ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪ್ರಶಸ್ತಿಯೊಂದಿಗೆ ಸಂಭ್ರಮಿಸಿತು. ಆದರೆ ಕೋವಿಡ್– 19 ಸಾವು–ನೋವಿನ ಅಂಕಿ ಅಂಶಗಳಲ್ಲಿಯೇ ಕಳೆದುಹೋಗಿದ್ದ ಜನಸಮೂಹವು 52 ದಿನಗಳ ಕಾಲ ಸಿಕ್ಸರ್, ಬೌಂಡರಿಗಳ ಲೆಕ್ಕಾಚಾರದಲ್ಲಿ ಮೈಮರೆಯುವಂತೆ ಮಾಡಿದ್ದು 13ನೇ ಆವೃತ್ತಿಯ ಐಪಿಎಲ್.
ಪ್ರತೀ ಸಲದಂತೆ ಈ ಬಾರಿಯೂ ಈ ಟೂರ್ನಿ ಬಗ್ಗೆ ಹಲವರು ನಕಾರಾತ್ಮಕವಾಗಿ ಮಾತನಾಡುತ್ತಾರೆ. ಅಲ್ಲಲ್ಲಿ ಬೆಟ್ಟಿಂಗ್ ಪ್ರಕರಣಗಳು ವರದಿಯಾದವು. ಕೆಲವು ಪಂದ್ಯಗಳ ಫಲಿತಾಂಶಗಳ ಬಗ್ಗೆ ಅನುಮಾನಗಳೂ ವ್ಯಕ್ತವಾದವು. ಅವುಗಳ ಹೊರತಾಗಿಯೂ ಬಹಳಷ್ಟು ಸಕಾರಾತ್ಮಕ ಸಂಗತಿಗಳು ಕಣ್ಮನ ಸೆಳೆಯುತ್ತವೆ.
‘ಕ್ರೀಡೆಗೆ ಜಗತ್ತನ್ನೇ ಬದಲಿಸುವ ಶಕ್ತಿ ಇದೆ’ ಎಂದು ನೆಲ್ಸನ್ ಮಂಡೇಲಾ ಹಿಂದೊಮ್ಮೆ ಹೇಳಿದ್ದ ಮಾತನ್ನೂ ಈ ಟೂರ್ನಿ ನೆನಪಿಸಿತು. ವಿಭಿನ್ನವಾದ ಕೌಟುಂಬಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ, ದೇಶ–ವಿದೇಶಗಳ ಆಟಗಾರರು ಜೀವ ಸುರಕ್ಷಾ ವಲಯದ (ಬಯೋ ಬಬಲ್) ಒಂದೇ ಸೂರಿನಡಿ ಆಡಿದರು. ಸ್ನೇಹದ ಹೊನಲು ಹರಿಸಿದರು. ಐಪಿಎಲ್ ಯಶಸ್ಸಿಗೆ ಜನಾಂಗೀಯ ಸೌಹಾರ್ದವೂ ಕಾರಣವಾಯಿತು. ಇಲ್ಲಿ ಶ್ವೇತವರ್ಣೀಯ ಮತ್ತು ಕಪ್ಪುವರ್ಣೀಯ ಆಟಗಾರರು ಜೊತೆಗೂಡಿ ಆಡಿದರು. ಗೆದ್ದಾಗ ಪರಸ್ಪರ ಆಲಿಂಗಿಸಿಕೊಂಡು ಸಂಭ್ರಮಿಸಿ, ಸೋತಾಗ ಸಂತೈಸಿದ ದೃಶ್ಯಗಳು ಭವಿಷ್ಯದ ಭರವಸೆಯಾಗಿ ಕಂಡವು. ಆದರೆ ಈ ಟೂರ್ನಿಯಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನ ನಡೆಸಲಿಲ್ಲ ಎಂದು, ಸನ್‌ರೈಸರ್ಸ್ ತಂಡಕ್ಕೆ ಆಡುವ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಆಕ್ಷೇಪಿಸಿದ್ದು ನ್ಯಾಯಸಮ್ಮತವೇ ಆಗಿತ್ತು. ನಂತರ ಮುಂಬೈ ಆಟಗಾರ ಹಾರ್ದಿಕ್ ಪಾಂಡ್ಯ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹ. ಆದರೆ ಈ ವಿಷಯದಲ್ಲಿ ಬಿಸಿಸಿಐ ಮೌನ ಮುರಿಯದಿರುವುದು ಏಕೆ?
ಇನ್ನೊಂದು ಕಡೆ, ಆಟಗಾರರಲ್ಲಿ ವಯಸ್ಸು ಮತ್ತು ಅನುಭವದ ಅಂತರವಿದ್ದರೂ ಸ್ನೇಹ ಸಮಾನತೆಗೆ ಅಡ್ಡಿಯಾಗಲಿಲ್ಲ. 20 ವರ್ಷದ ದೇವದತ್ತ ಪಡಿಕ್ಕಲ್ ಮತ್ತು 41ರ ಗೇಲ್ ಅವರಿಬ್ಬರಿಗೂ ಇಲ್ಲಿ ಮಿಂಚುವ ಅವಕಾಶ ಒದಗಿತು. ಅಷ್ಟೇ ಅಲ್ಲ, ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಪ್ರಿಯಂ ಗರ್ಗ್, ಪಾನಿಪೂರಿ ಮಾರುತ್ತ ಬೆಳೆದ ಯಶಸ್ವಿ ಜೈಸ್ವಾಲ್, ತಮಿಳುನಾಡಿನ ದಿನಗೂಲಿ ಕಾರ್ಮಿಕರ ಮಗ ತಂಗರಸು ನಟರಾಜನ್ ಅವರಿಗೂ ಅವಕಾಶದ ಹೆಬ್ಬಾಗಿಲು ತೆರೆಯಿತು.
ಅದರಲ್ಲೂ ನಟರಾಜನ್ ಯಶೋಗಾಥೆ ಮನಮುಟ್ಟುವಂತಹದ್ದು. ಬಾಲ್ಯದಲ್ಲಿ ಚೆಂಡು, ಬೂಟು ಖರೀದಿಸಲೂ ಪರದಾಡಿದ್ದ ಹುಡುಗ. ಕಷ್ಟಪಟ್ಟು ದೇಶಿ ಟೂರ್ನಿಗಳಲ್ಲಿ ತಮ್ಮ ಎಡಗೈ ವೇಗದ ಬೌಲಿಂಗ್‌ನಿಂದ ಗಮನ ಸೆಳೆದರು. ಮೂರು ವರ್ಷಗಳ ಹಿಂದೆ ನಟರಾಜನ್ ಸಾಧನೆಯನ್ನು ನೋಡಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡವು ಮೂರು ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ, ಆ ಟೂರ್ನಿಯಲ್ಲಿ ಬರೀ ಎರಡು ವಿಕೆಟ್ ಪಡೆದ ನಟರಾಜನ್ ಸ್ಥಾನ ಕಳೆದುಕೊಂಡರು. ಮರುವರ್ಷದ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ₹ 40 ಲಕ್ಷಕ್ಕೆ ಖರೀದಿಸಿತ್ತು. ಈ ವರ್ಷ ಕಣಕ್ಕಿಳಿದ ಅವರು 16 ವಿಕೆಟ್‌ಗಳನ್ನು ಗಳಿಸಿ, ನಾಯಕ ಡೇವಿಡ್ ವಾರ್ನರ್ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೆ ಆಸ್ಟ್ರೇಲಿಯಾಕ್ಕೆ ತೆರಳಿರುವ ಭಾರತ ತಂಡದಲ್ಲಿಯೂ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾದರು.
ಐಪಿಎಲ್ ಅಂಗಳದಲ್ಲಿ ಇಂತಹ ಹತ್ತಾರು ಕಥೆಗಳು ಸಿಗುತ್ತವೆ. ಆದರೆ ಈ ಎಲ್ಲ ಅಂಶಗಳನ್ನೂ ಮೀರಿದ ಸ್ನೇಹವೇ ಅವರೆಲ್ಲರನ್ನೂ ಮಾನಸಿಕವಾಗಿ ಗಟ್ಟಿಗೊಳಿಸಿತ್ತು. ಲಾಕ್‌ಡೌನ್ ಕಾರಣದಿಂದಾಗಿ ಸುಮಾರು ನಾಲ್ಕು ತಿಂಗಳು ಗೃಹಬಂಧನದಲ್ಲಿಯೇ ಇದ್ದ ಆಟಗಾರರು ಅಭ್ಯಾಸದಿಂದ ದೂರವಿದ್ದರು. ಆದ್ದರಿಂದ ತಮ್ಮ ದೇಹ ಮತ್ತು ಮನಸ್ಸನ್ನು ಬಯೋ ಬಬಲ್ ಕ್ರಿಕೆಟ್‌ನೊಳಗೆ ತೊಡಗಿಸಿಕೊಳ್ಳಲು ಅಗತ್ಯವಿದ್ದ ಆಪ್ಯಾಯಮಾನವಾದ ವಾತಾವರಣವನ್ನು ಈ ಸ್ನೇಹ ನೀಡಿತ್ತು.
ಇದಲ್ಲದೆ ಐಪಿಎಲ್ ಬಗ್ಗೆ ಇದ್ದ ಕೆಲವು ನಂಬಿಕೆಗಳೂ ಈ ಸಲ ಹುಸಿಯಾದವು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ದಂಡು, ಚಿಯರ್ ಲೀಡರ್ಸ್ ನೃತ್ಯದ ಗಮ್ಮತ್ತು, ಅಬ್ಬರದ ಸಂಗೀತ, ಚಿತ್ರ–ವಿಚಿತ್ರ ವೇಷಭೂಷಣಧಾರಿಗಳ ಭರಾಟೆಗಳಿಲ್ಲದೇ ಯಶಸ್ಸು ಸಾಧಿಸಿದ್ದು ಈ ಐಪಿಎಲ್. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳುವಂತೆ, ಆಟಗಾರರ ಬದ್ಧತೆ ಮತ್ತು ಮನೋಬಲವೇ ಇದಕ್ಕೆ ಕಾರಣ. ಜೊತೆಗೆ ಯುಎಇ ಕ್ರಿಕೆಟ್ ಮಂಡಳಿ ಮತ್ತು ಅಲ್ಲಿಯ ಸರ್ಕಾರದ ಅಚ್ಚುಕಟ್ಟಾದ ಆತಿಥ್ಯದ ಪಾತ್ರವೂ ಇದೆ. ಶಾರ್ಜಾ, ದುಬೈ ಮತ್ತು ಅಬುಧಾಬಿ ಕ್ರೀಡಾಂಗಣಗಳಲ್ಲಿ ನಡೆದ ಪಂದ್ಯಗಳಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆಗಳಲ್ಲಿ ಪಾಲಿಸಿದ ಶಿಸ್ತು, ಮುಂಬರುವ ಕ್ರೀಡಾಚಟುವಟಿಕೆಗಳಿಗೆ ಮಾದರಿಯೇ ಸರಿ. ಈ ಸುದೀರ್ಘ ಟೂರ್ನಿ ಆರಂಭವಾದ ಮೇಲೆ ಒಂದೇ ಒಂದು ಸೋಂಕಿನ ಪ್ರಕರಣ ವರದಿಯಾಗಲಿಲ್ಲ.
ಟೂರ್ನಿ ಆಯೋಜನೆಗೂ ಮುನ್ನ ಕೆಲವು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದವು. ಟೂರ್ನಿಯ ಮಧ್ಯದಲ್ಲಿ ಯಾರಾದರೂ ಆಟಗಾರರು ಕೊರೊನಾಕ್ಕೆ ತುತ್ತಾದರೆ? ತಂಡಗಳು ಹಿಂದೆ ಸರಿದರೆ ಹೇಗೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದವು. ಎಲ್ಲರೂ ಒಪ್ಪಿದ ಮೇಲೆಯೇ ಟೂರ್ನಿಯ ದಿನಾಂಕ ನಿಗದಿಯಾಗಿತ್ತು. ಬಹುತೇಕ ಎಲ್ಲ ತಂಡಗಳ ಮಾಲೀಕರಿಗೂ ಸಮಾಧಾನ ಆಗುವ ರೀತಿಯಲ್ಲಿ ಆಟ ನಡೆಯಿತು. ಏಕೆಂದರೆ, ಪ್ಲೇ ಆಫ್ ಹಂತದ ನಾಲ್ಕು ತಂಡಗಳು ಯಾವುವು ಎಂದು ನಿರ್ಧರಿಸಲು ಲೀಗ್ ಹಂತದ ಕೊನೆಯ ಪಂದ್ಯದವರೆಗೂ ಕಾಯಬೇಕಾಯಿತು. ಅಷ್ಟರಮಟ್ಟಿಗೆ ತುರುಸಿನ ಪೈಪೋಟಿ ಇತ್ತು. ಆದರೆ ಚಾಂಪಿಯನ್ ತಂಡಕ್ಕೆ ಸಿಕ್ಕಷ್ಟೇ ಮಹತ್ವವು ಉಳಿದ ತಂಡಗಳಿಗೂ ಸಿಗಬೇಕು. ಇದಲ್ಲದೆ ಎಲ್ಲ ತಂಡಗಳಿಗೂ ಕೆಲವು ಪಾಠಗಳನ್ನೂ ಈ ಟೂರ್ನಿ ಕಲಿಸಿದೆ. ಅದರಲ್ಲಿ ಪ್ರಮುಖವಾಗಿ ‘ಲೋಕಲ್ ಟು ವೋಕಲ್’ ಜಾರಿ ಮಾಡುವ ಬಗ್ಗೆ ಯೋಚಿಸಬೇಕಿದೆ.
ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗ ಆಟಗಾರರು ಮಿಂಚಿದ್ದನ್ನು ನೋಡಿಯಾದರೂ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಆಯ್ಕೆ ಪದ್ಧತಿಯನ್ನು ಬದಲಿಸಿಕೊಳ್ಳಬೇಕಿದೆ. ಕಳೆದೆರಡು ವರ್ಷ ಆರ್‌ಸಿಬಿಯ ಬೆಂಚ್‌ನಲ್ಲಿ ಕಾಲ ಕಳೆದಿದ್ದ ದೇವದತ್ತ ಪಡಿಕ್ಕಲ್ ಈ ಸಲ ತಮಗೆ ಸಿಕ್ಕ ಅವಕಾಶಗಳಲ್ಲಿ ಮಿಂಚಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡರು.
ಯುವ ಆಟಗಾರರಿಗೆ ಹೆಚ್ಚು ಅವಕಾಶ ಕೊಟ್ಟರೆ ಲಾಭ ಹೆಚ್ಚು ಎಂದು ಮನಗಾಣುವ ಹೊತ್ತು ಇದು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರಸಿಂಗ್ ಧೋನಿ ಈ ವಿಷಯದಲ್ಲಿ ಎಡವಿದ್ದೇ ಸೋಲಿಗೆ ಕಾರಣವಾಯಿತು. ಇದೇ ಮೊದಲ ಸಲ ಪ್ಲೇ ಆಫ್ ಕೂಡ ಪ್ರವೇಶಿಸದೆ ಚೆನ್ನೈ ತಂಡವು ಬೇಗನೇ ಹೊರಬಿತ್ತು. ಕೊನೇ ಹಂತದ ಪಂದ್ಯಗಳಲ್ಲಿ ಆಡಿದ ಯುವ ಆಟಗಾರ ಋತುರಾಜ್ ಗಾಯಕವಾಡ್ ಅವರಿಗೆ ಆರಂಭದಲ್ಲಿಯೇ ಅವಕಾಶ ಕೊಟ್ಟಿದ್ದರೆ ಬಹುಶಃ ತಂಡಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲವೇನೊ?
ಇಲ್ಲಿ ಆಗಿರುವ ಲೋಪಗಳನ್ನು ತಿದ್ದಿಕೊಂಡು ಮತ್ತೆ ಕಣಕ್ಕಿಳಿಯಲು ಎಲ್ಲ ತಂಡಗಳಿಗೂ ಇನ್ನೈದು ತಿಂಗಳ ಅವಕಾಶ ಇದೆ. ಈ ಬಾರಿಯ ಯಶಸ್ಸಿನಿಂದ ಆತ್ಮವಿಶ್ವಾಸದಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿನ ಮಾರ್ಚ್–ಏಪ್ರಿಲ್‌ನಲ್ಲಿ ಭಾರತದಲ್ಲಿಯೇ ಐಪಿಎಲ್ ನಡೆಸಲು ಸಿದ್ಧತೆ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.