ರಾಜ್ಯ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಕೆಲವು ವಾರಗಳಲ್ಲಿ ನಡೆಯಲಿದೆ. ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ಅಥವಾ ವಿರೋಧ ಪಕ್ಷಗಳಿಗೆ ಹೆಚ್ಚಿನ ಅನುಕೂಲ ಇರುತ್ತದೆ ಎನ್ನಲು ಅನುಭವಕ್ಕೆ ದಕ್ಕುವ ಆಧಾರಗಳಿಲ್ಲ. ಸ್ಥಾನ ತೆರವು ಮಾಡಿದ ಪಕ್ಷಕ್ಕೆ ಅನುಕೂಲ ಇರುತ್ತದೆ ಎನ್ನಲೂ ಆಧಾರಗಳಿಲ್ಲ. ಹೀಗಿದ್ದರೂ ಎರಡು ಅಂಶಗಳನ್ನು ಗಮನಿಸಬಹುದು.
ಎಲ್ಲ ವಿಚಾರಗಳೂ ಸಮಾನವಾಗಿದ್ದಾಗ, ವಿಧಾನಸಭಾ ಚುನಾವಣೆ ನಡೆದ ಆರು ತಿಂಗಳೊಳಗೆ ನಡೆಯುವ ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಇರುತ್ತದೆ. ಆದರೆ, ವಿರೋಧ ಪಕ್ಷದ ಪ್ರಭಾವಿ ನಾಯಕ ಸ್ಥಾನ ತೆರವು ಮಾಡಿದ್ದಾಗ ಅಥವಾ ಹಾಲಿ ಶಾಸಕನ ಮರಣದಿಂದಾಗಿ ಉಪಚುನಾವಣೆ ಎದುರಾಗಿದ್ದರೆ, ಆತನ ಕುಟುಂಬದ ಪರ ಅನುಕಂಪದ ಅಲೆ ಇದ್ದಾಗ ಪರಿಸ್ಥಿತಿ ಭಿನ್ನವಾಗಬಹುದು.
ಉಪಚುನಾವಣೆಯು ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ನಡೆದರೆ, ರಾಜ್ಯದ ಸರ್ಕಾರವು ಪ್ರಬಲ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರೆ, ಆಡಳಿತಾರೂಢ ಪಕ್ಷದ ಅಭ್ಯರ್ಥಿಗೆ ಸವಾಲು ಎದುರಾಗುತ್ತದೆ. ಈಗ ಎದುರಾಗಿರುವ ಉಪಚುನಾವಣೆಯಲ್ಲಿ ಈ ಯಾವ ಅಂಶಗಳೂ ಇಲ್ಲ. ಹೀಗಾಗಿ, ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿರುವ ಸಂದರ್ಭವನ್ನು ವಿಶ್ಲೇಷಿಸುವುದು ಮಹತ್ವದ್ದಾಗುತ್ತದೆ.
ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಲೋಕಸಭೆಗೆ ಆಯ್ಕೆಯಾಗಿ, ಶಾಸಕ ಸ್ಥಾನ ತೆರವು ಮಾಡಿದ ಕಾರಣದಿಂದಾಗಿ ಈ ಉಪ ಚುನಾವಣೆ ಎದುರಾಗಿದೆ. ಮೂರೂ ಕಡೆಗಳಲ್ಲಿ, ಸ್ಥಾನ ತೆರವು ಮಾಡಿದವರ ಕುಟುಂಬದವರು ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಹೀಗಾಗಿ, ರಾಜ್ಯದ ಎಲ್ಲ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣವೇ ಪ್ರಬಲವಾಗಿರುವಂತೆ ಕಾಣುತ್ತಿದೆ.
ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣವು ಹೆಚ್ಚು ಗಮನ ಸೆಳೆದಿದೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣಕ್ಕೆ ಈ ಕ್ಷೇತ್ರ ತೆರವಾಯಿತು. ಈ ಕ್ಷೇತ್ರದ ಕಾರಣಕ್ಕಾಗಿ ಜೆಡಿಎಸ್–ಬಿಜೆಪಿ ಮೈತ್ರಿಯಲ್ಲಿ ಒಂದಿಷ್ಟು ಸಮಸ್ಯೆಗಳು ಸೃಷ್ಟಿಯಾಗಿದ್ದವು. ಇದು ತಾನು ಗೆದ್ದ ಕ್ಷೇತ್ರವಾದ ಕಾರಣ ಇಲ್ಲಿ ಅಭ್ಯರ್ಥಿ ಯಾರು ಎಂಬುದನ್ನು ತಾನೇ ನಿರ್ಧರಿಸಬೇಕು ಎಂದು ಜೆಡಿಎಸ್ ಪಟ್ಟುಹಿಡಿದಿತ್ತು. ಎನ್‌ಡಿಎ ಅಭ್ಯರ್ಥಿಯು ಇಲ್ಲಿ ಜೆಡಿಎಸ್ ಹೇಳಿದವರೇ ಆಗಬೇಕು ಎಂಬುದನ್ನು ಬಿಜೆಪಿ ಒಪ್ಪಿತ್ತಾದರೂ, ಬಿಜೆಪಿಯವರನ್ನು ಹಾಗೂ ಗೆಲ್ಲುವ ಸಾಧ್ಯತೆ ಹೆಚ್ಚಿರುವವರನ್ನು ಇಲ್ಲಿ ಕಣಕ್ಕಿಳಿಸಲು ಜೆಡಿಎಸ್ ನಾಯಕತ್ವವನ್ನು ಒಪ್ಪಿಸಲು ಯತ್ನ ನಡೆದಿತ್ತು. ಇದಕ್ಕೆ ಜೆಡಿಎಸ್ ಒಪ್ಪಲಿಲ್ಲ. ಹೀಗಾಗಿ ಈ ಅಭ್ಯರ್ಥಿ (ಯೋಗೇಶ್ವರ್) ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ, ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿಯಾದರು.
ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಇದು ದೇವೇಗೌಡ ಕುಟುಂಬಕ್ಕೆ ಪ್ರತಿಷ್ಠೆಯ ಕಣವಾಗಿದೆ. ಇದು ಬಿಜೆಪಿ–ಜೆಡಿಎಸ್ ಮೈತ್ರಿಗೆ ಕೂಡ ಒಂದು ಪರೀಕ್ಷೆ. ಬಿಜೆಪಿಯ ಮತಗಳು ಎಷ್ಟರಮಟ್ಟಿಗೆ ಜೆಡಿಎಸ್ ಕಡೆಗೆ ವರ್ಗವಾಗುತ್ತವೆ ಎಂಬುದನ್ನು ಗಮನಿಸಬೇಕಿದೆ. ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸ್ವಾಗತಿಸಿರುವುದು ಹಾಗೂ ಅವರನ್ನು ತನ್ನ ಅಭ್ಯರ್ಥಿಯೆಂದು ತಕ್ಷಣಕ್ಕೆ ಘೋಷಿಸಿರುವುದು, ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಸೆಳೆದುಕೊಳ್ಳುವ ಬಯಕೆ ಕಾಂಗ್ರೆಸ್ಸಿಗೆ ಇರುವುದನ್ನು ತೋರಿಸುತ್ತದೆ.
ಈ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವೆ ಪರೋಕ್ಷ ಸಮರ ನಡೆಯುವುದು ನಿಶ್ಚಿತ. ಬಿಜೆಪಿ–ಜೆಡಿಎಸ್ ಮೈತ್ರಿ ಇದ್ದರೂ, ಒಕ್ಕಲಿಗ ಮತಗಳು ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಮೈತ್ರಿಕೂಟದ ಪರವಾಗಿ ವರ್ಗಾವಣೆ ಆಗಿಲ್ಲ ಎಂಬುದನ್ನು ಲೋಕನೀತಿ–ಸಿಎಸ್‌ಡಿಎಸ್ ಚುನಾವಣೋತ್ತರ ಸಮೀಕ್ಷೆ ಹೇಳಿತ್ತು.
ತಾವು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದರೂ, ಚನ್ನಪಟ್ಟಣ ಕ್ಷೇತ್ರಕ್ಕೆ ನಿಷ್ಠರಾಗಿರುವುದಾಗಿ ಯೋಗೇಶ್ವರ್ ಹೇಳಿದ್ದಾರೆ. ಅವರು ಇಲ್ಲಿ ಐದು ಬಾರಿ ಗೆದ್ದಿದ್ದಾರೆ, ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ, ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ, ತಲಾ ಒಂದು ಬಾರಿ ಎಸ್‌ಪಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಅವರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಯ ಕಾರ್ಯಕರ್ತರ ನಿಲುವು ಹಾಗೂ ಆ ಪಕ್ಷದ ಮತದಾರರ ನಿಲುವು ಬಹಳ ಮಹತ್ವದ್ದಾಗುತ್ತದೆ. ಈ ಉಪ ಚುನಾವಣೆಯು ಬಿಜೆಪಿ–ಜೆಡಿಎಸ್ ಮೈತ್ರಿಯ ಶಕ್ತಿಯನ್ನು ಹಾಗೂ ತನ್ನ ಭದ್ರಕೋಟೆಯಲ್ಲಿ ಜೆಡಿಎಸ್‌ಗೆ ಇರುವ ಶಕ್ತಿ ಎಷ್ಟು ಎಂಬುದನ್ನು ತೋರಿಸಿಕೊಡಲಿದೆ.
ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರು, ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಕಾರಣಕ್ಕೆ ಅಲ್ಲಿ ಉಪ ಚುನಾವಣೆ ಎದುರಾಗಿದೆ. ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ, ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಎನ್‌ಡಿಎ ಅಭ್ಯರ್ಥಿಗಳು ಶಾಸಕ ಸ್ಥಾನ ತೆರವು ಮಾಡಿದವರ ಪುತ್ರರೇ ಆಗಿದ್ದಾರೆ. ಮೊದಲು ಕಾಂಗ್ರೆಸ್ ನೆಲೆಯಾಗಿದ್ದ ಶಿಗ್ಗಾವಿಯಲ್ಲಿ ಬೊಮ್ಮಾಯಿ ಅವರು ಸತತ ನಾಲ್ಕು ಬಾರಿ ಜಯ ಸಾಧಿಸಿದ್ದಾರೆ. ಇಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮತಗಳು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರಣ, ಈ ಬಾರಿ ಪರಿಸ್ಥಿತಿ ತನ್ನತ್ತ ವಾಲಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಿರುವ ಕಾರಣ, ಈ ಪಕ್ಷವು ಚುನಾವಣಾ ಅಭಿಯಾನದಲ್ಲಿ ಒಂದು ಹೆಜ್ಜೆ ಮುಂದಿರುವಂತಿದೆ.
ಲೋಕಸಭಾ ಚುನಾವಣೆಯ ನಂತರ ನಡೆದ ಲೋಕನೀತಿ–ಸಿಎಸ್‌ಡಿಎಸ್ ಸಮೀಕ್ಷೆಯು, ಲಿಂಗಾಯತ ಮತಗಳು ಬಿಜೆಪಿಯ ಪರವಾಗಿ ಮತ್ತೆ ಒಗ್ಗೂಡಿರುವುದನ್ನು ಕಂಡುಕೊಂಡಿದೆ.
ಉಪ ಚುನಾವಣೆ ಎದುರಿಸುತ್ತಿರುವ ಇನ್ನೊಂದು ಕ್ಷೇತ್ರವಾದ ಸಂಡೂರಿನಲ್ಲಿ ಕಾಂಗ್ರೆಸ್ಸಿನ ಇ. ತುಕಾರಾಮ್ ಅವರು ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಇವರು ಕೂಡ ಲೋಕಸಭೆಗೆ ಆಯ್ಕೆಯಾದ ನಂತರ, ಈ ಕ್ಷೇತ್ರವನ್ನು ತೆರವು ಮಾಡಿದ್ದಾರೆ. ತುಕಾರಾಮ್ ಅವರ ಪತ್ನಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ತುಕಾರಾಮ್ ಅವರು ಇಲ್ಲಿ ಹೊಂದಿರುವ ಹೆಸರು ಹಾಗೂ ತಳಮಟ್ಟದಲ್ಲಿ ಪಕ್ಷಕ್ಕೆ ಇರುವ ಬೆಂಬಲವು ಅಭ್ಯರ್ಥಿಗೆ ಗೆಲುವು ತಂದುಕೊಡುತ್ತದೆ ಎಂಬುದು ಕಾಂಗ್ರೆಸ್ಸಿನ ಭರವಸೆ. ಈ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆಲುವು ಕಂಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಆದರೆ ಈ ಬಾರಿ ಇಲ್ಲಿ ಜಯ ಸಾಧಿಸುವ ಉಮೇದಿನಲ್ಲಿ ಬಿಜೆಪಿ ಇದೆ. ಬಿಜೆಪಿಯು ಈ ಬಾರಿ ಇಲ್ಲಿ ತನ್ನ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತ ಅವರನ್ನು ಕಣಕ್ಕೆ ಇಳಿಸಿದೆ.
ಈಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಅನುಭವಿಸಿದ ಹಿನ್ನಡೆಗಳನ್ನು ಗಮನಿಸಿ ಹೇಳುವುದಾದರೆ, ಈ ಉಪ ಚುನಾವಣೆಯು ಆ ಪಕ್ಷದ ಪಾಲಿಗೆ ಬಹಳ ಮಹತ್ವದ್ದು. ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತ ಹಾಗೂ ಆಡಳಿತದ ನಾಯಕತ್ವದ ವಿಚಾರವಾಗಿ ಹಲವು ವಿವಾದಗಳು ಸೃಷ್ಟಿಯಾಗಿವೆ. ರಾಜ್ಯದ ಪ್ರಧಾನ ವಿರೋಧ ಪಕ್ಷವಾಗಿ ಬಿಜೆಪಿಯು ತನ್ನ ರಾಜ್ಯ ಘಟಕದಲ್ಲಿ ಆಂತರಿಕ ಭಿನ್ನಮತದ ಸಮಸ್ಯೆಯನ್ನು ಎದುರಿಸುತ್ತಿದೆ. ತನ್ನ ಅಭ್ಯರ್ಥಿಗಳು ಕಣದಲ್ಲಿ ಇರುವ ಎರಡು ಸ್ಥಾನಗಳಲ್ಲಿ ಒಳ್ಳೆಯ ಸಾಧನೆ ತೋರುವುದು, ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚು ಮಾಡುವ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಹಾಗೆಯೇ ಸರ್ಕಾರದ ವಿರುದ್ಧ ತಾನು ನಡೆಸುತ್ತಿರುವ ಹೋರಾಟಗಳನ್ನು ಮುಂದಕ್ಕೆ ಒಯ್ಯಲು ಕೂಡ ಇದು ಮಹತ್ವದ್ದಾಗುತ್ತದೆ.
ಜೆಡಿಎಸ್ ಪಾಲಿಗೆ, ತನ್ನದೇ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅಳಿವು–ಉಳಿವಿನ ಪ್ರಶ್ನೆಯಂತೆ ಆಗಿದೆ. ಈ ಉಪ ಚುನಾವಣೆಯು ದೇವೇಗೌಡ ಕುಟುಂಬದ ಪ್ರಭಾವವು ಇಲ್ಲಿ ಎಷ್ಟರಮಟ್ಟಿಗೆ ಇದೆ ಎಂಬುದನ್ನೂ ನಿಕಷಕ್ಕೆ ಒಳಪಡಿಸಲಿದೆ. ಹಾಗೆಯೇ ಈ ಉಪ ಚುನಾವಣೆಯು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಆರೋಗ್ಯ, ಶಕ್ತಿ ಮತ್ತು ಭವಿಷ್ಯವನ್ನು ಸೂಚಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.