಪಿಎ ಜೊತೆ ಹೋಗಬಹುದು.
ಮೇ ತಿಂಗಳ ಲೋಕನೀತಿ-ಸಿಎಸ್‌ಡಿಎಸ್- ಎಬಿಪಿ ಸಮೀಕ್ಷೆಯು ಎನ್.ಡಿ.ಎ. ವಿರುದ್ಧ ಆಡಳಿತ ವಿರೋಧಿ ಭಾವನೆ ಶುರುವಾಗಿರುವುದನ್ನು ಗುರುತಿಸಿತ್ತು. ‘ಇಂಡಿಯಾ ಟುಡೇ’ ಸಮೀಕ್ಷೆ ಈ ಮಾತನ್ನು ಪುಷ್ಟೀಕರಿಸಿದೆ. ವಿರೋಧಿ ಭಾವನೆಯನ್ನು ತಡೆದು ನಿಲ್ಲಿಸುವ ಇಲ್ಲವೇ ಸಂಪೂರ್ಣವಾಗಿ ತೊಡೆದುಹಾಕುವ ಪರಿಣಾಮಕಾರಿ ಹತಾರನ್ನು ಈಗಲೂ ಹುಡುಕಿ ಬಳಸುವ ಮೋದಿ ನೇತೃತ್ವದ ಸರ್ಕಾರದ ಸಾಮರ್ಥ್ಯವನ್ನು ಶಂಕಿಸಲಾಗದು. ಚುನಾವಣೆ ಇನ್ನೂ ಎಂಟೂವರೆ ತಿಂಗಳು ದೂರದಲ್ಲಿದೆ. ಹಾಗೆ ತಡೆದು ನಿಲ್ಲಿಸದೆ ಹೋದರೆ ಸರ್ಕಾರ ವಿರೋಧಿ ಭಾವನೆ ಹೆಚ್ಚುತ್ತಲೇ ನಡೆಯುತ್ತದೆ. ಚುನಾವಣೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಲಿತು ನಿಂತರೆ ಆಶ್ಚರ್ಯವಿಲ್ಲ.
ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ಹೆಚ್ಚಿದೆ ಎನ್ನುವುದಕ್ಕೆ ಪುರಾವೆಗಳಿವೆಯೇ? ಅಂಕಿ ಅಂಶಗಳ ಮೂಲಕ ಹೇಳಿ ಎನ್ನುವವರಿದ್ದಾರೆ. ಆದರೆ ಸರ್ವೇಕ್ಷಣೆಗಳಲ್ಲಿ ದೇಶದ ಮುಂದಿನ ಅತಿ ಮುಖ್ಯ ಸಮಸ್ಯೆ ಯಾವುದೆಂದು ಜನರನ್ನು ಕೇಳಿದಾಗ ಶೇ 34ರಷ್ಟು ಜನ ನಿರುದ್ಯೋಗ ಎಂದಿದ್ದಾರೆ. ಆರು ತಿಂಗಳ ಕೆಳಗೆ ಶೇ 29 ಮಂದಿ ಹೀಗೆ ಹೇಳಿದ್ದರು. ಇದೀಗ ಐದರಷ್ಟು ಹೆಚ್ಚಿದೆ. ಸರ್ಕಾರ ಕ್ರಮ ಕೈಗೊಳ್ಳುತ್ತಿದೆಯೇ ನಿರುದ್ಯೋಗ ನಿವಾರಣೆಗೆ ಎಂಬ ಪ್ರಶ್ನೆಗೆ ಇಲ್ಲ ಎಂದಿರುವವರ ಪ್ರಮಾಣ ಶೇ 60.
ಫೆಬ್ರುವರಿ, ಮಾರ್ಚ್ ವೇಳೆಗೆ ಪರಿಸ್ಥಿತಿ ಬದಲಾಗಬಹುದು. ಹೊಸ ವಿದ್ಯಮಾನಗಳು ಜರುಗಿ ಮತದಾರರ ‘ಮನ್ ಕೀ ಬಾತ್’ ಪುನಃ ಘನವಾಗಿ ಮೋದಿ ಪರ ತಿರುಗುವ ಪವಾಡವೂ ನಡೆಯಬಹುದು.
ಜನಮತ ಸಮೀಕ್ಷೆಯ ಪ್ರಕಾರ ಪ್ರಧಾನಿ ಹುದ್ದೆಗೆ ಈಗಲೂ ನರೇಂದ್ರ ಮೋದಿಯವರೇ ಮೊದಲ ಆಯ್ಕೆ. ಬಿಜೆಪಿಯ ಜನಪ್ರಿಯತೆ ಮೋದಿ ಜನಪ್ರಿಯತೆಗಿಂತ ವೇಗವಾಗಿ ಕುಸಿಯತೊಡಗಿರುವುದು ಕಂಡುಬಂದಿದೆ. ಒಂದು ಕಾಲಕ್ಕೆ ಮೋದಿ ಯಾರೂ ಸೋಲಿಸಲಾಗದ ಅಜೇಯ, ಇನ್ನೂ ಹತ್ತು ವರ್ಷ ನಿರಾತಂಕವಾಗಿ ರಾಜ್ಯಭಾರ ಮಾಡುತ್ತಾರೆ ಎನ್ನಲಾಗುತ್ತಿದ್ದ ಮೋದಿ ಮತ್ತು ರಾಹುಲ್ ನಡುವಣ ಜನಪ್ರಿಯತೆಯ ಅಂತರ ಶೇ 65 ಇದ್ದದ್ದು ಈಗ ಶೇ 22ಕ್ಕೆ ಇಳಿದಿದೆ. ಆದರೂ ಮೋದಿ
ಶೇ 49ರಷ್ಟು ಜನಪ್ರಿಯ.
ದಾರಿ ಯಾವುದಾದರೇನು, ಬೆಟ್ಟ ಹತ್ತಿ ಶಿಖರ ಮುಟ್ಟುವುದು ಮುಖ್ಯ ಎಂಬ ನಂಬಿಕೆಯನ್ನು ಕಲೆಯಾಗಿ ಕರಗತ ಮಾಡಿಕೊಂಡಿರುವ ಜೋಡಿ ಮೋದಿ- ಶಾ ಅವರದು. ಈ ಬಾರಿ ಏರಬೇಕಾದ ಬೆಟ್ಟ ಇನ್ನಷ್ಟು ಕಡಿದು. ಹಸ್ತಗತ ಮಾಡಿಕೊಂಡಿರುವ ಹಳೆಯ ದಾರಿಗಳ ಜೊತೆಗೆ ಹೊಸ ಮಾರ್ಗಗಳನ್ನೂ ಹುಡುಕಬೇಕು. ಅಮಿತ್ ಶಾ ಕೆಲಸ ಕಳೆದ ಸಲಕ್ಕಿಂತ ಕಠಿಣ ಆಗಲಿದೆ. ಹೇಳಬೇಕೆಂದರೆ ಮೋದಿಯವರದು ಈಗಲೂ ಸಮ್ಮಿಶ್ರ ಸರ್ಕಾರವೇ. ಮಿತ್ರ ಪಕ್ಷಗಳೊಂದಿಗೆ ಬಿಜೆಪಿ ಅಧಿಕಾರ ಹಂಚಿಕೊಂಡಿರುವುದೂ ಹೌದು. ಆದರೆ ತನಗೇ ಸರಳ ಬಹುಮತ ಇರುವ ಕಾರಣ ಅವುಗಳ ಮರ್ಜಿ ಕಾಯುವ ಸ್ಥಿತಿ ಮೋದಿಯವರಿಗೆ ಇಲ್ಲ.
ಆದರೆ ಸಮೀಕ್ಷೆಗಳ ಪ್ರಕಾರ 2019ರಲ್ಲಿ ಬಿಜೆಪಿಗೆ ಹೊಸ ಪ್ರಾದೇಶಿಕ ಪಕ್ಷಗಳ ಊರುಗೋಲು ಬೇಕಿದೆ. 70-80 ಸೀಟು ಕಮ್ಮಿ ಬಿದ್ದರೂ ಬಿಜೆಪಿಯನ್ನು ದಡ ಮುಟ್ಟಿಸುವ ತಾಕತ್ತು- ಕರಾಮತ್ತು ‘ಸರ್ವಶಕ್ತ’ ಜೋಡಿಗೆ ಕರಗತ. ಅಣ್ಣಾ ಡಿ.ಎಂ,ಕೆ., ರಜನೀಕಾಂತ್, ದಿನಕರನ್ ಅವರ ಪಕ್ಷಗಳ ಬೆಂಬಲ ಬೇಕಾದೀತು. ಒಡಿಶಾದಲ್ಲಿ ಗೆಳೆತನ ಮುರಿದಿರುವ ಬಿಜು ಜನತಾದಳ, ತೆಲಂಗಾಣದ ಹೊಸ ಗೆಳೆಯ ಕೆ.ಚಂದ್ರಶೇಖರ ರಾವ್, ಆಂಧ್ರದ ಜಗನ್ಮೋಹನ್ ರೆಡ್ಡಿಯವರ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಹೊಸ ಗೆಳೆಯರಾಗಿ ಅಧಿಕಾರ ಹಂಚಿಕೊಳ್ಳಲು ಮುಂದೆ ಬರಬಹುದು.
ಸಮೀಕ್ಷೆಗಳು ನಿಜವಾದರೆ ಮೋದಿಯವರ ಪಾಲಿಗೆ ಮೊದಲ ಬಾರಿಗೆ ಭಿನ್ನ ಅನುಭವ ಕಾದಿದೆ. ಗುಜರಾತಿನಲ್ಲಿ ಬಹುಮತ ಮತ್ತು ಭಾರಿ ಬಹುಮತದ ಸರ್ಕಾರಗಳನ್ನೇ ನಡೆಸಿದ್ದವರು ಅವರು. ಒಂದರ ನಂತರ ಮತ್ತೊಂದರಂತೆ ತಾವೇ ರೂಪಿಸಿ ಗಳಿಸಿದ ಚುನಾವಣಾ ವಿಜಯಗಳ ಭುಜಕೀರ್ತಿಗಳನ್ನು ಧರಿಸಿ ಮೆರೆದವರು. ಸರ್ವತಂತ್ರ ಸ್ವತಂತ್ರ ಸಾರ್ವಭೌಮರಂತೆ ಗುಜರಾತನ್ನು ಆಳಿದರು. ಪಕ್ಷದ ಒಳ-ಹೊರಗಿನ ರಾಜಕೀಯ ಶತ್ರುಗಳನ್ನು ಸದೆಬಡಿದರು. 2014ರಲ್ಲಿ ಜನಮತ ಗಳಿಸಿ ಪ್ರಧಾನಿ ಆದ ನಂತರ ದೆಹಲಿಯಲ್ಲೂ ಪಕ್ಷದ ಒಳ-ಹೊರಗೆ ಗುಜರಾತ್ ಮಾದರಿ ಅನುಸರಿಸಿದರು. ಹಳೆಯ ಅತಿರಥರು ಮಾರ್ಗದರ್ಶಕ ಮಂಡಲ ಸೇರಿದರು. ಉಳಿದವರು ತಾವಾಗಿ ಅರಿತು ತಣ್ಣಗೆ ಶರಣಾದರು.
ಅಂತಹ ಐವತ್ತಾರು ಅಂಗುಲ ಹರವಿನ ಎದೆಗಾರ ಬಿಜೆಪಿಯ ಹೊಸ ಅಸಲಿ ‘ಉಕ್ಕಿನ ಮನುಷ್ಯ’ ಪ್ರಾದೇಶಿಕ ಪಕ್ಷಗಳ ಒತ್ತಡಗಳು, ಆಸೆ ಆಕಾಂಕ್ಷೆಗಳ ಅಹಮಿಕೆಗಳನ್ನು ತಣಿಸಿ ಮರ್ಜಿ ಕಾಯುವ ಪಾತ್ರವನ್ನು ನಿರ್ವಹಿಸಲು ಸಿದ್ಧರಾಗುವರೇ ಎಂಬುದು ಸಣ್ಣ ಪ್ರಶ್ನೆಯೇನೂ ಅಲ್ಲ. ಮನಮೋಹನ ಸಿಂಗ್ ಅವರಂತೆ ‘ದುರ್ಬಲ ಪ್ರಧಾನಿ’ ಎನಿಸಿಕೊಳ್ಳುವ ಇಲ್ಲವೇ ಸ್ವಾಭಿಮಾನವನ್ನು ನುಂಗಿಕೊಳ್ಳುವ ದುರ್ಗತಿ ಅವರ ಆಯ್ಕೆ ಆಗಲಾರದು. 2019ರ ಗರ್ಭದಲ್ಲಿ ಅಡಗಿರುವ ಭವಿಷ್ಯ ಯಾರನ್ನು ಯಾವ ಎತ್ತರಕ್ಕೆ ಏರಿಸುತ್ತದೋ, ಮತ್ಯಾರನ್ನು ಪಾತಾಳಕ್ಕೆ ತುಳಿಯುತ್ತದೋ ಎಂಬುದು ಕುತೂಹಲಕರ ಸಂಗತಿ. ಮುನಿಸಿಕೊಂಡ ಮಮತಾ ಬ್ಯಾನರ್ಜಿ ಅವರನ್ನು ರಮಿಸಲು ಕೋಲ್ಕತ್ತದ ಕೊಳೆಗೇರಿಯ ಸಂದಿಗೊಂದಿಗಳ ಸುತ್ತಿ ಆಕೆಯ ಮನೆಗೆ ತೆರಳಿ, ತಾಯಿಯ ಪಕ್ಕ ಕುಳಿತು ಮಾತಾಡಿ ನಿಮ್ಮ ಮಗಳು ಹಟಮಾರಿ ಎಂದು ಪ್ರೀತಿ ತೋರುತ್ತಲೇ ಟೀಕಿಸಿ ಮಮತಾ ಮನ ಗೆದ್ದು ಹಿಂದಿರುಗಿದ ವಾಜಪೇಯಿ ಅವರನ್ನು ಮೋದಿಯವರಲ್ಲಿ ಕಾಣುವುದು ಕಠಿಣ. ತಾವು ಮಾತ್ರವಲ್ಲ ತಮ್ಮ ಸಹೋದ್ಯೋಗಿಗಳಲ್ಲೂ ಪ್ರಖರ ಸ್ವಾಭಿಮಾನ ಬೆಳೆಸಿದ್ದಾರೆ ಮೋದಿ. ಇಲ್ಲದಿದ್ದರೆ ನಿರ್ಮಲಾ ಸೀತಾರಾಮನ್ ಅವರಂತಹ ಸರಳ ನಡೆ ನುಡಿಯ ಹೆಣ್ಣುಮಗಳು, ಕರ್ನಾಟಕದ ಮಂತ್ರಿಯೊಬ್ಬರ ಮೇಲೆ ಹಾಗೆ ಸಾರ್ವಜನಿಕವಾಗಿ ಭುಸುಗುಡುವುದು ಸಾಧ್ಯವಿರುತ್ತಿರಲಿಲ್ಲ. ಕೇಂದ್ರ ಮಂತ್ರಿಯಾದ ತಾವು ‘ರಾಜ್ಯ ಸರ್ಕಾರವೊಂದರ ‘ಇಂಚಾರ್ಜ್ ಮಿನಿಸ್ಟರ್’ ಮಾತಿನಂತೆ ನಡೆಯಬೇಕಿದೆ ಇಲ್ಲಿ, ನಂಬಲಸಾಧ್ಯ!’ ಎಂದು ಕುದಿಯುತ್ತಿರಲಿಲ್ಲ.
ಅಮಾನುಷ ನಂಜು, ಹಗೆಗಳ ಹೊಗೆಯು ಗಾಳಿಗೆ ಬೆರೆತು ದೇಶದ ಉದ್ದಗಲಕ್ಕೆ ತೇಲಿದೆ. ತಾಜಾ ಗಾಳಿಗೆ ಮೂಗರಳಿಸುವ ಅಮಾಯಕ ಜನಕೋಟಿಯ ಮೈಮನಗಳನ್ನು ತುಂಬತೊಡಗಿದೆ. ಈ ಹಗೆಯ ಹೊಗೆಯನ್ನು ಕೊಂಚವಾದರೂ ಚೆದುರಿಸುವುದು ಮೋದಿಯವರ ಮಿತ್ರಪಕ್ಷಗಳಿಂದಲಾದರೂ ಆದೀತೇ ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.