ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಆದರೆ ಇನ್ನೂ ಇಸ್ರೇಲ್ ಮೇಲಿನ ರಾಕೆಟ್ ದಾಳಿ, ಹಮಾಸ್ ಅಡಗುತಾಣಗಳ ಮೇಲಿನ ಇಸ್ರೇಲ್ ಪ್ರತಿದಾಳಿ ನಿಂತಿಲ್ಲ. ಗಾಜಾಪಟ್ಟಿ ಎಂಬ ಜನಸಂದಣಿಯ ತುಂಡುಭೂಮಿಯಲ್ಲಿ ಮಾನವೀಯ ಬಿಕ್ಕಟ್ಟು ಉಂಟಾಗಿದೆ. ಆಹಾರ, ನೀರು, ಇಂಧನ ಮತ್ತು ವೈದ್ಯಕೀಯ ಸೌಲಭ್ಯದ ಅಭಾವ ಜನರನ್ನು ಕೊಲ್ಲುತ್ತಿದೆ. ಗಾಜಾಪಟ್ಟಿಯ ಜನರಿಗೆ ಹೆಚ್ಚು ಆಯ್ಕೆಗಳು ಉಳಿದಿಲ್ಲ.
ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಇಸ್ರೇಲ್‌ನ ಹಿಂದಿನ ಯುದ್ಧಗಳಿಗೂ ಈಗಿನ ಯುದ್ಧಕ್ಕೂ ವ್ಯತ್ಯಾಸವಿದೆ. ಈ ಎಪ್ಪತ್ತೈದು ವರ್ಷಗಳಲ್ಲಿ ನಾಲ್ಕಾರು ಬಾರಿ ಇಸ್ರೇಲ್ ನೆರೆಯ ರಾಷ್ಟ್ರಗಳೊಂದಿಗೆ ಕಾದಾಡಿದೆಯಾದರೂ ಅವು ನೇರ ಯುದ್ಧಗಳಾಗಿದ್ದವು. ಇಸ್ರೇಲ್ ತನ್ನ ಸೇನಾ ಸಾಮರ್ಥ್ಯವನ್ನು, ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಆ ಯುದ್ಧಗಳಲ್ಲಿ ಜಯಿಸಿತ್ತು.
ಆದರೆ ಈಗಿನದ್ದು ಬೇರೆಯದೇ ಕತೆ. ಹಮಾಸ್ ಹಲವು ವರ್ಷಗಳ ಪೂರ್ವತಯಾರಿ ಮಾಡಿಕೊಂಡೇ ಇಸ್ರೇಲ್ ಮೇಲೆ ಸಮರ ಸಾರಿದೆ. ಸುರಂಗಗಳನ್ನು ಗಾಜಾಪಟ್ಟಿಯ ಉದ್ದಗಲಕ್ಕೂ ನಿರ್ಮಿಸಿಕೊಂಡಿದೆ. ಗಾಜಾದ ಆಸ್ಪತ್ರೆ, ಶಾಲೆ ಮತ್ತು ಜನವಸತಿಗಳ ಅಡಿಯಲ್ಲಿ ತನ್ನ ಶಸ್ತ್ರಾಗಾರವನ್ನು ಮತ್ತು ಅಡಗುತಾಣಗಳನ್ನು ನಿರ್ಮಿಸಿಕೊಂಡು ಇಸ್ರೇಲ್ ಮೇಲೆ ದಾಳಿಗೆ ಇಳಿದಿದೆ.
ಇಸ್ರೇಲ್ ಸೇನೆ ಇಕ್ಕಟ್ಟಿನ ಕಾಲುದಾರಿಗಳ ಮೂಲಕ ಹೋಗಿಯೇ ಹಮಾಸ್ ಜೊತೆಗೆ ಕಾದಾಡಬೇಕಾದ ಪರಿಸ್ಥಿತಿಯಿದೆ. ಆದರೆ ಭೂಮಾರ್ಗದ ಕಾರ್ಯಾಚರಣೆ ಸುಲಭವಿಲ್ಲ. ಇಸ್ರೇಲ್ ಸೈನಿಕರನ್ನು ಗುರಿಯಾಗಿಸಿಕೊಂಡು ಹಮಾಸ್ ಅಡಗುತಾಣದಿಂದಲೇ ದಾಳಿ ನಡೆಸಿದರೆ, ಇಸ್ರೇಲ್ ಸೇನೆ ಪ್ರತಿದಾಳಿ ನಡೆಸುವುದು ತ್ರಾಸದಾಯಕ. ಬರೀ ವಾಯುದಾಳಿಯನ್ನು ನೆಚ್ಚಿಕೊಂಡರೆ ಅದು ಅಮಾಯಕರ ಸಾವಿಗೆ ಕಾರಣವಾಗುತ್ತದೆ ಮತ್ತು ಜಾಗತಿಕ ಆಕ್ರೋಶ ಇಸ್ರೇಲ್ ಕಡೆ ತಿರುಗುತ್ತದೆ.
ಈಗ ಆಗಿರುವುದೇ ಅದು. ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ, ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಇಸ್ರೇಲ್‌ಗೆ ಬೆಂಬಲವಾಗಿ ನಿಂತಿದ್ದವು ಮತ್ತು ಹಮಾಸ್ ಕೃತ್ಯವನ್ನು ಭಯೋತ್ಪಾದನೆ ಎಂದು ಒಕ್ಕೊರಲಿನಿಂದ ಖಂಡಿಸಿದ್ದವು. ನಂತರ ಹಮಾಸ್ ವಿರುದ್ಧ ಇಸ್ರೇಲ್ ದಾಳಿಗೆ ಇಳಿಯಿತು. ಎಷ್ಟೇ ಶಕ್ತಿಶಾಲಿ ರಾಷ್ಟ್ರವಾದರೂ ಭಾವನಾತ್ಮಕವಾಗಿ ಸಿಟ್ಟಿನ ಭರದಲ್ಲಿ ಯುದ್ಧ ಘೋಷಿಸಿದರೆ ಅದು ಗುರಿ ಮುಟ್ಟಲಾರದು. ಅಫ್ಗಾನಿಸ್ತಾನ ಮತ್ತು ಇರಾಕ್‌ನಲ್ಲಿ ಅಮೆರಿಕಕ್ಕೆ ಹಿನ್ನಡೆಯಾದದ್ದು ಆ ಕಾರಣದಿಂದಲೇ. ಹಮಾಸ್ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸುವುದು ಇಸ್ರೇಲಿನ ಮೊದಲ ಆದ್ಯತೆ ಆಗಬೇಕಿತ್ತು, ಆ ದಿಸೆಯಲ್ಲಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಇಸ್ರೇಲ್ ಹೊರಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ‘ಹಮಾಸ್ ಅನ್ನು ಮೂಲೋತ್ಪಾಟನೆ ಮಾಡುತ್ತೇವೆ’ ಎಂದು ಇಸ್ರೇಲ್ ಹೊರಟಿತು. ಹಮಾಸ್ ದಾಳಿಯ ಬಳಿಕ ಆಂತರಿಕವಾಗಿ ಇಸ್ರೇಲ್ ಸರ್ಕಾರದ ವಿರುದ್ಧ ಭುಗಿಲೆದ್ದ ಇಸ್ರೇಲೀಯರ ಆಕ್ರೋಶವನ್ನು ತಣಿಸಲು ಇಂತಹ ಹೇಳಿಕೆಯನ್ನು ಇಸ್ರೇಲ್ ನಾಯಕರು ನೀಡಿದರು ಖರೆ, ಆದರೆ ವಾಯುದಾಳಿ ಆರಂಭವಾದ ಬಳಿಕ ಜಾಗತಿಕ ಅಭಿಪ್ರಾಯ ಬದಲಾಯಿತು. ಗಾಜಾದ ಜನರ ಆಕ್ರಂದನ, ಜನವಸತಿ ಮತ್ತು ಆಸ್ಪತ್ರೆಗಳ ಮೇಲಿನ ದಾಳಿಯ ಚಿತ್ರ ಹೊರಬೀಳುತ್ತಿದ್ದಂತೆಯೇ ಇಸ್ರೇಲ್ ಪರ ಇದ್ದ ಅಭಿಪ್ರಾಯ ಕರಗತೊಡಗಿತು.
ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಎದುರಾದಾಗ ಇಸ್ರೇಲಿನ ಕಿವಿ ಹಿಂಡುವ ಕೆಲಸವನ್ನು ಅಮೆರಿಕ ತೆರೆಮರೆಯಲ್ಲಿ ಮಾಡಿತು. ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ನಿಧಾನಗೊಳಿಸಿತು.ಇಲ್ಲಿ ಕೆಲವು ಪ್ರಶ್ನೆಗಳಿವೆ. ಇಸ್ರೇಲ್ ಮೇಲಿನ ದಾಳಿಯ ಮೂಲಕ ಹಮಾಸ್ ಸಾಧಿಸಿದ್ದೇನು? ಒಂದೊಮ್ಮೆ ಇಸ್ರೇಲ್ ಹೇಳುತ್ತಿರುವಂತೆ, ಹಮಾಸ್‌ನ ನಿರ್ನಾಮ ಸಾಧ್ಯವಾದರೂ ಅಲ್ಲಿಗೆ ಸಮಸ್ಯೆ ಮುಗಿಯುತ್ತದೆಯೇ? ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಸಮಸ್ಯೆಯ ಮೂಲದಲ್ಲಿರುವುದು ಅಸ್ತಿತ್ವದ ಪ್ರಶ್ನೆ. ಅದು ಅಪನಂಬಿಕೆ, ಪರಸ್ಪರ ನಿರಾಕರಣೆ ಮತ್ತು ಪ್ರತೀಕಾರ ಎಂಬ ಕವಲುಗಳಾಗಿ ಹೆಮ್ಮರವಾಗಿದೆ.
ಒಂದು ಹಂತದಲ್ಲಿ ದ್ವಿರಾಷ್ಟ್ರದ ಸೂತ್ರಕ್ಕೆ ಇಸ್ರೇಲ್ ಬದ್ಧವಾಗಿತ್ತಾದರೂ, ಪಶ್ಚಿಮ ದಂಡೆಯಲ್ಲಿ ಇಸ್ರೇಲೀಯರನ್ನು ತುಂಬುತ್ತಾ ತನ್ನ ಹಿಡಿತ ಸಾಧಿಸುವ ಪ್ರಯತ್ನಕ್ಕೆ ಮುಂದಾಯಿತು. ಮೊದಲಿಗೆ ಇಸ್ರೇಲಿನ ಅಸ್ತಿತ್ವವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಪ್ಯಾಲೆಸ್ಟೀನ್ ವಿಮೋಚನಾ ಸಂಘಟನೆ, ಕ್ಲಿಂಟನ್ ಅವಧಿಯಲ್ಲಿ ಇಸ್ರೇಲ್ ಎಂಬ ವಾಸ್ತವವನ್ನು ಒಪ್ಪಿಕೊಂಡಿತು. ಆದರೆ ಸಮಸ್ಯೆ ಬಗೆಹರಿಯಲಿಲ್ಲ. ಓಸ್ಲೋ ಒಪ್ಪಂದದ ಬಳಿಕ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಹುಡುಕುವ ಪ್ರಯತ್ನಗಳು ನಡೆಯಲಿಲ್ಲ. ಅದು ಪ್ಯಾಲೆಸ್ಟೀನ್ ವಿಮೋಚನಾ ಸಂಘಟನೆಯ ಕುರಿತ ಅಪನಂಬಿಕೆಗೆ ಜಾಗ ಒದಗಿಸಿತು. ಆ ಜಾಗದಲ್ಲಿ ಹುಟ್ಟಿಕೊಂಡ ಹಮಾಸ್, ಗಾಜಾದ ಮೇಲೆ ಹಿಡಿತ ಸಾಧಿಸಿತು.
ಪಶ್ಚಿಮ ದಂಡೆಯಲ್ಲಿ ಪ್ರಭಾವ ಹೊಂದಿದ್ದ ಫತಾಹ್ ಮತ್ತು ಹಮಾಸ್ ನಡುವೆ ಮತ್ತೊಂದು ಬಗೆಯ ಪೈಪೋಟಿ ಆರಂಭವಾಯಿತು. ಪ್ಯಾಲೆಸ್ಟೀನ್ ಪರ ಇರುವ ಏಕೈಕ ರಾಜಕೀಯ ಧ್ವನಿಯಾಗಿ ತಾನು ಹೊರಹೊಮ್ಮಬೇಕು ಎಂಬ ತುಡಿತವನ್ನು ಹಮಾಸ್ ಹೊಂದಿತ್ತು. ಇಸ್ರೇಲ್ ಮೇಲಿನ ದಾಳಿಯಿಂದ ತನ್ನ ಕಾರ್ಯಸಾಧನೆಗೆ ಅನುಕೂಲವಾದೀತು ಎಂದು ಹಮಾಸ್ ಭಾವಿಸಿರಬಹುದು. ಹಾಗಾಗಿ, ಮಾನವ ಗುರಾಣಿ ಹಿಡಿದು ಅದು ತನ್ನ ಧ್ಯೇಯವನ್ನು ಈಡೇರಿಸಿಕೊಳ್ಳಲು ಹೊರಟಿರಬಹುದು. ಒತ್ತೆಯಾಳುಗಳನ್ನು ಮುಂದಿರಿಸಿ, ಇಸ್ರೇಲನ್ನು ಕದನವಿರಾಮಕ್ಕೆ ಒಪ್ಪಿಸುವ ತಂತ್ರವನ್ನು ಹಮಾಸ್ ಅನುಸರಿಸುತ್ತಿರಬಹುದು.
ಆದರೆ ಕದನವಿರಾಮ ಘೋಷಿಸಿ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಜೊತೆಗೆ ಮಾತುಕತೆಗೆ ಕೂತರೆ, ಅದನ್ನು ಜಗತ್ತು ಇಸ್ರೇಲಿನ ಸೋಲು ಎಂದು ನೋಡುತ್ತದೆ. ಅದು ಇಸ್ರೇಲಿಗೆ ಬೇಕಿಲ್ಲ. ಹಾಗಾಗಿಯೇ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಹೊಣೆಯನ್ನು ಅದು ಅಮೆರಿಕದ ಹೆಗಲಿಗೆ ಹಾಕಿದಂತಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರು, ಜೋರ್ಡನ್, ಕತಾರ್, ಸೌದಿ, ಈಜಿಪ್ಟ್, ಯುಎಇ ಮತ್ತು ಟರ್ಕಿ ನಾಯಕರ ಜೊತೆ ಮಾತುಕತೆಗೆ ಇಳಿದಿದ್ದಾರೆ. ಯುದ್ಧದ ವ್ಯಾಪ್ತಿ ಹಿರಿದಾಗುವುದನ್ನು ತಡೆಯುವ ಮತ್ತು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆತರುವ ದಿಸೆಯಲ್ಲಿ ಸಾಧ್ಯವಿರುವ ಎಲ್ಲ
ಪ್ರಯತ್ನಗಳನ್ನೂ ಅಮೆರಿಕ ಮಾಡುತ್ತಿದೆ.
ಹಮಾಸ್ ಅನ್ನು ಕಿತ್ತೊಗೆಯಲು ಪಣ ತೊಟ್ಟಿರುವ ಇಸ್ರೇಲ್ ಒಂದೊಮ್ಮೆ ಅದನ್ನು ಸಾಧ್ಯಮಾಡಿದರೂ, ಸಮಸ್ಯೆ ಬಗೆಹರಿಯಲಾರದು. 1967ರಿಂದ 2005ರವರೆಗೆ ಗಾಜಾವನ್ನು ಹಿಡಿದಿಟ್ಟುಕೊಂಡಿದ್ದ ಇಸ್ರೇಲ್, ಅಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗಿರಲಿಲ್ಲ. ಗಾಜಾದಿಂದ ಇಸ್ರೇಲ್ ಹೊರನಡೆದ ಕೂಡಲೇ ಹಮಾಸ್ ತನ್ನ ಹಿಡಿತವನ್ನು ಬಿಗಿಗೊಳಿಸಿತು. ಈಗ ಮತ್ತೊಮ್ಮೆ ಗಾಜಾವನ್ನು ಅಧೀನಕ್ಕೆ ತೆಗೆದುಕೊಂಡರೂ, ಆ ಕಿರಿದಾದ ಪ್ರದೇಶವನ್ನು ಸಂಭಾಳಿಸುವುದು ಸುಲಭವಿಲ್ಲ ಎಂಬುದು ಇಸ್ರೇಲಿಗೂ ಗೊತ್ತಿದೆ. ಕೆಲ ಸಮಯದ ಬಳಿಕ ಗಾಜಾವನ್ನು ಇಸ್ರೇಲ್ ತೊರೆದರೆ ಹಮಾಸ್ ಜಾಗಕ್ಕೆ ಇಸ್ಲಾಮಿಕ್ ಜಿಹಾದ್ ಸಂಘಟನೆ ಬಂದು ಕೂರುತ್ತದೆ. ಕತಾರ್ ಅಥವಾ ಮತ್ತಿನ್ನಾವುದೋ ದೇಶದಲ್ಲಿ ಕೂತ ನಾಯಕರ ಆಣತಿಯಂತೆ ಅದು ಕಾರ್ಯನಿರ್ವಹಿಸುತ್ತದೆ.
ಅತ್ತ ಪಶ್ಚಿಮದಂಡೆಯ ಆಡಳಿತವನ್ನು ಫತಾಹ್ ನೋಡಿಕೊಳ್ಳುತ್ತಿದೆ ಮತ್ತು ಅದರಿಂದ ಇಸ್ರೇಲಿಗೆ ಹೆಚ್ಚಿನ ತೊಂದರೆಯಾಗಿಲ್ಲ ನಿಜ. ಗಾಜಾವನ್ನು ಫತಾಹ್ ನಿಯಂತ್ರಣಕ್ಕೆ ಬಿಡುವ ಯೋಚನೆ ಮಾಡಿದರೂ, ಗಾಜಾದ ಜನ ಫತಾಹ್ ನಾಯಕತ್ವವನ್ನು ಒಪ್ಪಿಕೊಳ್ಳುವರೇ ಎಂಬ ಪ್ರಶ್ನೆ ಇದೆ.
ಒಂದೊಮ್ಮೆ ಅರಬ್ ರಾಷ್ಟ್ರಗಳು ಮತ್ತು ಅಮೆರಿಕ ಜೊತೆಗೂಡಿ, ದ್ವಿರಾಷ್ಟ್ರ ಸೂತ್ರದ ಅನುಷ್ಠಾನಕ್ಕೆ ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ ಕಾರ್ಯೋನ್ಮುಖವಾದರೂ, ಪ್ಯಾಲೆಸ್ಟೀನ್ ಭದ್ರತೆ ಮತ್ತು ಪುನರ್ನಿರ್ಮಾಣ ಕಾರ್ಯವನ್ನು ಈಜಿಪ್ಟ್, ಜೋರ್ಡನ್, ಸೌದಿಯಂತಹ ಅರಬ್ ರಾಷ್ಟ್ರಗಳು ಒಟ್ಟಾಗಿ ವಹಿಸಿಕೊಳ್ಳಬೇಕಾಗುತ್ತದೆ. ಪಶ್ಚಿಮದಂಡೆಯಲ್ಲಿರುವ ಇಸ್ರೇಲ್‌ನ ಸೆಟಲ್ಮೆಂಟ್‌ಗಳನ್ನು ತೆರವುಗೊಳಿಸುವಂತೆ ಇಸ್ರೇಲನ್ನು ಅಮೆರಿಕ ಒಪ್ಪಿಸಬೇಕಾಗುತ್ತದೆ. ಒಂದೊಮ್ಮೆ ಇಸ್ರೇಲ್ ಒಪ್ಪಿದರೂ ಅಮೆರಿಕ, ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್ ಒಂದಾಗಿ ನಿಂತು ಬಿಕ್ಕಟ್ಟು ಬಗೆಹರಿಸಿಕೊಳ್ಳುವುದನ್ನು ಇರಾನ್, ಟರ್ಕಿ, ರಷ್ಯಾ ಮತ್ತು ಚೀನಾ ಸಹಿಸಲಾರವು. ಹಾಗಾಗಿ ಇಸ್ರೇಲ್– ಹಮಾಸ್ ಸಮರ ತಿಂಗಳೊಪ್ಪತ್ತಿನಲ್ಲಿ
ನಿರ್ಣಾಯಕ ಹಂತಕ್ಕೆ ಬಂದರೂ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸುಲಭವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.