ಪತಿ ಮನ್ಮಥನ ಸಾವಿನಿಂದ ದುಃಖಿತಳಾದ ರತೀದೇವಿ ರೋದಿಸುತ್ತಿದ್ದಳು. ರತಿಯ ವಿಲಾಪವನ್ನು ಕೇಳಿದ ಪರ್ವತಾದಿಗಳಿಗೂ ದುಃಖವಾಯಿಂದರೆ, ಅವಳು ಯಾವ ಪರಿ ದುಃಖಿಸುತ್ತಿದ್ದಳೆಂಬುದನ್ನು ಊಹಿಸಬಹುದಾಗಿತ್ತು.
ರತಿಯ ದುಃಖಶಮನಕ್ಕಾಗಿ ದೇವತೆಗಳು ‘ಎಲೈ ರತಿದೇವಿ, ನಿನ್ನ ಗಂಡನ ಭಸ್ಮವನ್ನು ಸ್ವಲ್ಪ ತೆಗೆದುಕೊಂಡು ರಕ್ಷಿಸು. ಶಂಕರನ ಮನ ಕರಗಿದರೆ ನಿನ್ನ ಪತಿ ಮತ್ತೆ ಬದುಕುತ್ತಾನೆ. ನಾವೆಲ್ಲರೂ ಮಾಡಿದ ಕರ್ಮಕ್ಕನುಸಾರವಾಗಿ ಸುಖದುಃಖಗಳನ್ನ ಅನುಭವಿಸುತ್ತೇವೆ. ಇದಕ್ಕೆ ಬೇರೆಯವರು ಕಾರಣ ಅನ್ನೋದು ನೆಪವಷ್ಟೆ. ಆದ್ದರಿಂದ ನೀನು ವೃಥಾ ದೇವತೆಗಳ ಮೇಲೆ ತಪ್ಪನ್ನು ಹೊರಿಸುತ್ತಾ ಕಾಲಹರಣ ಮಾಡಬೇಡ’ ಎಂದು ಸಮಾಧಾನಿಸುತ್ತಾರೆ.
ನಂತರ ದೇವತೆಗಳು ಶಿವನ ಬಳಿಗೆ ಬಂದು, ‘ಓ ಪರಮೇಶ್ವರನೆ, ಮನ್ಮಥ ತನ್ನ ಸ್ವಾರ್ಥಕ್ಕಾಗಿ ನಿನ್ನ ಮನಸ್ಸು ವಿಚಲಿತವಾಗುವಂತೆ ಮಾಡಲಿಲ್ಲ. ದುಷ್ಟನಾದ ತಾರಕಾಸುರನಿಂದ ಪೀಡಿತರಾದ ನಾವು ಮನ್ಮಥನಿಂದ ಈ ಕಾರ್ಯವನ್ನು ಮಾಡಿಸಿದೆವು. ಇದರಲ್ಲಿ ಮನ್ಮಥನ ತಪ್ಪೇನೂ ಇಲ್ಲ. ನೀನು ಕ್ರೋಧದಿಂದ ಮನ್ಮಥನನ್ನು ಸುಟ್ಟಿದ್ದರಿಂದ ದೇವತೆಗಳೆಲ್ಲರ ಆಸೆ ಭಸ್ಮಮಾಡಿದಂತಾಗಿದೆ. ರತಿದೇವಿಯ ದುಃಖವನ್ನು ನೋಡಿ ದೇವತೆಗಳು ಮೃತಪ್ರಾಯರಾದಂತಾಗಿರುವರು. ರತೀದೇವಿಯ ಶೋಕವನ್ನು ನೀನು ಹೋಗಲಾಡಿಸಬೇಕು’ ಎಂದು ದೇವತೆಗಳು ಪ್ರಾರ್ಥಿಸಿದರು.
ಶಿವ ಪ್ರಸನ್ನನಾಗಿ ಹೇಳಿದ, ‘ನನ್ನ ಕೋಪದಿಂದ ಭಸ್ಮವಾದ ಮನ್ಮಥ ಮತ್ತೆ ಬರುತ್ತಾನೆ. ಅದಕ್ಕಾಗಿ ನೀವೆಲ್ಲ ದ್ವಾಪರ ಯುಗದವರೆಗೂ ಸಾವಧಾನದಿಂದಿರಬೇಕು. ಅಲ್ಲಿಯವರೆಗೂ ಮನ್ಮಥ ಅನಂಗ(ಶರೀರವಿಲ್ಲದೆ)ನಾಗಿಯೇ ಇರುತ್ತಾನೆ. ಶ್ರೀಕೃಷ್ಣನು ದ್ವಾರಕೆಯಲ್ಲಿ ರಾಜ್ಯಭಾರಮಾಡುವಾಗ ಅವನ ಪಟ್ಟದರಸಿಯಾದ ರುಕ್ಮಿಣಿಯಲ್ಲಿ ಮನ್ಮಥ ಜನಿಸುತ್ತಾನೆ. ಆ ಮಗುವೆ ಪ್ರದ್ಯುಮ್ನ. ಮಗು ಹುಟ್ಟಿದ ತಕ್ಷಣವೇ ಶಂಬರನೆಂಬ ದೈತ್ಯ ಅಪಹರಿಸುತ್ತಾನೆ. ನಂತರ ಆ ಮಗುವನ್ನು ಮೂಢನಾದ ಶಂಬರಾಸುರ ಸಮುದ್ರದಲ್ಲಿ ಎಸೆದು, ಸತ್ತುಹೋಯಿತೆಂದು ತಿಳಿದು ತನ್ನ ನಗರಕ್ಕೆ ತೆರಳುತ್ತಾನೆ.
‘ಎಲೈ ರತೀದೇವಿ, ಅಲ್ಲಿಯವರೆಗೆ ನೀನು ಆ ಶಂಬರಾಸುರನ ನಗರದಲ್ಲಿಯೇ ಇರಬೇಕು. ಅಲ್ಲಿಯೇ ನಿನ್ನ ಪತಿಯಾದ ಪ್ರದ್ಯುಮ್ನನು ನಿನಗೆ ಲಭಿಸುವನು. ಅಲ್ಲಿ ಕಾಮನು ಪ್ರದ್ಯುಮ್ನನ ರೂಪದಿಂದ ನಿನ್ನೊಡನೆ ಸೇರಿ ಶಂಬರಾಸುರನನ್ನು ಸಂಹರಿಸುತ್ತಾನೆ. ಶಂಬರಾಸುರನ ಐಶ್ವರ್ಯವೆಲ್ಲವನ್ನೂ ತೆಗೆದುಕೊಂಡು ನಿನ್ನೊಡನೆ ತನ್ನ ದ್ವಾರಕಾ ನಗರಕ್ಕೆ ತೆರಳುವನು’ ಎಂದು ಮನ್ಮಥ ಮುಂದಿನ ಜನ್ಮದಲ್ಲಿ ಶ್ರೀಕೃಷ್ಣನ ಮಗ ಪ್ರದ್ಯುಮ್ನನಾಗಿ ಹುಟ್ಟುವನೆಂಬ ಭವಿಷ್ಯ ಪ್ರಕಟಿಸಿದ.
ಶಂಕರನು ಹೇಳಿದ ಮಾತನ್ನು ಕೇಳಿ ದೇವತೆಗಳು ಸ್ವಲ್ಪ ಸಮಾಧಾನಗೊಂಡು ಮತ್ತೆ ವಿನಯದಿಂದ, ‘ಓ ಮಹಾದೇವನೆ, ಮನ್ಮಥನ ಮತ್ತೆ ಜನಿಸಿ ಬರುವವರೆಗೂ ಅವನ ಆತ್ಮವನ್ನು ಕಾಪಾಡು. ರತಿಯ ಪ್ರಾಣವನ್ನು ರಕ್ಷಿಸು’ ಎಂದು ಮತ್ತೆ ಬೇಡಿಕೊಳ್ಳುತ್ತಾರೆ. ದೇವತೆಗಳ ಮಾತುಗಳನ್ನು ಕೇಳಿ ಪರಮೇಶ್ವ ‘ಎಲೈ ದೇವತೆಗಳಿರಾ, ರಹಸ್ಯವಾಗಿ ಮನ್ಮಥನನ್ನು ಬದುಕಿಸುವೆ. ಅವನು ನನ್ನ ಗಣವಾಗಿದ್ದು ನಿತ್ಯವೂ ನನ್ನ ಜೊತೆಯೇ ವಿಹರಿಸುವನು. ನಾನು ಈಗ ಹೇಳಿದ ಆಖ್ಯಾನವನ್ನು ಯಾರಿಗೂ ಹೇಳಬಾರದು’ ಎಂದು ಎಚ್ಚರಿಸಿದ.
ಶಿವನ ಮಾತಿನಿಂದ ಸಂತುಷ್ಟರಾದ ದೇವತೆಗಳು ಸ್ವರ್ಗಕ್ಕೆ ತೆರಳಿದರೆ, ರತೀದೇವಿಯು ರುದ್ರ ಹೇಳಿದ ಶಂಬರಾಸುರನ ನಗರಿಗೆ ಹೋದಳು. ಅಲ್ಲಿ ಮನ್ಮಥ ಬರುವ ಕಾಲವನ್ನು ನಿರೀಕ್ಷಿಸುತ್ತಾ ಕಾಲಕಳೆಯುತ್ತಿದ್ದಳು.
ಇಲ್ಲಿಗೆ ಶ್ರೀಶಿವಪುರಾಣದ ಪಾರ್ವತೀಖಂಡದಲ್ಲಿ ಹತ್ತೊಂಬತ್ತನೆಯ ಅಧ್ಯಾಯ ಮುಗಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.