ಜರ್ಮನಿಯ ಚಾನ್ಸಲರ್ ಆಗಿ 16 ವರ್ಷಗಳ ಕಾಲ ಆ ಪ್ರಭಾವಿ ಹುದ್ದೆ ಅಲಂಕರಿಸಿದ ಅಂಗೆಲಾ ಮೆರ್ಕೆಲ್ ತಮ್ಮ ಅವಧಿಯ ಕೊನೆಯ ಚರಣಕ್ಕೆ ಬಂದು ನಿಂತಿದ್ದಾರೆ. ಸೆಪ್ಟೆಂಬರ್ 26ರಂದು ನಡೆದ ಚುನಾವಣೆಯಲ್ಲಿ ಜರ್ಮನಿಯ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಜನರ ವಿಶ್ವಾಸವನ್ನು ಗಳಿಸಿಕೊಂಡಿದೆ. ಕೆಲವು ದಿನಗಳಲ್ಲಿ ಸರ್ಕಾರ ರಚನೆಯ ಕಸರತ್ತು ಮುಗಿದು ನೂತನ ಚಾನ್ಸಲರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕತೆಯನ್ನು ನಿಭಾಯಿಸುವ ಹೊಣೆಗಾರಿಕೆ ಅವರ ಮೇಲಿರುತ್ತದೆ.
ದೀರ್ಘಾವಧಿಗೆ ಜರ್ಮನಿಯನ್ನು ಆಳಿದ ಚಾನ್ಸಲರುಗಳ ಪೈಕಿ ಎರಡನೆಯವರಾದ ಮೆರ್ಕೆಲ್, ಮೊದಲ ಮಹಿಳಾ ಚಾನ್ಸಲರ್ ಎನಿಸಿಕೊಂಡವರು. ಬರ್ಲಿನ್ ಗೋಡೆ ಪತನದ ಬಳಿಕ ಪೂರ್ವ ಜರ್ಮನಿ ಭಾಗದಿಂದ ಆ ಉನ್ನತ ಹುದ್ದೆಗೇರಿದ ಮೊದಲ ವ್ಯಕ್ತಿ. ಮೆರ್ಕೆಲ್ ಅವರ ಚಾನ್ಸಲರ್ ಅವಧಿಯಲ್ಲಿ ಇಂಗ್ಲೆಂಡ್ ಐವರು ಪ್ರಧಾನಿಗಳನ್ನು, ಫ್ರಾನ್ಸ್ ನಾಲ್ವರು ಅಧ್ಯಕ್ಷರನ್ನು, ಇಟಲಿ ಏಳು ಪ್ರಧಾನಿಗಳನ್ನು, ಅಮೆರಿಕ ನಾಲ್ವರು ಅಧ್ಯಕ್ಷರನ್ನು ಕಂಡಿತು.
ಕ್ವಾಂಟಂ ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದು ವಿಜ್ಞಾನ ಸಂಸ್ಥೆಯೊಂದರಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೆರ್ಕೆಲ್, ತಮ್ಮ ಆ ದಿನಗಳ ಬಗ್ಗೆ ಭಾಷಣವೊಂದರಲ್ಲಿ ಪ್ರಸ್ತಾಪಿಸಿದ್ದರು. ‘ಪೂರ್ವ ಮತ್ತು ಪಶ್ಚಿಮವನ್ನು ಬೇರ್ಪಡಿಸಿದ್ದ ಬರ್ಲಿನ್ ಗೋಡೆ ಅವಕಾಶಗಳಿಗೆ ಮಿತಿಯೊಡ್ಡಿತ್ತು. ಅಕ್ಷರಶಃ ನನ್ನ ಪಾಲಿಗೆ ತಡೆಗೋಡೆಯಾಗಿತ್ತು. ಪ್ರತಿದಿನ ಕೆಲಸದಿಂದ ಮನೆಗೆ ಹಿಂದಿರುಗುವಾಗ ಆ ಗೋಡೆಯ ಬಳಿ ಹೋಗಿ ನಿಂತು ಬರುತ್ತಿದ್ದೆ’ ಎಂದು ಮೆಲುಕು ಹಾಕಿದ್ದರು.
1989ರಲ್ಲಿ ಬರ್ಲಿನ್ ಗೋಡೆ ಪತನಗೊಂಡಾಗ ಮೆರ್ಕೆಲ್ ಅವರಿಗೆ 35 ವರ್ಷ. ಮೆರ್ಕೆಲ್ ತಮ್ಮ ಕೆಲಸ ತೊರೆದು ರಾಜಕೀಯಕ್ಕೆ ಧುಮುಕಿದರು. 1990ರಲ್ಲಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿ ಜರ್ಮನಿಯ ಸಂಸತ್ತಿಗೆ ಆಯ್ಕೆಯಾದರು. ಮರುವರ್ಷ ಮಹಿಳಾ ಮತ್ತು ಯುವಜನ ಖಾತೆಯ ಸಚಿವರಾದರು. ಪಕ್ಷದ ಉಪಾಧ್ಯಕ್ಷೆಯ ಸ್ಥಾನಕ್ಕೆ ಏರಿದರು. 1982ರಿಂದ 1998ರವರೆಗೆ ಜರ್ಮನಿಯ ಚಾನ್ಸಲರ್ ಆಗಿದ್ದ ಹೆಲ್ಮಟ್ ಕೋಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮೆರ್ಕೆಲ್, ರಾಜಕೀಯವಾಗಿ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು.
1999ರ ಹೊತ್ತಿಗೆ ಕೋಲ್ ಅವರ ಕೊರಳಿಗೆ ಅಕ್ರಮ ದೇಣಿಗೆಯ ಹಗರಣ ಸುತ್ತಿಕೊಂಡಿತು. ಆಗ ಮೆರ್ಕೆಲ್, ತಮ್ಮ ರಾಜಕೀಯ ಗುರುವಿನ ವಿರುದ್ಧವೇ ಪತ್ರಿಕೆಯೊಂದ
ರಲ್ಲಿ ಬರೆದು ರಾಜೀನಾಮೆಗೆ ಒತ್ತಾಯಿಸಿದರು. ‘ನನ್ನ ಸಾವನ್ನು ನಾನೇ ತಂದುಕೊಂಡೆ, ಸರ್ಪವನ್ನು ಹೆಗಲಿಗೇರಿಸಿಕೊಂಡೆ’ ಎಂದು ಮೆರ್ಕೆಲ್ ಕುರಿತು ಕೋಲ್ ಪ್ರತಿಕ್ರಿಯಿಸಿದರೆ, ಜರ್ಮನಿಯ ಜನ ಮೆರ್ಕೆಲ್ ಅವರ ಪ್ರಾಮಾಣಿಕತೆಯನ್ನು, ದಿಟ್ಟತನವನ್ನು ಮೆಚ್ಚಿಕೊಂಡರು. 2005ರಲ್ಲಿ ಮೆರ್ಕೆಲ್ ಚಾನ್ಸಲರ್ ಹುದ್ದೆಯಲ್ಲಿ ಕುಳಿತರು.
ಮೆರ್ಕೆಲ್ ಎದುರು ಸವಾಲು ಸರತಿಯಲ್ಲಿ ನಿಂತಿದ್ದವು. 2007-08ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಎದುರಾಯಿತು. 2009ರಲ್ಲಿ ಯುರೋ ವಲಯದ ಬಿಕ್ಕಟ್ಟು ಉದ್ಭವಿಸಿತು. ಆಗ ಜರ್ಮನಿಯ ಆಚೆ ಮೆರ್ಕೆಲ್ ತಮ್ಮ ಪ್ರಭಾವವನ್ನು ವಿಸ್ತರಿಸಿ
ಕೊಂಡರು. ಗ್ರೀಸ್ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮಾತುಕತೆಗೆ ಕೊಂಡಿಯಾದರು. ‘If the euro fails, Europe fails’ ಎನ್ನುವ ವಾದ ಮುಂದಿಟ್ಟರು. ಕಠಿಣ ನಿಲುವು ತಳೆದದ್ದರಿಂದ ಅವರನ್ನು ‘ಹಿಟ್ಲರ್’ ಎಂದು ಕರೆಯಲಾಯಿತು.
2015ರಲ್ಲಿ ಸಿರಿಯಾ ಬಿಕ್ಕಟ್ಟು ಉಲ್ಬಣಿಸಿ ಆ ಭಾಗದಿಂದ ದೊಡ್ಡ ಮಟ್ಟದ ವಲಸೆ ಆರಂಭವಾದಾಗ ಐರೋಪ್ಯ ರಾಷ್ಟ್ರಗಳು ತತ್ತರಿಸಿದವು. ಆದರೆ ಜರ್ಮನಿ 10 ಲಕ್ಷ ವಲಸಿಗರನ್ನು ಒಳಗೆ ಕರೆದುಕೊಂಡಿತು. ಅದಾಗಲೇ ದುಡಿಯುವ ಪ್ರಾಯದ ಜನರ ಸಂಖ್ಯೆ ಜರ್ಮನಿಯಲ್ಲಿ ಕಡಿಮೆಯಾಗಿತ್ತು. ವಲಸಿಗರನ್ನು ದೇಶದೊಳಕ್ಕೆ ಕರೆದುಕೊಳ್ಳುವ ನಿರ್ಧಾರದ ಹಿಂದೆ ಆ ವರ್ಗವನ್ನು ಸಮರ್ಥವಾಗಿ ದುಡಿಮೆಗೆ ಬಳಸಿಕೊಂಡು ಆರ್ಥಿಕತೆಗೆ ಪುಷ್ಟಿ ನೀಡುವ ಲೆಕ್ಕಾಚಾರ ಇತ್ತು. ತಮಗೆ ಇದರಿಂದ ರಾಜಕೀಯವಾಗಿ ಹಿನ್ನಡೆಯಾಗಲಿದೆ ಎಂದು ತಿಳಿದೂ ಮೆರ್ಕೆಲ್ ವಲಸಿಗರನ್ನು ಒಳಕರೆದುಕೊಂಡರು.
ಮೆರ್ಕೆಲ್ ಅವರ ಅವಧಿಯಲ್ಲಿ ಜರ್ಮನಿ ಮತ್ತು ಅಮೆರಿಕ ನಡುವಿನ ಸಂಬಂಧ ಏರಿಳಿತ ಕಂಡಿತು. ರಷ್ಯಾದೊಂದಿಗಿನ ವಿವಾದಿತ ನಾರ್ಡ್ ಸ್ಟ್ರೀಮ್- 2 ನೈಸರ್ಗಿಕ ಅನಿಲ ಕೊಳವೆ ಮಾರ್ಗ ಯೋಜನೆ ಕೈಬಿಡುವಂತೆ ಜರ್ಮನಿಯ ಮೇಲೆ ಅಮೆರಿಕ ಒತ್ತಡ ಹೇರಿತ್ತು. ಯಾವುದೇ ಬಿಕ್ಕಟ್ಟಿನ ಸಮಯದಲ್ಲಿ ಈ ಕೊಳವೆ ಮಾರ್ಗವನ್ನು ಉಪಯೋಗಿಸಿಕೊಂಡು ಜರ್ಮನಿಯ ಮೇಲೆ ಹಿಡಿತ ಹೊಂದುವುದು ರಷ್ಯಾಕ್ಕೆ ಸುಲಭವಾಗುತ್ತದೆ ಎಂದು ಅಮೆರಿಕ ವಾದಿಸಿತ್ತು. ಆದರೆ ಮೆರ್ಕೆಲ್ ಅಮೆರಿಕದ ವಾದಕ್ಕೆ ಸೊಪ್ಪುಹಾಕಲಿಲ್ಲ. ಚೀನಾದ ವಿರುದ್ಧ ಕಠಿಣ ನಿಲುವು ತಳೆಯಲು ಅಮೆರಿಕ ಒತ್ತಡ ಹಾಕಿದಾಗಲೂ ಮೆರ್ಕೆಲ್ ಅದಕ್ಕೆ ಮಣಿಯಲಿಲ್ಲ. ಒಂದು ಹಂತದಲ್ಲಿ ಪುಟಿನ್ ಜೊತೆಗೆ ಮೆರ್ಕೆಲ್ ವೈಮನಸ್ಯ ಹೊಂದಿದ್ದರಾದರೂ ಸಂವಹನದ ಎಲ್ಲ ಹಾದಿಗಳನ್ನು ಮುಚ್ಚಲಿಲ್ಲ. ಈ ಹಿಂದೆ ಅಮೆರಿಕ ಮತ್ತು ಸೋವಿಯತ್ ನಡುವಿನ ಶೀತಲ ಸಮರ ಮತ್ತು ಅದರ ಬೇಗೆಯನ್ನು ಸ್ವತಃ ಅನುಭವಿಸಿದ್ದ ಮೆರ್ಕೆಲ್, ಜರ್ಮನಿ ಪುನಃ ಯಾರೊಬ್ಬರ ದಾಳವಾಗಬಾರದು ಎಂಬ ನಿಲುವು ತಳೆದರು.
ಮೆರ್ಕೆಲ್ ಕೆಲವು ವಿಷಯಗಳಲ್ಲಿ ಹಿನ್ನಡೆ ಅನುಭವಿಸಿದ್ದು ಇದೆ. ಐರೋಪ್ಯ ಒಕ್ಕೂಟದ ಅಧ್ಯಕ್ಷೆ
ಯಾಗಿದ್ದ ಅವಧಿಯಲ್ಲಿ ಒಕ್ಕೂಟದ ನಿಯಮಗಳಿಗೆ ಬದ್ಧವಾಗುವಂತೆ ಹಂಗೆರಿ ಮತ್ತು ಪೋಲೆಂಡ್ ಮನವೊಲಿಸುವುದು ಅವರಿಗೆ ಕಷ್ಟವಾಯಿತು. ಹವಾಮಾನ ಬದಲಾವಣೆ ವಿಷಯದಲ್ಲಿ ಹೆಚ್ಚು ಮುಂದುವರಿಯಲು ಸಾಧ್ಯವಾಗಲಿಲ್ಲ. ಯಾವುದೇ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಹೆಜ್ಜೆ
ಇಡುತ್ತಿದ್ದ ಕಾರಣ ಅವರನ್ನು ‘ಕಾಲಹರಣ ಚತುರೆ’ ಎಂದು ಕರೆದ ಪ್ರಸಂಗಗಳಿವೆ.
ಇತರ ದೇಶಗಳ ಪುರುಷ ನಾಯಕರು ಆಕೆಯ ನಾಯಕತ್ವ ಗುಣದ ಬಗ್ಗೆ ಅಸೂಯೆಪಟ್ಟಿದ್ದರೋ ಗೊತ್ತಿಲ್ಲ. ಆದರೆ ಕೆಲವರು ಆಕೆಯನ್ನು ಅಗೌರವದಿಂದ ನೋಡುವ ಕೆಲಸವನ್ನಂತೂ ಮಾಡಿದರು. ಮೆರ್ಕೆಲ್ ಅವರಿಗೆ ನಾಯಿಗಳನ್ನು ಕಂಡರೆ ಭಯ ಎಂಬುದು ತಿಳಿದಿದ್ದರೂ ಮೆರ್ಕೆಲ್ ಭೇಟಿಯ ವೇಳೆ ರಷ್ಯಾದ ಪುಟಿನ್ ತಮ್ಮ ಸಾಕು ನಾಯಿಯನ್ನು ಕರೆತಂದಿದ್ದರು. ತಮ್ಮನ್ನು ಹೆದರಿಸುವ ಸಲುವಾಗಿಯೇ ಪುಟಿನ್ ಈ ಕೆಲಸ ಮಾಡಿದ್ದಾರೆ ಎಂದು ಮೆರ್ಕೆಲ್ ಆರೋಪಿಸಿದ್ದರು. ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವಿವೇಕಿ ಎಂಬ ಪದವನ್ನು ಮೆರ್ಕೆಲ್ ಕುರಿತು ಬಳಸಿದ್ದರು. ಇಟಲಿಯ ಪ್ರಧಾನಿ ಸಿಲ್ವಿಯೋ ಬೆರುಸ್ಕೋನಿ ಆಕೆಯನ್ನು ಎದುರಿಗೆ ಕುಳ್ಳಿರಿಸಿಕೊಂಡು 15 ನಿಮಿಷಗಳ ಕಾಲ ಬೇರೊಬ್ಬರ ಜೊತೆ ಫೋನಿನಲ್ಲಿ ಮಾತನಾಡುತ್ತಾ ಮೆರ್ಕೆಲ್ ಅವರನ್ನು ಕಡೆಗಣಿಸುವ ಕೆಲಸ ಮಾಡಿದ್ದರು.
ಮೆರ್ಕೆಲ್ ಅಧಿಕಾರಕ್ಕೇರಿದಾಗ ಜರ್ಮನಿಯ ಪ್ರಸಿದ್ಧ ಪತ್ರಿಕೆ ಅವರ ಫೋಟೊ ಪ್ರಕಟಿಸಿ ಅದಕ್ಕೆ ‘ಮಿಸ್ ಜರ್ಮನಿ’ ಎಂಬ ಶೀರ್ಷಿಕೆ ಕೊಟ್ಟಿತ್ತು. ಅನನುಭವಿ, ಕೋಲ್ ಅವರ ಮೆಚ್ಚಿನ ಹುಡುಗಿ, ತಾತ್ಕಾಲಿಕ ಚಾನ್ಸಲರ್ ಎಂದೆಲ್ಲಾ ಕರೆಯಲಾಗಿತ್ತು. ಅವರು ಚಾನ್ಸಲರ್ ಹುದ್ದೆಯಿಂದ ಹೊರನಡೆಯುತ್ತಿರುವ ಈ ಸಂದರ್ಭದಲ್ಲಿ ಅವರನ್ನು ‘ಸ್ಥಿರತೆಯ ಪ್ರತೀಕ’ ಎಂದು ಕರೆಯಲಾಗುತ್ತಿದೆ. ಈ ಎರಡು ಬಿಂದುಗಳ ನಡುವಿನ ಚಲನೆ ಮೆರ್ಕೆಲ್ ಅವರಿಗೆ ಸುಲಭವಾಗಿರಲಿಲ್ಲ.
ಮೆರ್ಕೆಲ್ ಚಾನ್ಸಲರ್ ಹುದ್ದೆಯಲ್ಲಿರುವಷ್ಟು ಕಾಲ ಜನಾಕರ್ಷಣೆಯ, ವರ್ಚಸ್ವಿ ನಾಯಕಿ ಎನಿಸಿಕೊಳ್ಳ
ದಿದ್ದರೂ ನಂಬಿಕಸ್ಥ, ಪ್ರಾಮಾಣಿಕ ನಾಯಕಿ ಎಂಬ ಭಾವವನ್ನು ಜನರಲ್ಲಿ ಮೂಡಿಸಿದರು. ಭಾರತದ ಇಂದಿರಾ ಗಾಂಧಿ ಸೇರಿದಂತೆ ಹಲವು ಮಹಿಳೆಯರು ವಿವಿಧ ದೇಶಗಳನ್ನು ಮುನ್ನಡೆಸಿ ಮಹಿಳೆಯ ಸಾಮರ್ಥ್ಯವನ್ನು ಜಗತ್ತಿಗೆ ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದಾರೆ. ಆ ಸಾಲಿಗೆ ಮೆರ್ಕೆಲ್ ಕೂಡ ಸೇರುತ್ತಾರೆ ಮತ್ತು ಇತಿಹಾಸದ ಪುಟಗಳಲ್ಲಿ ಕಂಗೊಳಿಸುತ್ತಾರೆ.
2019ರಲ್ಲಿ ಪತ್ರಕರ್ತನೊಬ್ಬ ‘50 ವರ್ಷಗಳ ನಂತರ ಮಕ್ಕಳು ನಿಮ್ಮ ಕುರಿತು ಇತಿಹಾಸ ಪುಸ್ತಕದಲ್ಲಿ ಏನನ್ನು ಓದಬೇಕು ಎಂಬುದು ನಿಮ್ಮ ಅಪೇಕ್ಷೆ?’ ಎಂದು ಪ್ರಶ್ನಿಸಿದಾಗ ಮೆರ್ಕೆಲ್, ‘ಆಕೆ ಪ್ರಯತ್ನಿಸಿದಳು’ ಎಂಬುದನ್ನು ಓದಿದರೆ ಸಾಕು ಎಂದಿದ್ದರು. ಚಾನ್ಸಲರ್ ಅವಧಿಯ ಆಕೆಯ ಪ್ರಯತ್ನಗಳನ್ನು ಮುಂದಿನ
ಪೀಳಿಗೆಯ ಜರ್ಮನಿ ವಿದ್ಯಾರ್ಥಿಗಳು ಶ್ಲಾಘಿಸುತ್ತಾರೆ ಎಂಬುದಂತೂ ದಿಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.