ADVERTISEMENT

ಪಡಸಾಲೆ: ತಿರುಪತಿ ಲಡ್ಡು ಮತ್ತು ನಮ್ಮ ಜಡ್ಡು

ಪ್ರತಿದಿನವೂ ಜನರಿಗೆ ಉಣಿಸಲಾಗುತ್ತಿರುವ ಬಗೆ ಬಗೆ ಲಾಡುಗಳ ಬಗ್ಗೆ ಯೋಚಿಸುವವರು ಯಾರು?

ಚ.ಹ.ರಘುನಾಥ
Published 23 ಸೆಪ್ಟೆಂಬರ್ 2024, 21:51 IST
Last Updated 23 ಸೆಪ್ಟೆಂಬರ್ 2024, 21:51 IST
   

‘ಲಡ್ಡು ಬಂದು ಬಾಯಿಗೆ ಬಿತ್ತಾ?’ ಎನ್ನುವುದು ಜನಪ್ರಿಯ ಜಾಹೀರಾತೊಂದರ ಮಾತು. ಜಾಹೀರಾತಿನಲ್ಲಿ ಲಡ್ಡು ಬಾಯಿಗೆ ಬಿದ್ದವರ ಮೊಗದಲ್ಲಿ ಸಂತಸ ಮಿನುಗಿದರೆ, ‘ಲಡ್ಡು ಬಿತ್ತಾ’ ಎಂದು ಪ್ರಶ್ನಿಸುವವರ ಮೊಗದಲ್ಲಿ ನಿರಾಶೆ ಇಣುಕುತ್ತದೆ. ಲಡ್ಡು ಬಾಯಿಗೆ ಬಿದ್ದರೆ ಯಾರ ಮೊಗ ಅರಳುವುದಿಲ್ಲ? ಆದರೆ, ಲಡ್ಡು ತಿಂದವರು ಮುಖ ಚಿಕ್ಕದು ಮಾಡಿಕೊಳ್ಳುವ ವಿರೋಧಾಭಾಸ ಇಂದಿನದು. ಅದೂ, ಎಂದೋ ತಿಂದ ಲಡ್ಡು ಈಗ ತನ್ನ ಪರಿಣಾಮ ತೋರುತ್ತಿದೆ; ಆಗ ರುಚಿಯೆನ್ನಿಸಿದ್ದು ಈಗ ಕಹಿಯೆನ್ನಿಸುತ್ತಿದೆ! ‘ಅಗುಳಿನ ಮೇಲೆ ಅನ್ನದ ಪರೀಕ್ಷೆ’ ಎನ್ನುವ ಮಾತನ್ನು ‘ಕೊಬ್ಬಿನ ಮೇಲೆ ಲಡ್ಡು ಪಾವಿತ್ರ್ಯದ ಪರೀಕ್ಷೆ’ ಎಂದು ಹೇಳಬಹುದೆ?

ಆಹಾರದಲ್ಲಿ ಕಲಬೆರಕೆ ಹೊಸತೂ ಅಲ್ಲ, ಅಚ್ಚರಿಯ ಸಂಗತಿಯೂ ಅಲ್ಲ. ಕಲಬೆರಕೆ ಇಲ್ಲದ ಪದಾರ್ಥ ಜೀರ್ಣವಾಗುವುದಿಲ್ಲ ಎನ್ನುವ ಮಟ್ಟಿಗೆ ಕಲಬೆರಕೆ ಆಹಾರ ನಮ್ಮ ದೇಹಕ್ಕೆ ಒಗ್ಗಿಕೊಂಡಿದೆ. ಹಣ್ಣು– ತರಕಾರಿಗಳೆಲ್ಲ ಕ್ರಿಮಿನಾಶಕಗಳಲ್ಲಿ ಮಿಂದು, ಕ್ರಿಮಿನಾಶಕಗಳನ್ನೇ ಉಂಡು ಒಡಲು ಸೇರುತ್ತಿರುವಾಗ, ‘ಸಾಹಿತ್ಯದಲ್ಲಿ ಶುದ್ಧತೆಯೆನ್ನುವುದಿಲ್ಲ’ ಎನ್ನುವ ಪರಿಕಲ್ಪನೆಯನ್ನು ಆಹಾರಕ್ಕೂ ಅನ್ವಯಿಸಬಹುದು. ಆದರೆ, ದೇವರ ಹೆಸರಿನಲ್ಲಿ ನೀಡುವ ಪ್ರಸಾದವೂ ಕಲಬೆರಕೆ ಆಗಬಹುದೆ? ತಿರುಪ‍ತಿ ತಿಮ್ಮಪ್ಪನ ಲಾಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿದೆ ಎನ್ನುವುದು ನಿಜವೆನ್ನುವುದಾದರೆ, ಕಲಬೆರಕೆಗೆ ದೇವರ ಪ್ರಸಾದವೂ ಹೊರತಲ್ಲ ಎನ್ನುವ ತೀರ್ಮಾನಕ್ಕೆ ಬರಬಹುದೇನೊ?

ತಿರುಪತಿ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿರುವ ಪ್ರಕರಣವನ್ನು ಜನರ ನಂಬಿಕೆಗೆ ಎಸಗಿದ ದ್ರೋಹ ಎಂದು ಚರ್ಚಿಸಲಾಗುತ್ತಿದೆ. ಭಕ್ತರ ಭಾವನೆಗಳಿಗೆ ಗಾಸಿಯಾಗಿದೆ, ವಿಶ್ವಾಸದ್ರೋಹವಾಗಿದೆ ಎನ್ನುವುದು ನಿಜವಾದರೂ, ಈ ವಂಚನೆ ಅನಿರೀಕ್ಷಿತವಲ್ಲ, ಅಚ್ಚರಿ ಹುಟ್ಟಿಸುವಂತಹದ್ದೂ ಅಲ್ಲ. ಲಾಡುವಿನಲ್ಲಿ ಬೆರೆತಿದ್ದುದು ಪ್ರಾಣಿಯ ಕೊಬ್ಬಷ್ಟೇ, ವಿಷವೋ ಮಾದಕ ವಸ್ತುವೋ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕಾದ ಅಸಹಾಯಕ ಸ್ಥಿತಿ ಇಂದಿನದು.

ADVERTISEMENT

ದೇವರ ಹೆಸರಿನಲ್ಲಿ ನಡೆಯುವುದೆಲ್ಲವೂ ‘ನಿರ್ಮಲ ಭಕ್ತಿ’ ಎಂದು ಯಾರಾದರೂ ಭಾವಿಸಿದ್ದರೆ, ಆ ಭ್ರಮೆಯ ಬಲೂನಿಗೆ ತಾಗಿರುವ ಸೂಜಿಮೊನೆಯ ರೂಪದಲ್ಲಿ ತಿರುಪತಿ ಲಾಡುಗಳ ಪ್ರಸಂಗವನ್ನು ನೋಡಬಹುದು. ಯಾವ ವ್ಯವಸ್ಥೆ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರ ಭಾವನೆಗಳೊಂದಿಗೆ ವ್ಯವಹರಿಸುತ್ತಿದೆಯೋ, ಆ ವ್ಯವಸ್ಥೆಗೆ ದೇವರು ಕೂಡ ವ್ಯವಹಾರದ ಭಾಗವಷ್ಟೇ ಎನ್ನುವುದನ್ನು ಸಾಬೀತುಪಡಿಸುವ  ಘಟನೆಯಿದು.

ಒಂದು ವ್ಯವಸ್ಥೆ ಲಾಡು ತಿನ್ನಿಸಿ ವಂಚಿಸಿದರೆ, ಇನ್ನೊಂದು ವ್ಯವಸ್ಥೆ ಶುದ್ಧೀಕರಣದ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದೆ. ಈ ಶುದ್ಧೀಕರಣವೂ ವ್ಯವಹಾರವೇ. ಹೀಗೆ ಶುದ್ಧೀಕರಣದ ಮಾತನಾಡುವವರಲ್ಲಿ ಕಾಳಜಿಗಿಂತಲೂ ಹೆಚ್ಚಾಗಿ, ತಮ್ಮ ಅಸ್ತಿತ್ವ ಚಾಲ್ತಿಯಲ್ಲಿಡುವ ಸಮಯಸಾಧಕತನವೇ ಹೆಚ್ಚಾಗಿರುತ್ತದೆ. ಗಾಳಿ ಬಂದಾಗ ತೂರಿಕೊಳ್ಳುವ ವ್ಯವಹಾರಿಗಳು ದೇವರನ್ನೂ ಅರಿಯರು, ವಿಜ್ಞಾನವನ್ನೂ ತಿಳಿಯರು. ದೇವರಿಗೆ ಅರ್ಪಿತವಾದ ನೈವೇದ್ಯವೆಲ್ಲವೂ ಪವಿತ್ರವಾಗುವುದರಿಂದ, ಲಾಡು ತಿಂದು ಮೈಲಿಗೆಯಾಯಿತೆಂದು ಭಾವಿಸುವುದು ಹಿಂದೂ ಧರ್ಮದ ನಂಬಿಕೆಗೆ ವಿರುದ್ಧವಾದುದಷ್ಟೇ ಅಲ್ಲ, ದೈವಕ್ಕೆ ಎಸಗುವ ಅಪಚಾರವೂ ಹೌದು.

ಎಂದೋ ತಿಂದ ಆಹಾರ ಮೈಲಿಗೆ ರೂಪದಲ್ಲಿ ಈಗಲೂ ಉಳಿದಿದೆಯೆಂದು ಭಾವಿಸುವುದು ದೇಹಕ್ಕೆ ಹಾಗೂ ವಿಜ್ಞಾನಕ್ಕೆ ಎಸಗುವ ಅಪಚಾರ. ವಿಪರ್ಯಾಸ ನೋಡಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯನ್ನು ಶುದ್ಧೀಕರಿಸಲು ಹಂಬಲಿಸುತ್ತಿರುವವರು ಹಾಗೂ ಕಲಬೆರಕೆ ಲಾಡು ತಿಂದವರು ಶುದ್ಧೀಕರಣ ಮಾಡಿಕೊಳ್ಳಬೇಕೆಂದು ಕರೆ ನೀಡುತ್ತಿರುವವರು, ಹಿಂದೊಮ್ಮೆ ಇದೇ ನಾಡಿನ ರಾಜಕಾರಣ ಕಲಬೆರಕೆಗೊಂಡು ವಿಶ್ವದೆದುರು ನಾರುತ್ತ ಪ್ರಜಾಪ್ರಭುತ್ವಕ್ಕೆ ನಂಜುಣಿಸಿದ್ದಾಗ ‘ಶುದ್ಧೀಕರಣ’ದ ಮಾತನಾಡುವುದಿರಲಿ, ಆ ಕಲಬೆರಕೆ ರಾಜಕಾರಣಕ್ಕೆ ಒತ್ತಾಸೆಯಾಗಿ ನಿಂತಿದ್ದರು.

ಲಡ್ಡುವಿನಲ್ಲಿನ ಕೊಬ್ಬಿನ ಮೂಲ ಹುಡುಕುವಂಥ ಪ್ರಯತ್ನಗಳು ಸ್ವಲ್ಪ ಸಮಯದ ನಂತರ ತಂತಾನೇ ತಣ್ಣಗಾಗುತ್ತವೆ. ಪ್ರಯೋಜನ ಇರುವುದು, ಲಡ್ಡು ಪ್ರಸಂಗವನ್ನು ಪಾಠವಾಗಿ ಪರಿವರ್ತಿಸಿಕೊಳ್ಳುವುದರಲ್ಲಿ. ದೇವರು, ಧರ್ಮವೂ ಈಗ ವ್ಯವಹಾರದಿಂದ ಹೊರತಲ್ಲ ಎನ್ನುವ ಪಾಠವದು. ಅಮಲಿನ ರೂಪದಲ್ಲಿ ದೇವರು–ಧರ್ಮವನ್ನು ದಾಟಿಸಲು ಪ್ರಯತ್ನಿಸುವವರು ಯಾರೇ ಆದರೂ, ಅವರು ಹದಿನಾರಾಣೆ ವ್ಯಾಪಾರಸ್ಥರು ಎಂದರ್ಥ. ಇಂಥ ವ್ಯಾಪಾರಸ್ಥರು ಮಠ ಮಂದಿರ ಮಸೀದಿಗಳಲ್ಲಿದ್ದಾರೆ, ವಿಧಾನಸಭೆಗಳಲ್ಲಿ, ಪಾರ್ಲಿಮೆಂಟಿನಲ್ಲಿ ಇದ್ದಾರೆ, ಎಲ್ಲೆಡೆಯೂ ಇದ್ದಾರೆ. ಈ ವ್ಯಾಪಾರಿಗಳು ತಮ್ಮ ಹಿತಕ್ಕಾಗಿ ದೇವರ ಉತ್ಸವಗಳನ್ನು ಬಳಸಿಕೊಳ್ಳಬಲ್ಲರು, ಲಾಡುವಿನಲ್ಲಿ ಪ್ರಾಣಿಜನ್ಯ ಕೊಬ್ಬು ಬೆರೆಸಬಲ್ಲರು, ವಿರೋಧಿಗಳನ್ನು ದಮನಗೊಳಿಸಲು ಸೋಂಕುಗಳ ಹಾದರಕ್ಕೂ ಹಿಂಜರಿಯರು. ಇಂಥವರನ್ನು ನೆಚ್ಚಿಕೊಂಡು ಸಂಸ್ಕೃತಿ–ಧರ್ಮ ಎಂದು ಹೊಡೆದಾಡುವ ಬಹುತೇಕರು ತಮ್ಮರಿವಿಗೆ ಬಾರದೆಯೇ ತಮ್ಮ ಗುಂಡಿ ತಾವೇ ತೋಡಿಕೊಳ್ಳುತ್ತಿರುತ್ತಾರೆ. ಹೋರಾಟ ಹಾರಾಟವೆಲ್ಲ ವ್ಯಾಪಾರದ ಭಾಗ ಎಂದು ತಿಳಿಯದೆ ಹೋದವರು ತಾವೇ ಮಿಕಗಳಾಗುವ ದುರಂತಕ್ಕೆ ವರ್ತಮಾನದಲ್ಲಿ ಮಾತ್ರವಲ್ಲ, ಇತಿಹಾಸದಲ್ಲೂ ನಿದರ್ಶನಗಳಿವೆ.

ನಂಬಿಕೆದ್ರೋಹದ ನಾನಾ ನಮೂನೆಗಳು ಅನಾವರಣಗೊಳ್ಳುತ್ತಿರುವ ಕಾಲಘಟ್ಟವಿದು. ಜನರಿಂದ ಆರಿಸಿಬಂದ ಪ್ರತಿನಿಧಿಯೊಬ್ಬ ತನ್ನ ವಿರೋಧಿಗಳನ್ನು ಹಣಿಯಲು ಎಚ್‌ಐವಿ ಸೋಂಕಿತರನ್ನು ಬಳಸಿಕೊಳ್ಳುತ್ತಿದ್ದನೆನ್ನುವ ಪ್ರಕರಣ ಸುದ್ದಿಯಲ್ಲಿದೆ. ಇದಕ್ಕಿಂತಲೂ ಮಿಗಿಲಾದ ದ್ರೋಹ ಮತ್ತೊಂದುಂಟೆ? ಪುರಾಣ, ಚರಿತ್ರೆಗಳಲ್ಲಿನ ವಿಷಕನ್ಯೆಯರ ಬಳಕೆಯ ಪ್ರಸಂಗಗಳನ್ನು ಮೀರಿಸುವಂಥ ಕ್ರೌರ್ಯದ ಮನಃಸ್ಥಿತಿ ಹೇಸಿಗೆ ಹುಟ್ಟಿಸುವಂತಹದ್ದು. ಕಳವಳದ ಸಂಗತಿಯೆಂದರೆ, ಜನಪ್ರತಿನಿಧಿಗಳ ಅಪರಾಧ ಕೃತ್ಯಗಳು ಮತದಾರರ ಪಾಲಿಗೆ ವಿಶ್ವಾಸದ್ರೋಹವಾಗಿ ಕಾಣಿಸದೆ ರೋಚಕ–ರಂಜಕ ಪ್ರಸಂಗಗಳಾಗಿ ಕಾಣಿಸುತ್ತಿವೆ. ನೈತಿಕತೆಯಲ್ಲಾದ ಈ ರಾಜಿ–ಪಲ್ಲಟಕ್ಕೂ ಪ್ರಜಾಪ್ರಭುತ್ವ ಸೌಧದಲ್ಲಿ ಬಿರುಕುಗಳು ಉಂಟಾಗುತ್ತಿರುವುದಕ್ಕೂ ಸಂಬಂಧವಿದೆ. ಜನರ ತೀರ್ಪನ್ನು ಧಿಕ್ಕರಿಸಿ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ರಾಜಕಾರಣಿಯನ್ನು ಮತ್ತೆ ಚುನಾಯಿಸುವುದಾದರೆ ‘ಆತ್ಮಸಾಕ್ಷಿ’ ಎನ್ನುವುದಕ್ಕೆ ಅರ್ಥವೆಲ್ಲಿ?

ವ್ಯಕ್ತಿ ಹಾಗೂ ಸಮಷ್ಟಿ ನೆಲೆಯಲ್ಲಿನ ನೈತಿಕ ಬಿರುಕುಗಳನ್ನು ಗಮನಿಸಿದರೆ, ಜನಸಾಮಾನ್ಯರ ಬದುಕುಗಳೊಂದಿಗೆ ಆಡುತ್ತಿರುವ ವ್ಯಾಪಾರಸ್ಥರು ನಮ್ಮ ಕೈಗೊಂದು ಲಡ್ಡು ಕೊಟ್ಟು, ಬಾಯಿಗೊಂದು ಲಡ್ಡು ತುರುಕಿದಂತೆ ಕಾಣಿಸುತ್ತದೆ. ಅದು ಕಲಬೆರಕೆ ಲಡ್ಡು, ಆರೋಗ್ಯಕ್ಕೆ ಹಾನಿಕರ ಎನ್ನುವುದು ನಮಗೆ ತಿಳಿಯದ್ದೇನೂ ಅಲ್ಲ. ‌ಕಾರ್ಕೋಟಕವನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಮೈಮನಸ್ಸುಗಳಿಗೆ ಸಿದ್ಧಿಸಿರುವ ನಂಬಿಕೆಯಲ್ಲಿ ಅವರಿವರು ಬಾಯಿಗೆ ತುರುಕುವ ಲಡ್ಡುವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.

ಸಮುದಾಯಗಳ ನಡುವೆ ಕಿಚ್ಚು ಹೊತ್ತಿಕೊಂಡು ಮಣಿಪುರ ಬೇಯುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಅತ್ಯಾಚಾರದ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿವೆ. ಜಾತ್ಯತೀತತೆಯ ಭಾಷಣಗಳ ನಡುವೆಯೇ ಜಾತಿನಿಂದನೆ ನಡೆಯುತ್ತದೆ. ಇವುಗಳ ಬಗ್ಗೆ ಮಾತನಾಡಬೇಕಾದವರಿಗೆ, ಕರ್ನಾಟಕದಲ್ಲೆಲ್ಲೋ ಗಣಪತಿ ಮೆರವಣಿಗೆಯಲ್ಲಿ ನಡೆದ ಗಲಭೆಯೇ ಮಾತಿನ ವಿಷಯವೆನ್ನಿಸುತ್ತದೆ. ಜನರ ಬದುಕಿಗೆ ವಿಷ ತಾಗುತ್ತಿರುವುದು ಮುಖ್ಯವೆನ್ನಿಸದ ನಾಡಿನಲ್ಲಿ, ದೇವರ ಹೆಸರಿನಲ್ಲಿ ಮಾರಾಟವಾಗುವ ಲಾಡುವಿನಲ್ಲಿ ಕಲಬೆರಕೆ ಆಗಿರುವುದು ದೊಡ್ಡ ಸಂಗತಿಯೆನ್ನಿಸುತ್ತದೆ.

ಕಲಬೆರಕೆ ಪ್ರಸಾದವನ್ನು ವಿಕ್ರಯಿಸುವುದು ನಂಬಿಕೆದ್ರೋಹವಾದಂತೆ, ಜನಪ್ರತಿನಿಧಿಗಳು ಅಥವಾ ಸ್ವಾಮೀಜಿಗಳು ಲೈಂಗಿಕ ದೌರ್ಜನ್ಯ ಎಸಗುವುದೂ ನಂಬಿಕೆದ್ರೋಹ ಹಾಗೂ ಕ್ರೌರ್ಯವೇ ಆಗಿರುತ್ತದೆ. ಈ ದ್ರೋಹ–ಕ್ರೌರ್ಯದ ಘಟನೆಗಳು, ಹಾರರ್ ಕಾದಂಬರಿಯೊಂದರ ಓದು ಅಥವಾ ಸಿನಿಮಾ ನೀಡುವ ಅನುಭವಕ್ಕಿಂತಲೂ ಹೆಚ್ಚಿನ ಕಂಪನಗಳನ್ನೇನೂ ನಮ್ಮಲ್ಲಿ ಉಂಟುಮಾಡುತ್ತಿಲ್ಲ. ಅತ್ಯಾಚಾರಿಗಳನ್ನೂ ಕೊಲೆಗಡುಕರನ್ನೂ ಮೆರವಣಿಗೆ ಮಾಡಿ ಸಂಭ್ರಮಿಸುವ, ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸುವ ಸಮಕಾಲೀನ ವಿದ್ಯಮಾನಗಳನ್ನು ನೋಡಿದರೆ, ಶ್ರೀಸಾಮಾನ್ಯನ ಮನಸ್ಸು ಕೂಡ ಹಿಂಸೆ–ಕ್ರೌರ್ಯಕ್ಕೆ ಒಗ್ಗಿಹೋಗಿರುವಂತೆ ಕಾಣಿಸುತ್ತದೆ‌, ಸ್ವಹಿಂಸೆ ಕೂಡ ಆನಂದ ತರುವ ಅಮಲಿನ ಸ್ಥಿತಿಯನ್ನು ಮುಟ್ಟಿದಂತಿದೆ.

ಲಡ್ಡುಗಳ ಮೂಲಕ ಅಸಾಧಾರಣ ಶಕ್ತಿಯನ್ನು ಪಡೆಯುವ ಡಿಜಿಟಲ್‌ ಪರದೆಯ ಕಥನಗಳಲ್ಲಿನ ‘ಚೋಟಾ ಭೀಮ್‌’ನನ್ನು ರಂಜನೆಗಷ್ಟೇ ಸೀಮಿತಗೊಳಿಸಿದ್ದೇವೆ. ‘ಭೀಮಮಾರ್ಗ’ದಿಂದ ವಿಮುಖರಾಗಿರುವುದು ಇಂದಿನ ಬಹುತೇಕ ಸಮಸ್ಯೆಗಳ ಬೀಜ. ತಿರುಪತಿ ಲಡ್ಡುವಿನ ಪಾವಿತ್ರ್ಯದ ಬಗೆಗಿನ ಚಿಂತೆಗಿಂತ ಪ್ರತಿದಿನವೂ ಜನರಿಗೆ ಉಣಿಸಲಾಗುತ್ತಿರುವ ಬಗೆಬಗೆಯ ಲಾಡುಗಳ ಬಗ್ಗೆಯೂ ಯೋಚಿಸುವುದು ಈ ಹೊತ್ತಿನ ಅಗತ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.