ADVERTISEMENT

ಗತಿಬಿಂಬ | ಒಳಜಗಳ: ಮುದುಡಿದ ‘ಕಮಲ’

ಸರ್ಕಾರ ಮಣಿಸುವ ಪ್ರತಿಪಕ್ಷಗಳ ಆಸೆ ಭಗ್ನ, ‘ಉತ್ತರಾಸ್ತ್ರ’ ಬಳಸಿದ ಕಾಂಗ್ರೆಸ್‌

ವೈ.ಗ.ಜಗದೀಶ್‌
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
   

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಂಗೆಟ್ಟು, ಕಮರಿ ಕುಳಿತಿದ್ದ ಬಿಜೆಪಿ ರಾಜ್ಯ ಘಟಕಕ್ಕೆ ಹೊಸ ಸಾರಥಿ, ವಿಧಾನಸಭೆಗೆ ವಿರೋಧ ಪಕ್ಷದ ನಾಯಕ ಬಂದರೂ ಪಕ್ಷ ಸಾವರಿಸಿಕೊಂಡು ಮೇಲೆದ್ದಿಲ್ಲ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಹಲವು ಆರೋಪಗಳನ್ನು ಎದುರಿಸಬೇಕಾಯಿತು. ಇದನ್ನು ಹೋರಾಟದ ಅಸ್ತ್ರವಾಗಿ ಬಳಸಿ, ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡಬಹುದಾದ ಅವಕಾಶವನ್ನು ಬೆಳಗಾವಿಯಲ್ಲಿ 10 ದಿನ ನಡೆದ ಅಧಿವೇಶನ ಕಲ್ಪಿಸಿತ್ತು. ನಾಯಕರ ನಡುವಿನ ಪ್ರತಿಷ್ಠೆ, ಆಂತರಿಕ ಜಗಳವು ಪಕ್ಷವನ್ನು ನಲುಗಿಸಿತು. ಸರ್ಕಾರವನ್ನು ಕಟ್ಟಿಹಾಕುವುದು ಹೋಗಲಿ, ಆಂತರಿಕ ಸಂಘರ್ಷದ ಚಕ್ರವ್ಯೂಹದಿಂದ ಹೊರಬರಲಾಗದೆ, ಮುಖಭಂಗವನ್ನೂ ಬಿಜೆಪಿ ಅನುಭವಿಸಿತು.

ಎನ್‌ಡಿಎ ಮೈತ್ರಿಕೂಟದ ಜತೆಗೆ ಗುರುತಿಸಿಕೊಂಡಿರುವ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಅಧಿವೇಶನಕ್ಕೆ ಮುನ್ನವೇ ಕೆಲ ಮಾಹಿತಿ ಹೊರಹಾಕಿದ್ದ ಅವರು, ‘ದಾಖಲೆ– ವಿಡಿಯೊಗಳನ್ನು ಕಲಾಪದಲ್ಲಿ ಬಿಡುಗಡೆ ಮಾಡುವೆ. ಒಂದು ವಿಕೆಟ್ ಪತನ ಖಚಿತ’ ಎಂದಿದ್ದರು. ಕುಮಾರಸ್ವಾಮಿ ಸದನದಲ್ಲಿ ಹಲವು ದಿನ ಕುಳಿತರೇ ವಿನಾ ತಮ್ಮ ಬುಟ್ಟಿಯಿಂದ ಯಾವ ಹಾವನ್ನೂ ಬಿಡಲಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ ಮತ್ತು ಕುಮಾರಸ್ವಾಮಿ ರಹಸ್ಯ ಮಾತುಕತೆ ನಡೆಸಿದರೂ ಸರ್ಕಾರದ ವಿರುದ್ಧದ ಆರೋಪಗಳ ಹಿಂದಿರುವ ಸತ್ಯವನ್ನು ಬಯಲು ಮಾಡಲು ಆಗಲೇ ಇಲ್ಲ. ಈ ಮಟ್ಟಿಗೆ ವಿರೋಧ ಪಕ್ಷಗಳು ಕೈಸೋತು ಕುಳಿತಿದ್ದು, ಬೆಳಗಾವಿ ಅಧಿವೇಶನದ ಇತಿಹಾಸದಲ್ಲಿ ಮೊದಲೆನ್ನಬಹುದು.

‘ನಮ್ಮ ಸಂಖ್ಯಾಬಲ ಕಡಿಮೆ ಇದೆ. ಕಾಂಗ್ರೆಸ್‌ನವರು 135 ಜನ ಇರುವುದರಿಂದ ಏನೂ ಮಾಡಲಾಗದು’ ಎಂದು ಬಿಜೆಪಿಯ  ಶಾಸಕರೊಬ್ಬರು ಮೊಗಸಾಲೆಯಲ್ಲಿ ಹೇಳಿಕೊಂಡಿದ್ದುಂಟು. 2013ರಲ್ಲಿ ಬಿಜೆಪಿ 40, ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ 6 ಸದಸ್ಯರ ಬಲ ಹೊಂದಿದ್ದವು. ಆಗಲೂ ಸಿದ್ದರಾಮಯ್ಯ ಅವರೇ
ಮುಖ್ಯಮಂತ್ರಿಯಾಗಿದ್ದರು. ಆರೇ ಜನರನ್ನು ಬೆನ್ನಿಗಿಟ್ಟುಕೊಂಡಿದ್ದ ಯಡಿಯೂರಪ್ಪ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ನಡುಗಿಸಿದ್ದರು. ಆಗ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ. ಸಂಖ್ಯಾಬಲವನ್ನು ಲೆಕ್ಕಿಸದೇ ಮುನ್ನುಗ್ಗುವ, ಆಡಳಿತ ಪಕ್ಷದ ಸದಸ್ಯರೂ ತಲೆದೂಗುವ ರೀತಿಯಲ್ಲಿ ನಾಯಕತ್ವದ ಗುಣವನ್ನು ಯಡಿಯೂರಪ್ಪ ಪ್ರದರ್ಶಿಸಿದ್ದರು. ಆ ರೀತಿಯ ನಾಯಕತ್ವ ಗುಣವಿದ್ದರೆ ಸರ್ಕಾರವನ್ನು ಹಣ್ಣುಗಾಯಿ ಮಾಡುವುದು ಕಷ್ಟವೇನಲ್ಲ.

ADVERTISEMENT

ಅಧ್ಯಕ್ಷರ ನೇಮಕ, ವಿರೋಧ ಪಕ್ಷದ ನಾಯಕನ ಆಯ್ಕೆ ಬಗೆಗೆ ಪಕ್ಷದ ಕೆಲವು ಸದಸ್ಯರು ಆಕ್ಷೇಪ ಹೊರಹಾಕಿದ್ದರು. ಸ್ವಪಕ್ಷೀಯರನ್ನು ಸಂಭಾಳಿಸಿ, ಸಮನ್ವಯ ಸಾಧಿಸಿಕೊಂಡು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಚಾಕಚಕ್ಯತೆಯನ್ನು ನಾಯಕ ತೋರಲಿಲ್ಲ. ಸರ್ಕಾರ ನಡೆಸುವಾಗ ಧರ್ಮದ ಹೆಸರಿನಲ್ಲಿ ಧ್ರುವೀಕರಣದ ರಾಜಕಾರಣ– ನೀತಿಗಳಿಗೆ ಜೋತುಬಿದ್ದ ಪರಿಣಾಮವಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತು. ಕೋಮುವಾದಿ ಅಸ್ತ್ರ ಫಲ ಕೊಟ್ಟಿಲ್ಲ ಎಂಬುದರ ಅರಿವಿದ್ದರೂ ಅಧಿವೇಶನದಲ್ಲೂ ಅದೇ ಅಸ್ತ್ರಕ್ಕೆ ಜೋತುಬಿದ್ದದ್ದು ಮುಳುವಾಯಿತು.

‘ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ₹ 10 ಸಾವಿರ ಕೋಟಿ ಅನುದಾನ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದನ್ನು ದೊಡ್ಡ ವಿವಾದವಾಗಿಸುವ ಯತ್ನ ಮಾಡಿತು. ಸಭಾಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡಿದ್ದರ ಕುರಿತು ಸಚಿವ ಜಮೀರ್ ಅಹಮದ್ ಖಾನ್ ತೆಲಂಗಾಣದಲ್ಲಿ ನೀಡಿದ ಹೇಳಿಕೆ ಮುಂದಿಟ್ಟು ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸಿತು. ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಮಧ್ಯದ ವೈಯಕ್ತಿಕ ಜಗಳ, ಹಲ್ಲೆಯನ್ನು ಮುಂದಿಟ್ಟು ನಡೆಸಿದ ಧರಣಿ ಕೂಡ ಕಲಾಪಕ್ಕೆ ತೊಡಕು ಉಂಟುಮಾಡಿತು. ಬಿಜೆಪಿ ಸಿದ್ಧಾಂತದ ವಿಷಯದಲ್ಲಿ ಈ ಹಲ್ಲೆ ನಡೆದಿದ್ದರೆ, ಪಕ್ಷದ ಹೋರಾಟಕ್ಕೆ ಸಮರ್ಥನೆಯಾದರೂ ಇರುತ್ತಿತ್ತು. ಅದ್ಯಾವುದೂ ಇಲ್ಲದೇ ಕದನಕ್ಕೆ ಇಳಿದಿದ್ದು ವ್ಯರ್ಥಪ್ರಯತ್ನವಾಗಿಬಿಟ್ಟಿತು. 

ನಾಡು ಅನುಭವಿಸುತ್ತಿರುವ ಸಂಕಟಗಳಿಗೆ ಶಾಸನಸಭೆಯು ಧ್ವನಿಯಾಗಬೇಕು. ಜನವಿರೋಧಿ ಶಾಸನಗಳನ್ನು ಸರ್ಕಾರ ಸದನದಲ್ಲಿ ಮಂಡಿಸಿದಾಗ, ಅದರ ಹುಳುಕುಗಳನ್ನು ತೆರೆದಿಡುವುದೇ ಕಲಾಪದ ಆದ್ಯತೆಯಾಗಬೇಕು. ಅಧಿವೇಶನದಲ್ಲಿ ಅನೇಕ ಮಸೂದೆಗಳನ್ನು ಮಂಡಿಸಿದ ಸರ್ಕಾರ, ಗಲಾಟೆ ಮಧ್ಯೆಯೇ ಒಪ್ಪಿಗೆ ಪಡೆಯಿತು. ಕೆಲಸಕ್ಕೆ ಬಾರದ ಸಂಗತಿಗಳೇ ಪ್ರಧಾನ ಆಸಕ್ತಿಯಾಗಿ ಮುನ್ನೆಲೆಗೆ ಬಂದವು. ಇದನ್ನು ಗಮನಿಸಿದವರಲ್ಲಿ ಕೆಲವರಿಗಾದರೂ ವಿರೋಧ ಪಕ್ಷಗಳಿಗೆ ಶಾಸನಸಭೆಯ ಜವಾಬ್ದಾರಿಯೇ ಮರೆತುಹೋದಂತಿದೆ ಎಂದು ಅನ್ನಿಸಿರಬಹುದು.

ಸದನದಲ್ಲಿ ಆಯಾ ಪಕ್ಷಗಳ ಶಾಸಕರಿಗೆ ಮಾರ್ಗ ದರ್ಶನ ಮಾಡುತ್ತಾ, ಚರ್ಚೆಗೆ ದಿಕ್ಕು ತೋರಿಸುವುದು ನಾಯಕನ ಜವಾಬ್ದಾರಿ. ಅಶೋಕ ಆಯ್ಕೆಗೆ ಆರಂಭ ದಿಂದಲೇ ಮೂಡಿದ ಅಪಸ್ವರ, ಸದನದೊಳಗೆ ವಿಕಾರ ರೂಪದಲ್ಲಿ ಪ್ರದರ್ಶನಗೊಂಡಿತು. ಅಧ್ಯಕ್ಷ, ನಾಯಕನ ಬಗ್ಗೆ ಕಿಡಿಕಾರಿದ್ದ ಬಸನಗೌಡ ಪಾಟೀಲ ಯತ್ನಾಳ, ಪ್ರತಿದಿನವೂ ಸದನದ ಒಳಗೆ, ಹೊರಗೆ ಅವರನ್ನು ಟೀಕಿಸುತ್ತಲೇ ಪಕ್ಷವನ್ನು ಮುಜುಗರಕ್ಕೆ ದೂಡಿದರು. ಬಿ.ವೈ.ವಿಜಯೇಂದ್ರ ಬಣ, ವಿ.ಸುನಿಲ್ ಕುಮಾರ್‌ರ ಕರಾವಳಿ ಬಣ, ಸಿ.ಎನ್.ಅಶ್ವತ್ಥನಾರಾಯಣ ಅವರ ಬೆಂಗಳೂರು ಬಣ, ಯಾರ ಬಣದ ಜತೆಗೂ ಗುರುತಿಸಿಕೊಳ್ಳದ ಇನ್ನಷ್ಟು ಶಾಸಕರು... ಹೀಗೆ ಪ್ರತ್ಯೇಕ ಬಣಗಳು ಬಿಜೆಪಿ ಮುರಿದ ಮನೆಯಾಗಿರುವುದನ್ನು ತೋರಿಸಿದವು. ಸಾಲದ್ದಕ್ಕೆ, ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಎಸ್‌.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಧರಣಿಯಲ್ಲಿ ಪಾಲ್ಗೊಳ್ಳದೆ, ಭಿನ್ನ ನಿಲುವು ತಾಳಿದರು.

ಅಶೋಕ ಗಮನಕ್ಕೆ ಬಾರದೇ ವಿಜಯೇಂದ್ರ, ಸುನಿಲ್‌ ಕುಮಾರ್ ಪ್ರತ್ಯೇಕವಾಗಿ ಸಭಾಧ್ಯಕ್ಷರ ಪೀಠದ ಎದುರಿನ ಧರಣಿಗೆ ನಾಯಕತ್ವ ವಹಿಸಿದರು. ಯತ್ನಾಳರು ಒಮ್ಮೆ ಸಭಾತ್ಯಾಗ ಮಾಡಿಸಿದರು. ಚನ್ನರಾಜ ಹಟ್ಟಿಹೊಳಿ ಪ್ರಕರಣದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಹಟಕ್ಕೆ ಬಿದ್ದಂತಿದ್ದ ವಿಜಯೇಂದ್ರ, ಧರಣಿಗೆ ತಮ್ಮ ಶಾಸಕರನ್ನು ಹುರಿದುಂಬಿಸಿದ್ದರು. ಕೆಲವರು ಧರಣಿ ಕಡೆಗೆ ಹೊರಟರೆ, ಅಶೋಕ ಸಭಾತ್ಯಾಗ ಮಾಡಿಸಿದರು. ಬೆಂಗಳೂರಿನ ಎಸ್.ಆರ್.ವಿಶ್ವನಾಥ್ ಎಲ್ಲರ ಎದುರೇ ಅವಾಚ್ಯ ಶಬ್ದಗಳಿಂದ ತಮ್ಮ ನಾಯಕನನ್ನೇ ನಿಂದಿಸಿದ್ದು, ಪಕ್ಷದೊಳಗಿನ ವೈಮನಸ್ಸು ಪ್ರಬಲವಾಗಿರುವುದನ್ನು ತೆರೆದಿಟ್ಟಿತು.

ಇದನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್‌, ಎದುರಾಳಿಗಳನ್ನು ಕಟ್ಟಿಹಾಕಿತು. ಜಮೀರ್ ಅಹಮದ್ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸುವ ಸಲಹೆಯನ್ನು ಬೆಂಗಳೂರಿನ ಹಿರಿಯ ಶಾಸಕರೊಬ್ಬರು ಅಶೋಕಗೆ ನೀಡಿದರು. ‘ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಬಿಜೆಪಿಗೆ ಆಸಕ್ತಿ ಇಲ್ಲ’ ಎಂಬ ಪ್ರತ್ಯಸ್ತ್ರ ಬಳಸಿದ ಕಾಂಗ್ರೆಸ್‌, ಎದುರಾಳಿಗಳ ಮಗ್ಗುಲು ಮುರಿಯಿತು. ವಿರೋಧ ಪಕ್ಷದ ಸದಸ್ಯರು ಧರಣಿನಿರತರಾಗಿರುವಾಗಲೇ ಸಭಾಧ್ಯಕ್ಷರು ಕಲಾಪ ನಡೆಸಿದರು. ಆರಂಭದಲ್ಲಿ ಉಗ್ರ ಘೋಷಣೆಗಳನ್ನು ಕೂಗಿದ ಬಿಜೆಪಿ ಸದಸ್ಯರು ಆಮೇಲೆ ಮೌನಕ್ಕೆ ಶರಣರಾದರು. ಸುಮಾರು ಐದು ಗಂಟೆ ನಿಂತೇ ಕಾಲ ಕಳೆದ ಬಿಜೆಪಿ ಸದಸ್ಯರು ಕೊನೆಗೆ ಹತಾಶೆಗೆ ತುತ್ತಾಗಿದ್ದರು.

‘ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ನಾವು ಗೆದ್ದಂತಾಗುತ್ತದೆ’ ಎಂದು ‘ಸಂಧಾನ ಸೂತ್ರ’ವನ್ನು ಬಿಜೆಪಿ ಮುಂದಿಟ್ಟರೂ ಸಭಾಧ್ಯಕ್ಷರು ಒಪ್ಪಲಿಲ್ಲ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಹಿರಿಯರೊಬ್ಬರ ಸಲಹೆಯನ್ನು ಪಾಲಿಸಿದ್ದು ವಿರೋಧ ಪಕ್ಷದ ಸದಸ್ಯರನ್ನು ಕಂಗೆಡಿಸಿತು. ಅಲ್ಲಿಯೂ ಸೋತು, ಕೊನೆಗೆ ಧರಣಿ ವಾಪಸ್ ‍ಪಡೆಯಬೇಕಾದ ಸ್ಥಿತಿಗೆ ಬಿಜೆಪಿ ತಲುಪಿತು.

ಸರ್ಕಾರದ ಲೋಪದೋಷಗಳನ್ನು ಬಯಲುಗೊಳಿಸುವ ಉಮೇದಿನಿಂದ ಬೆಳಗಾವಿಗೆ ದೌಡಾಯಿಸಿದ್ದ ಬಿಜೆಪಿಯನ್ನು ತನ್ನೊಡಲ ಕಿಚ್ಚೇ ಸುಟ್ಟಿತು. ವರ್ಗಾವಣೆಯಲ್ಲಿ ಭ್ರಷ್ಟಾಚಾರ, ಬಿಬಿಎಂಪಿ ಹಾಗೂ ಕೆಲವು ಇಲಾಖೆಗಳಲ್ಲಿನ ಬಿಲ್ ಪಾವತಿಗೆ ಕಮಿಷನ್‌, ಪ್ರಭಾವಿಗಳ ಮಕ್ಕಳ ಹಸ್ತಕ್ಷೇಪದಂತಹ ಗಂಭೀರ ಆರೋಪಗಳ ಕುರಿತು ಚರ್ಚಿಸುವ ಗೋಜಿಗೇ ಹೋಗದ ಪ್ರತಿಪಕ್ಷವು ಜನರ ಹಿತಾಸಕ್ತಿಯ ಪರ ಧ್ವನಿ ಎತ್ತುವಲ್ಲಿಯೂ ವಿಫಲವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.