ADVERTISEMENT

ಗತಿಬಿಂಬ: ಇನ್ನಾದರೂ ಸಿಗಲಿ ಪ್ರಗತಿಗೆ ಸ್ಪರ್ಶ

ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ವರ್ಷ: ‘ಗ್ಯಾರಂಟಿ‘ಯಾಚೆಗೆ ಬೇಕಿದೆ ಓಟ

ವೈ.ಗ.ಜಗದೀಶ್‌
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
   

ಆಡಳಿತವೆಂಬ ದೋಣಿಯನ್ನು ನಾಡಿನ ಜನ ಸಿದ್ದರಾಮಯ್ಯ ಅವರ ಕೈಗೆ ಕೊಟ್ಟು ಒಂದು ವರ್ಷ ದಾಟಿತು. ಅವರ ಜತೆಗೆ ದೋಣಿ ಏರಿದವರು ಮುಳುಗಿಲ್ಲ; ನೀರಿನಲ್ಲಿದ್ದವರು ಈಜಾಡುತ್ತಾ, ಮುಳುಗೇಳುತ್ತಲೇ ಇದ್ದಾರೆ ವಿನಾ ಅವರಿಗೆಲ್ಲ ದೋಣಿಯೇರಲು ಆಗಿಲ್ಲ. ಆಚೀಚೆಯ ದಡದಲ್ಲಿ ನಿಂತವರು ದೋಣಿ ತಮ್ಮತ್ತ ಬಂದು ನೆಮ್ಮದಿಯ ದಡವನ್ನು ಸೇರಿಸಬಹುದೆಂಬ ನಿರೀಕ್ಷೆಯಲ್ಲಿಯೇ ಕಾದಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಬೆಲೆ ಏರಿಕೆಯಂತಹ ಆರೋಪಗಳ ಸರಮಾಲೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ಕಾಂಗ್ರೆಸ್ ನಾಯಕರು, ಇವೆರಡಕ್ಕೂ ಕೊನೆಹಾಡುವ ಮಾತುಗಳನ್ನು ಆಡಿದ್ದುಂಟು. ‘ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ನೆರವಾಗಲು ‘ಗ್ಯಾರಂಟಿ’ಗಳನ್ನು ನೀಡುತ್ತೇವೆ’ ಎಂಬ ವಾಗ್ದಾನವನ್ನು ಬಹುಮಟ್ಟಿಗೆ ಈಡೇರಿಸಿದ್ದಾರೆ. ಆದರೆ, ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಏರಿಳಿತ, ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳ ಕಳ್ಳಾಟಗಳು ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ನಿರ್ಧರಿಸುತ್ತವೆ. ಹಾಗಾಗಿ, ಎಲ್ಲ ವಸ್ತುಗಳ ಬೆಲೆಗಳನ್ನೂ ರಾಜ್ಯ ಸರ್ಕಾರವೊಂದೇ ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ಸಾಧ್ಯವಾಗದು. ಕೇಂದ್ರ– ರಾಜ್ಯ ಸರ್ಕಾರಗಳು ಕೂಡಿ ಕೆಲಸ ಮಾಡಿದರಷ್ಟೇ ಸಾಧ್ಯ. ಆದರೆ, ಸ್ಥಳೀಯವಾಗಿ ಬೆಳೆಯುವ ಅಥವಾ ಉತ್ಪಾದನೆಯಾಗಿ ಮಾರುಕಟ್ಟೆ ಪ್ರವೇಶಿಸುವ ವಸ್ತುಗಳ ಬೆಲೆಯನ್ನು ಮಧ್ಯವರ್ತಿಗಳು, ವ್ಯಾಪಾರಿಗಳು ಹಾಗೂ ಕಾಳಸಂತೆಕೋರರ ಕೂಟವೇ ನಿರ್ಧರಿಸುತ್ತದೆ. ಇದನ್ನು ಹದ್ದುಬಸ್ತಿಗೆ ತರಲು ಆಹಾರ ಇಲಾಖೆ, ಕಾನೂನು ಮಾಪನ ಇಲಾಖೆಯ ಬಳಿ ಹಲವು ಅಸ್ತ್ರಗಳಿವೆ. ವ್ಯಾಪಾರಿಗಳಿಂದ ‘ಮಾಮೂಲು’ ದೋಚಲು ಈ ಇಲಾಖೆಗಳನ್ನು ಬಳಸಿಕೊಂಡಿದ್ದರಿಂದಾಗಿ ಜನರ ಹಿತಾಸಕ್ತಿಯನ್ನು ಕಾಪಾಡಲು ಆದ್ಯತೆಯೇ ಇಲ್ಲದಂತಾಗಿದೆ.

ADVERTISEMENT

ಬೆಲೆ ಏರಿಕೆಯಿಂದ ಈಗಲೂ ಬೇಯುತ್ತಲೇ ಇರುವ ಜನರಿಗೆ ಮತ್ತೊಂದು ಬರೆ ಹಾಕುವ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 3.02 ಹಾಗೂ ಡೀಸೆಲ್‌ ಬೆಲೆ ₹ 3ರಷ್ಟು ಹೆಚ್ಚಳವಾಗಿದೆ. ಇಂಧನ ದರ ಹೆಚ್ಚಳವಾದರೆ ಸರಕು ಸಾಗಣೆ ವೆಚ್ಚ ಏರಿಕೆಯಾಗುವುದರಿಂದ, ದಿನಬಳಕೆಯ ಎಲ್ಲ ವಸ್ತುಗಳ ಬೆಲೆಯೂ ಈಗಿರುವುದಕ್ಕಿಂತ ಹೆಚ್ಚಾಗಿ ಜೀವನ ವೆಚ್ಚ ಮತ್ತಷ್ಟು ದುಬಾರಿಯಾಗುತ್ತದೆ. ಖಾಸಗಿ ವಾಹನಗಳನ್ನು ಬಳಸುವವರಿಗೆ ಹೊರೆಯಾಗುತ್ತದೆ.

ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದ ಬೇಡಿಕೆಯನ್ನು ವಿವಿಧ ಸಾರಿಗೆ ನಿಗಮಗಳು ಮುಂದಿಡುತ್ತಲೇ ಬಂದಿವೆ. ಚುನಾವಣೆ ಕಾರಣದಿಂದಾಗಿ ಅದನ್ನು ಹೆಚ್ಚಳ ಮಾಡಿರಲಿಲ್ಲ. ಡೀಸೆಲ್ ದರ ಹೆಚ್ಚಿಸಿದ ಕಾರಣಕ್ಕೆ ಮತ್ತೆ ಅಂತಹ ಬೇಡಿಕೆ ಬಂದರೆ ಆ ದರ ಹೆಚ್ಚಿಸುವ ಅನಿವಾರ್ಯವೂ ಎದುರಾಗಲಿದೆ. ಹೀಗಾದಾಗ, ಬಸ್‌ ಪ್ರಯಾಣದರವೂ ತುಟ್ಟಿಯಾಗಲಿದೆ. ಬೆಲೆ ಏರಿಕೆಯ ದುರ್ದಿನಗಳು ತಂದ ತಾಪತ್ರಯದ ಜತೆಗೆ, ಈಗ ಪೆಟ್ರೋಲ್, ಡೀಸೆಲ್ ದರದ ಭಾರವೂ ಬೀಳಲಿದೆ. ದರ ಹೆಚ್ಚಿಸಿದ್ದರಿಂದ ವರ್ಷಕ್ಕೆ ಹೆಚ್ಚುವರಿಯಾಗಿ ₹ 3 ಸಾವಿರ ಕೋಟಿ ಸಿಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಂದಾಜಿಸಿದೆ. ವಾಣಿಜ್ಯ ತೆರಿಗೆಯ ಬಾಬ್ತಿನಿಂದ ₹ 1.10 ಲಕ್ಷ ಕೋಟಿ ಸಿಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಅಷ್ಟು ದೊಡ್ಡ ಮೊತ್ತಕ್ಕೆ ಇಂಧನ ತೆರಿಗೆ ಏರಿಸಿದ್ದರಿಂದಾಗಿ ಸಿಗುವ ಮೊತ್ತ ಅಂತಹ ದೊಡ್ಡದೇನಲ್ಲ. ಈ ಬಾರಿ ₹ 3.71 ಲಕ್ಷ ಕೋಟಿ ಮೊತ್ತದ ಬಜೆಟ್ ಸೇರಿ ಈವರೆಗೆ 15 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯನವರಿಗೆ ₹ 3 ಸಾವಿರ ಕೋಟಿಯನ್ನು ಹೆಚ್ಚುವರಿಯಾಗಿ ಹೊಂದಿಸುವುದೇನೂ ಕಷ್ಟವಲ್ಲ. ವಿವಿಧ ಇಲಾಖೆಗಳಲ್ಲಿ ನಿತ್ಯ ಆಗುತ್ತಿರುವ ಸೋರಿಕೆ ತಡೆ, ಅನಗತ್ಯ ವೆಚ್ಚಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದರೆ ಇಂಧನ ಬೆಲೆ ಏರಿಕೆಯಿಂದ ಲಭ್ಯವಾಗುವ ಮೊತ್ತಕ್ಕಿಂತ ಹೆಚ್ಚಿನ ಹಣವೇ ಸಿಕ್ಕೀತು. ಈ ವಿಷಯದಲ್ಲಿ ಮತ್ತೊಮ್ಮೆ ಯೋಚಿಸುವುದು ಒಳಿತು.

ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ, ಭಾರಿ ಭ್ರಷ್ಟಾಚಾರದ ಸರ್ಕಾರ ಎಂದು ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ದೊಡ್ಡ ಸದ್ದು ಮಾಡಿತ್ತು. ‘ಪೇ ಸಿಎಂ’ ಎಂಬ ವಿಶಿಷ್ಟ ಅಭಿಯಾನವನ್ನೂ ನಡೆಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ತೊಲಗಿ, ಉತ್ತಮ ಆಡಳಿತ ಬರುತ್ತದೆ ಎಂಬ ನಿರೀಕ್ಷೆಯೇನೂ ಇರಲಿಲ್ಲ. ಆದರೂ ಭ್ರಷ್ಟಾಚಾರಕ್ಕೆ ಮೂಗುದಾರ ಬಿದ್ದು, ಉತ್ತಮ ಆಡಳಿತ ಸಿಗಬಹುದೆಂಬ ಹಂಬಲದಲ್ಲಿ ಕಾಂಗ್ರೆಸ್‌ಗೆ ಜನ ಭಾರಿ ಬಹುಮತ ಕೊಟ್ಟರು. ಒಂದು ವರ್ಷದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯೇ ಎಂಬ ಪ್ರಶ್ನೆಗೆ ‘9’ ಧುತ್ತೆಂದು ಎದುರಾಗುತ್ತದೆ.

ಕಾಮಗಾರಿಗಳ ಟೆಂಡರ್‌ಗಳಲ್ಲಿ ಪಾರದರ್ಶಕತೆ ತಂದಂತೆ ಕಾಣದು. ಒಮ್ಮೆ ಶೇ 40ರ ಕಮಿಷನ್‌ವರೆಗೆ ಕೊಂಡೊಯ್ದ ಮೇಲೆ ಮತ್ತೆ ಹಿಂದಕ್ಕೆ ದಬ್ಬುವುದು ಸುಲಭದ ಕೆಲಸವಲ್ಲ. ಅದನ್ನು ಕಡಿಮೆ ಮಾಡಬೇಕೆಂಬ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಅದು ‘ಬೆಂಚ್ ಮಾರ್ಕ್‌’ ಆಗಿ ನಿಂತುಬಿಟ್ಟಿದೆ. ಗ್ಯಾರಂಟಿಗಳಿಗೆ ಸುಮಾರು ₹ 36 ಸಾವಿರ ಕೋಟಿ ವೆಚ್ಚ ಮಾಡಬೇಕಾಗಿದ್ದರಿಂದ ಸರ್ಕಾರ ಬೃಹತ್ ಗಾತ್ರದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಹೀಗಾಗಿ, ಟೆಂಡರ್‌ಗಳಲ್ಲಿನ ಕಮಿಷನ್ ಮೊತ್ತ ಎಷ್ಟೆಂದು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ.

ರಾಜಕಾರಣಿಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ತಾವು ಬಳಸುವ ಅಥವಾ ಖರೀದಿಸುವ ವಾಹನ ಸಂಖ್ಯೆ ‘9’ ಇರಬೇಕೆಂದು ಬಯಸುತ್ತಾರೆ. ಅದೃಷ್ಟ ಸಂಖ್ಯೆ ಎಂಬ ಹುಸಿ ನಂಬಿಕೆಯೇ ಇದಕ್ಕೆ ಕಾರಣ. ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ 9 ಹೆಚ್ಚು ಪ್ರಿಯವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಮಿಷನ್ ಕೊಟ್ಟು  ಕಾಮಗಾರಿಗಳ ಗುತ್ತಿಗೆ ಪಡೆದವರು, ಈಗ ಅಂತಿಮ ಬಿಲ್ ಮೊತ್ತ ಪಡೆಯಲು ಈ ‘9’ರಷ್ಟು ಕೊಟ್ಟರೆ ಮಾತ್ರ ಹಣ ಪಾವತಿಯಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಅಂದರೆ, ಬಿಜೆಪಿಯವರ ವಿರುದ್ಧ ಶೇ 40 ಕಮಿಷನ್ ಆಪಾದನೆ ಮಾಡುತ್ತಿದ್ದವರು, ಈಗ ಅದಕ್ಕೆ 9 ಸೇರಿಸಿಕೊಂಡಿದ್ದಾರೆ ಎಂದು ವಿಧಾನಸೌಧದ ಗೋಡೆಗಳೇ ಗುನುಗುತ್ತವೆ. ಸರ್ಕಾರಿ ಕಚೇರಿಗಳಲ್ಲಿ ಕೂಡ ಲಂಚದ ಪ್ರಮಾಣವೇನೂ ಕಡಿಮೆಯಾಗಿಲ್ಲ.

ಸರ್ಕಾರಕ್ಕೆ ಒಂದು ವರ್ಷ ಕಳೆಯುವ ಹೊತ್ತಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ₹ 187 ಕೋಟಿ ನಾಪತ್ತೆಯಾಗಿರುವ ಸುದ್ದಿ ಹೊರಬಿದ್ದಿತು. ಲೆಕ್ಕಾಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈ ಹಗರಣ ಬಯಲಿಗೆ ಬಂತು. ವಾಲ್ಮೀಕಿ ಸಮುದಾಯದವರ ಅಭಿವೃದ್ಧಿಗೆ ಇದ್ದ ಹಣವನ್ನೇ ಹೀಗೆ ಬೇರೆಲ್ಲೋ ವರ್ಗಾಯಿಸಿ, ಅದನ್ನು ಖಾಸಗಿಯವರ ಖಾತೆಗಳಿಗೆ ಹಾಕಿ, ಚಿನ್ನ– ಮದ್ಯದ ಅಂಗಡಿಗಳಿಗೆ ತಲುಪಿಸಲಾಗಿದೆ. ಅಲ್ಲಿಂದ ಅದು ಪ್ರಭಾವಿಗಳ ಕೈಸೇರಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಹಾಗಂತ, ಇದು ಹೊಸ ಹಗರಣವೇನೂ ಅಲ್ಲ. ಲಾಗಾಯ್ತಿನಿಂದಲೂ ವಿವಿಧ ನಿಗಮಗಳ ಹಣವನ್ನು ಹೀಗೆ ವರ್ಗಾಯಿಸಿ ಲಪಟಾಯಿಸುವುದು ನಡೆದೇ ಇದೆ. ಆಗೊಮ್ಮೆ ಈಗೊಮ್ಮೆ ಬಯಲಿಗೆ ಬಂದರೂ ಅದನ್ನು ಮುಚ್ಚಿ ಹಾಕುತ್ತಲೇ ಬರಲಾಗಿದೆ. ಇಲ್ಲವೇ, ಹಣ ಇದೆಯೆಂದು ಅಥವಾ ಖರ್ಚು ಮಾಡಲಾಗಿದೆ ಎಂದು ಕಳ್ಳ ಲೆಕ್ಕ ತೋರಿಸಿ ಚುಕ್ತಾ ಮಾಡಿದ್ದೂ ಇದೆ. ಏನೇ ಇದ್ದರೂ ಈ ಹಗರಣ ಸರ್ಕಾರಕ್ಕೆ ಕಪ್ಪುಚುಕ್ಕೆಯೇ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ, ಇಂತಹ ಪ್ರಕರಣಗಳು ಸರ್ಕಾರಕ್ಕೆ ಮುಜುಗರ ತರುವುದಂತೂ ಖಚಿತ.

‘ಗ್ಯಾರಂಟಿ’ಗಳನ್ನೇ ಮುಂದಿಟ್ಟು, ಸಾಧನೆ ಮಾಡಿದ್ದೇವೆ ಎಂದು ಹೇಳುವ ಕಾಲ ಮುಗಿಯಿತು. ಚುನಾವಣೆಗಳೂ ಮುಗಿದವು. ಇನ್ನಾದರೂ ರಾಜ್ಯದ ಪ್ರಗತಿಗೆ ತಕ್ಕ ರೂಪುರೇಷೆ ಸಿದ್ಧ ಮಾಡಬೇಕು. ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸುವ ಕೆಲಸವೂ ಆಗಬೇಕು. ಸಾಮಾಜಿಕ ನ್ಯಾಯವೆಂದರೆ ಸಂಗ್ರಹಿತ ಸಂಪನ್ಮೂಲವನ್ನು ಎಲ್ಲರಿಗೂ ಹಂಚುವುದಲ್ಲ. 100 ಎಕರೆ ಜಮೀನಿರುವ, ಹತ್ತಾರು ಮನೆಗಳಿಂದ ಬಾಡಿಗೆ ಬರುವ ಮನೆಯ ಯಜಮಾನಿಗೂ ಜಮೀನಿನಲ್ಲಿ ಕಳೆ ತೆಗೆಯುವ, ಮನೆಯ ಮುಸುರೆ ತಿಕ್ಕುವ ಮಹಿಳೆಗೂ ₹ 2 ಸಾವಿರ ಕೊಡುವುದು ಸರಿಯಾದುದಲ್ಲ. ಶ್ರೀಮಂತರು, ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಅನ್ನಭಾಗ್ಯದ ಸೌಲಭ್ಯ ಪಡೆಯುತ್ತಿದ್ದಾರೆ. ಅನರ್ಹರನ್ನು ಈ ಪಟ್ಟಿಯಿಂದ ಹೊರತೆಗೆದರೆ ನಿಜವಾದ ಬಡವರಿಗೆ ಭಾಗ್ಯದ ಫಲ ಸಿಗಲಿದೆ.

‘ಗ್ಯಾರಂಟಿ’ ಹೆಸರಿನಲ್ಲಿ ಆಗುತ್ತಿರುವ ಸೋರಿಕೆ ತಡೆಯುವ ಜತೆಗೆ, ನೇರ್ಪುಗೊಳಿಸಿದರೆ ಸಂಪನ್ಮೂಲವೂ ಉಳಿಯುತ್ತದೆ. ಗ್ಯಾರಂಟಿಗಳು ನೆಮ್ಮದಿ ಕೊಡಬಹುದೇ ವಿನಾ ದೀರ್ಘಕಾಲಕ್ಕೆ ಪರಿಹಾರಗಳಲ್ಲ. ನೀರಾವರಿ, ಕೈಗಾರಿಕೆ, ಮೂಲಸೌಕರ್ಯಕ್ಕೆ ಆದ್ಯತೆ ಕೊಟ್ಟರೆ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರಗತಿಗೂ ದಾರಿಯಾಗುತ್ತದೆ. ಸಿದ್ದರಾಮಯ್ಯನವರು ಒಂದು ಬಾರಿ ಪೂರ್ಣಾವಧಿ ಮುಖ್ಯಮಂತ್ರಿಯಾದ ಬಳಿಕ, ಮತ್ತೊಂದು ಅವಧಿಯಲ್ಲಿ ಒಂದು ವರ್ಷ ಪೂರೈಸಿ, ಆಡಳಿತದಲ್ಲೂ ದಾಖಲೆಯತ್ತ ಮುನ್ನಡೆದಿದ್ದಾರೆ. ಒಳ್ಳೆಯ ಆಡಳಿತ, ರಾಜ್ಯದ ಅಭಿವೃದ್ಧಿಯ ದಿಕ್ಕನ್ನು ಬದಲಿಸುವತ್ತ ಉಳಿದ ಕಾಲವನ್ನು ವ್ಯಯಿಸಬೇಕಿದೆ. ಭ್ರಷ್ಟಾಚಾರರಹಿತ ಆಡಳಿತ ಎಂದರೆ ಹೇಗಿರುತ್ತದೆ ಎಂಬುದನ್ನು ಅವರು ತೋರಿಸಬೇಕಿದೆ.

ಉತ್ತಮ ಆಡಳಿತವೆಂದರೆ ನಾಡ ಜನ ಕೊಟ್ಟ ದೋಣಿಯಲ್ಲಿ ತಮ್ಮ ವಂದಿಮಾಗಧರು, ತಮ್ಮ ಮಗನನ್ನು ಮಾತ್ರ ದಡ ಹತ್ತಿಸುವುದಲ್ಲ. ಅಪಾತ್ರರನ್ನು ದೋಣಿಯಿಂದ ಕೆಳಗಿಳಿಸಿ, ಸಜ್ಜನರು, ಪ್ರಾಮಾಣಿಕರನ್ನು ಜತೆಗೂಡಿಸಿಕೊಂಡರೆ ಸಿದ್ದರಾಮಯ್ಯನವರನ್ನು ಜನ ನೂರ್ಕಾಲ ನೆನಪಿಸಿಕೊಂಡಾರು. ಇಲ್ಲದಿದ್ದರೆ ದೋಣಿಯ ಹುಟ್ಟನ್ನು ಕಸಿದುಕೊಳ್ಳುವ ಕಾಲವೂ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.