ADVERTISEMENT

ಗಿರೀಶ ದೊಡ್ಡಮನಿ ಅಂಕಣ| ಕರ್ನಾಟಕದ ಸ್ಪಿನ್ ವೈಭವ ಮರಳೀತೆ?

ಕ್ರಿಕೆಟ್‌: ಸ್ಪಿನ್‌ ಬೌಲಿಂಗ್‌ ಕೌಶಲ ಉಳಿವಿಗೆ ಬೇಕಿದೆ ಯೋಜನೆ

ಗಿರೀಶದೊಡ್ಡಮನಿ
Published 24 ಜನವರಿ 2023, 23:37 IST
Last Updated 24 ಜನವರಿ 2023, 23:37 IST
ಎರಪಳ್ಳಿ ಪ್ರಸನ್ನ, ಬಿ.ಎಸ್‌. ಚಂದ್ರಶೇಖರ್ ಮತ್ತು ಬಿಷನ್‌ ಸಿಂಗ್ ಬೇಡಿ
ಎರಪಳ್ಳಿ ಪ್ರಸನ್ನ, ಬಿ.ಎಸ್‌. ಚಂದ್ರಶೇಖರ್ ಮತ್ತು ಬಿಷನ್‌ ಸಿಂಗ್ ಬೇಡಿ   

ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್ ಮತ್ತು ವಾಸುಕಿ ಕೌಶಿಕ್...

ಕರ್ನಾಟಕದ ಈ ಮೂವರು ಮಧ್ಯಮವೇಗಿಗಳು ದೇಶಿ ಕ್ರಿಕೆಟ್‌ನಲ್ಲಿ ದೂಳೆಬ್ಬಿಸುತ್ತಿದ್ದಾರೆ. ವಿನಯಕುಮಾರ್, ಅಭಿಮನ್ಯು ಮಿಥುನ್ ಮತ್ತು ಅರವಿಂದ್ ಅವರ ವಿದಾಯದಿಂದ ತೆರವಾದ ಸ್ಥಾನಗಳನ್ನು ತುಂಬುವ ಭರವಸೆ ಮೂಡಿಸಿದ್ದಾರೆ.

ಆದರೆ ರಾಜ್ಯದ ಸ್ಪಿನ್ ಬೌಲಿಂಗ್ ವಿಭಾಗದ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಸದ್ಯ ತಂಡದಲ್ಲಿರುವ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಮತ್ತು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ನಂತರ ಯಾರು ಎಂಬ ಪ್ರಶ್ನೆ ಮೂಡಿದೆ. ಕಳೆದೆರಡು ಋತುಗಳಲ್ಲಿ ಅವರಿಬ್ಬರೂ ಬೌಲಿಂಗ್‌ನಲ್ಲಿ ದೊಡ್ಡಮಟ್ಟದ ಸಾಧನೆ ಮಾಡಿಲ್ಲ. ಆದರೆ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವುದ ರಿಂದ ‘ಆಲ್‌ರೌಂಡರ್‌’ ಆಗಿ ತಂಡದಲ್ಲಿ ಉಳಿದಿದ್ದಾರೆ‌ ಎನ್ನುವುದು ನಿಸ್ಸಂಶಯ. ಬೆಂಚ್‌ನಲ್ಲಿರುವ ಕೆಲವು ಯುವಸ್ಪಿನ್ನರ್‌ಗಳಿಗೆ ಅವಕಾಶ ಸಿಗುತ್ತಿಲ್ಲ ಎನ್ನುವುದೂ ಸುಳ್ಳಲ್ಲ. ಜೂನಿಯರ್ ವಿಭಾಗದಲ್ಲಿ ಸ್ಪಿನ್ ಪ್ರತಿಭೆಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ರಣಜಿ ಕ್ರಿಕೆಟ್ ಪಂದ್ಯದಲ್ಲಿ ಆಡುವಂತಹ ಭರವಸೆಯ ಸ್ಪಿನ್ನರ್‌ಗಳು ಸಿಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ಯದ ಕೆಲವು ಹಿರಿಯ ತರಬೇತುದಾರರೇ ಈ ಮಾತು ಹೇಳುತ್ತಾರೆ. ಈ ಸಮಸ್ಯೆಗೆ ಕಾರಣಗಳನ್ನು ಹುಡುಕುತ್ತ ಹೊರಟರೆ ಕೆಲವು ವಿಷಯಗಳು ಗಮನ ಸೆಳೆಯುತ್ತವೆ.

ADVERTISEMENT

ಪ್ರಮುಖವಾಗಿ ಟಿ20 ಕ್ರಿಕೆಟ್ ಮಾದರಿಯ ವಿಜೃಂಭಣೆ. ಈ ಮಾದರಿಯಲ್ಲಿ ಕಲಾತ್ಮಕ ಕೌಶಲಕ್ಕಿಂತಲೂ ಪ್ರತೀ ಎಸೆತವನ್ನೂ ಬೌಂಡರಿಯಾಚೆ ಕಳಿಸುವುದಕ್ಕೆ ಬ್ಯಾಟರ್‌ಗಳು ಮಹತ್ವ ಕೊಡುತ್ತಾರೆ. ಅದರಲ್ಲೂ ಕೊನೆಯ ಐದು ಓವರ್‌ಗಳಲ್ಲಿ 70–80 ರನ್‌ಗಳನ್ನು ಸೂರೆ ಮಾಡುತ್ತಾರೆ. 20 ಓವರ್‌ಗಳಲ್ಲಿ 200ಕ್ಕೂ ಹೆಚ್ಚು ರನ್‌ ಗಳಿಸುವುದು ಸಾಮಾನ್ಯ ಸಂಗತಿಯಾಗಿದೆ.

ಈ ಮಾದರಿ ಆರಂಭವಾದಾಗ ಬೌಲರ್‌ಗಳಿಗೆ ಉಳಿಗಾಲವಿಲ್ಲ ಎಂದೇ ಚರ್ಚೆಗಳಾಗಿದ್ದವು. ಆದರೆ ಮನರಂಜನೆ ಮತ್ತು ಪ್ರಾಯೋಜಕತ್ವದ ಹಣದ ಪ್ರವಾಹ ಹರಿಸುವಲ್ಲಿ ‘ಚುಟುಕು’ ಮಾದರಿ ‘ಬೃಹತ್’ ಯಶಸ್ಸು ಗಳಿಸಿತು. ಇಲ್ಲಿ ಹೆಚ್ಚು ದಂಡನೆಗೊಳಗಾದ ಸ್ಪಿನ್ನರ್‌ಗಳನ್ನು ನೋಡಿದ್ದ ಹೊಸಪೀಳಿಗೆಯ ಮಕ್ಕಳು ಬ್ಯಾಟಿಂಗ್‌ನತ್ತಲೇ ವಾಲುತ್ತಿದ್ದಾರೆ. ಆಲ್‌ರೌಂಡರ್‌ ಎನಿಸಿಕೊಳ್ಳುವ ಸಲುವಾಗಿ ಒಂದಿಷ್ಟು ಆಫ್‌ಬ್ರೇಕ್, ಗೂಗ್ಲಿ, ಲೆಗ್‌ಬ್ರೇಕ್ ಕಲಿತು ‘ಸಾಂದರ್ಭಿಕ ಬೌಲರ್‌’ ಆಗುತ್ತಿದ್ದಾರೆ. ಆದರೆ ಪರಿಣತ ಸ್ಪಿನ್ನರ್‌ ಆಗಿ ಬೆಳೆಯುವ ಮಹತ್ವಾಕಾಂಕ್ಷೆಯಿಂದ ತರಬೇತಿಗೆ ಬರುವ ಮಕ್ಕಳು ಕಡಿಮೆ. ತಮ್ಮ ಮಕ್ಕಳು ‘ಬಿಗ್‌ ಹಿಟ್ಟರ್‌’ ಆಗಬೇಕು ಇಲ್ಲವೇ ‘ಡೆತ್‌ ಓವರ್‌’ ಪರಿಣತ ವೇಗಿ ಆಗಬೇಕು ಎಂದು ಬಯಸುವ ಪಾಲಕರೇ ಹೆಚ್ಚು. ಎಲ್ಲರಿಗೂ ಈಗ ಹಣದ ಥೈಲಿಯ ಮೇಲೆಯೇ ಕಣ್ಣು ಎಂದು ಕೆಲವು ತರಬೇತಿದಾರರು ಹೇಳುತ್ತಾರೆ.

ಆದರೂ ಕಳೆದ ಎರಡು ದಶಕಗಳಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಶ್ರೀಲಂಕಾದ ವಣಿಂದು ಹಸರಂಗಾ, ಅಫ್ಗಾನಿಸ್ತಾನದ ರಶೀದ್‌ ಖಾನ್‌ ಮತ್ತು ಬಾಂಗ್ಲಾದ ಶಕೀಬ್ ಅಲ್ ಹಸನ್ ಅವರಂತಹ ಸ್ಪಿನ್ನರ್‌ಗಳು ಟಿ20 ಮಾದರಿಯಲ್ಲಿಯೂ ಮಿಂಚಿದ್ದಾರೆ. ಹೆಚ್ಚು ರನ್‌ ಕೊಟ್ಟರೂ ವಿಕೆಟ್‌ ಗಳಿಸುವಲ್ಲಿ
ಯಶಸ್ವಿಯಾಗಿದ್ದಾರೆ.

ಗಿರೀಶ ದೊಡ್ಡಮನಿ

ಇನ್ನೊಂದು ಕಾರಣವೆಂದರೆ, ಇತ್ತೀಚಿನ ದಿನಗಳಲ್ಲಿ ಪಂದ್ಯಗಳು ನಡೆಯುವ ಸಮಯ. ಇತ್ತೀಚೆಗಷ್ಟೇ ಆರ್. ಅಶ್ವಿನ್ ಈ ವಿಷಯದ ಕುರಿತು ಮಾತನಾಡಿರುವುದು ಗಮನಾರ್ಹ. ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಬೆಳಿಗ್ಗೆ 11.30ಕ್ಕೆ ಆರಂಭಿಸಬೇಕು. ಇದರಿಂದಾಗಿ ರಾತ್ರಿ ವೇಳೆಯ ಇಬ್ಬನಿಯಿಂದಾಗುವ ತೊಂದರೆಯನ್ನು ಬೌಲರ್‌ಗಳು ತಪ್ಪಿಸಿಕೊಳ್ಳಬಹುದು ಮತ್ತು ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಉತ್ತಮ ಅವಕಾಶ ನೀಡಿದಂತಾಗುತ್ತದೆ. ಅಲ್ಲದೆ ಸಮಬಲದ ಸ್ಪರ್ಧೆ ಏರ್ಪಡುತ್ತದೆ ಎಂಬುದು ಅವರ ವಾದ.

ಕಳೆದ ಟಿ20 ವಿಶ್ವಕಪ್ ಪಂದ್ಯಗಳನ್ನು ನೋಡಿದರೆ ಅಶ್ವಿನ್ ಅವರ ಮಾತುಗಳ ಮಹತ್ವ ಅರಿವಾಗುತ್ತದೆ. ಆ ಟೂರ್ನಿಯಲ್ಲಿ ಟಾಸ್ ಗೆದ್ದ ತಂಡಗಳು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದೇ ಹೆಚ್ಚು. ರಾತ್ರಿಯಾದಂತೆ ಇಬ್ಬನಿಯಿಂದಾಗಿ ಬೌಲರ್‌ಗಳಿಗೆ ಚೆಂಡನ್ನು ಗ್ರಿಪ್‌ ಮಾಡುವುದೇ ಸವಾಲಾಗುತ್ತದೆ. ಅಂಥದ್ದರಲ್ಲಿ ಸ್ಪಿನ್‌ ಬೌಲಿಂಗ್‌ ಇನ್ನೂ ಕ್ಲಿಷ್ಟ. ಆದ್ದರಿಂದ ಟಾಸ್ ಗೆದ್ದವರಿಗೇ ಪಂದ್ಯ ಜಯಿಸುವ ಅವಕಾಶಗಳು ಹೆಚ್ಚು. ಆದರೆ ಮುಸ್ಸಂಜೆ ವೇಳೆ ಪಂದ್ಯ ನಡೆದರೆ ಸಿಗುವ ಅಪಾರ ಪ್ರಮಾಣದ ಪ್ರಾಯೋಜಕತ್ವದಿಂದ
ದೊರೆಯುವ ಆರ್ಥಿಕ ಲಾಭವನ್ನು ಆಯೋಜಕರು ಬಿಟ್ಟುಕೊಡುತ್ತಾರೆಯೇ?

ಇನ್ನೊಂದೆಡೆ, 2011– 2014ರ ಅವಧಿಯಲ್ಲಿ ಕ್ರಿಕೆಟ್‌ ರಂಗದಲ್ಲಿ ಬಹಳಷ್ಟು ಬದಲಾವಣೆಗಳಾದವು. ಆ ಸಂದರ್ಭದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಹೀನಾಯವಾಗಿ ಸೋತಿತ್ತು. ಆದ್ದರಿಂದ ವಿದೇಶಿ ಪಿಚ್‌ಗಳ ಮಾದರಿಯಲ್ಲಿಯೇ ಭಾರತದಲ್ಲಿಯೂ ಸಿದ್ಧತೆಗಳು ಆರಂಭವಾದವು. ‘ಪೇಸ್‌ ಪಿಚ್‌’ಗಳು ಪ್ರಾಮುಖ್ಯ ಪಡೆದವು. ಅದರಿಂದಾಗಿ ವೇಗದ ಬೌಲಿಂಗ್ ವಿಭಾಗ ಸಮೃದ್ಧವಾಯಿತು. ಸ್ಪಿನ್ನರ್‌ ಗಳಿಗೆ ‘ಆಲ್‌ರೌಂಡರ್‌’ ಆಗಲೇಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಐಪಿಎಲ್‌ನಿಂದಾಗಿ ವಿದೇಶದ ತಂಡಗಳ ಆಟಗಾರರಿಗೆ ಭಾರತದ ಪಿಚ್, ವಾತಾವರಣ ಮತ್ತಿತರ ವಿಷಯಗಳಿಗೆ ಹೊಂದಿಕೊಳ್ಳುವುದು ಸುಲಭವಾಗಿದೆ. ಇದರಿಂದಾಗಿ ಅವರಿಗೆ ಭಾರತದ ಸ್ಪಿನ್ನರ್‌ಗಳ ಬಗ್ಗೆ ಆತಂಕ ಕಡಿಮೆಯಾಗಿದೆ. ಭಾರತದವರಿಗಿಂತಲೂ ಚೆನ್ನಾಗಿ ಸ್ಪಿನ್‌ ಎಸೆತಗಳನ್ನು ಆಡುವ ಸಾಮರ್ಥ್ಯ ವಿದೇಶಿಗರಲ್ಲಿ ಬೆಳೆದಿರುವುದು ಸುಳ್ಳಲ್ಲ. ದಶಕದ ಹಿಂದೆ ಇಂಗ್ಲೆಂಡ್‌ನ ಬ್ಯಾಟರ್ ಕೆವಿನ್ ಪೀಟರ್ಸನ್ ಅವರು, ಸ್ಪಿನ್ ಎಸೆತಗಳನ್ನು ಆಡುವ ಬಗೆಯನ್ನು ಭಾರತದ ರಾಹುಲ್ ದ್ರಾವಿಡ್ ಅವರಿಂದ ಕಲಿತಿದ್ದರು. ಈ ಕುರಿತು ತಮಗೆ ದ್ರಾವಿಡ್ ಮಾಡಿದ್ದ ಇ–ಮೇಲ್ ಬಗ್ಗೆ ಕೆವಿನ್ ತಮ್ಮ ಆತ್ಮ ಕತೆಯಲ್ಲಿ ಬರೆದಿದ್ದಾರೆ. ಬೆಂಗಳೂರಿನ ದ್ರಾವಿಡ್ ದೇಶಿ ಕ್ರಿಕೆಟ್‌ನಲ್ಲಿ ಆಡುವಾಗ ನೆಟ್ಸ್‌ನಲ್ಲಿ ಮತ್ತು ಪಂದ್ಯಗಳಲ್ಲಿ ಉತ್ತಮ ಸ್ಪಿನ್ನರ್‌ಗಳನ್ನು ಎದುರಿಸಿದ್ದರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿಯೂ ಶ್ರೇಷ್ಠ ಬೌಲರ್‌ಗಳ ಮುಂದೆ ಯಶಸ್ವಿಯಾಗಿದ್ದರು.

‘ನಮ್ಮದು ಸ್ಪಿನ್‌ ಬೌಲಿಂಗ್‌ ತವರು. ಆದರೆ ನಮ್ಮಲ್ಲಿ ಮುತ್ತಯ್ಯ ಮುರಳೀಧರನ್ ಅಥವಾ ಶೇನ್‌ ವಾರ್ನ್‌ ಅಂತಹವರು ಇಲ್ಲ. ಸಾಂಪ್ರದಾಯಿಕ ಸ್ಪಿನ್ ಕೌಶಲ ಮರೆಯಾಗುತ್ತಿದೆ’ ಎಂದು ಮೂರು ವರ್ಷಗಳ ಹಿಂದೆಯೇ ಮಾಜಿ ಸ್ಪಿನ್ನರ್ ಮುರಳೀ ಕಾರ್ತಿಕ್ ಆತಂಕ ವ್ಯಕ್ತಪಡಿಸಿದ್ದರು.

ಸ್ಪಿನ್ ಬೌಲಿಂಗ್ ಭಾರತದ ಶಕ್ತಿ ಮತ್ತು ಅಸ್ಮಿತೆ. ಅದರಲ್ಲೂ ಆರು ದಶಕಗಳ ಹಿಂದೆ ಬಿ.ಎಸ್. ಚಂದ್ರಶೇಖರ್, ಎರಪಳ್ಳಿ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಮತ್ತು ವೆಂಕಟರಾಘವನ್ ಅವರ ಸಾಧನೆಯು ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಭಾರತವನ್ನು ಸ್ಪಿನ್‌ ಶಕ್ತಿಯನ್ನಾಗಿ ರೂಪಿಸುವಲ್ಲಿ ಕರ್ನಾಟಕದ ಚಂದ್ರಶೇಖರ್, ಪ್ರಸನ್ನ, ಅನಿಲ್ ಕುಂಬ್ಳೆ, ಸುನೀಲ್ ಜೋಶಿಯವರ ಕಾಣಿಕೆ ಅಮೂಲ್ಯವಾದದ್ದು. ರಾಷ್ಟ್ರೀಯ ತಂಡದಲ್ಲಿ ಆಡದಿದ್ದರೂ ಬಿ. ವಿಜಯಕೃಷ್ಣ, ಆನಂದ್ ಕಟ್ಟಿ, ಆರ್. ಅನಂತ್ ಅವರ ಹೆಸರು ಇವತ್ತಿಗೂ ಪ್ರಚಲಿತ.

ಒಳ್ಳೆಯ ಸ್ಪಿನ್ನರ್‌ಗಳು ಇರುವ ತಂಡದಲ್ಲಿ ಚುರುಕಾದ ವಿಕೆಟ್‌ಕೀಪರ್‌ಗಳೂ ಸಿದ್ಧಗೊಳ್ಳುತ್ತಾರಂತೆ. ಸೈಯ್ಯದ್ ಕಿರ್ಮಾನಿ, ಸದಾನಂದ ವಿಶ್ವನಾಥ್, ತಿಲಕ್‌ ನಾಯ್ಡು ಮತ್ತು ಸೋಮಶೇಖರ್ ಶಿರಗುಪ್ಪಿ ಅವರ ಪ್ರತಿಭೆಯನ್ನು ಒರೆಗೆ ಹಚ್ಚಿದ್ದು ಆಯಾ ಕಾಲಘಟ್ಟದ ಸ್ಪಿನ್ನರ್‌ಗಳೇ ಅಲ್ಲವೆ? ಇವತ್ತು ಕರ್ನಾಟಕ ತಂಡದಲ್ಲಿ ವಿಕೆಟ್‌ಕೀಪರ್‌ ಗಳು ಅಸ್ಥಿರ ಪ್ರದರ್ಶನ ನೀಡುತ್ತಿರುವುದಕ್ಕೆ ಈ ಸಂಗತಿಯೂ ಒಂದು ಕಾರಣ. ರಾಜ್ಯದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರಘುರಾಮ್ ಭಟ್ ಅವರೇ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಅಧ್ಯಕ್ಷರಾಗಿರುವ ಈ ಹೊತ್ತಿನಲ್ಲಿ ರಾಜ್ಯದಲ್ಲಿ ಮತ್ತೆ ಸ್ಪಿನ್ ವೈಭವ ಮರಳುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.