ಇತ್ತ, ಚೀನಾ ಮತ್ತು ಫಿಲಿಪ್ಪೀನ್ಸ್ ರಾಷ್ಟ್ರಗಳು ಒಂದರ ಮೇಲೆ ಮತ್ತೊಂದು ಮುನಿಸಿಕೊಂಡು ದಕ್ಷಿಣ ಚೀನಾ ಸಮುದ್ರ ತೀರದಲ್ಲಿ ಬೇಗೆಯನ್ನು ಹೆಚ್ಚಿಸಿದ್ದರೆ, ಅತ್ತ, ಇಸ್ರೇಲ್ ಮತ್ತು ಇರಾನ್ ಮೇಲ್ನೋಟಕ್ಕೆ ಸಹಜ ಸ್ಥಿತಿಗೆ ಮರಳಿದಂತೆ ಕಂಡರೂ ಒಳಗೆ ಹಗೆಯನ್ನು ಪೋಷಿಸುತ್ತಿವೆ.
ದಕ್ಷಿಣ ಚೀನಾ ಸಮುದ್ರವು ಖನಿಜ, ತೈಲ, ಅನಿಲದಂತಹ ನೈಸರ್ಗಿಕ ಸಂಪನ್ಮೂಲಗಳ ಆಗರವಷ್ಟೇ ಅಲ್ಲ, ವ್ಯೂಹಾತ್ಮಕ ದೃಷ್ಟಿಯಿಂದ ಅದೊಂದು ಆಯಕಟ್ಟಿನ ಪ್ರದೇಶ. ಹಾಗಾಗಿ, ದಕ್ಷಿಣ ಚೀನಾ ಸಮುದ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕು ಎಂಬುದು ಚೀನಾದ ಮಹತ್ವಾಕಾಂಕ್ಷೆ. ಆದ್ದರಿಂದಲೇ ಫಿಲಿಪ್ಪೀನ್ಸ್, ವಿಯೆಟ್ನಾಂ ಮತ್ತು ಮಲೇಷ್ಯಾವನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಚೀನಾ ತಂತ್ರ ರೂಪಿಸುತ್ತದೆ. ದಕ್ಷಿಣ ಚೀನಾ ಸಮುದ್ರ ಸಂಪೂರ್ಣವಾಗಿ ಚೀನಾದ ಹಿಡಿತಕ್ಕೆ ಸಿಗಬಾರದು ಎಂದು ಅಮೆರಿಕ ಬಯಸುತ್ತದೆ. ಹಾಗಾಗಿ, ಫಿಲಿಪ್ಪೀನ್ಸ್ ನಂತಹ ಪುಟ್ಟ ರಾಷ್ಟ್ರವನ್ನು ತನ್ನ ಪ್ರಭಾವ ವಲಯದಲ್ಲಿ ಉಳಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತದೆ.
ಫಿಲಿಪ್ಪೀನ್ಸ್‌ಗೆ ಸೇರಿದ ಗಸ್ತು ಹಡಗುಗಳ ಮೇಲೆ ಚೀನಾದ ಕಡಲು ಕಾವಲು ಪಡೆ ಹೋದ ವಾರ ಜಲ
ಫಿರಂಗಿಯನ್ನು ಬಳಸಿತು. ಹಾಗಂತ ಇದು ಮೊದಲ ಪ್ರಕರಣ ಆಗಿರಲಿಲ್ಲ. ಫಿಲಿಪ್ಪೀನ್ಸ್‌ಗೆ ಸೇರಿದ ಮೀನುಗಾರಿಕಾ ಹಡಗುಗಳ ಮೇಲೆ ಈ ಹಿಂದೆ ಚೀನಾ ದಾಳಿ ಮಾಡಿತ್ತು. ಇದೀಗ ಚೀನಾದ ವಿರುದ್ಧ ಫಿಲಿಪ್ಪೀನ್ಸ್ ತಿರುಗಿಬಿದ್ದಿದೆ. ಈ ಬಗೆಯ ಕಿರುಕುಳ ಮತ್ತು ಆಕ್ರಮಣಶೀಲತೆಯನ್ನು ಸಹಿ ಸಲು ಸಾಧ್ಯವಿಲ್ಲ ಎಂದಿದೆ. ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳು ಫಿಲಿಪ್ಪೀನ್ಸ್ ನಿಲುವನ್ನು ಬೆಂಬಲಿಸಿವೆ ಮತ್ತು ಚೀನಾದ ಧೋರಣೆಯನ್ನು ಖಂಡಿಸಿವೆ.
ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕಿಗಾಗಿ ಮುಂದೊಂದು ದಿನ ಕದನ ಅನಿವಾರ್ಯವಾಗ
ಬಹುದು ಎನ್ನುವುದು ಖರೆಯಾದರೂ, ಪ್ರಸ್ತುತ ಚೀನಾ ಮತ್ತು ಫಿಲಿಪ್ಪೀನ್ಸ್ ನಡುವಿನ ಬಿಕ್ಕಟ್ಟು ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಕಡಿಮೆ. ಆದರೆ ಇಸ್ರೇಲ್ ಮತ್ತು ಇರಾನ್ ವಿಷಯ ಹಾಗಲ್ಲ. ಅದು ಯಾವ ಕ್ಷಣದಲ್ಲಾದರೂ ಹೊಸ ರೂಪವನ್ನು ತಾಳಬಹುದು, ಎರಡು ದೇಶಗಳ ನಡುವಿನ ನೇರ ಯುದ್ಧಕ್ಕೆ ನಾಂದಿಯಾಗ ಬಹುದು, ಇತರ ರಾಷ್ಟ್ರಗಳ ಪಾಲ್ಗೊಳ್ಳುವಿಕೆಯಿಂದ ಪ್ರಾಂತೀಯ ಕದನವಾಗಿ ಹಿಗ್ಗಬಹುದು. ಹಾಗಾಗಿ, ಇರಾನ್ ಮತ್ತು ಇಸ್ರೇಲ್ ಬಿಕ್ಕಟ್ಟಿನ ಕುರಿತು ಕೊಂಚ ವಿವರವಾಗಿಯೇ ನೋಡಬೇಕು.
ಇರಾನ್ ಮತ್ತು ಇಸ್ರೇಲ್ ನಡುವಿನ ಪ್ರಸ್ತುತ ಸಂಘರ್ಷ ಆರಂಭವಾಗಿದ್ದು ಆರು ತಿಂಗಳ ಹಿಂದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಏಕಾಏಕಿ ದಾಳಿ ಆರಂಭಿಸಿತು. ನಂತರ ಇಸ್ರೇಲ್, ಗಾಜಾ ಪಟ್ಟಿಯ ಒಳಗೆ ನುಗ್ಗಿ ಕಾರ್ಯಾಚರಣೆ ನಡೆಸಿತು. ಹಮಾಸ್ ಮತ್ತು ಹಿಜ್ಬುಲ್ಲಾ ಉಗ್ರರಿಗೆ ಇರಾನ್
ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು ಇಸ್ರೇಲ್ ಆರೋಪಿಸಿತು. ಸಿರಿಯಾದ ಉಗ್ರ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡಿತು. ಅಲ್ಲಿಗೆ ಒಂದು ಹಂತ ಮುಗಿದಿತ್ತು.
ಈ ವರ್ಷದ ಏಪ್ರಿಲ್ 1ರಂದು ನಡೆದ ಅಂತಹದೇ ದಾಳಿ ಸಿರಿಯಾದಲ್ಲಿನ ಇರಾನ್ ದೂತಾವಾಸ ಕಚೇರಿಯಿದ್ದ ಕಟ್ಟಡವನ್ನು ಗುರಿಯಾಗಿಸಿಕೊಂಡಿತು. ಈ ದಾಳಿಯಲ್ಲಿ ಇರಾನಿನ ಹಲವು ಅಧಿಕಾರಿಗಳು
ಸಾವನ್ನಪ್ಪಿದರು. ಇರಾನ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತು. ಏಪ್ರಿಲ್ 13ರಂದು, ಇಸ್ರೇಲ್ ಒಡೆತನದ್ದು ಎನ್ನಲಾದ, ಪೋರ್ಚುಗೀಸ್ ಧ್ವಜವಿದ್ದ ಹಡಗೊಂದನ್ನು ಇರಾನ್ ನೌಕಾಪಡೆ ವಶಕ್ಕೆ ಪಡೆದುಕೊಂಡಿತು. ಅದರಲ್ಲಿ 17 ಭಾರತೀಯ ನೌಕರರು ಇದ್ದರು! ಏಪ್ರಿಲ್ 13 ಮತ್ತು 14ರಂದು ಇಸ್ರೇಲ್ ಮೇಲೆ ಹಿಜ್ಬುಲ್ಲಾ ಮತ್ತು ಇರಾನ್ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿ ನಡೆಸಿದವು. ಏಪ್ರಿಲ್ 19ರಂದು ಇಸ್ರೇಲ್ ಪ್ರತಿದಾಳಿ ನಡೆಸಿತು. ನಂತರ ಇರಾನ್ ಮತ್ತು ಇಸ್ರೇಲ್ ಪರಸ್ಪರ ಪ್ರಚೋದನೆಗೆ ಇಳಿಯಲಿಲ್ಲ.
ಹಾಗಾದರೆ ಇರಾನ್ ಮತ್ತು ಇಸ್ರೇಲ್ ಬಿಕ್ಕಟ್ಟು ಸದ್ಯಕ್ಕೆ ಶಮನವಾಯಿತೆ? ಇರಾನ್ ಮತ್ತು ಇಸ್ರೇಲ್ ನಡುವಿನ ಹಗೆತನದ ಬೇರುಗಳು ಇರುವುದು ಮಧ್ಯಪ್ರಾಚ್ಯದ ಪ್ರಾದೇಶಿಕ ರಾಜಕಾರಣದಲ್ಲಿ. ಇರಾನ್‌ಗೆ ಅಣ್ವಸ್ತ್ರ ಹೊಂದುವ ಮಹದಾಸೆಯಿದೆ. ಒಂದೊಮ್ಮೆ ಇರಾನ್ ಅಣ್ವಸ್ತ್ರ ಹೊಂದಿದರೆ ಅದು ತನ್ನ ಅಸ್ತಿತ್ವಕ್ಕೆ ಮಾರಕ ಎಂದು ಇಸ್ರೇಲ್ ಸಹಜವಾಗಿಯೇ ಭಾವಿಸಿದೆ. ಆ ಕಾರಣದಿಂದಲೇ ಜಾಗತಿಕವಾಗಿ ರಾಜಕೀಯ ಒತ್ತಡ ತಂದು, ಇರಾನ್ ಅನ್ನು ಆರ್ಥಿಕ ದಿಗ್ಬಂಧನಕ್ಕೆ ಒಳಪಡಿಸುವಲ್ಲಿ ಇಸ್ರೇಲ್ ಯಶ ಕಂಡಿದೆ.
ಆದರೆ ಇರಾನ್ ಮಾತ್ರ ಅಣ್ವಸ್ತ್ರ ಹೊಂದುವ ಪ್ರಯತ್ನವನ್ನು ಕೈಬಿಟ್ಟಿಲ್ಲ. ಏನೇ ಬೆಲೆ ತೆತ್ತಾದರೂ ತಾನು ಅಣ್ವಸ್ತ್ರ ರಾಷ್ಟ್ರವಾಗಬೇಕು ಎಂಬ ಗುರಿಯನ್ನು ಇರಾನ್ ಹೊಂದಿದೆ. ಅಂತೆಯೇ ಯಾವುದೇ ಮಾರ್ಗ ಬಳಸಿಯಾದರೂ ಸರಿ, ಇರಾನ್ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಇಸ್ರೇಲ್ ಟೊಂಕಕಟ್ಟಿದೆ. ಇರಾನ್‌ನ ಕೆಲವು ಪರಮಾಣು ವಿಜ್ಞಾನಿಗಳನ್ನು ಹತ್ಯೆ ಮಾಡಿರುವ ಆರೋಪ ಇಸ್ರೇಲ್ ಮೇಲಿದೆ. ಹಾಗಾಗಿ, ಇಸ್ರೇಲ್ ಮತ್ತು ಇರಾನ್ ನಡುವೆ ದಾಳಿ- ಪ್ರತಿದಾಳಿ ಹೊಸದಲ್ಲ ಮತ್ತು ಇಷ್ಟಕ್ಕೇ ನಿಲ್ಲುವುದಿಲ್ಲ.
ಹಾಗಾದರೆ ಇಸ್ರೇಲ್ ಮೇಲಿನ ಹಗೆಯ ಕಾರಣಕ್ಕೆ ಇರಾನ್ ಅಣ್ವಸ್ತ್ರ ಹೊಂದುವ ಪ್ರಯತ್ನದಲ್ಲಿದೆಯೇ ಎಂದರೆ ಅದು ಅರ್ಧಸತ್ಯ. ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ದೀರ್ಘಕಾಲದ ವೈರತ್ವವನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.
1998ರಲ್ಲಿ ಪಾಕಿಸ್ತಾನ ಪರಮಾಣು ಪರೀಕ್ಷೆಗಳನ್ನು ನಡೆಸಿ, ಇಸ್ಲಾಮಿಕ್ ರಾಷ್ಟ್ರಗಳ ಪೈಕಿ ಅಣ್ವಸ್ತ್ರ ಹೊಂದಿದ ಏಕೈಕ ರಾಷ್ಟ್ರ ಎನಿಸಿಕೊಂಡಿತು. ಚೀನಾದ ತಾಂತ್ರಿಕ ಸಹಾಯ ಮತ್ತು ಅಮೆರಿಕದ ಜಾಣ ಕುರುಡು ಪಾಕಿಸ್ತಾನಕ್ಕೆ ಸಹಾಯವಾಗಿ ಒದಗಿದವು. ಪಾಕಿಸ್ತಾನದ ಪರಮಾಣು ಬಾಂಬ್ ಅನ್ನು ‘ಇಸ್ಲಾಮಿಕ್ ಬಾಂಬ್’ ಎಂದು ಕರೆಯಲಾಯಿತು. ಅರ್ಥಾತ್ ಒಂದೊಮ್ಮೆ ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ದಾಳಿಯಾದರೆ, ಪಾಕಿಸ್ತಾನದ ಪರಮಾಣು ಬಾಂಬ್ ನೆರವಿಗೆ ಬರಲಿದೆ ಎಂದು ಮುಸ್ಲಿಂ ಜಗತ್ತು ಭಾವಿಸಿತ್ತು. ಆದರೆ ಪಾಕಿಸ್ತಾನದ ಅಣ್ವಸ್ತ್ರವನ್ನು ‘ಸೌದಿ ಬಾಂಬ್’ ಎಂದು ಇರಾನ್ ಬೇರೆಯದೇ ದೃಷ್ಟಿಕೋನದಿಂದ ನೋಡಿತು. ತನ್ನದೇ ಆದ ಅಣ್ವಸ್ತ್ರ ಹೊಂದುವ ಪ್ರಯತ್ನಕ್ಕೆ ವೇಗ ನೀಡಿತು.
ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯಲು ಅದರ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ನಂತರ ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ಆ ಒಪ್ಪಂದದಿಂದ ಹಿಂದೆ ಸರಿದರು. ಇರಾನನ್ನು ಏಕಾಂಗಿಯಾಗಿಸುವ ಪ್ರಯತ್ನಕ್ಕೆ ಚಾಲನೆ ಕೊಟ್ಟರು. ಯುಎಇ ಮತ್ತು ಬಹರೇನ್ ದೇಶಗಳು ಇಸ್ರೇಲ್ ಜೊತೆ ಕೈ ಕುಲುಕಿದವು. ಕಳವಳಗೊಂಡ ಇರಾನ್ ಅಣ್ವಸ್ತ್ರ ಯೋಜನೆಗೆ ಮತ್ತಷ್ಟು ಪುಷ್ಟಿ ನೀಡಿತು. ಆದರೆ ವೇಗದ ದಾಪುಗಾಲಿಡಲು ಆರ್ಥಿಕತೆ ತೊಡಕಾಯಿತು.
ಈಗಲೂ ಇರಾನ್ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅದು ದೊಡ್ಡ ಮಟ್ಟದ ಯುದ್ಧವನ್ನು ಎದುರು ನೋಡುತ್ತಿಲ್ಲ. ಹಾಗಂತ ಅಣ್ವಸ್ತ್ರವನ್ನು ಹೊಂದುವ ಇರಾದೆಯನ್ನೂ ಬಿಟ್ಟುಕೊಟ್ಟಿಲ್ಲ. ಕೆಲವು ವಿಶ್ಲೇಷಣೆಗಳ ಪ್ರಕಾರ, ಅಣ್ವಸ್ತ್ರ ಹೊಂದಲು ಬೇಕಾದ ಬಹುಮಟ್ಟಿನ ತಯಾರಿಯನ್ನು ಇರಾನ್ ಈಗಾಗಲೇ ಮಾಡಿಕೊಂಡಿದೆ. ಹಾಗಾಗಿ, ಮಧ್ಯಪ್ರಾಚ್ಯದ ನಿಗಿ ಕೆಂಡ ಯಾವಾಗ ಜ್ವಾಲಾಗ್ನಿಯಾಗುತ್ತದೆಯೋ ಕಾದು ನೋಡಬೇಕು.
ಅದೇನೇ ಇರಲಿ, ಹಗಲಿನ ಸುಡುಬಿಸಿಲ ತಾಪ ಕಳೆಯಲು ಸಂಜೆ ಮಳೆ ಬಿದ್ದಂತೆ ಇರಾನಿನಿಂದ ಸಂತಸದ ಸುದ್ದಿಯೊಂದು ಬಂದಿದೆ. ತಾನು ವಶಪಡಿಸಿಕೊಂಡಿದ್ದ ಹಡಗಿನಲ್ಲಿದ್ದ ಅಷ್ಟೂ ಸಿಬ್ಬಂದಿಯನ್ನು ಬಿಡುಗಡೆ
ಗೊಳಿಸಿರುವುದಾಗಿ ಅದು ಹೇಳಿದೆ. ಈ ಹಡಗಿನಲ್ಲಿದ್ದ 25 ನೌಕರರ ಪೈಕಿ ಭಾರತ ಮೂಲದ 17 ಮಂದಿ ಇದ್ದರು. ಅವರೆಲ್ಲರೂ ತಮ್ಮ ಸ್ವಸ್ಥಾನಗಳಿಗೆ ಮರಳಬಹುದು. ಇರಾನ್ ಈ ನಿಲುವು ತಳೆಯಲು ಭಾರತದ ನಾಗರಿಕರು ಆ ಹಡಗಿನಲ್ಲಿದ್ದರು ಎಂಬುದು ಮುಖ್ಯ ಕಾರಣವಾಗಿರಲಿಕ್ಕೆ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.