‘ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿಕೊಂಡಿದ್ದೆವು. ನಾವಿಬ್ಬರು ಈಗ ಒಂದಾಗಿರುವುದು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು. ಈ ಸರ್ಕಾರ ತೆಗೆಯುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ...’
ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ರಾಷ್ಟ್ರಮಟ್ಟದ ನಾಯಕ, ಸದ್ಯ 91 ವರ್ಷ ಪೂರ್ಣಗೊಳಿಸುತ್ತಿರುವ ಎಚ್.ಡಿ. ದೇವೇಗೌಡ ಅವರ ಬಾಯಿಂದ ಹೊರಬಿದ್ದ ಮಾತುಗಳಿವು. ಉನ್ನತ ಹುದ್ದೆಗೇರಿದ ಬಳಿಕ ಎಂತಹದೇ ವ್ಯಕ್ತಿಗಾದರೂ ಅನುಭವ ಜನ್ಯವಾಗಿ ಮುತ್ಸದ್ದಿತನವೆಂಬುದು ತನ್ನಿಂತಾನೇ ಪ್ರಾಪ್ತವಾಗಿ ಬಿಡುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೇಶದಲ್ಲೇ ಬಲುದೊಡ್ಡ ಸ್ಥಾನವನ್ನು ನಿರ್ವಹಿಸಿದವರು, ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವಂತಹ ಮಾತುಗಳನ್ನು ಆಡುವುದು ದೇವೇಗೌಡರಿಗೆ ಶೋಭೆಯಲ್ಲ. ಅದರಲ್ಲೂ 224 ಸದಸ್ಯ ಬಲದ ವಿಧಾನಸಭೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು, ಅಧಿಕಾರ ಹಿಡಿದಿರುವ ಪಕ್ಷವೊಂದರ ಸರ್ಕಾರವನ್ನು ಕೆಡವುವ ಪ್ರಸ್ತಾಪವೇ ಪ್ರಜಾತಂತ್ರಕ್ಕೆ ಮಾರಕ.
2018ರಲ್ಲಿ ಅಧಿಕಾರಕ್ಕೆ ಬಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯುದ್ದಕ್ಕೂ ಕೆಡವುವ, ಉರುಳಿಸುವ ಮಾತುಗಳೇ ರಾಜಕೀಯ ವಲಯದಲ್ಲಿ ಮುನ್ನೆಲೆಯಲ್ಲಿದ್ದವು. ಕಾಂಗ್ರೆಸ್–ಜೆಡಿಎಸ್‌ನ ಶಾಸಕರನ್ನು ‘ಆಪರೇಷನ್ ಕಮಲ’ದ ಬಲೆಯೊಳಗೆ ಸಿಲುಕಿಸಿ, ಕೊನೆಗೆ ಸರ್ಕಾರವನ್ನು ಉರುಳಿಸಲಾಯಿತು. ಆಗ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರಿಗೂ, ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುಂದುವರಿಯುವುದು ಬೇಕಿರಲಿಲ್ಲ. ಒಡಕಿನ ಮಾತುಗಳನ್ನು ಮೊದಲು ತೆಗೆದವರು ಸಿದ್ದರಾಮಯ್ಯ. ಮೈತ್ರಿ ಸರ್ಕಾರದಲ್ಲಿನ ಅಸಹನೆಯ ಕಿಡಿಗಳನ್ನು ಬಳಸಿ, ಸರ್ಕಾರಕ್ಕೆ ಬೆಂಕಿ ಇಟ್ಟಿದ್ದು ಬಿಜೆಪಿ ನಾಯಕರು. ಕೇಂದ್ರ ಸರ್ಕಾರದಲ್ಲಿ ಈಗಲೂ ಅತ್ಯಂತ ಪ್ರಭಾವಿಯಾಗಿರುವ ಸಚಿವರೊಬ್ಬರ ನಿರ್ದೇಶನದ ಅನುಸಾರ ಮೈತ್ರಿ ಸರ್ಕಾರಕ್ಕೆ ಹಿಡಿ ಮಣ್ಣು ಹಾಕುವ ಕೆಲಸ ನಡೆಯಿತು. ಸರ್ಕಾರ ಕೆಡವಲು ಬೇಕಾದ ಸೂತ್ರ ಹೆಣೆದು, ಅದನ್ನು ಜಾರಿಗೊಳಿಸಿದ್ದು ಬಿ.ಎಸ್. ಯಡಿಯೂರಪ್ಪನವರ ಅಳಿಯ, ಆಪ್ತರಾಗಿದ್ದ ಎನ್.ಆರ್. ಸಂತೋಷ್. ಅಧಿಕಾರ ಅನುಭವಿಸಿದ್ದು ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ.
2018ರ ವಿಧಾನಸಭೆ ಚುನಾವಣೆಯಲ್ಲಿ ಎದುರುಬದುರು ಸೆಣಸಿ, ಹೀನಾಮಾನ ಬೈದಾಡಿಕೊಂಡಿದ್ದ ಕಾಂಗ್ರೆಸ್–ಜೆಡಿಎಸ್ ನಾಯಕರು ‘ಅಪವಿತ್ರ’ ಮೈತ್ರಿ ಮಾಡಿಕೊಂಡಿದ್ದರು. ಅಂತಹ ಸರ್ಕಾರ ಕೆಡವಿದೆವು ಎಂಬ ಸಣ್ಣ ಸಮರ್ಥನೆಯಾದರೂ ಬಿಜೆಪಿ ನಾಯಕರಿಗೆ ಇತ್ತು. ಸರ್ಕಾರ ಬೀಳಿಸಿದ ಬಳಿಕ, ಚುನಾವಣೆ ಎದುರಿಸುವ ಬದಲು, 2019ರಲ್ಲಿ ಸರ್ಕಾರ ರಚಿಸಿದ್ದು ಮೂರನ್ನೂ ಬಿಟ್ಟು ಒಟ್ಟಾದ ಹೀನ ‘ಕೂಡಿಕೆ’.
2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉರುಳಿಸುವ ಮಾತುಗಳನ್ನು ವಿರೋಧ ಪಕ್ಷದ ನಾಯಕರು ಆಡಲು ಶುರು ಮಾಡಿದರು. ಅದರಲ್ಲೂ ಬಿಜೆಪಿ–ಜೆಡಿಎಸ್ ಮೈತ್ರಿಯಾದ ಬಳಿಕ, ಸರ್ಕಾರ ತೆಗೆಯುವ ಮಾತುಗಳಿಗೆ ಬಲ ಬಂದಿತು. ಲೋಕಸಭೆ ಚುನಾವಣೆ ಬಳಿಕ, ರಾಜ್ಯ ಸರ್ಕಾರ ಪತನ ಎಂದೂ ಕೆಲವು ನಾಯಕರು ಹೇಳಿದರು. ಅದರ ಜತೆಗೆ, ಮುಖ್ಯಮಂತ್ರಿ ಬದಲಾವಣೆಯ ವಿಷಯವನ್ನು ಕಾಂಗ್ರೆಸ್‌ನವರೇ ಹರಿಯಬಿಟ್ಟರು. ಒಂದು ವರ್ಷದಿಂದೀಚೆಗೆ ಅಭಿವೃದ್ಧಿ, ಜನಪರ ಕೆಲಸಗಳು ಸದ್ದು ಮಾಡಿದ್ದು ಕಡಿಮೆ. ನಾಯಕತ್ವ ಬದಲಾವಣೆ, ಸರ್ಕಾರ ಪತನದ ಸುದ್ದಿಗಳೇ ರಾರಾಜಿಸಿದವು.
ಈಗ ಮತ್ತೆ ‘ಆಪರೇಷನ್ ಕಮಲ’ದ ವಿಷಯ ಮುನ್ನೆಲೆಗೆ ಬಂದಿದೆ. ತಲಾ ₹50 ಕೋಟಿ ಕೊಟ್ಟು 50 ಶಾಸಕರನ್ನು ಖರೀದಿಸುವ ಕೆಲಸಕ್ಕೆ ಬಿಜೆಪಿ ನಾಯಕರು ಕೈಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಹೇಳಿದ್ದನ್ನು ಸಾಬೀತುಪಡಿಸುವ ಸಾಕ್ಷ್ಯಗಳು ಅವರ ಬಳಿ ಇದ್ದರೆ, ಸರ್ಕಾರ ಬೀಳಿಸುವ ಸಂಚು ಹೂಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ಕೆಲಸವನ್ನು ಅವರು ಮಾಡಬೇಕಿತ್ತು. ಆದರೆ, ಸಿದ್ದರಾಮಯ್ಯನವರಿಗೆ ಕಾನೂನು ಕ್ರಮಕ್ಕಿಂತ, ತಮ್ಮ ಮಾತು ಎಬ್ಬಿಸಬಹುದಾದ ರಾಜಕೀಯ ಕಲ್ಲೋಲದ ಬಗೆಗೆ ಹೆಚ್ಚು ಆಸ್ಥೆ ಇದ್ದಂತಿದೆ.
ಸಿದ್ದರಾಮಯ್ಯನವರ ಮಾತು ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನಂತೂ ಎಬ್ಬಿಸಿದೆ. ‘ಸರ್ಕಾರ ತೆಗೆಯುವವರೆಗೆ ವಿರಮಿಸುವುದಿಲ್ಲ’ ಎಂದು ದೇವೇಗೌಡರು ಹೇಳಿದ್ದರೆ, ಅವರ ಮಗ, ಕೇಂದ್ರ ಸಚಿವರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ, 2028ರೊಳಗೆ ತಾನು ಮುಖ್ಯಮಂತ್ರಿಯಾಗುವೆ ಎಂಬ ಮಾತನ್ನು ಆಡಿದ್ದುಂಟು. ಎಲ್ಲದಕ್ಕೂ ಮಿಗಿಲಾಗಿ, ರಾಜಕೀಯ ಪಕ್ಷಗಳ ಮೊಗಸಾಲೆಯೊಳಗೆ ಕಿವಿಯಾನಿಸಿದರೆ ಸರ್ಕಾರದ ಕಂಪನಕ್ಕೆ ಯತ್ನಗಳು ನಡೆಯುತ್ತಿರುವ ಸಾಕ್ಷ್ಯಗಳು ಸಿಗುತ್ತವೆ. ಹಿಂದೆ, ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬೀಳಿಸಲು ತಂತ್ರಗಾರಿಕೆ ಹೆಣೆದಿದ್ದ ಪ್ರಭಾವಿ ಕೇಂದ್ರ ಸಚಿವರೇ ಈಗಲೂ ಸೂತ್ರಧಾರಿ. ದೆಹಲಿಯ ಅವರ ಕಚೇರಿಯಿಂದಲೇ, ಕಾಂಗ್ರೆಸ್ ಶಾಸಕರಿಗೆ ಕರೆಗಳು ಬರುತ್ತಿದ್ದು, ‘ನಂ.2’ಗೆ ನಿಮ್ಮನ್ನು ಭೇಟಿ ಮಾಡಿಸುತ್ತೇವೆ’ ಎಂಬ ಸಂದೇಶಗಳು ರವಾನೆಯಾಗುತ್ತಿವೆ ಎಂಬ ಮಾಹಿತಿಗಳಿವೆ.
ಇದಕ್ಕೆ ಭಿನ್ನವಾಗಿ ಪ್ರತಿಕ್ರಿಯಿಸುತ್ತಿರುವ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ವಿಜಯೇಂದ್ರ, ‘₹50 ಕೋಟಿ ಆಮಿಷದ ಬಗ್ಗೆ ತನಿಖೆಗೆ ಆದೇಶಿಸಲಿ’ ಎಂದು ಸವಾಲು ಎಸೆದಿದ್ದಾರೆ. ಆದರೆ, ಹಿಂದೆ ಆಪರೇಷನ್ ಕಮಲ ನಡೆಸಿದ ಫಲವಾಗಿ ತಮ್ಮ ತಂದೆ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದನ್ನು ಮರೆತೇಬಿಟ್ಟಿದ್ದಾರೆ. ಬಿಜೆಪಿಯ ‘ಗರ್ಭಗುಡಿ’ಯ ನಿಖರ ಮಾಹಿತಿ ಪ್ರಕಾರ, ಸರ್ಕಾರ ತೆಗೆಯುವ ಯತ್ನಕ್ಕೆ ಚಾಲನೆ ಸಿಕ್ಕಿ ಆರು ತಿಂಗಳೇ ಕಳೆದಿದೆ. ಹೊಸ ಸರ್ಕಾರ ರಚನೆಯಾದರೆ, ಅದರಲ್ಲಿ ವಿಜಯೇಂದ್ರ ಇರಕೂಡದು ಎಂಬ ಷರತ್ತಿಗೆ ಒಳಪಟ್ಟು ಈ ಕಾರ್ಯಾಚರಣೆಗೆ ನೆರವು ನೀಡುತ್ತಿರುವ ಗುಂಪು, ಕಾಂಗ್ರೆಸ್ ಶಾಸಕರ ಸಂಪರ್ಕದಲ್ಲಿದೆ. 25 ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬೀಳಿಸಲು ಕನಿಷ್ಠ 70 ಶಾಸಕರಾದರೂ ಕಾಂಗ್ರೆಸ್ ತೊರೆದು, ಹೊರಬರಬೇಕು. ಇಲ್ಲವೆಂದರೆ ಮೂರನೇ ಎರಡರಷ್ಟು ಶಾಸಕರು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಬೇಕು. ಅಷ್ಟು ಸಂಖ್ಯೆ ಕೂಡಿ ಬರದೇ ಇರುವುದರಿಂದ ಆಪರೇಷನ್‌ಗೆ ಹಿನ್ನಡೆಯಾಗಿದೆ. ತಮ್ಮನ್ನು ಹೊರಗಿಟ್ಟು ನಡೆಸುತ್ತಿರುವ ಕಾರಣಕ್ಕೆ, ಆಪರೇಷನ್ ಕಮಲದ ಬಗ್ಗೆ ತನಿಖೆ ನಡೆಸಿ ಎಂದು ವಿಜಯೇಂದ್ರ ಅವರು ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ ಎಂಬ ಮಾತುಗಳೂ ಪಕ್ಷದೊಳಗೆ ಇವೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಮತ್ತೆ ಗೆದ್ದು ಅಧಿಕಾರ ಹಿಡಿದರೆ, ಕರ್ನಾಟಕದಲ್ಲಿ ‘ಆಪರೇಷನ್’ಗೆ ಚುರುಕು ಸಿಗಲಿದೆ. ಹಿಂದುಳಿದ ಸಮುದಾಯದ ಪ್ರಭಾವಿ ನಾಯಕರೊಬ್ಬರ ನೇತೃತ್ವದಲ್ಲೇ ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುವ ಯತ್ನ ನಿರಂತರವಾಗಿ ನಡೆದಿದೆ. ಅದಕ್ಕೆ ಪರ್ಯಾಯ ತಂತ್ರ ಹೆಣೆದಿರುವ ಕಾಂಗ್ರೆಸ್ ನಾಯಕರು, ಎದುರಾಳಿಗಳ ಬಲವನ್ನೇ ನಿಸ್ಸತ್ವಗೊಳಿಸುವ ತಯಾರಿಯಲ್ಲಿದ್ದಾರೆ. ಬಿಜೆಪಿ–ಜೆಡಿಎಸ್ ಶಾಸಕರಿಗೆ ‘ಆಪರೇಷನ್’ ನಡೆಸುವ ತಯಾರಿಯೂ ಜೋರಾಗಿಯೇ ನಡೆದಿದೆ. ಮಹಾರಾಷ್ಟ್ರ ಫಲಿತಾಂಶದ ಮೇಲೆ ಎಲ್ಲವೂ ನಿಂತಿದೆ.
ಕರ್ನಾಟಕದಲ್ಲಿ 2008ರಲ್ಲಿ ಯಡಿಯೂರಪ್ಪ ಶುರು ಮಾಡಿದ ‘ಆಪರೇಷನ್ ಕಮಲ’ ತಂತ್ರವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಹಲವು ರಾಜ್ಯಗಳಲ್ಲಿ ಬಳಸಿ ಯಶಸ್ವಿಯಾಗಿದ್ದಾರೆ. ಬಹುಕೋಟಿ ಹಣ ಸುರಿದು, ಹೀಗೆ ಹೀನ ಮಾರ್ಗದಲ್ಲಿ ಸರ್ಕಾರ ಬೀಳಿಸುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೌರವಯುತ ನಡೆಯಲ್ಲ. ಹಾಗಂತ, ಈಗಿನ ಕಾಂಗ್ರೆಸ್ ಸರ್ಕಾರ ಜನಪರವಾದ ಉತ್ತಮ ಪರಂಪರೆಯನ್ನು ಮುಂದುವರಿಸಿಲ್ಲ. ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು, ಅಭಿವೃದ್ಧಿ ಶೂನ್ಯತೆ ಎದ್ದು ಕಾಣಿಸುತ್ತಿದೆ. ಸರ್ಕಾರ ಬೀಳುತ್ತದೆ; ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಹೇಳಿಕೆಗಳು ಸ್ಥಿರ ಸರ್ಕಾರಕ್ಕೆ ಗಾಸಿ ಮಾಡುತ್ತವೆ. ಅಸ್ಥಿರ ಸ್ಥಿತಿಯಲ್ಲಿ ಸರ್ಕಾರ ಇದ್ದಾಗ, ಅಧಿಕಾರಿಗಳು ನಿಷ್ಕ್ರಿಯರಾಗುತ್ತಾರೆ. ಇಂತಹ ಹೊತ್ತಿನಲ್ಲಿ, ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪಿಸಿ, ಮತದಾರರನ್ನು ಜಾಗೃತಗೊಳಿಸುವುದು ವಿರೋಧ ಪಕ್ಷದ ನೈಜ ಕರ್ತವ್ಯ. ಅಧಿಕಾರಾರೂಢ ಪಕ್ಷವಾಗಿದ್ದ ಬಿಜೆಪಿಯನ್ನು 66ಕ್ಕೆ ಇಳಿಸಿದ ರಾಜ್ಯದ ಮತದಾರರು, ಅವರಿಗೂ ಜವಾಬ್ದಾರಿ ಕೊಟ್ಟಿದ್ದಾರೆ. ಸರ್ಕಾರ ಬೀಳಿಸುವ ಕೆಲಸ ಮಾಡುವುದರ ಬದಲು, ಸರ್ಕಾರದ ವಿರುದ್ಧ ಜನಜಾಗೃತಿಗೆ ಪ್ರಾಮಾಣಿಕವಾಗಿ ಶ್ರಮಿಸಿದರೆ ಚಿನ್ನದ ತಟ್ಟೆಯಲ್ಲಿಟ್ಟೇ ಅಧಿಕಾರ ನೀಡುವಷ್ಟು ಜಾಣ್ಮೆ ಕನ್ನಡಿಗರಿಗೆ ಇದೆ.
ಒಂದು ಕಡೆ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ವರಿಷ್ಠರ ಪಡೆ ತಂತ್ರ ಹೊಸೆಯುತ್ತಿದ್ದರೆ, ಆ ಪಕ್ಷದೊಳಗೆ ವರಿಷ್ಠರ ಕೃಪಾಶೀರ್ವಾದ ಇರುವ ಭಿನ್ನರ ಗುಂಪು, ವಿಜಯೇಂದ್ರ ‘ಆಪರೇಷನ್’ಗೆ ಖೆಡ್ಡಾ ತೋಡಿದೆ. ಯಾರು ಯಾರನ್ನು ಹಣಿಯಲಿದ್ದಾರೆ, ಯಾರು ಯಾರಿಗೆ ಶತ್ರು–ಮಿತ್ರರಾಗಲಿದ್ದಾರೆ ಎಂಬ ರಾಜಕೀಯ ಕುತೂಹಲ ತಣಿಯಬೇಕಾದರೆ ಮಹಾರಾಷ್ಟ್ರ ಫಲಿತಾಂಶ ಹೊರಬೀಳಬೇಕಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.