ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾರರು ಮಹತ್ವದ ಚುನಾವಣೆಯಲ್ಲಿ ಶುಕ್ರವಾರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂದರೆ, ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳ ಜನ ತಮ್ಮ ತೀರ್ಮಾನವನ್ನು ದಾಖಲಿಸಿದ್ದಾರೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೆ ಈ ಕ್ಷೇತ್ರಗಳ ಮತದಾರರ ತೀರ್ಮಾನವು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಲಿದೆ.
ವಿಂಧ್ಯ ಪರ್ವತದ ದಕ್ಷಿಣಕ್ಕೆ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಯತ್ನದ ಭಾಗವಾಗಿ ಬಿಜೆಪಿಯು ರಾಜ್ಯದಲ್ಲಿ 2019ರ ಸಾಧನೆಯನ್ನು ಪುನರಾವರ್ತಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದೆ. ತನ್ನ ಮಿತ್ರಪಕ್ಷ ಆಗಿರುವ ಜೆಡಿಎಸ್, ಸೀಟು ಹಂಚಿಕೆಯ ಭಾಗವಾಗಿ ಅದಕ್ಕೆ ಸಿಕ್ಕಿರುವ ಎಲ್ಲ ಸ್ಥಾನಗಳಲ್ಲಿ ಒಳ್ಳೆಯ ಸಾಧನೆ ತೋರಲಿದೆ, ಹಾಗಾಗಿ ರಾಜ್ಯದಲ್ಲಿ ತನಗೆ ‘ಕ್ಲೀನ್ ಸ್ವೀಪ್’ ಸಾಧ್ಯವಾಗಲಿದೆ ಎಂದು ಬಿಜೆಪಿ ನಂಬಿದೆ.
ಆದರೆ ಕಾಂಗ್ರೆಸ್ಸಿನಿಂದ ಪ್ರಬಲ ಪೈಪೋಟಿ ಎದುರಾಗಿರುವ ಕಾರಣ ಈ ಗುರಿ ತಲುಪುವುದು ಬಿಜೆಪಿಗೆ ಬಹಳ ತ್ರಾಸದಾಯಕ. ಕಾಂಗ್ರೆಸ್ ಪಾಲಿಗೆ, 2023ರ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಇದ್ದಂತಹ ಉತ್ಸಾಹವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳುವುದಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಯಾವುದೇ ರಾಜಕೀಯ ಅಡ್ಡಿ ಎದುರಾಗದಂತೆ ನೋಡಿಕೊಳ್ಳುವುದಕ್ಕೆ ಇದು ಅವಶ್ಯ. ಮೊದಲ ಹಂತದ ಚುನಾವಣೆಯಲ್ಲಿ ದಾಖಲಾಗಿರುವ ಮತದಾನದ ಪ್ರಮಾಣವು ಫಲಿತಾಂಶದ ದಿಕ್ಕನ್ನು ಹೇಳುವ ವಿಚಾರವಾಗಿ ಯಾವುದೇ ಸೂಚನೆ ನೀಡುತ್ತಿಲ್ಲ. ಬೆಂಗಳೂರಿನ ಮತದಾರರ ಉದಾಸೀನ ಧೋರಣೆಯು ಎದ್ದುಕಾಣುವಂತಿದೆ.
ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿಯು ಅಭ್ಯರ್ಥಿ
ಗಳನ್ನು ಕಣಕ್ಕೆ ಇಳಿಸಿದ್ದು, ಅಲ್ಲಿ ಅದರ ಅಭಿಯಾನ ಕಾರ್ಯತಂತ್ರವು ಬಹಳ ಸ್ಪಷ್ಟವಾಗಿತ್ತು. ಅಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿಯೇ ಮತ ಯಾಚಿಸಿದರು. ಮೋದಿ ಅವರನ್ನು ಮೂರನೆಯ ಬಾರಿಗೆ ಪ್ರಧಾನಿಯನ್ನಾಗಿಸಲು ತಾವು ಅಭ್ಯರ್ಥಿಯಾಗಿರುವುದಾಗಿ ಅವರೆಲ್ಲ ಬಹಳ ಸ್ಪಷ್ಟವಾಗಿ ಹೇಳಿದರು. ಮಾರ್ಚ್ ಕೊನೆಯ ವಾರ ಹಾಗೂ ಏಪ್ರಿಲ್ ಆರಂಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಲೋಕನೀತಿ– ಸಿಎಸ್‌ಡಿಎಸ್ ಸಂಸ್ಥೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇಕಡ 50ಕ್ಕಿಂತ ಹೆಚ್ಚಿನವರು ಪ್ರಧಾನಿಯಾಗಿ ಮೋದಿ ಅವರನ್ನು ಬಯಸುವುದಾಗಿ ಹೇಳಿದುದನ್ನು ದಾಖಲಿಸಿದೆ. ಕರ್ನಾಟಕದಲ್ಲಿ ಶೇಕಡ 25ಕ್ಕಿಂತ ತುಸು ಹೆಚ್ಚಿನವರು ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂದು ಬಯಸುವುದಾಗಿ ಹೇಳಿದರು.
ಪ್ರಧಾನಿಯವರನ್ನು ಚುನಾವಣಾ ಅಭಿಯಾನದ ಕೇಂದ್ರಕ್ಕೆ ತರುವ ಮೂಲಕ ಬಿಜೆಪಿಯು ತನಗೆ ವಿರುದ್ಧ
ವಾಗಿದ್ದ ಹಲವು ವಿಚಾರಗಳನ್ನು ಗೌಣವಾಗಿಸುವ ಯತ್ನ ನಡೆಸಿತು. ಅವುಗಳಲ್ಲಿ ಕೆಲವು ವಿಚಾರಗಳು ಇವು: ರಾಜ್ಯದಲ್ಲಿ 2019ರಿಂದ 2023ರವರೆಗಿನ ಬಿಜೆಪಿ ಆಡಳಿತದ ನೆನಪುಗಳು; ನಿರುದ್ಯೋಗ ಹಾಗೂ ಬೆಲೆ ಏರಿಕೆಯ ಪರಿಣಾಮವಾದ ಆರ್ಥಿಕ ಸಂಕಷ್ಟ, ಅದರಲ್ಲೂ ಮುಖ್ಯವಾಗಿ ಆರ್ಥಿಕವಾಗಿ ದುರ್ಬಲರಾಗಿ ಇರುವವರ ಮೇಲೆ ಅದರಿಂದ ಆಗಿರುವ ಪರಿಣಾಮಗಳು; ಬಿಜೆಪಿಯ ರಾಜ್ಯ ಘಟಕದಲ್ಲಿ ವಿವಿಧ ಕಾರಣಗಳಿಂದ ಉಂಟಾದ ಅತೃಪ್ತಿ. ಈ ಅತೃಪ್ತಿಯು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ವ್ಯಕ್ತವಾಯಿತು, ಇನ್ನು ಕೆಲವೆಡೆ ಅದು ಅವ್ಯಕ್ತವಾಗಿತ್ತು.
ರಾಜ್ಯದಲ್ಲಿ ಬಿಜೆಪಿ ಈ ಬಾರಿ ಭಾರಿ ಸವಾಲು ಎದುರಿಸುತ್ತಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 25 ಸ್ಥಾನಗಳನ್ನು ಗೆದ್ದಿತ್ತು, ಈ ಬಾರಿ ಅದು 25 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅಂದರೆ, ಪಕ್ಷವು ಹಿಂದಿನ ಚುನಾವಣೆಯ ಸಾಧನೆಯನ್ನು ಕಾಯ್ದುಕೊಳ್ಳಬೇಕು ಎಂದಾದರೆ, ಸ್ಪರ್ಧಿಸಿರುವ ಅಷ್ಟೂ ಕಡೆ ಗೆಲುವು ಸಾಧಿಸಬೇಕು! ಪಕ್ಷವು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದುಕೊಂಡಷ್ಟು ಸ್ಥಾನಗಳನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲಿಕ್ಕಿಲ್ಲ ಎಂಬ ಸಂದೇಶವನ್ನು ಪ್ರಚಾರದ ಸಂದರ್ಭದಲ್ಲಿನ ಸೂಚನೆಗಳು ನೀಡುತ್ತಿದ್ದವು. ಎಷ್ಟು ಸ್ಥಾನಗಳು ಕಡಿಮೆ ಆಗಬಹುದು ಎಂಬ ಪ್ರಶ್ನೆ ಈಗ ಉಳಿದಿದೆ.
ಬಿಜೆಪಿಯು ಸೀಟು ಹಂಚಿಕೆಯ ಭಾಗವಾಗಿ ಜೆಡಿಎಸ್‌ಗೆ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಈ ಪೈಕಿ ಒಂದು ಸ್ಥಾನವು ಜೆಡಿಎಸ್ ಪಾಲಿನ ಸಾಂಪ್ರದಾಯಿಕ ಭದ್ರಕೋಟೆ ಎಂದು ಪರಿಗಣಿತವಾಗಿರುವ ಹಾಸನ. ಹಿಂದಿನ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಈ ಸ್ಥಾನವನ್ನು ಗೆದ್ದುಕೊಂಡಿತ್ತು. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಒಕ್ಕಲಿಗರ ಭದ್ರಕೋಟೆಯಂತೆ ಇರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ಕೂಡ ಸಿಕ್ಕಿದೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಪ್ರಚಾರ ನಡೆಸಿದ್ದಾರಾದರೂ, ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಮೈತ್ರಿ ಮಾಡಿಕೊಂಡಾಗ ಆಗುವ ಸಂಘರ್ಷಗಳು ತಳಮಟ್ಟದಲ್ಲಿ ಕಂಡುಬಂದಿವೆ. ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ತಮ್ಮ ಮತಬ್ಯಾಂಕ್ ಅನ್ನು ಮಿತ್ರಪಕ್ಷಕ್ಕೆ ವರ್ಗಾಯಿಸುವಲ್ಲಿ ಸಫಲವಾಗುತ್ತವೆಯೇ ಎಂಬುದು ಮಹತ್ವದ ವಿಚಾರ.
ರಾಜ್ಯದ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್, ಬಿಜೆಪಿ–ಜೆಡಿಎಸ್ ಮೈತ್ರಿಗೆ ಪ್ರಬಲ ಪೈಪೋಟಿ ನೀಡಲು ಒಗ್ಗಟ್ಟಿನ ಯತ್ನ ನಡೆಸಿದೆ. ಸ್ಥಳೀಯ ಮಟ್ಟದ ಚುನಾವಣಾ ಅಭಿಯಾನದ ಮೇಲೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಿದೆ. ಚುನಾವಣಾ ಅಭಿಯಾನದ ನೇತೃತ್ವ ವಹಿಸುವುದಕ್ಕೆ ಹಾಗೂ ಅಭಿಯಾನವನ್ನು ಮುಂದಕ್ಕೆ ಒಯ್ಯುವುದಕ್ಕೆ ಪಕ್ಷವು ರಾಜ್ಯದ ನಾಯಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿಗಳು ಪಕ್ಷದ ಅಭಿಯಾನದ ಕೇಂದ್ರವಾಗಿವೆ.
ಚುನಾವಣೆಗೂ ಮೊದಲು ಪಕ್ಷದ ಕೆಲವು ಹಿರಿಯ ನಾಯಕರು ಸ್ಪರ್ಧಿಸಲು ಹಿಂದೇಟು ಹಾಕಿದ್ದೂ ಇತ್ತು. ಹಲವು ಕ್ಷೇತ್ರಗಳಲ್ಲಿ ಪ‍್ರಮುಖ ನಾಯಕರು ಸೂಚಿಸಿದ ವ್ಯಕ್ತಿಗಳನ್ನು ಕಣಕ್ಕೆ ಇಳಿಸಲಾಗಿದೆ. ಹಾಗೆ ಕಣಕ್ಕೆ ಇಳಿದವರಲ್ಲಿ ಹಲವರು ಚುನಾವಣಾ ರಾಜಕಾರಣಕ್ಕೆ ಹೊಸಬರು. ಅಭಿಯಾನವು ಬಿರುಸು ಪಡೆದಂತೆಲ್ಲ, ಕಾಂಗ್ರೆಸ್ಸಿಗರಲ್ಲಿ ಹೆಚ್ಚಿನ ಒಗ್ಗಟ್ಟು ಕಂಡುಬಂತು. ಅಲ್ಲದೆ, ಐದು ಗ್ಯಾರಂಟಿಗಳ ಸುತ್ತ ಒಂದು ಸಂಕಥನವನ್ನು ಕಟ್ಟುವ ಯತ್ನವೊಂದು ಪಕ್ಷದ ಕಡೆಯಿಂದ ನಡೆಯಿತು. ಇವೆಲ್ಲವೂ ಲೋಕಸಭಾ ಚುನಾವಣೆಯಲ್ಲಿ ಮತದಾರರ ನಡುವೆ ಎಷ್ಟರಮಟ್ಟಿಗೆ ಪ್ರತಿಧ್ವನಿಸಲಿವೆ ಎಂಬುದು ಈಗ ಚರ್ಚೆಯ ವಸ್ತು.
ಮತದಾರರ ತೀರ್ಪು ಏನು ಎಂಬುದು ಜೂನ್ 4ರಂದು ಪ್ರಕಟವಾಗಲಿದೆ. ಕರ್ನಾಟಕದ ಮತದಾರರ ಒಲವನ್ನು ಸೆಳೆದದ್ದು ಯಾವ ಆಯ್ಕೆ ಎಂಬುದು ಅಂದು ಗೊತ್ತಾಗಲಿದೆ. ಮತದಾರರು ಮಾಡಿರುವ ಆಯ್ಕೆಯು ರಾಷ್ಟ್ರ ರಾಜಕಾರಣದ ಸ್ಪರ್ಧಾತ್ಮಕ ಪರಿಸರದ ಮೇಲೆ ನಿರ್ಣಾಯಕ ಪರಿಣಾಮವನ್ನು ಉಂಟುಮಾಡಲಿದೆ. ಹಾಗೆಯೇ, ಅದು ರಾಜ್ಯದ ರಾಜಕಾರಣದ ಗತಿಯ ಮೇಲೆಯೂ ನಿರ್ಣಾಯಕ ಪ್ರಭಾವ ಬೀರಲಿದೆ.
ಬಿಜೆಪಿಯು ರಾಷ್ಟ್ರ ಮಟ್ಟದಲ್ಲಿ ತನಗೆ ತಾನೇ ನಿಗದಿ ಮಾಡಿಕೊಂಡಿರುವ ಗುರಿಯನ್ನು ತಲುಪಬೇಕು ಎಂದಾದಲ್ಲಿ, ಅಲ್ಲಿ ಕರ್ನಾಟಕವು ನೀಡುವ ಕೊಡುಗೆಯು ಬಹಳ ದೊಡ್ಡದಾಗಿರುತ್ತದೆ. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ತನ್ನ ಸ್ಥಾನಗಳನ್ನು ಹೆಚ್ಚು ಮಾಡಿಕೊಳ್ಳಲು ಹಾಗೂ ರಾಜ್ಯದಲ್ಲಿನ ತನ್ನ ನೇತೃತ್ವದ ಸರ್ಕಾರಕ್ಕೆ ಹೆಚ್ಚಿನ ಸ್ಥಿರತೆ ತಂದುಕೊಳ್ಳಲು ರಾಜ್ಯದ ಫಲಿತಾಂಶವನ್ನು ನೆಚ್ಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.