ADVERTISEMENT

ಸೀಮೋಲ್ಲಂಘನ ಅಂಕಣ | ಶಾಂತಿ ಮಂತ್ರ: ಫಲಿಸೀತೆ ಚೀನಾ ತಂತ್ರ?

ಶಾಂತಿ ಪ್ರಸ್ತಾವದ ಮೂಲಕ ಚೀನಾ ಇದೀಗ ತನ್ನ ಕಾಯಿಯನ್ನು ನಡೆಸಿದೆ

ಸುಧೀಂದ್ರ ಬುಧ್ಯ
Published 1 ಮಾರ್ಚ್ 2023, 22:45 IST
Last Updated 1 ಮಾರ್ಚ್ 2023, 22:45 IST
   

ಉಕ್ರೇನ್ ಯುದ್ಧಕ್ಕೆ ಹಿಂದಿನ ವಾರ ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆಲವು ಮಹತ್ವದ ಬೆಳವಣಿಗೆಗಳಾದವು. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್ ರಾಜಧಾನಿಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟರು.ಉಕ್ರೇನ್ ಅಧ್ಯಕ್ಷರ ಜೊತೆಗೆ ಹೆಜ್ಜೆ ಹಾಕಿದರು. ಆ ಮೂಲಕ ‘ನಾವು ನಿಮ್ಮೊಂದಿಗಿದ್ದೇವೆ’ ಎಂಬ ಸಂದೇಶ ರವಾನಿಸಿದರು.

ಇದೇ ಹೊತ್ತಿಗೆ ಚೀನಾದ ಪ್ರತಿನಿಧಿ ವಾಂಗ್ ಯೀ ಅವರು ರಷ್ಯಾಕ್ಕೆ ಭೇಟಿಯಿತ್ತು ಪುಟಿನ್ ಅವರ ಕೈ ಕುಲುಕಿದರು. ಈ ಭೇಟಿ ನಡೆದ ಸಮಯ ಮತ್ತು ಸಂದರ್ಭ ಬೇರೆಯದೇ ಸಂದೇಶವನ್ನು ರವಾನಿಸಿತು. ಇದಕ್ಕೆ ಪೂರಕವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ‘ರಷ್ಯಾಕ್ಕೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಸುವ ಸಾಧ್ಯತೆ ಇದೆ. ಆ ದಿಸೆಯಲ್ಲಿ ಚೀನಾ ಮುಂದಡಿಯಿಟ್ಟರೆ ಪರಿಣಾಮ ಎದುರಿಸಬೇಕಾದೀತು’ ಎಂದು ಎಚ್ಚರಿಸಿದರು.

ಇದರ ಬೆನ್ನಲ್ಲೇ ಉಕ್ರೇನ್ ಬಿಕ್ಕಟ್ಟಿನ ಕುರಿತು ತನ್ನ ನಿಲುವು ಸ್ಪಷ್ಟಪಡಿಸಲು 12 ಅಂಶಗಳ ಪ್ರಕಟಣೆಯೊಂದನ್ನು ಚೀನಾ ಹೊರಡಿಸಿತು. ಯಾವುದೇ ದೇಶದ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆ ಯನ್ನು ಇತರ ದೇಶಗಳು ಗೌರವಿಸಬೇಕು. ಶೀತಲ ಸಮರದ ಮಾನಸಿಕತೆಯನ್ನು ಬಿಡಬೇಕು. ಶಾಂತಿ ಮಾತುಕತೆಯನ್ನು ಉತ್ತೇಜಿಸಬೇಕು. ಪರಮಾಣು ಶಸ್ತ್ರಾಸ್ತ್ರ ಗಳ ಬಳಕೆ ಹಾಗೂ ಬೆದರಿಕೆ ಕೂಡದು. ಆಹಾರದ ಅಭಾವ ನೀಗಲು ಧಾನ್ಯಗಳ ರಫ್ತು ಸುಲಲಿತವಿರಬೇಕು. ಏಕಪಕ್ಷೀಯವಾಗಿ ಯಾವುದೇ ದೇಶದ ಮೇಲೆ ನಿರ್ಬಂಧ ಹೇರಬಾರದು. ಜಾಗತಿಕ ಪೂರೈಕೆ ಜಾಲ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಸಂಘರ್ಷದ ಬಳಿಕ ಪುನರ್ ನಿರ್ಮಾಣ ಕಾರ್ಯಗಳಿಗೆ ಕೈ ಜೋಡಿಸಬೇಕು... ಹೀಗೆ 12 ಅಂಶಗಳ ಪಟ್ಟಿಯನ್ನು ಮುಂದಿಟ್ಟ ಚೀನಾ, ತನ್ನ ನಿಲುವು ಸ್ಪಷ್ಟಪಡಿಸುತ್ತಲೇ ಅಮೆರಿಕಕ್ಕೆ ತಿವಿಯಿತು ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿದ್ಧ ಎಂಬ ಸಂದೇಶ ರವಾನಿಸಿತು.

ADVERTISEMENT

ಒಟ್ಟಂದದಲ್ಲಿ ನೋಡುವಾಗ ಈ ಆಶಯಗಳೆಲ್ಲವೂ ಒಪ್ಪಿತವೇ. ಆದರೆ ಎಂದಾದರೂ ಈ ಆಶಯಗಳನ್ನು ಚೀನಾ ತನ್ನ ನಡತೆಯಲ್ಲಿ ತೋರಿದೆಯೇ? ಯಾವುದೇ ದೇಶದ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎನ್ನುವ ಚೀನಾ, ಟಿಬೆಟ್ ಮತ್ತು ತೈವಾನ್ ವಿಷಯದಲ್ಲಿ ಯಾವ ಧೋರಣೆ ಹೊಂದಿದೆ? ಗಡಿ ವಿಸ್ತರಿಸುವ ವಾಂಛೆಯೊಂದಿಗೆ ಭಾರತದೊಂದಿಗೆ ಸಂಘರ್ಷಕ್ಕೆ ಇಳಿಯುವ ಚೀನಾದ ಜಗಳಗಂಟತನ ಹಲವು ಬಾರಿ ಜಾಹೀರಾಗಿದೆ. ಶೀತಲ ಸಮರದ ಮನಃಸ್ಥಿತಿ ಬಿಡಬೇಕು ಎನ್ನುವ ಚೀನಾ, ತನ್ನ ಪ್ರತಿಸ್ಪರ್ಧಿ ರಾಷ್ಟ್ರದ ಗೋಪ್ಯತೆಯನ್ನು ಕದಿಯಲು ಹೇಗೆಲ್ಲಾ ಪ್ರಯತ್ನಿಸುತ್ತದೆ ಎನ್ನುವುದನ್ನು ‘ಬೇಹುಗಾರಿಕಾ ಬಲೂನ್ ಪ್ರಕರಣ’ ಹೇಳುತ್ತಿದೆ. ಭಾರತದ ಬೆಳವಣಿಗೆಯನ್ನು ತಡೆಯಲು ವಾಮಮಾರ್ಗ ಗಳನ್ನು ಬಳಸಿದ ಚೀನಾ, ಪಾಕಿಸ್ತಾನದ ಸೇನೆಯನ್ನು ಭಾರತದ ವಿರುದ್ಧ ಉತ್ತೇಜಿಸಿದ್ದು, ಪಾಕಿಸ್ತಾನ ಅಣ್ವಸ್ತ್ರ ಹೊಂದಲು ಸಹಕರಿಸಿದ್ದು, ಶ್ರೀಲಂಕಾವನ್ನು ಸಾಲದ ಕೂಪದಲ್ಲಿ ಮುಳುಗಿಸಿ ಆಯಕಟ್ಟಿನ ಬಂದರುಗಳನ್ನು ತನ್ನದಾಗಿಸಿಕೊಂಡು ಯುದ್ಧನೌಕೆಗಳಿಗೆ ತಾಣ ಕಲ್ಪಿಸಲು ಪ್ರಯತ್ನಿಸಿದ್ದು ಇದೀಗ ಗೋಪ್ಯವಾಗಿ ಉಳಿದಿಲ್ಲ. ಹಾಗಾಗಿಯೇ ಚೀನಾದ ಈ ಶಾಂತಿ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ‘ವಿಶ್ವಾಸಾರ್ಹತೆಯನ್ನು ಚೀನಾ ಉಳಿಸಿಕೊಂಡಿಲ್ಲ’ ಎಂದಿದೆ.

ಈ 12 ಅಂಶಗಳ ಪಟ್ಟಿಯಲ್ಲಿ ಶೀತಲ ಸಮರದ ಮನಃಸ್ಥಿತಿ ಬಿಡಬೇಕು, ಏಕಪಕ್ಷೀಯವಾಗಿ ನಿರ್ಬಂಧ ಹೇರಬಾರದು ಎಂಬ ಅಂಶಗಳು ಇರುವುದರಿಂದ ರಷ್ಯಾ ಸಹಜವಾಗಿಯೇ ಚೀನಾದ ಪ್ರಸ್ತಾವವನ್ನು ಸ್ವಾಗತಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಕೂಡ ಷಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿ ಮಾತನಾಡಲು ಉತ್ಸಾಹ ತೋರಿದ್ದಾರೆ! ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್ ಅವರು ಏಪ್ರಿಲ್ ತಿಂಗಳಿನಲ್ಲಿ ಚೀನಾಕ್ಕೆ ಭೇಟಿಯಿತ್ತು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ಹಾಗಾದರೆ ಚೀನಾದ ಈ ಶಾಂತಿ ಪ್ರಸ್ತಾವ ಉಕ್ರೇನ್ ಮತ್ತು ಇತರ ಐರೋಪ್ಯ ರಾಷ್ಟ್ರಗಳಿಗೆ ಒಪ್ಪಿತವೇ? ವಿಷಯ ಸ್ಪಷ್ಟವಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಈ ಸೆಣಸಾಟದಲ್ಲಿ ಜಯ ಎನ್ನುವುದು ಉಭಯ ಪಡೆಗಳಿಗೂ ಎಟುಕಲಾರದು. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಉಕ್ರೇನ್ ಸೈನಿಕರನ್ನು ಹುರಿದುಂಬಿಸುತ್ತಿದ್ದಾರಾದರೂ ಗೆಲುವು ಎನ್ನುವುದು ಬಹಳ ದೂರ ಮತ್ತು ದುಬಾರಿ ಎಂಬುದು ಅವರಿಗೆ ತಿಳಿಯದ್ದೇನಲ್ಲ. ಉಳಿದಂತೆ, ಫ್ರಾನ್ಸ್ ಮತ್ತು ಜರ್ಮನಿ ಕೂಡ ಪೂರ್ಣ ಮನಸ್ಸಿನಿಂದ ಉಕ್ರೇನ್ ಬಗಲಿಗೆ ನಿಂತಿಲ್ಲ. ಕೇವಲ ನ್ಯಾಟೊದ ಒಗ್ಗಟ್ಟು ಉಳಿಸಿ ಕೊಳ್ಳಬೇಕು ಎಂಬ ಆಶಯ ಮತ್ತು ಅಮೆರಿಕದ ಒತ್ತಡದಿಂದಾಗಿ ಅವು ಉಕ್ರೇನ್ ಜೊತೆಗೆ ಗುರುತಿಸಿಕೊಳ್ಳುತ್ತಿವೆ. ಹಾಗಾಗಿ ಸಂಘರ್ಷದ ಭಾಗವಾಗಿರುವ ಮತ್ತು ಬಾಧಿತಗೊಂಡಿರುವ ದೇಶಗಳಿಗೆ ಈ ಯುದ್ಧ ಶೀಘ್ರ ಮುಗಿದರೆ ಸಾಕು ಎನಿಸಿದೆ.

ಆದರೆ ಅಮೆರಿಕದ ನಿಲುವು ಮಾತ್ರ ಭಿನ್ನವಾಗಿದೆ! ಹಣದುಬ್ಬರ, ಆರ್ಥಿಕ ಹಿಂಜರಿಕೆ, ಉದ್ಯೋಗ ನಷ್ಟದ ಸವಾಲುಗಳನ್ನು ಎದುರಿಸುತ್ತಿರುವ ಅಮೆರಿಕ ದಲ್ಲಿ, ಅಧ್ಯಕ್ಷ ಬೈಡನ್ ಅವರ ಜನಪ್ರಿಯತೆ ಇಳಿಜಾರಿನಲ್ಲಿದೆ. 2024ರ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್, ಬರೀ ಒಂದು ದಿನದಲ್ಲಿ ಈ ಯುದ್ಧಕ್ಕೆ ತಾನು ಅಂತ್ಯ ಹಾಡಬಲ್ಲೆ ಎನ್ನುತ್ತಿದ್ದಾರೆ. ಬೈಡನ್ ಅವರು ಉಕ್ರೇನಿಗೆ ರಹಸ್ಯವಾಗಿ ಬಂದಿಳಿದದ್ದು ಮತ್ತು ಪುಟಿನ್ ಅವರಿಗೆ ಪಾಠ ಕಲಿಸುವ ಮಾತನಾಡಿದ್ದು, ಇಳಿದ ಜನಪ್ರಿಯತೆ
ಯನ್ನು ಮೇಲೆತ್ತಲು ಅವರು ನಡೆಸುತ್ತಿರುವ ಕಸರತ್ತಿನ ಒಂದು ಭಾಗ ಅಷ್ಟೇ. ರಷ್ಯಾಕ್ಕೆ ಪಾಠ ಕಲಿಸುವ ಮಂಪರಿನಲ್ಲಿರುವ ಅಮೆರಿಕ, ದೂರದೃಷ್ಟಿಯನ್ನು ಕಳೆದು ಕೊಂಡಂತೆ ಕಾಣುತ್ತಿದೆ. ಈ ಸಂದರ್ಭವನ್ನು ಚೀನಾ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದೆ.

ಅಷ್ಟಕ್ಕೂ ಉಕ್ರೇನ್ ಬಿಕ್ಕಟ್ಟಿಗೆ ಸಂಧಾನದ ಮಾರ್ಗವನ್ನು ಸೂಚಿಸಿರುವ ಚೀನಾ ಏನನ್ನು ಸಾಧಿಸಲು ಹೊರಟಿದೆ? ಅಮೆರಿಕಕ್ಕೆ ಪ್ರತಿಯಾಗಿ ಚೀನಾಕೇಂದ್ರಿತ ಜಾಗತಿಕ ವ್ಯವಸ್ಥೆಯನ್ನು ರೂಪಿಸುವ ಧಾವಂತ ಚೀನಾ ಕ್ಕಿದೆ. ಒಂದೊಮ್ಮೆ ಚೀನಾದ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಬಗೆಹರಿದರೆ, ರಷ್ಯಾದ ಜೊತೆಗಿನ ಚೀನಾದ ಸಂಬಂಧ ಗಟ್ಟಿಗೊಳ್ಳುವುದರ ಜೊತೆಗೆ ಐರೋಪ್ಯ ರಾಷ್ಟ್ರಗಳ ಮೇಲೆ ಚೀನಾದ ಪ್ರಭಾವ ಹೆಚ್ಚಲಿದೆ ಮತ್ತು ಅಮೆರಿಕದ ಪ್ರಭಾವ ಅಷ್ಟರಮಟ್ಟಿಗೆ ಯುರೋಪಿನಲ್ಲಿ ನಶಿಸಲಿದೆ.

ಚೀನಾ ತಳೆದಿರುವ ನಿಲುವಿಗೆ ಮತ್ತೊಂದು ಆಯಾಮವೂ ಇದೆ. ಹಿಂದಿನ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಭೇಟಿಯಾದಾಗ ‘ಇದು ಯುದ್ಧದ ಯುಗವಲ್ಲ’ ಎಂಬ ಮಾತನ್ನು ನೇರವಾಗಿ ಆಡಿದ್ದರು. ಪುಟಿನ್ ಆ ಮಾತಿಗೆ ಎದುರಾಡಲಿಲ್ಲ. ಮೋದಿ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿ, ಬಿಕ್ಕಟ್ಟಿನ ಪರಿಹಾರಕ್ಕೆ ಭಾರತ ಪ್ರಯತ್ನಿಸಬೇಕು ಎಂದು ವಿವಿಧ ವೇದಿಕೆಗಳಲ್ಲಿ ಆಗ್ರಹಿಸಿದವು. ಒಂದೊಮ್ಮೆ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಗಳಿಸುವುದು ಭಾರತಕ್ಕೆ ಸುಲಭವಾದೀತು ಎಂಬ ಆತಂಕ ಚೀನಾಕ್ಕೆ ಇದೆ. ಹಾಗಾಗಿ ಶಾಂತಿ ಪ್ರಸ್ತಾವದ ಮೂಲಕ ತನ್ನ ಕಾಯಿಯನ್ನು ಇದೀಗ ಚೀನಾ ನಡೆಸಿದೆ.

ಹಾಗಾದರೆ ಚೀನಾದ ತಂತ್ರಗಾರಿಕೆ ಯಶ ಕಂಡೀತೆ? ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ಚೀನಾ ಮಾತನಾಡಿದೆಯಾದರೂ, ರಷ್ಯಾದ ಕ್ರಮವನ್ನು ಖಂಡಿಸಿಲ್ಲ. ಚೀನಾದ ಪ್ರಸ್ತಾವ ಬಹುಮಟ್ಟಿಗೆ ರಷ್ಯಾದ ಪರವಾಗಿಯೇ ಇದೆ. ಕೊರೊನಾ ಮತ್ತು ಇತರ ವಿಷಯ ಗಳಲ್ಲಿ ಅದು ಅನುಸರಿಸಿದ ನೀತಿಯಿಂದಾಗಿ ಚೀನಾದ ವಿಶ್ವಾಸಾರ್ಹತೆ ಮುಕ್ಕಾಗಿದೆ. ರಷ್ಯಾಕ್ಕೆ ಚೀನಾ ಶಸ್ತ್ರಾಸ್ತ್ರ ಪೂರೈಸುವುದನ್ನು ಕೆಲಕಾಲದ ಮಟ್ಟಿಗಾದರೂ ತಪ್ಪಿಸ ಬೇಕು ಎಂಬ ಏಕೈಕ ಉದ್ದೇಶದಿಂದ ಚೀನಾದ ಪ್ರಸ್ತಾವ ವನ್ನು ಉಕ್ರೇನ್ ಮತ್ತು ಫ್ರಾನ್ಸ್ ಸ್ವಾಗತಿಸಿರುವಂತೆ ಕಾಣುತ್ತಿದೆ.

ಜರ್ಮನಿಯ ಚಾನ್ಸಲರ್ ಇತ್ತೀಚೆಗೆ ಭಾರತಕ್ಕೆ ಭೇಟಿಯಿತ್ತ ವೇಳೆ, ‘ಉಕ್ರೇನ್ ಯುದ್ಧದ ವಿಷಯವಾಗಿ ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತ ಸಿದ್ಧ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಚೀನಾಕ್ಕೆ ಪ್ರತಿಯಾಗಿ ಬಿಕ್ಕಟ್ಟಿನ ಇತ್ಯರ್ಥಕ್ಕೆ ಭಾರತ ಮಧ್ಯಸ್ಥಿಕೆ ವಹಿಸ ಬೇಕು ಎಂದು ಅಮೆರಿಕ ಒತ್ತಡ ಹೇರಿದರೆ ಅಚ್ಚರಿಯಿಲ್ಲ. ಅಂತೂ ಕುತೂಹಲದ ದಿನಗಳು ಮುಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.