ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣ. 2015ರ ಮೇ 24ರ ಭಾನುವಾರ. ಬೆಳಗ್ಗೆ ಎಂಟರ ಸುಮಾರಿಗೆ ಕೊಕ್ಕರೆ ಬಿಳುಪಿನ ಪಂಚೆಯ ಹಿರಿಯರೊಬ್ಬರು ಪ್ರೆಸ್ ಕ್ಲಬ್ ಆವರಣದಲ್ಲಿ ಒಂಟಿಯಾಗಿ ಕುಳಿತಿದ್ದರು. ಬೆಳಗಿನ ಅಭ್ಯಾಗತರು ಯಾರಿರಬಹುದೆಂದು ಹತ್ತಿರ ಹೋಗಿ ನೋಡಿದರೆ, ಹಿರಿಯ ನಟ–ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ. ‘ಮೈಸೂರಿನಿಂದ ಬೆಂಗಳೂರಿಗೆ ಬರ್ತಿದ್ದೆ. ದಾರಿಯಲ್ಲಿ ಪತ್ರಿಕೆ ಬಿಡಿಸಿದಾಗ, ಎಂ.ಬಿ. ಸಿಂಗ್ ಅವರ 90ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ಇರುವುದು ತಿಳಿಯಿತು. ಹಾಗಾಗಿ ಇಲ್ಲಿಗೆ ಬಂದೆ’ ಎಂದರು. ‘ಪ್ರಜಾವಾಣಿ ಹಾಗೂ ಎಂ.ಬಿ. ಸಿಂಗ್ ನಮ್ಮ ಸಿನಿಮಾದವರನ್ನು ಬೆಳೆಸಿದ್ದನ್ನು ಮರೆಯಲಾದೀತೆ?’ ಎಂದು ಅಕ್ಕರೆಯಿಂದ ಹೇಳಿದರು. ಆ ಋಣಸ್ಮರಣೆಯಿಂದಲೇ, ಮೈಸೂರಿನಿಂದ ಬಂದವರು ಮನೆಗೂ ಹೋಗದೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾವಾಗಿಯೇ ಧಾವಿಸಿ ಬಂದಿದ್ದರು.
ರವೀ ಎಂದೇ ಪ್ರಸಿದ್ಧರಾದ ಕೆ.ಎಸ್.ಎಲ್. ಸ್ವಾಮಿ ಕನ್ನಡ ಚಿತ್ರರಂಗದಲ್ಲಿ ಅಷ್ಟೇನೂ ಬಳಕೆಯಲ್ಲಿಲ್ಲದ ವಾತ್ಸಲ್ಯ–ವಿಶ್ವಾಸ–ಕೃತಜ್ಞತೆಯ ಮೂರ್ತರೂಪದಂತಿದ್ದವರು. ಕೆಲವು ವರ್ಷಗಳ ಹಿಂದಷ್ಟೇ ವಿರಳವಾಗಿಯಾದರೂ ಇದ್ದ ಸ್ವಾಮಿಯಂಥವರನ್ನು ಈಗ ಕಾಣಬಹುದೆ? ಸ್ವಾಮಿ ಅವರಂತೆ, ಇಂದಿನ ನಟರು ತಾವಾಗಿಯೇ ಯಾವುದಾದರೂ ಸಾಂಸ್ಕೃತಿಕ–ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದಾಹರಣೆಯಿದೆಯೆ? ಸಾಹಿತ್ಯ–ಸಂಸ್ಕೃತಿಯ ಮಾತಿರಲಿ, ಚಿತ್ರರಂಗವನ್ನು ಪ್ರತಿನಿಧಿಸುವ ಹಬ್ಬದಂತ ಉತ್ಸವಗಳಿಗಾದರೂ ಸ್ವಪ್ರೇರಣೆಯಿಂದ ಬಂದಿರುವುದಿದೆಯೆ? ಇಂಥ ಉದಾಹರಣೆಗಳಿದ್ದಲ್ಲಿ, ಆ ಕಲಾವಿದರು ಇನ್ನೂ ಪೂರ್ಣ ಪ್ರಮಾಣದಲ್ಲಿ ಗಾಂಧಿನಗರಕ್ಕೆ ಹೊಂದಿಕೊಂಡಿಲ್ಲ ಅಥವಾ ನಟನೆ ಅವರಿಗೆ ಹವ್ಯಾಸವಾಗಿಯಷ್ಟೇ ಉಳಿದಿದೆ ಎಂದರ್ಥ.
ಸಿನಿಮಾ ಕಲಾವಿದನೊಬ್ಬ ಸಾಹಿತ್ಯ–ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಇರುವುದು ದೊಡ್ಡ ಲೋಪವೇನಲ್ಲ. ಆದರೆ, ಕಲಾವಿದನೊಬ್ಬನ ಸಿನಿಮಾಗಳು ತನ್ನ ನೆಲದ ಸಂಸ್ಕೃತಿ–ಸಾಹಿತ್ಯದೊಂದಿಗೆ ನಂಟು ಹೊಂದಿಲ್ಲದಿರುವುದು ಐಬೇ ಸರಿ. ಈ ಲೋಪವನ್ನು ಈ ಹೊತ್ತಿನ ತಾರಾ ವರ್ಚಸ್ಸಿನ ಕಲಾವಿದರು ಸರಿಪಡಿಸಿಕೊಳ್ಳುವುದಿರಲಿ, ಐಬನ್ನೇ ತಮ್ಮ ಹೆಗ್ಗಳಿಕೆಯೆಂಬಂತೆ ಮೆರೆಸುತ್ತಿರುವಂತಿದೆ. ಸಿನಿಮಾ ಎನ್ನುವುದು ಉದ್ಯಮವಾಗಿಯಷ್ಟೇ ಉಳಿದು, ಕಲೆಯ ಸಾಧ್ಯತೆಗಳು ಹಿಂದೆ ಸರಿದಂತೆಲ್ಲ ಉಂಟಾಗುವ ಅಪಸವ್ಯವಿದು.
ಮೈಸೂರು ರಾಜ್ಯ ‘ಕರ್ನಾಟಕ’ವೆಂದು ನಾಮಕರಣವಾದ ಚಾರಿತ್ರಿಕ ಘಟನೆಗೆ ಬರುವ ನವೆಂಬರ್ 1ಕ್ಕೆ ಭರ್ತಿ ಐವತ್ತು ವರ್ಷ. ನಾಡಿನ ನಾಮಕರಣದ ಈ ಸುವರ್ಣ ಮಹೋತ್ಸವಕೆ ಕನ್ನಡ ಚಿತ್ರರಂಗದ ಸ್ಪಂದನ ಯಾವ ಬಗೆಯದು? 2024ರ ಮಾರ್ಚ್ 3ಕ್ಕೆ ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ತೆರೆಕಂಡು ತೊಂಬತ್ತು ವರ್ಷಗಳಾಗುತ್ತದೆ; ಆ ತೊಂಬತ್ತರ ಸಂಭ್ರಮವನ್ನು ಆಚರಿಸಲು ಕನ್ನಡ ಚಿತ್ರರಂಗ ಯಾವ ರೀತಿ ಸಿದ್ಧತೆ ನಡೆಸಿದೆ. ಸಿದ್ಧತೆಯ ಮಾತಿರಲಿ, ತೊಂಬತ್ತರ ಸಂಕ್ರಮಣದ ನೆನಪಾದರೂ ಚಿತ್ರರಂಗಕ್ಕೆ ಇದೆಯೆ?
ಕನ್ನಡದ ಹೆಸರಿನಲ್ಲಿ ಹೆಚ್ಚಿನ ಅನುಕೂಲ ಪಡೆದು, ನಾಡಿಗೆ ಕನಿಷ್ಠ ಪ್ರಮಾಣದ ಕೊಡುಗೆ ನೀಡುತ್ತಿರುವ ಕ್ಷೇತ್ರಗಳಲ್ಲಿ ಚಿತ್ರರಂಗವೇ ಮುಂಚೂಣಿಯಲ್ಲಿರಬೇಕು. ತೊಂಬತ್ತು ವರ್ಷಗಳ ನಂತರವೂ ಕನ್ನಡ ಚಿತ್ರರಂಗ ತನ್ನ ಉಳಿವಿಗಾಗಿ ಜನರ ಔದಾರ್ಯ ಹಾಗೂ ಸರ್ಕಾರದ ಅನುಕಂಪವನ್ನೇ ನೆಚ್ಚಿಕೊಂಡಿರುವಂತಿದೆ. ನೆರೆಯ ತಮಿಳು, ಮಲೆಯಾಳಂ ಸಿನಿಮಾಗಳು ತಮ್ಮದೇ ಆದ ಪ್ರಾದೇಶಿಕ ಆವರಣ ಹಾಗೂ ತಾತ್ವಿಕತೆಯೊಂದನ್ನು ರೂಪಿಸಿಕೊಂಡು ಅದ್ಭುತ ಸಿನಿಮಾಗಳನ್ನು ರೂಪಿಸುತ್ತಿದ್ದರೆ, ಕನ್ನಡದ ಸಿನಿಮಾ ನಿರ್ಮಾತೃಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ‘ಕಿಚ್ಚು–ಮಚ್ಚು ಹಾಗೂ ಕೊಚ್ಚು’ ಎನ್ನುವುದೇ ಕನ್ನಡ ಸಿನಿಮಾದ ತಾತ್ವಿಕತೆ ಆಗಿರುವಂತಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೂರ್ನಾಲ್ಕು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಸುದ್ದಿ ಮಾಡಿರುವುದು ನಿಜ. ಆದರೆ, ಆ ಸಿನಿಮಾಗಳು ಕನ್ನಡ ಚಿತ್ರರಂಗದ ಒಟ್ಟಾರೆ ಬೆಳವಣಿಗೆಗೆ ನೀಡಿರುವ ಕೊಡುಗೆಯೇನು ಎನ್ನುವ ಪ್ರಶ್ನೆಗೆ ದೊರೆಯುವ ಉತ್ತರ ಆಶಾದಾಯಕವಾಗಿಲ್ಲ. ‘ಪ್ಯಾನ್ ಇಂಡಿಯಾ’ ಹೆಸರಿನಲ್ಲಿ ದುಡ್ಡು ಮಾಡಿದ ಈ ಸಿನಿಮಾಗಳದು ವೈಯಕ್ತಿಕ ಸಾಧನೆಯೇ ಹೊರತು, ಅದರಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಬೆಳಕೂ ದೊರೆಯಲಿಲ್ಲ, ಹೊಸ ದಿಕ್ಕೂ ಕಾಣಿಸಲಿಲ್ಲ. ವರ್ಷಕ್ಕೋ ಎರಡು ವರ್ಷಕ್ಕೋ ತೆರೆಕಾಣುವ ಒಂದು ಸಿನಿಮಾ ಗಳಿಸುವ ಗೆಲುವಿಗಿಂತಲೂ, ನಂತರ ಸೃಷ್ಟಿಯಾಗುವ ನಿರ್ವಾತದಿಂದ ಉಂಟಾಗುವ ಹಾನಿಯೇ ದೊಡ್ಡದು. ಸಣ್ಣ ಸಣ್ಣ ತಂಡಗಳ ಕ್ರಿಯಾಶೀಲ ಪ್ರಯತ್ನಗಳಿಗಿದು ಕಾಲವಲ್ಲ ಎನ್ನುವ ಸ್ಥಿತಿಯನ್ನು ದೊಡ್ಡ ಬಜೆಟ್‌ನ ಸಿನಿಮಾಗಳು ಸೃಷ್ಟಿಸಿವೆ. ಅಪ್ಪಟ ಸಿನಿಮಾ ಪ್ರೀತಿಯ ನಿರ್ಮಾಣ ಸಂಸ್ಥೆಗಳು ದಣಿದಂತೆ ಕಾಣಿಸುತ್ತಿರುವ, ಕೆಲವು ಸಂಸ್ಥೆಗಳು ನಿಷ್ಕ್ರಿಯವಾಗಿರುವ ಸಂದರ್ಭದಲ್ಲಿ, ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದು ಯಶಸ್ಸು ಗಳಿಸಲಿಕ್ಕೆ ರಾಜಕೀಯ ಹಿನ್ನೆಲೆಯೂ ಬೇಕು ಎನ್ನುವ ಸ್ಥಿತಿ ಉಂಟಾಗಿದೆ. ಏಕಸ್ವಾಮ್ಯದ ಈ ಸ್ಥಿತಿ ಈ ಹೊತ್ತಿನ ಕನ್ನಡ ಚಿತ್ರರಂಗ ಸಾಗುತ್ತಿರುವ ದಿಕ್ಕನ್ನು ಸೂಚಿಸುವಂತಿದೆ.
‘ಕಾಂತಾರ’ವನ್ನು ಹೊರತುಪಡಿಸಿದರೆ, ‘ಪ್ಯಾನ್ ಇಂಡಿಯಾ’ ಲೇಬಲ್‌ನ ಚಿತ್ರಗಳೆಲ್ಲ ವ್ಯಾಪಾರಿ ಸರಕುಗಳೇ ಹೊರತು, ಕನ್ನಡದ ಅನನ್ಯತೆಯ ಅಭಿವ್ಯಕ್ತಿಗಳಲ್ಲ. ಮಬ್ಬು ಬೆಳಕಿನಲ್ಲಿ ರೂಪುಗೊಂಡ ಸರಕು ಸಂಸ್ಕೃತಿಯ ಸಿನಿಮಾಗಳಿಂದ ಕವಿದಿರುವ ಮಬ್ಬಿನಿಂದ ಕನ್ನಡ ಚಿತ್ರರಂಗ ತಬ್ಬಿಬ್ಬಾಗಿದೆ. ಈ ಮಂಪರಿನಿಂದ ಹೊರಬರಲಿಕ್ಕೆ ಅಗತ್ಯವಾದ ಸೃಜನಶೀಲತೆ ಹಾಗೂ ಬದ್ಧತೆ – ಎರಡೂ ಕನ್ನಡ ಸಿನಿಮಾ ನಿರ್ಮಾತೃಗಳಲ್ಲಿ ಅಪೇಕ್ಷಿಸುವುದು ದುಬಾರಿ ನಿರೀಕ್ಷೆ ಎನ್ನುವಂತಾಗಿದೆ.
ಯಾವುದೇ ಒಂದು ಭಾಷೆಯ ಸಿನಿಮಾ ಸಂಸ್ಕೃತಿ ಜೀವಂತವಾಗಿರುವಲ್ಲಿ ಕಲಾವಿದರ– ತಾರಾ ವರ್ಚಸ್ಸಿನ ನಾಯಕರ– ಕೊಡುಗೆ ಮುಖ್ಯವಾದುದು. ನೋಡುಗರನ್ನು ಚಿತ್ರಮಂದಿರಗಳಿಗೆ ಕರೆತರಬಲ್ಲ ಶಕ್ತಿಯುಳ್ಳ ನಟರು ಸತತವಾಗಿ ಸಿನಿಮಾಗಳನ್ನು ಮಾಡಿದರಷ್ಟೇ ಚಿತ್ರೋದ್ಯಮ ಲವಲವಿಕೆಯಿಂದಿರುವುದು ಸಾಧ್ಯ. ಕನ್ನಡದ ಸ್ಥಿತಿ ಗಮನಿಸಿ. 2020ರಿಂದೀಚೆಗೆ ದರ್ಶನ್ ಹಾಗೂ ಸುದೀಪ್ ನಟನೆಯ ತಲಾ 2 ಸಿನಿಮಾಗಳು ತೆರೆಕಂಡಿದ್ದರೆ, ಯಶ್ ನಟನೆಯ ಒಂದು ಚಿತ್ರವಷ್ಟೇ ತೆರೆಕಂಡಿದೆ. ಮೂರು ವರ್ಷದ ಅವಧಿಯಲ್ಲಿ, ಮುಂಚೂಣಿ ಕಲಾವಿದರು ನಟಿಸಿದ ಐದು ಸಿನಿಮಾಗಳಷ್ಟೇ ತೆರೆಕಂಡಿವೆ ಎನ್ನುವುದಕ್ಕಿಂತಲೂ ಕನ್ನಡ ಚಿತ್ರರಂಗದ ದುಃಸ್ಥಿತಿಗೆ ಬೇರೊಂದು ಉದಾಹರಣೆ ಅನಗತ್ಯ. ರಾಜ್‌ಕುಮಾರ್ ವೃತ್ತಿಜೀವನದ ಉತ್ತುಂಗದಲ್ಲಿ, ಅವರ ನಟನೆಯ ಕನಿಷ್ಠ ಏಳೆಂಟು ಚಿತ್ರಗಳಾದರೂ ಪ್ರತಿ ವರ್ಷ ಬಿಡುಗಡೆಯಾಗುತ್ತಿದ್ದವು; ಅಷ್ಟೇ ಸಂಖ್ಯೆಯಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ನಟನೆಯ ಸಿನಿಮಾಗಳೂ ತೆರೆಕಾಣುತ್ತಿದ್ದವು ಎನ್ನುವುದನ್ನು ನೆನಪಿಸಿಕೊಂಡರೆ, ಇಂದಿನ ನಟರ ಸಾಮರ್ಥ್ಯದ ಮಿತಿ ಅರಿವಿಗೆ ಬರುತ್ತದೆ.
ವರ್ಷಕ್ಕೊಂದೋ ಒಂದೂವರೆಯೋ ಸಿನಿಮಾವನ್ನೂ ಮಾಡದಿದ್ದರೂ ಪ್ರಚಾರದ ಪ್ರಭಾವಳಿಯಿಂದೇನೂ ಕಲಾವಿದರು ದೂರವಾಗಿಲ್ಲ; ಸಿನಿಮೇತರ ಕಾರಣಗಳಿಂದಾಗಿ ನಿರಂತರವಾಗಿ ಸುದ್ದಿಯಲ್ಲಿರುವ ಕಲೆಯಲ್ಲವರು ಪಳಗಿದ್ದಾರೆ. ಕಲಾವಿದನೊಬ್ಬ ತಾನು ನಿರ್ವಹಿಸುವ ಪಾತ್ರಗಳ ಮೂಲಕ ಜನಮನದಲ್ಲಿ ಸ್ಥಾನಪಡೆಯಬೇಕು ಹಾಗೂ ಕಲಾವಿದ ಜೀವ ತುಂಬುವ ಕಥನಗಳು ದೇಶ–ಭಾಷೆಯ ಚೆಲುವನ್ನು ಒಳಗೊಂಡಿರಬೇಕು. ಈಗಿನ ಬಹುತೇಕ ಕಲಾವಿದರು ಸುದ್ದಿಯಲ್ಲಿರುವುದು ಖಯಾಲಿಗಳ ಮೂಲಕ ಹಾಗೂ ನಿರ್ವಹಿಸುವ ಪಾತ್ರ ಮತ್ತು ನಿಜ ಜೀವನದ ವ್ಯಕ್ತಿತ್ವಕ್ಕೂ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುವುದರ ಮೂಲಕ. ಕಲಾವಿದರಲ್ಲಿನ ವೃತ್ತಿಪರತೆಯ ಕೊರತೆಯೇ ಕನ್ನಡ ಚಿತ್ರೋದ್ಯಮದ ಎಲ್ಲ ಸಂಕಟಗಳ ಮೂಲವಾಗಿರುವಂತಿದೆ. ನಟನೊಬ್ಬನ ಕಾಲ್‌ಷೀಟ್ ದೊರೆಯದ ಕಾರಣದಿಂದಾಗಿ ನಿರ್ಮಾಪಕರು ಬೀದಿಗೆ ಬಂದು ದೂರುವ ಪರಿಸ್ಥಿತಿ ಸೃಷ್ಟಿಯಾಗಿರುವುದನ್ನು ನೋಡಿದರೆ, ‘ಅನ್ನದಾತರು’ ಎಂದು ನಿರ್ಮಾಪಕರನ್ನು ಗೌರವಿಸುತ್ತಿದ್ದ ಮನೋಭಾವ ರಾಜ್‌ಕುಮಾರ್ ಕಾಲಕ್ಕೇ ಮುಗಿದಂತಿದೆ.
ವಯಸ್ಸು ಹೆಚ್ಚಾದಂತೆಲ್ಲ ಮನುಷ್ಯ ದಣಿಯುವುದು, ಕ್ರಿಯಾಶಕ್ತಿ ಕುಂದುವುದು ಸಹಜ. ಆದರೆ, ಯಾವುದೇ ಕಲೆ ಪ್ರಾಯ ಹೆಚ್ಚಾದಂತೆಲ್ಲ ವಿಕಸನದ ದಾರಿಯಲ್ಲಿ ಸಾಗಬೇಕು. ಕನ್ನಡ ಚಿತ್ರೋದ್ಯಮ ತನ್ನ ದೋಣಿಗೆ ತಾನು ಕಿಂಡಿ ಕೊರೆಯುವುದನ್ನು ಬಿಟ್ಟರೆ, ಈಗ ತೊಂಬತ್ತರ ಏದುಸಿರಿನಲ್ಲಿ ಕಾಣಿಸಿರುವ ದಣಿವು, ನೂರರ ವೇಳೆಗೆ ಪ್ರಪಾತಕ್ಕೆ ಮುಟ್ಟಿಸೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.