ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ಪರಸತ್ವದ ಕಾಣ್ಕೆ

ಡಾ. ಗುರುರಾಜ ಕರಜಗಿ
Published 21 ಏಪ್ರಿಲ್ 2021, 16:30 IST
Last Updated 21 ಏಪ್ರಿಲ್ 2021, 16:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ |
ಕಾಣಿಪುದದಾತ್ಮಸ್ವಭಾವದುದ್ಗಮವ ||
ಏನಾಶೆ! ಯೇನು ಸಾಹಸ!!ವೇನು ಭಂಗಗಳು! |
ಅನುಭವವೇದವದು – ಮಂಕುತಿಮ್ಮ || 409 ||

ಪದ-ಅರ್ಥ: ಪರಸತ್ತ್ವಸಾಕ್ಷಾತ್ಕವಿತೆ= ಪರಸತ್ತ್ವ+ ಸಾಕ್ಷಾತ್+ ಕವಿತೆ, ಕಾಣಿಪುದದಾತ್ಮಸ್ವಭಾವದುದ್ಗಮವ= ಕಾಣಿಪುದು (ತೋರಿಸುವುದು)+ ಅದು+ ಆತ್ಮಸ್ವಭಾವದ+ ಉದ್ಗಮವ (ಹುಟ್ಟನ್ನು), ಭಂಗಗಳು= ನಿರಾಸೆಗಳು, ಅನುಭವವೇದ= ಅನುಭವದಿಂದ ತಿಳಿದದ್ದು, ಅನುಭವದಿಂದ ಸಿದ್ಧವಾದ ವೇದ.

ವಾಚ್ಯಾರ್ಥ: ಮಾನವ ಚರಿತೆಯೆಂದರೆ ಪರಸತ್ವದ ಸಾಕ್ಷಾತ್ಕಾರಕ್ಕೆ ಮಾಡಿದ ಕಾರ್ಯಗಳ ಚರಿತೆ. ಅದು ಮನುಷ್ಯನ ಆತ್ಮಸ್ವಭಾವದ ಹುಟ್ಟನ್ನು ತೋರಿಸುತ್ತದೆ. ಏನು ಮನುಷ್ಯನ ಆಸೆ, ಏನವನ ಸಾಹಸ, ಏನು ಅವನ ನಿರಾಸೆಗಳು! ಇವೆಲ್ಲ ಪರಸತ್ವದ ಸಾಕ್ಷಾತ್ಕಾರಕ್ಕೆ ಅನುಭವದಿಂದ ದೊರೆತ ಜ್ಞಾನಗಳು.

ADVERTISEMENT

ವಿವರಣೆ: ಮಾನವನ ಚರಿತ್ರೆಯಲ್ಲಿ ದಾಖಲಾದದ್ದೆಷ್ಟೋ, ಆಗದೆ ಉಳಿದಿಹುದು ಎಷ್ಟೋ? ನಮ್ಮ ಇಂದಿನ ಹಲಗೆಯ ಮೇಲೆ ಹಿಂದಿನವರು ಬರೆದ ಬಳಪದ ಗುರುತುಗಳು, ಗೀರುಗಳು ಇದ್ದೇ ಇವೆ. ಅವುಗಳಲ್ಲಿ ಅನೇಕವನ್ನು ಅಳಿಸಲಾಗುವುದಿಲ್ಲ. ಅವು ಹಲಗೆಯಲ್ಲಿ ಹಳ್ಳಕೊಳ್ಳಗಳಾಗಿ ಉಳಿದೇ ಇವೆ. ಅವುಗಳನ್ನು ತಿಳುವಳಿಕೆಯ, ಅಂತಃಕರಣದ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅವೆಲ್ಲ ಯಾವುದೋ ಒಂದು ಗುರಿಯೆಡೆಗೆ ಮನುಷ್ಯ ಮಾಡಿದ ಪ್ರಯೋಗಗಳಾಗಿವೆ. ಆ ಗುರಿಯೆಡೆಗೆ ಸಾಗುವಾಗ ಇದ್ದಂಥ ಅಪಾರವಾದ ಆಸೆಗಳು, ಗುರಿಯನ್ನು ತಲುಪಲು ಮಾಡಿದ ಅನ್ಯಾದೃಶವಾದ ಸಾಹಸಗಳು, ತಲುಪಲು ಸಾಧ್ಯವಾಗದಾಗ ಅಥವಾ ತಲುಪುವುದು ತಡವಾದಾಗ ಆದಂಥ ನಿರಾಸೆಗಳು, ಇವೇ ಮಾನವ ಚರಿತ್ರೆಯ ಮೂಲಾಂಶಗಳು. ತನಗಿಂತ ಮಿಗಿಲಾದ, ತನ್ನ ತಿಳಿವನ್ನು ಮೀರಿದಂಥ, ತನ್ನ ಶಕ್ತಿಯ ಮಿತಿಯಾಚೆಗಿರುವ ಗುರಿಯನ್ನು ಅರಸುವ ಪ್ರಕ್ರಿಯೆಯೆಲ್ಲ ಪರಸತ್ವವನ್ನು ತಿಳಿಯುವ ಪ್ರಯತ್ನವೇ. ಬಾಳಿನಲ್ಲಿ ಸಂತಸದ ಚಿಲುಮೆ ಚಿಮ್ಮಿದಾಗ ಅದೇ ಪರಸತ್ವದ ಅನುಭೂತಿ. ಸಸಿಯಲ್ಲಿ ಕುಡಿ ಚಿಗುರಿದಾಗ, ಮೊಗ್ಗು ಮೊಗದೋರಿ ನಕ್ಕಾಗ, ಮಗು ಮೊದಲ ನುಡಿ ತೊದಲಿದಾಗ, ಬೇರೆಯವರು ನಿಮ್ಮನ್ನು ಮೆಚ್ಚಿ ಮಾತನಾಡಿದಾಗ, ಪ್ರೀತಿಯ ಕುಡಿನೋಟದೊಂದಿಗೆ ಪ್ರೀತಿಯ ಮರುನೋಟ ಬೆಸೆದಾಗ, ಒಬ್ಬರ ನೋವಿಗೆ ಮತ್ತೊಬ್ಬರು ಮರುಗಿದಾಗ, ಬಹುದಿನದ ಕನಸು
ನನಸಾದಾಗ, ಮನದಲ್ಲಿ ಶಾಂತಿಯ ಕ್ಷಣ ಆವತರಿಸಿದಾಗ, ಆದ ಅನುಭವಗಳೇ ನಮ್ಮ ಆತ್ಮಸ್ವಭಾವದ ಹುಟ್ಟು. ಇದನ್ನು ಕಗ್ಗ ‘ಅನುಭವವೇದ’ ಎಂದು ಕರೆಯುತ್ತದೆ.

‘ವಿದ್’ ಎಂಬ ಧಾತುವಿನಿಂದ ವೇದ ಎಂಬ ಪದ ಬಂದಿದೆ. ಯಾವ ತಿಳುವಳಿಕೆ ನಮ್ಮ ಜೀವನವನ್ನು ಲೌಕಿಕದಲ್ಲಿ ಪನ್ನವಾಗಿರಿಸಿ, ಆಧ್ಯಾತ್ಮಿಕ ಪಥದಲ್ಲಿ ಕೈ ಹಿಡಿದು ನಡೆಸುತ್ತದೋ ಅದು ವೇದ. ವೇದ ಮೂಲತ: ಅಲೌಕಿಕ ಜ್ಞಾನವನ್ನು ನೀಡುವ ಮೂಲವಾದರೂ ಅದು ಹೇಳುವ ಸಂಗತಿಗಳು ನಮ್ಮ ದೈನಂದಿನ ಬದುಕನ್ನು ನೇರಮಾಡುವಲ್ಲಿ ಮಾರ್ಗದರ್ಶನ ಮಾಡುತ್ತವೆ. ವೇದಗಳು ‘ಅಪೌರುಷೇಯ’ ಎಂದರೆ ಒಬ್ಬರೇ ರಚಿಸಿದ್ದಲ್ಲ. ಅವು ದೀರ್ಘಕಾಲದಲ್ಲಿ, ಅನೇಕ ಜನ ಮಹರ್ಷಿಗಳು ತಮ್ಮ ಅನುಭವಗಳ ಸಾರದಿಂದ ಹೊರಬಂದವುಗಳು. ಹಾಗೆಯೇ ಮನುಷ್ಯನ ಸರ್ವ ಅನುಭವಗಳೂ ವೇದಗಳಾಗಿ ನಮ್ಮನ್ನು ಕರೆದೊಯ್ಯುವುದು ಆ ಪರಸತ್ವದ ಕಾಣ್ಕೆಯ ಕಡೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.