‘ವಾರದಲ್ಲಿ ಎಪ್ಪತ್ತು ತಾಸು ಕೆಲಸ ಮಾಡಬೇಕು’ ಎನ್ನುವ ‘ಇನ್ಫೊಸಿಸ್’ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಭಿಪ್ರಾಯ ಜಡ ಬುದ್ಧಿಜೀವಿಯೊಬ್ಬರ ಸಂವೇದನಾರಾಹಿತ್ಯ ಮಾತಿನಂತಿದೆ; ದೇಶದ ಕಾಳಜಿಯ ಹೆಸರಿನಲ್ಲಿ ಸ್ವಹಿತಾಸಕ್ತಿಯ ಪ್ರತಿಪಾದನೆಯಂತಿದೆ.
‘ದೇಶದ ಅಭಿವೃದ್ಧಿಗಾಗಿ ತ್ಯಾಗ ಬೇಕಿದೆ, ವಿಶ್ರಾಂತಿಯಲ್ಲ’ ಎಂದು ಹೇಳಿರುವ ನಾರಾಯಣ ಮೂರ್ತಿ, ‘ವಾರಕ್ಕೆ ಎಪ್ಪತ್ತು ಗಂಟೆ ಕೆಲಸ’ದ ತಮ್ಮ ನಿಲುವಿಗೆ ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಸರಿಸಿದ್ದಾರೆ. ‘ಮೋದಿ ಅವರು ವಾರದಲ್ಲಿ ನೂರು ಗಂಟೆ ಕೆಲಸ ಮಾಡುತ್ತಿದ್ದಾರೆ. ಅವರಂತೆ ನಾವೂ ಕಷ್ಟಪಟ್ಟು ಕೆಲಸ ಮಾಡಬೇಕು’ ಎನ್ನುವುದು ಅವರ ಅಭಿಪ್ರಾಯ.
ಯಶಸ್ಸಿಗೆ ಕಠಿಣ ಪರಿಶ್ರಮದ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ಹೇಳಿರುವವರಲ್ಲಿ ನಾರಾಯಣ ಮೂರ್ತಿ ಮೊದಲಿಗರೇನೂ ಅಲ್ಲ. ಹನ್ನೆರಡನೇ ಶತಮಾನದ ಶರಣ ಚಳವಳಿಯ ಅಸ್ತಿವಾರವಾಗಿದ್ದುದು ಕಾಯಕತತ್ವವೇ. ‘ಕಾಯಕವೇ ಕೈಲಾಸ’ ಎನ್ನುವ ಶರಣ ಸಂಸ್ಕೃತಿಯ ಮಾತು ಸೈಬರ್ ಸಂಸ್ಕೃತಿಯ ಮೂರ್ತಿಯವರಲ್ಲಿ ‘ಕಾಯಕವೇ ಅಭಿವೃದ್ಧಿ’ ಎಂದಾಗಿದೆ. ಕಾಯಕದ ಕುರಿತ ಶರಣರ ಪರಿಕಲ್ಪನೆ ಎಲ್ಲರನ್ನೂ ಒಳಗೊಂಡ ವಿಶಾಲಭಿತ್ತಿಯದಾದರೆ, ಮೂರ್ತಿಯವರ ನಂಬಿಕೆ ಪುಟ್ಟ ಸಮುದಾಯವನ್ನೇ ದೇಶ ಎಂದು ಬಿಂಬಿಸಲು ಹವಣಿಸುವಂತಹದ್ದು. ಶರಣರ ಕಾಯಕತತ್ವದಲ್ಲಿ ಚಮ್ಮಾರ, ಕಂಬಾರ, ಕುಂಬಾರ, ಹಡಪದ ಸೇರಿದಂತೆ ಎಲ್ಲ ಕ್ಷೇತ್ರಗಳ ಶ್ರಮಜೀವಿಗಳೂ ಇದ್ದರು ಮತ್ತು ಅವರ ಕಾಯಕಗಳಿಗೆ ಸಮಾನ ಗೌರವವಿತ್ತು. ಈ ಸಮಾನತೆಯ ಪರಿಕಲ್ಪನೆ ಇಂದಿನ ‘ಕಾಯಕವೇ ಅಭಿವೃದ್ಧಿ’ಯಲ್ಲಿ ಕಾಣುತ್ತಿಲ್ಲ. ನಾರಾಯಣ ಮೂರ್ತಿ ಅವರ ಮಾತಿನಲ್ಲಿ ಸಂವೇದನೆಯ ಆರ್ದ್ರತೆಯೂ ಇಲ್ಲ.
ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳನ್ನು ದೇಶದ ನಿರ್ಮಾಪಕರ ರೂಪದಲ್ಲಿ ಹಾಗೂ ಅವರ ಕೆಲಸವನ್ನು ದೇಶದ ಅಭಿವೃದ್ಧಿಯ ರೂಪದಲ್ಲಿ ನಾರಾಯಣ ಮೂರ್ತಿ ಅವರ ಮಾತುಗಳು ಬಿಂಬಿಸುತ್ತಿವೆ. ದುರದೃಷ್ಟವಶಾತ್, ಅವರ ಮಾತಿಗೆ ಎದುರಾಗಿರುವ ಬಹುತೇಕ ಟೀಕೆಗಳೂ ಎಲ್ಲರನ್ನೂ ಒಳಗೊಳ್ಳುವ ಪಾತಳಿಯಲ್ಲಿರದೆ, ಐ.ಟಿ ಉದ್ಯೋಗಿಗಳ ತವಕತಲ್ಲಣಗಳಿಗೆ ಸಂಬಂಧಿಸಿದಂತೆಯೇ ನಡೆಯುತ್ತಿವೆ. ಐ.ಟಿ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡ, ಆ ಒತ್ತಡದ ಪರಿಣಾಮವಾದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು, ಹೆಚ್ಚಿನ ಶ್ರಮ–ತ್ಯಾಗಕ್ಕೆ ಪ್ರತಿಫಲವಾಗಿ ದೊರೆಯುತ್ತಿರುವ ಹಗುರ ಪ್ಯಾಕೇಜು– ಇವೆಲ್ಲವನ್ನೂ ಪ್ರಸ್ತಾಪಿಸುವ ಮೂಲಕ ವಾರಕ್ಕೆ ಎಪ್ಪತ್ತು ಗಂಟೆ ಕೆಲಸದ ಪರಿಕಲ್ಪನೆಯನ್ನು ಟೀಕಿಸುತ್ತ, ‘ಭಾರತೀಯರನ್ನು ಜೀತದಾಳುಗಳ ರೂಪದಲ್ಲಿ ನಾರಾಯಣ ಮೂರ್ತಿ ನೋಡುತ್ತಿದ್ದಾರೆ’ ಎಂದು ಕೆಲವರು ಹೇಳುತ್ತಿದ್ದಾರೆ. ಇವೆಲ್ಲ ಚರ್ಚೆಗಳನ್ನು ಗಮನಿಸಿದರೆ, ಈ ದೇಶದಲ್ಲಿ ಐ.ಟಿ–ಬಿ.ಟಿ ಕಂಪನಿಗಳಲ್ಲಿನ ಎಂಜಿನಿಯರ್‌ಗಳಷ್ಟೇ ಕೆಲಸ ಮಾಡುತ್ತಿದ್ದು, ಅವರು ಮಾತ್ರ ದೇಶ ಕಟ್ಟುವ ಕೆಲಸದಲ್ಲಿ ತೊಡಗಿರುವ ಅಭಿಪ್ರಾಯ ಮೂಡುವಂತಿದೆ.
ಈ ದೇಶದ ಸುಮಾರು ಶೇಕಡ 90ಕ್ಕೂ ಹೆಚ್ಚು ಜನ ಖಾಸಗಿ ಹಾಗೂ ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದನ್ನು ನಾರಾಯಣ ಮೂರ್ತಿ ಅವರು ಮರೆತಿರುವಂತಿದೆ ಅಥವಾ ಬಹುಸಂಖ್ಯಾತರ ಕೆಲಸ ಅವರಿಗೆ ನಗಣ್ಯವಾಗಿರುವಂತಿದೆ. ಶ್ರಮದ ಪರಿಕಲ್ಪನೆಯಲ್ಲಿ ಮುಂಚೂಣಿಯಲ್ಲಿರಬೇಕಾದ ದುರ್ಬಲ ವರ್ಗಗಳನ್ನು ಕಾಣದೆ ಹೋದರೆ, ನಮಗೆ ಈ ದೇಶದ ನಾಡಿಮಿಡಿತದ ಅರಿವಿಲ್ಲ ಎಂದೇ ಹೇಳಬೇಕಾಗುತ್ತದೆ ಹಾಗೂ ಶ್ರಮದ ನಿರ್ಲಕ್ಷ್ಯ ಗ್ರಾಮಭಾರತವನ್ನು ಹಾಗೂ ಗ್ರಾಮಭಾರತಕ್ಕೆ ಆಧಾರವಾದ ಜನಸಾಮಾನ್ಯರನ್ನು ಅವಮಾನಿಸುವಂತಹದ್ದು ಎಂದು ಭಾವಿಸಬೇಕಾಗುತ್ತದೆ.
ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡುವ ಪರಿಕಲ್ಪನೆ ಜಾರಿಗೆ ಬಂತೆಂದೇ ಭಾವಿಸೋಣ. ಅದರಿಂದ ಏನಾಗುತ್ತದೆ? ನಾರಾಯಣ ಮೂರ್ತಿ ಅಂಥವರಿಗೆ ಅಭಿವೃದ್ಧಿಯ ಕಲಶಗಳ ರೂಪದಲ್ಲಿ ಕಾಣಿಸುವ ಐ.ಟಿ ಕಂಪನಿಗಳೂ ಸೇರಿದಂತೆ ವಿವಿಧ ವಲಯಗಳ ಕಚೇರಿ–ಮಳಿಗೆಗಳಲ್ಲಿ ದೊಡ್ಡ ಸಂಖ್ಯೆಯ ಭದ್ರತಾ ಸಿಬ್ಬಂದಿ (ಸೆಕ್ಯುರಿಟಿ) ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಹನ್ನೆರಡು ತಾಸಿನಂತೆ ವಾರದ ಏಳು ದಿನವೂ ಕಾರ್ಯನಿರ್ವಹಿಸುವ ಇವರು, ಹನ್ನೆರಡು ತಾಸು ಕರ್ತವ್ಯದ ನಂತರ ಉಳಿಯುವ ಅವಧಿಯಲ್ಲೂ ಸಣ್ಣಪುಟ್ಟ ಕೆಲಸಗಳು ದೊರೆತರೆ ಮಾಡುತ್ತಾರೆ. ಮನೆಕೆಲಸದಲ್ಲಿ ಯಾವ ಕೊರೆಯನ್ನೂ ಮಾಡದೆ, ಕಾರ್ಖಾನೆ–ಗಾರ್ಮೆಂಟ್ಸ್‌ನಲ್ಲಿ ದಿನಕ್ಕೆ ಎಂಟರಿಂದ ಹತ್ತು ತಾಸು ಗೇಯುವ ಹೆಣ್ಣುಮಕ್ಕಳಿದ್ದಾರೆ. ಮಾತೃತ್ವ ರಜೆಯ ಅರ್ಥವೂ ತಿಳಿಯದೆ, ಕೈಕೂಸುಗಳನ್ನು ಮರದ ನೆರಳಿಗೆ ಬಿಟ್ಟು ಇಟ್ಟಿಗೆ, ಸಿಮೆಂಟ್ ಎತ್ತುವ ಕೂಲಿಕಾರ್ಮಿಕ ಅಮ್ಮಂದಿರೂ, ಬೀದಿ ಗುಡಿಸುವ ಮಹಿಳೆಯರೂ ಇದ್ದಾರೆ. ಗಂಟೆಗಳ ಹಂಗಿಲ್ಲದೆ ದುಡಿಯುವ ಈ ಸೆಕ್ಯುರಿಟಿ ಅಣ್ಣಂದಿರಿಗೆ, ಗಾರ್ಮೆಂಟ್ಸ್ ಅಕ್ಕಂದಿರಿಗೆ, ಕೂಲಿಕಾರ್ಮಿಕ ತಾಯಂದಿರಿಗೆ ದೊರೆಯುವ ಪ್ರತಿಫಲವೆಷ್ಟು? ಕೆಲಸದ ಸ್ಥಳದಲ್ಲಿ ಅವರಿಗೆ ದೊರೆಯುವ ಗೌರವವೆಷ್ಟು? ದೇಶವನ್ನು ಕಟ್ಟುವಲ್ಲಿ ಅವರ ಕೊಡುಗೆಯನ್ನು ನಾವು ಗುರ್ತಿಸಿರುವುದೆಷ್ಟು? ಚರಂಡಿಗಳ ಸಿಕ್ಕು ಬಿಡಿಸಲು ಹೋಗಿ ಮ್ಯಾನ್‌ಹೋಲ್‌ಗಳಲ್ಲಿ ಕೊನೆಯುಸಿರೆಳೆದ ಅಣ್ಣತಮ್ಮಂದಿರನ್ನು ನಾವು ಹೇಗೆ ನೆನಪಿರಿಸಿಕೊಂಡಿದ್ದೇವೆ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಿರಿಸಿದ್ದೇವೆ?
ಐ.ಟಿ ಕ್ಷೇತ್ರಗಳಲ್ಲಿನ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡಷ್ಟೇ ನಾರಾಯಣ ಮೂರ್ತಿ, ವಾರಕ್ಕೆ ಎಪ್ಪತ್ತು ತಾಸುಗಳ ಕೆಲಸದ ಮಾತನಾಡಿದ್ದಾರೆ ಎಂದು ಹೇಳಲಿಕ್ಕೆ ಸಾಧ್ಯವಿದೆ. ಆದರೆ, ಕಠಿಣ ಶ್ರಮಕ್ಕೆ ಉದಾಹರಣೆಯಾಗಿ ಅವರು ನೀಡಿರುವ ಉದಾಹರಣೆ, ಅವರ ಮಾತಿನ ವ್ಯಾಪಕತೆಯನ್ನು ಸೂಚಿಸುವಂತಿದೆ. ಕಠಿಣ ಶ್ರಮಕ್ಕೆ ಮಾದರಿಯಾಗಿ ನಾರಾಯಣ ಮೂರ್ತಿ ಅವರು ಹೆಸರಿಸಿರುವ ಮೋದಿ ಅವರಿಗೆ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ನವಿಲುಗಳಿಗೆ ಕಾಳು ಹಾಕಲು ಸವಡು ದೊರೆಯುತ್ತದೆ. ಚಂದದ ಬಟ್ಟೆ ತೊಟ್ಟು ಫೋಟೊ ಶೂಟ್ ಮಾಡಿಸಿಕೊಳ್ಳಲು ಅವರಿಗೆ ಸಮಯವಿದೆ. ಉತ್ಸವಗಳು, ಪೂಜಾಕಾರ್ಯಗಳಲ್ಲಿ ಭಾಗವಹಿಸುವುದೂ, ವಿದೇಶ ಪ್ರವಾಸಗಳೂ ಅವರ ಕರ್ತವ್ಯ ನಿರ್ವಹಣೆಯ ಭಾಗಗಳೇ ಆಗಿವೆ. ಪ್ರಧಾನಿಯವರ ಸುರಕ್ಷತೆ, ಆರೋಗ್ಯ, ವಸ್ತ್ರಾಲಂಕಾರ, ಯೋಗ, ಊಟ, ನಿದ್ರೆಯವರೆಗೆ ಎಲ್ಲ ಅಗತ್ಯಗಳಿಗೆ ಓಗೊಡಲು ಪಗಾರದ ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಇಂಥ ದುಬಾರಿ ಬಿಡುವಿನ ವ್ಯಕ್ತಿಯ ಕೆಲಸದ ಅವಧಿಯನ್ನು ಮಾದರಿಯಾಗಿ, ಕಠಿಣ ಶ್ರಮಕ್ಕೆ ಉದಾಹರಣೆಯಾಗಿ ನೋಡುವ ಚಿಂತನೆ ಒಂದೋ ಬಡಬಗ್ಗರ ಜೀವಗಳನ್ನು ಅಗ್ಗವೆಂದು ಭಾವಿಸುವಂತಹದ್ದು ಇಲ್ಲವೇ ದಂತಗೋಪುರದಲ್ಲಿ ಇರುವಂತಹದ್ದು.
ನಾರಾಯಣ ಮೂರ್ತಿ ಅವರ ಮಾತಿನ ಹುಂಬತನವನ್ನು ಟೀಕಿಸಿರುವ ಕೆಲವರು, ಸಾಫ್ಟ್‌ವೇರ್ ಜಗತ್ತಿನ ಅನೇಕ ಜಾಣ ಜಾಣೆಯರು ಕೆಲಸದ ಒತ್ತಡದಿಂದ ಹೃದಾಯಾಘಾತಕ್ಕೆ ತುತ್ತಾಗುತ್ತಿರುವುದು ಹಾಗೂ ಮಧುಮೇಹ–ರಕ್ತದೊತ್ತಡದಿಂದ ಬಳಲುತ್ತಿರುವುದನ್ನು ನೆನಪಿಸಿಕೊಂಡಿದ್ದಾರೆ. ಯುವ ತಲೆಮಾರಿನ ಅನಾರೋಗ್ಯ ಆತಂಕ ಹುಟ್ಟಿಸುವಂತಹದ್ದು. ಆದರೆ, ದಿನಕ್ಕೆ ಹನ್ನೆರಡು ಹದಿನೈದು ತಾಸು ದುಡಿದರೂ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಸಂಪಾದಿಸಲಾಗದ ರೈತರು ತಮ್ಮ ಸಮಸ್ಯೆಗಳಿಗೆ ಆತ್ಮಹತ್ಯೆಯ ಮೂಲಕ ಉತ್ತರ ಕಂಡುಕೊಳ್ಳುತ್ತಿರುವ ಪ್ರಸಂಗಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಲೇ ಇವೆ. ಮಣ್ಣಿನ ಮಕ್ಕಳ ಸಂಕಟಗಳ ಬಗ್ಗೆ, ಭರವಸೆಗಳೇ ಇಲ್ಲದ ಅವರ ಬದುಕಿನ ಬಗ್ಗೆ, ನಾರಾಯಣ ಮೂರ್ತಿ ಅವರಂಥವರು ಯೋಚಿಸುವುದು ಯಾವಾಗ? ಅಥವಾ ‘ರೈತಭಾರತ’ವೇನಾದರೂ ‘ಸಾಫ್ಟ್‌ವೇರ್ ಭಾರತ’ವಾಗಿ ಬದಲಾಗಿದೆಯೆ?
ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಕೆಲಸದ ಸಮಾನ ಅವಕಾಶಗಳು ಹಾಗೂ ಸಮಾನ ಪ್ರತಿಫಲ ಆದ್ಯತೆಯ ವಿಷಯವಾಗಬೇಕು. ದೇಶದ ಪ್ರಧಾನಿಯ ಬಿಡುವಿಲ್ಲದ ದುಡಿಮೆಗೂ ರೈತ ಕಾರ್ಮಿಕನ ಕೆಲಸಕ್ಕೂ ಇರುವ ವ್ಯತ್ಯಾಸವನ್ನು ಅರಿಯದೆ ಹೋದರೆ, ನಮ್ಮ ಶ್ರಮದ ಪರಿಕಲ್ಪನೆ ಹಾಸ್ಯಾಸ್ಪದವೂ ಅಮಾನವೀಯವೂ ಆಗುತ್ತದೆ.
‘ಭಾರತದ ಅಭಿವೃದ್ಧಿಗೆ ತ್ಯಾಗ ಬೇಕಿದೆ; ವಿಶ್ರಾಂತಿ ಅಲ್ಲ. ದಯವಿಟ್ಟು ಕ್ಷಮಿಸಿ. ನನ್ನ ಉಸಿರು ಇರುವವರೆಗೂ ಈ ನನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ’ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಅವರ ಮಾತು, ದೀನದುರ್ಬಲರ ಬಗ್ಗೆ ಸಾವಿರಾರು ವರ್ಷಗಳಿಂದ ಸಂವೇದನಾಶೂನ್ಯವಾಗಿ ಉಳಿದಿರುವ ಸಮುದಾಯದ ಮಾತಿನಂತೆ ಧ್ವನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.