ADVERTISEMENT

‘ಮೀ ಟೂ’ ಕನ್ನಡಿಯಲ್ಲಿ ಬೆತ್ತಲಾದ ‘ಸಿನಿಮಾ’

ಸಂವೇದನೆಗಳನ್ನು ಸಿನಿಮಾ ರಂಗ ಜಡ್ಡುಗಟ್ಟಿಸಿರುವುದಕ್ಕೆ ಈ ಪ್ರತಿಕ್ರಿಯೆಗಳೇ ಸಾಕ್ಷಿ

ಚ.ಹ.ರಘುನಾಥ
Published 2 ನವೆಂಬರ್ 2018, 20:00 IST
Last Updated 2 ನವೆಂಬರ್ 2018, 20:00 IST
ರರರ
ರರರ   

ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮುಖ್ಯವಾಹಿನಿ ಸಿನಿಮಾಗಳು ರೂಪಿಸಿರುವ ‍ಪ್ರೇಕ್ಷಕರ ಅಭಿರುಚಿಯ ಒಂದು ಮಾನದಂಡವನ್ನಾಗಿ ‘ಮೀ ಟೂ’ ಅಭಿಯಾನವನ್ನು ನೋಡಲು ಸಾಧ್ಯವಿದೆಯೇ? ಕನ್ನಡದ ಕೆಲವು ನಟಿಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅವಹೇಳನ ಹಾಗೂ ನಾಯಕನಟರ ಆರಾಧನೆಯನ್ನು ನೋಡಿದರೆ, ಆ ಚರ್ಚೆ ಕನ್ನಡ ಸಿನಿಮಾ ಪ್ರೇಕ್ಷಕರ ಮನಃಸ್ಥಿತಿಯಂತೆಯೂ ಕಾಣಿಸುತ್ತದೆ. ಅದೆಂತಹ ಮನಃಸ್ಥಿತಿ? ಕೊಂಚ ಕ್ರೂರ ಎನ್ನಿಸಬಹುದಾದರೂ ಅದನ್ನು ‘ದಾಳಿಕೋರ ಮನಃಸ್ಥಿತಿ’ ಎನ್ನದೆ ವಿಧಿಯಿಲ್ಲ.

ಪ್ರೇಕ್ಷಕರ ಅಭಿರುಚಿಯ ಬಗ್ಗೆ ಮಾತನಾಡುವ ಮೊದಲು ಕನ್ನಡ ಜನಪ್ರಿಯ ಸಿನಿಮಾಗಳು ಚಿತ್ರಿಸುವ ಗಂಡುಹೆಣ್ಣಿನ ಸಂಬಂಧದ ಕುರಿತ ಜನಪ್ರಿಯ ಸೂತ್ರಗಳನ್ನು ಗಮನಿಸಬೇಕು. ಕನ್ನಡದ ಈ ಹೊತ್ತಿನ ಯಾವುದೇ ತಾರಾ ವರ್ಚಸ್ಸಿನ ನಟನ ಸಿನಿಮಾಗಳ ಕಥೆಗಳನ್ನು ಒಟ್ಟಿಗಿಟ್ಟುಕೊಂಡು ನೋಡಿ: ‘ಪ್ರೀತ್ಸೇ ಪ್ರೀತ್ಸೇ’ ಎಂದು ನಾಯಕಿಯನ್ನು ನಾಯಕ ಬಲವಂತದಿಂದ ಒತ್ತಾಯಿಸುವುದು, ನಾಯಕ ಪ್ರೇಮಿಸಿದ ಮೇಲೆ ಒಪ್ಪಿಕೊಳ್ಳುವುದರ ಹೊರತು ನಾಯಕಿಗೆ ಬೇರೆ ಆಯ್ಕೆಯಿಲ್ಲ ಎಂದು ಬಿಂಬಿಸುವುದು, ರೌಡಿಗಳ ಹಿಂದೆ ಹುಡುಗಿಯರು ಸುಳಿದಾಡುವುದು– ಅಪರಾಧ ಮತ್ತು ಪ್ರೇಮವನ್ನು ಒಟ್ಟಿಗೆ ನೋಡುವ ಹಾಗೂ ಗಂಡಿನ ಮನರಂಜನೆಯ ಒಂದು ರೂಪವಾಗಿಯಷ್ಟೇ ಹೆಣ್ಣನ್ನು ಚಿತ್ರಿಸುವ ಇಂಥ ಕಥೆಗಳ ನೂರಾರು ಚಿತ್ರಗಳು ಕಳೆದ ಹತ್ತು ವರ್ಷಗಳಲ್ಲಿ ತೆರೆಕಂಡಿವೆ. ನೋಡುಗರಿಗೆ ಯಾವುದೇ ಬಗೆಯ ಮಾನಸಿಕ ಕಸರತ್ತು ನೀಡದೆ ಕೇವಲ ರಂಜನೆಯಷ್ಟನ್ನೇ ಉದ್ದೇಶವಾಗಿಸಿಕೊಂಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ರೂಪುಗೊಳ್ಳುತ್ತಿರುವ ದಿನಗಳಿವು. ಈ ಅನಾರೋಗ್ಯಕರ ಪರಿಣಾಮವನ್ನೇ ‘ಮೀ ಟೂ’ ಸಂದರ್ಭಕ್ಕೆ ಚಿತ್ರರಸಿಕರ ಪ್ರತಿಕ್ರಿಯೆಯಲ್ಲೂ ಕಾಣಬಹುದು.

ನಾಯಕ ನಟನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನಟಿಯೊಬ್ಬಳು ಹೇಳಿದರೆ ಅದಕ್ಕೆ ಚಿತ್ರರಸಿಕರು ಪ್ರತಿಕ್ರಿಯಿಸಬೇಕಾದ ರೀತಿ ಯಾವುದು? ‘ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಸಹಜವಾದುದು’, ‘ಅನೇಕ ವರ್ಷಗಳಾದ ಮೇಲೆ ಆರೋಪ ಹೊರಿಸುವುದು ಪ್ರಚಾರಪ್ರಿಯತೆಯ ಭಾಗ’, ‘ನಮ್ಮ ಜೆಂಟಲ್‌ಮನ್‌ ಈ ರೀತಿ ಮಾಡಲು ಸಾಧ್ಯವೇ ಇಲ್ಲ...’ – ಈ ಬಗೆಯ ಪ್ರತಿಕ್ರಿಯೆಗಳಿಗೂ ನಮ್ಮ ಸಂವೇದನೆಗಳನ್ನು ಸಿನಿಮಾ ಜಡ್ಡುಗಟ್ಟಿಸಿರುವುದಕ್ಕೂ ಸಂಬಂಧ ಇಲ್ಲವೇ? ‘ಸಿನಿಮಾರಂಗ ಇರುವುದೇ ಹೀಗೆ’ ಎನ್ನುವವರು, ಯಾವುದಾದರೂ ಒಂದು ಕ್ಷೇತ್ರ ಏಕೆ ಹೀಗಿರಬೇಕು ಎನ್ನುವ ಪ್ರಶ್ನೆಯನ್ನೇಕೆ ಮರೆಯುತ್ತಾರೆ. ಕೆಲವು ಬುದ್ಧಿವಂತರಂತೂ ಆಪಾದಿಸಿದ ಹೆಣ್ಣುಮಕ್ಕಳ ಚಾರಿತ್ರ್ಯದ ಬಗ್ಗೆಯೇ ಪ್ರಶ್ನೆಗಳನ್ನೆತ್ತುವ ಮೂಲಕ ಬಾಯಿ ಮುಚ್ಚಿಸುವ ಜಾಣತನ ಮೆರೆದರು.

ADVERTISEMENT

ಇಷ್ಟಪಾತ್ರರ ಬಗ್ಗೆ ಆರೋಪ ಎದುರಾದಾಗ ಅಭಿಮಾನಿಗಳಿಗೆ ಸಹಜವಾಗಿಯೇ ನೋವಾಗುತ್ತದೆ. ಆದರೆ, ಆ ನೋವು ಸಮರ್ಥನೆಯ ರೂಪ ಹಾಗೂ ಆರೋಪ ಹೊರಿಸಿದವರ ಚಾರಿತ್ರ್ಯಹರಣದ ರೂಪ ತಾಳಬಾರದು. ನಾವು ಸಜ್ಜನ ಎಂದು ಭಾವಿಸುವ ವ್ಯಕ್ತಿ, ಆ ಸಜ್ಜನಿಕೆಯ ಮೂಲಕವೇ ಆರೋಪಮುಕ್ತವಾಗಬೇಕೆಂದು ಬಯಸು ವುದು ಅಭಿಮಾನಿಗಳಿಗೆ ಉಳಿದಿರುವ ದಾರಿಯೇ ವಿನಾ, ಪೊಲೀಸ್‌ ಅಥವಾ ನ್ಯಾಯಾಧೀಶರಾಗುವುದಲ್ಲ.

‘ಮೀ ಟೂ’ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕಾದ ಚಿತ್ರೋದ್ಯಮದ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸಭೆಯಲ್ಲಿ ಆಪಾದನೆ ಮಾಡಿದವರನ್ನೂ ಹಾಗೂ ಆರೋಪಕ್ಕೆ ಗುರಿಯಾದವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎನ್ನುವು
ದನ್ನು ಕಿರುತೆರೆಯಲ್ಲಿ ನೋಡಿದವರೆಲ್ಲರೂ ಬಲ್ಲರು. ಗಂಡುಗಲಿಗಳ ನಡುವೆ ತನ್ನ ನೋವು ಹೇಳಿಕೊಂಡ ಹೆಣ್ಣು ಮಿಕದಂತೆ ಕಾಣಿಸಿದ್ದು ಚಿತ್ರರಂಗದಲ್ಲಿನ ಪುರುಷ ಪಕ್ಷಪಾತತನಕ್ಕೆ ಸಾಕ್ಷ್ಯದಂತಿತ್ತು. ‘ಮೀ ಟೂ’ ಆಪಾದನೆಗೆ ಸಂಬಂಧಿಸಿದಂತೆ ಆರೋಪಕ್ಕೆ ಗುರಿಯಾದ ನಿರ್ದೇಶಕರು ಮಾಡಿದ್ದೂ ನಟಿಯ ಚಾರಿತ್ರ್ಯಹರಣವನ್ನೇ. ಚಿತ್ರಗೀತೆಯೊಂದರಲ್ಲಿ ಆ ನಟಿಯ ಎದೆಗೆ ಗುದ್ದಿದ ನಾಯಕನೊಬ್ಬ ದೂರಕ್ಕೆ ಹಾರಿಬೀಳುವ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ತೋರಿಸುತ್ತಾ, ಅದನ್ನು ಆ ನಟಿಯ ಚಾರಿತ್ರ್ಯಕ್ಕೆ ಉದಾಹರಣೆ ರೂಪದಲ್ಲಿ ಬಿಂಬಿಸುವವರು, ಸಿನಿಮಾ ಮತ್ತು ನಿಜಜೀವನದ ನಡುವಿನ ವ್ಯತ್ಯಾಸವನ್ನೇ ಮರೆತಂತೆ ಕಾಣಿಸುತ್ತದೆ.

ತನ್ನನ್ನು ತಾನು ಶಾರದೆಯ ಪುತ್ರನೆಂದು ಕರೆದುಕೊಳ್ಳುವ ನಿರ್ದೇಶಕನೊಬ್ಬನ ಪ್ರತಿಕ್ರಿಯೆ ನೋಡಿ. ‘ಮೀ ಟೂ’ ಚಳವಳಿ ಮೂಲಕ ನಟಿಯರು ತಮ್ಮ ಪಾತಿವ್ರತ್ಯ ಸಾಬೀತುಪಡಿಸಿಕೊಳ್ಳಲು ಹೊರಟಿದ್ದಾರೆ. ‘ಬೀದಿಯಲ್ಲಿ ಹೋಗುವ ಹುಡುಗಿಯನ್ನು ಕರೆತಂದು ನಾಯಕಿಯನ್ನಾಗಿ ಮಾಡುತ್ತೇನೆ’ ಎಂದು ಇದೇ ನಿರ್ದೇಶಕರು ಹೇಳುತ್ತಾರೆ. ಶಾರದೆ ಆಡಿಸುವ ಮಾತುಗಳೇ ಇವು? ಇದನ್ನೂ ಹೀಗೂ ಹೇಳಬಹುದಲ್ಲವೇ– ಕನ್ನಡ ಚಿತ್ರರಂಗದ ಇಂದಿನ ಅಧಃಪತನಕ್ಕೆ ಬೀದಿಯಲ್ಲಿ ಹೋಗುವವರೆಲ್ಲ ನಿರ್ದೇಶಕರಾಗಿರುವುದೇ ಕಾರಣ ಎಂದು.

ಸಿನಿಮಾಗಳಲ್ಲಿ ಮಾತ್ರವಲ್ಲ, ಇಂದಿನ ಕೆಲವು ಕಲಾವಿದರು ನಿಜಜೀವನದಲ್ಲೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವ ಹಾದಿರಂಪ ಬೀದಿರಂಪದ ಉದಾಹರಣೆಗಳಿವೆ. ಈ ವಿರೋಧಾಭಾಸದ ಬಗ್ಗೆ, ‘ಹೀಗೆ ಮಾಡಬೇಡಿ ಎನ್ನುವುದನ್ನು ಜನರಿಗೆ ತೋರಿಸುವುದಕ್ಕಾಗಿ ಅವರು ನಿಜ ಜೀವನದಲ್ಲೇ ಹೀಗೆ ಮಾಡಿ ತೋರಿಸುತ್ತಿದ್ದಾರೆ ಅನ್ನಿಸುತ್ತದೆ. ಏನು ಮಾಡುವುದು?’ ಎನ್ನುವ ಹಿರಿಯ
ನಟ ಅಂಬರೀಷ್‌ರ ಪ್ರತಿಕ್ರಿಯೆಯನ್ನು ಗಮನಿಸಬೇಕು.

ಕನ್ನಡ ಸಿನಿಮಾಗಳ ನೈತಿಕ ಅಧಃಪತನ ಇಂದುನಿನ್ನೆಯದಲ್ಲ. 2000 ಇಸವಿಯ ನಂತರ ಕನ್ನಡ ಚಿತ್ರಗಳಲ್ಲಿ ಹಿಂಸೆಯ ಪ್ರಮಾಣ ಹೆಚ್ಚಾಗಿದೆ ಎನ್ನುವುದಕ್ಕೆ ಪೂರಕವಾಗಿ, ಪ್ರಾದೇಶಿಕ ಸೆನ್ಸಾರ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಎಂ. ಚಂದ್ರಶೇಖರ್‌ ತಮ್ಮ ಅಧಿಕಾರಾವಧಿಯ ಅಂಕಿಅಂಶಗಳನ್ನೇ ಉದಾಹರಿಸಿದ್ದರು. 2009ರ ಜೂನ್‌ನಲ್ಲಿ ಅವರು ಬಿಡುಗಡೆ ಮಾಡಿರುವ ವಿವರಗಳು ಹೀಗಿವೆ: ‘ಕ್ರೌರ್ಯ ಮತ್ತು ಅಪರಾಧದ ಹಿನ್ನೆಲೆ ಇರುವಂಥ ಚಲನಚಿತ್ರಗಳ ಪ್ರಮಾಣ ಕನ್ನಡದಲ್ಲಿ ಅತಿ ಹೆಚ್ಚಷ್ಟೇ ಅಲ್ಲ, ಅದು ವರ್ಷದಿಂದ ವರ್ಷಕ್ಕೆ ಭಯಾನಕ ರೀತಿಯಲ್ಲಿ ಏರುತ್ತಲೇ ಇದೆ.

ಸೆನ್ಸಾರ್ ಕಟ್‌ನ ಪ್ರಮಾಣಕ್ಕೂ ಸಿನಿಮಾಗಳ ಯಶಸ್ಸಿನ ಪ್ರಮಾಣಕ್ಕೂ ನೇರವಾದ ಸಂಬಂಧವಿದೆ. ಉದಾಹರಣೆಗೆ ಸೆನ್ಸಾರ್ ಕಟ್ ಅತ್ಯಂತ ಕಡಿಮೆ ಇದ್ದ ವರ್ಷವೇ (2006) ಯಶಸ್ಸಿನ ರೇಟ್ ಅತ್ಯಂತ ಹೆಚ್ಚಾಗಿತ್ತು. 2008ರಲ್ಲಿ ಸೆನ್ಸಾರ್ ಕಟ್‌ನ ಪ್ರಮಾಣ ಅತಿ ಹೆಚ್ಚಾಗಿದ್ದು ಅದೇ ವರ್ಷ ಯಶಸ್ಸಿನ ಮಟ್ಟ ಅತ್ಯಂತ ಕಡಿಮೆಗೆ ಇಳಿದಿದ್ದು ಕಾಕತಾಳೀಯ ಅಲ್ಲ’. ಹತ್ತು ವರ್ಷಗಳ ಹಿಂದಿನ ಈ ಅಂಕಿಅಂಶಗಳು ಈಗ ಸುಧಾರಿಸಿವೆ ಎಂದು ಹೇಳುವುದು ಸಾಧ್ಯವೇ?

ಹೈದರಾಬಾದ್‌ನಲ್ಲಿ ನಡೆದ 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1941) ಎ.ಆರ್. ಕೃಷ್ಣಶಾಸ್ತ್ರಿ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಿನಿಮಾ ಮಾಧ್ಯಮದ ಪ್ರಭಾವದ ಕುರಿತು ಆಡಿರುವ ಮಾತುಗಳು ಹೀಗಿವೆ:‘ಆಧುನಿಕ ಜೀವನದಲ್ಲಿ ಚಲನಚಿತ್ರವು ಬಹು ಪ್ರಮುಖ
ವಾದ ಪಾತ್ರವನ್ನು ವಹಿಸುತ್ತಿದೆ. ಅದನ್ನು ನೋಡಬೇಕೆಂದು ಅಪೇಕ್ಷೆ ಪಡದವರಿಲ್ಲ– ಪುಣ್ಯಕಥೆಗಾಗಿ, ಸೌಖ್ಯಕ್ಕಾಗಿ, ಸೌಂದರ್ಯಕ್ಕಾಗಿ, ಹೊತ್ತು ಹೋಗದ್ದಕ್ಕಾಗಿ ನಾನಾ ಉದ್ದೇಶದಿಂದ ಜನರು ಅದಕ್ಕೆ ಹೋಗುತ್ತಾರೆ; ಬಡವರು, ಭಾಗ್ಯವಂತರು, ಹೆಂಗಸರು, ಗಂಡಸರು, ಮಕ್ಕಳು ಮುದುಕರು ಎಲ್ಲರೂ ಹೋಗುತ್ತಾರೆ. ಇದುಇರುವ ಕಡೆಯಲ್ಲಿ ಜನರಿಗೆ ಪುರಾಣ ಬೇಡ, ಕಾವ್ಯವಾಚನ ಬೇಡ, ನಾಟಕ ಬೇಡ.

ಏಕೆಂದರೆ ಸಿನಿಮಾ ಮಂದಿರದಲ್ಲಿ ಸುಖಾಸನಾಸೀನರಾಗಿ, ಸ್ನೇಹ ಪ್ರೇಮ ಪಾನ ಧೂಮ ಮುಂತಾದವುಗೊಡಗೂಡಿ ಎರಡು ಮೂರು ಗಂಟೆಗಳೊಳಗೆ ದೇಶ ವಿದೇಶಗಳ ಪ್ರಸಿದ್ಧ ತಾರೆಯರ ಅಭಿನಯವನ್ನು ನೋಡಬಹುದು, ಅವರ ಗಾನವನ್ನು ಕೇಳಬಹುದು...’ ಇಷ್ಟೆಲ್ಲ ಹೇಳಿದ ನಂತರ ಕೃಷ್ಣಶಾಸ್ತ್ರಿಗಳು ಕೊನೆಯದಾಗಿ ಹೇಳುವುದು ಹೀಗೆ: ‘ಇದು ಎಷ್ಟೋ ವೇಳೆ ಜೂಜಿಗಿಂತ ಅನರ್ಥಕಾರಕವಾಗಿದೆ. ಮಿತಿಯಲ್ಲಿ ಎಲ್ಲ ಒಳ್ಳೆಯದೇ; ಅತಿಯಿಂದ ಅಮೃತವೂ ವಿಷ. ಇದರ ಅತಿಗೆ, ಚಟಕ್ಕೆ ನನ್ನ ಆಕ್ಷೇಪಣೆ.’ ಈ ಅತಿ–ಚಟವೇ ಇಂದಿನ ಕನ್ನಡ ಸಿನಿಮಾ ಎನ್ನುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.