ಮೂರು ತಿಂಗಳ ಹಿಂದಷ್ಟೇ ಬೀದಿಯಲ್ಲಿ ನಿಂತು ಪರಸ್ಪರ ಬೈದಾಡಿ, ಮೂದಲಿಸಿಕೊಂಡಿದ್ದ ಬಿಜೆಪಿ–ಜೆಡಿಎಸ್ ನಾಯಕರು ಈಗ ‘ಕೂಡಿಕೆ’ಯ ಹವಣಿಕೆಯಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆಯ ಮಾತುಗಳನ್ನೂ ಆಡುತ್ತಿದ್ದಾರೆ. 2018ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಹೀಗೆಯೇ ಕಚ್ಚಾಡಿಕೊಂಡಿದ್ದ
ಕಾಂಗ್ರೆಸ್–ಜೆಡಿಎಸ್ ನಾಯಕರು, ಫಲಿತಾಂಶ ಬರುತ್ತಿದ್ದಂತೆ ಕೈಜೋಡಿಸಿ ಅಧಿಕಾರ ಹಿಡಿದಿದ್ದರು. ಪರಸ್ಪರ ವಿರೋಧಿಗಳು ಅಧಿಕಾರಲಾಲಸೆಯಿಂದ ಒಟ್ಟಾಗುವುದು ಇತ್ತೀಚಿನ ವರ್ಷಗಳಲ್ಲಿ ವಿಚಿತ್ರದ ಸಂಗತಿಯೇನಲ್ಲ.
ಅಧಿಕಾರ ರಾಜಕಾರಣದ ಮುಂದೆ ಸೈದ್ಧಾಂತಿಕ ಭಿನ್ನತೆ, ಬದ್ಧತೆ ಮಸುಕಾಗುತ್ತಿವೆ. ಅಧಿಕಾರಕ್ಕಾಗಿ ಇಂತಹ ನಡೆ ಸಹಜ ಎನ್ನಿಸುವ ಮಟ್ಟಿಗೆ ರಾಜಕೀಯ ಮಲಿನಗೊಂಡಿದೆ. ಸೈದ್ಧಾಂತಿಕವಾಗಿ ಎಂದೂ ಒಮ್ಮತಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುವಂತಿದ್ದ ಕಾಂಗ್ರೆಸ್– ಶಿವಸೇನಾ ಕೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದವು. ರಾಜಕೀಯದಲ್ಲಿ ಅಸಾಧ್ಯ ಅಥವಾ ಅಸಹ್ಯ ಎನ್ನುವಂತಹ ವಾತಾವರಣವಂತೂ ಬದಲಾಗಿಹೋಗಿದೆ.
ಕರ್ನಾಟಕದಲ್ಲಿ ಬಿಜೆಪಿ ಜತೆ ಜೆಡಿಎಸ್ ಸಖ್ಯ ಬೆಳೆಸುತ್ತಿರುವುದು ಇದು ಮೊದಲೇನಲ್ಲ. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಕೂಡಿಯೇ ಜೆಡಿಎಸ್–ಬಿಜೆಪಿ ಮೈತ್ರಿಕೂಟ ನೇತೃತ್ವದ ಸರ್ಕಾರ ರಚಿಸಿದ್ದರು. ‘ನನ್ನ ತಂದೆ ಎಚ್.ಡಿ.ದೇವೇಗೌಡರ ವಿರೋಧ ಕಟ್ಟಿಕೊಂಡು ಮೈತ್ರಿಗೆ ಮುಂದಾಗಿ ಕೆಟ್ಟೆ’ ಎಂದೂ ನಂತರದ ವರ್ಷಗಳಲ್ಲಿ ಕುಮಾರಸ್ವಾಮಿ ಹಳಹಳಿಸುತ್ತಿದ್ದರು. ಮತ್ತೆ ಬಿಜೆಪಿ ಜತೆಗಿನ ಸಖ್ಯಕ್ಕೆ ಕುಮಾರಸ್ವಾಮಿ ಹಾತೊರೆದಿರಲಿಲ್ಲ. 2018ರಲ್ಲಿ ಒಂದು ವರ್ಷವಷ್ಟೇ ಕಾಂಗ್ರೆಸ್ ಜತೆ ಸೇರಿ ಸರ್ಕಾರ ನಡೆಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಸ್ಥಾನ ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿ, ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದವು. 2018 ಮತ್ತು 2023ರ ವಿಧಾನಸಭೆ ಚುನಾವಣೆಗಳ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಜೆಡಿಎಸ್ ಅನ್ನು ಪರಸ್ಪರ ತಮ್ಮ ವಿರೋಧಿಗಳ ಬಿ–ಟೀಮ್ ಎಂದೇ ಹಂಗಿಸಿದ್ದರು.
ಈಗ ಮತ್ತೆ ಲೋಕಸಭೆ ಚುನಾವಣೆಯ ಗುಂಗು ಶುರುವಾಗಿದ್ದು, ಮೈತ್ರಿಯ ಲೆಕ್ಕಾಚಾರ ಬಿಜೆಪಿ–ಜೆಡಿಎಸ್‌ನಲ್ಲಿ ಬಿರುಸುಗೊಂಡಿದೆ. ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಲ್ಲಿರುವಂತೆ ಬಿಂಬಿಸಿಕೊಂಡ ಎರಡು ಪಕ್ಷಗಳು ಈಗ ಯಾವ ನೈತಿಕತೆಯನ್ನು ಇಟ್ಟುಕೊಂಡು ಒಂದಾಗುತ್ತಿವೆ ಎಂಬುದು ಸೋಜಿಗ. 20 ತಿಂಗಳ ಬಳಿಕ ಅಧಿಕಾರ ಬಿಟ್ಟುಕೊಡದ ಕುಮಾರಸ್ವಾಮಿ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಆಪಾದಿಸಿ ಯಡಿಯೂರಪ್ಪನವರು 2008ರಲ್ಲಿ ಚುನಾವಣೆ ಎದುರಿಸಿದ್ದರು. ಹಿಂದೆಂದೂ ಸಿಗದ ಗೆಲುವು ‘ವಿಶ್ವಾಸದ್ರೋಹ’ದ ಕಾರಣದಿಂದ ಉಂಟಾದ ಅನುಕಂಪದಿಂದಾಗಿ ಬಿಜೆಪಿಗೆ ದಕ್ಕಿತ್ತು. ಅಂತಹ ‘ವಿಶ್ವಾಸದ್ರೋಹ’ವನ್ನು ಮರೆತು ಈಗ ಹೇಗೆ ಒಂದಾಗಲಿದ್ದಾರೆ?
2018ರಲ್ಲಿ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ವಿಧಾನಸಭೆಯಲ್ಲಿ ಮಾತನಾಡಿದ್ದ ಅಂದಿನ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ‘ಕುಮಾರಸ್ವಾಮಿ ದುರ್ಯೋಧನ ವಂಶಸ್ಥ. ದುರ್ಯೋಧನನ ರಥದ ಬಾವುಟದಲ್ಲಿ ಹಾವಿನ ಲಾಂಛನ ಇರುವುದರಿಂದ ಅವನನ್ನು ‘ಉರಗ ಪತಾಕಂ’ ಎಂದು ಕರೆಯುತ್ತಾರೆ. ವಿನಾಶವೇ ದುರ್ಯೋಧನನ ಧ್ಯೇಯ. ಅಂತಹ ವಿನಾಶಕಾರನ ಬಾಯಲ್ಲಿ ವಿಕಾಸದ ಮಂತ್ರ ಹೇಳಿಸುತ್ತಿದ್ದೀರಿ’ ಎಂದು ಕಾಂಗ್ರೆಸ್‌ನವರನ್ನು ಹಂಗಿಸಿದ್ದರು.
‘ನಂಬಿದವರನ್ನು ಮುಗಿಸುವಂತಹದ್ದು ಕುಮಾರಸ್ವಾಮಿ ತತ್ವ. ಧರ್ಮಸಿಂಗ್ ಅವರನ್ನು ನಂಬಿಸಿ ಬೀದಿಯಲ್ಲಿ ಬಿಟ್ಟರು. ಅದೇ ಕೊರಗಿನಲ್ಲಿ ಅವರು ಕೈಲಾಸವಾಸಿಯಾದರು. ಇಂತಹ ನಯವಂಚಕ ಕುಮಾರಸ್ವಾಮಿ. ನಮ್ಮ ಜತೆ ಸೇರಿ ಅಧಿಕಾರದ ತೀಟೆ ತೀರಿಸಿಕೊಂಡು, ರೈತರ ಉದ್ಧಾರ ಮಾಡಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ’ ಎಂದು ಹೀಗಳೆದಿದ್ದರು. ಈಗ ಈ ಇಬ್ಬರೂ ಒಂದಾಗಿ ಚುನಾವಣೆ ಪ್ರಚಾರ ನಡೆಸುವುದನ್ನು ನೋಡುವುದೇ ಚೆಂದ!
ಬಿಜೆಪಿ ಸಖ್ಯದಿಂದ ದೂರ ಸರಿದಿದ್ದ ಕುಮಾರಸ್ವಾಮಿ ಕೂಡ ಎದುರಾಳಿ ಪಕ್ಷ, ಅದರ ಹಿಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಹೀನಾಮಾನ ಬೈದಿದ್ದುಂಟು.
ದಿನೇಶ್ ನಾರಾಯಣನ್ ಅವರ ‘The RSS and the making of THE DEEP NATION’ ಪುಸ್ತಕದಿಂದ ಬಹಳ ಪ್ರಭಾವಿತರಾಗಿದ್ದ ಕುಮಾರಸ್ವಾಮಿ, ಅದನ್ನು ಆಧರಿಸಿ ಸುದೀರ್ಘ ಲೇಖನವೊಂದನ್ನು ಬರೆದಿದ್ದರು. ‘ಸಂಘವೆಂದರೆ ‘ಸದಾನಂದ’ದ ಪರಿವಾರ. ಐಷಾರಾಮಿ ಬದುಕಿನ ಆಗರ. ಲೋಲುಪತೆಯ ಖಯಾಲಿಗಳ ಆಡುಂಬೊಲ. ಸಂಘವು ಸೇವೆಯ ಪಾವಿತ್ರ್ಯ ಉಳಿಸಿಕೊಂಡಿಲ್ಲ. ಅದರ ಗುರಿ ಅಧಿಕಾರ ಮಾತ್ರ. ಅದಕ್ಕಾಗಿ ಅವರ ಬಳಿ ಇರುವ ಏಕೈಕ ಟೂಲ್‌ಕಿಟ್ ಹಿಂದುತ್ವ. ಆ ಮೂಲಕ ದೇಶವನ್ನು ಪುನಃ ಅಂಧಕಾರಕ್ಕೆ ತಳ್ಳುವ ಕೆಲಸ ಮಾಡುತ್ತಿದೆ. ಸಂವಿಧಾನದತ್ತವಾಗಿ ಪ್ರಮಾಣ ಸ್ವೀಕರಿಸಿದ ಪ್ರಧಾನಿ, ಮುಖ್ಯಮಂತ್ರಿಗಳನ್ನು ಕೀಲುಗೊಂಬೆಗಳನ್ನಾಗಿ ಮಾಡಿಕೊಳ್ಳುವ ಅಪ್ರಜಾಸತ್ತಾತ್ಮಕ ಕೂಟವೇ ಇವತ್ತಿನ ಸಂಘ. ಆರ್‌ಎಸ್‌ಎಸ್ ಎಂದೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಂಡಿಲ್ಲ. ನೆಲದ ಕಾನೂನನ್ನು ಗೌರವಿಸಿಲ್ಲ. ಇಂಥ ಸಂಸ್ಥೆ ರಾಷ್ಟ್ರದ ವಿಪತ್ತು ಮಾತ್ರವಲ್ಲ, ದೇಶದ ಜಾತ್ಯತೀತ, ಧರ್ಮಾತೀತ ಮೂಲದ್ರವ್ಯಕ್ಕೆ ವಿಷವುಣಿಸುತ್ತಿರುವ ಕಾರ್ಕೋಟಕ ವಿಷಸರ್ಪ’ ಎಂಬಷ್ಟು ಉಗ್ರ ಪದಗಳನ್ನು ಬಳಸಿದ್ದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ‘ಈ ಬಾರಿ ಗೆದ್ದರೆ ಬಿಜೆಪಿಯು ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದೆ. ಶೃಂಗೇರಿಯ ದೇವಸ್ಥಾನವನ್ನು ನಾಶ ಮಾಡಿದ್ದ ಪೇಶ್ವೆಗಳ ಡಿಎನ್‌ಎ ಹೊಂದಿರುವ ವ್ಯಕ್ತಿಯನ್ನು ಈ ಹುದ್ದೆಗೇರಿಸುವ ಸಂಚು ನಡೆಸಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಉದ್ದೇಶಿಸಿ ಹೇಳಿದ್ದು ವಿವಾದವನ್ನೇ ಎಬ್ಬಿಸಿತ್ತು. ಬಿಜೆಪಿಯ ಮತಬ್ಯಾಂಕ್ ಒಡೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು. ಅವೆಲ್ಲವನ್ನೂ ಮರೆತು ಕುಮಾರಸ್ವಾಮಿಯವರು ಬಿಜೆಪಿ ಜತೆ ‘ಮಿಲನ’ಕ್ಕೆ ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬ ರಾಜಕಾರಣದ ವಿರುದ್ಧ ವಾಕ್‌ಪ್ರಹಾರ ನಡೆಸುತ್ತಲೇ ಬಂದಿದ್ದಾರೆ. ‘ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣ ಕಂಟಕ, ಪ್ರಜಾಪ್ರಭುತ್ವಕ್ಕೆ ಮಾರಕ. ಕುಟುಂಬ ರಾಜಕಾರಣವನ್ನು ಬೇರುಸಮೇತ ಕಿತ್ತುಹಾಕಬೇಕು’ ಎಂದು ನೂರಾರು ಬಾರಿ ಹೇಳಿದ್ದಲ್ಲದೇ, ತಮ್ಮ ರಾಜಕಾರಣ ಭಿನ್ನ ಎಂದು ಬಿಂಬಿಸಿಕೊಳ್ಳಲು ಈ ಮೂಲಕ ಯತ್ನಿಸಿದ್ದಾರೆ. ‘ಪಕ್ಷದ ಅಸ್ತಿತ್ವಕ್ಕೆ ಕುಟುಂಬ ರಾಜಕಾರಣವನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರನ್ನು ಪಕ್ಕಕ್ಕಿಟ್ಟುಕೊಂಡು ಪ್ರಧಾನಿಯವರು ರಾಜ್ಯದಲ್ಲಿ ಹೇಗೆ ಪ್ರಚಾರ ನಡೆಸುತ್ತಾರೆ ಎಂಬ ಕುತೂಹಲವಂತೂ ಇದೆ.
ಕುಮಾರಸ್ವಾಮಿಯವರೇ ಹಿಂದೆ ಹೇಳಿದಂತೆ, ಹಿಂದುತ್ವವೇ ಬಿಜೆಪಿಯ ಕಾರ್ಯಸೂಚಿ. ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡುವ, ಜಾತಿಯ ಶ್ರೇಣೀಕರಣ ವ್ಯವಸ್ಥೆಯನ್ನು ಪ್ರತಿಪಾದಿಸುವ ಸನಾತನ (ವೈದಿಕಧರ್ಮ) ಧರ್ಮದ ಪರವಾಗಿ ನಿಲ್ಲುವ, ಮೀಸಲಾತಿಯನ್ನು ಒಲ್ಲದ ಮನಸ್ಸಿನಿಂದ ಒಪ್ಪಿರುವ, ಸಂವಿಧಾನ ಬದಲಿಸಬೇಕೆಂದು ಬಯಸುವ ಬಿಜೆಪಿಯ ಆದ್ಯತಾ ನಿಲುವಿನ ಬಗ್ಗೆ ಕುಮಾರಸ್ವಾಮಿಯವರಿಗೆ ಸಹಮತ ಇದೆಯೇ? ಏಕೆಂದರೆ, ಚುನಾವಣೆ ಹೊತ್ತಿಗೆ ಈ ಎಲ್ಲ ವಿಷಯಗಳೂ ಮುನ್ನೆಲೆಗೆ ಬರಲಿವೆ. ಇಲ್ಲಿಯವರೆಗೆ ಪಕ್ಷದ ಹೆಸರಿಗೆ ‘ಜಾತ್ಯತೀತ’ ಎಂಬುದನ್ನು ಜನತಾದಳ ಅಂಟಿಸಿಕೊಂಡಿದೆ. ಕೆಲವರು ಕುಹಕವಾಡುತ್ತಿರುವಂತೆ ಜೆಡಿಎಸ್ ಅನ್ನು ‘ಸೆಕ್ಯುಲರ್’ ಎಂಬುದಕ್ಕೆ ಬದಲಾಗಿ ‘ಸನಾತನ’ ಎಂದು ಬದಲಿಸಿಕೊಳ್ಳಲಿದ್ದಾರೆಯೇ? ಇದನ್ನು ಅವರೇ ಹೇಳಬೇಕಿದೆ.
ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್ ಗಮನಾರ್ಹ ಸಾಧನೆಯನ್ನೇನೂ ಮಾಡಿಲ್ಲ. 2014ರ ಚುನಾವಣೆಯಲ್ಲಿ ಕರ್ನಾಟಕದ 28 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಶೇ 43.37 ಮತ ಪಡೆದಿದ್ದರೆ, 9 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಶೇ 41.15ರಷ್ಟು ಮತ ಗಳಿಸಿತ್ತು. ಎರಡು ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಶೇ 11.07ರಷ್ಟು ಮತ ದಕ್ಕಿಸಿಕೊಂಡಿತ್ತು. 2019ರಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗಿದ್ದರಿಂದಾಗಿ ಪರಿಸ್ಥಿತಿ ತಲೆಕೆಳಗಾಗಿತ್ತು. ಶೇ 51.75ರಷ್ಟು ಮತ ಪಡೆದಿದ್ದ ಬಿಜೆಪಿ 25 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದರೆ, ಶೇ 32.11ರಷ್ಟು ಮತ ಗಳಿಸಿದ್ದ ಕಾಂಗ್ರೆಸ್ 1 ಸ್ಥಾನಕ್ಕೆ ಹಾಗೂ ಶೇ 9.74ರಷ್ಟು ಮತ ಪಡೆದಿದ್ದ ಜೆಡಿಎಸ್ 1 ಸ್ಥಾನಕ್ಕೆ ಕುಸಿದಿದ್ದವು. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿತ್ತು.
ಈಗ ಬಿಜೆಪಿ–ಜೆಡಿಎಸ್ ಮೈತ್ರಿಗೆ ಮನಸ್ಸು ಮಾಡಿವೆ. ಚುನಾವಣೆ ಯಾರನ್ನು ಉಳಿಸಲಿದೆ, ಯಾರನ್ನು ಮುಳುಗಿಸಲಿದೆ, ಯಾರನ್ನು ತೇಲಿಸಲಿದೆ ಎಂಬುದನ್ನು ಮತದಾರರಷ್ಟೇ ಬಲ್ಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.