ಮಳೆಗಾಲ ಬಂದಿದೆ. ಎಲ್ಲೆಡೆ ಹಸಿರು ಚಿಗುರಿದೆ. ಇದರೊಡನೆ ಗಿಡ ನೆಡುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಪರಿಸರಾಸಕ್ತರು, ಪರಿಸರ ಸಂಘಟನೆಗಳು, ತಾರೆಯರು, ಪ್ರಭಾವಿ ವ್ಯಕ್ತಿಗಳು, ಸಾರ್ವಜನಿಕರು ಉತ್ಸುಕತೆ ತೋರುತ್ತಿರುತ್ತಾರೆ.
ಕಾಡಿನ ನಾಶ ತಡೆಗೆ ಸುಲಭವಾದ, ಆಕರ್ಷಕವಾದ, ಒಮ್ಮತದ ಪ್ರಾಪಂಚಿಕ ದೃಷ್ಟಿಕೋನ- ಗಿಡ ನೆಡುವುದು. ಕಾಡು ಕಡಿಯಬೇಡ ಎಂದಾಗ ಹುಟ್ಟಿಕೊಳ್ಳುವ ಚರ್ಚೆ, ವಿವಾದ, ಅಭಿವೃದ್ಧಿವಿರೋಧಿ ಎಂಬ ಪಟ್ಟ, ಇನ್ನಿತರ ಯಾವುದೇ ವಿವಾದಗಳು ಗಿಡ ನೆಡುವ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಈ ಚಟುವಟಿಕೆ ಒಳ್ಳೆಯ ಉದ್ದೇಶಗಳನ್ನು ಒಳಗೊಂಡಿದ್ದರೂ ಅದು ತನ್ನದೇ ಆದ ನ್ಯೂನತೆಗಳನ್ನು ಹೊಂದಿದೆ.
ಸ್ಥಳೀಯ ಜಾತಿಯ ಗಿಡಗಳು ಎಂದ ತಕ್ಷಣ ಆಲ, ಅರಳಿ, ಬೇವು, ಮತ್ತಿ ಅಷ್ಟೇ ಅಲ್ಲ. ಎಷ್ಟೋ ಪ್ರದೇಶಗಳಲ್ಲಿ ಈ ಜಾತಿಯ ಮರಗಳು ನೈಸರ್ಗಿಕವಾಗಿ ಬೆಳೆಯುವುದೇ ಇಲ್ಲ. ಅಲ್ಲಿನ ಹವಾಗುಣ, ಮಣ್ಣಿನ ಗುಣಮಟ್ಟ, ಹವಾಮಾನ ವೈಪರೀತ್ಯ, ಮಳೆಯ ಪ್ರಮಾಣ, ಇತರ ವಿಚಾರಗಳಿಗೆ ಒಗ್ಗಿದಂತಹ ಬೇರೆ ಜಾತಿಯ ಗಿಡಮರ ಗಳಿರಬಹುದು. ಅವುಗಳ ಸಂತಾನೋತ್ಪತ್ತಿಯನ್ನು ಬೆಂಬಲಿಸುವ ಕೀಟ, ಪಕ್ಷಿ, ಪ್ರಾಣಿ ಅಥವಾ ಗಾಳಿ, ನೀರಿನಂತಹ ವ್ಯವಸ್ಥೆಗಳಿರಬಹುದು. ಅಲ್ಲಿಗೆ ಆಲ, ಅರಳಿಯಂತಹ ಪ್ರಭೇದಗಳು ಪರಕೀಯ ಗಿಡಗಳಾಗಿ
ಬಿಡುತ್ತವೆ. ಹಲವಾರು ಬಾರಿ ಸಸಿ ನೆಡುವ ಕಾರ್ಯಕ್ರಮದ ಆಯೋಜಕರು ಈ ಪರಿಸರ ಸೂಕ್ಷ್ಮತೆಯನ್ನು ಅರ್ಥೈಸಿಕೊಂಡಿರುವುದಿಲ್ಲ. ಸ್ಥಳೀಯ ಆವಾಸಕ್ಕೆ ತಮಗೆ ಅರಿವಿಲ್ಲದಂತೆ ಪರಕೀಯ ಗಿಡಗಳನ್ನು ಪರಿಚಯಿಸಿ ಆ ಭಾಗದ ಆವಾಸಸ್ಥಾನಕ್ಕೆ ಧಕ್ಕೆ ತಂದಿರುತ್ತಾರೆ.
ಲಕ್ಷಾಂತರ ಬೀಜದುಂಡೆಗಳನ್ನು ಮಾಡಿ ಮನಸೋ ಇಚ್ಛೆ ಪಸರಿಸುವ ಪ್ರವೃತ್ತಿ ಬೆಳೆದಿದೆ. ಬಹುಶಃ ಈ ಚಟುವಟಿಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಗಳೇ ಹೆಚ್ಚು. ಬೀಜದುಂಡೆಗೆ ಬಳಸುವ ಮಣ್ಣಿನಲ್ಲಿ ಲಂಟಾನ, ಪಾರ್ಥೇನಿಯಂನಂತಹ ಕಳೆಗಳ ಬೀಜಗಳಿರ
ಬಹುದು. ಇದರಿಂದ ಈ ಕಳೆಗಳನ್ನು ನಾವೇ ಪಸರಿಸಿದಂತಾಗುತ್ತದೆ. ಅತ್ತಿಮರ ತನ್ನ ಬೀಜ ಪಸರಿಸಲು ಕೆಲ ಜಾತಿಯ ಹಣ್ಣಿನ ನೊಣದ ಮೇಲೆ ಅವಲಂಬಿತವಾಗಿರುತ್ತದೆ. ಈ ಮರವನ್ನು ಅದಕ್ಕೆ ಬೆಂಬಲವಾಗಿ ನಿಲ್ಲುವ ನೊಣದ ಸಂತತಿಯಿಲ್ಲದ ಪ್ರದೇಶಕ್ಕೆ ತೆಗೆದುಕೊಂಡು ಇದು ಸ್ಥಳೀಯ ಗಿಡವೆಂದು ನೆಟ್ಟರೆ ಅತ್ತಿಮರ ಸಂತಾನೋತ್ಪತ್ತಿ ಮಾಡುವುದಾದರೂ ಹೇಗೆ? ಅಚ್ಚ ಕನ್ನಡಿಗರನ್ನು ಕರೆದುಕೊಂಡು ಹೋಗಿ ಅಫ್ಗಾನಿಸ್ತಾನಕ್ಕೊ ಅಥವಾ ಸೈಬೀರಿಯಾಕ್ಕೊ ಬಿಟ್ಟುಬಂದ ಹಾಗಿರುತ್ತದೆ. ಪ್ರತಿಯೊಂದು ಜಾತಿಯ ಮರಕ್ಕೂ ಇದು ಅನ್ವಯಿಸುತ್ತದೆ.
ಹುಲ್ಲುಗಾವಲು ಮತ್ತು ಹೆಚ್ಚು ಮರಗಳಿಲ್ಲದ ಗುಡ್ಡಗಳನ್ನು ಕಂಡರೆ ಗಿಡ ನೆಡುವ ಕೆಲವು ಹವ್ಯಾಸಿಗಳಿಗೆ, ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳಿಗೆ ಬಲು ಇಷ್ಟ. ಅವರಿಗೆ ಅಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬೇಕೆಂಬ ಅಭಿಲಾಷೆಯೊಡೆಯುತ್ತದೆ. ಅಂತಹ ಪ್ರದೇಶ ಗಳನ್ನು ‘ಬರಡು’ ಭೂಮಿಯೆಂದು ಘೋಷಿಸಿಬಿಡುತ್ತಾರೆ. ವಾಸ್ತವಾಂಶವೆಂದರೆ ಹುಲ್ಲುಗಾವಲುಗಳು, ಹುಲ್ಲುಗಾಡು ಗಳು ತಮ್ಮದೇ ಆದ ವಿಶಿಷ್ಟ ಆವಾಸಸ್ಥಾನಗಳು.
ಹಾಗೆಯೇ, ಹೆಚ್ಚಾಗಿ ಕರಾವಳಿ ಪ್ರದೇಶದ ಜಂಬುಮಣ್ಣಿನ (ಲ್ಯಾಟರೈಟ್) ಕಲ್ಲುಬಂಡೆಗಳ ಮೇಲೆ ಕಂಡುಬರುವ ಹುಲ್ಲುಗಾವಲುಗಳು ಕೂಡ ನಿರ್ದಿಷ್ಟ ಆವಾಸಸ್ಥಾನಗಳಾಗಿವೆ. ಬೇಸಿಗೆಯಲ್ಲಿ ಒಣಗುವ ಈ ಹುಲ್ಲುಗಾವಲುಗಳು ಮುಂಗಾರು ಬಂದೊಡನೆ ಜೀವತಳೆದು ಅಭೂತಪೂರ್ವವಾಗಿ ಪರಿವರ್ತನೆ ಗೊಳ್ಳುತ್ತವೆ. ಮಳೆಗಾಲದಲ್ಲಿ ಇಲ್ಲಿ ಹೂ ಬಿಡುವ ಸಸ್ಯಗಳು ಹೃದಯ ಸೂರೆಗೊಳ್ಳುತ್ತವೆ ಮತ್ತು ಚಿಟ್ಟೆಗಳಿಗೆ ಮಕರಂದ ಹೀರಲು ಭರ್ಜರಿ ಅವಕಾಶ ಒದಗಿಸುತ್ತವೆ. ಇವುಗಳ ಕಲ್ಲುಬಂಡೆಗಳಲ್ಲಿ ಒಣಗಿದ್ದ ಗುಂಡಿಗಳೆಲ್ಲ ನೀರು ತುಂಬಿ ಪುಟ್ಟ ಅಂದದ, ತಾತ್ಕಾಲಿಕ ಜೌಗು ಪ್ರದೇಶಗಳಾಗಿ ಮಾರ್ಪಾಡಾಗುತ್ತವೆ. ಈ ಜಂಬುಮಣ್ಣಿನ ಜೌಗು ಪ್ರದೇಶಗಳಿಗೆ ಸೀಮಿತವಾದ ಮಿಕ್ರೋಹೈಲ ಲ್ಯಾಟರೈಟ್ ಎಂಬ ಕಪ್ಪೆಯನ್ನು ಮೊದಲ ಬಾರಿಗೆ 2013ರಲ್ಲಿ ಮಣಿಪಾಲದ ಹತ್ತಿರ ಗುರುತಿಸಲಾಯಿತು. ಇಂತಹ ಜಂಬುಮಣ್ಣಿನ ಹುಲ್ಲುಗಾವಲುಗಳಲ್ಲಿ ಮಾತ್ರ ಸಿಗುವ ಇನ್ನೂ 20 ಜಾತಿಯ ಕಪ್ಪೆಗಳನ್ನು ಪಟ್ಟಿ ಮಾಡಲಾಗಿದೆ. ಮಹಾರಾಷ್ಟ್ರದ ಸಾತಾರ, ಸಿಂಧುದುರ್ಗ ಮತ್ತು ರತ್ನಾಗಿರಿ ಜಿಲ್ಲೆಗಳ ಜಂಬುಮಣ್ಣಿನ ಹುಲ್ಲುಗಾವಲು ಪ್ರದೇಶ ಗಳಲ್ಲಿ ಹಲ್ಲಿಗಳು, ನೆಲಗಪ್ಪೆಗಳ ಹೊಸ ಪ್ರಭೇದ ಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಹೀಗೆ ವಿಜ್ಞಾನಕ್ಕೆ ತಿಳಿದಿರದ ಇನ್ನೆಷ್ಟು ಪ್ರಭೇದಗಳಿವೆಯೋ?
ಈ ಜಂಬುಮಣ್ಣಿನ ಪ್ರದೇಶಗಳಲ್ಲಿ ವಿರಳವಾಗಿ, ಕುಬ್ಜವಾದ ಮರಗಳಿರುವ ಹಾಲು ಕಾಡುಗಳು ಸಹ ವೈಶಿಷ್ಟ್ಯಪೂರ್ಣ ಆವಾಸಸ್ಥಾನಗಳು. ಇಲ್ಲಿ ಬೂದುತಲೆಯ ಪಿಕಳಾರ, ಶ್ರೀಲಂಕಾದ ಕಪ್ಪೆಬಾಯಿಯಂತಹ ಪಕ್ಷಿಗಳು ಕಂಡುಬರುತ್ತವೆ. ಇಂತಹ ಸುಂದರ ಜಂಬುಮಣ್ಣಿನ ಹುಲ್ಲುಗಾವಲುಗಳಲ್ಲಿ ಡೈನಮೈಟ್ ಉಪಯೋಗಿಸಿ ಗಿಡಗಳನ್ನು ನೆಟ್ಟ ನಿದರ್ಶನಗಳಿವೆ.
ಇಂತಹ ಪರಿಸರ ವ್ಯವಸ್ಥೆಗಳನ್ನು ರೂಢಿಸಿಕೊಂಡು ಬದುಕುವ ಸಸ್ಯ ಪ್ರಭೇದಗಳು, ಅಣಬೆಗಳು, ಕ್ರಿಮಿಕೀಟ ಗಳು, ಸರೀಸೃಪಗಳು, ಪಕ್ಷಿ-ಸಸ್ತನಿಗಳಿರುತ್ತವೆ. ಅಂತಹ ಪ್ರದೇಶಗಳನ್ನು ನಾವು ಕಾಡಾಗಿ ಮಾಡಲು ಪ್ರಯತ್ನಿಸಿ ದರೆ ಅಲ್ಲಿನ ಸ್ಥಳೀಯ ಪರಿಸರವ್ಯವಸ್ಥೆಯಲ್ಲಿ
ಏರುಪೇರಾಗುತ್ತದೆ, ನಂತರ ಈ ವಿಶಿಷ್ಟ ಆವಾಸ ಸ್ಥಾನಗಳು ಕಣ್ಮರೆಯಾಗುತ್ತವೆ. ನಮ್ಮ ಉತ್ಸುಕತೆಗೆ ಸ್ವಲ್ಪ ವಿಜ್ಞಾನದ ತಳಹದಿ, ನಿಸರ್ಗದ ಅರಿವಿನ ಕವಚವಿದ್ದರೆ ಪರಿಸರ ಕಾಪಾಡುವ ಸಡಗರಕ್ಕೆ ಒಂದು ನಿಜವಾದ ಅರ್ಥವಿರುತ್ತದೆ ಮತ್ತು ಕೈಯಾರೆ ನಿಸರ್ಗದ ಜಟಿಲ ವ್ಯವಸ್ಥೆಯನ್ನು ಹಾಳುಮಾಡುವುದನ್ನು ಸ್ವಲ್ಪಮಟ್ಟಿಗಾ ದರೂ ತಡೆಯಬಹುದು.
ಗಿಡ ನೆಡುವ ಕಾರ್ಯಕ್ರಮಗಳಿಂದ ಮೈದೇನಹಳ್ಳಿ, ರಾಣೆಬೆನ್ನೂರು ಹೀಗೆ, ಪರಿಸರ ವ್ಯವಸ್ಥೆಯಲ್ಲಿ ಬಹುಮುಖ್ಯ ಕಾರ್ಯನಿರ್ವಹಿಸುವ ಹಲವು ಹುಲ್ಲುಗಾವಲುಗಳನ್ನು ಕಳೆದುಕೊಂಡಿದ್ದೇವೆ. ಅಲ್ಲಿದ್ದ ತೋಳ, ಎರಳೊಡ್ಡು ಪಕ್ಷಿಗಳು ಯಾರಿಗೂ ತಿಳಿಯದೆ ಮಾಯವಾಗಿವೆ. 1994ರಲ್ಲಿ ತುಮಕೂರು ಜಿಲ್ಲೆಯ ಮೈದೇನಹಳ್ಳಿ ಪ್ರದೇಶದಲ್ಲಿ ಆರು ತೋಳಗಳಿದ್ದ ಗುಂಪೊಂದನ್ನು ನೋಡಿ ಸಮ್ಮೋಹನಗೊಂಡಿದ್ದೆ. ಈಗ ಅಲ್ಲಿ ತೋಳಗಳ ಬದಲು ಚಿರತೆಗಳು ಕಂಡುಬರುತ್ತವೆ. ಇದಕ್ಕೆ ಬಹುಮುಖ್ಯ ಕಾರಣ ಆ ಪ್ರದೇಶಕ್ಕೆ ರಕ್ಷಣೆಯ ಹೆಸರಿನಲ್ಲಿ ಜಾನುವಾರುಗಳನ್ನು ತಡೆದದ್ದು, ಮತ್ತು ಹಸಿರೀಕರಣದ ಸೋಗಿನಲ್ಲಿ ಗಿಡ ನೆಟ್ಟದ್ದು. ಹುಲ್ಲುಗಾವಲುಗಳಿಗೆ ಮಿತವಾದ ಹುಲ್ಲುಮೇಯುವಿಕೆ ಅತ್ಯಗತ್ಯ. ಅದನ್ನು ಸಂಪೂರ್ಣವಾಗಿ ತಡೆದರೆ ಹುಲ್ಲುಗಾವಲು ಕುರುಚಲು ಕಾಡಾಗಿ ಅಲ್ಲಿರುವ ಕೃಷ್ಣಮೃಗ, ತೋಳ, ಕಪ್ಪಲು ನರಿ ಇನ್ನಿತರ ವನ್ಯಜೀವಿಗಳು ಕಣ್ಮರೆಯಾಗುತ್ತವೆ. ಮೈದೇನಹಳ್ಳಿಯಲ್ಲಿ ಕೃಷ್ಣಮೃಗ ಗಳೆಲ್ಲ ಸಂರಕ್ಷಣಾ ಮೀಸಲು ಪ್ರದೇಶಕ್ಕಿಂತ ಹೆಚ್ಚಾಗಿ ಕೃಷಿ ಭೂಮಿಗಳಲ್ಲಿ ಕಂಡುಬರುತ್ತವೆ. ಇದಕ್ಕೆ ಬಹುಮುಖ್ಯ ಕಾರಣ ಸಂರಕ್ಷಣೆಯ ಹೆಸರಿನಲ್ಲಿ ಹುಲ್ಲುಗಾವಲನ್ನು ಕಾಡಾಗಿ ಪರಿವರ್ತಿಸಿದ್ದು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕೃಷ್ಣಮೃಗ ವನ್ಯಜೀವಿಧಾಮದಲ್ಲಿ ವ್ಯಾಪಕವಾಗಿ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮಗಳಿಂದ ಎರಳೊಡ್ಡು ಪಕ್ಷಿ ಅಲ್ಲಿ ಸ್ಥಳೀಯವಾಗಿ ನಶಿಸಲು ಕಾರಣವಾಯಿತು. ಒಮ್ಮೆ ನಮ್ಮ ದೇಶದ ರಾಷ್ಟ್ರಪಕ್ಷಿಯಾಗಿ ನಾಮನಿರ್ದೇಶನವಾಗ
ಬೇಕಿದ್ದ ಈ ಸುಂದರ ಹಕ್ಕಿ ಇಂದು ಭೂಮಿಯ ಮೇಲಿಂದಲೇ ನಶಿಸುವ ಹಂತದಲ್ಲಿದೆ.
2020ರಲ್ಲಿ ಸ್ಕಾಟ್ಲೆಂಡಿನಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನದ ಪ್ರಕಾರ, ಅಲ್ಲಿನ ಹೆಥೆರ್ ಹುಲ್ಲುಗಾವಲು ಗಳು ಅಲ್ಲಿ ನೆಟ್ಟು ಬೆಳೆಸಿದ ಕಾಡುಗಳಿಗಿಂತ ಹೆಚ್ಚು ಇಂಗಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಇದಲ್ಲದೆ ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಅವ್ಯವಸ್ಥಿತ ಗಿಡ ನೆಡುವ ಯೋಜನೆಗಳು ನಿಸರ್ಗ ಸಂರಕ್ಷಣೆಗೆ ರಾಮಬಾಣವಲ್ಲ ಎಂದು ಎತ್ತಿತೋರಿಸಿವೆ.
ಹಲವಾರು ಕಡೆಗಳಲ್ಲಿ ಗಿಡ ನೆಡುವ ತರಾತುರಿಯಲ್ಲಿ ನಮ್ಮ ಕೆರೆಗಳನ್ನೇ ಕಳೆದುಕೊಂಡಿದ್ದೇವೆ. ಕೆರೆಗಳಲ್ಲಿ ಗೊಬ್ಬಳಿ, ಬಿದಿರು ಹೀಗೆ ಹಲವು ಜಾತಿಯ ಸಸ್ಯ ಪ್ರಭೇದಗಳನ್ನು ಬೆಳೆಸಿ ನೀರು ಸಂಗ್ರಹಣಾ ಉಗ್ರಾಣ ಗಳನ್ನು ಮುಚ್ಚಿದ್ದೇವೆ.
ಗಿಡ ನೆಡುವುದು ಸಂಪೂರ್ಣ ಸರಿಯಲ್ಲ ಎಂದು ಹೇಳುತ್ತಿಲ್ಲ. ಆದರೆ ಎಲ್ಲೆಲ್ಲೋ ಯಾವುದೋ ಗಿಡಗಳಪ್ರಭೇದಗಳನ್ನು ನೆಡುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆಯಿರುವ ಉಪೇಕ್ಷೆ, ನಾವು ಗಿಡ ನೆಡುವ ಬಗ್ಗೆಯಿರುವ ವಸಾಹತುಶಾಹಿ ಕಾಲದ ಅಭಿಪ್ರಾಯಗಳನ್ನು ಬದಲಿಸಿಕೊಂಡು ಪರಿಸರ ವ್ಯವಸ್ಥೆ, ನಿಸರ್ಗದ ನಿಯಮಕ್ಕೆ ಹೊಂದುವ ಯೋಚನೆ ಮಾಡುವುದು ಸೂಕ್ತ.
ಲೇಖಕ: ವನ್ಯಜೀವಿ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.