ಎತ್ತರದ ‘ಏಕತಾ ಮೂರ್ತಿ’ ಅನಾವರಣಗೊಂಡ ಬಳಿಕ ಸಣ್ಣ ಸ್ತರದ ಚರ್ಚೆಯೊಂದು ಮುನ್ನೆಲೆಗೆ ಬಂತು. ಚರ್ಚೆಯ ವಸ್ತು ಹಳೆಯದೇ. ಅಲಹಾಬಾದಿನ ಪಂಡಿತರು ಮತ್ತು ಬಾರ್ದೋಲಿಯ ಸರ್ದಾರರಲ್ಲಿ ಯಾರ ವ್ಯಕ್ತಿತ್ವ ಎತ್ತರ, ಯಾರ ಕಾಣ್ಕೆ ದೊಡ್ಡದು? ಈ ಪ್ರಶ್ನೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವು ಬಾರಿ ಚರ್ಚೆಯ ವಿಷಯವಾಗಿದೆ. ತಮಗೆ ಅನುಕೂಲವಾಗುವಂತಹ ಉತ್ತರವನ್ನೇ ಎರಡು ಬದಿಯಲ್ಲಿ ನಿಂತವರು ಕೊಡುತ್ತಾ ಬಂದಿದ್ದಾರೆ. ಕೆಲವೊಮ್ಮೆಪಟೇಲ್ ಮತ್ತು ನೆಹರೂ ನಡುವಿನ ವೈಮನಸ್ಯವನ್ನಷ್ಟೇ ಗುರುತಿಸಿ, ಅವರ ನಡುವೆ ಇದ್ದ ಸಮನ್ವಯದ ಕುರಿತು ಮಾತನಾಡುವುದನ್ನು ನಮ್ಮ ನಾಯಕರು ಮರೆತಿದ್ದಾರೆ.
1997ರ ನವೆಂಬರ್ 13ರಂದು ದೆಹಲಿಯಲ್ಲಿ ನೆಹರೂ ಸ್ಮಾರಕ ಉಪನ್ಯಾಸ ನೀಡಿದ್ದ ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ‘ನೆಹರೂ ಕನಸಿನ ಭಾರತ’ ಎಂಬ ವಿಷಯವಾಗಿ ಮಾತನಾಡುತ್ತಾ ‘ಈ ದೇಶದ ರಾಜಕೀಯ ಹಾಗೂ ಸಂವಿಧಾನಾತ್ಮಕ ಏಕತೆಯೆಂಬುದು ಅನೇಕರು ಸೇರಿ ಆಯೋಜಿಸಿದ್ದಾದರೂ, ನೆಹರೂರ ತೀವ್ರ ಆಸಕ್ತಿಯ ವಿಷಯ ಅದಾಗಿತ್ತು. ಆ ತೀವ್ರಾಸಕ್ತಿಯನ್ನು ಅವರು ಜನತೆಯಲ್ಲಿ ಮೈಗೂಡಿಸಿದರು. ಯುಗೋಸ್ಲಾವಿಯಾದ ಕಮ್ಯುನಿಸ್ಟ್ ನಾಯಕ ಮಿಲೋವನ್ ಜಿಲಾಸ್ ‘ಭಾರತ ಬಹುಬೇಗ ಚೂರಾಗುತ್ತದೆ’ ಎಂದಿದ್ದರು. ಆದರೆ ಚೂರಾಗುವ ಭಾವನೆಮೊಳೆಯಲು ಅವಕಾಶವಾಗದಂತೆ ನೆಹರೂ ಆಡಳಿತ ನಡೆಸಿದರು’ ಎಂಬುದಾಗಿ ವಿಮರ್ಶಿಸಿದ್ದರು.
ಮುಖ್ಯವಾಗಿ, ನೆಹರೂ ಮತ್ತು ಪಟೇಲ್ ವ್ಯಕ್ತಿತ್ವವನ್ನು ನೋಡುವಾಗ ಅವರು ಬೆಳೆದುಬಂದ ವಾತಾವರಣವನ್ನು ಗಮನಿಸಬೇಕು. ರಾಜಮೋಹನ ಗಾಂಧಿ ತಮ್ಮ ಕೃತಿಯಲ್ಲಿ ಪ್ರಸಂಗವೊಂದನ್ನು ಉಲ್ಲೇಖಿಸಿದ್ದಾರೆ. ಮೋತಿಲಾಲರು ತೀರಿಕೊಂಡಿದ್ದ ಸಂದರ್ಭ ಅದು. ಆಗ ಡಾ. ವಿಧಾನಚಂದ್ರ ರಾಯ್ ‘ಮೋತಿಲಾಲರಲ್ಲಿ ಎದ್ದು ಕಾಣುವ ದೊಡ್ಡ ಗುಣಯಾವುದು’ ಎಂದು ಪ್ರಶ್ನಿಸಿದಾಗ ಗಾಂಧೀಜಿ ‘ಪುತ್ರ ವ್ಯಾಮೋಹ’ ಎಂದಿದ್ದರಂತೆ. ಅದಕ್ಕೆ ಕಾರಣವೂ ಇತ್ತು. ಆ ಮೊದಲು ಮೋತಿಲಾಲರು ಮಗನ ಗುಣಗಾನ ಮಾಡುವ ಪತ್ರವೊಂದನ್ನು ಗಾಂಧೀಜಿಗೆ ಬರೆದಿದ್ದರು. ನೆಹರೂರನ್ನು ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಮಾಡಲು ಮೋತಿಲಾಲರು ಶ್ರಮ ಹಾಕಿದ್ದರು. ನಂತರ ನೆಹರೂರ ಮತ್ತೊಬ್ಬ ಪ್ರಚಾರಕರಾಗಿ ಗಾಂಧಿ ಮಾರ್ಪಟ್ಟರು. ಮೋತಿಲಾಲರಂತಹ ತಂದೆ ಮತ್ತು ಗಾಂಧೀಜಿಯಂತಹ ಗುರುವಿನ ಪ್ರೀತಿ ಸಿಕ್ಕಿದ್ದರಿಂದ ನೆಹರೂ ರಾಜಕೀಯವಾಗಿ ಬಹುಬೇಗ ಎತ್ತರಕ್ಕೇರಿದರು.
ಪಟೇಲರ ಆರಂಭದ ವರ್ಷಗಳು ಭಿನ್ನವಾಗಿದ್ದವು. ಇಂಗ್ಲೆಂಡಿಗೆ ಹೋಗಿ ಬಾರ್-ಅಟ್-ಲಾ ಓದಬೇಕೆಂಬುದು ಪಟೇಲರ ಕನಸಾಗಿತ್ತು. ಅದಕ್ಕಾಗಿ ಚಿಕ್ಕಂದಿನಿಂದಲೇ ಹಣವನ್ನು ಕೂಡಿಟ್ಟಿದ್ದರು. ‘ಹಿರಿಯನಾದ ನಾನು ಮೊದಲು ಬಾರ್-ಅಟ್-ಲಾ ಆಗಬೇಕಲ್ಲವೇ?’ ಎಂದು ಅಣ್ಣ ವಿಠ್ಠಲಭಾಯಿ ಕೇಳಿದಾಗ ಅಷ್ಟೂ ಹಣವನ್ನು ಪಟೇಲರು ಅಣ್ಣನಿಗೆ ನೀಡಿದ್ದರು. ತಾವು ಮತ್ತೆ ದುಡಿಯಲು ತೊಡಗಿದ್ದರು. ಇಂತಹ ಸಂಗತಿಗಳು ಅವರ ವ್ಯಕ್ತಿತ್ವವನ್ನು ರೂಪಿಸಿತ್ತು. ನಂತರ ಹೋರಾಟಗಳ ಮೂಲಕ ರಾಜಕೀಯವಾಗಿ ಬೆಳೆದು ಗಾಂಧೀಜಿಯ ಆಪ್ತ ಪಾಳೆಯದಲ್ಲಿ ಪಟೇಲ್ ಸ್ಥಾನ ಪಡೆದರು.
ಇನ್ನು, ನೆಹರೂ ಮೊದಲ ಪ್ರಧಾನಿಯಾಗಿ ಆಯ್ಕೆಯಾದದ್ದು ಹೇಗೆ ಎಂಬ ಪ್ರಶ್ನೆಗೆ, ಅವರು ಗಾಂಧೀಜಿಯ ಉತ್ತರಾಧಿಕಾರಿ ಆಗಿದ್ದರ ಹಿನ್ನೆಲೆಯಲ್ಲಿ ಉತ್ತರವನ್ನು ನೋಡಬೇಕು. ಗಾಂಧಿ ನಾಲ್ವರನ್ನು ತಮ್ಮ ಉತ್ತರಾಧಿಕಾರಿ ಎಂದು ಹೇಳುತ್ತಿದ್ದರು. ಪಟೇಲ್, ರಾಜಾಜಿ, ರಾಜೇಂದ್ರ ಪ್ರಸಾದ್ ಮತ್ತು ಜವಾಹರಲಾಲ್. ಆ ಪೈಕಿ ಜನಾಕರ್ಷಣೆಯಲ್ಲಿ ಹಿಂದಿದ್ದ ರಾಜೇಂದ್ರಪ್ರಸಾದರು ಬೇಗನೆ ಸ್ಪರ್ಧೆಯಿಂದ ಹೊರಬಿದ್ದರು. ಮಹಾತ್ಮರ ಮಗನನ್ನು ರಾಜಾಜಿ ಮಗಳು ಮದುವೆಯಾದ ಮೇಲೆ ರಾಜಾಜಿಯನ್ನು ತಮ್ಮ ಉತ್ತರಾಧಿಕಾರಿಯ ಪಟ್ಟಿಯಿಂದ ಗಾಂಧಿ ಕೈಬಿಟ್ಟರು. ಪಟೇಲರ ಏರು ವಯಸ್ಸು ಮತ್ತು ಅವರ ಅನಾರೋಗ್ಯ, ಗಾಂಧಿ ಚಿತ್ತ ನೆಹರೂರತ್ತ ಸ್ಥಿರವಾಗಲು ಕಾರಣ ಎನ್ನುವುದುಸಾಮಾನ್ಯ ಅಭಿಪ್ರಾಯವಾದರೂ, ತನ್ನದೇ ರಾಜ್ಯದವರನ್ನು ಉತ್ತರಾಧಿಕಾರಿಯನ್ನಾಗಿ ಆರಿಸಿದರು ಎಂಬ ಅಪವಾದ ಬಂದೀತೆಂದು ಗಾಂಧಿ ಹೆದರಿದರೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಕೊನೆಗೆ 1942ರಲ್ಲಿ ಕಾಂಗ್ರೆಸ್ ಮುಂದೆ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ‘ಜವಾಹರಲಾಲರೇ ನನ್ನ ಉತ್ತರಾಧಿಕಾರಿ. ನಾನು ಹೋದ ಮೇಲೆ ಆತ ನನ್ನ ಭಾಷೆಯನ್ನು ಮಾತನಾಡುತ್ತಾನೆ’ ಎಂದು ಸೂಚಿಸಿದರು.
ನೆಹರೂ ಆ ಪದವಿಗೆ ಸಮರ್ಥರೇ ಆಗಿದ್ದರು. ಜಗತ್ತಿನೆದುರು ಭಾರತವನ್ನು ಪ್ರತಿನಿಧಿಸಬಲ್ಲ ಚಾಕಚಕ್ಯತೆ ನೆಹರೂಗೆ ಸಿದ್ಧಿಸಿತ್ತು. ಪಟೇಲ್ ಒಬ್ಬ ಸಂಘಟಕರಾಗಿದ್ದರು. ಆದರೆ ಜನಪ್ರಿಯ ನಾಯಕರಾಗಿರಲಿಲ್ಲ. ಪಟೇಲರಿಗೆ ತಮ್ಮ ಮಿತಿಯ ಅರಿವಿತ್ತು. ಬಾಂಬೆಯ ಬಹಿರಂಗ ಸಭೆಗೆ ಕಿಕ್ಕಿರಿದು ಬಂದಿದ್ದ ಜನರ ಬಗ್ಗೆ, ಅಮೆರಿಕದ ಪತ್ರಕರ್ತ ವಿನ್ಸೆಂಟ್ ಶೀನ್ ಪ್ರಶ್ನಿಸಿದಾಗ ಪಟೇಲ್ ‘They come for Jawahar, not for me’ ಎಂದಿದ್ದರು.
ಗಾಂಧೀಜಿಯ ಎಡ ಬಲ ರಟ್ಟೆಯಂತಿದ್ದ ನೆಹರೂ- ಪಟೇಲ್ ಮಧ್ಯೆ ಬಿರುಕು ದೊಡ್ಡದಾಗಿ ಅನಾವರಣಗೊಂಡಿದ್ದು, ದೆಹಲಿಯ ಜಿಲ್ಲಾಧಿಕಾರಿಯಾಗಿದ್ದ ಎಂ.ಎಸ್. ರಾಂಧವರ ವರ್ಗಾವಣೆ ವಿಷಯದಲ್ಲಿ. ಅಜ್ಮೀರ್ ಗಲಭೆಯ ನಂತರ ವೈಮನಸ್ಯ ಹಿರಿದಾಗಿ ಇಬ್ಬರೂ ಸರ್ಕಾರದಿಂದ ಬಿಡುಗಡೆ ಬಯಸಿ ಗಾಂಧೀಜಿಗೆ ಪತ್ರ ಬರೆದಿದ್ದರು. ನಂತರ ಸೈರಣೆಯಿಂದ ಮುನ್ನಡೆದರು. ಪಟೇಲರು ತಾವು ಪ್ರಧಾನಿ ಯಾಗಲು ಬಯಸಿದ್ದವರಲ್ಲ. ನೆಹರೂರ ಅಂತರರಾಷ್ಟ್ರೀಯ ವರ್ಚಸ್ಸು ಭಾರತಕ್ಕೆ ದೊಡ್ಡ ಆಸ್ತಿ ಎಂಬುದು ಪಟೇಲರಿಗೆ ಮನವರಿಕೆಯಾಗಿತ್ತು. ಆದರೆ ನೆಹರೂರ ಆದರ್ಶಗಳು ವಾಸ್ತವಿಕತೆಯಿಂದ ದೂರವಾಗಿವೆ, ಮುಖವಾಡದ ಹಿಂದಿನ ಅಪಾಯವನ್ನು ಅವರು ಗುರುತಿಸಲಾರರು. ಇದರಿಂದ ರಾಷ್ಟ್ರದ ಸುರಕ್ಷತೆಗೆ ಅಪಾಯ ಎಂಬುದು ಪಟೇಲರ ಚಿಂತೆಯಾಗಿತ್ತು.
ಗಾಂಧೀಜಿ ಹತ್ಯೆಯ ನಂತರ ಮೌಂಟ್ ಬ್ಯಾಟನ್ ‘ತಮ್ಮ ಅತ್ಯಂತ ಪ್ರಿಯವಾದ ಬಯಕೆ ನೆಹರೂ ಮತ್ತು ಪಟೇಲ್ ನಡುವೆ ಸಂಪೂರ್ಣ ಹೊಂದಾಣಿಕೆಯನ್ನು ತರುವುದು ಎಂದು ಗಾಂಧಿ ಹೇಳಿದ್ದರು’ ಎಂಬ ಸಂಗತಿಯನ್ನು ಉಭಯ ನಾಯಕರಿಗೆ ತಿಳಿಸಿದ್ದರು. ಅಂದು ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ನೆಹರೂರನ್ನು ‘ನನ್ನ ಪ್ರಿಯ ಸಹೋದರ’ ಎಂದು ಪಟೇಲ್ ಸಂಬೋಧಿಸಿದ್ದರು. ಬಳಿಕ ಯಾವುದೇ ವಿಷಯದಲ್ಲಿ ನೆಹರೂಗೆ ಮುಜುಗರ ಉಂಟು ಮಾಡಬಾರದು ಎಂದು ಪಟೇಲ್ ತೀರ್ಮಾನಿಸಿದರೆ, ಪಟೇಲ್ ನಿರ್ಣಯಿಸಿದ ವಿಷಯಗಳನ್ನು ತಾವು ಮರುಪರಿಶೀಲಿಸುವುದಿಲ್ಲ ಎಂಬ ಗಡಿರೇಖೆಯನ್ನು ನೆಹರೂ ಹಾಕಿಕೊಂಡಿದ್ದರು.
ಪಟೇಲ್ ಶಕ್ತಿಯುತ ಸರ್ಕಾರ ಬಯಸಿದ್ದರು. ನೆಹರೂ ಆದ್ಯತೆ ನ್ಯಾಯಕ್ಕೆ ಬದ್ಧವಾದ ಸರ್ಕಾರವಾಗಿತ್ತು. ನೆಹರೂ ಮಾತುಗಾರ, ಕನಸುಗಾರ ಮತ್ತು ಜಗತ್ತಿನ ಬಗ್ಗೆ ಹೆಚ್ಚು ತಿಳಿವಳಿಕೆ ಇದ್ದ ನಾಯಕ. ಆದರೆ ವಾಸ್ತವಿಕತೆ ಪಟೇಲ್ ಬದುಕಿನ ಹೆಗ್ಗುರುತಾಗಿತ್ತು. ಸಾಮ, ಭೇದ, ಮಂತ್ರ ಮತ್ತು ದಂಡದ ಪ್ರಯೋಗವನ್ನು ಅವಶ್ಯಕತೆಗೆ ತಕ್ಕಂತೆ ಪಟೇಲ್ ಬಳಸಿದರು. ಅದರಿಂದಾಗಿ 540 ಪ್ರಾಂತ್ಯಗಳನ್ನು ಒಂದು ರಾಷ್ಟ್ರವಾಗಿ ಜೋಡಿಸಲು ಸಾಧ್ಯವಾಯಿತು. ಪಟೇಲ್ ಮರಣಾನಂತರ, ದೇಶವನ್ನು ಹೊಸ ದಿಕ್ಕಿನತ್ತ ನೆಹರೂ ಕೊಂಡೊಯ್ದರು. ಆಧುನಿಕ ಭಾರತ ಎದ್ದು ನಿಂತಿತು. ಆದರೆ ಸರ್ಕಾರ ಶಕ್ತಿ ಕಳೆದುಕೊಂಡಿತ್ತು.
ಮೊದಲ ಸ್ಥಾನವನ್ನು ಒಬ್ಬ ವ್ಯಕ್ತಿ ಪಡೆದ ಸಮಯದಲ್ಲಿ ಆ ಸ್ಥಾನಕ್ಕೆ ಅಷ್ಟೇ ಅರ್ಹತೆಯುಳ್ಳ ಇತರರು ಇರಬಹುದು ಎಂಬಂತೆ ನೆಹರೂ ಮತ್ತು ಪಟೇಲ್ ಇದ್ದರು. ಹಾಗಾಗಿ ನೆಹರೂರನ್ನು ನೆನಪಿಸಿಕೊಳ್ಳದೇ ಆಧುನಿಕ ಭಾರತ ನಿರ್ಮಾಣದ ಕಥನ ಹೇಳಲಾಗದು. ಪಟೇಲರನ್ನು ಪಕ್ಕಕ್ಕಿಟ್ಟು ರಾಷ್ಟ್ರದ ಏಕತೆಯ ಕತೆ ಹೆಣೆಯಲಾಗದು. ಅಂತೆಯೇ ಪಟೇಲರ ಎತ್ತರದ ಮೂರ್ತಿಯಿಂದ ನೆಹರೂ ಕುಬ್ಜರಾಗುವುದಿಲ್ಲ. ಅಸಂಖ್ಯ ಯೋಜನೆಗೆ ನೆಹರೂ ಹೆಸರಿಟ್ಟಾ ಕ್ಷಣ ಪಟೇಲ್ ಕೊಡುಗೆ ನಗಣ್ಯ ಎನಿಸುವುದಿಲ್ಲ. ನೆಹರೂ-ಪಟೇಲ್ ನವಭಾರತ ರಥದ ಅಶ್ವದ್ವಯರು. ಮೊನ್ನೆ ನೆಹರೂ ಕುರಿತ ಶಶಿ ತರೂರ್ ಕೃತಿ ಬಿಡುಗಡೆ ಮಾಡುತ್ತಾ ಸೋನಿಯಾ ಗಾಂಧಿ, ‘ಈಗ ಆಧಿಕಾರದಲ್ಲಿರುವವರು ನೆಹರೂ ಕೊಡುಗೆಯನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ’ ಎಂದಿದ್ದಾರೆ. ದಶಕಗಳ ಕಾಲ ನೆಹರೂ ಸ್ಮರಣೆಯಲ್ಲಿ ಪಟೇಲರನ್ನು ಉಪೇಕ್ಷಿಸಿದ್ದು ತರವೇ ಎಂದೂ ಅವರು ತಮ್ಮ ಬಳಗದೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.