ADVERTISEMENT

ಸೀಮೋಲ್ಲಂಘನ: ಮತ್ತೆ ಅದೇ ವಾದ, ನೀರಸ ಸಂವಾದ

ಬೈಡನ್–- ಟ್ರಂಪ್ ಸಂವಾದವು ಅಮೆರಿಕದಲ್ಲಿ ಬೇರೆಯದೇ ಚರ್ಚೆಯನ್ನು ಹುಟ್ಟುಹಾಕಿದೆ

ಸುಧೀಂದ್ರ ಬುಧ್ಯ
Published 30 ಜೂನ್ 2024, 22:21 IST
Last Updated 30 ಜೂನ್ 2024, 22:21 IST
<div class="paragraphs"><p>ಅಮೆರಿಕದ   ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್&nbsp;ಮತ್ತು ಈಗಿನ ಅಧ್ಯಕ್ಷ ಜೋ ಬೈಡನ್</p></div>

ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಗಿನ ಅಧ್ಯಕ್ಷ ಜೋ ಬೈಡನ್

   

ಕಳೆದ ಗುರುವಾರ ಅಮೆರಿಕದ ಈಗಿನ ಅಧ್ಯಕ್ಷ ಜೋ ಬೈಡನ್ ಮತ್ತು ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿಎನ್ಎನ್ ಸುದ್ದಿ ಸಂಸ್ಥೆ ಆಯೋಜಿಸಿದ್ದ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ಚರ್ಚೆಯಲ್ಲಿ ಮುಖಾಮುಖಿಯಾದರು. ನಮ್ಮಲ್ಲಿ ವಿರೋಧ ಪಕ್ಷಗಳ ನಾಯಕರು ಪರಸ್ಪರ ಎದುರಾದಾಗ, ಒಂದೇ ವೇದಿಕೆಯಲ್ಲಿ ಜೊತೆಯಾದಾಗ ಸೌಜನ್ಯಕ್ಕಾದರೂ ಕೈ ಕುಲುಕುವುದು, ಕನಿಷ್ಠ ಮಂದಹಾಸ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಅಷ್ಟರಮಟ್ಟಿಗಿನ ಪ್ರಬುದ್ಧತೆಯನ್ನು ನಮ್ಮ ರಾಜಕಾರಣಿಗಳು ಉಳಿಸಿಕೊಂಡಿದ್ದಾರೆ. ಆದರೆ ಬೈಡನ್ ಮತ್ತು ಟ್ರಂಪ್ ಒಂದೇ ವೇದಿಕೆಯಲ್ಲಿ ನಾಲ್ಕು ಗೇಣಿನ ಅಂತರದಲ್ಲಿ ನಿಂತರೂ ಹಸ್ತಲಾಘವ ಮಾಡಲಿಲ್ಲ. ಉಭಯ ಕುಶಲೋಪರಿಯ ಮಾತನಾಡಲಿಲ್ಲ. ಒಬ್ಬರು ಮಾತನಾಡುವಾಗ ಮತ್ತೊಬ್ಬರು ಸೋಟೆ ತಿರುವಿದ್ದು ಬಿಟ್ಟರೆ ಈ ಇಬ್ಬರ ಮುಖದಲ್ಲಿ ಬೇರಾವ ಭಾವನೆಗಳೂ ವ್ಯಕ್ತವಾಗಲಿಲ್ಲ!

ಅದೇನೇ ಇರಲಿ, ಅಭ್ಯರ್ಥಿಗಳ ನಡುವಿನ ಚರ್ಚೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅವಿಭಾಜ್ಯ ಅಂಗ. ಈ ಬಾರಿ ಟ್ರಂಪ್ ಮತ್ತು ಬೈಡನ್ ಅವರ ನಡುವೆ ನಡೆದ ಚರ್ಚೆ, ಕೆಲವು ಕಾರಣಗಳಿಂದ ವಿಶೇಷ ಎನಿಸಿಕೊಂಡಿತು. ಮೊದಲನೆಯದು, ಈ ಚರ್ಚೆ ನಡೆದ ಸಮಯ. ಸಾಮಾನ್ಯವಾಗಿ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ಚರ್ಚೆ, ಚುನಾವಣೆಗೆ ಇನ್ನು ಕೆಲವು ವಾರಗಳಿವೆ ಎನ್ನುವ ಹಂತದಲ್ಲಿ ನಡೆಯುತ್ತದೆ. ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಅಧಿಕೃತವಾಗಿ ಅಧ್ಯಕ್ಷೀಯ ಅಭ್ಯರ್ಥಿಯ ಘೋಷಣೆಯಾದ ಬಳಿಕವಷ್ಟೇ ಚರ್ಚೆಗೆ ವೇದಿಕೆ ಸಿದ್ಧವಾಗುತ್ತದೆ. ಈ ಬಾರಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಅಧಿವೇಶನ ಇನ್ನಷ್ಟೇ ಜರುಗಬೇಕಿದೆ. ರಿಪಬ್ಲಿಕನ್ ಪಕ್ಷ ಜುಲೈನಲ್ಲಿ ಮತ್ತು ಡೆಮಾಕ್ರಟಿಕ್ ಪಕ್ಷ ಆಗಸ್ಟ್ ತಿಂಗಳಿನಲ್ಲಿ ಅಧಿವೇಶನಕ್ಕೆ ದಿನಾಂಕ ನಿಕ್ಕಿ ಮಾಡಿವೆ.

ADVERTISEMENT

ಎರಡನೆಯದು, ಹಿಂದೆಲ್ಲಾ ಅಧ್ಯಕ್ಷೀಯ ಚರ್ಚೆಗಳ ಆಯೋಗವು ಅಭ್ಯರ್ಥಿಗಳ ನಡುವೆ ಮೂರು ಹಂತದ ಚರ್ಚೆಯನ್ನು ಆಯೋಜಿಸುತ್ತಿತ್ತು. ಆದರೆ ಈ ಬಾರಿ ಆಯೋಗವನ್ನು ಪಕ್ಕಕ್ಕಿಟ್ಟು ಮೊದಲ ಸಂವಾದ ನಡೆದಿದೆ. ಕಾರಣ, ಸಂವಾದವನ್ನು ಆಯೋಜಿಸುವ ಆಯೋಗವು ಪಕ್ಷಪಾತಿಯಾಗಿದೆ. ರಿಪಬ್ಲಿಕನ್ ಪಕ್ಷದ ವಿರುದ್ಧ ಇದೆ ಎಂದು ಟ್ರಂಪ್ ಅವರ ತಂಡ ಈ ಹಿಂದೆ ಆರೋಪಿಸಿತ್ತು. ಒಂದೊಮ್ಮೆ ಆಯೋಗದ ಉಸ್ತುವಾರಿಯಲ್ಲಿ ಸಂವಾದ ನಡೆದರೆ ಟ್ರಂಪ್ ಅವರು ಭಾಗವಹಿಸುವುದಿಲ್ಲ ಎಂದಿತ್ತು. ಹಾಗಾಗಿ ಬೈಡನ್ ಅವರ ತಂಡವು ಟ್ರಂಪ್ ಅವರ ತಂಡದ ಜೊತೆ ಸಂವಾದದ ಕುರಿತು ನೇರವಾಗಿ ಮಾತುಕತೆ ನಡೆಸಿತು. ಪರಿಣಾಮ, ಎರಡು ಹಂತದ ಸಂವಾದ ನಿಗದಿಯಾಯಿತು. ಹಾಗೆ ನೋಡಿದರೆ, ಅಧ್ಯಕ್ಷೀಯ ಸಂವಾದದಲ್ಲಿ ಗಂಭೀರ ವಿಷಯ ಮಂಥನ ನಡೆಯುವುದಿಲ್ಲ. ಮುಖ್ಯವಾಗಿ ಪ್ರತಿಸ್ಪರ್ಧಿಗಿಂತ ತಾನು ಅಧ್ಯಕ್ಷ ಪದವಿಗೆ ಏಕೆ ಸೂಕ್ತ ಎಂದು ವಾದಿಸಲು ಮಾತ್ರ ವೇದಿಕೆ ಬಳಕೆಯಾಗುತ್ತದೆ. ಯಾವುದೇ ಪಕ್ಷದ ಪರ ಒಲವು ತೋರದ ಬೇಲಿಯ ಮೇಲೆ ಕೂತ ಮತದಾರರು ಯಾರಿಗೆ ಮತಹಾಕಬೇಕು ಎಂದು ನಿರ್ಧರಿಸಲು ಈ ಚರ್ಚೆಗಳು ಸಹಾಯಕವಾಗುತ್ತವೆ.

ಈ ಬಾರಿ ಪ್ರಾಥಮಿಕ ಹಂತದ ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಬೈಡನ್ ಅವರು ಇದು ಪ್ರಜಾಪ್ರಭುತ್ವದ ಅಳಿವು ಮತ್ತು ಉಳಿವಿನ ಚುನಾವಣೆ ಎಂದಿದ್ದರು. ಆಗಿನ್ನೂ ರಿಪಬ್ಲಿಕನ್ ಪಕ್ಷದ ಸ್ಪರ್ಧಿಯಾಗಿ ಡೊನಾಲ್ಡ್ ಟ್ರಂಪ್ ಅವರು ಹೊರಹೊಮ್ಮಿರಲಿಲ್ಲ. ಆದರೆ ಬೈಡೆನ್ ಅವರ ಚುನಾವಣಾ ಭಾಷಣಗಳು ಟ್ರಂಪ್ ಅವರನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಿದಂತೆ ಇರುತ್ತಿತ್ತು. ಆರ್ಥಿಕತೆ, ವಿದೇಶಾಂಗ ನೀತಿ, ಉದ್ಯೋಗ ಸೃಷ್ಟಿ, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಯ ವಿಷಯವಾಗಿ ತಾವು ನಾಲ್ಕು ವರ್ಷಗಳ ಅವಧಿಯಲ್ಲಿ ಕೈಗೊಂಡ ಕ್ರಮವೇನು, ಮತ್ತೊಂದು ಅವಧಿಗೆ ಅಧ್ಯಕ್ಷನಾದರೆ ಅನುಷ್ಠಾನಕ್ಕೆ ಬರಲಿರುವ ಯೋಜನೆಗಳೇನು ಎಂದು ವಿವರಿಸಲು ತೆಗೆದುಕೊಂಡ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾದರೆ ಆಗುವ ಅನಾಹುತಗಳನ್ನು ಬಣ್ಣಿಸಲು ಬೈಡನ್ ತೆಗೆದುಕೊಳ್ಳುತ್ತಿದ್ದರು. ಟ್ರಂಪ್ ಅವರನ್ನು ಮಣಿಸಲು ತಾನೇ ಸೂಕ್ತ ಎಂದು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಬೈಡನ್ ಬಿಂಬಿಸಿಕೊಂಡರು.

ಟ್ರಂಪ್ ಅವರು ಕೂಡ ಭಿನ್ನ ವಿಷಯಗಳ ಬಗ್ಗೆ ಮಾತನಾಡಿದ್ದು ಕಡಿಮೆ. ಅವರ ಅಷ್ಟೂ ಚುನಾವಣಾ ಭಾಷಣವನ್ನು ಜರಡಿಯಾಡಿದರೆ ಉಳಿಯುತ್ತಿದ್ದದ್ದು ಅಕ್ರಮ ವಲಸೆ, ಉದ್ಯೋಗ ನಷ್ಟ, ರಷ್ಯಾ ಮತ್ತು ಚೀನಾಕ್ಕೆ ಸಂಬಂಧಿಸಿದ ಸಂಗತಿ, ಕೊನೆಗೆ ಬೈಡನ್ ಅಸಮರ್ಥ ಅಧ್ಯಕ್ಷ ಎಂಬ ಅಂಶಗಳು ಮಾತ್ರ.

ಈ ಸಂಗತಿಗಳೇ ಬೈಡನ್ ಮತ್ತು ಟ್ರಂಪ್ ಅವರ ನಡುವಿನ ಮೊದಲ ಚರ್ಚೆಯಲ್ಲಿ ಪುನಃ ಪ್ರಸ್ತಾಪವಾದವು. ಆಯೋಜಕರ ಮೊದಲ ಪ್ರಶ್ನೆ ಆರ್ಥಿಕತೆ ಮತ್ತು ಹಣದುಬ್ಬರದ ಕುರಿತಾಗಿತ್ತು. ‘ನಾನು ಅಧಿಕಾರ ವಹಿಸಿಕೊಂಡಾಗಲೇ ಪರಿಸ್ಥಿತಿ ಹದಗೆಟ್ಟಿತ್ತು. ನನ್ನ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಾಯಿತು, ಆರ್ಥಿಕ ಮಹಾಕುಸಿತದಿಂದ ಅಮೆರಿಕ ಪಾರಾಯಿತು’ ಎಂದು ಬೈಡನ್ ತಮ್ಮ ನಡೆ ಸಮರ್ಥಿಸಿಕೊಂಡರೆ, ಟ್ರಂಪ್ ಅವರು ‘ಬೈಡನ್ ನೇತೃತ್ವದ ಸರ್ಕಾರವು ಉದ್ಯೋಗ ಸೃಷ್ಟಿಸಿದ್ದು ಅಕ್ರಮ ವಲಸಿಗರಿಗೆ ಮಾತ್ರ. ನನ್ನ ನೇತೃತ್ವದ ಸರ್ಕಾರ ತೆರಿಗೆ ಮತ್ತು ನಿಯಂತ್ರಣ ಕಡಿತವನ್ನು ಜಾರಿಗೆ ತಂದಿದ್ದರಿಂದಲೇ ಉದ್ಯೋಗ ಸೃಷ್ಟಿಯಾಯಿತು, ಹಣದುಬ್ಬರ ನಿಯಂತ್ರಣದಲ್ಲಿತ್ತು’ ಎಂದು ಟ್ರಂಪ್ ತಮ್ಮ ವಾದವನ್ನು ಮಂಡಿಸಿದರು.

ವಿದೇಶಾಂಗ ನೀತಿ ಮತ್ತು ಮಧ್ಯಪ್ರಾಚ್ಯದ ವಿಷಯದಲ್ಲಿ ಬೈಡನ್ ಅವರು ಹೆಚ್ಚೇನೂ ಹೇಳಲು ಸಾಧ್ಯವಾಗಲಿಲ್ಲ. ಅದನ್ನು ಬಳಸಿಕೊಂಡ ಟ್ರಂಪ್, ಇಂದು ಜಾಗತಿಕವಾಗಿ ಅಮೆರಿಕದ ಮಾತಿಗೆ ಬೆಲೆ ಇಲ್ಲದಂತಾಗಿದೆ. ಅಫ್ಗಾನಿಸ್ತಾನದ ವಿಷಯವನ್ನು ಸರಿಯಾಗಿ ನಿರ್ವಹಿಸಲು ಬೈಡನ್ ಅವರಿಗೆ ಸಾಧ್ಯವಾಗಲಿಲ್ಲ. ಅದು ಅಮೆರಿಕ ದುರ್ಬಲ ಅಧ್ಯಕ್ಷರನ್ನು ಹೊಂದಿದೆ ಎಂಬ ಸಂದೇಶ ರವಾನಿಸಿತು. ಉಕ್ರೇನ್ ಮೇಲೆ ಆಕ್ರಮಣ ಮಾಡಲು ಇದು ಸುಸಮಯ ಎಂಬ ತೀರ್ಮಾನಕ್ಕೆ ಪುಟಿನ್ ಬಂದರು. ಇರಾನ್ ಬೆಂಬಲ ಪಡೆದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮೂರನೇ ವಿಶ್ವ ಯುದ್ಧವಾದರೂ ಅಚ್ಚರಿಯಿಲ್ಲ, ತನ್ನ ಅವಧಿಯಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಟ್ರಂಪ್ ಭುಜ ತಟ್ಟಿಕೊಂಡರು.

2020ರ ಚುನಾವಣೆಯ ಬಳಿಕ ನಡೆದ ಅಮೆರಿಕದ ಸಂಸತ್ ಮೇಲಿನ ದಾಳಿ, ಅದಕ್ಕೆ ದೊರೆತ ಪ್ರಚೋದನೆ, ವಿವಿಧ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಮೊಕದ್ದಮೆಗಳ ವಿಷಯ ಪ್ರಸ್ತಾಪವಾದಾಗ ಮಾತು ಬದಲಿಸಿದ ಟ್ರಂಪ್, ಮತ್ತೊಮ್ಮೆ ಅಕ್ರಮ ವಲಸಿಗರು, ರಷ್ಯಾ ಮತ್ತು ಚೀನಾ ಎಂಬ ವಿಷಯಗಳ ಸುತ್ತಲೇ ಗಿರಕಿ ಹೊಡೆದರು. ತಮ್ಮ ಸರ್ಕಾರದ ಸಾಧನೆಯ ಅಂಕಿ ಅಂಶಗಳನ್ನು ಮಂಡಿಸುವಾಗ ಬೈಡನ್ ತಡವರಿಸಿದರು. ಒಟ್ಟಾರೆಯಾಗಿ ಬೈಡೆನ್ ಅವರ ಕ್ಷೀಣ ಧ್ವನಿ ಹಾಗೂ ನೀರಸ ಪಾಲ್ಗೊಳ್ಳುವಿಕೆಯ ಎದಿರು ಟ್ರಂಪ್ ಅವರ ಗಟ್ಟಿ ಧ್ವನಿ ಮತ್ತು ಚುರುಕು ಮಾತು ಮೇಲುಗೈ ಸಾಧಿಸಿದಂತೆ ಕಂಡುಬಂತು.

ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಇರುವಾಗ ನಡೆದ ಈ ಸಂವಾದವು ಅಮೆರಿಕದ ರಾಜಕೀಯ ಪಡಸಾಲೆಯಲ್ಲಿ ಬೇರೆಯದೇ ಚರ್ಚೆಯನ್ನು ಇದೀಗ ಹುಟ್ಟುಹಾಕಿದೆ. ನಿಜಕ್ಕೂ ಅಮೆರಿಕದ ಬಗ್ಗೆ ಕಾಳಜಿ ಇದ್ದರೆ, ಪ್ರಜಾಪ್ರಭುತ್ವದ ಉಳಿವನ್ನು ಬಯಸುವುದಾದರೆ, ಬೈಡನ್ ಅವರು ಕಣದಿಂದ ಹಿಂದೆ ಸರಿಯಬೇಕು ಮತ್ತು ಪ್ರಬಲ ಅಭ್ಯರ್ಥಿಗೆ ದಾರಿ ಮಾಡಿಕೊಡಬೇಕು ಎಂಬ ಕೂಗು ಡೆಮಾಕ್ರಟಿಕ್ ಪಕ್ಷದ ಅಂಗಳದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಬದಲಿ ಅಭ್ಯರ್ಥಿಯನ್ನು ಆರಿಸುವ ಪ್ರಕ್ರಿಯೆ ಸುಲಭವಲ್ಲ ಮತ್ತು ಸಮಯವಿಲ್ಲ. ಒಂದೊಮ್ಮೆ ಬೈಡನ್ ಅವರು ಪಕ್ಷದೊಳಗಿನ ಅಪಸ್ವರವನ್ನು ಆಲಿಸಿ, ತಮ್ಮ ವಯಸ್ಸಿನ ಮಿತಿಯನ್ನು ಗಮನಿಸಿ, ಉಮೇದುವಾರಿಕೆಯಿಂದ ಸ್ವತಃ ಹಿಂದೆ ಸರಿದರೆ, ಕಮಲಾ ಹ್ಯಾರಿಸ್ ಅವರಿಗೆ ಅವಕಾಶವಾಗಬಹುದು. ಟ್ರಂಪ್ ಅವರ ಎದಿರು ಭಾರತ ಮೂಲದ ಕಮಲಾ ಪೈಪೋಟಿಗೆ ನಿಲ್ಲಬಹುದು. ಆದರೆ ಆ ಸಾಧ್ಯತೆಗಳು ತೀರಾ ಕಡಿಮೆ. ಸೆಪ್ಟೆಂಬರ್ 10ರಂದು ನಡೆಯುವ ಎರಡನೇ ಸಂವಾದದಲ್ಲಿ ಬೈಡನ್ ಅವರು ಯಾವ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಬಗ್ಗೆಯಷ್ಟೇ ಕುತೂಹಲ ಇಟ್ಟುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.