ADVERTISEMENT

ಜನರಾಜಕಾರಣ: ಕಣಿವೆ ನಾಡಲ್ಲಿ ಯುವ ಹವಾ

ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕದ ಬಳಿಕ ಹಕ್ಕು ಚಲಾಯಿಸುತ್ತಿದ್ದಾರೆ ಮತದಾರರು

ಪ್ರೊ. ಸಂದೀಪ್ ಶಾಸ್ತ್ರಿ
Published 29 ಸೆಪ್ಟೆಂಬರ್ 2024, 23:30 IST
Last Updated 29 ಸೆಪ್ಟೆಂಬರ್ 2024, 23:30 IST
   

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಪೂರ್ಣಗೊಂಡಿದ್ದು, ಮೂರನೇ ಹಾಗೂ ಕೊನೆಯ ಹಂತದ ಮತದಾನ ಅಕ್ಟೋಬರ್‌ 1ರಂದು ನಡೆಯಲಿದೆ. 2014ರ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಅಂದರೆ, ಜಮ್ಮು ಮತ್ತು ಕಾಶ್ಮೀರದ ಮತದಾರರು ಒಂದು ದಶಕದ ಬಿಡುವಿನ ಬಳಿಕ ಹೊಸ ಸರ್ಕಾರವೊಂದನ್ನು ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಈ ಹತ್ತು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯದ ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳು ಘಟಿಸಿವೆ. 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗಿದೆ. 2019ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಪ್ರಮುಖ ನಿರ್ಧಾರ ತೆಗೆದುಕೊಂಡಿತು. ಇದಲ್ಲದೆ, ರಾಜ್ಯವನ್ನು ಲಡಾಖ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. 

ಭವಿಷ್ಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂಬ ವಾಗ್ದಾನವನ್ನು ಬಿಜೆಪಿ ನೀಡಿದೆ. ವಿಶೇಷ ಸ್ಥಾನಮಾನ ಮರು ಸ್ಥಾಪನೆಯಾಗಬೇಕೆಂಬುದು ಕೆಲವು ಪ್ರಾದೇಶಿಕ ಪಕ್ಷಗಳ ಬಯಕೆಯಾಗಿದೆ. ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಸರಿಯಾದ ತೀರ್ಮಾನ ಹೌದು, ಆದರೆ, ಅದಕ್ಕೆ ಅನುಸರಿಸಿದ ಕ್ರಮ ಪಾರದರ್ಶವಾಗಿರಲಿಲ್ಲ ಎಂಬುದು ಕಾಂಗ್ರೆಸ್‌ ಪಕ್ಷದ ನಿಲುವು.

ADVERTISEMENT

ಲೋಕಸಭಾ ಚುನಾವಣೆ ನಡೆದ ಕೆಲವು ತಿಂಗಳುಗಳ ಬಳಿಕ ಇಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಜಮ್ಮು ವಲಯದ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಎರಡನ್ನೂ ಗೆದ್ದಿದೆ. ಕಾಶ್ಮೀರ ವಲಯದ ಮೂರು ಸ್ಥಾನಗಳಲ್ಲಿ ಎರಡನ್ನು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಜಯಿಸಿದೆ. ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿಗೆ ಗೆಲುವು ದಕ್ಕಿದೆ. ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಗೆ (ಪಿಡಿಪಿ) ಖಾತೆ ತೆರೆಯಲು ಆಗಿಲ್ಲ.

ಎನ್‌ಸಿ ಮತ್ತು ಪಿಡಿಪಿಯ ಪ್ರಮುಖ ನಾಯಕರಾದ ಒಮರ್‌ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರು ಲೋಕಸಭಾ ಚುನಾವಣೆಯಲ್ಲಿ ಕಹಿ ಉಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿ ಅಬ್ದುಲ್‌ ರಶೀದ್‌ ಶೇಖ್ (ಎಂಜಿನಿಯರ್‌ ರಶೀದ್‌) ಅವರು ಒಮರ್‌ ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ. ರಶೀದ್‌ ಅವರು ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆ ಎದುರಿಸಿದ್ದರು. ಮೆಹಬೂಬ ಅವರನ್ನು ನ್ಯಾಷನಲ್‌ ಕಾನ್ಫರೆನ್ಸ್‌ ಅಭ್ಯರ್ಥಿಯು 2.80 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. 

2024ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ, ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಲ್ಲಿ, ನ್ಯಾಷನಲ್‌ ಕಾನ್ಫರೆನ್ಸ್‌ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರ ಮಿತ್ರ ಪಕ್ಷ ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿ ಮೇಲುಗೈ ಪಡೆದಿದೆ. ಇವೆರಡು ಪಕ್ಷಗಳೂ ಜತೆಯಾಗಿ 43 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು, ಒಟ್ಟಾರೆ ಬಲ ಸರಳ ಬಹುಮತದ ಸನಿಹ ಬರುತ್ತದೆ. ಬಿಜೆಪಿ 29 ಹಾಗೂ ಪಿಡಿಪಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿವೆ. ಇತರ 13 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಹಾಗೂ ಇತರರು ಮುನ್ನಡೆ ಹೊಂದಿದ್ದಾರೆ. 2014ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ಬಿಜೆಪಿಯು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ. ಆದರೆ ಕಾಂಗ್ರೆಸ್‌ ಮತ್ತು ಪಿಡಿಪಿಯ ಬಲ ತೀವ್ರ ಕುಸಿತ ಕಂಡಿದೆ.

ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಅನೇಕ ಕಾರಣಗಳಿಂದಾಗಿ ದೇಶದೊಳಗೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಚುನಾವಣೆಯು ದಶಕದ ಬಳಿಕ ನಡೆಯುತ್ತಿರುವುದರಿಂದ, ಒಂದು ಸಂಪೂರ್ಣ ಹೊಸ ತಲೆಮಾರಿನ ಮಂದಿ ಮತ ಚಲಾಯಿಸಲು ಮೊದಲ ಬಾರಿಗೆ ಅರ್ಹತೆ ಪಡೆದಿದ್ದಾರೆ. 18ರಿಂದ 28 ವರ್ಷದೊಳಗಿನವರು ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ.  

370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಹಾಗೂ ಜಮ್ಮು ಮತ್ತು ಕಾಶ್ಮೀರವು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಸಹ ಇದಾಗಿದೆ. ಈ ಮಹತ್ತರ ಬದಲಾವಣೆಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬೆಳವಣಿಗೆಗಳು ಜನರು ನೀಡುವ ತೀರ್ಪಿನಲ್ಲಿ ಪ್ರತಿಫಲಿಸಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಚುನಾವಣೆಯು ಮೂರು ಅಂಶಗಳಿಂದಾಗಿ ಪ್ರಾಮುಖ್ಯ ಪಡೆದುಕೊಂಡಿದೆ. 

ಮೊದಲನೆಯದು, ಮತದಾನದ ಪ್ರಮಾಣ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಈ ಚುನಾವಣೆಯನ್ನು ಒಂದು ಮಾಪಕವಾಗಿ ಹಲವರು ನೋಡುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಒಂದು ದಶಕದ ಬಿಡುವಿನ ಬಳಿಕ ಮತದಾನದ ಹಕ್ಕು ಚಲಾಯಿಸುವುದು ಖಂಡಿತವಾಗಿಯೂ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ಈ ಉತ್ಸಾಹವು ಮೊದಲ ಹಂತದ ಮತದಾನದಲ್ಲಿ ಕಂಡುಬಂದಿದ್ದು, ಶೇ 61ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ, ಎರಡನೇ ಹಂತದಲ್ಲಿ ಶೇ 57ರಷ್ಟು ಮತದಾನ ಆಗಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಬಹಿಷ್ಕಾರದ ಕರೆಯ ನಡುವೆಯೂ ಶೇ 65ರಷ್ಟು ಮತದಾನ ಆಗಿತ್ತು. ಈ ಬಾರಿಯ ಚುನಾವಣೆಯ ಮೊದಲ ಎರಡು ಹಂತಗಳ ಮತದಾನವನ್ನು ಗಮನಿಸಿದಾಗ, 2014ರಲ್ಲಿ ದಾಖಲಾಗಿದ್ದ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ದಾಖಲಾಗಿರುವುದನ್ನು ಕಾಣಬಹುದು. ಆದರೂ, ದಶಕದ ಬಳಿಕ ನಡೆಯುತ್ತಿರುವ ಚುನಾವಣೆಯಲ್ಲಿ ಇಲ್ಲಿನ ಮತದಾರರು ತೋರಿದ ಉತ್ಸಾಹವನ್ನು ಕಡೆಗಣಿಸುವಂತಿಲ್ಲ. ಮೊದಲ ಎರಡು ಹಂತಗಳ ಮತದಾನ ಶಾಂತಿಯುತವಾಗಿ ನಡೆದಿದೆ ಎಂಬುದು ಕೂಡ ಗಮನಿಸಬೇಕಾದ ಪ್ರಮುಖ ಅಂಶ. 

ಎರಡನೆಯದಾಗಿ, ಜನರು ಈ ಬಾರಿ ಯಾವೆಲ್ಲಾ ಅಂಶಗಳನ್ನು ಆಧರಿಸಿ ಮತ ಚಲಾಯಿಸಿದ್ದಾರೆ ಎಂಬುದು ಮತ ಎಣಿಕೆಯ ದಿನವಾದ ಅಕ್ಟೋಬರ್‌ 8ರಂದು ತಿಳಿಯಲಿದೆ. ಈ ಬಾರಿ ಮತದಾರರಿಗೆ, ಅದರಲ್ಲೂ ವಿಶೇಷವಾಗಿ ಯುವಪೀಳಿಗೆಗೆ ಅಭಿವೃದ್ಧಿ, ಉದ್ಯೋಗ ಅವಕಾಶಗಳು, ಅಗತ್ಯ ವಸ್ತುಗಳ ಬೆಲೆಯೇರಿಕೆ ಮತ್ತು ಶಾಂತಿ–ಸುವ್ಯವಸ್ಥೆಯ ಸ್ಥಿತಿಗತಿಯಂತಹ ವಿಚಾರಗಳು ಮತದಾನದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ ಎಂಬುದನ್ನು ಮಾಧ್ಯಮ ವರದಿಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ಎರಡು ಪ್ರಾದೇಶಿಕ ಪಕ್ಷಗಳಾಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಪಿಡಿಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೆ ಪಡೆಯುವುದು ಹಾಗೂ 370ನೇ ವಿಧಿಯಡಿ ಪುನಃ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕೆ ಸಂಬಂಧಿಸಿದ ಆಗ್ರಹದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿವೆ. ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಎಷ್ಟರಮಟ್ಟಿಗೆ ಜನಬೆಂಬಲ ಗಳಿಸಲಿವೆ ಎಂಬುದು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಲಿದೆ. ಜಮ್ಮು ವಲಯ ಮತ್ತು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭಿನ್ನ ರೀತಿಯ ರಾಜಕೀಯ ದೃಷ್ಟಿಕೋನವನ್ನು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಜಮ್ಮುವಿನಲ್ಲಿ ಬಿಜೆಪಿಯು ಪ್ರಾಬಲ್ಯ ಸಾಧಿಸಿದ್ದರೆ, ಕಾಶ್ಮೀರ ಕಣಿವೆಯಲ್ಲಿ ಕಾಂಗ್ರೆಸ್‌, ಎನ್‌ಸಿ ಹಾಗೂ ಪಿಡಿಪಿ ಪ್ರಮುಖ ಪಕ್ಷಗಳಾಗಿವೆ. 

ಮೂರನೆಯದಾಗಿ, ಹಲವು ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಪ್ರಮುಖ ಪಕ್ಷಗಳಿಗೆ ಪೈಪೋಟಿ ನೀಡುತ್ತಿರುವುದನ್ನು ಈ ಚುನಾವಣೆಯಲ್ಲಿ ಕಾಣಬಹುದು. ಅವರು ತೋರುವ ಸಾಧನೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಮುಖ ಪ್ರಾದೇಶಿಕ ಪಕ್ಷಗಳು ಅಧಿಕಾರವನ್ನು ತಮ್ಮಲ್ಲೇ ಹಿಡಿದಿಟ್ಟುಕೊಳ್ಳುವ ಸಂಪ್ರದಾಯ ಮುಂದುವರಿಯಲಿದೆಯೇ ಅಥವಾ ಹೊಸಬರು ಚುನಾವಣೆಯ ಮೇಲೆ ಪರಿಣಾಮ ಬೀರುವರೇ? ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿನ ಚೈತನ್ಯಶೀಲತೆಯನ್ನು ಸೂಚಿಸುವ ಅಂಶವೂ ಇದೇ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.