ನಿಮಗೂ ಈ ಪ್ರಶ್ನೆ ಕಾಡಿರಬಹುದು. ಒಂದು ಊರು ಅಥವಾ ಮನೆ ಬಿಟ್ಟುಹೋಗಲಾಗದಷ್ಟು ಬೆಸೆದು ಕೊಳ್ಳು ವುದು ಯಾವ ಕಾರಣಕ್ಕಾಗಿ? ನಾಲ್ಕಾರು ವರ್ಷ ವಾಸವಿದ್ದ ಒಂದು ಊರಿನಿಂದ ಮತ್ತೊಂದಕ್ಕೆ, ಒಂದು ಮನೆಯಿಂದ ಇನ್ನೊಂದು ಮನೆಗೆ ಬದಲಾಗಲೇಬೇಕಾದ ಅನಿವಾರ್ಯ ಎದುರಾದಾಗ ಮನದಲ್ಲಿ ಉಂಟಾಗುವ ತಳಮಳಗಳಿಗೆ ಕಾರಣವೇನು? ತುತ್ತಿನ ಚೀಲ ತುಂಬಲು ವಲಸೆ ಹಕ್ಕಿಯಾಗಿ ಹಾರಿಬಂದು, ದಿಗಿಲಿನಲ್ಲೇ ಪಾದ ಊರಿದ ಯಾವುದೋ ಅಪರಿಚಿತ ಊರು, ವರುಷಗಳು ಉರುಳಿದಂತೆ ನೆನಪುಗಳ ಮುದ್ರೆಯೊತ್ತುತ್ತಾ, ತೊರೆಯುವಾಗ ಸಂಕಟ ಉಂಟುಮಾಡುವುದು ಯಾಕಾಗಿ?
ಬಹುಶಃ ಭಾವಪ್ರಪಂಚದಲ್ಲಿ ‘ಸ್ವಂತ’ ಎನಿಸಿಕೊಳ್ಳುವ ಯಾವುದನ್ನೂ ತೊರೆಯುವುದು ಕಷ್ಟವೇ. ಊರು, ಮನೆ, ಶಾಲೆ, ಬೀದಿ, ವಠಾರ, ವಸ್ತು, ವ್ಯಕ್ತಿಗಳು ಸ್ವಂತವಾಗುವುದು ಬೇರುಬಿಟ್ಟ ಗಾಢ ನೆನಪುಗಳಲ್ಲಿ ಎನಿಸುತ್ತದೆ. ಹುಟ್ಟು, ಸಾವು ಮತ್ತು ಬದುಕಿನ ಮಧುರ ಕ್ಷಣಗಳಂತೂ ನೆನಪು ಗಳನ್ನು ಮತ್ತಷ್ಟು ಗಾಢವಾಗಿಸುತ್ತವೆ. ಆ ಕಾರಣದಿಂದಲೇ ಹುಟ್ಟಿದ ಊರು, ಹಿರಿಯರು ಬಾಳಿಬದುಕಿ ತೀರಿಕೊಂಡ ಹಳೆಯ ಮನೆ, ಬದುಕಿಗೆ ಉಲ್ಲಾಸ, ಉತ್ಸಾಹ, ಕನಸು ತುಂಬಿದ ಪರಿಸರ, ಕಡಿದುಕೊಳ್ಳಲಾಗದ ಬಾಂಧವ್ಯವನ್ನು ಸೃಷ್ಟಿಸಿಕೊಳ್ಳುತ್ತವೆ.
ಕಳೆದ ವರ್ಷವಷ್ಟೇ ತೀರಿಕೊಂಡ, ಜನಪ್ರಿಯ ಕಾದಂಬರಿಕಾರ ಗೇಬ್ರಿಯಲ್ ಮಾರ್ಕೆಸ್ ಅವರಿಗೆ ಬಹು ಮನ್ನಣೆ ತಂದುಕೊಟ್ಟ ಅವರ ‘0ne Hundred Years of Solitude’ ಕಾದಂಬರಿಯಲ್ಲಿ ಒಂದು ಪ್ರಸಂಗ ಬರುತ್ತದೆ. ಅಮೆರಿಕ ಮೂಲದ ಯುನೈಟೆಡ್ ಫ್ರೂಟ್ ಕಂಪೆನಿ, ತನ್ನ ನೌಕರರ ಮೇಲೆ ನಡೆಸಿದ ದೌರ್ಜನ್ಯವನ್ನು, ಇತಿಹಾಸದ ಪುಟಗಳಿಂದ ಹೆಕ್ಕಿ ತಮ್ಮ ಕಾದಂಬರಿಯಲ್ಲಿ ಮಾರ್ಕೆಸ್ ತಂದಿದ್ದಾರೆ. ಅದು ಕೊಲಂಬಿಯಾದಲ್ಲಿನ ಪುಟ್ಟ ಸಂಸಾರ. ಯುನೈಟೆಡ್ ಫ್ರೂಟ್ ಕಂಪೆನಿಯ ಕೆಲಸಗಾರರು ದುಡಿಮೆಗೆ ನಿರ್ದಿಷ್ಟ ವೇಳೆ, ಸಂಭಾವನೆ ನಿಗದಿಪಡಿಸಬೇಕೆಂಬ ಬೇಡಿಕೆಯೊಂದಿಗೆ ಮುಷ್ಕರ ಹೂಡಿ, ಅದು ಅತಿದೊಡ್ಡ ಕಾರ್ಮಿಕ ಹೋರಾಟ ವಾಗಿ ಬದಲಾಗಿ, ಮುಷ್ಕರ ನಿರತರ ಮೇಲೆ ಕೊಲಂಬಿ ಯಾದ ಸೇನೆ ಮುಗಿಬಿದ್ದು ನರಮೇಧ ನಡೆಯುತ್ತಿದ್ದ ಸಂದರ್ಭ. ಎಲ್ಲಿ ನೋಡಿದರೂ ಸಾವು–ನೋವು, ಗಲಭೆ ಗಳು. ಇದರಿಂದ ರೋಸಿಹೋದ ಕಾರ್ಮಿಕನೊಬ್ಬ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಪರಸ್ಥಳಕ್ಕೆ ವಲಸೆ ಹೋಗಲು ನಿರ್ಧರಿಸುತ್ತಾನೆ. ಆದರೆ ಹೆಂಡತಿ ನಿರಾಕರಿ ಸುತ್ತಾಳೆ. ಕಾರಣ ಆ ಊರು, ಆಕೆ ತನ್ನ ಮಗುವಿಗೆ ಜನ್ಮ ಕೊಟ್ಟ ಸ್ಥಳ. ಮಗುವಿನೊಂದಿಗೇ ಆಕೆ, ಊರಿನ ನೂರಾರು ನೆನಪುಗಳನ್ನೂ ಪೋಷಿಸಿ ಬೆಳೆಸಿದ್ದಾಳೆ. ನೆನಪುಗಳು ಗಾಢವಾಗಿವೆ. ‘ಈ ಊರನ್ನು ಬಿಟ್ಟು ಬರಲಾರೆ’ ಎನ್ನುತ್ತಾಳೆ.
‘ನಮ್ಮ ಕುಟುಂಬದ ಯಾರೂ ಇಲ್ಲಿ ಸತ್ತಿಲ್ಲ. ಒಂದು ಊರು ಸ್ವಂತವಾಗುವುದು ಆಪ್ತರ ಸಾವಿನ ನೆನಪಿ ನಿಂದಷ್ಟೇ’, ಆತ ಕೋಪಗೊಂಡೇ ನುಡಿಯುತ್ತಾನೆ. ‘ನಿನಗೆ ಈ ಊರು ಸ್ವಂತ ಎನಿಸುವುದಾದರೆ, ಊರು ತೊರೆಯುವ ನಿರ್ಧಾರ ಬದಲಿಸುವುದಾದರೆ, ನಾನಿಲ್ಲಿ ಸಾಯಲೂ ಸಿದ್ಧ’ ಎಂದು ಆಕೆ ಉತ್ತರಿಸುತ್ತಾಳೆ. ಜೀವಕ್ಕೆ ಅಪಾಯವಿದ್ದ ಸನ್ನಿವೇಶದಲ್ಲೂ ಊರಿನ ನೆನಪುಗಳು, ಅದರೊಂದಿಗೆ ಬೆಳೆದ ನಂಟು ಆಕೆಯನ್ನು ಅಲ್ಲಿಂದ ಹೆಜ್ಜೆ ಕಿತ್ತಿಡದಂತೆ ತಡೆಯುತ್ತದೆ.
ನೈಜೀರಿಯಾದ ಜನಪ್ರಿಯ ಲೇಖಕಿ ಚಿಮಮಾಂಡ ನಾಗೋಝಿ ಅಡಿಚಿ, ನೈಜ ಘಟನೆಯನ್ನು ಆಧರಿಸಿದ, ತಮ್ಮ ಕಥೆಯೊಂದರಲ್ಲಿ ಇಂತಹದ್ದೇ ಚಿತ್ರಣವನ್ನು ಕಟ್ಟಿ ಕೊಡುತ್ತಾರೆ. ಅದು ನೈಜೀರಿಯಾದಲ್ಲಿ ಅಂತರ್ಯುದ್ಧ ನಡೆ ಯುತ್ತಿದ್ದ ಸಂದರ್ಭ (1967-1970). ಕಥೆ ವಿಜ್ಞಾನ ಅಧ್ಯಾಪಕರೊಬ್ಬರ ಸುತ್ತಾ ಹರಡಿಕೊಳ್ಳುತ್ತದೆ. ನೈಜೀರಿ ಯಾದ ವಿಭಜನೆಗಾಗಿ ನಡೆಯುತ್ತಿದ್ದ ಚಳವಳಿಯನ್ನು ಹತ್ತಿಕ್ಕಲು ಸೇನಾ ಕಾರ್ಯಾಚರಣೆ ನಡೆಸಲಾಗುತ್ತದೆ. ಸೈನಿಕರು ನುಸುಕಾ ಎಂಬ ಪಟ್ಟಣದತ್ತ ನುಗ್ಗುತ್ತಾರೆ, ಶೆಲ್ ದಾಳಿಗಳಾಗುತ್ತವೆ. ಊರಿಗೆ ಊರೇ ಗುಳೆ ಹೊರಡುತ್ತದೆ. ಪ್ರೋಫೆಸರ್ ದಂಪತಿಯೂ ಒಲ್ಲದ ಮನಸ್ಸಿನಿಂದಲೇ ಅಮೆರಿಕಕ್ಕೆ ತೆರಳಬೇಕಾಗುತ್ತದೆ. ಆದರೆ ಪ್ರೊಫೆಸರ್ ದಂಪತಿಗೆ ನುಸುಕಾಕ್ಕೆ ಮರಳುವ ತುಡಿತ. ಯುದ್ಧ ಅಂತ್ಯಗೊಂಡ ಮರುಗಳಿಗೆಯಲ್ಲೇ ನುಸುಕಾಕ್ಕೆ ವಾಪಸಾಗುತ್ತಾರೆ.
ಮುಂದಿನ ಬದುಕು ನುಸುಕಾದಲ್ಲೇ ಸಾಗುತ್ತದೆ. ಬೆಳೆದ ಮಗಳು ಕೆಲಸ ಹಿಡಿದು ಅಮೆರಿಕದಲ್ಲಿ ನೆಲೆಸುತ್ತಾಳೆ. ಪ್ರೊಫೆಸರ್ ನಿವೃತ್ತಿಯ ಅಂಚಿಗೆ ಬಂದಾಗ ಹೆಂಡತಿ ತೀರಿ ಕೊಳ್ಳುತ್ತಾಳೆ. ಆಗ ತಳಮಳ ಆರಂಭವಾಗುತ್ತದೆ. ಭ್ರಷ್ಟ ವ್ಯವಸ್ಥೆಯನ್ನು ಮೈಗೂಡಿಸಿಕೊಂಡ ದೇಶದಲ್ಲಿ, ಯುದ್ಧ ದಿಂದ ತತ್ತರಿಸಿದ ಊರಿನಲ್ಲಿ, ಸೊರಗಿದ ವಿಶ್ವವಿದ್ಯಾಲಯದ ಮೆಟ್ಟಿಲು ತುಳಿಯುತ್ತಾ, ಬಾರದ ನಿವೃತ್ತಿ ವೇತನಕ್ಕೆ ಕಾಯುತ್ತಾ, ಒಬ್ಬಂಟಿಯಾಗಿ ಬದುಕು ನಡೆಸುವುದೋ, ಅಮೆರಿಕದ ಮಗಳ ಮನೆಯಲ್ಲಿ ಸುಖವಾಗಿ ಕಾಲು ಚಾಚಿಕೊಂಡು, ವಿಶ್ರಾಂತ ಜೀವನವನ್ನು ಕಳೆಯುವುದೋ? ಪ್ರೊಫೆಸರ್ ಮೊದಲನೆಯದ್ದನ್ನೇ ಆಯ್ದುಕೊಳ್ಳುತ್ತಾರೆ!
ಪಿಂಚಣಿ ಬಾರದಿದ್ದರೂ, ವ್ಯವಸ್ಥೆ ಕೆಟ್ಟಿದ್ದರೂ, ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ದಿನಕ್ಕೊಮ್ಮೆ ನೆಪಕ್ಕಾದರೂ ಹೋಗಿಬಂದರೆ, ಅವರ ನೆನಪುಗಳಿಗೂ ಜೀವ ಬರುತ್ತದೆ. ಗತಿಸಿದ ಸಹೋದ್ಯೋಗಿಗಳು ಎಡತಾಕಿ ಮಾತನಾಡಿಸಿದಂತೆ ಅನಿಸುತ್ತದೆ. ಇತ್ತ ಮನೆಗೆ ಬಂದರೆ ಹೆಂಡತಿ ಆಗೊಮ್ಮೆ ಈಗೊಮ್ಮೆ ತನ್ನನ್ನು ವಿಚಾರಿಸಲು ಸ್ವರ್ಗದಿಂದ ಇಳಿದು ಬಂದಂತೆ ಭಾಸವಾಗುತ್ತದೆ. ಈ ನೆನಪುಗಳೊಂದಿಗಿನ ಬದುಕೇ ಸುಖ ಎನಿಸಿ ಪ್ರೊಫೆಸರ್ ಅಲ್ಲೇ ಉಳಿದು ಬಿಡುತ್ತಾರೆ.
ಜಪಾನಿನ ಬುಡುಕಟ್ಟು ಜನಾಂಗದ, ವಿಭಿನ್ನ ಆಚರಣೆಯನ್ನು ವಿವರಿಸುವ ಕಥೆಯೊಂದು ಇಂತಹದೇ ತೊಳಲಾಟದ ದರ್ಶನ ಮಾಡಿಸುತ್ತದೆ. ಬೆಟ್ಟದ ತಪ್ಪಲಿನಲ್ಲಿ ಬೀಡುಬಿಟ್ಟಿದ್ದ ಜಪಾನಿನ ಬುಡಕಟ್ಟು ಜನಾಂಗದಲ್ಲಿ ಒಂದು ಪದ್ಧತಿ ಚಾಲ್ತಿಯಲ್ಲಿತ್ತಂತೆ. ಅದೇನೆಂದರೆ ಆ ಸಮುದಾಯದ ಯಾವುದೇ ಮನೆಯಲ್ಲಿ, ಹಿರಿಯರಿಗೆ 70 ವರ್ಷ ತುಂಬಿದರೆ, ಮನೆಯ ಹಿರಿಮಗ ಅವರನ್ನು ಬೆನ್ನಿನ ಮೇಲೆ ಹೊತ್ತುಕೊಂಡು, ಗಿರಿಯ ಶಿಖರಕ್ಕೊಯ್ದು, ಅಲ್ಲೇ ಅವರನ್ನು ಬಿಟ್ಟು ವಾಪಸಾಗಬೇಕು. ಆ ಹಿರಿಯರು, ತಮ್ಮ ಮುಂದಿನ ದಿನಗಳನ್ನು ಅಲ್ಲೇ ಸವೆಸಿ, ಹಸಿವು, ನೀರಡಿಕೆ, ಒಂಟಿತ ನಗಳಿಂದ ಬಳಲಿ ಪ್ರಾಣ ಬಿಡಬೇಕು. ಹಾಗೆ ಪ್ರಾಣ ಬಿಡುವುದೇ ಮುಕ್ತಿ ಎಂಬುದು ಆ ಜನಾಂಗದ ನಂಬಿಕೆ.
ಕಥೆ 69 ವರ್ಷದ ಒಬ್ಬ ಆರೋಗ್ಯ ಪೂರ್ಣ ಮಹಿಳೆಯ ಸುತ್ತಾ ಹೆಣೆದುಕೊಳ್ಳುತ್ತದೆ. ಆಕೆಯದು ತುಂಬು ಜೀವನಪ್ರೀತಿ, ಆರೋಗ್ಯವೂ ಸದೃಢ, ಆದರೆ ಪದ್ಧತಿಯಂತೆ ಇನ್ನೊಂದು ವರ್ಷದಲ್ಲಿ, ತನ್ನದೆಲ್ಲವನ್ನೂ ತೊರೆದು ಹೋಗಬೇಕಾದ ಅನಿವಾರ್ಯ. ಆಕೆ ತನ್ನೆಲ್ಲಾ ಜವಾಬ್ದಾರಿ ಗಳನ್ನೂ ಅವಸರದಲ್ಲೇ ಮುಗಿಸಲು ಅಣಿಯಾಗುತ್ತಾಳೆ. ಆಕೆಯ ಮನಸ್ಸಿನ ಹೊಯ್ದಾಟಗಳನ್ನು ಕಥೆ ಹಿಡಿದಿಡುತ್ತದೆ. ವರ್ಷ ಮುಗಿದು, ಮಗ ತನ್ನನ್ನು ಬೆನ್ನಮೇಲೆ ಹೊತ್ತು ಯ್ಯುವಾಗ, ಅಷ್ಟೂ ವರ್ಷಗಳ ಸಿಹಿ-ಕಹಿ ಘಟನೆಗಳು ಆಕೆಯ ನೆನಪಿಗೆ ಬಂದು, ಕರುಳು ಹಿಂಡಿದಂತಾಗುತ್ತದೆ. ಇತ್ತ ತಾಯಿಯನ್ನು ಬೆನ್ನಿಗೇರಿಸಿಕೊಂಡ ಮಗನಿಗೂ, ನೆನಪಿನ ಮೂಟೆಯನ್ನೇ ಹೊತ್ತೊಯ್ದ ಅನುಭವ. ಬೆಟ್ಟದ ಶಿಖರದತ್ತ ಪಯಣ ಸಾಗಿದಂತೆ, ಕಣ್ಣಿಗೆ ರಾಚುವ ಅಸ್ಥಿಗಳು, ಮಾಂಸಕ್ಕಾಗಿ ಹಾತೊರೆಯುತ್ತಿರುವ ಹದ್ದುಗಳು, ಇಡೀ ಪರಿಸರವೇ ಭಯಾನಕ ಎನಿಸುತ್ತದೆ. ಅಂತಹ ಭಯಭೀತ ವಾತಾವರಣದಲ್ಲೂ ಆಕೆಗೆ, ಹಿಂದಿರುಗಿ ಒಮ್ಮೆ ತನ್ನ ಊರನ್ನು, ಮನೆಯನ್ನು, ತನ್ನ ಜನರನ್ನು ನೋಡುವ ಬಯಕೆ. ಹಳೆಯ ನೆನಪುಗಳಲ್ಲಿ ಜೀಕುವ ಪುಳಕ. ಕೂಡಿಟ್ಟ ಮಧುರ ಕ್ಷಣಗಳನ್ನು ತೊರೆಯಲಾಗದ ಸಂಕಟ.
ಇಂತಹ ಅನೇಕ ಪಾತ್ರಗಳು, ಸನ್ನಿವೇಶಗಳು ಸಾಹಿತ್ಯ ದಲ್ಲಂತೂ ಪುಷ್ಕಳವಾಗಿ ಸಿಗುತ್ತವೆ. ನೆನಪುಗಳನ್ನು ಮೀರ ಲಾಗದೇ ನಿಡುಸುಯ್ಯುವ ಪಾತ್ರಗಳು ನಮ್ಮ ಪುರಾಣಗಳಲ್ಲಿ ಕಮ್ಮಿಯೇನಿಲ್ಲ. ವಿಷಮ ಸನ್ನಿವೇಶಗಳಲ್ಲಿ, ಆಳದಲ್ಲೆಲ್ಲೋ ಹುದುಗಿದ್ದ ನೆನಪುಗಳು ಪುಟಿದು ಬಂದು, ನನ್ನದೆನ್ನುವ ಭಾವ ಜಾಗೃತವಾಗುವ ಪ್ರಸಂಗಗಳೂ ಇವೆ. ಅದಕ್ಕೆ ಉದಾಹರಣೆ ಎಂದರೆ ಅರ್ಜುನ. ತಮ್ಮನ್ನು ಮೋಸದಿಂದ ಪಗಡೆಯಾಟಕ್ಕೆಳೆದು ಸೋಲುವಂತೆ ಮಾಡಿ, ಹನ್ನೆರಡು ವರ್ಷಗಳ ವನವಾಸ, ಒಂದು ವರ್ಷದ ಅಜ್ಞಾತವಾಸಕ್ಕೆ ದೂಡಿ, ಕಣ್ಣೆದುರಿನಲ್ಲೇ ಪತ್ನಿಯ ವಸ್ತ್ರಕ್ಕೆ ಕೈಯಿಟ್ಟರೂ, ಕುರುಕ್ಷೇತ್ರದಲ್ಲಿ ಪಾಂಚಜನ್ಯ ಮೊಳಗುವ ಮುನ್ನ ಅರ್ಜುನನಿಗೆ ಹಳೆಯ ನೆನಪುಗಳು ಒತ್ತರಿಸಿ ಬರುತ್ತವೆ. ಭೀಷ್ಮ ಮುದ್ದಿಸಿ ಕತೆ ಹೇಳುತ್ತಿದ್ದದ್ದು, ಬಾಣ ಗುರಿ ತಲುಪಿದಾಗೆಲ್ಲಾ ದ್ರೋಣರು ಭುಜ ತಟ್ಟಿದ್ದು, ಅಶ್ವತ್ಥಾಮ ಕೌರವಾದಿಗಳೊಂದಿಗೆ ಬಾಲ್ಯದಲ್ಲಿ ಆಡಿದ್ದು, ಎಲ್ಲವೂ ಸ್ಮೃತಿಗೆ ಬಂದು, ಎದುರಿಗಿರುವ ಭೀಷ್ಮ, ದ್ರೋಣ, ಕೃಪಾ, ಅಶ್ವತ್ಥಾಮ, ಕೌರವಾದಿಗಳು ನನ್ನ ಸ್ವಂತದವರು ಎನಿಸಿಬಿಡುತ್ತದೆ. ಗಾಂಢೀವವನ್ನು ಕೆಳಗಿಟ್ಟು, ಬಾಣ ಹೂಡಲಾರೆ ಎಂದು ಕೂರುತ್ತಾನೆ.
ನೆನಪುಗಳ ಜಾಲವನ್ನು ಭೇದಿಸಿ, ಅರ್ಜುನನನ್ನು ವಾಸ್ತವಕ್ಕೆ ಕರೆತಂದು ಯುದ್ಧಕ್ಕೆ ಸಜ್ಜಾಗಿಸಲು ಕೃಷ್ಣ, ಗೀತೆ ಎಂಬ ಅಸ್ತ್ರ ಬಳಸಬೇಕಾಗುತ್ತದೆ. ‘ನಾನು ಅವರನ್ನೆಲ್ಲಾ ಕೊಂದದ್ದಾಗಿದೆ, ನೀನು ನೆಪ ಮಾತ್ರ’ ಎಂಬ ಪಾಮರರು ಸುಲಭಕ್ಕೆ ಅರಗಿಸಿಕೊಳ್ಳಲಾಗದ ತತ್ವವನ್ನು ಕೃಷ್ಣ, ಯುದ್ಧರಂಗದಲ್ಲಿ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ. ಆ ಕ್ಷಣಕ್ಕೆ ಸುಧಾರಿಸಿಕೊಂಡ ಅರ್ಜುನ ಬಾಣ ಹೂಡಿ ಯುದ್ಧ ಗೆಲ್ಲುತ್ತಾನಾದರೂ, ಆತ ನೆನಪುಗಳನ್ನು ನಿಭಾಯಿಸಲಾಗದೆ ಚಡಪಡಿಸುವ ಉಲ್ಲೇಖಗಳು ನಂತರವೂ ಬರುತ್ತವೆ.
ಹೀಗೆ ಬೇರುಬಿಟ್ಟ ನೆನಪುಗಳನ್ನು ಗೆಲ್ಲುವುದನ್ನೇ, ಅಧ್ಯಾತ್ಮ ಮೋಹ ತೊರೆಯುವುದು ಎನ್ನುತ್ತದೆ. ಮನೋ ನಿಗ್ರಹ ಎಂದೂ ಕರೆಯುತ್ತದೆ. ಸಂತನಾಗುವತ್ತ ಮೊದಲ ಹೆಜ್ಜೆ ಎನ್ನುತ್ತದೆ. ಆದರೆ ಇದು ಸುಲಭಕ್ಕೆ ಸಾಧ್ಯವಾ ಗುವುದಲ್ಲ ಎನ್ನುವುದು ಸಂತರ, ದಾಸರ ಚಡಪಡಿಕೆ ಗಳಿಂದ ತಿಳಿಯುತ್ತದೆ. ಕನಕದಾಸರು ಭಕ್ತಿ ಮಾರ್ಗ ಹಿಡಿದು, ಬಂಧು ಬಳಗ, ಸಕಲ ಸಂಪತ್ತನ್ನು ತೊರೆದು ಹೋಗುವಾಗ ಅವರಿಗೂ ನೆನಪುಗಳು ಅಡ್ಡಗಟ್ಟಿರ ಬಹುದೇ? ‘ತಂದೆ ತಾಯಿಗಳೆಷ್ಟೋ, ತಾನಿದ್ದ ಊರೆಷ್ಟೋ, ಬಂಧು ಬಳಗಗಳೆಷ್ಟೋ, ತನಗೆ ಸತಿ ಸುತರೆಷ್ಟೋ, ಬಂದ ಜನುಮಗಳೆಷ್ಟೋ, ಹೊಂದಿದಾ ಮರಣವೆಷ್ಟೋ, ಒಂದೊಂದು ಎಣಿಕೆಗಾಣೆ’ ಎನ್ನುತ್ತಾ ಜೀವದ ಗತಿಯನ್ನು, ದೇಹದೊಂದಿಗಿನ ಕ್ಷಣಿಕ ಸಾಂಗತ್ಯವನ್ನು ತಮ್ಮ ಕೀರ್ತನೆಯಲ್ಲಿ ಕನಕರು ಸ್ಮರಿಸಿ ಹಾಡಿದ್ದು, ಬಹುಶಃ ಲೌಕಿಕ ಬದುಕಿನ ನೆನಪುಗಳಿಂದ ಬಿಡಿಸಿಕೊಂಡು ಮೋಹವನ್ನು ತೊರೆಯಲಿಕ್ಕೇ ಇರಬೇಕು.
ನವಕೋಟಿಯನ್ನು ತ್ಯಜಿಸಿ, ಕೃಪಣ ಬುದ್ಧಿಯನ್ನು ಬಿಟ್ಟು, ಹೆಂಡತಿಯನ್ನು ತೊರೆದು, ಅಧ್ಯಾತ್ಮ ಸಾಧನೆಗೆಂದು ಪುರಂದರರು ತಂಬೂರಿ ಹಿಡಿದು ಹೊರಟಾಗ, ಅಷ್ಟು ವರ್ಷಗಳ ಸಾಂಗತ್ಯದ ನೆನಪುಗಳನ್ನು ಗೆದ್ದು, ತನ್ನನ್ನು ಬೀಳ್ಕೊಡುತ್ತಿರುವ ಹೆಂಡತಿಯ ಸಾಧನೆಯೇ ತನ್ನದಕ್ಕಿಂತ ಮಿಗಿಲು ಎನಿಸಿರಬಹುದೇ? ‘ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ಪುರಂದರದಾಸರು ಕುಣಿದು ಹಾಡಿದ್ದು, ಅಷ್ಟರಮಟ್ಟಿಗೆ ಆಕೆಯನ್ನು ಸಂತೈಸಲಿಕ್ಕೇ ಇರಬೇಕು.
ಅಮೆರಿಕದ ತತ್ವಜ್ಞಾನಿ ಹೆನ್ರಿ ಡೇವಿಡ್ ಥೊರೊ, ನೆನಪುಗಳದ್ದು ಆತ್ಮದೊಂದಿಗಿನ ನಂಟು ಎನ್ನುತ್ತಾನೆ. ಆಪ್ತವಾದ ನೆನಪುಗಳು ಕಾಲಾಂತರದಲ್ಲಿ ಮಾಸಬ ಹುದಷ್ಟೇ, ಆದರೆ ಅಳಿಸಿ ಹೋಗಲಾರವು ಎಂದು ಅಭಿಪ್ರಾಯ ಪಡುತ್ತಾನೆ. ಫ್ರೆಂಚ್ ತತ್ವಶಾಸ್ತ್ರಜ್ಞ ಗ್ಯಾಸ್ಟನ್ ಬ್ಯಾಚ್ಲಾರ್ಡ್, ತನ್ನ ‘ಪೊಯೆಟಿಕ್ಸ್ ಆಫ್ ಸ್ಪೇಸ್’ ಕೃತಿಯಲ್ಲಿ ಈ ಬಗ್ಗೆ ಅನೇಕ ಉಲ್ಲೇಖಗಳನ್ನು ಕೊಡುತ್ತಾನೆ.
ದೊಡ್ಡವರ ವಿಚಾರಗಳನ್ನು ಬಿಡಿ, ನಮ್ಮ ದಿನನಿತ್ಯದ ಆಗುಹೋಗುಗಳನ್ನೇ ನೋಡಿ, ಮೊದಮೊದಲು ಕಿರಿಕಿರಿಯೆನಿಸಿದ ಶಾಲೆ, ನೀರಸ ಎನಿಸಿದ ತರಗತಿಗಳು, ಶಾಲೆಯಿಂದ ಹೊರಬೀಳುವ ಹೊತ್ತಿಗೆ ವಿಚಿತ್ರ ಕಂಪನವನ್ನು ಉಂಟುಮಾಡುತ್ತವೆ. ಮೆಚ್ಚುಗೆಯಾದ ಪ್ರಾಧ್ಯಾಪಕರನ್ನು ಬೀಳ್ಕೊಡುವಾಗ ಕಣ್ಣು ಜಿನುಗುತ್ತದೆ. ಊರು, ಮನೆ, ವ್ಯಕ್ತಿಗಳಷ್ಟೇ ಅಲ್ಲ, ವರ್ಷಗಟ್ಟಲೇ ಬಳಸಿದ ಅದೆಷ್ಟೋ ವಸ್ತುಗಳು, ಇನ್ನು ಬಳಸಲು ಯೋಗ್ಯವಲ್ಲ ಎಂದೆನಿಸಿದ ಮೇಲೂ, ಅಟ್ಟದಲ್ಲಿ ಪಟ್ಟಾಗಿ ಕುಳಿತು ಬಿಡುತ್ತವಲ್ಲ! ಈ ಎಲ್ಲಕ್ಕೂ ನೆನಪುಗಳ ಬೆಸುಗೆಯೇ ಕಾರಣ ಎನ್ನುತ್ತಾನೆ ಬ್ಯಾಚ್ಲಾರ್ಡ್. ಎಮಿಲಿ ಡಿಕಿನ್ಸನ್ ಕವಿತೆಯ ಸಾಲು ಗಳಿವೆಯಲ್ಲಾ ‘Water, is taught by thirst. Land, by the Oceans passed’, ತೊರೆ ಯುವ ಸಂದರ್ಭ ಎದುರಾದಾಗಲೇ, ನೆನಪುಗಳ ಅಪ್ಪುಗೆ ಬಿಗಿಯಾಗುತ್ತದೆ. ಹೊಸ ಪಯಣಕ್ಕೆ ಸಜ್ಜಾದಾಗಲೆಲ್ಲಾ, ಹಳೆಯ ನೆನಪುಗಳ ಮೂಟೆಯನ್ನು ಹೊತ್ತುಕೊಂಡೇ ಮುನ್ನಡೆಯಬೇಕಾಗುತ್ತದೆ.
editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.