ADVERTISEMENT

ಸೀಮೋಲ್ಲಂಘನ | ಬ್ರಿಟನ್: ಬ್ರೆಕ್ಸಿಟ್, ಬೋರಿಸ್, ಮುಂದೇನು?

ರಿಷಿ, ಲಿಜ್ ಇಬ್ಬರಲ್ಲಿ ಯಾರೇ ಪ್ರಧಾನಿಯಾದರೂ ಬ್ರಿಟನ್‌– ಭಾರತದ ಸಂಬಂಧ ಬದಲಾಗದು

ಸುಧೀಂದ್ರ ಬುಧ್ಯ
Published 29 ಆಗಸ್ಟ್ 2022, 19:31 IST
Last Updated 29 ಆಗಸ್ಟ್ 2022, 19:31 IST
   

ಬ್ರಿಟನ್, ಸಮಸ್ಯೆಗಳ ಸುಳಿಯಿಂದ ಎದ್ದುಬರಲು ಹೆಣಗಾಡುತ್ತಿದೆ. ಆರು ವರ್ಷಗಳ ಹಿಂದೆ ಡೇವಿಡ್ ಕ್ಯಾಮರೂನ್ ಅವರು ಬ್ರಿಟನ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಲ್ಲಿನ ಅರ್ಧದಷ್ಟು ಜನ ತಮ್ಮ ಸಮಸ್ಯೆಗಳಿಗೆ ಮೂಲ ಕಾರಣ ತಾವು ಐರೋಪ್ಯ ಒಕ್ಕೂಟದ ಭಾಗವಾಗಿರುವುದು ಎಂದು ವಾದಿಸುತ್ತಿದ್ದರು. ‘ಒಕ್ಕೂಟದ ಭಾಗವಾಗಿರುವುದೇ ಕ್ಷೇಮ’ ಎಂಬ ನಿಲುವು ತಳೆದಿದ್ದ ಕ್ಯಾಮರೂನ್ ತಮ್ಮ ಸ್ಥಾನವನ್ನು ತ್ಯಜಿಸಬೇಕಾಯಿತು. ನಂತರ ಬ್ರೆಕ್ಸಿಟ್ ಪರ ವಕಾಲತ್ತು ವಹಿಸಿದ್ದ ಥೆರೇಸಾ ಮೇ ಆ ಜಾಗಕ್ಕೆ ಬಂದರು. ಆದರೆ ಸಂಸತ್ತಿನಲ್ಲಿ ಬಹುಮತವಿರದ ಕಾರಣ ಬ್ರೆಕ್ಸಿಟ್ ಕರಾರಿಗೆ ಸಂಸತ್ತಿನ ಮನವೊಲಿಸಲು ಸೋತು ಅಧಿಕಾರ ತ್ಯಜಿಸಿದರು. ಬ್ರೆಕ್ಸಿಟ್ ಪರ ದೊಡ್ಡದೊಂದು ಅಲೆ ಎದ್ದಾಗ, ಅದನ್ನು ಏರಿ ಕುಳಿತ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿಯಾದರು.

ಬೋರಿಸ್ ಜಾನ್ಸನ್ ಅವರು ಬ್ರಿಟನ್ ಪ್ರಧಾನಿ ಯಾದಾಗ ಅವರನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್ ಅವರಿಗೆ ಹೋಲಿಸಲಾಗಿತ್ತು. ಟ್ರಂಪ್ ಅವರು ಮೆಕ್ಸಿಕೊ ಗೋಡೆ ಕುರಿತು ಮಾತನಾಡುತ್ತಿದ್ದ ಮಾದರಿಯಲ್ಲೇ ಬ್ರೆಕ್ಸಿಟ್ ಕುರಿತು ಬೋರಿಸ್ ಮಾತನಾಡು ತ್ತಿದ್ದರು. ಬೋರಿಸ್ ಅವರ ಅವಕಾಶವಾದಿ ವ್ಯಕ್ತಿತ್ವದ ಬಗ್ಗೆ ಒಂದು ಕತೆ ಇದೆ. ಬ್ರೆಕ್ಸಿಟ್ ವಿಷಯದಲ್ಲಿ ಅವರಿಗೆ ಒಂದು ನಿಖರ ನಿಲುವು ಇರಲಿಲ್ಲವಂತೆ. ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂದು ಪ್ರತಿಪಾದಿಸುವ ಒಂದು ಭಾಷಣ ವನ್ನು, ಬ್ರೆಕ್ಸಿಟ್ ಅನಿವಾರ್ಯ ಏಕೆ ಎಂದು ಮತ್ತೊಂದು ಭಾಷಣವನ್ನು ಬೋರಿಸ್ ಸಿದ್ಧಪಡಿಸಿಕೊಂಡಿದ್ದರಂತೆ. ಯಾವಾಗ ಅಂದಿನ ಪ್ರಧಾನಿ ಕ್ಯಾಮರೂನ್ ಅವರು ಒಕ್ಕೂಟದಲ್ಲೇ ಉಳಿಯುವ ನಿಲುವು ತಳೆದರೋ, ಪಕ್ಷ ಮತ್ತು ದೇಶವನ್ನು ಮುನ್ನಡೆಸುವ ಸಮಯ ಇದೀಗ ತನ್ನದು ಎಂದು ಬ್ರೆಕ್ಸಿಟ್ ಪರ ಸಿದ್ಧಮಾಡಿಕೊಂಡಿದ್ದ ಭಾಷಣ ಹಿಡಿದು ಜಾನ್ಸನ್ ಮುಖ್ಯಭೂಮಿಕೆಗೆ ಬಂದರಂತೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಸ್ಪಷ್ಟಬಹುಮತದೊಂದಿಗೆ ಪ್ರಧಾನಿಯಾದ ಕಾರಣ, ಬ್ರೆಕ್ಸಿಟ್ ಕರಾರಿಗೆ ಸಂಸತ್ತಿನ ಒಪ್ಪಿಗೆ ಪಡೆಯುವುದು ಕಷ್ಟವಾಗಲಿಲ್ಲ. ಬ್ರೆಕ್ಸಿಟ್ ಪರ ಜನರ ಮನವೊಲಿಸುವಾಗ ಬೋರಿಸ್ ಅವರು ಜನರಲ್ಲಿ ಆಶಾವಾದ ತುಂಬಿದ್ದರು. ಐರೋಪ್ಯ ಒಕ್ಕೂಟದಿಂದ ಹೊರಬಂದರೆ ವಾಣಿಜ್ಯಿಕ ಚಟುವಟಿಕೆಗಳಲ್ಲಿ ಚುರುಕುತನ ತರಬಹುದು, ಆರ್ಥಿಕವಾಗಿ ಶಕ್ತರಾಗಬಹುದು, ಗತ ವೈಭವಕ್ಕೆ ಮರಳಬಹುದು ಎಂದು ಜನರನ್ನು ಹುರಿದುಂಬಿಸಿದ್ದರು. ಆದರೆ ವರುಷ ಕಳೆದರೂ ಬ್ರೆಕ್ಸಿಟ್‌ನಿಂದ ಆದ ಲಾಭ ಪೂರ್ಣಪ್ರಮಾಣದಲ್ಲಿ ಗೋಚರಿಸಲಿಲ್ಲ. ಜೊತೆಗೆ ಅದೇ ವೇಳೆಗೆ ಕೊರೊನಾ ಸೋಂಕು ಜಗತ್ತನ್ನು ಆವರಿಸಿ ಕೊಂಡಿತು. ಬ್ರಿಟನ್ ಆರ್ಥಿಕವಾಗಿ ಮತ್ತಷ್ಟು ಜರ್ಜರಿತಗೊಂಡಿತು.

ADVERTISEMENT

ಬ್ರೆಕ್ಸಿಟ್ ಭರವಸೆ ಹುಸಿಗೊಳ್ಳುತ್ತಿದ್ದ ಹಂತದಲ್ಲೇ ಬೋರಿಸ್ ಅವರನ್ನು ಪೇಚಿಗೆ ಸಿಲುಕಿಸುವ ಬೆಳವಣಿಗೆಗಳು ನಡೆದವು. ಕೊರೊನಾದ ಲಾಕ್‌ಡೌನ್ ಅವಧಿಯಲ್ಲಿ ಬೋರಿಸ್ ತಮ್ಮ ಸಿಬ್ಬಂದಿಯ ಜೊತೆ ಮೋಜಿನ ಕೂಟ ನಡೆಸಿದ್ದರು. ಇಂಗ್ಲೆಂಡಿನ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾಗ, ತಾವೇ ರೂಪಿಸಿದ ನಿಯಮಗಳನ್ನು ಗಾಳಿಗೆ ತೂರಿ ಮೋಜುಕೂಟದಲ್ಲಿ ಪ್ರಧಾನಿ ಭಾಗಿಯಾಗಿದ್ದರು ಎಂಬ ಸುದ್ದಿ ಹೊರಬಿತ್ತು. ಕನ್ಸರ್ವೇಟಿವ್ (ಟೋರಿ) ಪಕ್ಷದಲ್ಲಿ ಭಿನ್ನಸ್ವರ ಎದ್ದಿತು. ನಂತರ ಸರ್ಕಾರದ ಉಪಮುಖ್ಯ ಸಚೇತಕ ಕ್ರಿಸ್ ಪಿಂಚರ್ ಕುರಿತ ಹಗರಣ ಬೆಳಕಿಗೆ ಬಂದಾಗ, ಟೋರಿ ಪಕ್ಷವು ಬೋರಿಸ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿತು. ಜನರ ವಿಶ್ವಾಸವನ್ನು ಬೋರಿಸ್ ಕಳೆದುಕೊಳ್ಳುತ್ತಿದ್ದಾರೆ ಎಂಬ ಸೂಚನೆ ಸಿಕ್ಕಿದಾಗ, ಸರ್ಕಾರದ ಭಾಗವಾಗಿದ್ದ ಹಲವು ಪ್ರಮುಖರು ರಾಜೀನಾಮೆ ಇತ್ತರು. ಕೊನೆಗೆ ಪಕ್ಷದ ವಿಶ್ವಾಸ ಕಳೆದುಕೊಂಡ ಬೋರಿಸ್ ತಮ್ಮ ಹುದ್ದೆಗೆ ಒಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಬೇಕಾಯಿತು.

ಹಾಗಾದರೆ ಮುಂದೇನು? ಟೋರಿ ಪಕ್ಷದ ನಾಯಕತ್ವಕ್ಕೆ ನಡೆಯುತ್ತಿರುವ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬೋರಿಸ್ ಅವರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ರಿಷಿ ಸುನಕ್ ಮತ್ತು ವಿದೇಶಾಂಗ ಸಚಿವೆಯಾಗಿರುವ ಲಿಜ್ ಟ್ರಸ್ ಇದ್ದಾರೆ. ಟೋರಿ ಪಕ್ಷದ ನಾಯಕರಾಗಿ ಆಯ್ಕೆಯಾದವರು ಪ್ರಧಾನಿಯಾಗುತ್ತಾರೆ. 2021ರ ಡಿಸೆಂಬರ್‌ವರೆಗೂ ರಿಷಿ ಸುನಕ್ ಅವರ ಜನಪ್ರಿಯತೆ ಏರುಗತಿಯಲ್ಲಿತ್ತು. ಒಂದು ಹಂತದಲ್ಲಿ ಬೋರಿಸ್ ಜಾನ್ಸನ್ ಅವರನ್ನೂ ರಿಷಿ ಸುನಕ್ ಜನಪ್ರಿಯತೆಯ ಕ್ರಮಾಂಕದಲ್ಲಿ ಮೀರಿಸಿದ್ದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಪ್ರಧಾನಿ ಅಭ್ಯರ್ಥಿಯಾಗಬಹುದು ಎನ್ನಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಅವರ ಜನಪ್ರಿಯತೆ ಕುಸಿಯಿತು. ತೆರಿಗೆ ಏರಿಸುವ ಕುರಿತು ಅವರು ಕೈಗೊಂಡ ಕ್ರಮ ಅವರನ್ನು ಹಿಂದಕ್ಕೆ ಎಳೆಯಿತು. ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟನ್ನು ಸಮರ್ಪಕವಾಗಿ ರಿಷಿ ನಿರ್ವಹಿಸಲಿಲ್ಲ, ಚೀನಾದ ಕುರಿತು ಮೃದು ಧೋರಣೆ ಹೊಂದಿದ್ದಾರೆ, ರಿಷಿ ಅವರ ಪತ್ನಿ ಅಕ್ಷತಾ ಮೂರ್ತಿ ತಮ್ಮ ಸಾಗರೋತ್ತರ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಿಲ್ಲ ಎಂಬ ಆರೋಪಗಳು ಕೇಳಿಬಂದವು.

ಮುಂದೆ ಭಾರತದಲ್ಲಿ ಹೋಗಿ ನೆಲೆಸುತ್ತೇವೆ ಎಂಬರ್ಥದ ಮಾತನ್ನು ರಿಷಿ ಅವರ ಪತ್ನಿ ಆಡಿದ್ದು, ರಿಷಿ ಅವರು ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆ ಎಂಬ ಸಂಗತಿಗಳು ಮುನ್ನೆಲೆಗೆ ಬಂದವು. ರಿಷಿ ಅವರ ಬದ್ಧತೆಯ ಕುರಿತು ಪ್ರಶ್ನೆ ಮೊಳೆಯಿತು. ಜನಪ್ರಿಯತೆ ಮುಕ್ಕಾಯಿತು. ಅತ್ತ ಲಿಜ್ ಟ್ರಸ್ ಅವರು ತೆರಿಗೆ ಕಡಿತದ ಪ್ರಸ್ತಾವ ಮುಂದಿಟ್ಟು, ಜಾನ್ಸನ್ ಬೆಂಬಲಿಗರನ್ನು ಸೆಳೆದುಕೊಂಡು ಏಣಿಯ ಮೊದಲ ಮೆಟ್ಟಿಲಿಗೆ ಏರಿದರು. ಮುಖ್ಯವಾಗಿ ಕನ್ಸರ್ವೇಟಿವ್ ಪಕ್ಷದ ಹೆಚ್ಚಿನ ಮತದಾರರು ಹಿರಿಯ ತಲೆಮಾರಿನವರು, ಶ್ವೇತವರ್ಣೀಯರು ಮತ್ತು ಸಂಪ್ರದಾಯವಾದಿಗಳು ಆಗಿರುವುದರಿಂದ ಅವರು ಟ್ರಸ್ ಅವರತ್ತ ಒಲವು ತೋರಬಹುದೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಸೆಪ್ಟೆಂಬರ್ 5ರಂದು ಉತ್ತರ ಹೊರಬೀಳಲಿದೆ.

ಪಕ್ಷದ ಆಂತರಿಕ ಚುನಾವಣೆಯಲ್ಲಿ ಯಾರೇ ಗೆದ್ದರೂ, ನೂತನ ಪ್ರಧಾನಿಯನ್ನು ಎದುರುಗೊಳ್ಳಲು ಸಮಸ್ಯೆಗಳು ಸರತಿಯಲ್ಲಿ ನಿಂತಿವೆ. ಈ ವರ್ಷಾಂತ್ಯದ ವೇಳೆಗೆ ಬ್ರಿಟನ್ ಆರ್ಥಿಕ ಹಿಂಜರಿತವನ್ನು ಎದುರಿಸಲಿದೆ ಎಂದು ‘ಬ್ಯಾಂಕ್ ಆಫ್ ಇಂಗ್ಲೆಂಡ್’ ತನ್ನ ವರದಿಯಲ್ಲಿ ಹೇಳಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಆರ್ಥಿಕ ತಜ್ಞರು ಮಂಡಿಸಿರುವ ‘ದಿ ಬಿಗ್ ಬ್ರೆಕ್ಸಿಟ್’ ವರದಿಯಲ್ಲಿ, ಬ್ರಿಟನ್ ಆರ್ಥಿಕತೆಯ ಮೇಲೆ ಬ್ರೆಕ್ಸಿಟ್ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ. ಸ್ಪರ್ಧಾತ್ಮಕತೆ, ಉತ್ಪಾದನಾ ಸಾಮರ್ಥ್ಯ ಕುಗ್ಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಪೂರೈಕೆ ಜಾಲದಲ್ಲಿ ವ್ಯತ್ಯಯ ಉಂಟಾಗಿದೆ. ಬೆಲೆ ಏರಿಕೆ ಜನರನ್ನು ಬಾಧಿಸುತ್ತಿದೆ. ಇಂಧನ ವೆಚ್ಚ ಅಧಿಕಗೊಂಡಿದೆ. ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟದ ಜಟಿಲ ಕಾನೂನುಗಳು ಇನ್ನೂ ಜಾರಿಯಲ್ಲಿವೆ. ಈ ನೀತಿ ನಿಯಮಗಳನ್ನು ಪುನರ್‌ಪರಿಶೀಲಿಸಿ ಅಗತ್ಯ ಮಾರ್ಪಾಡು ಮಾಡಿಕೊಳ್ಳುವ ಅಗತ್ಯವಿದೆ.

ಒಂದೊಮ್ಮೆ ಟ್ರಸ್ ಅವರು ಟೋರಿ ಪಕ್ಷದ ನಾಯಕ ರಾಗಿ ಹೊರಹೊಮ್ಮಿದರೆ, ಬ್ರಿಟನ್ ಪ್ರಧಾನಿ ಹುದ್ದೆಗೇರಿದ ಮೂರನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ. ರಿಷಿ ಸುನಕ್ ಅವರಿಗೆ ಅದೃಷ್ಟ ಒಲಿದರೆ, ಭಾರತೀಯ ಮೂಲದವರೊಬ್ಬರು ಇಂಗ್ಲೆಂಡಿಗೆ ಪ್ರಧಾನಿಯಾದರು ಎಂಬುದು ಹೆಗ್ಗಳಿಕೆಯಾಗಲಿದೆ. ಮೇಲಾಗಿ ಕನ್ನಡಿಗ ಎನ್.ಆರ್.ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅಳಿಯ ಎಂಬ ಕಾರಣದಿಂದ, ಅವರು ಬ್ರಿಟನ್ ಪ್ರಧಾನಿಯಾಗಬಹುದೇ ಎಂಬ ಕುತೂಹಲ ಭಾರತೀಯರಲ್ಲಿ ಗುಲಗಂಜಿಯಷ್ಟು ಹೆಚ್ಚಿದೆ. ಇಬ್ಬರಲ್ಲಿ ಯಾರು ಆಯ್ಕೆ ಯಾದರೂ ದ್ವಿಪಕ್ಷೀಯವಾಗಿ ಭಾರತ- ಬ್ರಿಟನ್ ನಡುವಿನ ಸಂಬಂಧದಲ್ಲಿ ಹೆಚ್ಚೇನೂ ಬದಲಾವಣೆ ಆಗದು.

ಹಣದುಬ್ಬರ, ಆರ್ಥಿಕ ಹಿಂಜರಿತ, ಆಂತರಿಕ ರಾಜಕೀಯ ಬಿಕ್ಕಟ್ಟು, ಯುರೋಪಿನ ಅಸ್ಥಿರತೆ, ಉಕ್ರೇನ್- ರಷ್ಯಾ ಸಂಘರ್ಷದ ಛಾಯೆ ಎಂಬ ಸವಾಲುಗಳ ಬುಗುಟೆ ಗಳನ್ನು ದಾಟಿ, ಕಳೆಗುಂದಿರುವ ಬ್ರಿಟನ್ನಿಗೆ ನೂತನ ಪ್ರಧಾನಿ ಚೈತನ್ಯ ತುಂಬಬಲ್ಲರೇ ಎಂಬುದನ್ನು ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.