ಅಮೆರಿಕ ಭೇಟಿ ಕೈಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಆತಿಥೇಯ ರಾಷ್ಟ್ರದ ಅಧ್ಯಕ್ಷ ಜೋ ಬೈಡನ್ ಅವರಿಗೆ ಗಾಂಧಿ ನೆನಪಾಗಿದ್ದಾರೆ. ಗಾಂಧೀಜಿ ಅನುಸರಿಸಿದ ಅಹಿಂಸೆ, ಸಹಿಷ್ಣುತೆ ಹಾಗೂ ಹ್ಯೂಮನ್ ಟ್ರಸ್ಟಿಶಿಪ್ ಮೌಲ್ಯಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಮಹತ್ವದ್ದೆನ್ನಿಸಿವೆ ಎಂದು ಬೈಡನ್ ಹೇಳಿದ್ದಾರೆ. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ಸಾಬರಮತಿಗೆ ಭೇಟಿ ನೀಡಿದಾಗ, ‘ಈ ಅದ್ಭುತ ಭೇಟಿಗಾಗಿ ನನ್ನ ಅತ್ಯುತ್ತಮ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು’ ಎಂದು ಸಂದರ್ಶಕರ ಪುಸ್ತಕ ದಲ್ಲಿ ಬರೆದಿದ್ದರು. ಅಮೆರಿಕದ ಹಾಲಿ ಹಾಗೂ ಮಾಜಿ ಅಧ್ಯಕ್ಷರ ಮಾತುಗಳು, ಮಹಾತ್ಮನ ಸಾಂದರ್ಭಿಕತೆಯನ್ನು ಮೀರಿ ಸರಳತೆಯ ಸೌಂದರ್ಯ ಮತ್ತು ಅದ್ಧೂರಿತನದ ವೈಭವದ ಕವಲು ದಾರಿಗಳನ್ನು ಸೂಚಿಸುವಂತಿವೆ.
ಸಾಬರಮತಿಯ ಆಶ್ರಮದ ಮಣ್ಣಿನಲ್ಲಿ ನಿಂತಾಗ ಟ್ರಂಪ್ ಅವರಿಗೆ ಗಾಂಧಿಸ್ಮೃತಿಗಳು ಕಾಡಬೇಕಾಗಿತ್ತು. ಆದರೆ, ಆಶ್ರಮಕ್ಕೆ ಆಗಮಿಸುವ ಮುನ್ನ ಅಹಮದಾ ಬಾದ್‌ನಲ್ಲಿ 22 ಕಿ.ಮೀ. ಉದ್ದದ ರೋಡ್ ಶೋನಲ್ಲಿ ಭಾಗಿಯಾಗಿದ್ದ ಅವರಿಗೆ, ಆ ಸಂಭ್ರಮವನ್ನು ಆಯೋಜಿಸಿದ ಗೆಳೆಯನೇ ಮುಖ್ಯನೆನ್ನಿಸಿರಬೇಕು.
ಅಮೆರಿಕ ಭೇಟಿ ಸಂದರ್ಭದಲ್ಲಿ ಮೋದಿ ಅವರು ಕೂಡ ಸಾಮಾಜಿಕ ನ್ಯಾಯದ ಗುರಿಯನ್ನು ಹೊಂದಿರುವ ಗಾಂಧೀಜಿಯ ಸಾಮಾಜಿಕ ಮತ್ತು ಆರ್ಥಿಕ ತತ್ವಶಾಸ್ತ್ರವನ್ನು ನೆನಪಿಸಿಕೊಂಡಿದ್ದಾರೆ. ಭೂಮಿಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದಕ್ಕಾಗಿ ಗಾಂಧೀಜಿಯ ಧರ್ಮದರ್ಶಿತ್ವ ಪರಿಕಲ್ಪನೆ ಪೂರಕವಾಗಿದೆ ಎನ್ನುವುದು ಮಾತಿನ ಸಾರ. ಹಾಗಾದರೆ, ಗಾಂಧಿ ಮೌಲ್ಯಗಳನ್ನು ಅವರು ತಮ್ಮ ಆಡಳಿತದಲ್ಲಿ ಹಾಗೂ ವಿಚಾರಧಾರೆಯಲ್ಲಿ ಆಚರಣೆಗೆ ತರಲು ಪ್ರಯತ್ನಿಸಿದ್ದಾರೆಯೇ? ಇದಕ್ಕೆ ಉತ್ತರವಾಗಿ ಸಾಬರಮತಿ ಆಶ್ರಮದ ಪುನರುಜ್ಜೀವನ ಹಾಗೂ ಜಲಿಯನ್ ವಾಲಾಬಾಗ್ ಸ್ಮಾರಕಕ್ಕೆ ಹೊಸರೂಪು ನೀಡಿರುವ ಪ್ರಯತ್ನಗಳನ್ನು ಗಮನಿಸಬಹುದು.
ನೂರು ವರ್ಷಗಳು ತುಂಬಿರುವ ಸಾಬರಮತಿ ಆಶ್ರಮದ ಪುನರುಜ್ಜೀವನಕ್ಕೆ, ಮೋದಿ ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿರುವ ಗುಜರಾತ್ ಸರ್ಕಾರ ಮುಂದಾಗಿದೆ. ಆಶ್ರಮದ ಜಾಗದಲ್ಲಿ ಆಧುನಿಕ ಕಟ್ಟಡ ಸಮುಚ್ಚಯಗಳು ತಲೆಯೆತ್ತಲಿವೆ. ಆಶ್ರಮವಾಸಿಗಳ ಸ್ಥಳಾಂತರ ಪ್ರಯತ್ನ ಆರಂಭವಾಗಿದ್ದು, ಅವರಿಗೆ ಹಂಚಲು ಫ್ಲ್ಯಾಟ್‌ಗಳನ್ನು ಖರೀದಿಸಲಾಗುತ್ತಿದೆ.
ಪುನರುಜ್ಜೀವನದ ಮೂಲಕ ವಿಶ್ವ ಪ್ರವಾಸಿನಕ್ಷೆಯಲ್ಲಿ ಸಾಬರಮತಿಗೆ ಪ್ರಮುಖ ಸ್ಥಾನ ದೊರಕಿಸಿಕೊಡು ವುದು ಸರ್ಕಾರದ ಉದ್ದೇಶ. ಆಶ್ರಮದ ಪುನರುಜ್ಜೀವನದ ಯೋಜನೆ ಮೇಲ್ನೋಟಕ್ಕೆ ಆಕರ್ಷಕವಾಗಿದೆ. ಪ್ರಶ್ನೆ ಇರುವುದು ಈ ಕೆಡವಿ ಕಟ್ಟುವ ಪ್ರಯತ್ನ ಗಾಂಧಿ ಅವರ ಆಶಯ–ನಂಬಿಕೆಗಳಿಗೆ ಪೂರಕವಾಗಿದೆಯೇ ಎನ್ನುವುದರಲ್ಲಿ.
ಗಾಂಧೀಜಿ ಪಾಲಿಗೆ ಸಾಬರಮತಿ ಆಶ್ರಮ ಕೇವಲ ನೆಲೆಯಾಗಿರಲಿಲ್ಲ; ಹದಿಮೂರು ವರ್ಷಗಳ ಕಾಲ ಅವರು ನಂಬಿದ ಸತ್ಯ ಮತ್ತು ಅಹಿಂಸೆಗಳ ಅನುಷ್ಠಾನದ ಪ್ರಯೋಗಶಾಲೆಯಾಗಿತ್ತು. ಕೃಷಿ ಮತ್ತು ಪಶುಪಾಲನೆ ಚಟುವಟಿಕೆಗಳಿಗೆ ಒಡಲಾಗಿತ್ತು.
ಸಾಬರಮತಿ ನದಿ ದಂಡೆಯಲ್ಲಿ ಆಶ್ರಮ ರೂಪು ಗೊಂಡಿದ್ದು 1917ರ ಜೂನ್ 17ರಂದು. ಅದಕ್ಕೆ ಎರಡು ವರ್ಷ ಮೊದಲೇ (1915, ಮೇ 2) ಅಹಮದಾಬಾದ್‌ಗೆ ಸಮೀಪದಲ್ಲಿ ಭಾರತದಲ್ಲಿನ ತಮ್ಮ ಮೊದಲ ಆಶ್ರಮವನ್ನು ಗಾಂಧೀಜಿ ಆರಂಭಿಸಿದ್ದರು. ಅವರ ಸ್ನೇಹಿತ ಮತ್ತು ಬ್ಯಾರಿಸ್ಟರ್ ಆಗಿದ್ದ ಜೀವನ್‌ಲಾಲ್ ದೇಸಾಯಿ ನೀಡಿದ ಜಾಗದಲ್ಲಿ ರೂಪುಗೊಂಡಿದ್ದ ‘ಕೊಚಾರ್ಬ್ ಆಶ್ರಮ’ವನ್ನು ‘ಸತ್ಯಾಗ್ರಹ ಆಶ್ರಮ’ ಎಂದೂ ಕರೆಯಲಾಗುತ್ತಿತ್ತು. ಪಶು ಪಾಲನೆ ಮತ್ತು ಕೃಷಿಯ ಉದ್ದೇಶಕ್ಕಾಗಿ ಗಾಂಧೀಜಿ ಅವರಿಗೆ ಹೆಚ್ಚಿನ ಜಾಗದ ಅವಶ್ಯಕತೆ ಕಂಡಿದ್ದರಿಂದಾಗಿ, ಸಾಬರಮತಿ ನದಿ ದಂಡೆಗೆ ಆಶ್ರಮವನ್ನು (36 ಎಕರೆ ಪ್ರದೇಶ) ಸ್ಥಳಾಂತರಿಸಲಾಯಿತು.
ಸಾಬರಮತಿ ನದಿ ದಂಡೆಗೆ ಪುರಾಣಪ್ರಭೆಯೂ ಇದೆ. ಇಂದ್ರನ ವಜ್ರಾಯುಧಕ್ಕೆ ತನ್ನ ಬೆನ್ನುಮೂಳೆಯನ್ನು ದಾನವಾಗಿ ಕೊಟ್ಟ ದಧೀಚಿ ಮಹರ್ಷಿಯ ಆಶ್ರಮ ತಾಣಗಳಲ್ಲಿ ಸಾಬರಮತಿಯೂ ಒಂದೆನ್ನುವುದು ನಂಬಿಕೆ. ಜೈಲು ಮತ್ತು ಶವಾಗಾರದ ನಡುವೆ ಈ ಆಶ್ರಮವಿದೆ. ಈ ಎರಡೂ ಸ್ಥಳಗಳಿಗೆ ಸತ್ಯಾಗ್ರಹಿ ಏಕರೂಪದಲ್ಲಿ ಹೋಗಬಲ್ಲ ಎನ್ನುವುದು ಗಾಂಧೀಜಿ ನಂಬಿಕೆಯಾಗಿತ್ತು.
1930ರ ಮಾರ್ಚ್ 12ರಂದು ಸಾಬರಮತಿ ಆಶ್ರಮದಿಂದ ಹೊರಟ ಗಾಂಧೀಜಿ, ಏಪ್ರಿಲ್ 5ರಂದು ದಂಡಿಯಲ್ಲಿ ಉಪ್ಪು ತಯಾರಿಸುವ ಮೂಲಕ ಬ್ರಿಟಿಷ್ ಪ್ರಭುತ್ವದ ವಿರುದ್ಧ ಸ್ಪಷ್ಟ ಬಂಡಾಯ ಸಾರಿದ್ದರು. ಆ ‘ದಂಡಿ ಯಾತ್ರೆ’ ಲಕ್ಷಾಂತರ ಭಾರತೀಯರಲ್ಲಿ ಸ್ವಾತಂತ್ರ್ಯದ ಜಾಗೃತಿ ಮೂಡಿಸಿತು. ಅದರಿಂದ ತಲ್ಲಣಗೊಂಡು ಕೆರಳಿದ ಬ್ರಿಟಿಷರು ಸಾಬರಮತಿ ಆಶ್ರಮವನ್ನು ಸ್ವಾಧೀನ ಪಡಿಸಿಕೊಂಡರು. ಇದು ಸಾಬರಮತಿಯ ತ್ಯಾಗ–ಸತ್ಯಾಗ್ರಹ–ಅಹಿಂಸೆ–ಸ್ವಾತಂತ್ರ್ಯಪ್ರೇಮದ ಇತಿಹಾಸ.
ಸಾಬರಮತಿ ಎನ್ನುವುದು ಗಾಂಧೀಜಿಯ ಸತ್ಯನಿಷ್ಠೆ ಮತ್ತು ಸರಳತೆಗೆ ಕಾರ್ಯಕ್ಷೇತ್ರವಾಗಿ ಒದಗಿಬಂದ ಮಣ್ಣು. ಅದನ್ನು ಆಧುನಿಕಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಹಿಂದಿರುವುದು ಅಗ್ಗದ ಪ್ರದರ್ಶನಪ್ರಿಯತೆಯೇ ಹೊರತು ಗಾಂಧಿಯ ಸರಳತೆ–ಸತ್ಯನಿಷ್ಠೆಯಲ್ಲ. ಕಟ್ಟಡಗಳನ್ನು ನಿರ್ಮಿಸುವುದು ಮತ್ತು ಒಡೆಯುವುದು ಆಧುನಿಕತೆಯ ಅಹಂಕಾರವನ್ನು ತಣಿಸುವ ಮಾರ್ಗಗಳು. ಆದರೆ, ರಾಜಕಾರಣದೊಂದಿಗೆ ಗಾಂಧಿ ಬೆಸೆದ ಅಧ್ಯಾತ್ಮ ಪರಂಪರೆ, ಕಟ್ಟುವ ಇಲ್ಲವೇ ಕೆಡಹುವ ಕ್ರಿಯೆಗಳ ಪೊಳ್ಳುತನದ ಕುರಿತು ಮಾತನಾಡುತ್ತದೆ. ನೆಹರೂಗೆ ಬರೆದ ಪತ್ರವೊಂದರಲ್ಲಿ, ‘ಹಳ್ಳಿಗಳ ಸರಳತೆಯಲ್ಲಿ ಮಾತ್ರವೇ ಸತ್ಯ ಹಾಗೂ ಅಹಿಂಸೆಯ ದರ್ಶನವನ್ನು ಪಡೆದುಕೊಳ್ಳಲು ಸಾಧ್ಯ’ ಎಂದು ಗಾಂಧಿ ಹೇಳಿದ್ದಾರೆ. ಸಾಬರಮತಿಯೂ ಒಂದು ಹಳ್ಳಿ. ಗಾಂಧಿಯ ಬದುಕಿನ ಸರಳತೆ ಮತ್ತು ಸತ್ಯಪಾಲನೆಯ ದರ್ಶನ, ಆಶ್ರಮದ ಕುಟೀರಗಳಲ್ಲಿ ಮತ್ತು ಬಯಲಿನಲ್ಲಿ ಸಾಧ್ಯವೇ ಹೊರತು ಭವ್ಯ ಕಟ್ಟಡಗಳಲ್ಲಲ್ಲ. ಈ ವಿರೋಧಾಭಾಸದ ಕಾರಣ ದಿಂದಾಗಿಯೇ, ಬೈಡನ್‌ರೊಂದಿಗೆ ಜುಗಲ್‌ಬಂದಿ ಹಾಡುವಂತೆ ಗಾಂಧಿಯನ್ನು ನೆನಪಿಸಿಕೊಂಡಿರುವ ಮೋದಿ ಅವರಿಗಿಂತಲೂ, ಗಾಂಧಿ ಆಶ್ರಮದಲ್ಲಿ ಗೆಳೆಯನ ಕೃತಜ್ಞತೆಗೆ ಪಾತ್ರರಾದ ಪ್ರಧಾನಿಯೇ ಹೆಚ್ಚು ಸತ್ಯವೆನ್ನಿಸುತ್ತಾರೆ.
ಸಾಬರಮತಿ ಆಶ್ರಮಕ್ಕೆ ಹೈಟೆಕ್ ಸ್ಪರ್ಶ ನೀಡುವ ಪ್ರಯತ್ನದ ಜೊತೆಗೆ ಜಲಿಯನ್ ವಾಲಾಬಾಗ್ ಸ್ಮಾರಕದ ಸೌಂದರ್ಯಸ್ಪರ್ಶ ವಿದ್ಯಮಾನವನ್ನೂ ಒಟ್ಟಿಗೆ ನೋಡಬೇಕು. 1919ರ ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಸಾವಿರಾರು ಸ್ವಾತಂತ್ರ್ಯಪ್ರೇಮಿಗಳು ಬ್ರಿಟಿಷ್ ಪ್ರಭುತ್ವದ ಗುಂಡುಗಳಿಗೆ ಬಲಿಯಾಗಿದ್ದರು. ಆ ಹತ್ಯಾಕಾಂಡವನ್ನು ವಿರೋಧಿಸಿ ಗಾಂಧೀಜಿ ಅಹಮದಾಬಾದ್‌ನಲ್ಲಿ ಮೂರು ದಿನಗಳ ಉಪವಾಸ ಮಾಡಿದ್ದರು. ಹುತಾತ್ಮರ ಪಿಸುಮಾತುಗಳನ್ನು ಕೇಳಿಸಿಕೊಳ್ಳಬೇಕಾದ, ನತದೃಷ್ಟರ ಸ್ಮೃತಿಗಳನ್ನು ಅನುಭವಕ್ಕೆ ತಂದುಕೊಂಡು ಮನಸ್ಸುಗಳನ್ನು ಆರ್ದ್ರಗೊಳಿಸಬೇಕಾದ ಜಲಿಯನ್ ವಾಲಾಬಾಗ್ ಈಗ ಮೇಕಪ್ ಮೆತ್ತಿಕೊಂಡು ನಿಂತಿದೆ. ಸಾವು ಅಥವಾ ಹಸಿವೆಯನ್ನು ರಮ್ಯವಾಗಿ ತೋರಿಸುವ ವ್ಯಾಪಾರಿ ಸಿನಿಮಾದಂತೆ ಹುತಾತ್ಮರ ಉದ್ಯಾನ ಕಾಣಿಸುತ್ತಿದೆ; ಆ ದಾರಿಯಲ್ಲಿ ಸಾಬರಮತಿ ಆಶ್ರಮವೂ ನಡೆದಿದೆ.
ಸಾಬರಮತಿಯ ಸ್ಮೃತಿಗಳ ಮೇಲೆ ದಾಳಿ ನಡೆಯುತ್ತಿರುವುದು ಇದು ಮೊದಲೇನಲ್ಲ. ದಂಡಿಯಾತ್ರೆಗೆ ಪ್ರತೀಕಾರ ರೂಪದಲ್ಲಿ ಬ್ರಿಟಿಷ್ ಸರ್ಕಾರವು ಸಾಬರಮತಿ ಆಶ್ರಮವನ್ನು ವಶಪಡಿಸಿ ಕೊಂಡಿತ್ತು. ಆಗ ಗಾಂಧಿ ಹೇಳಿದ್ದು: ‘ಸ್ವಾತಂತ್ರ್ಯ ಬರುವವರೆಗೂ ಸಾಬರಮತಿ ಆಶ್ರಮ ಪ್ರವೇಶಿಸುವುದಿಲ್ಲ’. ಸಾಬರಮತಿ ಆಶ್ರಮದ ವಿಸರ್ಜನೆಯ ಬಗ್ಗೆಯೂ ಗಾಂಧೀಜಿ ಯೋಚಿಸಿದ್ದರು. ಸ್ವಾತಂತ್ರ್ಯಾನಂತರ ಸಾಬರಮತಿಗೆ ಹೋಗುವುದೋ ಬೇಡವೋ ಎಂದು ಗಾಂಧೀಜಿ ಯೋಚಿಸುವ ಮೊದಲೇ ಅವರು ಹುತಾತ್ಮರಾಗಿದ್ದರು. ರಾಮ ಬರುವನೆಂದು ಸಂವತ್ಸರಗಳ ಕಾಲ ಕಾದ ಶಬರಿಯ ನಿರೀಕ್ಷೆ ಹುಸಿಯಾಗಲಿಲ್ಲ. ಆದರೆ, ರಾಮಭಕ್ತ ಮರಳುವನೆಂದು ಕಾಯುತ್ತಿರುವ ಸಾಬರಮತಿ ಆಶ್ರಮದ ನಿರೀಕ್ಷೆ ನಿಜವಾಗಲಿಲ್ಲ. ಕನಿಷ್ಠ ಅವರ ಸ್ಮೃತಿಗಳನ್ನಾದರೂ ಸಾಬರಮತಿಯಲ್ಲಿ ಜೀವಂತವಾಗಿ ಉಳಿಸಿಕೊಳ್ಳುವ ಪ್ರಯತ್ನಗಳಿಗೂ ಸಂಚಕಾರ ಒದಗಿದೆ.
ವೀರಗಲ್ಲು– ಮಾಸ್ತಿಗಲ್ಲುಗಳಿಗೆ ಅಥವಾ ಶಾಸನಗಳ ಶಿಲೆಗಳಿಗೆ ದನಕರುಗಳನ್ನು ಕಟ್ಟುವ ಗ್ರಾಮೀಣರ ಬಗ್ಗೆ ಲಘುವಾಗಿ ಮಾತನಾಡುತ್ತೇವೆ. ಸಾಬರಮತಿ ಆಶ್ರಮವನ್ನು ಹೈಟೆಕ್‌ಗೊಳಿಸುವ, ಜಲಿಯನ್ ವಾಲಾಬಾಗ್ ಉದ್ಯಾನ ವನ್ನು ರಮ್ಯಗೊಳಿಸುವ ಪ್ರಯತ್ನಗಳು ಶಾಸನಗಳಿಗೆ ದನ ಕಟ್ಟುವ ಕೆಲಸಕ್ಕಿಂತ ಮಿಗಿಲಾದುವೇನಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.