ADVERTISEMENT

ವಿಶ್ಲೇಷಣೆ: ಗ್ರಾಮ ‘ವಿಧಾನಸಭೆ’ ಬಲಪಡಿಸೋಣ

ಗ್ರಾಮದ ಸಾಧನೆ ಪರಿಚಯಿಸುವ ಗ್ರಾಮಗೀತೆ ನಮಗೆ ಬೇಕಾಗಿದೆ

ಗುರುರಾಜ್ ಎಸ್.ದಾವಣಗೆರೆ
Published 24 ಏಪ್ರಿಲ್ 2023, 22:35 IST
Last Updated 24 ಏಪ್ರಿಲ್ 2023, 22:35 IST
   

ಇಡೀ ಏಷ್ಯಾದ ‘ಕ್ಲೀನ್ ವಿಲೇಜ್’ ಎಂಬ ಗೌರವ ಸಂಪಾದಿಸಿರುವ ಮೇಘಾಲಯದ ಮಾವ್ಲಿನಾಂಗ್ ಗ್ರಾಮದಿಂದ ಫೋನ್ ಮಾಡಿದ ಗೌತಮ್ ವಾಂಝಿರಿ, ಇನ್ನೊಂದು ವಾರದಲ್ಲಿ ‘ವಿಲೇಜ್ ದರ್ಬಾರ್’ ಇರುತ್ತದೆ, ನೋಡುವ ಆಸೆ ಇದ್ದರೆ ಬನ್ನಿ ಎಂದರು. ಇಲ್ಲಿ ಊರಿನ ಜನರೇ ಸ್ವಯಂಸೇವಕರಾಗಿ ಪ್ರತಿ ನಾಲ್ಕು ತಾಸಿಗೊಮ್ಮೆ ರಸ್ತೆ ಗುಡಿಸುತ್ತಾರೆ, ಪ್ರಕೃತಿ ರಮಣೀಯತೆ ಸವಿಯಲು ಬರುವ ಪ್ರವಾಸಿಗರನ್ನು ಎಲ್ಲೆಂದರಲ್ಲಿ ಕಸ ಹಾಕದಂತೆ ಎಚ್ಚರಿಸುತ್ತಾರೆ. ನೈರ್ಮಲ್ಯದ ಬಗ್ಗೆ ಕಟ್ಟುನಿಟ್ಟಿನ ಕಾಳಜಿ, ಪ್ಲಾಸ್ಟಿಕ್‍ ನಿಷೇಧ ಇರುವ ಗ್ರಾಮದಲ್ಲಿ ಕಸ ಹಾಕಲು ಬಿದಿರಿನಿಂದ ಮಾಡಿದ ಬುಟ್ಟಿಗಳು ಇವೆ. ಗ್ರಾಮ ಪಂಚಾಯಿತಿಯ ನಿರಂತರ ಕಾಳಜಿ ಮತ್ತು ಕೆಲಸಗಳಿಂದಾಗಿ ಮಾವ್ಲಿನಾಂಗ್ ‘ದೇವರ ಸ್ವಂತ ತೋಟ’ ಎನ್ನಿಸಿಕೊಂಡಿದೆ.

ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಗಾಂಧೀಜಿ, ನೈರ್ಮಲ್ಯ ಬದುಕಿನ ರೀತಿ ಎಂದು ಪ್ರತಿಪಾದಿಸಿ, ಜನರ ಕೈಗೇ ಅಧಿಕಾರ ನೀಡುವ ಗ್ರಾಮ ಪಂಚಾಯಿತಿಗಳ ಮೂಲಕ ಅದನ್ನು ಸಾಧಿಸಬೇಕು ಎಂದಿದ್ದರು. ಗ್ರಾಮ ಪಂಚಾಯಿತಿಗಳ ಮೂಲಕ ಹಳ್ಳಿಗೆ ಸಾಂವಿಧಾನಿಕ ಅಧಿಕಾರ ನೀಡಿದ ಪ್ರಜಾಪ್ರಭುತ್ವದ ಮೊದಲ ನಾಡು ನಮ್ಮದು. ಪ್ರತಿ ಪಂಚಾಯಿತಿಗೂ ತನ್ನ ವ್ಯಾಪ್ತಿಯ ಸಂಪನ್ಮೂಲಗಳ ಮೇಲೆ ಸುಸ್ಥಿರ ಬಳಕೆಯ ಸಂಪೂರ್ಣ ಹಕ್ಕಿನ ಜೊತೆ ಅದನ್ನು ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿಯೂ ಇದೆ. ಊರಿನ ಕೆರೆ, ಕೊಳ, ಝರಿ, ದೇವಾಲಯ, ಜಲಪಾತ, ಬೃಹತ್‍ ಮರ, ಗಿಡಮೂಲಿಕೆ ವನ, ಪ್ರೇಕ್ಷಣಾ ಸ್ಥಳ, ಪಕ್ಷಿಧಾಮ, ಚಾರಣ ಮಾರ್ಗ, ಪವಿತ್ರ ವನ, ನೈಸರ್ಗಿಕ ಶಿಲಾರಚನೆ, ವನ್ಯಜೀವಿ ಸಂಪತ್ತಿನ ಮೇಲೆ ಪಂಚಾಯಿತಿಗಳಿಗೆ ಹಕ್ಕಿದೆ. ಇವಕ್ಕೆ ಧಕ್ಕೆ ಬರದಂತೆ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡುವ ಇಲ್ಲವೇ ನಿರಾಕರಿಸುವ ಪರಮಾಧಿಕಾರ ಪಡೆದಿವೆ.

ಜಲಪಾತದಿಂದ ಹಣ ಸಂಪಾದಿಸಿ ಊರಿನ ಅಭಿವೃದ್ಧಿ ಮಾಡುವ ವಿಶಾಖಪಟ್ಟಣ ಜಿಲ್ಲೆಯ ಕಟಿಕಿ, ಸೀತಾಫಲ ಹಣ್ಣಿಗೆ ರಾಷ್ಟ್ರೀಯ ಮಾರುಕಟ್ಟೆ ಒದಗಿಸಿದ ಮಹಾರಾಷ್ಟ್ರದ ಪಾಯ್‍ವಿಹಿರ್, ಲಕ್ಷಾಧಿಪತಿ
ಗಳೇ ತುಂಬಿರುವ ಹಿವರೆ ಬಜಾರ್ ಮತ್ತು ಕಡವಂಚಿ, ಉತ್ತರಾಖಂಡದ ಶುದ್ಧ ನೀರಿನ ಸುಂದರ್‍ಖಲ್, ವಿದ್ಯುತ್ತಿನ ಹಂಗಿಲ್ಲದ ರಾಜಸ್ಥಾನದ ನ್ಯೂಕೊಟ್ರ, ‘ಸ್ವಚ್ಛಮೇವ ಜಯತೆ’ ಎನ್ನುವ ಕರ್ನಾಟಕದ ಅರಂತೋಡು, ಸೂರ್ಯ ಶಕ್ತಿಯ ಗರಿಷ್ಠ ಬಳಕೆಯ ಅಮಾಸೆಬೈಲು, ಗಾಳಿಯನ್ನೇ ಬೆಳಕಾಗಿಸಿಕೊಂಡ ಗಿರಿಮರಡಿ, ಪಕ್ಷಿಧಾಮಕ್ಕೆ ಜನ್ಮ ನೀಡಿದ ಮುಂಡಿಗೆಕೆರೆ, ಪ್ಲಂಬಿಂಗ್‌ನಿಂದ ಹಣ ಗಳಿಸುವ ತಮಿಳುನಾಡಿನ ಕೀರಪಾಳ್ಯಂ, ಏರ್‌ಕಂಡೀಶನ್ಡ್ ಶಾಲೆ ನಡೆಸುವ ಗುಜರಾತ್‍ನ ಪುನ್ಸಾರಿ, ವಿದೇಶಿ ಗಣಿ ಕಂಪನಿಯನ್ನು ಒದ್ದೋಡಿಸಿದ ಒಡಿಶಾದ ನಿಯಮಗಿರಿ, ಹೆಣ್ಣುಮಗುವಿನ ಸಂರಕ್ಷಣೆಗೇ ಮೀಸಲಾದ ಪಿಪಲಾಂತ್ರಿ ಗ್ರಾಮ ಪಂಚಾಯಿತಿಗಳು ಅಭೂತಪೂರ್ವ ಸಾಧನೆ ಮಾಡಿವೆ.

ADVERTISEMENT

ಗ್ರಾಮ ಪಂಚಾಯಿತಿಯ ಕೆಲಸಗಳಿಗೆ ಕಾರ್ಯಸೂಚಿ, ದಿಕ್ಸೂಚಿ ಒದಗಿಸಲು ಗ್ರಾಮಸಭೆ ಇರುತ್ತದೆ. ಗ್ರಾಮದ ‘ವಿಧಾನಸಭೆ’ ಎಂದೇ ಜನಜನಿತವಾಗಿರುವ ಗ್ರಾಮ ಸಭೆಯಷ್ಟು ಪವರ್‌ಫುಲ್‌ ವ್ಯವಸ್ಥೆ ವಿಶ್ವದ ಯಾವುದೇ ರಾಜಕೀಯ, ಸಾಮಾಜಿಕ ವ್ಯವಸ್ಥೆಯಲ್ಲಿ ಇಲ್ಲ. ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಮೀರಲು ನ್ಯಾಯಾಲಯಗಳಿಗೂ ಆಗುವುದಿಲ್ಲ. ಗ್ರಾಮಸಭೆಯ ಮೂಲಕ ಹಕ್ಕನ್ನು ಚಲಾಯಿಸಿ ಸಂಪನ್ಮೂಲಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ವರೆಗೂ ಹೋರಾಡಿ, ಕೇಸು ಗೆದ್ದು, ಬಹುರಾಷ್ಟ್ರೀಯ ಕಂಪನಿಗಳ ನಿದ್ದೆಗೆಡಿಸಿ, ಜಾಗ ಖಾಲಿ ಮಾಡಿಸಿ, ಗಣಿಗಾರಿಕೆ, ಅಣೆಕಟ್ಟು, ವಿದ್ಯುತ್‍ ಸ್ಥಾವರಗಳ ತೆಕ್ಕೆಯಿಂದ ನಿತ್ಯಹರಿದ್ವರ್ಣ ಕಾಡುಗಳನ್ನು ರಕ್ಷಿಸಿಕೊಂಡು ಇತಿಹಾಸ ನಿರ್ಮಿಸಿದ ಪಂಚಾಯಿತಿಗಳಿವೆ.

ನಮ್ಮ ರಾಜ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆಡಳಿತದಲ್ಲಿ ಜನರ ಸಹಭಾಗಿತ್ವ, ಪಾರದರ್ಶಕತೆ ತರಲು, ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು, ಶೋಷಿತ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು, ಕಾರ್ಯಕ್ರಮದ ಸರಿಯಾದ ಅನುಷ್ಠಾನ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸಮಗ್ರ ಅಭಿವೃದ್ಧಿಯ ಗುರಿ ಸಾಧಿಸಲು ಗ್ರಾಮಸಭೆಗಿಂತಲೂ ತಳಮಟ್ಟದ ‘ವಾರ್ಡ್‍ಸಭೆ’ಗಳನ್ನು ಹುಟ್ಟುಹಾಕಿದೆ. ಹಳ್ಳಿಗರ ನೆರವಿಗೆ ನಿಲ್ಲಲು ವಿಲೇಜ್ ಡೆವಲಪ್‍ಮೆಂಟ್ ಕೌನ್ಸಿಲ್‍ಗಳಿವೆ. ಸುತ್ತಲಿನ ಅರಣ್ಯ ಕಾಪಾಡಲು ಗ್ರಾಮ ಅರಣ್ಯ ಸಮಿತಿಗಳೂ ಇವೆ.

ಗ್ರಾಮಸಭೆಯ ಅಂಗೀಕಾರವಿಲ್ಲದೆ ಯಾವುದೇ ಯೋಜನೆಯನ್ನು ಜಾರಿಗೆ ತರುವಂತಿಲ್ಲ ಎಂಬ ಸಂವಿಧಾ ನಾತ್ಮಕ ಪ್ರಬಲ ಕಾಯ್ದೆ ಇದೆ. ವಸತಿ ಮತ್ತು ಇತರ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವುದರ ಜೊತೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಅರಣ್ಯ ಹಕ್ಕು ಕಾಯ್ದೆ, ಮಕ್ಕಳ ಮತ್ತು ಮಹಿಳಾ ಹಕ್ಕುಗಳು, ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವಲ್ಲಿ ಗ್ರಾಮಸಭೆಯ ಪ್ರಯತ್ನಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಮಾತಿದೆ. ಕಡ್ಡಾಯವಾಗಿ ಗ್ರಾಮಸಭೆ ನಡೆಸಬೇಕು ಎಂಬ ಕಾರಣಕ್ಕೆ ಕಾಟಾಚಾರದ ಗ್ರಾಮಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯರ ನಿರಾಸಕ್ತಿಯೂ ಇದಕ್ಕೆ ಕಾರಣವಾಗಿದೆ.

ಸಿಕ್ಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜನರ ನೆಮ್ಮದಿ ಹಾಳುಮಾಡಿ ಅಭಿವೃದ್ಧಿಯ ಅವಕಾಶ ಕಳೆದುಕೊಂಡ ಉದಾಹರಣೆಗಳು ಬಹಳಷ್ಟಿವೆ. ಆಡಳಿತ- ನ್ಯಾಯಾಂಗದಿಂದ ಛೀಮಾರಿ ಹಾಕಿಸಿಕೊಂಡು, ನೋಟಿಸ್‌ ಪಡೆದು, ವಜಾ ಆದ ಪಂಚಾಯಿತಿಗಳೂ ಇವೆ. ರಾಜಕೀಯ ಪಕ್ಷಗಳ ಬೆಂಬಲದಿಂದಲೋ ಅವುಗಳೆಡೆ ಗಿರುವ ಪ್ರೀತಿಯಿಂದಲೋ ಪಂಚಾಯಿತಿಯಲ್ಲಿ ಸ್ಥಾನ ಗಳಿಸುವ ಸದಸ್ಯರು ಪಕ್ಷಗಳ ಹಿತಾಸಕ್ತಿಗೆ ನೆರವಾಗಲು ಉತ್ತಮ ಕೆಲಸಗಳಿಗೆ ಅಡ್ಡಿಯಾದದ್ದೂ ಇದೆ.

ಮನರಂಜನೆ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಹಲವು ಪರಿಸರ ವಿರೋಧಿ ಯೋಜನೆಗಳು ಹಳ್ಳಿಗಳ ಬಳಿ ಬರುತ್ತಿವೆ. ನಗರಮುಖಿ ಅಭಿವೃದ್ಧಿಯ ಫಲವಾಗಿ ಹಳ್ಳಿಗಳು ನಗರಗಳ ತ್ಯಾಜ್ಯದ ತೊಟ್ಟಿಗಳಾಗಬಾರದು. ಗ್ರಾಮದ ಪರಿಸರ ಹಾಳು ಮಾಡುವ ಯಾವುದೇ ಯೋಜನೆ ಇರಲಿ, ಅದು ಚಿಕ್ಕದು, ದೊಡ್ಡದು ಎಂದು ನೋಡದೆ ಸಂಪೂರ್ಣವಾಗಿ ವಿರೋಧಿಸಿ ಗ್ರಾಮದ ಆಸುಪಾಸಿನಲ್ಲಿ ಅನುಷ್ಠಾನಗೊಳ್ಳದಂತೆ ನೋಡಿಕೊಳ್ಳಬೇಕು. ಕೈಗಾ ಅಣುಸ್ಥಾವರ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪಂಚಾಯಿತಿಗಳು ಒಕ್ಕೊರಲಿನಿಂದ ವಿರೋಧಿಸಿದ್ದವು. ತುಮಕೂರು ಜಿಲ್ಲೆಯ ಪಂಚಾಯಿತಿಗಳು ತಮ್ಮ ಹಳ್ಳಿಗಳ ಸುತ್ತಲೂ ಮಾಲಿನ್ಯ ಸೂಸುವ ಯಾವ ಉದ್ಯಮಗಳೂ ಬೇಡ ಎಂದು ಗಟ್ಟಿ ನಿರ್ಧಾರ ಮಾಡಿದ್ದವು.

ಅನುದಾನವಿಲ್ಲದೆಯೂ ಮಾಡಬಹುದಾದ ಅನೇಕ ಕೆಲಸಗಳಿವೆ. ದೇಶದ ಅನೇಕ ಗ್ರಾಮಗಳಲ್ಲಿ ಒಂದಿಲ್ಲೊಂದು ಜನಾಕರ್ಷಣೆಯ ಸ್ಥಳವಿದೆ. ಎಕೊ ಟೂರಿಸಂನ ಅಡಿಯಲ್ಲಿ ಆ ಪ್ರದೇಶವನ್ನು ಆದಾಯ ಮೂಲವನ್ನಾಗಿಸಿಕೊಂಡು ಸಂರಕ್ಷಿಸಬೇಕು. ಸ್ಥಳೀಯ ಉತ್ಪನ್ನಗಳನ್ನು ಹತ್ತಿರದ ಮಾರುಕಟ್ಟೆಗೆ ತಲುಪಿಸಿ ಹಣ ಗಳಿಸುವ ಅವಕಾಶಗಳಿವೆ. ಹಳ್ಳಿಯು ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಮುಖ್ಯ ರಸ್ತೆಗೆ ಅಂಟಿಕೊಂಡಂತಿದ್ದರೆ ಅಲ್ಲಿನ ವಿಶೇಷವನ್ನು ಸಾರುವ ಪ್ರತಿಮೆ, ಚಿತ್ರ, ಕಲಾಕೃತಿ ಯನ್ನು ದೊಡ್ಡದಾಗಿ ರಚಿಸಿ ದಾರಿಹೋಕರ ಕಣ್ಣಿಗೆ ಕಾಣಿಸುವಂತೆ ಇರಿಸಬೇಕು. ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಸ್ಥಳದ ಮಹತ್ವವನ್ನು ಇತರರಿಗೆ ತಿಳಿಸಬೇಕು.

ಪ್ರತಿ ಪಂಚಾಯಿತಿಯೂ ಜೀವಿವೈವಿಧ್ಯ ಉಪಸಮಿತಿ ಯನ್ನು ಸ್ಥಾಪಿಸಿ, ಸ್ಥಳೀಯರ ಸಹಾಯದಿಂದ ಗಿಡ ಮೂಲಿಕೆಗಳು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗದಂತೆ ತಡೆಯಬಹುದು. ಒಂದುವೇಳೆ ಕೊಡಲೇ ಬೇಕೆಂದಿದ್ದರೆ, ಅದಕ್ಕೆ ತೆರಿಗೆ ವಿಧಿಸಿ ಅದನ್ನು ಊರಿನ ಏಳಿಗೆಗೆ ಬಳಸಿಕೊಳ್ಳಬಹುದು. ಜೀವವೈವಿಧ್ಯಕ್ಕೆ ಹಾನಿ ತರಬಲ್ಲ ಯಾವುದೇ ಯೋಜನೆಯನ್ನು ಪಂಚಾ ಯಿತಿಗಳು ನಿರಾಕರಿಸಬಹುದು. ಸರ್ಕಾರಗಳು ಹೊರಗಿನ ಅನುದಾನಕ್ಕೆ ಕಾಯದೆ ಜೀವಿವೈವಿಧ್ಯದ ರಕ್ಷಣೆಗೆ ಗ್ರಾಮ ಅರಣ್ಯ ಸಮಿತಿಗಳನ್ನು ಕೂಡಲೇ ಪುನಶ್ಚೇತನಗೊಳಿಸಬೇಕು. ಅರಣ್ಯ ಇಲಾಖೆ ಮತ್ತು ಪಂಚಾಯಿತಿಗಳ ನಡುವಿನ ಮುನಿಸನ್ನು ಶಮನಗೊಳಿಸ ಬೇಕು. ಸರ್ವ ಶಿಕ್ಷಣ, ಗ್ರಾಮ ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಆದ್ಯತೆಯ ವಿಷಯಗಳಾಗಬೇಕು. ಸೋಲಾರೀ ಕರಣ, ಮಳೆನೀರು ಸಂಗ್ರಹ, ಶೌಚಾಲಯ ನಿರ್ಮಾಣ, ಕೆರೆ ಹೂಳೆತ್ತುವುದು, ನಾಲೆ ದುರಸ್ತಿಗಾಗಿ ಶ್ರಮದಾನ, ರಾಸಾಯನಿಕ ಗೊಬ್ಬರಗಳ ಅತ್ಯಲ್ಪ ಬಳಕೆಗಳ ಕುರಿತು ವಿಶೇಷ ಕಾಳಜಿ ವಹಿಸಬೇಕು.

ದೇಶದ ಹೆಮ್ಮೆ ಸಾರುವ ರಾಷ್ಟ್ರಗೀತೆ, ನಾಡಿನ ಹೆಮ್ಮೆ ಹೇಳುವ ನಾಡಗೀತೆ ಇರುವಂತೆ ಗ್ರಾಮದ ಸಾಧನೆ ಪರಿಚಯಿಸುವ ಗ್ರಾಮಗೀತೆ ನಮಗೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.