ಇಂದು ಒಡೆದ ಮನಸ್ಸುಗಳ ನಡುವೆ ದ್ವೇಷದ ಧನುಸ್ಸುಗಳು ಕಾದಾಟ ನಡೆಸುತ್ತಿವೆ; ಸೌಹಾರ್ದ ಪರಂಪರೆಯ ಬಹುತ್ವ ಭಾರತದ ಬೆಳಕು ಹೊಯ್ದಾಡುತ್ತಿದೆ. ಜಾತಿ ಮತ್ತು ಧರ್ಮಗಳು ರಾಜಕೀಯ ಅಸ್ತ್ರವಾಗಿ ಭಾವಭಾರತದ ಹೃದಯ ಗಾಯಗೊಂಡಿದೆ. ಹಾಗಾದರೆ ನಮ್ಮಲ್ಲಿ ಜಾತಿ ಮತ್ತು ಧರ್ಮಗಳೇ ಇಲ್ಲದ ಸಮಾಜ ನಿರ್ಮಾಣ ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ವಾಸ್ತವದ ನೆಲೆಯಲ್ಲಿ ಉತ್ತರ ಹುಡುಕಬೇಕಾಗುತ್ತದೆ. ಜಾತಿಗಳನ್ನು ಸಾಮಾಜಿಕ ವಾಸ್ತವವಾಗಿ ಕಾಣುವುದಕ್ಕೂ ಜಾತಿವಾದ ಮಾಡುವುದಕ್ಕೂ ವ್ಯತ್ಯಾಸವಿದೆ. ಅಂತೆಯೇ ಧಾರ್ಮಿಕತೆಗೂ ಧಾರ್ಮಿಕ ಮೂಲಭೂತವಾದಕ್ಕೂಅಂತರವಿದೆ. ಜಾತಿವಾದವು ಜಾತಿಗಳಲ್ಲೇ ಶ್ರೇಷ್ಠ ಮತ್ತು ಕನಿಷ್ಠಗಳನ್ನು ನಿರ್ಧರಿಸಿ ಮೇಲು-ಕೀಳುಗಳನ್ನು ನಿರ್ಮಿಸಿ ಶೋಷಣೆಯ ಸಾಧನವಾಗುತ್ತದೆ. ಧಾರ್ಮಿಕ ಮೂಲಭೂತವಾದವು ಆಂತರಿಕ ಸುಧಾರಣೆಯನ್ನು ನಿರಾಕರಿಸುವ ಜಡಶಾಸ್ತ್ರಕ್ಕೆ ಬೆಲೆ ಕೊಡುತ್ತ ಅನ್ಯಧರ್ಮ ದ್ವೇಷಕ್ಕೆ ಅಸ್ತ್ರವಾಗುತ್ತದೆ. ಇಂದು ನಮ್ಮ ದೇಶದಲ್ಲಿ ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದಗಳುಎಗ್ಗಿಲ್ಲದೆ ನುಗ್ಗುವ ಗುಂಪುಗೂಳಿತನದ ಪ್ರದರ್ಶನಕ್ಕೆ
ಕಾರಣವಾಗುತ್ತಿವೆ. ಕಟುವಾಸ್ತವವೆಂದರೆ, ಜಾತಿ ಮತ್ತು ಧರ್ಮಗಳ ಸಾಮಾಜಿಕ ಅಸ್ತಿತ್ವವನ್ನು ಒಪ್ಪುತ್ತಲೇ ಜಾತಿಯು ಜಾತಿವಾದವಾಗದಂತೆ, ಧರ್ಮವುಮೂಲಭೂತವಾಗದಂತೆ ಸಮಾನತೆ ಮತ್ತು ಸಹಿಷ್ಣುತೆಗಳನ್ನು ಸಂರಕ್ಷಿಸುವ ಸವಾಲು ನಮ್ಮೆದುರು ಇದೆ. ಜಾತಿಗಳು ಜೈಲಾಗಬಾರದು; ಧರ್ಮಗಳು ದ್ವೀಪಗಳಾಗಬಾರದು.
ನಾವು ಒಪ್ಪಲಿ ಬಿಡಲಿ, ಜಾತಿ ಮತ ಧರ್ಮಗಳು ಅಸ್ತಿತ್ವದಲ್ಲಿವೆ. ಸಂಪೂರ್ಣ ನಾಸ್ತಿಕವಾದಿಯಾದ ಯಾವ ದೇಶವೂ ವಿಶ್ವದಲ್ಲಿಲ್ಲ. ಲೆನಿನ್ ಕ್ರಾಂತಿಗಾಗಿ ಕಟ್ಟಿದ ಪಕ್ಷಕ್ಕೆ ಧಾರ್ಮಿಕ ನಂಬಿಕೆಯುಳ್ಳವರನ್ನೂ ಸದಸ್ಯರಾಗಿಸಿಕೊಂಡಿದ್ದರು. ಕಮ್ಯುನಿಸ್ಟ್ ಸರ್ಕಾರ ಬಂದ ನಂತರವೂ ಚರ್ಚುಗಳನ್ನು ಹಾಗೇ ಉಳಿಸಿಕೊಂಡರು. 1975ರಲ್ಲಿ ಚೀನಾ ದೇಶವು ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುವ ಕಾಯ್ದೆಯನ್ನು ಜಾರಿಗೆ ತಂದಿತು. ಈ ಉಪಕ್ರಮಗಳು ಜನರ ಮಾನಸಿಕ ನಂಬಿಕೆಯನ್ನು ಪರಿಗಣಿಸುತ್ತವೆ. ಆದರೆ ಆ ಸರ್ಕಾರಗಳು ತಾವೇ ನೇರವಾಗಿ ಧರ್ಮವನ್ನು ಪೋಷಿಸದೆ ಜನರಿಗೇ ಬಿಟ್ಟಿವೆ. ಹಾಗೆಂದು ಇದು ವಿಶ್ವಾದರ್ಶ
ವಾಗಿಯೇನೂ ಬೆಳೆದಿಲ್ಲ. ಯಾಕೆಂದರೆ ಒಂದೊಂದು ದೇಶವೂ ವಿಭಿನ್ನ ಸಾಮಾಜಿಕ ಸಾಂಸ್ಕೃತಿಕ ಸ್ವರೂಪ ಪಡೆದಿರುತ್ತದೆ. ನಮ್ಮ ದೇಶವು ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳ ನೆಲೆಬೀಡಾಗಿದೆ.
ವಿಪರ್ಯಾಸವೆಂದರೆ, ನಮ್ಮ ದೇಶದಲ್ಲಿ ಸಮವಸ್ತ್ರ, ವ್ಯಾಪಾರ ಮುಂತಾದವೆಲ್ಲ ಧಾರ್ಮಿಕ ವಿವಾದದ ವಸ್ತುವಾಗುತ್ತಿವೆ. ವಿಚಾರದ ಜಾಗದಲ್ಲಿ ವಿಕಾರ ವಿಜೃಂಭಿಸುತ್ತಿದೆ. ಆದರೆ ಡಾ. ಅಂಬೇಡ್ಕರ್ ರೂಪಿಸಿದ ನಮ್ಮ ಸಂವಿಧಾನವು ಎಲ್ಲ ಧರ್ಮಗಳ ಸಮಾನತೆಯನ್ನು ಸಾರುವ ಸಾರವನ್ನು ಒಳಗೊಂಡಿದೆ. ಸರ್ಕಾರಗಳು ಸಾಮಾಜಿಕ ಮತ್ತು ಧಾರ್ಮಿಕ ಸಮಾನತೆಯ ಆಶಯದಲ್ಲಿ ಜಾತಿ ಮತ್ತು ಧರ್ಮಗಳನ್ನು ಪರಿಗಣಿಸಿ ಯೋಜನೆಗಳನ್ನು ರೂಪಿಸಲು ಅವಕಾಶವಿದ್ದರೂ ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ಸಂವಿಧಾನವು ಸಹಿಸುವುದಿಲ್ಲ. ವಿಷಾದಕರ ವಿಷಯವೆಂದರೆ, ಇಂದು ಜಾತಿವಾದ ಮತ್ತು ಮೂಲಭೂತವಾದಗಳೇ ಮುನ್ನೆಲೆಗೆ ಬಂದು ಸಮೂಹ ಸನ್ನಿಯ ಸ್ವರೂಪ ತಾಳಿವೆ. ಸಮೂಹ ಸನ್ನಿಯ ಸ್ಥಳದಲ್ಲಿ ಸಮೂಹ ಪ್ರಜ್ಞೆಯನ್ನು ಮೂಡಿಸಲು ನಾವು ಪರಂಪರೆಯ ಪ್ರತೀಕಗಳನ್ನು ಸರಿದಾರಿಯಲ್ಲಿ ಪರಿಚಯಿಸುವ ಅಗತ್ಯವಿದೆ. ಈ ಮೂಲಕ ಜಾತಿ, ಧರ್ಮಗಳ ದ್ವೇಷ ರಾಜಕಾರಣಕ್ಕೆ ಉತ್ತರಿಸಬೇಕಾಗಿದೆ. ಯಾಕೆಂದರೆ ಜನಸಾಮಾನ್ಯರು ಪರಂಪರೆಯ ಮೌಲ್ಯಗಳಿಗೆ ಹೆಚ್ಚು ಗೌರವ ಕೊಡುತ್ತಾರೆ.
ಉದಾಹರಣೆಗೆ ಹೇಳುವುದಾದರೆ, ನಮ್ಮ ದೇಶದ ಜನಸಾಮಾನ್ಯರು ಗೌರವಿಸುತ್ತ ಬಂದಿರುವ ರಾಮಾಯಣ ಮತ್ತು ಮಹಾಭಾರತಗಳು ವೋಟಿನ ಸಾಧನಗಳಾಗುತ್ತಿರುವುದನ್ನು ಮನಗಾಣಿಸಲು ಆ ಮಹಾಕಾವ್ಯಗಳಲ್ಲಿರುವ ‘ರಾಜಕೀಯ ನೈತಿಕತೆ’ಯನ್ನು ಮುನ್ನೆಲೆಗೆ ತರಬಹುದಾಗಿದೆ. ಶ್ರೀರಾಮ, ಭರತ, ಪಾಂಡವರು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟವರಾಗದೆ ರಾಜಕೀಯ ನೈತಿಕತೆ ತೋರಿದ್ದನ್ನು ಉದಾಹರಿಸಬಹುದು. ಈ ಪುರಾಣ ಕಾವ್ಯಗಳ ಕೆಲವು ಬಿಡಿ ಪ್ರಸಂಗಗಳ ಮೂಲಕ ಅಂತಿಮ ನಿರ್ಣಯಕ್ಕೆ ಬರುವ ಬದಲು ಇಡಿಯಾಗಿ ಧ್ವನಿಸಿದ ಅಧಿಕಾರ ಕೇಂದ್ರೀಕರಣ ವಿರೋಧಿ ಮೌಲ್ಯವನ್ನು ಮುನ್ನೆಲೆಗೆ ತರಬಹುದು. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ನ ರಾಮತ್ವದ ಸರ್ವೋದಯ ಪರಿಕಲ್ಪನೆಯನ್ನು ಪ್ರತಿಪಾದಿಸಬಹುದು. ಈ ಪುರಾಣಕಾವ್ಯಗಳ ಬಗ್ಗೆ ವಿಭಿನ್ನ ವಿಮರ್ಶೆಗಳಿದ್ದರೂ ಇವು ರಾಜಕೀಯ ದಾಳಗಳಾಗುವುದನ್ನು ಕಾವ್ಯಗಳ ಒಳಗಿಂದಲೇ ವಿರೋಧಿಸಬಹುದು.
ಇಂದು ಲೌಕಿಕ ಲಾಭಕ್ಕಾಗಿ ಧರ್ಮ ಮತ್ತು ರಾಜಕಾರಣ ಗಳನ್ನು ಬೆರೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನನಗೆ ಕನ್ನಡದ ಪಂಪ, ಬಸವಣ್ಣ, ಅಲ್ಲಮರಾದಿಯಾಗಿ ಅನೇಕರ ದೃಷ್ಟಿದರ್ಶನ ನೆನಪಾಗುತ್ತದೆ. ಪಂಪ ಕವಿಯು ‘ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ’ ಎಂದು ಲೌಕಿಕಕ್ಕೆ ಮಹಾಭಾರತ ಕಥಾವಸ್ತುವನ್ನೂ ಜಿನಾಗಮಕ್ಕೆ ಆದಿಪುರಾಣದ ವಸ್ತುವನ್ನೂ ಆಯ್ಕೆ ಮಾಡಿಕೊಳ್ಳುವ ಮೂಲಕ ಧರ್ಮ ಮತ್ತು ರಾಜಕಾರಣವನ್ನು ಬೆರೆಸದೆ ಇರುವ ವಿವೇಕವನ್ನು ತೋರಿದ್ದಾನೆ. ರಾಜಕಾರಣಕ್ಕೆ ಮಹಾಭಾರತದ ವಸ್ತು, ಧರ್ಮಕ್ಕೆ ಆದಿಪುರಾಣದ ವಸ್ತು. ಹೀಗೆ ವಿಂಗಡಿಸಿಕೊಂಡ ವಿವೇಕವನ್ನು ಇಂದಿನ ಪಕ್ಷರಾಜಕೀಯವು ಅನುಸರಿಸಬೇಕಾಗಿದೆ. ಇನ್ನು ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪಕವಿಯ ನುಡಿ ನಮ್ಮ ಸಾಮಾಜಿಕ ಆದರ್ಶವಾಗಬೇಕು.
ಬಸವಣ್ಣನವರು ಪ್ರತಿಪಾದಿಸಿದ ‘ದೇಹವೇ ದೇಗುಲ’ ಮತ್ತು ‘ಶರಣಸತಿ ಲಿಂಗಪತಿ’ ಎಂಬ ಪರಿಕಲ್ಪನೆಗಳು ಧಾರ್ಮಿಕವಾಗಿ ಜಾಗತಿಕ ಆದರ್ಶದ ಮಾದರಿಗಳಾಗಿವೆ. ಜಡವಾದ ದೇವಸ್ಥಾನದ ಕಟ್ಟಡಕ್ಕೆ ಬದಲು ದೇಹವನ್ನೇ ದೇವಸ್ಥಾನವೆಂದು ಪ್ರತಿಪಾದಿಸಿದ ವೈಚಾರಿಕ ಪಲ್ಲಟವು ಮಂದಿರ, ಮಸೀದಿ, ಚರ್ಚುಗಳ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷಭಾವದ ಲೌಕಿಕ ಘಟನೆಗಳಿಗೆ ಅದ್ಭುತ ಆಧ್ಯಾತ್ಮಿಕ ಉತ್ತರವೂ ಆಗುತ್ತದೆ. ‘ಶರಣಸತಿ ಲಿಂಗಪತಿ’ಯೆಂಬುದು ಭಕ್ತಿಯ (ಧರ್ಮದ) ಖಾಸಗಿತನವನ್ನು ಪ್ರತಿಪಾದಿಸುತ್ತದೆ. ಇಂದು ಬಸವಣ್ಣಾದಿಗಳ ಮೂಲಕ ಧರ್ಮದ ಖಾಸಗಿತನದ ಮೌಲ್ಯವನ್ನು ಜನರಿಗೆ ತಿಳಿಸುವ ಅಗತ್ಯವಿದೆ. ವಚನ ಚಳವಳಿಯ ಭಾಗವಾಗಿ ಬಂದ ಈ ಪ್ರಸ್ತುತ ಪ್ರತಿಪಾದನೆಗಳ ನಡುವೆ ಒಳ ವಿಮರ್ಶೆಯ ಪ್ರತೀಕವಾದ ಅಲ್ಲಮಪ್ರಭುಗಳು ಇಂದಿಗೂ ಆದರ್ಶವಾಗುತ್ತಾರೆ.
ಒಳವಿಮರ್ಶೆಯ ವಿಷಯ ಬಂದಾಗ ವಿವೇಕಾನಂದರನ್ನು ನೆನೆಯಲೇಬೇಕು. ವಿವೇಕಾನಂದರದು ಅನ್ನ ಮೂಲ ಅಧ್ಯಾತ್ಮ. ದೀನದಲಿತರಿಗೆ ಮೊದಲು ಅನ್ನ ನೀಡಿ ಆಮೇಲೆ ಅಧ್ಯಾತ್ಮ ಹೇಳಿ ಎಂದು ಪ್ರತಿಪಾದಿಸಿದ ವಿವೇಕಾನಂದರು ಎಲ್ಲ ಧರ್ಮಗಳ ಕೂಪಮಂಡೂಕತ್ವವನ್ನು ವಿರೋಧಿಸುತ್ತಾರೆ. ಹಿಂದೂ ಧರ್ಮಕ್ಕೆ ಬದ್ಧರಾಗಿದ್ದೂ ಒಳವಿಮರ್ಶಕರಾಗುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯವನ್ನು ಪ್ರತಿಪಾದಿಸುತ್ತಾರೆ. ಇದು ಎಲ್ಲ ಧರ್ಮಗಳಿಗೂ ಆದರ್ಶವಾಗಿರುತ್ತದೆ.
ಇಲ್ಲಿಯೇ ಕ್ರಿ.ಶ. 850ರಲ್ಲಿ ರಚಿತವಾದ ಕನ್ನಡದ ಕೃತಿ ‘ಕವಿರಾಜಮಾರ್ಗ’ವನ್ನು ನೆನೆಯಬೇಕು. ಈ ಕೃತಿಯ ಒಂದು ಪದ್ಯದಲ್ಲಿ ‘ಪರವಿಚಾರ ಮತ್ತು ಪರಧರ್ಮಗಳನ್ನು ಸಹಿಸುವುದೇ ನಿಜವಾದ ಬಂಗಾರ’ ಎಂದು ಹೇಳಲಾಗಿದೆ. ಈ ಮಾತು ಇಂದಿಗೂ ಪ್ರಸ್ತುತವಾಗಿದೆ.
ಗಾಂಧೀಜಿ ಧಾರ್ಮಿಕತೆಯಲ್ಲೂ ಸಹಿಷ್ಣುತೆಯ ಸಿದ್ಧಾಂತವೇ ಪ್ರಧಾನವಾಗಿತ್ತು. ಅದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅದಕ್ಕಾಗಿ ಜೀವವನ್ನೇ ತೆತ್ತರು. ಡಾ. ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಸೋದರತೆಗಳ ಸಿದ್ಧಾಂತವನ್ನೇ ಸಂವೇದನೆಯಾಗಿಸಿಕೊಂಡ ಸಂವಿಧಾನವನ್ನು ಕೊಟ್ಟರು. ದ್ವೇಷವಿಲ್ಲದೆ ದೇಶ ಕಟ್ಟುವ ಆಶಯವನ್ನು ಅಂತರ್ಗತ ಮಾಡಿಕೊಂಡ ಸಂವಿಧಾನದ ಮುನ್ನೋಟಕ್ಕೆ ಎಲ್ಲರೂ ಮನ್ನಣೆ ಕೊಡಬೇಕು. ನಮ್ಮ ಪರಂಪರೆಯಲ್ಲಿ ಪ್ರತಿಪಾದಿತವಾದ ಸೌಹಾರ್ದ ಸಂಸ್ಕೃತಿಗೆ ಆದ್ಯತೆ ನೀಡಬೇಕು. ಪ್ರಾಚೀನ ಪರಂಪರೆಯ ಜೊತೆಗೆ ಆಧುನಿಕ ಸಂದರ್ಭದ ಗಾಂಧಿ, ಅಂಬೇಡ್ಕರ್ ಆದಿಯಾಗಿ ಸುಭಾಷ್ ಚಂದ್ರಬೋಸ್, ನೆಹರೂ, ಮೌಲಾನ ಆಜಾದ್, ಭಗತ್ ಸಿಂಗ್ ಮುಂತಾದವರ ಜಾತ್ಯತೀತ ನಿಲುವನ್ನು ಅಳವಡಿಸಿಕೊಳ್ಳಬೇಕು. ‘ಜಾತ್ಯತೀತ’ ಎಂಬ ಪದವನ್ನು ಉಚ್ಚರಿಸಲು ಇಚ್ಛೆಪಡದವರು ಕಡೇಪಕ್ಷ ‘ದ್ವೇಷಾತೀತ’ ಎಂಬ ಪದವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಎಲ್ಲ ಧರ್ಮಗಳ ಮೂಲಭೂತವಾದವನ್ನು ವಿರೋಧಿಸಬೇಕು. ತನ್ಮೂಲಕ ದ್ವೇಷಾತೀತ ಭಾರತವನ್ನು ಒಟ್ಟಾಗಿ ಕಟ್ಟಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.