ಮೊನ್ನೆ ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ಭಾಗದಿಂದ ಕ್ಷಿಪಣಿಗಳ ದಾಳಿ ನಡೆಯಿತು. ಇಸ್ರೇಲಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬಹುಪಾಲು ಕ್ಷಿಪಣಿಗಳನ್ನು ಹೊಡೆದುರುಳಿಸಿತು. ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಇಂತಹ ಕ್ಷಿಪಣಿಗಳ ಆರ್ಭಟ ಹೊಸದೇನೂ ಅಲ್ಲ. ಅಲ್ಲಿನ ಆಗಸದಲ್ಲಿ ಕ್ಷಿಪಣಿಗಳು ಬೆಂಕಿಯುಗುಳುತ್ತಾ ಮಿಂಚಿ ಮರೆಯಾಗದಿದ್ದರೆ, ಆಗಾಗ ಬಾಂಬುಗಳ ಸಿಡಿತದ ಸದ್ದು ಕೇಳದಿದ್ದರೆ ಅಲ್ಲಿನ ಜನ ಅಚ್ಚರಿಗೊಳ್ಳಬಹುದು. ಇದು ಕನಸಲ್ಲ ತಾನೇ ಎಂದು ಮೈ ಜಿಗುಟಿ ನೋಡಿಕೊಳ್ಳ
ಬಹುದು. ಅಷ್ಟರಮಟ್ಟಿಗೆ ಅಲ್ಲಿ ಯುದ್ಧದ ವಾತಾವರಣ ಸಾಮಾನ್ಯ.
ವರ್ಷದ ಕೆಳಗೆ, ಅಂದರೆ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಬಹುದೊಡ್ಡ ಭಯೋತ್ಪಾದಕ ದಾಳಿ ನಡೆಯಿತು. ಇತ್ತೀಚಿನ ವರ್ಷಗಳಲ್ಲಿ ಅಷ್ಟು ದೊಡ್ಡ ಪ್ರಮಾಣದ ದಾಳಿಗೆ ಇಸ್ರೇಲ್ ಒಳಗಾಗಿರಲಿಲ್ಲ. ಆ ಕಾರಣದಿಂದಲೇ ಅದು ಮೈಮರೆತಿತ್ತೋ ಅಥವಾ ತನ್ನ ವೈರಿಗಳನ್ನು ಮಟ್ಟಹಾಕಲು ಕಾರಣವೊಂದು ಸಿಗಲಿ ಎಂದು ಮೈಮರೆತಂತೆ ನಟಿಸಿತೋ, ಅಂತೂ ಆ ದಿನ ಇಸ್ರೇಲ್ ಗಡಿಯೊಳಗೆ ನುಗ್ಗಿದ ಹಮಾಸ್ ಕಾಲಾಳುಗಳು ಪೈಶಾಚಿಕ ಕೃತ್ಯ ನಡೆಸಿದರು. ಇಸ್ರೇಲ್ ಪ್ರತಿದಾಳಿಗೆ ಮುಂದಾಯಿತು. ಹಮಾಸ್ ನಿರ್ಮೂಲನೆಗೆ ಶಂಖನಾದ ಮಾಡಿತು. ಗಾಜಾಪಟ್ಟಿಯಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಯಿತು.
ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವೆ ಆರಂಭವಾದ ಸಂಘರ್ಷ ವಿಸ್ತರಿಸುತ್ತಾ ಹೋಯಿತು. ಲೆಬನಾನ್ ಭಾಗದಿಂದ ಹಿಜ್ಬುಲ್ಲಾ, ಯೆಮನ್ ಕಡೆಯಿಂದ ಹೌತಿ, ಸಿರಿಯಾ ಮತ್ತು ಇರಾಕ್ ಭಾಗದಿಂದ ಶಿಯಾ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದರು. ಇಸ್ರೇಲ್ ಪಡೆ ಈ ಎಲ್ಲ ದಾಳಿಗಳನ್ನು ಎದುರಿಸಿ ಪ್ರತಿದಾಳಿ ನಡೆಸಿತು. ಈ ದಾಳಿಗಳ ಹಿಂದೆ ಇರಾನ್ ಇದೆ, ಈ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿರುವುದು ಇರಾನಿನಿಂದ ಎಂಬುದನ್ನು ಇಸ್ರೇಲ್, ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿತು.
ಈ ವರ್ಷದ ಏಪ್ರಿಲ್ 13ರಂದು ಇಸ್ರೇಲಿನ ಮೇಲೆ ಇರಾನ್ ನೇರವಾಗಿ ಕ್ಷಿಪಣಿ ದಾಳಿ ನಡೆಸಿತು. ಆಗ ಇಸ್ರೇಲ್ ಮತ್ತು ಇರಾನ್ ನಡುವೆ ನೇರ ಯುದ್ಧ ಘಟಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಮೆರಿಕದ ಅಧ್ಯಕ್ಷ ಬೈಡನ್ ಅವರು, ಪ್ರತಿದಾಳಿ ಬರೀ ಸಾಂಕೇತಿಕವಾಗಿರಲಿ,
ದೊಡ್ಡಮಟ್ಟದ ಸಂಘರ್ಷಕ್ಕೆ ಕಾರಣವಾಗುವುದು ಬೇಡ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ತಡೆದರು. ಆಗ ಬೈಡನ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು.
ಆದರೆ ಹಿಜ್ಬುಲ್ಲಾ ಉಗ್ರರ ಬೆನ್ನು ಹತ್ತುವುದನ್ನು ಇಸ್ರೇಲ್ ಬಿಡಲಿಲ್ಲ. ಸರಣಿ ಪೇಜರ್ ಸ್ಫೋಟಗಳು ಲೆಬನಾನ್‌ನಲ್ಲಿ ನಡೆದವು. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯಾಯಿತು. ಇದೀಗ ಅದಕ್ಕೆ ಪ್ರತೀಕಾರ ಎಂಬಂತೆ ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ನಡೆದಿದೆ. ಈ ದಾಳಿಯನ್ನು ಇರಾನಿನ ಇಸ್ಲಾಮಿಕ್ ಕ್ರಾಂತಿ ರಕ್ಷಣಾ ಪಡೆ (ಐಆರ್‌ಜಿಸಿ) ನಡೆಸಿದೆ ಎನ್ನಲಾಗುತ್ತಿದೆ. ಈ ದಾಳಿಗೆ ಇರಾನ್ ಬೆಲೆ ತೆರಲಿದೆ ಎಂದು ಇಸ್ರೇಲ್ ಪ್ರತೀಕಾರದ ಮಾತನ್ನಾಡಿದೆ.
ಹಾಗಾದರೆ, ಈ ಕ್ಷಿಪಣಿ ದಾಳಿ ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಯುದ್ಧಕ್ಕೆ ದಾರಿ ಮಾಡಿಕೊಡಬಹುದೇ? ಇಸ್ರೇಲ್ ಮುಂದಿನ ನಡೆ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ನೆತನ್ಯಾಹು ಅವರು ಇತ್ತೀಚೆಗೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಮಾಡಿದ ಭಾಷಣವನ್ನು ಗಮನಿಸಬೇಕು.
ಸಾಮಾನ್ಯವಾಗಿ ನೆತನ್ಯಾಹು ಆಕ್ರಮಣಕಾರಿಯಾಗಿಯೇ ಮಾತನಾಡುತ್ತಾರೆ. ಹತ್ತು ವರ್ಷಗಳ ಹಿಂದೆ ಇರಾನ್ ಅಣ್ವಸ್ತ್ರ ಯೋಜನೆಯ ಕುರಿತು ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ನಕ್ಷೆಗಳನ್ನು ಹಿಡಿದು ಮಾತನಾಡಿದ್ದರು. ಈ ಬಾರಿ ಅವರು ಮತ್ತೊಮ್ಮೆ ನಕ್ಷೆಗಳನ್ನು ಬಳಸಿ ಭಾಷಣ ಮಾಡಿದರು. ಒಂದು ಕೈಯಲ್ಲಿ ಇರಾನ್, ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮನ್‌ಗಳನ್ನು ಕಪ್ಪುವರ್ಣದಲ್ಲಿ ಚಿತ್ರಿಸಿ ಅದನ್ನು ‘ಶಾಪ’ ಎಂದು ಕರೆದ ನಕ್ಷೆಯಿತ್ತು. ಮತ್ತೊಂದು ಕೈಯಲ್ಲಿ ಮಧ್ಯಪ್ರಾಚ್ಯದ ಇತರ ಅರಬ್ ರಾಷ್ಟ್ರಗಳು ಮತ್ತು ಭಾರತವನ್ನು ಹಸಿರು ವರ್ಣದಲ್ಲಿ ಚಿತ್ರಿಸಿ ‘ವರ’ ಎಂದು ಕರೆದ ನಕ್ಷೆಯಿತ್ತು.
ಇರಾನಿನ ನಿರಂತರ ಆಕ್ರಮಣಶೀಲತೆಯು ಇಸ್ರೇಲ್ ಪಾಲಿಗೆ ಶಾಪವಾಗಿದ್ದರೆ, ಅರಬ್ ಮತ್ತು ಯಹೂದಿಯರ ನಡುವಿನ ಐತಿಹಾಸಿಕ ಸಾಮರಸ್ಯ ವರವಾಗಿ ಪರಿಣಮಿಸಿದೆ ಎಂದು ನೆತನ್ಯಾಹು ಹೇಳಿದರು.
ಮುಖ್ಯವಾಗಿ ಅವರು ಇರಾನಿನ ಅಣ್ವಸ್ತ್ರ ಯೋಜನೆ ಕುರಿತು ಮಾತನಾಡಿದರು. ಇರಾನನ್ನು ಓಲೈಸುವ ಕೆಲಸವನ್ನು ಜಗತ್ತು ಮಾಡುತ್ತಿದೆ. ಇರಾನಿನ ಆಂತರಿಕ ದಮನನೀತಿಯನ್ನು ಕಂಡೂ ಜಗತ್ತು ಕುರುಡಾಗಿದೆ. ಇನ್ನಾದರೂ ಜಗತ್ತು ಎಚ್ಚರಗೊಳ್ಳಬೇಕು. ದುಷ್ಟ ಆಡಳಿತದ ವಿರುದ್ಧ ಸಿಡಿದೇಳುತ್ತಿರುವ ಇರಾನಿನ ಜನರನ್ನು ಬೆಂಬಲಿಸಬೇಕು. ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯಬೇಕು ಎಂಬುದು ನೆತನ್ಯಾಹು ಅವರ ಮಾತಿನ ಇಂಗಿತವಾಗಿತ್ತು.
ಈ ಎಲ್ಲವನ್ನೂ ಒಟ್ಟಾಗಿ ನೋಡಿದರೆ, ಇಸ್ರೇಲ್ ಇಡಬಹುದಾದ ಹೆಜ್ಜೆಯ ಕುರಿತು ಒಂದಷ್ಟು ಸುಳಿವು ಸಿಗಬಹುದು. ಇರಾನ್ ಅಣ್ವಸ್ತ್ರ ಹೊಂದುವುದು ಇಸ್ರೇಲಿಗೆ ಬೇಕಿಲ್ಲ. ಇರಾನ್ ಅಣ್ವಸ್ತ್ರ ರಾಷ್ಟ್ರವಾದರೆ ಅದು ತನಗೂ ಅಪಾಯ ಎನ್ನುವುದು ಅಮೆರಿಕಕ್ಕೂ ತಿಳಿದಿದೆ. ಆದರೆ ಮಧ್ಯಪ್ರಾಚ್ಯದಲ್ಲಿ ಸಮತೋಲನ ಸಾಧಿಸುವ ಹಗ್ಗದ ಮೇಲಿನ ನಡಿಗೆಯ ಭಾಗವಾಗಿ ಅಮೆರಿಕ ಇರಾನನ್ನು ನೇರಾನೇರ ಎದುರುಹಾಕಿಕೊಳ್ಳುತ್ತಿಲ್ಲ. ಒಬಾಮ ಅವರ ಅವಧಿಯಲ್ಲಿ ಇರಾನ್ ಜೊತೆಗೆ ಪರಮಾಣು ಒಪ್ಪಂದ ಏರ್ಪಟ್ಟಿತು. ಆದರೆ ಇರಾನ್ ಅಣ್ವಸ್ತ್ರ ಹೊಂದುವ ತನ್ನ ಪ್ರಯತ್ನವನ್ನು ಬಿಡಲಿಲ್ಲ.
ಟ್ರಂಪ್ ಅಧ್ಯಕ್ಷರಾದಾಗ ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಅನೂರ್ಜಿತಗೊಳಿಸಿ, ಇರಾನನ್ನು ಏಕಾಂಗಿಯಾಗಿಸಲು ಇತರ ಅರಬ್ ರಾಷ್ಟ್ರ ಗಳನ್ನು ಇಸ್ರೇಲ್ ಜೊತೆ ಜೋಡಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಆದರೆ ಇರಾನ್ ಅಣ್ವಸ್ತ್ರ ಹೊಂದುವ ತನ್ನ ಪ್ರಯತ್ನವನ್ನು ಮುಂದುವರಿಸಿತು.
ಆ ಪ್ರಯತ್ನ ಎಷ್ಟರಮಟ್ಟಿಗೆ ಸಾಗಿದೆ ಎಂದರೆ, ಅಮೆರಿಕದ ವಿದೇಶಾಂಗ ಸಚಿವ ಬ್ಲಿಂಕನ್ ‘ಪರಮಾಣು ಬಾಂಬಿಗೆ ಬಳಸಲು ಯೋಗ್ಯವಾದ ಯುರೇನಿಯಂ ಅನ್ನು ಒಂದೆರಡು ವಾರಗಳಲ್ಲಿ ಉತ್ಪಾದಿಸುವ ಸಾಮರ್ಥ್ಯವನ್ನು ಇರಾನ್ ಹೊಂದಿದೆ’ ಎಂಬ ಹೇಳಿಕೆಯನ್ನು ಇತ್ತೀಚೆಗೆ ನೀಡಿದ್ದರು. ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದ ಸಹಾಯ ದೊರೆತರೆ, ಇರಾನ್ ಅಣ್ವಸ್ತ್ರ ರಾಷ್ಟ್ರವಾಗಲು ಹೆಚ್ಚು ಸಮಯ ಬೇಕಿಲ್ಲ ಎಂಬುದು ಅಮೆರಿಕಕ್ಕೂ ಇದೀಗ ಅರ್ಥವಾಗಿದೆ.
ಒಂದೊಮ್ಮೆ, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿ ಯುದ್ಧದ ರೂಪ ಪಡೆದರೆ, ಆ ಸಂದರ್ಭವನ್ನು ಬಳಸಿ ಇರಾನ್ ಅಣ್ವಸ್ತ್ರ ಯೋಜನೆಯನ್ನು ಇಸ್ರೇಲ್ ಮತ್ತು ಅಮೆರಿಕ ಜೊತೆಗೂಡಿ ವಿಫಲ
ಗೊಳಿಸಬಹುದು. ಇದು ಇರಾನಿಗೂ ತಿಳಿದಿದೆ. ಹಾಗಾಗಿ ಇಸ್ರೇಲ್ ಮೇಲೆ ನೇರ ಯುದ್ಧ ಸಾರಿ ತನ್ನ ಇಷ್ಟು ವರ್ಷಗಳ ಶ್ರಮವನ್ನು ಕೈಚೆಲ್ಲುವ ಮೂರ್ಖತನವನ್ನು ಇರಾನ್ ಮಾಡಲಾರದು. ಉಗ್ರ ಸಂಘಟನೆಗಳಿಗೆ ಬಲ ತುಂಬಿ ಇಸ್ರೇಲನ್ನು ಪರೋಕ್ಷವಾಗಿ ಕಾಡುವ ಪ್ರಯತ್ನವನ್ನು ಅದು ಮುಂದುವರಿಸಬಹುದು.
ಆಗ ಇರಾನಿನ ಜನರನ್ನು ಆಡಳಿತದ ವಿರುದ್ಧ ಎಬ್ಬಿಸುವ, ಆ ಮೂಲಕ ಆಂತರಿಕ ಕ್ರಾಂತಿಯನ್ನು ಉತ್ತೇಜಿಸುವ ಪ್ರಯತ್ನಕ್ಕೆ ಇಸ್ರೇಲ್ ಕೈ ಹಾಕಬಹುದು. ಇಲ್ಲವೇ ಇರಾನ್ ಒಂದು ಸಣ್ಣ ತಪ್ಪು ಹೆಜ್ಜೆ ಇಟ್ಟರೂ ಅದನ್ನೇ ಅವಕಾಶವನ್ನಾಗಿ ಬಳಸಿ, ಇರಾನ್ ಮೇಲೆ ಯುದ್ಧ ಸಾರಿ ಅಣ್ವಸ್ತ್ರ ಹೊಂದುವ ಅದರ ಬಯಕೆಯನ್ನು ಚಿವುಟಿ ಹಾಕಬಹುದು. ಇದಕ್ಕೆ ಅಮೆರಿಕದ ಪೂರ್ಣ ಸಹಕಾರ ಬೇಕು.
ಒಟ್ಟಿನಲ್ಲಿ, ಅತ್ತ ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ, ಇತ್ತ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದೀತು ಎಂಬುದಕ್ಕೆ ಉತ್ತರ, ಅಮೆರಿಕದ ಅಧ್ಯಕ್ಷೀಯ
ಚುನಾವಣೆಯಲ್ಲಿದೆ ಎಂಬುದಂತೂ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.