ADVERTISEMENT

ಎಲ್ಲವೂ ಕ್ಷೇಮ, ಎಲ್ಲರೂ ಆರಾಮ!

ನೈತಿಕತೆಯು ಪ್ರದರ್ಶನಪ್ರಿಯತೆ ಆಗಿರುವ ಹೊತ್ತಿನಲ್ಲಿ ‘ಸ್ವಚ್ಛ ಭಾರತ’ ಪ್ರದರ್ಶನ

ಚ.ಹ.ರಘುನಾಥ
Published 29 ಸೆಪ್ಟೆಂಬರ್ 2019, 19:46 IST
Last Updated 29 ಸೆಪ್ಟೆಂಬರ್ 2019, 19:46 IST
   

ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ಉದ್ಗರಿಸಿದ್ದರು. ಹೀಗೆ, ಪ್ರಧಾನಿಯವರು ಹೇಳಿದ ಎರಡು– ಮೂರು ದಿನಗಳ ನಂತರ ಮಧ್ಯಪ್ರದೇಶದಲ್ಲಿ ಇಬ್ಬರು ದಲಿತ ಮಕ್ಕಳನ್ನು ಥಳಿಸಿ ಕೊಲ್ಲಲಾಯಿತು. ಬಯಲಲ್ಲಿ ಶೌಚ ಮಾಡಿದ್ದು ಎಳೆಯರು ಮಾಡಿದ ತಪ್ಪು. 10-12 ವಯಸ್ಸಿನ ಆ ಮಕ್ಕಳು ದಾರುಣವಾಗಿ ಸಾಯುವ ಒಂದು ವಾರದ ಮೊದಲು, ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಅಗತ್ಯ ರಕ್ಷಣಾ ಸೌಲಭ್ಯಗಳನ್ನು ನೀಡದೆ ಜನರನ್ನು ಮ್ಯಾನ್‌ಹೋಲ್‌ಗಳಿಗೆ ಇಳಿಸುವ ಅಮಾನವೀಯ ಮತ್ತು ಅನಾಗರಿಕ ಪದ್ಧತಿಯ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ‘ಜಗತ್ತಿನ ಯಾವ ದೇಶವೂ ಈ ರೀತಿಯಾಗಿ ಜನರನ್ನು ಗ್ಯಾಸ್ ಚೇಂಬರಿಗೆ ಕಳುಹಿಸಿ ಸಾಯಿಸುವುದಿಲ್ಲ. ಅಸ್ಪೃಶ್ಯತೆ- ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ. ಮ್ಯಾನ್‌ಹೋಲ್‌ಗೆ ಇಳಿದು ಕೆಲಸ ಮಾಡುವವರ ಕೈಕುಲುಕಲು ಜನ ಈಗಲೂ ಹಿಂಜರಿಯುತ್ತಾರೆ’ ಎಂದು ಕೋರ್ಟ್ ಹೇಳಿತ್ತು. ಈ ಮಾತುಗಳ ಜೊತೆಗೆ, ಕಳೆದೊಂದು ವರ್ಷದಲ್ಲಿ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ 380ಕ್ಕೂ ಹೆಚ್ಚು ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ ಎನ್ನುವ ಬೆಜವಾಡ ವಿಲ್ಸನ್‌ ಅವರ ಮಾತನ್ನೂ ನೆನಪಿಸಿಕೊಳ್ಳಬೇಕು.

ದಲಿತ ಮಕ್ಕಳ ಕೊಲೆ ಹಾಗೂ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎನ್ನುವ ಸುಪ್ರೀಂ ಕೋರ್ಟ್ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ‘ಎಲ್ಲವೂ ಕ್ಷೇಮ’ ಎನ್ನುವ ಮೋದಿಯವರ ಮಾತನ್ನು ಹೇಗೆ ಅರ್ಥೈಸುವುದು? ಆ ಮಾತಿಗೆ ಇರಬಹುದಾದ ಅರ್ಥಗಳೆಂದರೆ: ಪ್ರಧಾನಿಯವರು ಸುಳ್ಳು ಹೇಳುತ್ತಿದ್ದಾರೆ, ಇಲ್ಲವೇ ಅವರು ತಮ್ಮ ಆತ್ಮಸಾಕ್ಷಿಯನ್ನು ವಂಚಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಸಾಧ್ಯತೆಯೂ ಇದೆ- ಮುಗ್ಧತೆ. ಈ ಮೂರು ಸಾಧ್ಯತೆಗಳಲ್ಲಿ ಮುಗ್ಧತೆಯ ಹೊರತಾಗಿ ಉಳಿದೆರಡು ಸಾಧ್ಯತೆಗಳೇ ಎದ್ದುಕಾಣುತ್ತವೆ. ಮೋದಿಯವರು ಮಾತ್ರವಲ್ಲ, ದೇಶದ ಬಹುಸಂಖ್ಯಾತರು ಸಾಮಾಜಿಕ ಕಟು ವಾಸ್ತವಗಳಿಗೆ ಬೆನ್ನುಹಾಕಿ ತಮ್ಮನ್ನು ತಾವು ವಂಚಿಸಿಕೊಳ್ಳುವುದರಲ್ಲೇ ಸುಖ ಕಾಣುತ್ತಾರೆ. ಯು.ಆರ್. ಅನಂತಮೂರ್ತಿಯವರ ಸಂಸ್ಮರಣೆ ಉಪನ್ಯಾಸ (ಆ. 24ರಂದು) ನೀಡಿದ ವಿಲ್ಸನ್ ಹೇಳಿದ್ದು ಇದನ್ನೇ: ‘ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ’.

ಕೈಗಳಿಂದ ಮಲ ಬಾಚುವ, ಸ್ವಚ್ಛಗೊಳಿಸುವ ಪದ್ಧತಿ ನಮ್ಮಲ್ಲಿ ಯಾಕಿನ್ನೂ ಉಳಿದಿದೆ? ಇದಕ್ಕೆ ಉತ್ತರವಾಗಿ, ಬಡತನ, ಹಸಿವು, ಅನಕ್ಷರತೆಗಳನ್ನು ಹೆಸರಿಸಲಾಗುತ್ತದೆ. ಆದರೆ, ಈ ಕಾರಣಗಳೆಲ್ಲ ಸುಳ್ಳು ಎನ್ನುತ್ತಾರೆ ಪೌರಕಾರ್ಮಿಕರ ಹಕ್ಕುಗಳ ಹೋರಾಟಗಾರ ಬೆಜವಾಡ ವಿಲ್ಸನ್. ‘ಎಲ್ಲ ಬಡವರೂ ಈ ಕೆಲಸ ಮಾಡುವುದಿಲ್ಲ. ಅನಕ್ಷರಸ್ಥರೆಲ್ಲ ಮತ್ತೊಬ್ಬರ ಮನೆಯ ಶೌಚಾಲಯ ತೊಳೆಯಲು ಬಯಸುವುದಿಲ್ಲ. ಸಮಾಜದ ಒಂದು ವರ್ಗ ಮಾತ್ರ ಈ ಕೆಲಸ ಮಾಡುತ್ತಿದೆ, ಮಾಡುವಂತೆ ನೋಡಿಕೊಳ್ಳಲಾಗುತ್ತಿದೆ’ ಎನ್ನುವ ಅವರು– ‘ನಮ್ಮಲ್ಲಿ ಜಾತಿ ಪದ್ಧತಿ ಇದೆ, ಅಸ್ಪೃಶ್ಯತೆ ಇದೆ ಎನ್ನುವ ವಾಸ್ತವವನ್ನು ಮೊದಲು ಒಪ್ಪಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ. ಆದರೆ, ಆಗುತ್ತಿರುವುದಾದರೂ ಏನು? ಅದಕ್ಕೂ ವಿಲ್ಸನ್ ಅವರೇ ಉತ್ತರಿಸುತ್ತಾರೆ: ‘ಈ ದೇಶದಲ್ಲಿ ಇರುವುದು ಎರಡೇ ಜಾತಿ– ಉಳ್ಳವರು ಹಾಗೂ ಬಡವರು ಎಂದು ಪ್ರಧಾನಿ ಸುಳ್ಳು ಹೇಳುತ್ತಾರೆ. ಸ್ವಚ್ಛ ಭಾರತದ ಹೆಸರಿನಲ್ಲಿ ಪೊರಕೆ ಹಿಡಿದು ಫೋಟೊ ತೆಗೆಸಿಕೊಂಡು ‘ನಾವೆಲ್ಲ ಶುಚಿಯಾಗಿದ್ದೇವೆ’ ಎನ್ನುತ್ತಾರೆ’. ವಿಲ್ಸನ್‌ರ ಮಾತಿನ ಆಶಯ ಇಷ್ಟೇ: ಸಮಾನತೆಯ ಭಾರತ, ಜಾತ್ಯತೀತ ಭಾರತ ಎನ್ನುವುದು ಸುಳ್ಳುಗಳ ಹಂದರದ ಮೇಲೆ ನಿಂತಿರುವ ಪರಿಕಲ್ಪನೆಗಳು.

ADVERTISEMENT

ಅವರ ಮಾತು ಮುಂದುವರೆಯುತ್ತದೆ. ‘ಭಾರತದಲ್ಲಿ 6.25 ಲಕ್ಷ ಹಳ್ಳಿಗಳಿವೆ. ಆದರೆ, ಎಲ್ಲ ಜಾತಿಯವರೂ ಒಂದೆಡೆ ವಾಸಿಸೋಣ ಎನ್ನುವ ಒಂದು ಹಳ್ಳಿಯೂ ಇಲ್ಲ. ನಾವೆಲ್ಲರೂ ಒಂದು ಎಂದು ಸಂವಿಧಾನ ಹೇಳುತ್ತದೆ. ಆದರೆ ಸಾಮಾಜಿಕ ವಾಸ್ತವವೇ ಬೇರೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ನಮ್ಮಲ್ಲಿ ಸಮಾನತೆ ಸಾಧ್ಯವಾಗಿಲ್ಲ. ಸಂವಿಧಾನ ಮತ್ತು ಸಾಮಾಜಿಕ ವಾಸ್ತವದ ನಡುವಣ ಸಂಘರ್ಷ ಮುಂದುವರಿದೇ ಇದೆ.’

ಅ. 2ಕ್ಕೆ ‘ಸ್ವಚ್ಛ ಭಾರತ’ ಆಂದೋಲನಕ್ಕೆ ಐದು ವರ್ಷ ತುಂಬುತ್ತಿದೆ. ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಗೆ ನಾವು ನೀಡಬಹುದಾದ ಅತ್ಯುತ್ತಮ ಕೊಡುಗೆ ‘ಸ್ವಚ್ಛ ಭಾರತ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಈ ಸ್ವಚ್ಛ ಭಾರತದಲ್ಲಿ ಜನರಿಗೆ ಸ್ಥಾನವಿಲ್ಲವೆ?

ವಿಲ್ಸನ್ ಹೇಳುವ ಪೆನುಗೊಂಡದ ರಾಮಕ್ಕನ ಕಥೆ ಕೇಳಿ. ಆಕೆಯ ಅಮ್ಮ ಯಾರದೋ ಮನೆಯಲ್ಲಿ ಗಲೀಜು ಬಳಿಯುತ್ತಿದ್ದಳು. ಆಕೆ ಒಮ್ಮೆ ಕಾಯಿಲೆಬಿದ್ದಾಗ, ಯಜಮಾನರು ಕರುಣೆತೋರಿ: ‘ನೀನು ಬರದಿದ್ದರೆ ಪರವಾಗಿಲ್ಲ. ಯಾರನ್ನಾದರೂ ಕಳುಹಿಸು’ ಎಂದರು. ಅಮ್ಮನ ಬದಲಿಗೆ ಕೆಲಸಕ್ಕೆ ಹೋದಾಗ ರಾಮಕ್ಕನಿಗೆ ಎಂಟು ವರ್ಷ. ಗಲೀಜು ಬಳಿಯುವಾಗ ಅತ್ತಳು, ವಾಂತಿ ಮಾಡಿಕೊಂಡಳು. ರಾಮಕ್ಕನ ಊರಿನ ಬಳಿಯ ಗುಡ್ಡದಲ್ಲಿ ಕೋದಂಡರಾಮನ ಗುಡಿಯಿತ್ತು. ರಾಮದೇವರಿಗೆ ನಮಸ್ಕರಿಸಿದ ಬಾಲಕಿ ರಾಮಕ್ಕ ಪ್ರಾರ್ಥಿಸಿದ್ದು ಇಷ್ಟೇ: ‘ಮದುವೆಯ ನಂತರವಾದರೂ ಈ ಕೆಲಸದಿಂದ ನನಗೆ ಬಿಡುಗಡೆ ಸಿಗಲಿ. ಭಂಗಿಯ ಕೆಲಸ ಮಾಡುವ ಗಂಡ ನನಗೆ ಸಿಗದಿರಲಿ’. ರಾಮಕ್ಕನಿಗೆ ಹನ್ನೆರಡು ವರ್ಷವಾದಾಗ, ‘ನಿನ್ನ ಮಾಮನನ್ನು ಮದುವೆಯಾಗು’ ಎಂದು ಅಮ್ಮ ಹೇಳಿದಳು. ಆತ ಮಾಡುತ್ತಿದ್ದುದೂ ಮಲ ಬಳಿಯುವ ಕೆಲಸವನ್ನೇ. ಮದುವೆಯ ನಂತರವೂ ರಾಮಕ್ಕ ಹಾಗೂ ಅವಳ ಗಂಡನ ಕೆಲಸ ಮುಂದುವರಿಯಿತು. ತನಗೆ ಬಿಡುಗಡೆ ಕಲ್ಪಿಸುವ ಶಕ್ತಿ ಕೋದಂಡರಾಮನಿಗಿಲ್ಲ ಎನ್ನುವುದು ಆಕೆಗೆ ಅರ್ಥವಾಯಿತು. ರಾಮಕ್ಕನಿಗೆ ತನ್ನ ಕೆಲಸ ಇಷ್ಟವಿರಲಿಲ್ಲ. ಕೆಲಸಕ್ಕೆ ಹೋಗದಿದ್ದರೆ ಗಂಡನಿಂದ ಪೆಟ್ಟು ತಿನ್ನಬೇಕಾಗಿತ್ತು, ಮೇಸ್ತ್ರಿ ಆಬ್ಸೆಂಟ್ ಹಾಕುತ್ತಿದ್ದ. ರಾಮಕ್ಕ ಒಂದು ಉಪಾಯ ಕಂಡುಕೊಂಡಳು. ಶೌಚಾಲಯದಲ್ಲಿ ಮಲದ ಸುತ್ತ ಪೊರಕೆಯಿಂದ ಗುರುತು ಮಾಡಿ ಬಂದುಬಿಡುತ್ತಿದ್ದಳು. ಮೇಸ್ತ್ರಿ ಕೇಳಿದರೆ, ‘ನಾನು ಸ್ವಚ್ಛಗೊಳಿಸಿದ್ದೆ. ಆಮೇಲೆ ಯಾರೋ ಗಲೀಜು ಮಾಡಿದ್ದಾರೆ’ ಎನ್ನುತ್ತಿದ್ದಳು. ಇದು ರಾಮಕ್ಕನ ಪ್ರತಿಭಟನೆ. ಹೀಗೆ ಸಾವಿರಾರು ರಾಮಕ್ಕರು ತಲೆಮಾರುಗಳಿಂದ ವ್ಯವಸ್ಥೆಯೊಳಗೆ ಇದ್ದುಕೊಂಡೇ ಸಫಾಯಿ ಕರ್ಮಚಾರಿ ಆಂದೋಲನವನ್ನು ರೂಪಿಸಿದ್ದಾರೆ ಎನ್ನುತ್ತಾರೆ ವಿಲ್ಸನ್. ರಾಮಕ್ಕನ ಕಥೆಯನ್ನು ಹೀಗೂ ನೋಡಬಹುದು. ಮಲದ ಸುತ್ತ ಗುರುತು ಮಾಡುವ ಕೆಲಸವನ್ನು ಈಗ ರಾಮಕ್ಕನ ಬದಲು ನಾವೆಲ್ಲ ಮಾಡುತ್ತಿದ್ದೇವೆ. ಹೀಗೆ ಮಾಡುವ ಮೂಲಕ ‘ಸ್ವಚ್ಛ ಭಾರತ’ ಎಂದು ಸಂಭ್ರಮಿಸುತ್ತಿದ್ದೇವೆ. ‘ದೇಶದಲ್ಲಿ ಎಲ್ಲರೂ ಕ್ಷೇಮ, ಎಲ್ಲವೂ ಆರಾಮ’ ಎಂದು ವಂಚಿಸಿಕೊಳ್ಳುತ್ತಿದ್ದೇವೆ. ಮಲದ ರಾಶಿ ಮಾತ್ರ ಹಾಗೆಯೇ ಇದೆ.

ಪ್ರಧಾನಿಯವರ ಪ್ರಕಾರ, ಮಲದ ಗುಂಡಿ ಸ್ವಚ್ಛಗೊಳಿಸುವುದು ಆಧ್ಯಾತ್ಮಿಕ ಸಂತುಷ್ಟಿ ನೀಡುವ ಕೆಲಸ. ‘ಸ್ವಚ್ಛ ಭಾರತ’ದ ಕೇಂದ್ರದಲ್ಲಿ ಬೆದರುಗೊಂಬೆಯಂತೆ ನಿಲ್ಲಿಸಲಾಗಿರುವ ಮಹಾತ್ಮ ಗಾಂಧಿಗೂ ಶೌಚಾಲಯವನ್ನು ತೊಳೆಯುವುದು ಅಧ್ಯಾತ್ಮದಂತೆಯೇ ಕಾಣಿಸಿತ್ತು. ವ್ಯತ್ಯಾಸ ಇಷ್ಟೇ: ರಾಷ್ಟ್ರಪಿತ ಸ್ವತಃ ತಾವೇ ಇನ್ನೊಬ್ಬರ ಶೌಚ ಬಳಿಯಲು ಹಿಂಜರಿಯಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅತಿಥಿಯ ಶೌಚಾಲಯವನ್ನು ಬಳಸಲು ಹಿಂಜರಿದ ಪತ್ನಿಯನ್ನೇ ದಂಡಿಸಲು ಗಾಂಧೀಜಿ ಮುಂದಾಗಿದ್ದರು. ಆ ಕಟು ನೈತಿಕತೆ ಈಗ ಪ್ರಚಾರಪ್ರಿಯತೆಯ ರೂಪ ತಾಳಿದೆ. ಗಾಂಧೀಜಿ ಪಾಲಿಗೆ ಆತ್ಮಶುದ್ಧೀಕರಣದ ರೂಪವಾಗಿದ್ದ ಶೌಚ ಬಳಿಯುವ ಕ್ರಿಯೆ, ‘ಹೊಸ ರಾಷ್ಟ್ರಪಿತ’ನ ಪಾಲಿಗೆ ಫೋಟೊ ಸೆಷನ್ ಆಗಿದೆ.

‘ಸ್ವಚ್ಛ ಭಾರತ’ದ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಆಂದೋಲನದ ಜಾಹೀರಾತಿಗಾಗಿಯೇ ನೂರಾರು ಕೋಟಿ ರೂಪಾಯಿ ಗುಡಿಸಲಾಗಿದೆ. ‘ಚಂದ್ರಯಾನ 2’ ಯೋಜನೆಗೆ ₹ 978 ಕೋಟಿ ಖರ್ಚು ಮಾಡುವ ಸಾಮರ್ಥ್ಯ ದೇಶಕ್ಕಿದೆ. ಆದರೆ, ಪೌರಕಾರ್ಮಿಕರಿಗೆ ಗೌರವದ ಬದುಕು ಕಲ್ಪಿಸಿಕೊಡಲು, ಶೌಚದ ಸ್ವಚ್ಛತೆಯನ್ನು ಯಾಂತ್ರೀಕರಣಗೊಳಿಸಲು ನಮ್ಮಲ್ಲಿ ಯೋಜನೆಗಳಿಲ್ಲ. ಏಕೆಂದರೆ, ಭಾರತದಲ್ಲಿ ಯಾವುದೇ ಸಮಸ್ಯೆಯಿಲ್ಲ. ಇಲ್ಲಿ ಎಲ್ಲವೂ ಸುಂದರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.