ADVERTISEMENT

ಬೇಂದ್ರೆ ಹೆಸರಿನ ಪ್ರಶಸ್ತಿಗೆ ಬಡತನ ಬೇಡ

‘ವಿಶ್ವಮಾನವ ದಿನ’ದ ಮಾದರಿಯಲ್ಲಿ ‘ಕವಿದಿನ’ದ ಆಚರಣೆ ನಡೆಯಲಿ

ಚ.ಹ.ರಘುನಾಥ
Published 25 ಜನವರಿ 2020, 5:53 IST
Last Updated 25 ಜನವರಿ 2020, 5:53 IST
   
""

‘ಹಕ್ಕಿ ಹಾರುತಿದೆ ನೋಡಿದಿರಾ’ ಎಂದು ಕನ್ನಡಿಗರ ಕಲ್ಪನಾ ಜಗತ್ತನ್ನು ವಿಸ್ತಾರಗೊಳಿಸಿದ ಕವಿ ದ.ರಾ. ಬೇಂದ್ರೆ ಅವರ 125ನೇ ಜಯಂತಿಗೆ ಆರು ದಿನಗಳಷ್ಟೇ ಉಳಿದಿವೆ. ಜನವರಿ 31, ಬೇಂದ್ರೆಯವರ ಜನ್ಮದಿನ, ಕನ್ನಡ ಜಗತ್ತು ಸಂಭ್ರಮಿಸಬೇಕಾದ ಸಂದರ್ಭ.

ಆದರೆ, ಬೇಂದ್ರೆಯವರ 125ನೇ ಹುಟ್ಟುಹಬ್ಬಕ್ಕೆಕನ್ನಡ ಸಾಂಸ್ಕೃತಿಕ ಲೋಕ ವಿಶೇಷ ಸಿದ್ಧತೆಗಳನ್ನೇನೂ ನಡೆಸಿದಂತೆ ಕಾಣಿಸುತ್ತಿಲ್ಲ. ಕಲಬುರ್ಗಿಯಲ್ಲಿ ಕನ್ನಡದ ತೇರು ಎಳೆಯಲು ದಿನಗಣನೆ ಆರಂಭವಾಗಿದೆ. ಅಲ್ಲಿ ಕೂಡ ಬೇಂದ್ರೆಯವರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮಗಳಿಲ್ಲ.

ಸ್ಮರಣೆಯ ಮಾತಿರಲಿ, 125ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಅಂಬಿಕಾತನಯದತ್ತ ಪ್ರಶಸ್ತಿ’ಯ ಮೊತ್ತದ ಬಗ್ಗೆ ನಡೆದ ಅನಗತ್ಯ ಚರ್ಚೆ, ಕವಿಯ ಘನತೆಯನ್ನು ಹೆಚ್ಚಿಸುವಂತಹದ್ದೇನಾಗಿರಲಿಲ್ಲ. ‘ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌’ ವತಿಯಿಂದ ಪ್ರತಿವರ್ಷ ಹಿರಿಯ ಸಾಹಿತಿಯೊಬ್ಬರಿಗೆ ಜೀವಮಾನ ಸಾಧನೆಗಾಗಿ ನೀಡುವ ‘ಅಂಬಿಕಾತನಯದತ್ತ ಪ್ರಶಸ್ತಿ’ಯ ಮೊತ್ತ ₹1 ಲಕ್ಷ. ಅನುದಾನದ ಕೊರತೆಯಿಂದಾಗಿ ಪ್ರಶಸ್ತಿ ಮೊತ್ತವನ್ನು ₹10 ಸಾವಿರಕ್ಕೆ ಇಳಿಸಲು ಉದ್ದೇಶಿಸಲಾಗಿತ್ತು.

ADVERTISEMENT

‘ವ್ಯಕ್ತಿಗಳ ಹೆಸರಿನಲ್ಲಿ ನೀಡುವ ಪ್ರಶಸ್ತಿಯಲ್ಲಿ ವ್ಯಕ್ತಿ ಮುಖ್ಯವಾಗಬೇಕೇ ಹೊರತು, ನಗದು ಪುರಸ್ಕಾರವಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದೂ ಪ್ರಶಸ್ತಿ ಮೊತ್ತದ ಇಳಿಕೆಯನ್ನೇ ಸೂಚಿಸುವಂತಿತ್ತು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ, ಬೇಂದ್ರೆ ಟ್ರಸ್ಟ್‌ನ ಅಧ್ಯಕ್ಷ ಡಿ.ಎಂ. ಹಿರೇಮಠ ಅವರು, ದೇಣಿಗೆ ಸಂಗ್ರಹಿಸಿ ₹1 ಲಕ್ಷ ಪ್ರಶಸ್ತಿ ಮೊತ್ತ ನೀಡುವುದಾಗಿ ಪ್ರತಿಕ್ರಿಯಿಸಿದ್ದರು. ಮಾತುಕತೆಗಳ ನಂತರ, ಪ್ರಶಸ್ತಿಯ ಮೊತ್ತವನ್ನು ತಗ್ಗಿಸದಿರಲು ಟ್ರಸ್ಟ್‌ ನಿರ್ಧರಿಸಿದೆ.

ಪ್ರಶಸ್ತಿಯ ಗೌರವವು ಮೊತ್ತದಿಂದ ನಿರ್ಧಾರವಾಗದು ಎನ್ನುವ ಸಚಿವರ ಮಾತು ಒಪ್ಪತಕ್ಕದ್ದೇ. ಆದರೆ, ಅನುದಾನದ ಕೊರತೆಯ ಕಾರಣದಿಂದ ಪ್ರಶಸ್ತಿ ಮೊತ್ತ ಇಳಿಸುವುದು ಸರಿಯಲ್ಲ. ರಾಜ್ಯೋತ್ಸವ, ಕೆಂಪೇಗೌಡ ದಿನಾಚರಣೆ ಸಂದರ್ಭದ ಪ್ರಶಸ್ತಿ ಸಮಾರಾಧನೆಗಳನ್ನು ಗಮನಿಸಿದರೆ, ಬೇಂದ್ರೆ ಹೆಸರಿನ ಪುರಸ್ಕಾರಕ್ಕೆ ಬಡತನ ಬರಬಾರದು. ಮೇರುಕವಿಯ ಹೆಸರಿನಲ್ಲಿ ನೀಡುವ ಜೀವಮಾನ ಸಾಧನೆಯ ಪ್ರಶಸ್ತಿಯ ಮೊತ್ತ ಕಡಿತಗೊಳಿಸುವುದು ಕವಿಗೆ ಮಾತ್ರವಲ್ಲ, ಕನ್ನಡ ಸಂಸ್ಕೃತಿಗೆ ಮಾಡುವ ಅವಮಾನವೂ ಹೌದು. ಪ್ರಶಸ್ತಿಗಳ ಗೌರವವನ್ನು ಹಣದಿಂದ ನಿರ್ಧರಿಸುವುದು ಬೇಡ ಎನ್ನುವ ಮನಸ್ಸು ಸರ್ಕಾರಕ್ಕೆ ನಿಜವಾಗಿಯೂ ಇದ್ದಲ್ಲಿ, ತಾನು ನೇರವಾಗಿ ನೀಡುವ ಎಲ್ಲ ಪ್ರಶಸ್ತಿಗಳನ್ನು ನಗದುರಹಿತಗೊಳಿಸಬಹುದು. ಸರ್ಕಾರಿ ಅನುದಾನ ಪಡೆಯುವ ಪ್ರಶಸ್ತಿಗಳನ್ನೂ
ನಗದುಮುಕ್ತಗೊಳಿಸಬಹುದು. ಆಗ, ಪ್ರಶಸ್ತಿಯ ಕಿಮ್ಮತ್ತೂ ಉಳಿಯುತ್ತದೆ; ಪ್ರಶಸ್ತಿಗಾಗಿ ಹಪಹಪಿಸುವವರನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಿದಂತೆಯೂ ಆಗುತ್ತದೆ.

‘ಅಂಬಿಕಾತನಯದತ್ತ ಪ್ರಶಸ್ತಿ’ ಮಾತ್ರವಲ್ಲ, 2019ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆದ ಕರ್ನಾಟಕ ನಾಟಕ ಅಕಾಡೆಮಿಯ ನಿರ್ಧಾರವೂ ಒಂದು ಅಸಾಂಸ್ಕೃತಿಕ ನಡೆಯೇ. ಅಕಾಡೆಮಿಯ ಹಿಂದಿನ ಪದಾಧಿಕಾರಿಗಳು ಘೋಷಿಸಿದ್ದ ಪ್ರಶಸ್ತಿಗಳು ಕ್ರಮಬದ್ಧವಾಗಿಲ್ಲ ಎನ್ನುವ ಕಾರಣ ನೀಡಿ, ಘೋಷಿತ ಪ್ರಶಸ್ತಿಗಳನ್ನು ಅಸಿಂಧುಗೊಳಿಸಿರುವುದು ರಾಜಕೀಯ ನಡೆಯೇ ಹೊರತು ಸಾಂಸ್ಕೃತಿಕ ನಡವಳಿಕೆಯಲ್ಲ. ಅಕಡೆಮಿಕ್ ಸಂಸ್ಥೆಗಳಂತೆ ವರ್ತಿಸಬೇಕಾದ ಅಕಾಡೆಮಿಗಳು ನಾಟಕ ಕಂಪನಿಗಳ ವೇಷ ಧರಿಸಿದಾಗ ಇಂಥವು ಸಂಭವಿಸುತ್ತವೆ.

ಅಚ್ಚರಿಯ ಸಂಗತಿಯೆಂದರೆ, ಅಕಾಡೆಮಿಯ ನಿರ್ಧಾರಕ್ಕೆ ಸಾಂಸ್ಕೃತಿಕ ಲೋಕದಿಂದ ಗಟ್ಟಿಧ್ವನಿಯ ವಿರೋಧವೇ ವ್ಯಕ್ತವಾಗಲಿಲ್ಲ. ಹೊಸದಾಗಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಅಭಿನಂದಿಸುವ ಕೆಲಸ ಎಗ್ಗಿಲ್ಲದೆ ನಡೆಯಿತು. ಹೊಸ ಪಟ್ಟಿಯಲ್ಲಿನ ವಿಜೇತರು ಕೂಡ ಶುಭಾಶಯಗಳನ್ನು ಸಂಭ್ರಮದಿಂದ ಸ್ವೀಕರಿಸಿದರು. ಒಬ್ಬರಿಗೆ ನೀಡಿದ ಪ್ರಶಸ್ತಿಯನ್ನು ರದ್ದು ಮಾಡಿ, ಅದನ್ನು ಮತ್ತೊಬ್ಬರಿಗೆ ಕೊಡುವಾಗ, ತಾವು ‘ಎಂಜಲು ಪ್ರಶಸ್ತಿ’ಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಪಡೆಯುವವರಿಗೆ ಅನ್ನಿಸಬೇಕಲ್ಲವೇ?

ಹೊಸ ಪಟ್ಟಿಯಲ್ಲಿ ಇರುವವರು ಪ್ರಶಸ್ತಿಯನ್ನು ತಿರಸ್ಕರಿಸಲಿಕ್ಕೆ ಕಾಲ ಮಿಂಚಿಲ್ಲ. ಹಳೆಯ ಪಟ್ಟಿ ಉಳಿಸಿಕೊಳ್ಳುವಂತೆ ಅಕಾಡೆಮಿಯನ್ನು ಒತ್ತಾಯಿಸುವ ಪ್ರೌಢಿಮೆಯನ್ನು ಅವರು ಪ್ರದರ್ಶಿಸಬೇಕು; ರಂಗಕರ್ಮಿಗಳು ಅಭಿಮಾನ ಧನರು ಎನ್ನುವುದನ್ನು ರುಜುವಾತುಪಡಿಸಬೇಕು.

ಈ ನಿಟ್ಟಿನಲ್ಲಿ ಗಿರೀಶ ಕಾರ್ನಾಡರು ಮಾದರಿಯಾಗಬೇಕು. 2008–09ನೇ ಸಾಲಿನಲ್ಲಿ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಕೆ.ಎಸ್.ಆರ್. ದಾಸ್ ಅವರನ್ನು ಅಂತಿಮಗೊಳಿಸಿದ್ದ ಪ್ರಶಸ್ತಿ ಆಯ್ಕೆ ಸಮಿತಿ, ದಿಢೀರ್ ಎಂದು ತನ್ನ ನಿರ್ಧಾರ ಬದಲಿಸಿ ಕಾರ್ನಾಡರ ಹೆಸರನ್ನು ಪ್ರಕಟಿಸಿತ್ತು. ಒಬ್ಬರನ್ನು ನಿರಾಕರಿಸಿ, ತಮ್ಮ ಹೆಸರು ಪರಿಗಣಿಸಿದ್ದನ್ನು ಕಾರ್ನಾಡರು ಒಪ್ಪಿಕೊಳ್ಳಲಿಲ್ಲ. ‘ಪುಟ್ಟಣ್ಣ ಪ್ರಶಸ್ತಿಗೆ ಪರಿಗಣಿಸಿದ್ದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಆದರೆ ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ಈ ನಿಲುವನ್ನು ಅಕಾಡೆಮಿಯ ಕೃಪೆಗೆ ಹೊಸತಾಗಿ ಪಾತ್ರವಾಗಿರುವವರೂ ತಳೆಯಬೇಕು. ಆ ನಿಷ್ಠುರತೆ ಸಾಧ್ಯವಾಗದೇ ಹೋದಲ್ಲಿ, ಪ್ರಶಸ್ತಿ ಪ್ರಮಾದವನ್ನು ಸರಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವರು ಮಧ್ಯಪ್ರವೇಶಿಸಬೇಕು. ಈಗ ಆಯ್ಕೆಯಾದವರನ್ನು 2020ಕ್ಕೆ ಪರಿಗಣಿಸುವ ಮಧ್ಯಮಮಾರ್ಗವನ್ನೂ ಅನುಸರಿಸಬಹುದು. ಅಕಾಡೆಮಿ ಹಟ ಮರೆತು ವಿವೇಕ ಪ್ರದರ್ಶಿಸದೇ ಹೋದರೆ ಕನ್ನಡ ಸಾಂಸ್ಕೃತಿಕ ಲೋಕದಲ್ಲೊಂದು ಕಪ್ಪುಚುಕ್ಕೆ ಉಳಿದುಬಿಡುತ್ತದೆ.

ಪ್ರಶಸ್ತಿಗಳಿಗೆ ಸಂಬಂಧಿಸಿದ ಚರ್ಚೆಯ ನಡುವೆ ಪ್ರಶಸ್ತಿ ನಿರಾಕರಣೆಯ ಕುರಿತೂ ಒಂದು ಮಾತು ಹೇಳಬೇಕು. ಸರ್ಕಾರದ ಯಾವುದೋ ನಿಲುವನ್ನು ಅಥವಾ ಯಾವುದೋ ಘಟನೆಯನ್ನು ವಿರೋಧಿಸಿ ಕಲಾವಿದ ಅಥವಾ ಬರಹಗಾರ ತನಗೆ ಯಾವಾಗಲೋ ಸಂದ ಪ್ರಶಸ್ತಿಯನ್ನು ನಿರಾಕರಿಸುವ ಟ್ರೆಂಡ್‌ ಚಾಲ್ತಿಯಲ್ಲಿದೆ.

ಇಂಥ ನಿರಾಕರಣೆ ಈಗ ಅರ್ಥಹೀನ. ಪ್ರಶಸ್ತಿ ಎಂದರೆ ಪಡೆದ ಕ್ಷಣದ ಸಂತೋಷ, ಗೌರವ ಅಷ್ಟೇ. ಅದನ್ನು ನಿರಂತರವಾಗಿ ನಮ್ಮ ತಲೆಯ ಮೇಲೆ ಹೊತ್ತುಕೊಂಡಂತೆ ವರ್ತಿಸುವುದು ಯಾರಿಗೂ ಶೋಭೆಯಲ್ಲ. ಎಂದೋ ಪಡೆದ ಪ್ರಶಸ್ತಿಯನ್ನು ಮತ್ತೆ ಯಾವಾಗಲೋ ಹಿಂದಿರುಗಿಸುವ ಮೂಲಕ ಅದರ ಹಂಗು ಕಳೆದುಕೊಳ್ಳುತ್ತೇವೆ ಎನ್ನುವುದರಲ್ಲಿ ಅರ್ಥವಿಲ್ಲ. ಪ್ರಶಸ್ತಿಯ ಅಸ್ತಿತ್ವ ಇರುವುದು ಭಾವನೆಯಲ್ಲೇ ಹೊರತು, ಫಲಪುಷ್ಪ ಫಲಕಗಳಲ್ಲಲ್ಲ. ಹಾಗಾಗಿ, ಪ್ರಶಸ್ತಿ ಹಿಂತಿರುಗಿಸುವವರು ಫಲಕ ಸಾಗಹಾಕಬಹುದೇ ಹೊರತು ಗೌರವ ಹೊಂದಿದ ಸಂದರ್ಭದಲ್ಲಿ ಅನುಭವಿಸಿದ ಪ್ರೀತಿ, ಗೌರವಗಳನ್ನಲ್ಲ.

ಪ್ರಶಸ್ತಿಯನ್ನು ಕರ್ಣಕುಂಡಲದಂತೆ ಜೊತೆಯಲ್ಲಿ ಇಟ್ಟುಕೊಂಡಿರುವುದು ವೈಯಕ್ತಿಕ ಆರೋಗ್ಯಕ್ಕೂ ಸಾಮಾಜಿಕ ಸ್ವಾಸ್ಥ್ಯಕ್ಕೂ ಹಾನಿಕರ. ತುರ್ತು ಪರಿಸ್ಥಿತಿ ವಿರೋಧಿಸಿ ಕಾರಂತರು ಪದ್ಮ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ಗೌರಿ– ಕಲಬುರ್ಗಿ ಅವರ ಹತ್ಯೆ ವಿರೋಧಿಸಿ ಅನೇಕರು ಪ್ರಶಸ್ತಿಗಳನ್ನು ಮರಳಿಸಿದ್ದರು. ಅಂದಿನ ಸಂದರ್ಭಕ್ಕೆ ಆ ಪ್ರತಿಭಟನೆಗಳು ಸೂಕ್ತವಾಗಿದ್ದವು. ಅದೇ ಮಾದರಿಯನ್ನು ಮತ್ತೆ ಮತ್ತೆ ಅನುಸರಿಸುವುದು ನಗೆಪಾಟಲಿಗೆ ಎಡೆಮಾಡಿಕೊಡುತ್ತದೆ. ಬರಹಗಾರರು, ಕಲಾವಿದರು ಭಾವುಕತೆಯಿಂದ ಯೋಚಿಸದೆ, ವಸ್ತುನಿಷ್ಠವಾಗಿ ಯೋಚಿಸಿ ಪ್ರತಿಭಟನೆಯ ಹೊಸದಾರಿಗಳನ್ನು ಹುಡುಕಿಕೊಳ್ಳಬೇಕಿದೆ.

ಪ್ರಶಸ್ತಿಗಳನ್ನು ನೀಡುವವರು, ಪಡೆಯುವವರು ಇಬ್ಬರೂ ಘನತೆಯನ್ನು ಉಳಿಸಿಕೊಳ್ಳಬೇಕು. ಪ್ರಶಸ್ತಿ ನೀಡುವ ಮೂಲಕ ತಾವು ಉಪಕಾರ ಮಾಡುತ್ತಿದ್ದೇವೆ ಎಂದು ಯಾರಿಗಾದರೂ ಅನ್ನಿಸಿದರೆ ಆ ಗೌರವ ಅಪಾತ್ರದಾನವಾಗಿದೆ ಎಂದೇ ಅರ್ಥ. ಇನ್ನು ಪ್ರಶಸ್ತಿ ಪಡೆಯುವವರಿಗೆ ಋಣಭಾರವೂ ಅಗತ್ಯವಿಲ್ಲ.

ಮತ್ತೆ ಬೇಂದ್ರೆಯವರ ಜನ್ಮದಿನದ ಕುರಿತೊಂದು ಮಾತು. ಕುವೆಂಪು ಹಾಗೂ ಬೇಂದ್ರೆ ‘ಸಾಂಸ್ಕೃತಿಕ ಕರ್ನಾಟಕ’ದ ಎರಡು ಕಣ್ಣುಗಳಿದ್ದಂತೆ. ಡಿ. 29ರ ಕುವೆಂಪು ಜನ್ಮದಿನವನ್ನು ‘ವಿಶ್ವಮಾನವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಆ ಮಾದರಿಯಲ್ಲಿ, ಬೇಂದ್ರೆಯವರ ಜನ್ಮದಿನವನ್ನು ‘ಕವಿದಿನ’ವನ್ನಾಗಿ ಸರ್ಕಾರ ಆಚರಿಸಬೇಕು.

ಚಿ.ಶ್ರೀನಿವಾಸರಾಜು ಅವರು ಕ್ರೈಸ್ಟ್‌ ಕಾಲೇಜ್‌ನಲ್ಲಿದ್ದಾಗ, ಅಲ್ಲಿನ ಕನ್ನಡ ಸಂಘದ ಮೂಲಕ ನಾಡಿನ ಬೇರೆಬೇರೆ ಭಾಗದ ಯುವಕವಿಗಳನ್ನು ಒಂದೆಡೆ ಸೇರಿಸಿ ‘ಕವಿದಿನ’ ಆಚರಿಸುತ್ತಿದ್ದರು. ಈಗಲೂ ‘ಕವಿದಿನ’ದ ಆಚರಣೆ ಅಲ್ಲಲ್ಲಿ ನಡೆಯುತ್ತಿದೆ. ಆ ಆಚರಣೆಗೆ ಅಧಿಕೃತ ರೂಪ ನೀಡುವ ಮೂಲಕ, ವರಕವಿಯ 125ನೇ ಜಯಂತಿಯನ್ನು ಸರ್ಕಾರ ಅರ್ಥಪೂರ್ಣಗೊಳಿಸಬೇಕಾಗಿದೆ.

ಚ.ಹ.ರಘುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.