ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ, ಬಿಜೆಪಿ ನೇತೃತ್ವದ ಸರ್ಕಾರವು ಒಳ್ಳೆಯ ಪರಿಣಾಮ ಬೀರಬಲ್ಲ ಯಾವುದೇ ಸುದ್ದಿಯನ್ನು ಒಳ್ಳೆಯ ಸಾಧನೆ ಎಂದು ತೋರಿಸಲು ಉತ್ಸುಕವಾಗಿದೆ. ಇದಕ್ಕೆ ಒಂದು ನಿದರ್ಶನ, ಈಚೆಗೆ ಮುಕ್ತಾಯವಾದ ಜಾಗತಿಕ ಹೂಡಿಕೆದಾರರ ಸಮಾವೇಶ. ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಕರ್ನಾಟಕ ಇಂದು ಆಲೋಚಿಸು ವುದನ್ನು ಭಾರತವು ನಾಳೆ ಕೃತಿಯಲ್ಲಿ ತೋರಿಸುತ್ತದೆ’ ಎಂದು ಒತ್ತಿ ಹೇಳಿದರು. ತಮ್ಮ ನೇತೃತ್ವದ ಸರ್ಕಾರವನ್ನು ಅವರು ಹೂಡಿಕೆಸ್ನೇಹಿ, ಮುಂದಾಲೋಚನೆ ಇರುವ ಸರ್ಕಾರವನ್ನಾಗಿ ಬಣ್ಣಿಸಿದರು. ₹ 10 ಲಕ್ಷ ಕೋಟಿ ಮೊತ್ತದ ಒಪ್ಪಂದಗಳು ಅಂತಿಮಗೊಂಡಿದ್ದನ್ನು ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಉಲ್ಲೇಖಿಸಿದರು.
ಈ ಬಾರಿಯ ಕಾರ್ಯಕ್ರಮದ ಯಶಸ್ಸನ್ನು ಹೊಗಳುವ ಸಂದರ್ಭದಲ್ಲಿ ಅವರು, ಹಿಂದೆ ಭರವಸೆಗಳಿಗೆ ತಕ್ಕಂತೆ ಸಾಧನೆ ಆಗದಿದ್ದುದನ್ನು ಒಪ್ಪಿಕೊಂಡರು. ಕೆಲವು ವರ್ಷ ಗಳಲ್ಲಿ ಒಪ್ಪಂದದ ಶೇಕಡ 8ರಷ್ಟು, ಶೇ 15ರಷ್ಟು ಮಾತ್ರ ಹೂಡಿಕೆ ಆಗಿದ್ದಿದೆ. ಈ ಬಾರಿ ಈ ರೀತಿ ಆಗುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು. ಹಿಂದಿನ ಸಮಾವೇಶಗಳಲ್ಲಿ ವಾಸ್ತವ ಹೂಡಿಕೆ ಕಡಿಮೆ ಆಗಿದ್ದರಿಂದ ಉಂಟಾದ ಸಿನಿಕತೆಯು ಈ ಬಾರಿಯೂ ಪ್ರಭಾವ ಉಂಟುಮಾಡಬಹುದು ಎಂಬುದು ಅವರಿಗೆ ಗೊತ್ತಿದೆ. ಒಪ್ಪಂದಗಳು ಒಳ್ಳೆಯ ಉದ್ದೇಶಗಳನ್ನು, ಭಾರಿ ಭರವಸೆಗಳನ್ನು ಪ್ರತಿನಿಧಿಸುತ್ತವೆ. ಇವು ಮೊತ್ತದ ಉಲ್ಲೇಖವಿರುವ, ಪಾವತಿಸುವವರು ಹಾಗೂ ಪಾವತಿ ಸ್ವೀಕರಿಸುವವರ ಹೆಸರು ಇರುವ, ಆದರೆ ದಿನಾಂಕ ಮತ್ತು ಸಹಿ ಇಲ್ಲದ ಚೆಕ್ ಇದ್ದಂತೆ!
ಕರ್ನಾಟಕ ಹಾಗೂ ಬೆಂಗಳೂರು ಒಂದು ಕಳೆದು ಹೋದ ಅವಕಾಶವನ್ನು ಹೇಗೆ ಪ್ರತಿನಿಧಿಸುತ್ತವೆ ಎಂಬುದನ್ನು ಹೇಳುವ ವರದಿಗಳು ಮಾಧ್ಯಮಗಳಲ್ಲಿ ಇವೆ. ರಾಜ್ಯವು ‘ಅಗಾಧ ಅವಕಾಶಗಳು ಹಾಗೂ ಸಾಮರ್ಥ್ಯಗಳ’ ತಾಣವಾಗಿರಬಹುದು. ಆದರೆ ಇದು ‘ತೀವ್ರ ಅಡಚಣೆಗಳಿರುವ ಮತ್ತು ಅಧಿಕಾರಶಾಹಿ ವ್ಯವಸ್ಥೆ ಸೃಷ್ಟಿಸುವ ವಿಳಂಬವು ಸಂಕಟ ಹುಟ್ಟಿಸುವ ಮಟ್ಟಕ್ಕೆ ಇರುವ’ ತಾಣವೂ ಹೌದು. ವಾಸ್ತವ ಹೂಡಿಕೆಗಳು ಕಡಿಮೆ ಪ್ರಮಾಣದಲ್ಲಿ ಇರುವುದಕ್ಕೆ ಇದು ಕಾರಣವೇ? ಇಲ್ಲಿ ನಾಲ್ಕು ಪ್ರಮುಖ ಅಡಚಣೆಗಳನ್ನು ನಿವಾರಿಸಬೇಕಿದೆ.
ಮೊದಲನೆಯದು, ಹೂಡಿಕೆಯನ್ನು ಆಕರ್ಷಿಸುವ ಹಾಗೂ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಬೇಕಿರುವ ಸ್ಥಿರತೆ ಸರ್ಕಾರಕ್ಕೆ ಇದೆಯೇ? ಅಷ್ಟು ಗಮನ ನೀಡಲು ಅದಕ್ಕೆ ಸಾಧ್ಯವೇ? ಕಳೆದ ಮೂರು ದಶಕಗಳಲ್ಲಿ (1992–2022) ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು 15 ಬಾರಿ ಬದಲಾಗಿದ್ದಾರೆ (12 ವ್ಯಕ್ತಿಗಳು). ಅಂದರೆ ಪ್ರತೀ ಎರಡು ವರ್ಷಗಳಿಗೆ ಒಬ್ಬರು ಮುಖ್ಯಮಂತ್ರಿ ಇಲ್ಲಿ ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಇಬ್ಬರು ಮಾತ್ರ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮೂರು ದಶಕಗಳಲ್ಲಿ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷವು ಮತ್ತೆ ಬಹುಮತ ಪಡೆದಿಲ್ಲ. ಆಯಾ ಸಂದರ್ಭದ ಸರ್ಕಾರದ ವಿಚಾರವಾಗಿ ಜನರ ಸಂತೃಪ್ತಿಯ ಮಟ್ಟವು ಹೆಚ್ಚಿರಲಿಲ್ಲ ಎಂಬುದನ್ನು ಲೋಕನೀತಿ–ಸಿಎಸ್‌ಡಿಎಸ್ ಸಮೀಕ್ಷೆಯ ಅಂಕಿ–ಅಂಶಗಳು ತಿಳಿಸಿವೆ. ಸರ್ಕಾರದ ಚುಕ್ಕಾಣಿ ಹಿಡಿದವರು ಅಭಿವೃದ್ಧಿ ಕಾರ್ಯತಂತ್ರಗಳಿಗೆ ಆದ್ಯತೆ ನೀಡದಿದ್ದುದಕ್ಕೆ ಮತ್ತು ರಾಜ್ಯವನ್ನು ನಿಜವಾಗಿಯೂ ಹೂಡಿಕೆದಾರಸ್ನೇಹಿ ಆಗಿಸದಿದ್ದುದಕ್ಕೆ ಇದು ಕಾರಣ.
ಎರಡನೆಯದಾಗಿ, ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ತರಲು ಹಾಗೂ ಹೆಚ್ಚಿನ ಹೂಡಿಕೆಗೆ ಬೇಕಿರುವ ವಾತಾ ವರಣ ಸೃಷ್ಟಿಸಲು ಪ್ರತೀ ಇಲಾಖೆಯೂ ಮುಖ್ಯಮಂತ್ರಿಯ ಮೇಲೆ (ಕೆಲವೊಮ್ಮೆ ಕೈಗಾರಿಕಾ ಸಚಿವರ ಮೇಲೆ) ಅವಲಂಬಿತವಾಗಿದೆ. ಸಂಸದೀಯ ವ್ಯವಸ್ಥೆಯು ಸಾಮೂಹಿಕ ಹೊಣೆಗಾರಿಕೆಯ ಆಧಾರದಲ್ಲಿ ಕೆಲಸ ಮಾಡಬೇಕಿದ್ದರೂ, ವಾಸ್ತವದಲ್ಲಿ ಪ್ರತೀ ಸಚಿವ ಕೂಡ ತಮ್ಮ ಸಣ್ಣ ರಾಜಕೀಯ ಕ್ಷೇತ್ರವನ್ನು ರಕ್ಷಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಬೇರೆ ಬೇರೆ ಸಚಿವರು ಹಾಗೂ ಅವರ ಇಲಾಖೆಗಳು ಸಾಮೂಹಿಕವಾಗಿ ಕೆಲಸ ಮಾಡಲು ಯತ್ನಿಸುವುದು ಕಡಿಮೆ. ಎಡಗೈ ಏನು ಮಾಡುತ್ತಿದೆ ಎಂಬುದು ಬಹಳ ಸಂದರ್ಭಗಳಲ್ಲಿ ಬಲಗೈಗೆ ಗೊತ್ತೇ ಇರುವುದಿಲ್ಲ! ಇದರ ಜೊತೆಯಲ್ಲೇ, ಸರ್ಕಾರದಲ್ಲಿ ಇರುವ ಭ್ರಷ್ಟಾಚಾರದ ಪ್ರಮಾಣದ ಬಗ್ಗೆ ಪ್ರತಿರೋಧಗಳು ಹೆಚ್ಚುತ್ತಿವೆ. ಇಲ್ಲಿ ಪಕ್ಷಭೇದ ಇಲ್ಲ.
ಮೂರನೆಯದಾಗಿ, ಬೆಂಗಳೂರು ನಗರದ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಅಡಚಣೆಗಳು ಹಾಗೂ ಎರಡನೆಯ ಮತ್ತು ಮೂರನೆಯ ಹಂತದ ನಗರಗಳನ್ನು ಹೂಡಿಕೆಗೆ ಸಜ್ಜಾಗಿಸುವಲ್ಲಿನ ಹಿಂಜರಿಕೆ ಕೂಡ ಒಂದು ಪ್ರಮುಖ ಸವಾಲು. ಭಾರಿ ಯೋಜನೆಗಳನ್ನು ಸಿದ್ಧಪಡಿಸಿ, ಅವುಗಳನ್ನು ಒಂದಿಷ್ಟುಮಟ್ಟಿಗೆ ಅನುಷ್ಠಾನಕ್ಕೆ ತರಲಾಯಿತಾದರೂ, ಅವುಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಹೆಚ್ಚಿನ ಪ್ರಯತ್ನ ಆಗಿಲ್ಲ. ಮೂಲಸೌಕರ್ಯವನ್ನು ಹೆಚ್ಚಿಸುವ ಸಂದರ್ಭದಲ್ಲಿ ಹಿಂದಿನ ದಿನದ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂಬಂತೆ ಕಾಣುತ್ತಿದೆಯೇ ವಿನಾ, ಇಂದಿನ ಹಾಗೂ ಮುಂದಿನ ಅಗತ್ಯಗಳನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ಇದರ ಪರಿಣಾಮವಾಗಿ, ಯೋಜನೆಗಳ ಅನುಷ್ಠಾನ ಪೂರ್ಣಗೊಂಡಾಗ ಅವು ಆ ಕಾಲಘಟ್ಟದ ಹಾಗೂ ಭವಿಷ್ಯದ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗುತ್ತವೆ. ಸವಾಲುಗಳಿಗೆ ಕಾರ್ಯ ಸಾಧುವಾದ ಪರಿಹಾರಗಳನ್ನು ಹುಡುಕುವಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಅಧಿಕಾರಶಾಹಿಯ ಯತ್ನದ ಕೊರತೆ ಇದೆ. ಆದ್ಯತೆಗಳು ಬೇರೆಯದೇ ಆಗಿರುತ್ತವೆ.
ಕೊನೆಯದಾಗಿ, ಪ್ರಮುಖ ಪಾಲುದಾರರ ನಡುವಿನ ಕೆಸರೆರಚಾಟ ಸ್ಪಷ್ಟವಾಗಿ ಕಾಣುತ್ತಿರುತ್ತದೆ. ಖಾಸಗಿ ವಲಯವು ಸರ್ಕಾರವನ್ನು ದೂಷಿಸುತ್ತದೆ, ಸರ್ಕಾರವು ಖಾಸಗಿ ವಲಯದ ಕಡೆ ಬೊಟ್ಟು ಮಾಡುತ್ತದೆ. ನಗರವಾಸಿ, ಸುಶಿಕ್ಷಿತ ವರ್ಗವು ಸರ್ಕಾರವನ್ನು ದೂಷಿಸು ತ್ತದೆಯಾದರೂ ಮತದಾರರಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು ವಿಫಲವಾಗುತ್ತದೆ. ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ತಮ್ಮ ಕೆಲಸ ಮಾಡಿಸಿಕೊಳ್ಳಲು ಭ್ರಷ್ಟಾಚಾರಕ್ಕೆ ಕೊಡುಗೆ ನೀಡಲು ಯಾರಿಗೂ ಬೇಸರವಿಲ್ಲ.
ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದಾಗ ನೀರು ಎಲ್ಲೆಂದರಲ್ಲಿ ಕಟ್ಟಿಕೊಳ್ಳುವುದಕ್ಕೆ ಬಡಾವಣೆಗಳು, ಅಪಾರ್ಟ್‌ಮೆಂಟ್ ಸಂಕೀರ್ಣಗಳು ಹಾಗೂ ಗೇಟೆಡ್ ಕಮ್ಯುನಿಟಿಗಳನ್ನು ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ್ದು ಕಾರಣ. ಆದರೆ ಹೀಗೆ ನಿಯಮಗಳ ಉಲ್ಲಂಘನೆ ಆಗುವಾಗ ನಾಗರಿಕರು ಹೆಚ್ಚು ಜಾಗೃತರಾಗಿ ಪ್ರತಿಕ್ರಿಯೆ ನೀಡಿದ ನಿದರ್ಶನಗಳು ಕಡಿಮೆ. ತಾವೇ ಮುಂದಾಗಿ ಕ್ರಮಗಳನ್ನು ಕೈಗೊಳ್ಳುವ ಬದಲು, ಏನಾದರೂ ನಡೆದಾಗ ಅದಕ್ಕೆ ಪ್ರತಿಕ್ರಿಯೆ ನೀಡುವುದು ಮಾತ್ರ ಕಾಣುತ್ತದೆ. ಇದರ ಪರಿಣಾಮಗಳು ನಾವು ಎದುರಿಸುತ್ತಿರುವ ಅಡಚಣೆಗಳ ರೂಪದಲ್ಲಿ ಕಾಣಿಸುತ್ತವೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮಾರೋಪ ಸಮಾರಂಭದಲ್ಲಿ ಆಡಿದ ಮಾತುಗಳ ಕಡೆ ಮತ್ತೆ ಗಮನ ಹರಿಸೋಣ. ಒಪ್ಪಂದಗಳ ವಿಚಾರವಾಗಿ ಅವರು ತೃಪ್ತಿ ವ್ಯಕ್ತಪಡಿಸಿದರು. ಒಪ್ಪಂದಗಳನ್ನು ಕ್ರಿಯಾರೂಪಕ್ಕೆ ತರುವ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಆರಂಭಿಸಬೇಕಾದ ಅಗತ್ಯ ಇದೆ ಎಂಬ ಎಚ್ಚರಿಕೆಯ ಮಾತನ್ನೂ ಅವರು ಆಡಿದರು. ಆದರೆ, ಶೀಘ್ರದಲ್ಲಿಯೇ ಚುನಾವಣೆ ಎದುರಿಸ ಲಿರುವ ಸರ್ಕಾರಕ್ಕೆ ಈ ಕೆಲಸ ಮಾಡುವುದಕ್ಕೆ ಬೇಕಿರುವ ಸಮಯ, ಶಕ್ತಿ ಹಾಗೂ ಒಲವು ಇರುತ್ತದೆಯೇ? ಮೂಲಸೌಕರ್ಯದ ಸ್ಥಿತಿ ವಿಚಾರವಾಗಿ ನಗರವಾಸಿ ಮತದಾರರು ಕೋಪ ವ್ಯಕ್ತಪಡಿಸುತ್ತಾರೆ. ಆದರೆ, ತಮ್ಮ ಜಡತ್ವ ಹಾಗೂ ಅನಾಸಕ್ತಿಯನ್ನು ತೊಡೆದುಹಾಕಿ, ಬೇರೆ ಬೇರೆ ಪಕ್ಷಗಳನ್ನು ಉತ್ತರದಾಯಿ ಆಗಿಸಲು ಅವರು ಮನಸ್ಸು ಮಾಡುವರೇ? ಇವೆಲ್ಲ ನಮ್ಮೆಲ್ಲರ ಸಮಸ್ಯೆಗಳು ಹಾಗೂ ಇವುಗಳ ನಿವಾರಣೆಗೆ ನಮ್ಮೆಲ್ಲರ ಪ್ರಯತ್ನ ಬೇಕು ಎಂಬುದು ಅರಿವಾಗುತ್ತದೆಯೇ? ಅಥವಾ ನಾವು ಪ್ರತ್ಯೇಕವಾಗಿಯೇ ಉಳಿದು, ಇವುಗಳ ಬಗ್ಗೆ ಗೊಣಗು ವುದನ್ನು ಮುಂದುವರಿಸಿ, ಸಮಸ್ಯೆಗಳು ಹಾಗೇ ಇರಲು ಬಿಡುತ್ತೇವೆಯೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.