ADVERTISEMENT

ಸೋಲು ಗೆಲುವಿನ ಲೆಕ್ಕ ಬದಲಿಸಿದ ನ್ಯಾಶ್

ಸುಧೀಂದ್ರ ಬುಧ್ಯ
Published 4 ಜೂನ್ 2015, 19:30 IST
Last Updated 4 ಜೂನ್ 2015, 19:30 IST
ಸೋಲು ಗೆಲುವಿನ ಲೆಕ್ಕ ಬದಲಿಸಿದ ನ್ಯಾಶ್
ಸೋಲು ಗೆಲುವಿನ ಲೆಕ್ಕ ಬದಲಿಸಿದ ನ್ಯಾಶ್   

ಹೀಗೊಂದು ಜೋಕಿದೆ. ಆಸ್ಪತ್ರೆಗೆ ಬಂದ ರೋಗಿಯೊಬ್ಬಳನ್ನು ಪರೀಕ್ಷಿಸಿದ ವೈದ್ಯರು, ‘ನಿಮ್ಮ ದೇಹ ದುರ್ಬಲಗೊಂಡಿದೆ, ಆರೋಗ್ಯ ಹದಗೆಟ್ಟಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಇನ್ನು ಕೆಲವು ವರ್ಷಗಳಷ್ಟೇ ನೀವು ಬದುಕಲಿದ್ದೀರಿ’ ಎಂದರಂತೆ. ವೈದ್ಯರ ಮಾತನ್ನು ಕೇಳಿ  ಗಾಬರಿಗೊಂಡ ಆಕೆ, ‘ಡಾಕ್ಟ್ರೇ, ನನಗೆ ಕನಿಷ್ಠ ನೂರು ವರ್ಷಗಳಾದರೂ ಬದುಕಬೇಕೆಂಬ ಆಸೆ ಇದೆ. ನನ್ನ ಆಸೆ ಈಡೇರಲಾರದು ಎನ್ನುತ್ತೀರಾ?’ ಎಂದು ಕೇಳಿದಳಂತೆ. ತಕ್ಷಣವೇ ವೈದ್ಯರು ‘ಅದಕ್ಕೇನಂತೆ, ನೀವೊಬ್ಬ ಗಣಿತತಜ್ಞನನ್ನು ಮದುವೆಯಾಗಿ’ ಎಂದು ಪರಿಹಾರ ಸೂಚಿಸಿದರಂತೆ. ಖುಷಿಗೊಂಡ ಆಕೆ ‘ಗಣಿತತಜ್ಞನನ್ನು ಮದುವೆಯಾದರೆ ಆಯಸ್ಸು ಹೆಚ್ಚುತ್ತದಾ?’ ಎಂದು ನಾಚುತ್ತಲೇ ಕೇಳಿದಳಂತೆ. ವೈದ್ಯರು ನಗುತ್ತಾ ‘ಆಯಸ್ಸು ಹೆಚ್ಚುವುದಿಲ್ಲಮ್ಮ, ಹೆಚ್ಚು ವರ್ಷ ಬದುಕಿದಂತೆ ಅನಿಸುವುದಂತೂ ಗ್ಯಾರಂಟಿ’ ಎಂದರಂತೆ. ಆಕೆ ತನ್ನ ಅನಾರೋಗ್ಯವನ್ನೂ ಮರೆತು ಬಾಯ್ತುಂಬ ನಕ್ಕಳಂತೆ.

ಬಿಡಿ, ಅಂಕಿ ಸಂಖ್ಯೆಗಳ ಜೊತೆಗೆ ನಂಟು ಸಾಧಿಸಿ, ಸಾಮಾನ್ಯರಿಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡಬಲ್ಲ ಗಣಿತತಜ್ಞರ ಸಹವಾಸಿಯಾಗುವುದು, ಗಣಿತ ಎಂದರೆ ಕಬ್ಬಿಣದ ಕಡಲೆ ಎಂದು ಮುಖ ಕಿವುಚುವ ಯಾರಿಗಾದರೂ ಕಠಿಣವೇ. ಹಾಗಾಗಿಯೇ ಇಂತಹ ಅನೇಕ ಜೋಕುಗಳು ಹುಟ್ಟಿಕೊಂಡಿವೆ. ಇನ್ನು, ಗಣಿತದ ಪ್ರಮೇಯಗಳನ್ನೇ ಧ್ಯಾನಿಸುತ್ತಾ ಮಂಕು ಕವಿದಂತೆ ಕುಳಿತುಬಿಡುವ, ಪತ್ರಿಕೆಯ ಪ್ರತಿ ಸಾಲಿನಲ್ಲೂ ಅಡಗಿ ಕುಳಿತ ಸಂಕೇತಾಕ್ಷರಗಳನ್ನು ಕಣ್ಣಲ್ಲೇ ಹೆಕ್ಕಲು ನೋಡುವ, ಅನ್ಯಗ್ರಹದಿಂದ ಯಾರೋ ಸಂದೇಶ ರವಾನಿಸುತ್ತಿದ್ದಾರೆ ಎಂದು ಕಿವಿ ಅಗಲಿಸುವ, ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುವ ಆಸಾಮಿ, ಜೀವನದುದ್ದಕ್ಕೂ ಜೊತೆಯಾದರೆ ಹೇಗಿರಬಹುದು? ಕಷ್ಟ ಕಷ್ಟ ಎನ್ನುವವರು, ಕಳೆದ ವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶ್ರೇಷ್ಠ ಗಣಿತತಜ್ಞ ಜಾನ್ ನ್ಯಾಶ್ ಮತ್ತು ಅಲೀಶಿಯಾ ದಂಪತಿ ಬದುಕಿನಲ್ಲೊಮ್ಮೆ ಇಣುಕಬೇಕು.

ನ್ಯಾಶ್, ನಾಲ್ಕನೇ ಇಯತ್ತೆಯಲ್ಲಿ ‘ಬಿ’ ಗ್ರೇಡ್ ಪಡೆದಾಗ ಆತನ ಶಿಕ್ಷಕಿ, ನ್ಯಾಶ್ ಅಮ್ಮನನ್ನು ಕರೆದು ‘ಈತನಿಗೆ ಗಣಿತ ತಲೆಗೆ ಹತ್ತಲಾರದು’ ಎಂದಿದ್ದರಂತೆ! ಆದರೆ ಪರಿಶೀಲಿಸಿ ನೋಡಿದಾಗ, ಶಿಕ್ಷಕರು ತೋರಿಸಿಕೊಟ್ಟ ಸಿದ್ಧಸೂತ್ರಗಳನ್ನು ಬಳಸದೇ, ಮಗ ತನ್ನದೇ ದಾರಿಯಲ್ಲಿ ಗಣಿತದ ಕಗ್ಗಂಟನ್ನು ಬಿಡಿಸಲು ಪ್ರಯತ್ನಿಸಿದ್ದಾನೆ ಎಂಬುದು ತಿಳಿದು ಆಕೆಗೆ ಆಶ್ಚರ್ಯವಾಗಿತ್ತು. ತನ್ನ 14ನೇ ವರ್ಷದಲ್ಲಿ ಇ.ಟಿ. ಬೆಲ್ ಅವರ ‘Men of Mathematics’ ಕೃತಿಯನ್ನು ಓದಿದ ಮೇಲಂತೂ ನ್ಯಾಶ್‌ಗೆ ಗಣಿತದ ಹುಚ್ಚು ಹಿಡಿಯಿತು. ಆದರೆ ಮನಸ್ಸಿನಲ್ಲಿ ಬೇರೆಯದೇ ಕನಸು ಬೇರುಬಿಟ್ಟಿತ್ತು. ‘ನಾನೂ ಅಪ್ಪನಂತೆ ಆಗಬೇಕು’, ಬಹುಶಃ ಇದು ಎಲ್ಲ ಮಕ್ಕಳಲ್ಲೂ ಬಾಲ್ಯದಲ್ಲಿ ಸಹಜವಾಗಿ ಮೊಳಕೆಯೊಡೆಯುವ ಕನಸು. ಶಾಲೆಯ ಪ್ರಬಂಧ ಒಂದರಲ್ಲೂ ನ್ಯಾಶ್, ತಾನು ಅಪ್ಪನಂತೆ ಮೆಕ್ಯಾನಿಕಲ್ ಎಂಜಿನಿಯರ್ ಆಗುತ್ತೇನೆ ಎಂದು ಬರೆದಿದ್ದನಂತೆ. ಆದರೆ ಮುಂದೆ ಪದವಿಗಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶ ಪಡೆದರೂ, ಅದು ನಾಲ್ಕು ದಿನಗಳಲ್ಲೇ ತನಗೆ ಒಗ್ಗದ ವಿಷಯ ಎನಿಸಿ, ಕೆಮಿಸ್ಟ್ರಿ ವಿಭಾಗದತ್ತ ಹೆಜ್ಜೆ ಇರಿಸಬೇಕಾಯಿತು. ಕೆಮಿಸ್ಟ್ರಿ ಪ್ರಯೋಗಾಲಯವೂ ಸಾಕೆನಿಸಿದಾಗ, ತನ್ನ ಬೌದ್ಧಿಕ ಹಸಿವಿಗೆ ಗಣಿತವಷ್ಟೇ ಆಹಾರ ಎಂಬುದು ಮನವರಿಕೆಯಾಗಿತ್ತು. ಹಾಗಾಗಿ ನ್ಯಾಶ್ ಗಣಿತ ವಿಭಾಗದಲ್ಲೇ ಪಟ್ಟಾಗಿ ಕೂತು, ತನ್ನ ಅಭ್ಯಾಸ ಮುಂದುವರಿಸುವಂತಾಯಿತು.

ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಮೆಟ್ಟಿಲು ತುಳಿಯುವಾಗ ಆತನೊಂದಿಗೆ, ಪ್ರೊಫೆಸರ್ ರಿಚರ್ಡ್ ಡಫಿನ್ ಅವರು ನೀಡಿದ ಒಂದು ಸಾಲಿನ ಶಿಫಾರಸು ಪತ್ರವಿತ್ತು. ‘This Man is Genius’ ಎಂಬ ಶಿಫಾರಸು ಪತ್ರದ ಒಂದೇ ಸಾಲು ಆತನ ಪ್ರತಿಭೆಯನ್ನು ಪೂರ್ಣವಾಗಿ ತೂಗಿತ್ತು. ಪ್ರಿನ್ಸ್‌ಟನ್‌ನಲ್ಲಿ ದಿನಗಳು ಉರುಳಿದಂತೆ ಪ್ರತಿಭಾಶಾಲಿ ಎಂಬ ಹಣೆಪಟ್ಟಿಯ ಜೊತೆಗೆ ವಿಲಕ್ಷಣ, ನಿರ್ಲಿಪ್ತ, ದಿಗಿಲಿನ ಆಸಾಮಿ, ಅಹಂಕಾರಿ ಎಂಬ ವಿಶೇಷಣಗಳು ಜೊತೆಯಾದವು. ಕಠಿಣ ಸಮಸ್ಯೆಗಳನ್ನು ಬೆಂಬತ್ತಿ ಅವುಗಳಿಗೆ ಪರಿಹಾರ ಹುಡುಕುವುದು ನ್ಯಾಶ್ ಪಾಲಿಗೆ ಮೋಜಿನ ಆಟವಾಯಿತು. ನ್ಯಾಶ್ ರೂಪಿಸಿದ ಆಟವೊಂದು, ಗೆಳೆಯರ ಗುಂಪಿಗೆ ನಶೆ ಏರಿಸಿತು. ಪ್ರಿನ್ಸ್‌ಟನ್ ಕ್ಯಾಂಪಸ್ಸಿನಲ್ಲಿ ಅದಾಗಲೇ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಐನ್‌ಸ್ಟೀನ್ ಮತ್ತು ಜಾನ್ ಫಾನ್ ನೊಯ್ಮನ್‌ರೊಂದಿಗೆ, ತನ್ನ ಪುಟ್ಟ ಹೆಜ್ಜೆಗಳನ್ನೂ ಮೂಡಿಸುವ ತುಡಿತ ನ್ಯಾಶ್‌ಗಿತ್ತು.

ಇದಕ್ಕೆ ಸರಿಯಾಗಿ, ಪೋಕರ್ ಮತ್ತು ಚೆಸ್ ಆಟಗಳಲ್ಲಿ ಆಟಗಾರರು ರೂಪಿಸುವ ತಂತ್ರಗಳನ್ನು ಅಭ್ಯಾಸ ಮಾಡಲೋಸುಗ ಹುಟ್ಟಿಕೊಂಡ ವಿಧಾನವೊಂದು, ಗೇಮ್ ಥಿಯರಿ ಎಂಬ ಗಣಿತದ ಹೊಸಕೊಂಬೆಯಾಗಿ ಟಿಸಿಲೊಡೆದಿತ್ತು. ಜಾನ್ ಫಾನ್ ನೊಯ್ಮನ್ ಮತ್ತು ಆಸ್ಕರ್ ಮಾರ್ಗನ್‌ಸ್ಟರ್ನ್‌ ‘ಥಿಯರಿ ಆಫ್ ಗೇಮ್ಸ್ ಅಂಡ್ ಎಕನಾಮಿಕ್ ಬಿಹೇವಿಯರ್’ ಕೃತಿಯ ಮೂಲಕ ಗೇಮ್ ಥಿಯರಿ ಅಭ್ಯಾಸಾಸಕ್ತರಿಗೆ ಆಕರವನ್ನು ಒದಗಿಸಿದ್ದರು. ಈ ಕೃತಿ ಅನೇಕ ಗಣಿತ ಕುತೂಹಲಿಗಳನ್ನು ಗೇಮ್ ಥಿಯರಿಯತ್ತ ಸೆಳೆಯಿತು. ‘ಒಬ್ಬನ ಸೋಲು, ಮತ್ತೊಬ್ಬನ ಗೆಲುವು’ ಎಂಬ ಸೊನ್ನೆ ಮೊತ್ತದ ಆಟವನ್ನೇ ಮೂಲವಾಗಿಟ್ಟುಕೊಂಡು, ಗೇಮ್ ಥಿಯರಿಯ ವಿವಿಧ ಆಯಾಮಗಳನ್ನು ನೊಯ್ಮನ್ ವಿವರಿಸಿದ್ದರು. ಆದರೆ ಆಟದ ಎಲ್ಲಾ ಪಟ್ಟುಗಳೂ, ಇಬ್ಬರು ಸ್ಪರ್ಧಿಗಳ ನಡುವೆಯಷ್ಟೇ ನಡೆಯಬೇಕಾದ ಸೀಮಿತ ಪರಿಧಿ ಅದಕ್ಕಿತ್ತು. ಇಬ್ಬರಿಗಿಂತ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ಆಟಗಳಲ್ಲಿ, ಆಟಗಾರರ ನಡುವೆ ಹೊಂದಾಣಿಕೆ ಏರ್ಪಟ್ಟು, ಎರಡು ತಂಡಗಳು (ಸಮ್ಮಿಶ್ರ ಒಕ್ಕೂಟ) ರೂಪುಗೊಂಡರಷ್ಟೇ, ಮೂಲ ಗೇಮ್ ಥಿಯರಿಯ ಚೌಕಟ್ಟಿಗೆ ಹೊಂದಿಸಬಹುದಿತ್ತು. ನಿತ್ಯ ಜೀವನದ ಎಲ್ಲ ಸಂದರ್ಭಗಳಿಗೂ ಅನ್ವಯವಾಗದ ಸೊನ್ನೆ ಮೊತ್ತದ ಸೂತ್ರ, ನೊಯ್ಮನ್ ಪ್ರತಿಪಾದಿಸಿದ ಮೂಲ ಗೇಮ್ ಥಿಯರಿಯ ಮಿತಿಯಾಗಿತ್ತು. ನ್ಯಾಶ್‌ಗೆ ಮಿತಿಯನ್ನು ದಾಟುವ ಹಂಬಲ ಉಂಟಾಯಿತು. ನೊಯ್ಮನ್ ಕೃತಿಯಲ್ಲಿ ಪ್ರಶ್ನೆಯಾಗಿಯೇ ಉಳಿದ ಸಂದರ್ಭಗಳಿಗೆ ಉತ್ತರ ಹುಡುಕುವ ಕೆಲಸಕ್ಕೆ ನ್ಯಾಶ್ ಕೈ ಹಚ್ಚಿದ.

ಹೊಂದಾಣಿಕೆ ಇಲ್ಲದಾಗಿಯೂ, ಎದುರಾಳಿಯ ಮೇಲೆ ಪರಿಣಾಮ ಬೀರದಂತೆ, ಕೇವಲ ತನ್ನ ಏಳ್ಗೆಗಾಗಿ ತಂತ್ರಗಳನ್ನು ಏಕಪಕ್ಷೀಯವಾಗಿ ರೂಪಿಸುವ ಸಂದರ್ಭಗಳಲ್ಲಿ ಗೇಮ್ ಥಿಯರಿಯನ್ನು ಅನ್ವಯಿಸುವುದು ಹೇಗೆ ಎಂಬ ಪ್ರಶ್ನೆಯನ್ನು ನ್ಯಾಶ್ ಬೆಂಬತ್ತಿದ. ಹೊಸ ಚಿಂತನೆಗಳು ಮೊಳಕೆಯೊಡೆದವು. ಇಂತಹ ಸಂದರ್ಭಗಳಲ್ಲಿ, ಸಮಸ್ಥಿತಿಯಂತೂ ನಿರ್ಮಾಣವಾಗುತ್ತದೆ, ಸಮಸ್ಥಿತಿ ಏರ್ಪಟ್ಟಾಗ ಏಕಪಕ್ಷೀಯವಾಗಿ ತಂತ್ರ ಬದಲಿಸಿದ ಸ್ಪರ್ಧಿಗೆ, ಹೆಚ್ಚು ನಷ್ಟವಾಗುತ್ತದೆ ಎಂಬುದನ್ನು ನ್ಯಾಶ್ ಕಂಡುಕೊಂಡ. ಅದನ್ನು ‘ನ್ಯಾಶ್ ಸಮಸ್ಥಿತಿ’ ಎಂದು ಕರೆಯಲಾಯಿತು.

ಸಾಮಾನ್ಯವಾಗಿ ಕೈದಿಗಳ ಉಭಯ ಸಂಕಟದ ಸಂದರ್ಭವನ್ನು ನ್ಯಾಶ್ ಸಮಸ್ಥಿತಿ ವಿವರಿಸಲು ಬಳಸಲಾಗುತ್ತದೆ. ಆ ಸಂದರ್ಭ ಹೀಗಿದೆ- ಇಬ್ಬರು ಅಪರಾಧಿಗಳನ್ನು ಬಂಧಿಸಿದ ಪೊಲೀಸರು, ಸಂವಹನ ಸಾಧ್ಯವಾಗದ ರೀತಿಯಲ್ಲಿ ಇಬ್ಬರನ್ನೂ ಪ್ರತ್ಯೇಕ ಕೊಠಡಿಗಳಲ್ಲಿ ಇಡುತ್ತಾರೆ. ಬಂಧಿಸಿದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲು ಅಗತ್ಯ ದಾಖಲೆಗಳು ಸಿಗದಾಗ, ಕೈದಿಗಳ ಮುಂದೆ ಪ್ರಸ್ತಾಪವೊಂದನ್ನು ಇಡಲಾಗುತ್ತದೆ. ಆ ಪ್ರಕಾರ ಒಂದು ವೇಳೆ ಇಬ್ಬರೂ ತಪ್ಪೊಪ್ಪಿಕೊಳ್ಳದಿದ್ದರೆ, ಕದ್ದ ಸರಕನ್ನು ಇಟ್ಟುಕೊಂಡದ್ದಕ್ಕಾಗಿ, ಶಿಕ್ಷೆಯನ್ನು ಕೇವಲ ಒಂದು ವರ್ಷಕ್ಕೆ ನಿಗದಿಗೊಳಿಸಲಾಗುವುದೆಂದು, ಇಬ್ಬರಲ್ಲಿ ಒಬ್ಬ ತಪ್ಪೊಪ್ಪಿಕೊಂಡು, ಮತ್ತೊಬ್ಬ ಸುಮ್ಮನಿದ್ದರೆ, ತಪ್ಪೊಪ್ಪಿಕೊಂಡವನನ್ನು ಖುಲಾಸೆ ಮಾಡುವುದಾಗಿಯೂ, ಸುಮ್ಮನಿದ್ದವನಿಗೆ 6 ವರ್ಷಗಳ ಸಜೆಯನ್ನು ನಿಗದಿಗೊಳಿಸಲಾಗುವುದೆಂದೂ, ಇಬ್ಬರೂ ತಪ್ಪೊಪ್ಪಿಕೊಂಡ ಪಕ್ಷದಲ್ಲಿ, ತಲಾ 2 ವರ್ಷಗಳ ಶಿಕ್ಷೆ ವಿಧಿಸಲಾಗುವುದೆಂದೂ, ನಿರ್ಧಾರ ನಿಮಗೇ ಬಿಟ್ಟಿದ್ದೆಂದೂ ಹೇಳುತ್ತಾರೆ.

ಆಗ ಉಭಯಸಂಕಟ ಉಂಟಾಗುತ್ತದೆ. ಕೊನೆಗೆ ಇಬ್ಬರೂ ತಪ್ಪೊಪ್ಪಿಕೊಳ್ಳುವ ಮಾರ್ಗವನ್ನೇ ಆಯ್ದುಕೊಳ್ಳುತ್ತಾರೆ! ಕಾರಣವಿಷ್ಟೇ, ಪೊಲೀಸರು ಮುಂದಿಟ್ಟ ಪ್ರಸ್ತಾಪವನ್ನು ಕೇಳಿದ ಕೂಡಲೇ, ಒಬ್ಬ ಕೈದಿಗೆ ಮತ್ತೊಬ್ಬ ಕೈದಿಯ ತೀರ್ಮಾನದ ಬಗ್ಗೆ ಚಿಂತೆ ಆರಂಭವಾಗುತ್ತದೆ. ಆತ ಸುಮ್ಮನಿರುತ್ತಾನೆನ್ನುವ ಖಾತ್ರಿಯೇನು? ತಾನು ಸುಮ್ಮನಿದ್ದು, ಆತ ತಪ್ಪೊಪ್ಪಿಕೊಂಡು ಬಿಟ್ಟರೆ? ತನಗೆ ಹೆಚ್ಚು ಶಿಕ್ಷೆಯಾಗುತ್ತದೆ, ಆತ ಖುಲಾಸೆಯಾಗುತ್ತಾನೆ. ಆತನ ನಿರ್ಣಯವೇನೇ ಇರಲಿ, ತನ್ನ ಶಿಕ್ಷೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಲಭ್ಯವಿರುವ ‘ಏಕೈಕ ಆಯ್ಕೆ’ ತಪ್ಪೊಪ್ಪಿಕೊಳ್ಳುವುದೆಂದು ನಿರ್ಧರಿಸಿ ಆ ದಾರಿಯನ್ನೇ ಹಿಡಿಯುತ್ತಾನೆ. ಇತ್ತ ಮತ್ತೊಬ್ಬನ ಯೋಚನೆ, ತೀರ್ಮಾನವೂ ಅದೇ ಆಗಿರುತ್ತದೆ. ಹೀಗಾಗಿ ಇಬ್ಬರೂ ತಪ್ಪೊಪ್ಪಿಕೊಂಡು ತಲಾ 2 ವರ್ಷದ ಸಜೆಗೆ ಗುರಿಯಾಗುತ್ತಾರೆ. ಹೀಗೆ ಏಕಪಕ್ಷೀಯವಾಗಿ ತಂತ್ರ ಬದಲಿಸಲಾಗದ ಸ್ಥಿತಿ ಏರ್ಪಡುವುದನ್ನೇ ನ್ಯಾಶ್, ಸಮಸ್ಥಿತಿ ಎಂದು ಕರೆದ. ಗಣಿತದ ಸೂತ್ರಗಳಲ್ಲಿ ನಿರೂಪಿಸಿದ.  ಮೊದಲು ಅಷ್ಟೇನೂ ಸದ್ದು ಮಾಡದ ನ್ಯಾಶ್ ಸಮಸ್ಥಿತಿ, ಮುಂದೊಂದು ದಿನ ಅರ್ಥಶಾಸ್ತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತದೆ, ನೊಬೆಲ್ ಪ್ರಶಸ್ತಿಯೇ ತನ್ನನ್ನು ಹುಡುಕಿಕೊಂಡು ಬರುತ್ತದೆ ಎಂದು ನ್ಯಾಶ್ ಊಹಿಸಿರಲಿಲ್ಲ. ಆದರೆ ನ್ಯಾಶ್ ಸಮಸ್ಥಿತಿ, ಗೇಮ್ ಥಿಯರಿಗೆ ಹೊಸ ಸಾಧ್ಯತೆಗಳನ್ನು ತೋರಿಸಿತು, ಪರಿಧಿಯನ್ನು ಹಿಗ್ಗಿಸಿತು.

ಗೇಮ್ ಥಿಯರಿಗೆ ನ್ಯಾಶ್ ನೀಡಿದ ಹೊಸ ದೃಷ್ಟಿಯಿಂದಾಗಿ, ಅದರ ಬಳಕೆ ವಿವಿಧ ಕ್ಷೇತ್ರಗಳಿಗೆ ವಿಸ್ತಾರಗೊಂಡಿತು. ಜೀವಶಾಸ್ತ್ರದ ಅಧ್ಯಯನದಲ್ಲಿ ಗೇಮ್ ಥಿಯರಿಯನ್ನು ವ್ಯಾಪಕವಾಗಿ ಬಳಸಲಾಯಿತು. ಅರ್ಥಶಾಸ್ತ್ರ, ರಾಜ್ಯಶಾಸ್ತ್ರಗಳಲ್ಲಿ ಗೇಮ್ ಥಿಯರಿ ಸಂಚಲನ ಮೂಡಿಸಿತು. ನ್ಯಾಶ್ ಪ್ರತಿಭೆಯನ್ನು ಕ್ಯಾಲಿಫೋರ್ನಿಯಾದ ಮಿಲಿಟರಿ ಥಿಂಕ್ ಟ್ಯಾಂಕ್ ಸಂಸ್ಥೆ, ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (RAND) ಕಾರ್ಪೊರೇಷನ್ ಬಳಸಿಕೊಂಡಿತು. ಅಮೆರಿಕದ ರಕ್ಷಣೆ ಮತ್ತು ರಾಜತಾಂತ್ರಿಕ ನೀತಿಯನ್ನು ನಿರೂಪಿಸಲು, ಥಿಯರಿ ಆಫ್ ಗೇಮ್ ಸಹಾಯಕ್ಕೆ ಬಂತು. ಅಮೆರಿಕದ ಎಫ್.ಸಿ.ಸಿ (Federal communication commission) ರೇಡಿಯೊ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲೂ ಗೇಮ್ ಥಿಯರಿ ಬಳಸಿ ದುಡ್ಡು ಬಾಚಿತು. ಫಾರ್ಚುನ್ ಮ್ಯಾಗಜಿನ್, ನ್ಯಾಶ್ ಈ ಶತಮಾನದ ಮಹಾನ್ ಗಣಿತತಜ್ಞ ಎಂದು ಕೊಂಡಾಡಿತು.

ಆದರೆ ಅದೇ ಹೊತ್ತಿಗೆ ನ್ಯಾಶ್ ಬದುಕಿನಲ್ಲಿ ಬಿರುಗಾಳಿಯೊಂದು ಬೀಸಿ, ಆತನನ್ನು ಭ್ರಮಾ ಜಗತ್ತಿಗೆ ನೂಕಿಯಾಗಿತ್ತು. ಸ್ಕಿಜೊಫ್ರೇನಿಯಾ ನ್ಯಾಶ್ ಬದುಕನ್ನು ಕದಲಿಸಿತು. ಅನೇಕ ಅಪವಾದಗಳು ಮೆತ್ತಿಕೊಂಡವು. ನೌಕರಿ ತೊರೆದ ನ್ಯಾಶ್, ಯುರೋಪಿನಲ್ಲಿ ಅಲೆಮಾರಿಯಾದರು, ತಮ್ಮನ್ನು ಯಾರೋ ಕೊಲ್ಲುತ್ತಾರೆ ಎಂಬ ದಿಗಿಲಿನಿಂದ, ಅಮೆರಿಕದ ಪೌರತ್ವ ತೊರೆದು ನಿರಾಶ್ರಿತರಾಗಿ ಯುರೋಪಿನಲ್ಲೇ ಉಳಿಯಲು ಯತ್ನಿಸಿದರು. ಅದುವರೆಗೂ ಮೆಚ್ಚುಗೆಯ ಕಣ್ಣಿನಿಂದ ನೋಡುತ್ತಿದ್ದವರು, ಅನುಕಂಪದ ಕಣ್ಣುಗಳಿಂದ ನೋಡುವಂತಾಯಿತು. ಆದರೆ ಪತ್ನಿ ಅಲೀಶಿಯಾ ಪ್ರತಿಕ್ಷಣವೂ ಪತಿಯನ್ನು ಕಾದರು. ತಾವು ಕಂಪ್ಯೂಟರ್  ಪ್ರೋಗ್ರಾಮರ್ ಆಗಿ ದುಡಿದು, ನ್ಯಾಶ್‍ ಅವರನ್ನು ನೋಡಿಕೊಂಡರು. ಗಣಿತದ ಗೀಳು ಬೆಳೆಸಿಕೊಂಡಿದ್ದ ನ್ಯಾಶ್, ಮೊದಲಿನಂತಾಗಲು ಕಾಲೇಜಿನ ವಾತಾವರಣವೇ ಸೂಕ್ತವೆಂಬುದು ಅಲೀಶಿಯಾ ಅವರಿಗೆ ಮನವರಿಕೆ ಆಗಿತ್ತು.

ಆತನ ಸಹೋದ್ಯೋಗಿಗಳು ನ್ಯಾಶ್ ಅವರನ್ನು ಪುನಃ ಕೆಲಸಕ್ಕೆ ಹಚ್ಚಲು ಸಹಾಯ ಮಾಡಿದರು. ವರುಷಗಳು ಉರುಳಿದಂತೆ ನ್ಯಾಶ್, ತಮ್ಮ ಮನಸ್ಸನ್ನು ಹಿಡಿತಕ್ಕೆ ತಂದುಕೊಂಡರು. ಅರ್ಥಶಾಸ್ತ್ರಜ್ಞರ ತಂಡ, ವ್ಯಕ್ತಿಯೊಬ್ಬ ಮಾನಸಿಕ ವ್ಯಾಧಿಗೆ ಒಳಗಾಗಿದ್ದ ಎಂಬ ಕಾರಣದಿಂದ ಆತನ ದೊಡ್ಡ ಕೊಡುಗೆಯನ್ನು ಕಡೆಗಣಿಸಿ, ನೊಬೆಲ್ ನಿರಾಕರಿಸಬಾರದು ಎಂದು ವಾದಿಸಿತು. ಅದಾಗಲೇ ಬದುಕಿನ ಆಟದಲ್ಲಿ ಗೆದ್ದು ಸೋತಿದ್ದ ನ್ಯಾಶ್, ನೊಬೆಲ್ ಪ್ರಶಸ್ತಿಯೊಂದಿಗೆ ಮತ್ತೆ ಗೆಲ್ಲುವಂತಾಯಿತು. ನ್ಯಾಶ್ ಜೀವನ ಕಥನ ಪುಸ್ತಕವಾಗಿ, ಚಲನಚಿತ್ರವಾಗಿ (Beautiful Mind) ಬಂದ ಮೇಲಂತೂ ಜನಪ್ರಿಯತೆ ಉತ್ತುಂಗಕ್ಕೇರಿತು. ಕಳೆದ ವಾರವಷ್ಟೇ ಪ್ರತಿಷ್ಠಿತ ಅಬೆಲ್ ಪ್ರಶಸ್ತಿಯೂ ನ್ಯಾಶ್ ಮುಡಿಗೇರಿತ್ತು. ಆದರೆ ವಿಧಿಯ ತಂತ್ರ ಬೇರೆಯೇ ಇತ್ತು. ಪ್ರಶಸ್ತಿಯ ಜೊತೆಗೆ ತಮ್ಮನ್ನು ನಾರ್ವೆಯಿಂದ ಅಮೆರಿಕಕ್ಕೆ ಹೊತ್ತುತಂದ ವಿಮಾನ, ನಿಗದಿತ ವೇಳೆಗೆ ಮೊದಲೇ ಭೂಮಿಗೆ ಇಳಿದಿದ್ದರಿಂದ, ತಮ್ಮ ಕಾರಿಗಾಗಿ ಕಾಯದೇ, ನ್ಯಾಶ್ ದಂಪತಿ ಟ್ಯಾಕ್ಸಿ ಹಿಡಿದು ಮನೆಗೆ ಹೊರಟರು. ಮಾರ್ಗ ಮಧ್ಯದಲ್ಲಿ ಅಪಘಾತವಾಗಿ ತೀರಿಕೊಂಡರು. ನ್ಯಾಶ್ ಎಂಬ ಅಸಾಮಾನ್ಯನ, ಅಸಮತೋಲನದ ಬದುಕು ಅಂತ್ಯಗೊಂಡಿತು.
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT