ADVERTISEMENT

ಪಡಸಾಲೆ | ಕಬ್ಬಿಣದ ಅಂಗಡೀಲಿ ನೊಣಕ್ಕಿಲ್ಲ ಕೆಲಸ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ: ಸಾಹಿತಿಯೇ ಯುಕ್ತ, ಅನ್ಯಥಾ ಶರಣಂ ನಾಸ್ತಿ

ಚ.ಹ.ರಘುನಾಥ
Published 23 ಅಕ್ಟೋಬರ್ 2024, 0:23 IST
Last Updated 23 ಅಕ್ಟೋಬರ್ 2024, 0:23 IST
   

ಪುರಂದರ ದಾಸರ ‘ಆರು ಹಿತವರು ನಿನಗೆ ಈ ಮೂವರೊಳಗೆ’ ಕೀರ್ತನೆಯಲ್ಲಿನ ‘ನಾರಿ, ಧಾರುಣಿ, ಬಲು ದಿನದ ಸಿರಿ’ಯ ಜಾಗದಲ್ಲಿ, ‘ಸಾಹಿತಿಯೋ ಧರ್ಮಗುರುವೋ ರಾಜಕಾರಣಿಯೋ’ ಎನ್ನುವ ಆಯ್ಕೆಗಳನ್ನು ಇರಿಸಿದರೆ ಹೇಗೆ? ಮಂಡ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ಕ್ಷೇತ್ರದವರು ಯಾಕಾಗಬಾರದು ಎನ್ನುವ ಚರ್ಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಕಲ್ಪಿಸಿದೆ. ಸಾಹಿತ್ಯವನ್ನು ಪ್ರೀತಿಯಿಂದ ನೋಡುವವರು ಹಾಗೂ ಕಡೆಗಣ್ಣಿನಿಂದ ಕಾಣುವವರು ತಮ್ಮ ಆಯ್ಕೆಯ ಹೆಸರುಗಳನ್ನು ಸಮ್ಮೇಳನಾಧ್ಯಕ್ಷರ ಸ್ಥಾನದಲ್ಲಿ ಕಲ್ಪಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಸಾಹಿತ್ಯೇತರ ಕ್ಷೇತ್ರದ ವ್ಯಕ್ತಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಹೇಗೆನ್ನುವ ಚರ್ಚೆ, ಗಂಭೀರ ವಿಷಯಗಳನ್ನು ಅಲಕ್ಷಿಸಿ, ಕಾಲಹರಣಕ್ಕಾಗಿ ಚರ್ಚೆಗಳನ್ನು ನಡೆಸುವ ಸದ್ಯದ ಸಂದರ್ಭಕ್ಕೆ ತಕ್ಕಂತಿದೆ; ‘ಕಬ್ಬಿಣದ ಅಂಗಡೀಲಿ ನೊಣಕ್ಕೇನು ಕೆಲಸ’ ಎನ್ನುವ ಗಾದೆಯನ್ನು ನೆನಪಿಸುವಂತಿದೆ. ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಠಾಧಿಪತಿಯೋ ರಾಜಕಾರಣಿಯೋ ವಿಜ್ಞಾನಿಯೋ ಅಧ್ಯಕ್ಷರಾದರೆ ತಪ್ಪೇನು ಎನ್ನುವುದು ಚರ್ಚೆಯ ವಿಷಯವಾಗಿರುವುದು ದುರದೃಷ್ಟಕರ. ಸಾಹಿತ್ಯ ಉತ್ಸವದಲ್ಲಿ ಸಾಹಿತಿಗೇ ಅಧ್ಯಕ್ಷತೆ ದೊರೆಯಬೇಕು ಎನ್ನುವುದು ಸಾಮಾನ್ಯಜ್ಞಾನ. ಧಾರ್ಮಿಕ ಉತ್ಸವಕ್ಕೆ ಧಾರ್ಮಿಕ ವ್ಯಕ್ತಿಯೇ ಸೂಕ್ತವಾದಂತೆ, ರಾಜಕೀಯ ಮೇಳಗಳಲ್ಲಿ ರಾಜಕಾರಣಿ ಇರುವಂತೆ, ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಯೇ ಅಧ್ಯಕ್ಷರಾಗಬೇಕು; ಅನ್ಯಥಾ ಶರಣಂ ನಾಸ್ತಿ.

ಮಠಾಧೀಶರು ಇಲ್ಲವೇ ರಾಜಕಾರಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದಿರಲಿ, ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಚರ್ಚಿಸುವುದೇ ದೊಡ್ಡ ಚೋದ್ಯ. ಧಾರ್ಮಿಕ ವ್ಯಕ್ತಿ ಅಥವಾ ರಾಜಕಾರಣಿ ಸಾಹಿತಿಯೂ ಆಗಿ ದ್ದಲ್ಲಿ ಅವರ ಹೆಸರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಪರಿಗಣಿಸುವುದರಲ್ಲಿ ತಪ್ಪಿಲ್ಲ. ಆದರೆ, ಕಳೆದೊಂದು ದಶಕದ ಅವಧಿಯಲ್ಲಿ ಸಾಹಿತ್ಯಸಂವೇದನೆಯ ಸೃಜನಶೀಲ ವ್ಯಕ್ತಿಗಳನ್ನು ಧರ್ಮ–ರಾಜಕಾರಣ ಸೃಷ್ಟಿಸಿಲ್ಲ. ಸಾಹಿತ್ಯದ ಆಶಯಗಳನ್ನು ಮುಕ್ಕುಗೊಳಿಸುವ ಇಲ್ಲವೇ ನಿಕೃಷ್ಟವಾಗಿ ಕಾಣುವ ವ್ಯಕ್ತಿಗಳೇ ರಾಜಕಾರಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಾಗಿ ಚಲಾವಣೆಯಲ್ಲಿದ್ದಾರೆ. ಪರ ಧರ್ಮ ಹಾಗೂ ಪರ ವಿಚಾರವನ್ನು ಸಹಿಷ್ಣುತೆಯಿಂದ ನೋಡುವ ಸ್ವಾಮೀಜಿಗಳು ವಿರಳ ಎನ್ನುವಂತಾಗಿದೆ. ಜಾತಿ ಜನಗಣತಿ ಹಾಗೂ ಜಾತ್ಯತೀತ ಪರಿಕಲ್ಪನೆಗೂ ವ್ಯತ್ಯಾಸ ತಿಳಿಯದ ಧರ್ಮಗುರುಗಳು ಹಾಗೂ ಜಾತಿ ರಾಜಕಾರಣದ ಕೂಪ
ದಲ್ಲಿ ಸುಖಿಸುತ್ತಿರುವ ರಾಜಕಾರಣಿಗಳ ಕಾಲವಿದು. ಇಂಥವರನ್ನು ಸಾಹಿತ್ಯ ಸಮ್ಮೇಳನದಲ್ಲಿ ಮೆರೆಸಿ, ಸಾಧಿಸಬಹುದಾದ ಆಶಯ ಯಾವುದಿದ್ದೀತು?

ADVERTISEMENT

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಸಾಹಿತ್ಯೇತರ ಕ್ಷೇತ್ರಗಳ ವ್ಯಕ್ತಿಯನ್ನು ಕಾಣಬಯಸುವ ಚರ್ಚೆಯ ಹಿಂದೆ, ಸಾಹಿತ್ಯ ಹಾಗೂ ಸಾಹಿತಿಯನ್ನು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಅಪ್ರಸ್ತುತಗೊಳಿಸುವ ದುರುದ್ದೇಶ ಇರುವಂತಿದೆ. ಇತ್ತೀಚಿನ ವರ್ಷಗಳ ರಾಜಕೀಯ ಬೆಳವಣಿಗೆಗಳು, ನಾಡಿನ ಸಾಕ್ಷಿಪ್ರಜ್ಞೆಯ ರೂಪದಲ್ಲಿ ನೋಡಲಾಗುತ್ತಿದ್ದ ಸಾಹಿತಿಗಳನ್ನು ಆ ಸ್ಥಾನದಿಂದ ಪದಚ್ಯುತಗೊಳಿಸಿವೆ ಹಾಗೂ ಆ ಸ್ಥಾನದಲ್ಲಿ ಮಠಾಧೀಶರನ್ನು ಕೂರಿಸಿವೆ. ಅದೇ ಕೈಗಳು ಈಗ ಸಾಹಿತ್ಯ ಸಮ್ಮೇಳನದ ಕೇಂದ್ರ ಸ್ಥಾನದಿಂದಲೂ ಸಾಹಿತಿಯನ್ನು ದೂರವಾಗಿಸಲು ಪ್ರಯತ್ನಿಸುತ್ತಿವೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸಾಹಿತಿಗೇ ಸಲ್ಲಬೇಕು ಎಂದು ಹೇಳುವ ಸಂದರ್ಭದಲ್ಲಿ, ಸಾಹಿತ್ಯ ಹಾಗೂ ಸಾಹಿತಿಯ ವಿಶ್ವಾಸಾರ್ಹತೆ ಸಾರ್ವಜನಿಕವಾಗಿ ಪ್ರಶ್ನೆಗೊಳಗಾಗಿರುವುದನ್ನು ಗಮನಿಸಬೇಕು. ಕೆಲವು ಸಾಹಿತಿಗಳು ಅಧಿಕಾರ ರಾಜಕಾರಣ ಹಾಗೂ ಧರ್ಮ ರಾಜಕಾರಣದ ಭಾಗವಾಗಿರುವುದನ್ನೂ ಮರೆಯ
ಬಾರದು. ಆದರೆ, ಸಾಹಿತಿಗಳ ಛದ್ಮವೇಷವನ್ನೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ಪ್ರತ್ಯೇಕವಾಗಿಯೇ ನೋಡಬೇಕು. ಸಾಹಿತ್ಯದ ಬಗ್ಗೆ ಜನಸಾಮಾನ್ಯರಲ್ಲಿ ಇನ್ನೂ ಗೌರವ ಹಾಗೂ ನಿರೀಕ್ಷೆಗಳು ಉಳಿದುಕೊಂಡಿವೆ. ಆ ಕಾರಣದಿಂದಲೇ ಸಾಹಿತ್ಯ ಸಮ್ಮೇಳನ ಜನರಲ್ಲಿ ಉತ್ಸಾಹ ಹುಟ್ಟಿಸುತ್ತದೆ; ಸಮ್ಮೇಳನಗಳಲ್ಲಿ ಲಕ್ಷ ಲಕ್ಷ ಜನ ಸೇರುತ್ತಾರೆ.

ಬೇರೆ ಕ್ಷೇತ್ರದ ಸಾಧಕರನ್ನು ಅಧ್ಯಕ್ಷರನ್ನಾಗಿಸುವ ಮೂಲಕ ಸಮ್ಮೇಳನವನ್ನು ಎಲ್ಲ ಕನ್ನಡಿಗರನ್ನೂ ಒಳಗೊಳ್ಳುವ ವೇದಿಕೆಯನ್ನಾಗಿಸಬೇಕು ಎನ್ನುವ ಅಭಿಪ್ರಾಯವೂ ಇದೆ. ಆದರೆ, ಸಾಹಿತ್ಯ ಸಮ್ಮೇಳನ ಈಗಾಗಲೇ ಎಲ್ಲರನ್ನೂ ಒಳಗೊಳ್ಳುವ ವೇದಿಕೆಯಾಗಿದೆ. ಅತಿಥಿ ಅಭ್ಯಾಗತರಲ್ಲಿ ಎಲ್ಲ ಕ್ಷೇತ್ರದವರೂ ಇದ್ದಾರೆ. ಕೃಷಿ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಕುರಿತು ಚರ್ಚೆ ಆಗುತ್ತಿದೆ. ಹೀಗೆ ಎಲ್ಲರನ್ನೂ ಒಳಗೊಂಡರೂ, ಸಮ್ಮೇಳನದ ಕೇಂದ್ರದಲ್ಲಿ ಸಾಹಿತಿ ಹಾಗೂ ಸಾಹಿತ್ಯವೇ ಇರಬೇಕಾದುದು ನ್ಯಾಯ. ಆ ಪರಿಪಾಟವನ್ನು ಬದಲಿಸುವುದಾದರೆ, ಸಮ್ಮೇಳನದ ಜೊತೆಗಿರುವ ಸಾಹಿತ್ಯಕ್ಕೆ ಅರ್ಥವೆಲ್ಲಿದೆ?

ಸಾಹಿತ್ಯದ ಬಗ್ಗೆ ಕಾಳಜಿಯುಳ್ಳವರು ಗಂಭೀರವಾಗಿ ಚರ್ಚಿಸಬೇಕಾಗಿರುವುದು ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕೆನ್ನುವುದನ್ನಲ್ಲ; ಸಮ್ಮೇಳನದ ಸ್ವರೂಪ ಹೇಗಿರಬೇಕು ಎನ್ನುವುದನ್ನು. ಸಾಹಿತ್ಯ ಸಮ್ಮೇಳನಗಳು ವರ್ಷದಿಂದ ವರ್ಷಕ್ಕೆ ಬಿಳಿಯಾನೆಗಳಾಗುತ್ತಿರುವುದು ಸಹೃದಯರ ಆತಂಕಕ್ಕೆ ಕಾರಣವಾಗಬೇಕು. ಸಾಹಿತ್ಯ ಸಮ್ಮೇಳನವೊಂದಕ್ಕೆ ಇಪ್ಪತ್ತು ಇಪ್ಪತ್ತೈದು ಕೋಟಿ ರೂಪಾಯಿ ಖರ್ಚು ಮಾಡುವ ಔಚಿತ್ಯದ ಬಗ್ಗೆ ಚರ್ಚೆಯಾಗಬೇಕು. ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಸಮ್ಮೇಳನವನ್ನು ನಡೆಸುವ ಸಾಧ್ಯತೆಗಳ ಹುಡುಕಾಟ ಇಂದಿನ ಅಗತ್ಯ. ಸದ್ಯದ ಖರ್ಚುವೆಚ್ಚಗಳನ್ನು ನೋಡಿದರೆ, ಕಸಾಪ ಸಮ್ಮೇಳನ ದೇಶದ ಅತ್ಯಂತ ದುಬಾರಿ ಸಾಹಿತ್ಯೋತ್ಸವ ಆಗಿರುವಂತಿದೆ. ಸಮ್ಮೇಳನದ ಮೌಲ್ಯ ಹೆಚ್ಚಾಗುವುದು ಸಾಹಿತ್ಯದ ಗುಣಮಟ್ಟದಿಂದಲೇ ಹೊರತು, ಹೆಚ್ಚು ಹಣ ಖರ್ಚು ಮಾಡುವುದರಿಂದಲ್ಲ ಎನ್ನುವುದನ್ನು ಸಮ್ಮೇಳನ ನಡೆಸುವ ಕಸಾಪ ಅರಿಯಬೇಕು, ಹಣ ನೀಡುವ ಸರ್ಕಾರವೂ ತಿಳಿಯಬೇಕು.

ಕಳೆದ ವರ್ಷವೇ ನಡೆಯಬೇಕಾಗಿದ್ದ ಸಮ್ಮೇಳನವನ್ನು ಅನುದಾನದ ಕೊರತೆಯಿಂದಾಗಿ ಮುಂದೂಡಲಾಗಿತ್ತು. ‘ರಾಜ್ಯದ ಬಹುತೇಕ ಕಡೆ ಬರ ಬಿದ್ದಿದೆ. ರೈತರ ಮನೆಯಲ್ಲಿ ಅನ್ನವಿಲ್ಲ. ಇಂಥ ಸಂದರ್ಭದಲ್ಲಿ ಸಾಹಿತ್ಯದ ಹೋಳಿಗೆ ಸವಿಯಬಾರದು ಎಂಬ ಕಾರಣಕ್ಕೆ ಸ್ವಯಂಪ್ರೇರಣೆಯಿಂದ ತಾತ್ಕಾಲಿಕವಾಗಿ ಸಮ್ಮೇಳನ ನಿಲ್ಲಿಸಿದ್ದೇವೆ. ಪರಿಷತ್ತು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇದನ್ನು ಇನ್ನಷ್ಟು ಜನಪರ ಮಾಡುವ ಉದ್ದೇಶದಿಂದ ಹೀಗೆ ನಿರ್ಧರಿಸಲಾಗಿದೆ’ ಎಂದು 2023ರ ನವೆಂಬರ್‌ನಲ್ಲಿ ಪರಿಷತ್ತು ಹೇಳಿಕೊಂಡಿತ್ತು. ಪರಿಷತ್ತಿನ ಉದ್ದೇಶ ಸರಿಯಾಗಿತ್ತು. ಆದರೆ, ಸಂಕಷ್ಟದ ಸ್ಥಿತಿ ಈಗ ಬಗೆಹರಿದಿದೆಯೆಂದು ಪರಿಷತ್ತು ಭಾವಿಸಿದೆಯೆ? ಅನಾವೃಷ್ಟಿ ಜಾಗದಲ್ಲಿ ಅತಿವೃಷ್ಟಿಯಿರುವುದನ್ನು ಬಿಟ್ಟರೆ ನಾಡಿನ ಜನರ ಸಂಕಷ್ಟ ಯಥಾಸ್ಥಿತಿಯಲ್ಲಿಯೇ ಇದೆ. ಬರಗಾಲದ ನಿರ್ದಿಷ್ಟ ವರ್ಷ ಮಾತ್ರವಲ್ಲ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ನಡೆಸುವಷ್ಟರ ಮಟ್ಟಿಗೆ ಕರ್ನಾಟಕ‌ ಹಿಂದೆಂದೂ ಸಮೃದ್ಧವಾಗಿರಲಿಲ್ಲ, ಈಗಲೂ ಸಮೃದ್ಧಿಯಿಲ್ಲ.

ಸಮ್ಮೇಳನಗಳನ್ನು ಜನಪರ ಮಾಡಬೇಕೆನ್ನುವ ಉದ್ದೇಶ ಪ್ರಾಮಾಣಿಕವಾದುದಾದರೆ, ಅವುಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಪರಿಷತ್ತು ಯೋಚಿಸಬೇಕು. ಜೊತೆಗೆ ಅವು ಸೃಜನಶೀಲವೂ ಆಗಬೇಕು. ಭಾವುಕತೆಯ ಜೊತೆಗೆ ಬೌದ್ಧಿಕತೆಯೂ ಸಮ್ಮೇಳನದ ಭಾಗವಾಗಬೇಕು. ಸಮ್ಮೇಳನದ ಶೀರ್ಷಿಕೆಯಲ್ಲಿರುವ ‘ಸಾಹಿತ್ಯ’ಕ್ಕೆ ಅರ್ಥ ದೊರಕಿಸಿಕೊಡುವ ರೂಪದಲ್ಲಿ ಗೋಷ್ಠಿಗಳು ರೂಪುಗೊಳ್ಳಬೇಕು. ಇಂಥ ಸಮ್ಮೇಳನಗಳನ್ನು ನಡೆಸಲಿಕ್ಕೆ ಇಪ್ಪತ್ತು– ಮೂವತ್ತು ಕೋಟಿ ರೂಪಾಯಿ ಅಗತ್ಯವಿಲ್ಲ. ಸರ್ಕಾರದ ಅನುದಾನಕ್ಕಾಗಿಯೂ ಪರಿಷತ್ತು ಕಾಯಬೇಕಾಗಿಲ್ಲ. ಸ್ಥಳೀಯವಾಗಿ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಮೂಲಕ ಸಮ್ಮೇಳನವನ್ನು ನಡೆಸುವ ಸವಾಲನ್ನು ಪರಿಷತ್ತು ಸ್ವೀಕರಿಸಬೇಕು. ಭವ್ಯ ವೇದಿಕೆ ಹಾಗೂ ಸಮಾರಾಧನೆಯಂತಹ ಊಟದ ವ್ಯವಸ್ಥೆಯನ್ನು ಕೈಬಿಟ್ಟರೆ, ಸಮ್ಮೇಳನಗಳ ಬೊಜ್ಜು ಸಾಕಷ್ಟು ಕರಗುತ್ತದೆ. ಸಾಹಿತಿಗಳು ಕೂಡ ಹಮ್ಮುಬಿಮ್ಮು ಬಿಟ್ಟು ಸಮ್ಮೇಳನದಲ್ಲಿ ಭಾಗವಹಿಸುವಂತಹ ಸ್ಥಿತಿಯನ್ನು ಕಸಾಪ ಸೃಷ್ಟಿಸಬೇಕು.

ಸಮ್ಮೇಳನಗಳು ಸರಳವಾಗಬೇಕು ಎನ್ನುವಾಗ್ಗೆ, ದುಬಾರಿ ವೆಚ್ಚದ ಕಾರ್ಯಕ್ರಮಗಳಿಗೆ ಇಲ್ಲದ ತಕರಾರು ಸಾಹಿತ್ಯಕ್ಕೆ ಮಾತ್ರವೇಕೆ ಎನ್ನುವ ಪ್ರಶ್ನೆ ತಲೆದೋರುತ್ತದೆ. ಉತ್ತರ ಸರಳವಾದುದು.‌ ಸಮಾಜಕ್ಕೆ ಅಗತ್ಯವಾದ ಮೌಲ್ಯ ವ್ಯವಸ್ಥೆಯ ಮಾದರಿಗಳನ್ನು ರೂಪಿಸುವಲ್ಲಿ ಸಾಹಿತ್ಯಕ್ಷೇತ್ರದ ಪಾಲು ದೊಡ್ಡದು. ಹಾಗಾಗಿ, ಬರವಣಿಗೆಯಲ್ಲಿ ಮಾತ್ರವಲ್ಲದೆ ಕೃತಿಯಲ್ಲೂ ಸರಳತೆ ಅಳವಡಿಸಿಕೊಳ್ಳುವ ಮೂಲಕ– ಅನಗತ್ಯ ಕೊಬ್ಬನ್ನು ಕರಗಿಸಿಕೊಳ್ಳುವ ಮೂಲಕ– ಸಮಾಜಕ್ಕೆ ‘ಸರಳ ಸೌಂದರ್ಯ’ದ ಮೇಲ್ಪಂಕ್ತಿ ಹಾಕಿಕೊಡಬೇಕಾದುದು ಸಾಹಿತ್ಯ ಕ್ಷೇತ್ರದ ಹೊಣೆಗಾರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.