ADVERTISEMENT

ಪಡಸಾಲೆ ಅಂಕಣ | ರಾಜಕಾರಣ ವಿವೇಕದ ‘ರಾಜ್‌ ಮಾದರಿ’

ಚ.ಹ.ರಘುನಾಥ
Published 23 ಏಪ್ರಿಲ್ 2023, 22:05 IST
Last Updated 23 ಏಪ್ರಿಲ್ 2023, 22:05 IST
   

ಸಮಕಾಲೀನ ಸಿನಿಮಾ ಕಲಾವಿದರು ಸಕ್ರಿಯ ರಾಜಕಾರಣದ ಬಗ್ಗೆ ಮಾತನಾಡಿದಾಗ ಅಥವಾ ಪಕ್ಷ ರಾಜಕಾರಣದೊಂದಿಗೆ ಗುರುತಿಸಿಕೊಂಡಾಗ, ರಾಜ್‌ಕುಮಾರ್‌ ನೆನಪಾಗುತ್ತಾರೆ; ‘ಕಲಾವಿದ ಮತ್ತು ರಾಜಕಾರಣದ ಸಂಬಂಧ ಹೇಗಿರಬೇಕು’ ಎನ್ನುವುದಕ್ಕೆ ಮಾದರಿಯಾಗಿ ಅವರು ಕಾಣಿಸುತ್ತಾರೆ.

ರಾಜಕಾರಣದೊಂದಿಗೆ ಪ್ರಜ್ಞಾಪೂರ್ವಕ ಅಂತರ ಕಾಪಾಡಿಕೊಂಡಿದ್ದು ಕನ್ನಡನಾಡಿನ ಜನಮಾನಸದಲ್ಲಿ ರಾಜ್‌ಕುಮಾರ್‌ ನೆಲೆ ನಿಲ್ಲುವುದಕ್ಕೆ ಪ್ರಮುಖ ಕಾರಣಗಳಲ್ಲೊಂದು. ಚುನಾವಣಾ ರಾಜಕಾರಣವನ್ನು ನಿರಾಕರಿಸಿದ ಕಾರಣದಿಂದಾಗಿ, ರಾಜಕೀಯದ ಬಗ್ಗೆ ರಾಜ್‌ಕುಮಾರ್‌ ನಿರಾಸಕ್ತರಾಗಿದ್ದರು ಮತ್ತು ರಾಜಕೀಯ ಪ್ರಜ್ಞೆ ಅಷ್ಟಾಗಿ ಇರಲಿಲ್ಲ ಎನ್ನುವಂಥ ಅಭಿಪ್ರಾಯಗಳು ಆಗಾಗ ವ್ಯಕ್ತವಾಗುತ್ತವೆ. ಆದರೆ, ರಾಜ್‌ಕುಮಾರ್‌ ಅವರಲ್ಲಿ ರಾಜಕೀಯ ಎಚ್ಚರವಿತ್ತು; ಅದನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸಬೇಕು ಎನ್ನುವ ವಿವೇಕವೂ ಇತ್ತು. ಜನರ ಹಿತ ಮತ್ತು ವಿವೇಕವನ್ನು ಹಂಬಲಿಸುವ ರಾಜಕೀಯ ಪ್ರಜ್ಞೆ ಅವರದಾಗಿತ್ತು. ಅವರು ಪ್ರತಿಪಾದಿಸಿದ ರಾಜಕೀಯ ಪ್ರಜ್ಞೆ, ಒಬ್ಬರ ವಿರುದ್ಧ ಮತ್ತೊಬ್ಬರು ನಡೆಸುವ ಪಿತೂರಿಯ ಸ್ವರೂಪದ್ದಾಗಿರಲಿಲ್ಲ; ಜಾತಿ ಮತ್ತು ಅಧಿಕಾರ ಚಲಾವಣೆಯ ಅರ್ಥವನ್ನೂ ಪಡೆದುಕೊಂಡಿರಲಿಲ್ಲ.

ಓರ್ವ ಕಲಾವಿದನ ರಾಜಕೀಯ ಪ್ರಜ್ಞೆ ಪ್ರಖರವಾಗಿ ವ್ಯಕ್ತಗೊಳ್ಳಬೇಕಾದುದು ಅವನು ಅಭಿನಯಿಸುವ ಪಾತ್ರಗಳ ಮೂಲಕ ಎನ್ನುವುದಕ್ಕೆ ರಾಜ್‌ ಸಿನಿಮಾಗಳು ಅತ್ಯುತ್ತಮ ಉದಾಹರಣೆಗಳು. ಅವರ ಸಿನಿಮಾಗಳನ್ನು, ಸಮಾಜ ವಿಜ್ಞಾನ ಮತ್ತು ರಾಜಕೀಯ ವಿಜ್ಞಾನದ ಪಠ್ಯಗಳಂತೆ ನೋಡಬಹುದು. ರಾಜ್‌ ಸಿನಿಮಾಗಳು ಕೌಟುಂಬಿಕ ಆದರ್ಶದ ಮಾದರಿಗಳನ್ನು ಪ್ರತಿನಿಧಿಸುವುದರ ಜೊತೆಗೆ, ವ್ಯಸನಗಳಿಂದ ಮುಕ್ತವಾದ ಸಾಮಾಜಿಕ ಮಾದರಿಗಳನ್ನೂ ಎದುರಿಗಿಡುತ್ತವೆ. ‘ಬಂಗಾರದ ಮನುಷ್ಯ’, ‘ಮಣ್ಣಿನ ಮಗ’ ರೀತಿಯ ಸಿನಿಮಾಗಳು ಕೃಷಿ ಸಂಸ್ಕೃತಿಯ ಔನ್ನತ್ಯ ವನ್ನು ಪ್ರತಿಪಾದಿಸಿದರೆ, ‘ಜೀವನಚೈತ್ರ’, ‘ಶಬ್ದವೇಧಿ’ ಸಿನಿಮಾಗಳು ಸಾಮಾಜಿಕ ವ್ಯಸನಗಳ ವಿರುದ್ಧದ ದಿಟ್ಟ ದನಿಗಳಾಗಿವೆ. ಕಲಾವಿದನಾಗಿ ರಾಜ್‌ಕುಮಾರ್‌ ತನ್ನ ಕಾಲದ ಜನರ ಮೇಲೆ ಬೀರಿದ ಪ್ರಭಾವವನ್ನು, ನಾಡಿನ ಬೇರೆ ಯಾವುದೇ ಕಲಾವಿದನಾಗಲೀ ರಾಜಕಾರಣಿಯಾಗಲೀ ಅಥವಾ ಸ್ವಾಮೀಜಿಯಾಗಲೀ ಸಾಧಿಸುವುದು ಸಾಧ್ಯವಾಗಿಲ್ಲ. ಕುವೆಂಪು ಅವರು ತಮ್ಮ ಬರವಣಿಗೆಯ ಮೂಲಕ ಆಧುನಿಕ ಕರ್ನಾಟಕದ ಏಳಿಗೆಗೆ ಕಟ್ಟಿಕೊಟ್ಟ ತಾತ್ವಿಕತೆಯನ್ನು, ರಾಜ್‌ಕುಮಾರ್ ತಮ್ಮ ಸಿನಿಮಾ ಮತ್ತು ವ್ಯಕ್ತಿತ್ವದ ಮೂಲಕ ಕಟ್ಟಿಕೊಟ್ಟರು. ಕುವೆಂಪು ಮತ್ತು ರಾಜಕುಮಾರ್‌ ಇಬ್ಬರೂ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗಗಳನ್ನು ಮುಟ್ಟಿದ್ದು, ಪ್ರಭಾವಿಸಿದ್ದು, ನುಡಿಯ ಹೆಸರಿನಲ್ಲಿ ಇಡೀ ನಾಡನ್ನು ಒಟ್ಟಾಗಿಸಿದ್ದು– ‘ಆಧುನಿಕ ಕರ್ನಾಟಕ’ ಚರಿತ್ರೆಯ ಅಪೂರ್ವ ವಿದ್ಯಮಾನ.

ADVERTISEMENT

ಪುಸ್ತಕ ಸಂಸ್ಕೃತಿಯಿಂದ ದೂರವುಳಿದವರನ್ನೂ ಸಿನಿಮಾಗಳ ಮೂಲಕ ತಲುಪಿದ ಸಾಧನೆ ರಾಜ್‌ ಅವರದು. ಜನರ ಮನಸ್ಸನ್ನು ಸ್ವಸ್ಥವಾಗಿಡುವ ಕೆಲಸವನ್ನು ಅವರ ಸಿನಿಮಾಗಳು ನಿರಂತರವಾಗಿ ಮಾಡುತ್ತಲೇ ಬಂದಿವೆ. ಗೋಕಾಕ್‌ ಚಳವಳಿ ಸೇರಿದಂತೆ ನಾಡು–ನುಡಿಯ ಹಿತಾಸಕ್ತಿಗೆ ಆತಂಕ ಎದುರಾದಾಗಲೆಲ್ಲ ಜನರ ಜೊತೆ ರಾಜ್‌ ನಿಲ್ಲುತ್ತಿದ್ದುದನ್ನು ಕೂಡ ಅವರ ರಾಜಕೀಯ ಪ್ರಜ್ಞೆಯ ಭಾಗವಾಗಿಯೇ ನೋಡಬೇಕು. ಸಮಾಜ ಕಡೆಗಣ್ಣಿನಿಂದ ನೋಡುವ ಸಮುದಾಯಗಳು ಪ್ರತಿನಿಧಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಆಯಾ ಸಮುದಾಯಗಳಿಗೆ ರಾಜ್‌ಕುಮಾರ್ ತಂದುಕೊಟ್ಟ ಆತ್ಮಪ್ರತ್ಯಯ ಅಸಾಧಾರಣವಾದುದು. ನೇಕಾರ, ಕಮ್ಮಾರ, ಕುಂಬಾರ, ಬೇಡ, ಕುರಿಗಾಹಿ– ಹೀಗೆ ಅವರು ನಿರ್ವಹಿಸಿದ ಪಾತ್ರಗಳು ಆಯಾ ವರ್ಗಗಳಿಗೆ ಆತ್ಮವಿಶ್ವಾಸ ತಂದುಕೊಡುವುದರ ಜೊತೆಗೆ, ಆ ಸಮುದಾಯಗಳಿಗೆ ಮುಖ್ಯವಾಹಿನಿಯಲ್ಲಿ ಸ್ವಲ್ಪ ಮಟ್ಟಿಗಿನ ಸ್ವೀಕೃತಿ ತಂದುಕೊಟ್ಟವು.

ಭಕ್ತಿಪ್ರಧಾನ ಪಾತ್ರಗಳ ನಿರ್ವಹಣೆಗೆ ರಾಜ್‌ಕುಮಾರ್‌ ಹೆಸರುವಾಸಿ. ಆದರೆ, ಅವರ ಭಕ್ತಿ ಭಾವಪ್ರಧಾನವಷ್ಟೇ ಆಗಿರದೆ, ಬಂಡಾಯದ ಸಂಕೇತವೂ ಆಗಿದೆ. ನಾಯಕನಾಗಿ ನಟಿಸಿದ ಮೊದಲ ಚಿತ್ರ, 1954ರ ‘ಬೇಡರ ಕಣ್ಣಪ್ಪ’ದಿಂದಲೇ ಭಕ್ತಿ–ಬಂಡಾಯದ ಪರಂಪರೆ ಆರಂಭವಾಯಿತೆನ್ನಬೇಕು. ದಿನ್ನನ ಭಕ್ತಿಯ ಔನ್ನತ್ಯದ ಈ ಕಥನ, ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ವಿಡಂಬಿಸುತ್ತದೆ. ‘ಭಕ್ತ ಕನಕದಾಸ’ (1960), ‘ಭಕ್ತ ಕುಂಬಾರ’ (1974) ಸಿನಿಮಾಗಳನ್ನು ಕೂಡ ಭಕ್ತಿಯ ನೆಲೆಗಟ್ಟಿನಲ್ಲಿ ಜಾತಿಯನ್ನು ಪ್ರಶ್ನಿಸುವ ಪ್ರಯತ್ನಗಳ ರೂಪದಲ್ಲಿ ಗಮನಿಸಬೇಕು. ಈ ಎರಡೂ ಸಿನಿಮಾಗಳ ನಾಯಕ ಪಾತ್ರಗಳು ಕುಲದ ನೆಲೆಗಳನ್ನು ಪ್ರಶ್ನಿಸುತ್ತವೆ. ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಕರೆ ನೀಡಿದರೆ, ಕುಂಬಾರ ಗೋರನದು ‘ಮಾನವ ದೇಹವು ಮೂಳೆ ಮಾಂಸದ ತಡಿಕೆ’ ಎನ್ನುವ ಜೀವನದ ನಶ್ವರತೆಯನ್ನು ಸಾರುವ ತಾತ್ವಿಕತೆ. ರಾಜ್‌ ಸಿನಿಮಾಗಳ ‘ಭಕ್ತಿ–ಬಂಡಾಯ’ದ ಸಮನ್ವಯಕ್ಕೆ ಮತ್ತೊಂದು ಉತ್ತಮ ಉದಾಹರಣೆ ‘ಭಕ್ತ ಚೇತ’ (1961). ಚಮ್ಮಾರನ ಪಾತ್ರದಲ್ಲಿ ರಾಜ್‌ಕುಮಾರ್‌ ನಟಿಸಿದ ಈ ಸಿನಿಮಾದಲ್ಲಿ ಸಮ ಸಮಾಜದ ಹಂಬಲದ ಜೊತೆಗೆ, ಅಸ್ಪೃಶ್ಯತೆಯ ವಿರುದ್ಧದ ದನಿಯೂ ಇದೆ. 

ರಾಜಕಾರಣಿಯೊಬ್ಬ, ಮಠಾಧೀಶನೊಬ್ಬ ಮಾಡ ಬೇಕಾದ ಕೆಲಸವನ್ನು ರಾಜ್‌ ಸಿನಿಮಾಗಳು ಸದ್ದಿಲ್ಲದೆ ಮಾಡಿವೆ. ಜಾತಿಯ ನೆಲೆಗಳನ್ನು ಸಡಿಲವಾಗಿಸುತ್ತ ಸೌಹಾರ್ದದತ್ತ ಸಮಾಜವನ್ನು ಮುನ್ನಡೆಸುವ ಕೆಲಸ ‘ರಾಜಕೀಯ ಪ್ರಜ್ಞೆ’ ಇಲ್ಲದಿದ್ದಲ್ಲಿ ಸಾಧ್ಯವಾದೀತೆ?

ಸಾಮಾಜಿಕ ನ್ಯಾಯದ ಕುರಿತಂತೆ ರಾಜ್‌ ಅವರ ನಿಲುವಿಗೆ ಉದಾಹರಣೆಯಾಗಿ, ಡಬ್ಬಿಂಗ್‌ ಚಳವಳಿ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆಯನ್ನು ಗಮನಿಸಬಹುದು: ‘ಡಬ್ಬಿಂಗ್ ಚಿತ್ರಗಳಿಂದ ಕನ್ನಡದಲ್ಲಿ ತಯಾರಾಗುವ ಚಿತ್ರಗಳಿಗೆ ಕೊಡಲಿ ಪೆಟ್ಟು. ಹತ್ತು ಚಿತ್ರ ತಯಾರಾದರೆ ಹಲವರಿಗೆ ಅವಕಾಶವಿದೆ. ಅದರಲ್ಲಿ ಐದು ಡಬ್ ಆದರೆ ಒಂದಿಷ್ಟು ಜನರಿಗೆ ಅವಕಾಶ ತಪ್ಪುತ್ತೆ. ಇದೊಂದು ವ್ಯವಹಾರ, ಸಂಪಾದನೆಯೇ ಅದರ ಮೂಲ ಉದ್ದೇಶ ಎಂಬ ಮಾತು ನಿಜವಾದರೂ ಅದು ಕಲೆಯನ್ನು ಬಿಟ್ಟು ಆಡುವ ಮಾತಲ್ಲ. ಕಲೆ, ವ್ಯವಹಾರಗಳು ಸಮರಸ ಸಾಧಿಸಬೇಕು. ಒಂದಕ್ಕಾಗಿ ಇನ್ನೊಂದು ತ್ಯಾಗ ಆಗಬಾರದು. ಆಯಾ ಭಾಷೆಯ ಜನ ಆಯಾ ಭಾಷೆಯ ಕಲಾವಿದರನ್ನೇ ಗೊತ್ತು ಮಾಡಿಕೊಂಡು ಚಿತ್ರ ತೆಗೆಯಲಿ. ಕೆಲವು ಚಿತ್ರಗಳು ಬಡವಾಗಿರಬಹುದು. ಲೋಕದಲ್ಲಿ ಬಡವ–ಶ್ರೀಮಂತರಿಬ್ಬರಿಗೂ ಬಾಳಲು ಅವಕಾಶ ಇಲ್ಲವೇ? ಹಾಗೆಯೇ ಇದು ಸಹ. ಯಾವ ಭಾಷೆಯಿಂದ ಯಾವ ಭಾಷೆಗೂ ಡಬ್ ಆಗಬಾರದು’. ಡಬ್ಬಿಂಗ್‌ ಸಂದರ್ಭವನ್ನು ಮರೆತು, ‘ಕಲೆ–ವ್ಯವಹಾರ ಸಮರಸ ಸಾಧಿಸಬೇಕು’ ಹಾಗೂ ‘ಲೋಕದಲ್ಲಿ ಬಡವ– ಶ್ರೀಮಂತರಿಬ್ಬರಿಗೂ ಬಾಳಲು ಅವಕಾಶವಿದೆ’ ಎನ್ನುವ ಮಾತುಗಳನ್ನು ಗಮನಿಸಬೇಕು. ಕಲೆ ಹಾಗೂ ರಾಜಕೀಯ ಪ್ರಜ್ಞೆಯನ್ನೊಳಗೊಂಡ ಸಾಮಾಜಿಕ ತಿಳಿವಳಿಕೆ ರಾಜ್‌ ಅವರಲ್ಲಿ ಯಾವ ರೂಪದಲ್ಲಿತ್ತು ಎನ್ನುವುದಕ್ಕೆ ಈ ಮಾತುಗಳು ಉದಾಹರಣೆಯಂತಿವೆ. 

ಕಲೆ ಮತ್ತು ರಾಜಕಾರಣದ ‘ಅಪೂರ್ವ ಸಂಗಮ’ದ ರೂಪದಲ್ಲಿ ‘ರಾಜ್‌ ಮಾದರಿ’ಯನ್ನು ಪರಿಶೀಲಿಸುವಾಗ, ಕಲಾವಿದನೊಬ್ಬ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುವುದು ತಪ್ಪೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಖಂಡಿತಾ ತಪ್ಪಲ್ಲ. ರಾಜ್‌ರ ಸಮಕಾಲೀನ ಕಲಾವಿದರಾದ ತೆಲುಗಿನ ಎನ್‌.ಟಿ.ರಾಮರಾವ್‌ ಹಾಗೂ ತಮಿಳಿನ ಎಂ.ಜಿ.ರಾಮಚಂದ್ರನ್‌ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು, ಮುಖ್ಯಮಂತ್ರಿ ಸ್ಥಾನಕ್ಕೂ ಸಂದಿದ್ದರು. ಇಲ್ಲೊಂದು ಸೂಕ್ಷ್ಮ ಗಮನಿಸಬೇಕು: ಆ ಹಿರಿಯರೆಲ್ಲ ರಾಜಕಾರಣಿಗಳಾದ ನಂತರ ಕಲಾವಿದರಾಗಿ ನೇಪಥ್ಯಕ್ಕೆ ಸರಿದರು. ಬಹುಶಃ, ವ್ಯಕ್ತಿಯೊಬ್ಬ ಏಕಕಾಲಕ್ಕೆ ಕಲಾವಿದನೂ ರಾಜಕಾರಣಿಯೂ ಆಗಿರುವುದು ಸಾಧ್ಯ ಇಲ್ಲ. ರಾಜಕಾರಣವನ್ನೇ ನಟನೆಯಾಗಿಸಿಕೊಂಡವರಿಗೆ ಈ ಮಾತು ಅನ್ವಯಿಸುವುದಿಲ್ಲ.

ಸಿನಿಮಾ ಹಾಗೂ ಸಕ್ರಿಯ ರಾಜಕಾರಣ ಎರಡರಲ್ಲೂ ವ್ಯಾಪಾರವನ್ನೇ ಕಾಣುತ್ತಿರುವ ಇಂದಿನ ಕಲಾವಿದರು, ಕಲೆಯನ್ನೂ ವ್ಯಾಪಾರವನ್ನೂ ಒಂದೇ ಎಂದು ತಿಳಿದಂತಿದೆ. ಪ್ರಸ್ತುತ ರಾಜಕಾರಣದ ಮಾತುಗಳನ್ನಾಡುವ ಸಿನಿಮಾ ನಟರನ್ನು ನೋಡಿದರೆ, ರಾಜಕಾರಣವೂ ಒಂದು ಪಾತ್ರದಂತೆ ಅಥವಾ ಪಾರ್ಟ್‌ ಟೈಂ ಉದ್ಯೋಗದಂತೆ ಅವರಿಗೆ ಕಾಣಿಸುತ್ತಿರುವಂತಿದೆ. ಇಂಥವರಿಂದ ಕಲೆಗೂ ಸುಖವಿಲ್ಲ, ರಾಜಕಾರಣಕ್ಕೂ ಉಪಯೋಗವಿಲ್ಲ. ಈ ಹೊತ್ತಿನ ಸಾಮಾಜಿಕ ಕ್ಷೋಭೆಯ ಸಂದರ್ಭಕ್ಕೂ, ರಾಜ್‌ರಂಥ ಕಲಾವಿದ ಅಥವಾ ಕುವೆಂಪು ಅವರಂಥ ಬರಹಗಾರ ಇಲ್ಲದಿರುವುದಕ್ಕೂ ಸಂಬಂಧ ಇಲ್ಲದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.