ADVERTISEMENT

ಪಡಸಾಲೆ: ‘ಎಲ್ಲರ ಕನ್ನಡ’ ಎಲ್ಲರದಾಗುವುದು ಸಾಧ್ಯವೇ?

ಕನ್ನಡದ ಪ್ರಾಣಶಕ್ತಿಯೇ ಕ್ಷೀಣಿಸುತ್ತಿರುವಾಗ ಮಹಾಪ್ರಾಣಗಳ ಬಗ್ಗೆ ಆತಂಕ!

ಚ.ಹ.ರಘುನಾಥ
Published 17 ಜುಲೈ 2024, 2:22 IST
Last Updated 17 ಜುಲೈ 2024, 2:22 IST
   

ಕನ್ನಡಾ! ಕನ್ನಡ, ಹಾ, ಸವಿಗನ್ನಡ! ಎನ್ನುವುದು ಕುವೆಂಪು ಅವರ ಉದ್ಗಾರ. ಸದ್ಯಕ್ಕೆ ಚರ್ಚೆಯಲ್ಲಿರುವುದು, ‘ಕನ್ನಡಾ! ಕನ್ನಡ, ಹಾ, ಎಲ್ಲರ ಕನ್ನಡ!’

‘ಎಲ್ಲರ ಕನ್ನಡ’ವಾದಿಗಳ ಉತ್ಸಾಹಕ್ಕೆ ನಿದರ್ಶನವಾಗಿ, ನಿರೂಪಕಿ–ಕಲಾವಿದೆ ಅಪರ್ಣಾ ಅವರ ಸಾವಿನ ಸಂದರ್ಭವೂ ನುಡಿ ವ್ಯಸನ ಹಾಗೂ ನುಡಿ ಸರಳೀಕರಣದ ಕುರಿತ ಚರ್ಚೆಗೆ ಬಳಕೆಯಾಯಿತು. ಸಾವಿಗೀಡಾದ ಕನ್ನಡತಿ ಬಳಸುತ್ತಿದ್ದ ಭಾಷೆಯನ್ನು ಭಾಷಾ ಶ್ರೇಷ್ಠತೆಯ ವ್ಯಸನದಿಂದ ಕೂಡಿದ ‘ಶಿಷ್ಟ ಕನ್ನಡ’ವೆಂದು ಕೆಲವರು ಗುರ್ತಿಸಿದರೆ, ಮತ್ತೆ ಕೆಲವರು ಶಿಷ್ಟ ಕನ್ನಡದ ಹಿಂದಿರಬಹುದಾದ ಜಾತಿಯ ವಾಸನೆ–ಮನಃಸ್ಥಿತಿಯ ಬಗ್ಗೆ ಟಿಪ್ಪಣಿ ದಾಖಲಿಸಿದರು. ಬಾಳಿನುದ್ದಕ್ಕೂ ಕನ್ನಡದ ಹಿರಿಮೆಯ ಬಗ್ಗೆ ಮಾತನಾಡಿದ, ಅಸಂಖ್ಯಾತ ಕನ್ನಡಿಗರಿಗೆ ತಮ್ಮ ನುಡಿಯ ಬಗ್ಗೆ ಹೆಮ್ಮೆ ಮೂಡಿಸಿದ ಹೆಣ್ಣುಮಗಳನ್ನು ಸಾವಿನ ಸಂದರ್ಭದಲ್ಲಿ ಹೀಗೂ ನೆನಪಿಸಿಕೊಳ್ಳಬಹುದು ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಗಳು ಉದಾಹರಣೆಯಂತಿದ್ದವು.

ಸಾವಿನ ಮನೆಯಲ್ಲಿನ ಮೌನವನ್ನು ಕಲಕುವ ಮಾತು–ಕತೆಗಳು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಕಂಡಿರುವಾಗ, ಅಪರ್ಣಾ ಅವರ ಸಾವಿನ ಸಂದರ್ಭದ ಚರ್ಚೆಗಳನ್ನು ಅಸಹಜ ಎನ್ನುವಂತಿಲ್ಲ. ಆದರೆ, ಕನ್ನಡವನ್ನು ಸರಳಗೊಳಿಸಬೇಕು ಎಂದು ಬಯಸುವವರು ತಮ್ಮ ಮಾತುಗಳಿಗೆ ತಂದುಕೊಂಡ ಜಡತೆ ಹಾಗೂ ಕಾಠಿಣ್ಯ ಆಶ್ಚರ್ಯ ಹುಟ್ಟಿಸುವಂತಹದ್ದು. ಭಾಷೆಯ ಮೆದುಗೊಳಿಸಲು ಹಂಬಲಿಸುವವರ ನಡೆ–ನುಡಿಯಲ್ಲೇ ಕಾಠಿಣ್ಯ ಇರುವುದನ್ನು ಸಹಜ ಎನ್ನಲಾಗದು.

ADVERTISEMENT

‘ಎಲ್ಲರ ಕನ್ನಡ’ ಹೆಸರಿನಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿ. ‘ಶಿಷ್ಟ ಕನ್ನಡ’ ಅಥವಾ ‘ಶುದ್ಧ ಕನ್ನಡ’ಕ್ಕೆ ಪರ್ಯಾಯವಾಗಿ ಮಹಾಪ್ರಾಣಗಳಿಲ್ಲದ ಕನ್ನಡವನ್ನು ಬಯಸುವವರು ತಾವು ಬಳಸುವ ಕನ್ನಡವನ್ನು ‘ಎಲ್ಲರ ಕನ್ನಡ’ ಎಂದು ಕರೆಯುತ್ತಿದ್ದಾರೆ. ಆದರೆ, ಶುದ್ಧ ಕನ್ನಡ ಎನ್ನುವುದು ಇರುವುದು ಹೇಗೆ ಸಾಧ್ಯವಿಲ್ಲವೋ, ಎಲ್ಲರ ಕನ್ನಡ ಇರುವುದೂ ಸಾಧ್ಯವಿಲ್ಲ. ಭಾಷೆಯಲ್ಲಿನ ಶುದ್ಧತೆ, ಶಿಷ್ಟತೆಯನ್ನು ವಿರೋಧಿಸುವವರ ಮಾತುಗಳಲ್ಲಿ, ಭಾಷಾ ಸುಧಾರಣೆಗಿಂತಲೂ ಅವರು ಬಳಸುವ ಕನ್ನಡಕ್ಕೆ ಶಿಷ್ಟತೆಯನ್ನು ತಂದುಕೊಡುವ ಪ್ರಯತ್ನವೇ ಎದ್ದುಕಾಣಿಸುತ್ತದೆ. ಜೀವವಿರೋಧಿ ಸಿದ್ಧಾಂತಗಳನ್ನು ವಿರೋಧಿಸುವ ಭರದಲ್ಲಿ ತಾವು ಎದುರಿಸುತ್ತಿರುವವರ ನಡೆನುಡಿಗಳನ್ನೇ ಮೈಗೂಡಿಸಿಕೊಳ್ಳುವ ವಿರೋಧಾಭಾಸ ಭಾಷಾ ಸುಧಾರಣೆ ಸಂದರ್ಭದಲ್ಲೂ ಇದೆ.

‘ಎಲ್ಲರ ಕನ್ನಡ’ ಪ್ರತಿಪಾದಕರ ವಿರೋಧವನ್ನು ಸರಳವಾಗಿ ನೋಡುವುದೂ ಸಾಧ್ಯವಿಲ್ಲ. ಈ ಟೀಕೆ ಟಿಪ್ಪಣಿಗಳನ್ನು, ಗ್ರಾಮ್ಯ ಕನ್ನಡ ಅಥವಾ ಮಹಾಪ್ರಾಣಗಳ ಜಾಗದಲ್ಲಿ ಅಲ್ಪಪ್ರಾಣವನ್ನು ಬಳಸುವವರನ್ನು ಭಾಷಾಶುದ್ಧತೆಯ ಹೆಸರಿನಲ್ಲಿ ಅವಹೇಳನ ಮಾಡುವ ಪ್ರಯತ್ನಗಳ ಹಿನ್ನೆಲೆಯಲ್ಲಿ ನೋಡಬೇಕು. ಆದರೆ, ಯಾವ ಅವಹೇಳನವನ್ನು ನಾವು ಆಕ್ಷೇಪಿಸುತ್ತೇವೆಯೋ, ಅದನ್ನು ವಿರೋಧಿಸುವ ನಿಟ್ಟಿನಲ್ಲಿ ಅದೇ ಅಮಾನವೀಯ ನಡೆನುಡಿಯನ್ನು ರೂಢಿಸಿಕೊಳ್ಳುವುದು ರಚನಾತ್ಮಕವೂ ಅಲ್ಲ, ಸೃಜನಶೀಲವೂ ಅಲ್ಲ.

‘ಎಲ್ಲರ ಕನ್ನಡ’ ಎನ್ನುವ ಪರಿಭಾಷೆ ಎಷ್ಟರಮಟ್ಟಿಗೆ ಪ್ರಜಾಸತ್ತಾತ್ಮಕವಾದುದು ಎನ್ನುವುದರ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ. ಈ ಪರಿಕಲ್ಪನೆ, ಕವಿರಾಜ ಮಾರ್ಗಕಾರನ ಹಲವು ಕನ್ನಡಂಗಳ ಪರಿಕಲ್ಪನೆಗೆ ವಿರುದ್ಧವಿರುವಂತಿದೆ. ‘ಹಲವು ಕನ್ನಡಂಗಳು’ ಕನ್ನಡ ಸಮಾಜದಲ್ಲಿನ ಬಹುತ್ವವನ್ನು ನುಡಿಯಲ್ಲೂ ಕಾಣುವ ಹಂಬಲವಾದರೆ, ‘ಎಲ್ಲರ ಕನ್ನಡ’ ನುಡಿಗೆ ಏಕಾಕಾರವನ್ನು ತರುವ ಪರಿಕಲ್ಪನೆಯಾಗಿದೆ. ಕನ್ನಡವನ್ನು ಬಹುರೂಪಿಯಾಗಿ ಕಂಡ ಕವಿರಾಜ ಮಾರ್ಗಕಾರನ ನೋಟವನ್ನು ವಿಸ್ತರಿಸಬೇಕಾದ, ಕನ್ನಡಕ್ಕೆ ಸಂಬಂಧಿಸಿದ ‘ಹಲವು’ ವಿಶೇಷಣವನ್ನು ವ್ಯಕ್ತಿಗತವಾಗಿ ನೋಡಬೇಕಾದ ಸಂದರ್ಭ ಇಂದಿನದು. ಸೂಕ್ಷ್ಮವಾಗಿ ಗಮನಿಸಿದರೆ, ಒಬ್ಬರ ಕನ್ನಡ ಪೂರ್ಣ ರೂಪದಲ್ಲಿ ಇನ್ನೊಬ್ಬರದಾಗಿರುವುದು ಸಾಧ್ಯವೇ ಇಲ್ಲ. ಆಡುವ ಮಾತಿನಲ್ಲಿ ವ್ಯಕ್ತಿತ್ವವೂ ಇರುವುದರಿಂದ, ‘ನನ್ನ ಕನ್ನಡ’ ನನ್ನದಷ್ಟೇ ಆಗಿರುತ್ತದೆ. ಆರು ಕೋಟಿ ಕನ್ನಡಿಗರಿದ್ದಾರೆಂದರೆ, ಆರು ಕೋಟಿ ಕನ್ನಡಗಳೂ ಅಸ್ತಿತ್ವದಲ್ಲಿರುತ್ತವೆ. ಹಾಗಾಗಿ, ‘ಎಲ್ಲರ ಕನ್ನಡ’ ಎನ್ನುವುದು ಭಾವುಕ ಪರಿಕಲ್ಪನೆಯೇ ಹೊರತು, ವಾಸ್ತವವಲ್ಲ; ಅದು ಕನ್ನಡದ ನಾಳೆಗಳ ಹೊಳಪೂ ಅಲ್ಲ.

ನುಡಿಗೆ ತೊಡಕಿನ ರೂಪದಲ್ಲಿ ಮಹಾಪ್ರಾಣಗಳನ್ನು ಗುರ್ತಿಸಿ, ಅವುಗಳನ್ನು ವಿಸರ್ಜಿಸಲು ಮುಂದಾಗುವುದು ಕನ್ನಡದ ಪ್ರಾಣವನ್ನೇ ಹಿಂಡುತ್ತಿರುವಂತೆ ಕೆಲವರಿಗೆ ಕಾಣಿಸಿದರೆ ಅಸಹಜವೇನೂ ಅಲ್ಲ. ಭಾಷೆಗೆ ಚೌಕಟ್ಟನ್ನು ಕಲ್ಪಿಸುವ ವಯ್ಯಾಕರಣಿಗಳು ಉಳಿದಿರುವುದು ಶಾಸ್ತ್ರಕೃತಿಗಳಲ್ಲಷ್ಟೇ. ಹಾಗಾಗಿ, ಭಾಷಾ ಬಳಕೆಗೆ ಸಂಬಂಧಿಸಿದಂತೆ ನಿರ್ದೇಶಿಸುವ ಮನೋಭಾವ ಮೊದಲು ವಿಸರ್ಜನೆಯಾಗಬೇಕು. ಮಹಾಪ್ರಾಣಗಳನ್ನು ಬಳಸುವವರು ಬಳಸಲಿ. ಬೇಡದವರು ಬಿಡಲಿ. ಅದು ಅವರವರ ಅನುಕೂಲ, ಆಯ್ಕೆ. ಸಾಹಿತ್ಯ ರಚನೆ ಸಂದರ್ಭದಲ್ಲಿ ಪೊರೆಗಳನ್ನು ಕಳಚಿಕೊಳ್ಳುವ ರೂಢಿ ಸಾವಿರಾರು ವರ್ಷಗಳಿಂದ ಕನ್ನಡದಲ್ಲಿದೆ; ಆ ಅಭ್ಯಾಸ ಇಂದೂ ಮುಂದೂ ಸಹಜವಾಗಿ ಮುಂದುವರೆಯಲಿದೆ. ಊರುಕೇರಿಗಳ ಕಳ್ಳುಬಳ್ಳಿಗಳ ಬಂಧುಗಳ ಕನ್ನಡವಂತೂ ಅಲ್ಪ–ಮಹಾ ಪ್ರಾಣಗಳೆನ್ನುವ ಹಂಗಿಗೆ ಎಂದೂ ಒಳಗಾಗಿದ್ದಿಲ್ಲ. ವಾಸ್ತವ ಹೀಗಿರುವಾಗ, ‘ಎಲ್ಲರ ಕನ್ನಡ’ ಎಂದು ಹೇಳುವುದು, ಮಹಾಪ್ರಾಣ ಬಳಸುವವರನ್ನು ಶ್ರೇಷ್ಠತೆಯ ವ್ಯಸನಿಗಳೆಂದೂ ಜಾತಿಯ ಮೇಲರಿಮೆಯವರೆಂದೂ ಹಣೆಪಟ್ಟಿ ಕಟ್ಟುವುದು ಕನ್ನಡದ ಮರ್ಯಾದೆಯನ್ನು ಹೆಚ್ಚಿಸುವುದಿಲ್ಲ.

ಆಡುವ ಮಾತು ಹಾಗೂ ಸೃಜನಶೀಲ ಬರವಣಿಗೆಯ ನುಡಿಗೆ ಯಾವ ಕಟ್ಟುಪಾಡೂ ಇಲ್ಲ. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ಮಾತಿನಲ್ಲಿನ ಕನ್ನಡದ ಚೆಲುವು, ಆರ್ದ್ರತೆಯನ್ನು ಅಶಿಷ್ಟನುಡಿಯೆಂದು ನಿರಾಕರಿಸುವುದು ಸಾಧ್ಯವೆ? ಸಂಬಂಧದ ಅನನ್ಯತೆಯನ್ನು ಇಷ್ಟು ಸರಳವಾಗಿ ಹಾಗೂ ಸೊಗಸಾಗಿ ಕಟ್ಟಿಕೊಡುವ ಮತ್ತೊಂದು ಮಾತು ಕನ್ನಡದಲ್ಲಿಲ್ಲ. ದೇವನೂರರ ಕಥೆಗಳು, ಮೊಗಳ್ಳಿ ಗಣೇಶರ ‘ಬುಗುರಿ’, ಸಿದ್ಧಲಿಂಗಯ್ಯನವರ ‘ಇಕ್ರಲಾ ವದೀರ್‍ಲಾ’– ಇವುಗಳನ್ನು ಭಾಷಾ ವ್ಯಸನದ ಹೆಸರಿನಲ್ಲಿ ಯಾರೂ ನಿರಾಕರಿಸಲಾಗದು. ಕನ್ನಡದ ಸಾಧ್ಯತೆಗಳನ್ನು ವಿಸ್ತರಿಸಿದ ಈ ಕೃತಿಗಳನ್ನು ಶಂಕಿಸುವವರ ಕನ್ನಡತನದ ಅಸಲಿಯತ್ತೇ ಪ್ರಶ್ನಾರ್ಹ. ಶಿಷ್ಟತೆಯ ಅಗತ್ಯವಿರುವುದು ಶಿಕ್ಷಣದ ಭಾಷೆಗೆ. ಶೈಕ್ಷಣಿಕ ನುಡಿಗಟ್ಟು ಕೂಡ ಕಾಲದಿಂದ ಕಾಲಕ್ಕೆ ಮಗ್ಗುಲು ಬದಲಿಸುತ್ತಲೇ ಇದೆ. ಅದರ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದನ್ನು ಶಿಕ್ಷಣ ತಜ್ಞರಿಗೇ ಬಿಡುವುದು ಒಳ್ಳೆಯದು.

ಕನ್ನಡದ ಬೊಜ್ಜಿಳಿಸುತ್ತೇವೆ, ಸರಳಗೊಳಿಸುತ್ತೇವೆ ಎನ್ನುವ ಮನೋಭಾವ ಫ್ಯಾಷನ್ ಜಗತ್ತಿನ ‘ಜೀರೊ ಫಿಗರ್’ ಪರಿಕಲ್ಪನೆಗೆ ಹತ್ತಿರವಾದುದು. ಕನ್ನಡದ ಸದ್ಯದ ಸ್ಥಿತಿಯಲ್ಲಿ ಈ ಕಸರತ್ತೇ ಅನಗತ್ಯವಾದುದು. ಇವತ್ತಿನ ನಮ್ಮ ಕನ್ನಡ ಕಲಿಕೆಯ ಸ್ಥಿತಿಗತಿ, ಕನ್ನಡವನ್ನು ತಂತಾನೇ ಸವೆಯಲು ಬಿಡುವಂತಿದೆ. ಕನ್ನಡ ಮೇಷ್ಟ್ರುಗಳು, ‘ಬ್ರೊ’ ಜಮಾನದ ಕಣ್ಮಣಿಗಳು, ಮಾಧ್ಯಮದ ಮಂದಿ, ಕನ್ನಡ ಶಾಲೆಗಳ ಬಗ್ಗೆ ಕುರುಡು ಕಿವುಡಾಗಿರುವ ಸರ್ಕಾರಗಳು – ಎಲ್ಲರ ಒಕ್ಕೊರಲು ಒಮ್ಮನಿಸಿನ ಪ್ರಯತ್ನದಿಂದಾಗಿ ಕನ್ನಡ ಸಹಜವಾಗಿಯೇ ಬಡಕಲಾಗಿದೆ, ಸವಕಲಾಗುತ್ತಿದೆ. ಕನ್ನಡದ ಸಹೃದಯರನ್ನು ಲಂಕೇಶ್‌ ‘ಜಾಣ ಜಾಣೆಯರು’ ಎಂದು ಕರೆದರು. ಅವರೀಗ ಮಚ್ಚ–ಮಚ್ಚಿಯರಾಗಿದ್ದಾರೆ. ಈ ಮಚ್ಚ ಮಚ್ಚಿಯರು ಹಾಗೂ ಸುದ್ದಿಯುತ್ಪಾತದ ಟೀವಿ ಆ್ಯಂಕರ್‌ಗಳು ಕನ್ನಡವನ್ನು ಹಿಂಡುವುದಕ್ಕೆ ತಮ್ಮೆಲ್ಲ ಸಾಮರ್ಥ್ಯ ಬಳಸಿದ್ದಾರೆ. ಈ ಸರಳೀಕರಣವನ್ನು ಒಪ್ಪುವುದಾದರೆ ಅದು ಕೂಡ ‘ಎಲ್ಲರ ಕನ್ನಡ’ವೇ.

ಮಹಾಪ್ರಾಣಗಳ ಕುರಿತ ಆತಂಕ, ಕನ್ನಡ ನುಡಿಯ ಸಮಕಾಲೀನ ಸಂಕಷ್ಟಗಳ ಸರಳೀಕರಣವೂ ಹೌದು. ಸಂಸ್ಕೃತ, ಇಂಗ್ಲಿಷ್‌, ಹಿಂದಿಯ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು ನಮಗಿನ್ನೂ ಸಾಧ್ಯವಾಗಿಲ್ಲ. ಈ ಕುತ್ತುಗಳ ಜೊತೆಗೆ ಬದುಕಿನ ಭ್ರಷ್ಟತೆ, ಅನೈತಿಕತೆ ಭಾಷೆಯಲ್ಲೂ ಮೈದಳೆದು, ಕನ್ನಡನುಡಿ ತನ್ನ ಧ್ವನಿಶಕ್ತಿ ಕಳೆದುಕೊಳ್ಳುತ್ತಿದೆ. ಬದುಕಿನಲ್ಲಿನ ಒಡಕು ಮಾತಿನಲ್ಲೂ ಧ್ವನಿಸುತ್ತಿದೆ. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನುವಂತಿದ್ದ ಜೀವಶಕ್ತಿಯ ನುಡಿ, ಜೀವಹರಣದ ಹಗೆಯ ಗುಣವನ್ನು ಪಡೆದುಕೊಂಡಿರುವುದಕ್ಕೆ ನಿತ್ಯವೂ ನಿದರ್ಶನಗಳನ್ನು ಕಾಣುತ್ತಿದ್ದೇವೆ. ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಸಂವೇದನೆಯನ್ನೂ ‘ನಮ್ಮ ನುಡಿ’ ಕಳೆದುಕೊಳ್ಳುತ್ತಿದೆ. ಆರ್ದ್ರತೆ ಕಳೆದುಕೊಳ್ಳುವುದಕ್ಕಿಂತಲೂ ಮಿಗಿಲಾದ ಸಂಕಷ್ಟ–ಕುತ್ತು ಭಾಷೆಗೆ ಇದೆಯೆ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.