ADVERTISEMENT

ಪಡಸಾಲೆ | ರೂಪಾಯಿ ಸಂಕಟ ಡಾಲರ್‌ ಬಲ್ಲುದೆ?

ದಲಿತರ ಮನೆಯ ಕೇಸರಿಬಾತ್‌ನಲ್ಲಿ ಅವರ ಸಂಕಷ್ಟಗಳೇ ದ್ರಾಕ್ಷಿ–ಗೋಡಂಬಿ

ಚ.ಹ.ರಘುನಾಥ
Published 17 ಅಕ್ಟೋಬರ್ 2022, 22:45 IST
Last Updated 17 ಅಕ್ಟೋಬರ್ 2022, 22:45 IST
   

‘ರೂಪಾಯಿ ಬಡವಾಗುತ್ತಿಲ್ಲ, ಡಾಲರ್ ಕೊಬ್ಬು ಹೆಚ್ಚುತ್ತಿದೆಯಷ್ಟೇ’ ಎನ್ನುವ ಅರ್ಥದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಾತು, ‘ವಿಶ್ವಗುರು’ ಪೋಷಾಕಿನ ಭಾರತದ ವೈರುಧ್ಯಗಳನ್ನು ಹಿಡಿದಿಡುವ ‘ಅಧಿಕಾರ ಭಾಷೆ’ಯ ಅತ್ಯುತ್ತಮ ರೂಪಕ. ಈ ಮಾದರಿಯನ್ನು ಬಳಸಿಕೊಂಡು ಮತ್ತಷ್ಟು ಹೇಳಿಕೆಗಳನ್ನು ರೂಪಿಸಬಹುದು: ಜನಸಾಮಾನ್ಯರ ಬದುಕು ದುರ್ಬರ ವೇನೂ ಆಗುತ್ತಿಲ್ಲ, ಬದಲಿಗೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ; ಭಾರತದಲ್ಲಿ ಆಹಾರದ ಸಮಸ್ಯೆ ಯೇನೂ ಇಲ್ಲ, ಹಸಿವು ಹೆಚ್ಚುತ್ತಿದೆಯಷ್ಟೇ; ಕೊರೊನಾ ಬಿಕ್ಕಟ್ಟನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿತು, ಸಾವು ನೋವು ಸಹಜವಷ್ಟೇ– ಹೀಗೆ ಎಷ್ಟು ಬೇಕಾದರೂ ಹೇಳಿಕೆ ಗಳನ್ನು ಜೋಡಿಸಬಹುದು.

ಜನಸಾಮಾನ್ಯರ ಸಂಕಷ್ಟಗಳಿಗೆ ರೂಪಕಭಾಷೆಯ ಮುಲಾಮನ್ನು ಹಚ್ಚುವಲ್ಲಿ ನಿಸ್ಸೀಮರಾಗಿರುವ ನಿರ್ಮಲಾ ಮೇಡಂ, 2020ರ ಕೊರೊನಾ ಬಿಕ್ಕಟ್ಟಿನ ಸಂದರ್ಭದ ಆರ್ಥಿಕ ಸಂಕಷ್ಟವನ್ನು ‘ದೇವರ ಆಟ’ ಎಂದು ಬಣ್ಣಿಸಿ ದ್ದರು. ಈ ರೂಪಕ ಸಾಮ್ರಾಜ್ಞಿ, ರಾಜ್ಯಸಭೆಗೆ ಕರ್ನಾಟಕದ ಕೊಡುಗೆ. ಬೆಲೆ ಏರಿಕೆ, ಹಣಕಾಸಿನ ಮುಗ್ಗಟ್ಟಿನಿಂದ ಜನಸಾಮಾನ್ಯರು ಹತಾಶರಾಗದಂತೆ, ಸಂಕಷ್ಟದ ಇನ್ನೊಂದು ಬದಿಯಲ್ಲಿನ ಜೀವನಸೌಂದರ್ಯದ ಬಗ್ಗೆ ಮೇಡಂ ಆಗಾಗ ಸಮಾಜದ ಗಮನಸೆಳೆಯುತ್ತಾರೆ; ಬದುಕನ್ನು ಸಕಾರಾತ್ಮಕವಾಗಿ ನೋಡುವ ಜೀವನಕಲೆಯನ್ನು ಬೋಧಿಸುತ್ತಿರುತ್ತಾರೆ. ಈ ಧನಾತ್ಮಕ ದೃಷ್ಟಿ ಕೋನದ ಹೊಸ ಹೊಳಹು: ರೂಪಾಯಿ ಸಹಿಷ್ಣುತೆಯೂ ಡಾಲರ್‌ನ ಅಧಿಕಪ್ರಸಂಗವೂ. ಅವರು ಈ ಹೊಳಹನ್ನು ಹಂಚಿಕೊಂಡಿರುವ ಆಸುಪಾಸಿನಲ್ಲೇ ‘ಜಾಗತಿಕ ಹಸಿವು ಸೂಚ್ಯಂಕ–2022’ ಪ್ರಕಟವಾಗಿದೆ. ಈ ಪಟ್ಟಿಯಲ್ಲಿರುವ 121 ದೇಶಗಳಲ್ಲಿ ಭಾರತ 107ನೇ ಸ್ಥಾನದಲ್ಲಿದೆ. ನೆರೆಯ ದೇಶಗಳಾದ ಬಾಂಗ್ಲಾ, ಪಾಕಿಸ್ತಾನ, ನೇಪಾಳವು ಭಾರತಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿವೆ. ಆರ್ಥಿಕ ಬಿಕ್ಕಟ್ಟಿನಿಂದ ನಾಗರಿಕ ವ್ಯವಸ್ಥೆಯೇ ಕುಸಿದುಹೋಗಿದೆ ಎಂದು ಭಾರತೀಯರ ಮರುಕಕ್ಕೆ ಪಾತ್ರವಾಗಿದ್ದ ಶ್ರೀಲಂಕಾ ಜಾಗತಿಕ ಹಸಿವು ಸೂಚ್ಯಂಕದಲ್ಲಿ 64ನೇ ಸ್ಥಾನದಲ್ಲಿದೆ! ಈ ಸೂಚ್ಯಂಕವೇನು ದೇವರ ಆಟವೋ ಅಥವಾ ಭಾರತದ ವಿರುದ್ಧದ ಪಿತೂರಿಯೋ– ಮೇಡಂ ಅವರೇ ವಿಶ್ಲೇಷಣೆಯ ಬೆಳಕು ಚೆಲ್ಲಬೇಕು.

ಬಿಕ್ಕಟ್ಟಿನ ಸಂದರ್ಭಗಳನ್ನು ಅತ್ಯಂತ ಧನಾತ್ಮಕವಾಗಿ ನೋಡುವ ಕಲೆಯನ್ನು ನಮ್ಮ ಜನಸಾಮಾನ್ಯರ ಭಾಷೆ ಯಲ್ಲಿ ಪಲಾಯನವಾದ, ಬೇಜವಾಬ್ದಾರಿ ಎನ್ನಲಾಗುತ್ತದೆ. ಆರ್ಥಿಕ ಹಿಂಜರಿತ ಭಾರತಕ್ಕಷ್ಟೇ ಸೀಮಿತವಾದ ವಿದ್ಯಮಾನವಲ್ಲ ಎನ್ನುವುದು ನಿಜವಾದರೂ, ಬಿಕ್ಕಟ್ಟಿನ ಸಂದರ್ಭವನ್ನು ‘ದೇವರ ಆಟ’ವನ್ನಾಗಿ ಭಾವಿಸುವ ಕಲೆಗಾರಿಕೆಯು ಭಾರತೀಯ ರಾಜಕಾರಣಿಗಳು ರೂಢಿಸಿಕೊಂಡಿರುವ ವಿಶೇಷ ಶಕ್ತಿ. ಈ ಕಲೆಗಾರಿಕೆಯ ನೆರವಿನಿಂದ ಯಥಾಸ್ಥಿತಿವಾದವನ್ನು ಮುಂದುವರಿ ಸಲಾಗುತ್ತದೆ, ದೊಡ್ಡ ಗಾಯವನ್ನು ತೋರಿಸಿ ಸಣ್ಣ ನೋವನ್ನು ನಿರ್ಲಕ್ಷಿಸುವ ಮನಃಸ್ಥಿತಿ ಸೃಷ್ಟಿಸಲಾಗುತ್ತದೆ. ಇದಕ್ಕೆ ನಿದರ್ಶನದ ರೂಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊಸಪೇಟೆ ಸಮೀಪದ ಕಮಲಾಪುರ ಗ್ರಾಮದ ದಲಿತ ಕುಟುಂಬದ ಮನೆಯಲ್ಲಿ ಉಪಾಹಾರ ಸೇವಿಸಿದ ಘಟನೆಯನ್ನು ಗಮನಿಸಬಹುದು. ದಲಿತರ ಮನೆಯಲ್ಲಿ ಮಂಡಕ್ಕಿ, ಕೇಸರಿಬಾತ್‌ ಸವಿಯುವ ಮೂಲಕ ಮುಖ್ಯಮಂತ್ರಿ ನೀಡಿದ ಸಂದೇಶವೇನು? ಅವರು ಪ್ರದರ್ಶಿಸಿದ್ದು ಜಾತ್ಯತೀತ ನಿಲುವನ್ನೇ? ದಲಿತರ ಬಗೆಗಿನ ಪ್ರೀತಿಯನ್ನೇ? ಸರಳತೆಯನ್ನೇ?

ADVERTISEMENT

ದಲಿತರ ಮನೆಯಲ್ಲಿ ಆಹಾರ ಸೇವಿಸಿದ ಅನೇಕ ರಾಜಕಾರಣಿಗಳನ್ನು ಈ ನಾಡು ಕಂಡಿದೆ. ದಲಿತರ ಮನೆಗಳಲ್ಲಿ ಪಾದಪೂಜೆ ಮಾಡಿಸಿಕೊಂಡ ಸ್ವಾಮೀಜಿಗಳೂ ನಾಡಿಗೆ ಗೊತ್ತು. ಇಂಥ ಪ್ರಸಂಗಗಳೆಲ್ಲವೂ ದಲಿತರ ಸಹಾನುಭೂತಿ ಗಿಟ್ಟಿಸಿಕೊಳ್ಳುವ
ಪ್ರಚಾರತಂತ್ರಗಳಾಗಿ ಕೊನೆಗೊಂಡಿವೆಯೇ ಹೊರತು, ಅವರ ಬದುಕನ್ನು ಕಿಂಚಿತ್ತೂ ಹಸನಾಗಿಸಿಲ್ಲ. ಈ ಘಟನೆಗಳು ಜಾತೀಯತೆಯ ಯಥಾಸ್ಥಿತಿಯನ್ನು ಮುಂದುವರಿಸಿವೆ. ಜಾತಿ ಕಾರಣದಿಂದಾಗಿ ಯಾರ ಜೊತೆ ಗಾದರೂ ಊಟ ಮಾಡಲು ನಿರಾಕರಿಸಿದಷ್ಟೇ, ಜಾತಿ ಕಾರಣದಿಂದಾಗಿ ಯಾರ ಮನೆಯಲ್ಲಾದರೂ ಆಹಾರ ಸೇವಿಸುವುದು ಕೂಡ ಕೊಳಕುತನವೇ.

ದಲಿತರ ಮನೆಯಲ್ಲಿ ನಡೆಯುವ ಆಹಾರಕೂಟಗಳ ವರದಿಗಳಲ್ಲಿ, ಹೋಟೆಲ್‌ನಿಂದ ಸರಬರಾಜಾಗುವ ತಿಂಡಿತೀರ್ಥದ ವಿವರಗಳೂ ಇರುವುದು ಏನನ್ನು ಸೂಚಿಸುತ್ತದೆ? ಕಮಲಾಪುರ ಗ್ರಾಮದ ಘಟನೆಯಲ್ಲಿ ‘ಬ್ರ್ಯಾಂಡೆಡ್‌ ಟೀ ಪುಡಿ’ ಬಳಸುವಂತೆ ದಲಿತ ಕುಟುಂಬವನ್ನು ಅಧಿಕಾರಿಗಳು ಒತ್ತಾಯಿಸಿರುವುದು ಏನನ್ನು ಸೂಚಿಸುತ್ತದೆ? ಶಬರಿಯ ಎಂಜಲು ಹಣ್ಣುಗಳನ್ನು ತಿಂದ ರಾಮಚಂದ್ರನನ್ನು ಆರಾಧಿಸುವವರು, ಊಟದ ವಿಷಯದಲ್ಲಿ ನಾಟಕವಾಡಬಾರದು.

ದಲಿತರ ಮನೆಯಲ್ಲಿ ಊಟ ಮಾಡುವುದು, ದಲಿತರ ಮನೆಗಳಲ್ಲಿ ಪಾದಪೂಜೆ ಮಾಡಿಸಿಕೊಳ್ಳುವುದು– ಇವೆಲ್ಲ ಅಮಾನವೀಯ ಮಾತ್ರವಲ್ಲ, ಸದ್ಯದ ಸಂದರ್ಭದಲ್ಲಿ ಅನಾಗರಿಕವೂ ಹೌದು. ತುಟಿಯುಪಚಾರದ ನಡವಳಿಕೆ ಗಳು ದಲಿತರ ಬದುಕನ್ನು ಯಾವ ರೀತಿಯಿಂದಲೂ ಸಹ್ಯ ಗೊಳಿಸುವುದಿಲ್ಲ. ಇಷ್ಟಕ್ಕೂ ಮುಖ್ಯಮಂತ್ರಿಯೊಬ್ಬರು ದಲಿತರ ಮನೆಯಲ್ಲಿ ಯಾಕಾಗಿ ಊಟ ಮಾಡಬೇಕು? ಅವರೇನು ಆಹ್ವಾನಿಸಿದ್ದರೆ? ಹೌದೇ ಆದಲ್ಲಿ, ಆಹ್ವಾನಿಸಿದವರೆಲ್ಲರ ಮನೆಗೆ ಮುಖ್ಯಮಂತ್ರಿ ಊಟಕ್ಕೆ ಹೋಗುವರೆ?

ಆಡಳಿತ ಸೂತ್ರಗಳನ್ನು ವಹಿಸಿಕೊಂಡ ನಾಯಕರು ಜನಸಾಮಾನ್ಯರ ಮನೆಗೆ ಭೇಟಿ ಕೊಡುವುದು ಅಸಹಜವೇನಲ್ಲ. ಇಂಥ ಭೇಟಿಗಳ ಹಿಂದೆ ಸಾಮಾನ್ಯವಾಗಿ ಎರಡು ಉದ್ದೇಶಗಳಿರುತ್ತವೆ: ಒಂದು, ಜನಸಾಮಾನ್ಯರ ತವಕತಲ್ಲಣಗಳನ್ನು ಅರಿಯುವುದು. ಮತ್ತೊಂದು, ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ಮನೋಬಲ ತುಂಬುವುದು. ಬೊಮ್ಮಾಯಿ ಅವರ ನಡವಳಿಕೆಗೆ ಈ ಎರಡೂ ಸಾಧ್ಯತೆಗಳು ಹೊಂದುವುದಿಲ್ಲ. ಕರಾವಳಿ ಯಲ್ಲಿ ಕೊಲೆಯಾದ ಹಿಂದೂ ಯುವಕನ ಮನೆಗೆ ಹೋಗಿ ಸಾಂತ್ವನ ಹೇಳಿದವರಿಗೆ, ಸಮೀಪದ ಮುಸ್ಲಿಂ ಸಮುದಾಯದ ಸಾವಿನ ಮನೆ ದೂರವೆನ್ನಿಸುತ್ತದೆ. ಹಿಜಾಬ್ ಕಾರಣದಿಂದಾಗಿ ತರಗತಿ ಕಳೆದುಕೊಂಡ ಹೆಣ್ಣುಮಕ್ಕಳ ಬಳಿಗೆ ಹೋಗಿ ಅವರ ಮನಸ್ಸಿನ ಮಾತು ಆಲಿಸಬೇಕೆಂದು ಅವರಿಗೆ ಅನ್ನಿಸಲಿಲ್ಲ. ರಾಮಾಯಣ–ಮಹಾಭಾರತಗಳಿಂದ ಸಂಸ್ಕಾರಗೊಂಡ ಮನಸ್ಸುಗಳಿಗೆ, ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆದ ಪ್ರಸಂಗ ಉಂಟುಮಾಡುವ ನೋವಷ್ಟೇ, ಶಾಲೆಯ ಮುಂಭಾಗ ದಲ್ಲಿ ಹಿಜಾಬ್ ಕಳಚುವಂತೆ ಒತ್ತಾಯಕ್ಕೆ ಒಳಗಾದ ಹೆಣ್ಣು ಮಕ್ಕಳ ಬೇಗುದಿಯೂ ತಳಮಳ ಹುಟ್ಟಿಸಬೇಕು. ಅಂಥ ತಳಮಳ ಮುಖ್ಯಮಂತ್ರಿಯವರಲ್ಲಾಗಲೀ ಅವರ ಪಕ್ಷದ ಪ್ರತಿನಿಧಿಗಳಲ್ಲಾಗಲೀ ಕಾಣಿಸದಿರುವುದು ದುರದೃಷ್ಟಕರ.

ಕಳೆದೊಂದು ತಿಂಗಳ ಅವಧಿಯಲ್ಲಿ ದಲಿತರ ದೌರ್ಜನ್ಯಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗಿವೆ.ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿಯಲ್ಲಿ ದೇವರ ಗುಜ್ಜುಕೋಲನ್ನು ಮುಟ್ಟಿದ ಕಾರಣಕ್ಕಾಗಿ ಪರಿಶಿಷ್ಟ ಜಾತಿಯ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು ಹಾಗೂ ಬಾಲಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರದ ಬೆದರಿಕೆ ಒಡ್ಡಲಾಗಿತ್ತು. ಮುಖ್ಯಮಂತ್ರಿಯವರು ದಲಿತ ಕುಟುಂಬದ ಮನೆಯಲ್ಲಿ ನಾಷ್ಟಾ ಮಾಡಿದ ಬೆನ್ನಲ್ಲೇ, ಪರಿಶಿಷ್ಟ ಜಾತಿಗೆ ಸೇರಿದ ಒಂದೇ ಕುಟುಂಬದ ಹತ್ತು ಮಂದಿಯನ್ನು ಎಸ್ಟೇಟ್‌ನಲ್ಲಿ ಕೂಡಿ ಹಾಕಿ ಹಿಂಸಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಿಂದ ವರದಿಯಾಗಿದೆ. ಸಮಾಜದ ಕಟ್ಟಕಡೆಯ ಜನರ ಬಗ್ಗೆ ಕಳಕಳಿಯುಳ್ಳ ನಾಯಕ ಭೇಟಿಯಾಗಬೇಕಾದುದು ಇಂಥ ಜನರನ್ನು ಅಲ್ಲವೇ? ಸಂತ್ರಸ್ತರ ಮನೆಗಳಿಗೆ ಹೋಗಿ ಧೈರ್ಯ ತುಂಬುವ ಮಾತಿರಲಿ, ಆ ಘಟನೆಗಳನ್ನು ಕಠಿಣ ಮಾತುಗಳಲ್ಲಿ ಖಂಡಿಸುವ ಗೋಜಿಗೂ ಹೋಗದವರು, ಊಟದ ಮೂಲಕ ಸಾಮಾಜಿಕ ಸೌಹಾರ್ದದ ಅಥವಾ ದಲಿತರ ಏಳಿಗೆಯ ಕುರಿತು ಸಂದೇಶ ನೀಡಲು ಪ್ರಯತ್ನಿಸುವುದು ತಮಾಷೆಯಾಗಿ ಕಾಣಿಸುತ್ತದೆ. ಈ ವಿಕಟ ವಿನೋದದ ಮುಂದುವರಿಕೆಯ ಭಾಗವಾಗಿ, ಶಾಸಕ ಶಿವನಗೌಡ ನಾಯಕ ಅವರ ಕಣ್ಣಿಗೆ ಬೊಮ್ಮಾಯಿ ಅವರು ‘ಎರಡನೇ ಅಂಬೇಡ್ಕರ್’ ಆಗಿ ಕಂಡಿದ್ದಾರೆ. ಅಭಿನವ ಮಹಾತ್ಮ, ಅಭಿನವ ಅಂಬೇಡ್ಕರ್‌ ಎಂದು ಯಾರು ಯಾರನ್ನು ಬೇಕಾದರೂ ಕರೆಯಬಹುದಾದ ಕಾಲಘಟ್ಟವೇ ಗಾಂಧಿ, ಬಾಬಾಸಾಹೇಬರನ್ನು ನಾವು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎನ್ನುವುದರ ಸೂಚನೆಯಂತಿದೆ. ಇಂಥ ಭಟ್ಟಂಗಿತನವನ್ನು ಬಣ್ಣನೆಗೊಳಗಾದವರು ತಕ್ಷಣ ವಿರೋಧಿಸಬೇಕು. ಮೌನವಾಗಿ ಉಳಿಯುವುದು ವಿದೂಷಕರಿಗೆ ನೀಡುವ ಪ್ರೋತ್ಸಾಹ ಹಾಗೂ ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ.

ರಘುನಾಥ ಚ.ಹ.

ರೂಪಾಯಿ ಮತ್ತು ಡಾಲರ್‌ ನಂಟನ್ನು ನಾವು ನೋಡ ಬೇಕಾದುದು ಹೀಗೆ: ಭಾರತದ ಜನಸಾಮಾನ್ಯರು ರೂಪಾಯಿ ರೂಪವಾದರೆ, ಜನಪ್ರತಿನಿಧಿಗಳು ಡಾಲರ್‌ ಇದ್ದಂತೆ. ರೂಪಾಯಿ ಸಂಕಟ ಡಾಲರ್‌ಗೆ ಅರ್ಥವಾಗುವುದುಂಟೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.