ADVERTISEMENT

ಪಡಸಾಲೆ | ಶರೀಫತತ್ವ ಇಲ್ಲದ್ದು ‘ಕನ್ನಡ ಧರ್ಮ’ವೇ?

ಎಲ್ಲರನ್ನೂ ಒಳಗೊಳ್ಳಲು ಸಾಧ್ಯವಾದಾಗಷ್ಟೇ ಜಾತಿಯ ಮೀರುವಿಕೆ ಸಾಧ್ಯ

ಚ.ಹ.ರಘುನಾಥ
Published 29 ಡಿಸೆಂಬರ್ 2022, 23:45 IST
Last Updated 29 ಡಿಸೆಂಬರ್ 2022, 23:45 IST
   

‘ವ್ಯವಹಾರದಲ್ಲಿ ಕನ್ನಡವನ್ನು ವಿಶಾಲವಾಗಿಯೂ ಮನಃಪೂರ್ವಕವಾಗಿಯೂ ಉಪಯೋಗಿಸಬೇಕು; ಅದರ ಪರಿಣಾಮವಾಗಿ ಕನ್ನಡ ಭಾಷಾ ಸಾಹಿತ್ಯಗಳು ಕನ್ನಡ ಜನಜೀವನದ ವಿಪುಲತೆ, ವೈವಿಧ್ಯ, ಸೌಂದರ್ಯ ಮತ್ತು ಭಾವರಸವಾಹಿನಿಯಾಗಿ ಹರಿಯಬೇಕು. ಈ ಪ್ರವಾಹಕ್ಕೆ ಅಡ್ಡಬರಬಹುದಾದ ದೇಶ–ಕಾಲಗಳ ಸಂಕುಚಿತ ದೃಷ್ಟಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು’. ಇದು, ಬೊಂಬಾಯಿಯಲ್ಲಿ (1935ರಲ್ಲಿ) ನಡೆದ 21ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಎನ್‌.ಎಸ್‌. ಸುಬ್ಬರಾಯರ ಅಧ್ಯಕ್ಷ ಭಾಷಣದ ಸಾರಾಂಶ. ಸುಬ್ಬರಾಯರು ಹೇಳುವ ಕನ್ನಡ ಜನಜೀವನದ ವಿಪುಲತೆ, ವೈವಿಧ್ಯ ಹಾಗೂ ಸೌಂದರ್ಯವನ್ನು ಹಾವೇರಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕಾಣಲಿಕ್ಕೆ ಸಾಧ್ಯವಿದೆಯೆ?

ಮುಸ್ಲಿಂ ಸಮುದಾಯದ ಬರಹಗಾರರನ್ನು ಸಮ್ಮೇಳನದಿಂದ ಹೊರಗಿಡಲಾಗಿದೆ ಎನ್ನುವ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಪರಿಷತ್ತಿನ ಈ ನಡೆಯನ್ನು ವಿರೋಧಿಸಿ, ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನ ನಡೆಸುವ ಪ್ರಯತ್ನಗಳೂ ನಡೆದಿವೆ. ಈ ಟೀಕೆ ಟಿಪ್ಪಣಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನೀಡಿರುವ ಪ್ರತಿಕ್ರಿಯೆ ಕುತೂಹಲಕರವಾಗಿದೆ:

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಾವುದೇ ಜಾತಿ, ಧರ್ಮ ಅಥವಾ ಸಿದ್ಧಾಂತಕ್ಕೆ ಸೀಮಿತವಾದುದಲ್ಲ. ಇಲ್ಲಿರುವುದು ಕನ್ನಡ ಜಾತಿ ಮತ್ತು ಕನ್ನಡ ಧರ್ಮ ಮಾತ್ರ. ಜಾತಿ–ಮತದ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಯನ್ನು ವಿಶ್ಲೇಷಣೆ ಮಾಡುವುದೇ ಕನ್ನಡವನ್ನು ಸಾರ್ವಭೌಮವಾಗಿಸುವ ಉನ್ನತ ಆಶಯದಿಂದ ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿದ ಕನ್ನಡ ಸಾಹಿತ್ಯ ಪರಂಪರೆಗೆ ಮಾಡುವ ಅವಮಾನ. ಕನ್ನಡ ಸಾಹಿತ್ಯ ಪರಿಷತ್ತು ಎಡ ಪಂಥ, ಬಲ ಪಂಥ, ಮೇಲ್ಪಂಥ, ಕೆಳ ಪಂಥ, ಮಧ್ಯ ಪಂಥ– ಹೀಗೆ ಯಾವ ಚೌಕಟ್ಟಿಗೂ ಸಿಲುಕುವಂತಹದಲ್ಲ. ಇದು ‘ಕನ್ನಡ ಪಂಥ’ಕ್ಕೆ ಸೇರಿದ್ದು’.

ADVERTISEMENT

ಪರಿಷತ್ತಿನ ಅಧ್ಯಕ್ಷರ ಮಾತುಗಳಿಂದ ಎರಡು ಪ್ರಶ್ನೆಗಳು ಎದುರಾಗುತ್ತವೆ. ಅವುಗಳೆಂದರೆ: ‘ಕನ್ನಡ ಧರ್ಮ’ ಯಾವುದು? ಜಾತಿ–ಮತದ ಹಿನ್ನೆಲೆಯ ವಿಶ್ಲೇಷಣೆ ಸಾಹಿತ್ಯ ಪರಂಪರೆಗೆ ಮಾಡುವ ಅವಮಾನವೆ?

‘ಕನ್ನಡ ಧರ್ಮ’ ಯಾವುದೆನ್ನುವ ಪ್ರಶ್ನೆಗೆ, ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಾವೇರಿ ಮಣ್ಣಿನ ಚರಿತ್ರೆಯೇ ಉತ್ತರವಾಗಿದೆ. ಹಾವೇರಿ ಪರಿಸರದಿಂದ ರೂಪುಗೊಂಡ ಶಿಶುನಾಳ ಶರೀಫ ಸಂತರಷ್ಟೇ ಅಲ್ಲ; ಕನ್ನಡ ಸಾಂಸ್ಕೃತಿಕ ಲೋಕದ ಅತ್ಯುತ್ತಮ ಪ್ರತಿನಿಧಿಯೂ ಹೌದು. ಹಿಂದೂ ಮತ್ತು ಮುಸ್ಲಿಂ– ಉಭಯಧರ್ಮಗಳನ್ನೂ ಜೀವಿಸಿದ, ಪ್ರೇಮಿಸಿದ ಅವರು, ಕನ್ನಡ ಧರ್ಮದ ನಿಜ ಮಾದರಿ. ಕನ್ನಡದ ಮೊದಲ ಮುಸಲ್ಮಾನ ಕವಿಯಾದ ಶರೀಫ, ನವೋದಯ ಕಾವ್ಯದ ಮೊದಲ ಕವಿಯೂ ಹೌದು. ಈ ಶರೀಫಜ್ಜ, ‘ಕನ್ನಡ ನವೋದಯ ಕಾವ್ಯದ ಮುಂಗೋಳಿ’ಯೆಂದು ಕರೆಯಲಾಗುವ ಮುದ್ದಣನಿಗಿಂತಲೂ ಸುಮಾರು ಅರ್ಧ ಶತಮಾನದಷ್ಟು ಹಿರೀಕ. ಮುಸಲ್ಮಾನರ ಏಕ ದೈವದ ಆರಾಧನೆ, ಹಿಂದೂಗಳ ಬಹು ದೈವ ಸಂಸ್ಕೃತಿ, ಸೂಫಿಗಳ ಪ್ರೇಮಮಾರ್ಗ ಇವೆಲ್ಲವೂ ಶರೀಫರ ಬದುಕಿನಲ್ಲಿ ಮಿಳಿತಗೊಂಡಿದ್ದವು.
ಕನ್ನಡ ಧರ್ಮದ ಬಹು ಮುಖ್ಯ ಲಕ್ಷಣ, ಎಲ್ಲರನ್ನೂ ಒಳಗೊಳ್ಳುವ ಶರೀಫತನವೇ. ಪರ ಧರ್ಮವನ್ನೂ, ಪರ ವಿಚಾರಗಳನ್ನೂ ಸಹಿಸಿಕೊಳ್ಳುವುದೇ ನಿಜವಾದ ಧರ್ಮ ಎನ್ನುವ ಕವಿರಾಜಮಾರ್ಗಕಾರನ ಮಾತು ಕನ್ನಡ ಧರ್ಮದ ಲಕ್ಷಣವಾಗಿರುವಂತೆ, ಶರೀಫರ ಬದುಕಿನ ತತ್ವವೂ ಆಗಿದೆ. ಕನ್ನಡ ಸಾಹಿತ್ಯ ಪರಂಪರೆಯುದ್ದಕ್ಕೂ ಸ್ಪಷ್ಟವಾಗಿ ಕಾಣಿಸುವ ‘ಎಲ್ಲರನ್ನೂ ಒಳಗೊಳ್ಳುವ’ ವಿವೇಕದ ನೆಲೆಗಟ್ಟಿನ ಕನ್ನಡ ಧರ್ಮವನ್ನು ಅನುಸರಿಸುವುದಾದರೆ, ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ ಬರಹಗಾರರಿಗೆ ಪ್ರಾತಿನಿಧ್ಯ
ದೊರೆಯಬೇಕಿತ್ತಲ್ಲವೆ?

ಕನಕ ಮತ್ತು ಸರ್ವಜ್ಞರೊಂದಿಗೆ ಶರೀಫರ ಹೆಸರನ್ನೂ ಸಮ್ಮೇಳನದ ಮುಖ್ಯ ವೇದಿಕೆಗೆ ಇರಿಸಲಾಗಿರುವುದನ್ನು ಪರಿಷತ್ತು ಹೆಮ್ಮೆಯಿಂದ ಹೇಳಿಕೊಂಡಿದೆ. ಹೆಮ್ಮೆಪಡಬೇಕಾದುದೇ. ಆದರೆ, ಹಿರಿಮೆ ಕೃತಿರೂಪದಲ್ಲೂ ಇರಬೇಕಲ್ಲವೆ? ಶರೀಫರಂಥ ಮಹಾನುಭಾವರ ಹೆಸರನ್ನು ವೇದಿಕೆಗೆ ಇರಿಸಿ, ಅಲ್ಲಿ ಮುಸಲ್ಮಾನ ಬರಹಗಾರರು ಇಲ್ಲವೆಂದರೆ, ಅದು ಶರೀಫತತ್ವಕ್ಕೆ ಅಪಚಾರ.

ಸದ್ಯದ ಸಾಹಿತ್ಯಿಕ ಸಂದರ್ಭದಲ್ಲಿ, ಮುಸ್ಲಿಂ ಬರಹ ಗಾರರನ್ನು ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ನೋಡುವ ಅಗತ್ಯವೇನೂ ಇಲ್ಲ. ಗುಣಮಟ್ಟದ ಅಳತೆಗೋಲಿನಲ್ಲಿ ನೋಡಿದರೆ, ಹೊಸ ತಲೆಮಾರಿನ ಮುಸ್ಲಿಂ ತರುಣ ತರುಣಿಯರು ದೊಡ್ಡ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ; ಗುಣಮಟ್ಟದ ಸಾಹಿತ್ಯವನ್ನೂ ರಚಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರನ್ನು ಹೊರಗಿಡುವುದು ‘ಕನ್ನಡ ಧರ್ಮ’ಕ್ಕೆ ಬೆನ್ನು ಮಾಡಿದಂತೆ.

‘ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿ ಗಳನ್ನು ಗುರುತಿಸುವಲ್ಲಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಪ್ರತಿಭಾ ನ್ಯಾಯಕ್ಕೆ ಮಹತ್ವ ನೀಡಿ, ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ’ ಎಂದು ಹೇಳಿರುವ ಪರಿಷತ್ತಿನ ಅಧ್ಯಕ್ಷರು, ತಮ್ಮ ಆಯ್ಕೆಯನ್ನು ಪ್ರಜಾಸತ್ತಾತ್ಮಕ ಎಂದೂ ಹೇಳಿಕೊಂಡಿದ್ದಾರೆ. ವಿರೋಧಾಭಾಸ ಇರುವುದು ಇಲ್ಲಿಯೇ. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯದ ಪಾಲನೆಯಾಗಿದೆ ಎನ್ನುತ್ತಲೇ, ಜಾತಿ–ಮತದ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆ ನೋಡ ಬಾರದು ಎಂದೂ ಹೇಳುತ್ತಾರೆ. ಈ ದ್ವಂದ್ವ ನೋಡಿದರೆ, ‘ಕನ್ನಡ ಧರ್ಮ’ ಹಾಗೂ ಸಾಮಾಜಿಕ ನ್ಯಾಯದ ಕುರಿತು ಸಾಹಿತ್ಯ ಪರಿಷತ್ತು ಹೊಸ ವ್ಯಾಖ್ಯಾನವನ್ನೇ ಮಾಡಿಕೊಂಡಿರುವಂತೆ ಕಾಣಿಸುತ್ತದೆ. ತನ್ನ ನಡವಳಿಕೆ ಯನ್ನು ಪ್ರಜಾಸತ್ತಾತ್ಮಕ ಎಂದು ಹೇಳಿಕೊಳ್ಳುವವರು, ಆ ನಡವಳಿಕೆಯನ್ನು ಪ್ರಶ್ನಿಸಲಿಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅವಕಾಶ ಕಲ್ಪಿಸಿದೆ ಎನ್ನುವುದನ್ನು ಮರೆಯಬಾರದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾಬ್ದಾರಿ ಹುದ್ದೆಗಳಲ್ಲಿ ಇರುವವರು ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯಗಳ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕು. ಪ್ರಶ್ನೆ ಅಥವಾ ಟೀಕೆಗಳನ್ನು ಪರಂಪರೆಗೆ ಮಾಡುವ ಅವಮಾನ ಎಂದು ಹೇಳುವುದು ಕೂಡ ಪ್ರಜಾಸತ್ತಾತ್ಮಕ ನಡವಳಿಕೆಯಲ್ಲ. ಹೀಗೆ ಮಾತನಾಡುವುದು ಅಧಿಕಾರದ ಭಾಷೆ, ರಾಜಕಾರಣದ ಭಾಷೆಯೇ ಹೊರತು ಜನಪರವಾದ ಭಾಷೆಯಲ್ಲ. ರಾಷ್ಟ್ರೀಯತೆ, ದೇಶಪ್ರೇಮದ ಹೆಸರಿನಲ್ಲಿ ವೈಚಾರಿಕ ಭಿನ್ನಮತವನ್ನು ಹತ್ತಿಕ್ಕಲು ಬಳಕೆಯಾಗುವ ಭಾಷೆಯೇ ಇದೀಗ ‘ಕನ್ನಡ ಧರ್ಮ’ದ ಹೆಸರಿನಲ್ಲಿ ಬಳಕೆಯಾದಂತಿದೆ. ಅಧಿಕಾರದ ಭಾಷೆ ‘ಅವಕಾಶ ನೀಡು’ವ ಧಾಟಿಯದ್ದಾದರೆ, ಅಂತಃಕರಣದ ಭಾಷೆ ‘ಒಳಗೊಳ್ಳು’ವ ಸ್ವರೂಪದ್ದಾಗಿರುತ್ತದೆ.

ಸಾಹಿತ್ಯದ ಸಾರ್ಥಕತೆ ಇರುವುದು ಎಲ್ಲರನ್ನೂ ಒಳಗೊಳ್ಳುವುದರಲ್ಲಿ. ಈ ಒಳಗೊಳ್ಳುವ ಮನೋಧರ್ಮವೇ ಇಲ್ಲದೆಹೋದಲ್ಲಿ, ಸಾಹಿತ್ಯಕ್ಕೆ ಅರ್ಥವೂ ಇಲ್ಲ, ಅದರ ಅಗತ್ಯವೂ ಇಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಸಮುದಾಯದವರಿಗೆ ಅವಕಾಶ ಇರಬೇಕು ಎಂದು ನಿರೀಕ್ಷಿಸುವುದು ಸಾಹಿತ್ಯದಿಂದ ಸಾಧ್ಯವಾಗುವ ಬಹುತ್ವ–ಮಾತೃತ್ವದ ಅಪೇಕ್ಷೆಯೇ ಹೊರತು, ಜಾತೀಯತೆಯಲ್ಲ. ಜಾತಿಯ ನಿಜವಾದ ಮೀರುವಿಕೆ ಸಾಧ್ಯವಾಗುವುದು ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ.

1957ರಲ್ಲಿ, ಧಾರವಾಡದಲ್ಲಿ ನಡೆದ 39ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ, ‘ಸಾಹಿತಿ ಅಥವಾ ಲೇಖಕನಾಗುವವನು ತನ್ನ ಸ್ವಂತ ಜೀವನದಲ್ಲಿ ವಿಶಾಲ ಮನೋಧರ್ಮವನ್ನು ಸ್ಥಾಪಿಸಿಕೊಳ್ಳುವುದು ಅಗತ್ಯ. ಏಕೆಂದರೆ ನಮ್ಮ ತೇಗಿನಲ್ಲಿ ಹೊರಬೀಳುವುದು ನಾವು ತಿಂದುದರ ವಾಸನೆ ತಾನೆ’ ಎಂದು ಕುವೆಂಪು ಹೇಳಿದ್ದರು. ‘ನಮ್ಮ ಬದುಕು ದೊಡ್ಡದಾಗದೆ ನಮ್ಮ ಸಾಹಿತ್ಯ ದೊಡ್ಡದಾಗದು’ ಎನ್ನುವುದು ಶಿವರಾಮ ಕಾರಂತರ ಮಾತು. ಈ ವಿಶಾಲ ಮನೋಧರ್ಮ ಸಾಹಿತಿಗಳಿಗಷ್ಟೇ ಅಲ್ಲ, ಸಾಹಿತ್ಯ ಸಂಘಟಕರಿಗೂ ಸಹೃದಯರಿಗೂ ಅಗತ್ಯ. ಮನೋಧರ್ಮ ಸಂಕುಚಿತವಾದರೆ, ನಮ್ಮ ತೇಗಿನ ವಾಸನೆ ಲೋಕಕ್ಕೆ ತಿಳಿಯಲು ಹೆಚ್ಚು ಸಮಯ ಬೇಕಾಗಿಲ್ಲ.

ಧಾರವಾಡ ಸಮ್ಮೇಳನದ ಭಾಷಣದಲ್ಲಿಯೇ, ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ಕುವೆಂಪು ಉಲ್ಲೇಖಿಸಿದ್ದರು. ಬಹುತ್ವದ ಚೆಲುವನ್ನು ಪ್ರತಿಪಾದಿಸುವ ಆ ಕನ್ನಡಗೀತೆಯೀಗ ನಾಡಗೀತೆಯೂ ಹೌದು; ‘ಕನ್ನಡ ಧರ್ಮ’ದ ವ್ಯಾಖ್ಯಾನವೂ ಹೌದು. ಸಮ್ಮೇಳನದಲ್ಲಿ ನಾಡಗೀತೆ ಮೊಳಗುವಾಗ, ‘ಸರ್ವ ಜನಾಂಗದ ಶಾಂತಿಯ ತೋಟ’, ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎನ್ನುವ ಸಾಲುಗಳೂ ಇರುತ್ತವಲ್ಲವೇ? ಆ ಸಾಲುಗಳು ವರ್ತಮಾನದ ‘ಕನ್ನಡ ಧರ್ಮ’ಕ್ಕೆ ಹೊಂದುವುವೋ ಇಲ್ಲವೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.