ADVERTISEMENT

ವಿಶ್ಲೇಷಣೆ| ಪ್ರಜಾಪ್ರಭುತ್ವ: ಜನಸಾಮಾನ್ಯರ ಹಿತವೆಲ್ಲಿ?

ಜನಸಾಮಾನ್ಯರ ಲಕ್ಷಣಗಳೇ ಇಲ್ಲದವರು ಪ್ರತಿನಿಧಿಗಳಾದಾಗ...

ಎಂ.ಚಂದ್ರ ಪೂಜಾರಿ
Published 26 ಜನವರಿ 2023, 19:30 IST
Last Updated 26 ಜನವರಿ 2023, 19:30 IST
   

ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ದಿನನಿತ್ಯ ಶಾಸಕಾಂಗ ಪರಮೋಚ್ಚ ಎಂದು ಬೋಧಿಸುತ್ತಿದ್ದಾರೆ. ಏಕೆಂದರೆ ಶಾಸಕಾಂಗವೇ ಜನರನ್ನು ಪ್ರತಿನಿಧಿಸುವ ಸಂಸ್ಥೆ ಎಂಬ ಅರ್ಥದಲ್ಲಿ ಹಾಗೂ ನ್ಯಾಯಾಂಗವನ್ನು ಗುರಿಯಾಗಿಸಿಕೊಂಡು ಅವರು ಈ ಮಾತು ಹೇಳಿರಬಹುದು. ಈ ಲೇಖನವು ನ್ಯಾಯಾಂಗ, ಶಾಸಕಾಂಗದ ಪ್ರಾಮುಖ್ಯವನ್ನು ವಿಶ್ಲೇಷಿಸುತ್ತಿಲ್ಲ. ಅದರ ಬದಲು, ಜನರಿಂದ ಜನರಿಗಾಗಿ ಜನರೇ ನಡೆಸುವ ಸರ್ಕಾರದಲ್ಲಿ ಜನಸಾಮಾನ್ಯರನ್ನು ಹುಡುಕುವ ಉದ್ದೇಶ ಹೊಂದಿದೆ.

ನಮ್ಮಲ್ಲಿ ಕೋಟ್ಯಂತರ ಮಂದಿ ಕೆಲಸಗಾರರಿದ್ದಾರೆ. ಇವರಲ್ಲಿ ವಲಸೆ ಕೆಲಸಗಾರರು ಮತ್ತು ಸಂಬಳ ಇಲ್ಲದೆ ದುಡಿಯುವ ಕುಟುಂಬದ

ಎಂ.ಚಂದ್ರ ಪೂಜಾರಿ

ಸದಸ್ಯರೂ ಸೇರಿದ್ದಾರೆ. ಅಷ್ಟು ಮಾತ್ರವಲ್ಲ ಇವರಲ್ಲಿ ಬಹುತೇಕರು ದಿನಗೂಲಿ ಕೆಲಸಗಾರರು. ಅರೆಬರೆ ಸಾಮಾಜಿಕ ಭದ್ರತೆ ಇರುವ ಕಾರ್ಮಿಕರು ಮೂರನೇ ಒಂದರಷ್ಟಿರಬಹುದು. ಕೃಷಿಕರ ಸಂಖ್ಯೆ ನಿರ್ದಿಷ್ಟವಾಗಿ ಲೆಕ್ಕಕ್ಕೆ ಸಿಗದಿರಬಹುದು. 19 ಕೋಟಿಯಷ್ಟು ಸ್ವಉದ್ಯೋಗಿಗಳಿದ್ದಾರೆ. ಇವರೊಂದಿಗೆ ಇವರ ಅವಲಂಬಿತರನ್ನೂ ಲೆಕ್ಕ ಹಾಕಿದರೆ ನಮ್ಮ ಸಮಾಜದ ಬಹುತೇಕರು ಈ ಎಲ್ಲ ಬಗೆಯ ಕೆಲಸಗಾರರೇ ಆಗಿದ್ದಾರೆ.

ADVERTISEMENT

ಇವರಲ್ಲಿ ಎಷ್ಟು ಮಂದಿಯನ್ನು ಇಂದು ನಮ್ಮ ವಿಧಾನಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿ ನೋಡಬಹುದು? ಅಂದರೆ ದಿನಗೂಲಿ ನೌಕರರು ಅಥವಾ ವಲಸೆ ಕಾರ್ಮಿಕರು ಅಥವಾ ಸಣ್ಣಪುಟ್ಟ ವ್ಯಾಪಾರ, ಉದ್ಯಮದಲ್ಲಿ ತೊಡಗಿರುವವರು ಅಥವಾ ಸಣ್ಣಪುಟ್ಟ ಕೃಷಿಕರು ಎಷ್ಟು ಮಂದಿ ಇಂದು ಸಂಸದ, ಶಾಸಕರಾಗಿದ್ದಾರೆ?
ಒಬ್ಬರೂ ಇಲ್ಲ. ಇವರ ಬದಲು ಯಾರು ಜನಪ್ರತಿನಿಧಿ ಗಳಾಗಿದ್ದಾರೆ? 16ನೇ ಲೋಕಸಭೆಗೆ ಚುನಾಯಿತ
ರಾದವರಲ್ಲಿ ಶೇಕಡ 25ರಷ್ಟು ವಕೀಲ, ವೈದ್ಯ, ಎಂಜಿನಿಯರ್, ಕಾರ್ಯತಂತ್ರ ನಿರೂಪಕರಂತಹ ವೃತ್ತಿಪರರು. ಶೇ 17ರಷ್ಟು ಉದ್ಯಮಿಗಳು, ಶೇ 2ರಷ್ಟು ಮಂದಿ ಅಧಿಕಾರಿಗಳಾಗಿದ್ದವರು, ಶೇ 25ರಷ್ಟು ಸಾಮಾಜಿಕ ಕಾರ್ಯಕರ್ತರ ಹಣೆಪಟ್ಟಿ ಕಟ್ಟಿಕೊಂಡಿರುವ ರಾಜಕಾರಣಿಗಳು, ಶೇ 2ರಷ್ಟು ಮಾಧ್ಯಮದ ಹಿನ್ನೆಲೆಯವರು ಮತ್ತು ಶೇ 30ರಷ್ಟು ರೈತರು. ಅಷ್ಟು ಮಾತ್ರವಲ್ಲ ನಮ್ಮ ಪ್ರತಿನಿಧಿಗಳು ತುಂಬಾ ಅನುಕೂಲಸ್ಥರು ಕೂಡ. ಕೋಟಿಗಿಂತ ಕಡಿಮೆ ಆಸ್ತಿಪಾಸ್ತಿ ಇರುವವರನ್ನು ನಾವು ಚುನಾಯಿಸುವುದಿಲ್ಲ. 17ನೇ ಲೋಕಸಭೆಗೆ ಚುನಾಯಿತರಾದವರ ಸರಾಸರಿ ಆಸ್ತಿ ₹ 20 ಕೋಟಿ, ರಾಜ್ಯಸಭೆಗೆ ಆಯ್ಕೆ ಆದವರ ಸರಾಸರಿ ಆಸ್ತಿ ₹ 79 ಕೋಟಿ.

ಇವರನ್ನು ಚುನಾಯಿಸುವ ಜನರ ಆಸ್ತಿಪಾಸ್ತಿ ಬಗ್ಗೆ ನಿಖರ ಮಾಹಿತಿ ಇಲ್ಲ. ಕೆಲವು ದಾಖಲೆಗಳ ಪ್ರಕಾರ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಒಂದು ಸಣ್ಣ ವರ್ಗದ ಸರಾಸರಿ ಆಸ್ತಿಯ ಮೌಲ್ಯ ಕೆಲವು ಲಕ್ಷಗಳಷ್ಟು ಇದ್ದರೆ, ತಳಸ್ತರದ ಜನರ ಸರಾಸರಿ ಆಸ್ತಿ ಮೌಲ್ಯ ಕೆಲವು ಸಾವಿರ ದಾಟುವುದಿಲ್ಲ. ವರ್ಗದ ದೃಷ್ಟಿಯಿಂದ ಮಾತ್ರವಲ್ಲ ಲಿಂಗ, ಸಮುದಾಯಗಳ ದೃಷ್ಟಿಯಿಂದಲೂ ನಮ್ಮ ಪ್ರತಿನಿಧಿಗಳು ಜನಪ್ರತಿನಿಧಿಗಳಲ್ಲ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಐದನೇ ಒಂದು ಭಾಗ ಕೂಡ ಪ್ರತಿನಿಧಿಗಳಾಗುವುದಿಲ್ಲ.

ಅಲ್ಪಸಂಖ್ಯಾತರಿಂದಲೂ ಹೆಚ್ಚು ಮಂದಿ ಪ್ರತಿನಿಧಿಗಳಾ ಗುವುದಿಲ್ಲ. ಮೀಸಲು ಕ್ಷೇತ್ರಗಳ ಚುನಾವಣೆಯಲ್ಲಿ ಆ ನಿರ್ದಿಷ್ಟ ವರ್ಗಗಳ ಜನರಿಗಿಂತ ಬೇರೆ ಸಮುದಾಯದವರ ಪಾತ್ರವೇ ನಿರ್ಣಾಯಕವಾಗಿದೆ. ನಮ್ಮ ಚುನಾಯಿತ ಪ್ರತಿನಿಧಿಗಳು ಬಹುಸಂಖ್ಯಾತ ಹಿನ್ನೆಲೆಯಿಂದ ಬಂದ ಕೋಟ್ಯಧೀಶ ಪುರುಷರು ಮಾತ್ರವಲ್ಲ, ಇವರಲ್ಲಿ ಶೇ 43ರಷ್ಟು ಪ್ರತಿನಿಧಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ.

ಜನಸಾಮಾನ್ಯರ ಲಕ್ಷಣಗಳೇ ಇಲ್ಲದವರು ಪ್ರತಿನಿಧಿ ಗಳಾದಾಗ ಪ್ರಜಾಪ್ರಭುತ್ವ ಹಲವು ಬಗೆಯಲ್ಲಿ ಅರ್ಥಹೀನ ವಾಗಲು ಆರಂಭವಾಗುತ್ತದೆ. ಒಂದು, ಜನರು ಮತ್ತು ಪ್ರತಿನಿಧಿಗಳ ಆಸಕ್ತಿಯ ನಡುವೆ ಸಂಬಂಧವೇ ಇಲ್ಲದಾಗುತ್ತದೆ. ಎರಡು, ಜನರು ಮತ್ತು ಪ್ರತಿನಿಧಿಗಳ ಆಸಕ್ತಿಗಳ ನಡುವೆ ಸಂಬಂಧ ಇಲ್ಲದಿರುವಾಗ ಚುನಾವಣೆ ಗೆಲ್ಲಲು ಅಡ್ಡದಾರಿ ತುಳಿಯಬೇಕಾಗುತ್ತದೆ. ಮೂರು, ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲುವುದು ಸಾಮಾನ್ಯವಾದಾಗ ಸಮಾಜ, ಹಣಕಾಸನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಇಲ್ಲದವರು ನಾಯಕರಾಗುತ್ತಾರೆ. ನಾಲ್ಕು, ಅಡ್ಡದಾರಿ ಯಲ್ಲಿ ಚುನಾವಣೆ ಗೆದ್ದವರು ಅಡ್ಡದಾರಿಯಲ್ಲೇ ಸಮಾಜ, ಹಣಕಾಸು, ರಾಜಕೀಯವನ್ನು ನಿರ್ವಹಣೆ ಮಾಡಲು ಆರಂಭಿಸುತ್ತಾರೆ. ಈ ಕೆಲವು ಅಡ್ಡ ಪರಿಣಾಮಗಳನ್ನು ಬಿಡಿಬಿಡಿಯಾಗಿ ನೋಡೋಣ.

ಅನುಕೂಲಸ್ಥರಿಂದ ಹೆಚ್ಚಿನ ತೆರಿಗೆ ಸಂಗ್ರಹ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಅಭಿವೃದ್ಧಿ ನೀತಿ, ಗುಣಮಟ್ಟದ ಶಿಕ್ಷಣ, ಆರೋಗ್ಯ, ಕಾರ್ಮಿಕ ಹಿತವನ್ನು ಕಾಪಾಡುವ ಕಾರ್ಮಿಕ ಕಾಯ್ದೆಗಳು ಇವೆಲ್ಲ ಜನಸಾಮಾನ್ಯರ ಆದ್ಯತೆಗಳು. ಆದರೆ ಕೋಟ್ಯಧೀಶ ಪ್ರತಿನಿಧಿಗಳು ತಮ್ಮ ಆದ್ಯತೆಗಳನ್ನು ಪ್ರತಿನಿಧಿಸುವ ನೀತಿಗಳನ್ನು ಜಾರಿಗೆ ತರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಗ್ರಹಿಸುವ ಪ್ರತೀ 100 ರೂಪಾಯಿ ತೆರಿಗೆಯಲ್ಲಿ ಶೇ 35ರಷ್ಟು ಅನುಕೂಲಸ್ಥರಿಂದ ಬಂದರೆ, ಶೇ 65ರಷ್ಟು ಅನನುಕೂಲಸ್ಥರಿಂದ ಬರುತ್ತಿದೆ. ಆದರೆ, ಸರ್ಕಾರದಿಂದ ಹೆಚ್ಚಿನ ಪ್ರಯೋಜನ ಪಡೆಯುವವರು ಅತಿ ಕಡಿಮೆ ಉದ್ಯೋಗ ಸೃಷ್ಟಿಸುವ ಬೃಹತ್ ಉದ್ಯಮ ಪತಿಗಳು. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣಪುಟ್ಟ ವ್ಯಾಪಾರ, ಕೃಷಿಗೆ ಕಡಿಮೆ ಪ್ರಾಶಸ್ತ್ಯ ಸಿಗುತ್ತಿದೆ. ಬೃಹತ್ ಉದ್ದಿಮೆಗಳು ತೆಗೆದುಕೊಂಡ ಸಾಲವನ್ನು ಮರುಪಾವತಿಸ ದಿರುವುದರಿಂದ ಹಿಂದಿನ ಐದು ವರ್ಷಗಳಲ್ಲಿ ₹ 10 ಲಕ್ಷ ಕೋಟಿ ಮೊತ್ತದ ಸಾಲವನ್ನು ಬ್ಯಾಂಕ್‌ಗಳು ರೈಟ್‌ ಆಫ್‌ ಮಾಡಿವೆ.

ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚಿನ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು ಖಾಸಗಿ ಒಡೆತನದಲ್ಲಿವೆ. ಇದರಿಂದಾಗಿ, ಕಡಿಮೆ ಆದಾಯದ ತಳಸ್ತರದ ಜನ ತಮ್ಮ ಆದಾಯದ ಬಹುಭಾಗವನ್ನು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಖರ್ಚು ಮಾಡುವ ಸ್ಥಿತಿ ಇದೆ. ಕಾರ್ಮಿಕರನ್ನು ಜೀತದಾಳುಗಳ ಸ್ಥಿತಿಗೆ ತಳ್ಳುವ ಕಾರ್ಮಿಕ ಕಾಯ್ದೆಗಳು ಜಾರಿಗೆ ಬರುತ್ತಿವೆ.

ಮೇಲಿನ ಎಲ್ಲ ನೀತಿಗಳು ಜನಸಾಮಾನ್ಯರಿಂದ ಅನುಕೂಲಸ್ಥರಿಗೆ ಸಂಪನ್ಮೂಲವನ್ನು ವರ್ಗಾಯಿಸುತ್ತಿವೆ. ಇದರಿಂದಾಗಿ ಶೇ 1ರಷ್ಟು ಜನರಲ್ಲಿ ದೇಶದ ಸಂಪತ್ತಿನ ಶೇ 40ರಷ್ಟು ಕ್ರೋಡೀಕರಣಗೊಂಡರೆ, ತಳಸ್ತರದ ಶೇ 50ರಷ್ಟು ಜನರಲ್ಲಿ ಶೇ 3ರಷ್ಟು ಸಂಪತ್ತಿದೆ. ಇಂತಹ ನೀತಿಗಳನ್ನು ಜಾರಿಗೆ ತಂದೂ ಚುನಾವಣೆ ಗೆಲ್ಲಬೇಕಾದರೆ ಪಕ್ಷಗಳು ಅಡ್ಡದಾರಿ ತುಳಿಯಲೇಬೇಕು. ಇದೇ ಕಾರಣದಿಂದ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಶಿಕ್ಷಣ, ಆರೋಗ್ಯ, ಕಾರ್ಮಿಕ ನೀತಿಗಳ ಬಗ್ಗೆ ಚರ್ಚಿಸುವುದಿಲ್ಲ. ಅದರ ಬದಲು ಜಾತಿ, ಧರ್ಮ, ಭಾಷೆ, ಪ್ರದೇಶಗಳ ನೆಲೆಯಲ್ಲಿ ಜನರನ್ನು ಧ್ರುವೀಕರಿಸುವ ವಿಷಯಗಳನ್ನೇ ಮುಂಚೂಣಿಗೆ ತರುತ್ತವೆ. ಹಿಜಾಬ್, ಹಲಾಲ್, ಮಂದಿರ, ಮಸೀದಿ, ಚರ್ಚ್, ಹಿಂದಿ ಭಾಷೆ... ಇಂತಹವೇ ಹೆಚ್ಚು ಚರ್ಚೆಯಲ್ಲಿರುತ್ತವೆ.

ವರ್ತಮಾನ ಅಥವಾ ಭವಿಷ್ಯದ ಸಂಗತಿಗಳಿಗಿಂತ ಭೂತಕಾಲದ ಸಂಗತಿಗಳೇ ಹೆಚ್ಚು ಚರ್ಚೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ ನಮ್ಮ ರಾಜಕಾರಣಿಗಳು. ಆರ್ಥಿಕ ನೆಲೆಯ ಬಹುಸಂಖ್ಯಾತ, ಅಲ್ಪಸಂಖ್ಯಾತಕ್ಕಿಂತ ಹೆಚ್ಚಾಗಿ ಧಾರ್ಮಿಕ ನೆಲೆಯ ಬಹುಸಂಖ್ಯಾತ, ಅಲ್ಪಸಂಖ್ಯಾತ ಪರಿಕಲ್ಪನೆಗಳು ಜನರ ಪ್ರಜ್ಞೆಯ ಭಾಗವಾಗುವಂತೆ ಮಾಡುತ್ತಾರೆ.

ಅಡ್ಡದಾರಿಯಲ್ಲೇ ಚುನಾವಣೆ ಗೆಲ್ಲುವುದು ಆಚರಣೆಗೆ ಬಂದ ನಂತರ ಸಮಾಜ, ಹಣಕಾಸು, ಸಂಸ್ಕೃತಿಗಳನ್ನು ನಿರ್ವಹಿಸುವ ಸಾಮರ್ಥ್ಯ ಇಲ್ಲದವರೂ ನಾಯಕರಾಗುತ್ತಾರೆ. ಇವರು ಕೈಗಾರಿಕೆ, ಸಾರಿಗೆ ಸಂಪರ್ಕದಂತಹವುಗಳನ್ನು ನಿರ್ವಹಣೆ ಮಾಡುವುದು ಬಿಡಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನೂ ನಿರ್ವಹಣೆ ಮಾಡಲು ಸಮರ್ಥರಾಗಿ ಇರುವುದಿಲ್ಲ. ಇವರು ಕೈಹಾಕುವ ಉದ್ಯಮ, ಮೂಲಸೌಕರ್ಯ ವಲಯಗಳು ನಷ್ಟ ಅನುಭವಿಸಿ ಮುಚ್ಚುವ ಸ್ಥಿತಿಗೆ ಬರುತ್ತವೆ. ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸೋಲುತ್ತವೆ. ತಮ್ಮ ಅಸಮರ್ಥ ನೀತಿ ನಿರ್ವಹಣೆಗಳಿಂದ ಸೋಲುವ ಸಂಸ್ಥೆಗಳ ಹೊಣೆಯನ್ನು ದುಡಿಯುವವರ ತಲೆ ಮೇಲೆ ಹಾಕಿ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಾರೆ.

ಪ್ರಜಾಪ್ರಭುತ್ವದ ಇತರ ಅಂಗಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಇವರ ಅಸಾಮರ್ಥ್ಯ ಬೆಳಕಿಗೆ ಬರುತ್ತದೆ. ಇದೇ ಕಾರಣದಿಂದ ಮಾಧ್ಯಮ, ನ್ಯಾಯಾಂಗ, ಕಾರ್ಯಾಂಗಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸದಂತೆ ಮಾಡಲು ಶತಪ್ರಯತ್ನ ನಡೆಸುತ್ತಾರೆ. ಇಂತಹ ಶಾಸಕಾಂಗವೇ ಪರಮೋಚ್ಚವಾದರೆ ನಮ್ಮ ಸಮಾಜದ ತಳವರ್ಗಗಳ ಭವಿಷ್ಯ ಏನಾದೀತು? ಇಂತಹ ಸಂದರ್ಭದಲ್ಲಿ ಬಿಡಿಬಿಡಿಯಾದ ಉದ್ದೇಶಗಳನ್ನು ಇಟ್ಟುಕೊಂಡು ನಡೆಯುವ ಹೋರಾಟಗಳು ಫಲಪ್ರದ ವಾಗುವುದು ಕಷ್ಟ. ಪ್ರಜಾಪ್ರಭುತ್ವದ ಸುಧಾರಣೆಯೇ ಎಲ್ಲ ಹೋರಾಟಗಳ ಗುರಿ ಆಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.