ADVERTISEMENT

ಅರಬ್ ಜಗತ್ತಿಗೂ ಪಾಕಿಸ್ತಾನ ಅಪಥ್ಯವೇ?

ಮತ, ಸಿದ್ಧಾಂತಗಳು ರಾಷ್ಟ್ರಗಳ ನಡುವಿನ ಸ್ನೇಹ, ವೈರತ್ವವನ್ನು ನಿರ್ಧರಿಸುವ ಕಾಲಘಟ್ಟ ಇದಲ್ಲ

ಸುಧೀಂದ್ರ ಬುಧ್ಯ
Published 1 ಸೆಪ್ಟೆಂಬರ್ 2019, 18:39 IST
Last Updated 1 ಸೆಪ್ಟೆಂಬರ್ 2019, 18:39 IST
   

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ವಾಸ್ತವಕ್ಕೆ ಹತ್ತಿರವಿರುವ ಮಾತನ್ನು ಆಡಿದ್ದಾರೆ. ‘ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿರುವ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಥವಾ ಮುಸ್ಲಿಂ ಜಗತ್ತಿನಿಂದ ಪಾಕಿಸ್ತಾನ ಹೆಚ್ಚಿನ ಬೆಂಬಲ ನಿರೀಕ್ಷಿಸುವಂತಿಲ್ಲ. ನಾವು ಆ ಭ್ರಮೆಯಿಂದ ಹೊರಬರಬೇಕು’ ಎಂಬುದು ಖುರೇಷಿ ಮಾತು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೇಲೆ ಪಾಕಿಸ್ತಾನವು ಕಾಶ್ಮೀರದ ವಿಷಯವಾಗಿ ಭಾರತದ ವಿರುದ್ಧ ಇತರ ಜಾಗತಿಕ ಶಕ್ತಿಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿತು. ಆದರೆ ಸೌದಿ ಅರೇಬಿಯಾ, ಯುಎಇ ತರಹದ ಒಂದು ಕಾಲದ ಪಾಕಿಸ್ತಾನದ ಮಿತ್ರ ರಾಷ್ಟ್ರಗಳೇ ‘ಇದು ಭಾರತದ ಆಂತರಿಕ ವಿಚಾರ’ ಎಂದು ಕೈ ತೊಳೆದುಕೊಂಡವು. ಇಷ್ಟಲ್ಲದೇ ಯುಎಇ ತಾನು ಹಿಂದೆ ಘೋಷಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಝಾಯೆದ್’ ನೀಡಿ ಪುರಸ್ಕರಿಸಿತು. ಈ ಬೆಳವಣಿಗೆಗಳು ಖುರೇಷಿ ಅವರಿಂದ ‘ಭ್ರಮೆಯಿಂದ ಹೊರಬರಬೇಕು’ ಎಂಬ ಮಾತನ್ನಾಡಿಸಿತು.

ಹಾಗೆ ನೋಡಿದರೆ, ಯುಎಇ ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ಬಗಲಿಗೆ ನಿಂತಿತ್ತು. 1981ರಲ್ಲಿ ಇಂದಿರಾ ಗಾಂಧಿ ಈ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಬಿಟ್ಟರೆ, ಭಾರತದ ಉಳಿದ್ಯಾವ ನಾಯಕರೂ ಅಧಿಕೃತವಾಗಿ ಭೇಟಿ ನೀಡುವ ಸಂದರ್ಭ ಒದಗಿರಲಿಲ್ಲ. ಸಂಬಂಧವು ತೈಲಾವಲಂಬನೆಗೆ ಸೀಮಿತವಾಗಿತ್ತು. 2014ರಲ್ಲಿ ಮೋದಿ ಪ್ರಧಾನಿಯಾದಾಗ ಅರಬ್ ರಾಷ್ಟ್ರಗಳತ್ತ ದೃಷ್ಟಿನೆಟ್ಟರು. ಯುಎಇಗೆ ಭೇಟಿ ಇತ್ತರು. 2017ರ ಗಣರಾಜ್ಯೋತ್ಸವಕ್ಕೆ ಯುಎಇ ದೊರೆ ಶೇಖ್ ಮಹಮ್ಮದ್ ಬಿನ್ ಝಾಯೆದ್ ಮುಖ್ಯ ಅತಿಥಿಯಾಗಿ ಬಂದರು. ಹೀಗೆ ಭಾರತ ಮತ್ತು ಯುಎಇ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಾ ಬಂದಿತು.

ADVERTISEMENT

ಭಾರತದ ಒಟ್ಟು ತೈಲ ಆಮದಿನ ಶೇ 8ರಷ್ಟು ಯುಎಇಯಿಂದ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ, ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅರಬ್ ರಾಷ್ಟ್ರವು ಭಾರತದೊಂದಿಗೆ ತೊಡಗಿಸಿಕೊಂಡಿದೆ. ಯುಎಇಯ ಆರ್ಥಿಕತೆ ಭಾರತದ ಮೇಲೆ ಎರಡು ರೀತಿಯಲ್ಲಿ ಅವಲಂಬಿತವಾಗಿದೆ. ಭಾರತ ಮೂರನೇ ಅತಿದೊಡ್ಡ ತೈಲ ಉಪಭೋಗಿ ರಾಷ್ಟ್ರ. ಅಲ್ಲದೆ ಅಲ್ಲಿನ ಕೈಗಾರಿಕೆ, ಉದ್ಯಮಗಳು ಭಾರತದ ಶ್ರಮಿಕ ವರ್ಗವನ್ನು ನೆಚ್ಚಿಕೊಂಡಿವೆ. ಮೊದಲಿಗೆ ಆಹಾರೋದ್ಯಮ ಮತ್ತು ಸೇವಾ ಕ್ಷೇತ್ರದಲ್ಲಷ್ಟೇ ತೊಡಗಿಸಿಕೊಂಡಿದ್ದ ಭಾರತೀಯರು ಇದೀಗ ಎಲ್ಲ ರಂಗಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅನಿವಾಸಿ ಭಾರತೀಯರು ತಾಯ್ನಾಡಿಗೆ ರವಾನಿಸುವ ಹಣದ ವಿಷಯದಲ್ಲಿ ಅರಬ್ ರಾಷ್ಟ್ರಗಳಲ್ಲಿರುವ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ದೇಶಗಳ ನಡುವೆ ಪರಸ್ಪರ ಸಹಕಾರ ಅತ್ಯಗತ್ಯ.

2018ರಲ್ಲಿ ಭಾರತ ಮತ್ತು ಯುಎಇ ‘ಕರೆನ್ಸಿ ವಿನಿಮಯ’ ಒಪ್ಪಂದ ಮಾಡಿಕೊಂಡವು. ಮೊದಲಿಗೆ, ನಾವು ಡಾಲರ್ ಮೂಲಕವೇ ಯುಎಇ ಜೊತೆ ವ್ಯವಹರಿಸಬೇಕಿತ್ತು. ಯುಎಇ ಈಗ ರೂಪಾಯಿಗೆ ಮಾನ್ಯತೆ ನೀಡಿರುವುದರಿಂದ, ಭಾರತಕ್ಕೆ ಡಾಲರ್ ಮೇಲಿನ ಅವಲಂಬನೆ ಅಷ್ಟರ ಮಟ್ಟಿಗೆ ತಗ್ಗಿದೆ. ಇತ್ತೀಚೆಗೆ ಮೋದಿ ಅವರ ಯುಎಇ ಭೇಟಿಯ ವೇಳೆ ಯುಎಇಯ ಮಹತ್ವಾಕಾಂಕ್ಷಿ ಯೋಜನೆ ‘ಹೋಪ್ ಮಾರ್ಸ್ ಮಿಷನ್’ ಸಾಕಾರಕ್ಕೆ, ತನ್ನ ಕಾರ್ಯಕ್ಷಮತೆ ಮತ್ತು ಕೌಶಲದಿಂದ ಜಗತ್ತಿನ ಗಮನ ಸೆಳೆದಿರುವ ಭಾರತದ ಇಸ್ರೊ ಬೆಂಬಲವಾಗಿ ನಿಲ್ಲುವ ಬಗ್ಗೆ ಮಾತುಕತೆ ನಡೆದಿದೆ.

ಈಗಾಗಲೇ ಚರ್ಚಿತವಾಗಿರುವ ‘ಫುಡ್ ಕಾರಿಡಾರ್’ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ
ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ಭಾಗದ ರೈತರು ತಾವು ಬೆಳೆದ ಆಹಾರ ಪದಾರ್ಥಗಳನ್ನು ಯುಎಇಗೆ ಸುಲಭವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಹಾಗೆಂದು ಈ ದ್ವಿಪಕ್ಷೀಯ ಸ್ನೇಹ ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಅರಬ್ ರಾಷ್ಟ್ರ ತನ್ನ ನೆಲದಲ್ಲಿ 55 ಸಾವಿರ ಚದರ ಮೀಟರ್ ಜಾಗವನ್ನು ಹಿಂದೂ ದೇವಾಲಯ ನಿರ್ಮಾಣಕ್ಕೆ ಒದಗಿಸಿ ಬೆಂಬಲವಾಗಿ ನಿಂತಿದೆ. ಯುಎಇಯಲ್ಲಿ ತಲೆಮರೆಸಿಕೊಂಡಿ
ರುವ, ಭಾರತಕ್ಕೆ ಬೇಕಿರುವ ಪಾತಕಿಗಳನ್ನು ಹಸ್ತಾಂತರಿಸುವುದಕ್ಕೂ ಯುಎಇ ಮುಂದಾಗಿದೆ. ಹೀಗೆ ಭಾರತ ಮತ್ತು ಯುಎಇ ಸ್ವಹಿತಾಸಕ್ತಿಗೆ ಪೂರಕವಾಗಿ ಮುನ್ನಡೆಯುತ್ತಿದ್ದರೆ, ಪಾಕಿಸ್ತಾನ ತನ್ನ ದ್ವಂದ್ವ ವಿದೇಶಾಂಗ ನೀತಿ, ಕೆಟ್ಟ ಆಡಳಿತ ಮಾದರಿಯಿಂದ ಒಂದು ಕಾಲದ ಮಿತ್ರ ರಾಷ್ಟ್ರಗಳ ಉಪೇಕ್ಷೆಗೆ ಗುರಿಯಾಗಿದೆ.

ಬಿಡಿ, ಪಾಕಿಸ್ತಾನದ ಓಲೈಕೆಗೆ ಅರಬ್ ರಾಷ್ಟ್ರಗಳು ಮುಂದಾಗುತ್ತಿದ್ದ ಕಾಲಘಟ್ಟವೂ ಒಂದಿತ್ತು. 1969ರ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರಿ ಒಕ್ಕೂಟದ (ಐಒಸಿ) ಸಮಾವೇಶಕ್ಕೆ ಅರಬ್ ರಾಷ್ಟ್ರಗಳು ಭಾರತವನ್ನು ಆಹ್ವಾನಿಸಿ, ಪಾಕಿಸ್ತಾನ ಸಿಟ್ಟಾಯಿತೆಂಬ ಕಾರಣಕ್ಕೆ ಭಾರತವನ್ನು ಸಮಾವೇಶದಿಂದ ದೂರ ಇಟ್ಟಿದ್ದವು. ಜುಲ್ಫಿಕರ್ ಅಲಿ ಭುಟ್ಟೊ ಆಡಳಿತದ ಅವಧಿಯಲ್ಲಿ ಅರಬ್ ರಾಷ್ಟ್ರಗಳಿಂದ ಪಾಕಿಸ್ತಾನಕ್ಕೆ ಹಣದ ಹೊಳೆ ಹರಿಯಿತು. ಇದು ಹೆಚ್ಚು ಕಾಲ ನಡೆಯಲಿಲ್ಲ. ಮಧ್ಯಪ್ರಾಚ್ಯದಲ್ಲಿ ಶಾಂತಿ ಕಾಯ್ದುಕೊಳ್ಳಲು ಮತ್ತು ಅಫ್ಗಾನಿಸ್ತಾನದಲ್ಲಿ ರಷ್ಯಾವನ್ನು ಮಣಿಸಲು ಅಮೆರಿಕವು ಅರಬ್ ರಾಷ್ಟ್ರಗಳ ಜೊತೆಗಿನ ಸಖ್ಯ ಗಾಢಗೊಳಿಸಿತು. ಅರಬ್ ಜಗತ್ತು ಪಾಕಿಸ್ತಾನದಿಂದ ಅಂತರ ಕಾಯ್ದುಕೊಂಡಿತು.

ನಂತರ 2014ರಲ್ಲಿ ಯೆಮನ್ ಬಿಕ್ಕಟ್ಟು ಉಲ್ಬಣಿಸಿದಾಗ, ಸೇನಾ ನೆರವು ನೀಡುವಂತೆ ಪಾಕಿಸ್ತಾನಕ್ಕೆ ಯುಎಇ ಕೇಳಿಕೊಂಡಿತ್ತು. ಆದರೆ ಪಾಕಿಸ್ತಾನದ ಸಂಸತ್ತು ಮಧ್ಯಪ್ರಾಚ್ಯದ ವಿಷಯದಲ್ಲಿ ತಟಸ್ಥ ನಿಲುವು ಹೊಂದುವ ನಿರ್ಣಯ ಅಂಗೀಕರಿಸಿತು. ಇದರಿಂದ ಅರಬ್ ರಾಷ್ಟ್ರಗಳು ‘ಪಾಕಿಸ್ತಾನಕ್ಕೆ ಇರಾನ್ ಜೊತೆಗಿನ ಗೆಳೆತನ ಮುಖ್ಯವಾಯಿತೇ’ ಎಂದು ಸಿಟ್ಟಾದವು. ಸ್ಥಿರ ವಿದೇಶಾಂಗ ನೀತಿ ಇಟ್ಟುಕೊಳ್ಳದ ಪಾಕಿಸ್ತಾನ, ಕೇವಲ ಆರ್ಥಿಕವಾಗಿ ಲಾಭವಿದ್ದರಷ್ಟೇ ಗೆಳೆತನಕ್ಕೆ ಸ್ಪಂದಿಸುತ್ತದೆ ಎಂಬ ಭಾವನೆ ಅರಬ್ ರಾಷ್ಟ್ರಗಳಲ್ಲಿ ಬೆಳೆಯಿತು. ಹಾಗಾಗಿ, 2018ರಲ್ಲಿ ಅಬುಧಾಬಿಯಲ್ಲಿ ನಡೆದ ಐಒಸಿ ಸಮಾವೇಶಕ್ಕೆ ಭಾರತವನ್ನು ಗೌರವ ಅತಿಥಿಯಾಗಿ ಆಹ್ವಾನಿಸಿತು. ಐಒಸಿ ಸಮಾವೇಶದಲ್ಲಿ ಭಾರತ ಪಾಲ್ಗೊಂಡರೆ ತಾನು ಸಮಾವೇಶ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಎಚ್ಚರಿಸಿತು. ಆದರೆ ಅರಬ್ ರಾಷ್ಟ್ರಗಳು ಪಾಕಿಸ್ತಾನದ ಮುನಿಸಿಗೆ ಸೊಪ್ಪುಹಾಕಲಿಲ್ಲ. ಇಸ್ಲಾಂ ರಾಷ್ಟ್ರಗಳ ಸಮಾವೇಶದಿಂದ ಪಾಕಿಸ್ತಾನ ಹೊರಗುಳಿಯಿತು!

ಈ ಬಾರಿ ಒಂದು ಹೆಜ್ಜೆ ಮುಂದಿರಿಸಿರುವ ಪ್ರಧಾನಿ ಮೋದಿ, ಯುಎಇ ಜೊತೆಗೆ ಬಹರೇನ್ ದೇಶಕ್ಕೂ ಭೇಟಿ ಇತ್ತಿದ್ದಾರೆ. ಇದು ಭಾರತೀಯ ನಾಯಕರೊಬ್ಬರು ಈ ದ್ವೀಪರಾಷ್ಟ್ರಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ. ಜೊತೆಗೆ ಯುಎಇ ಮತ್ತು ಸೌದಿ ಅರೇಬಿಯಾವನ್ನು ಕಾಶ್ಮೀರದಲ್ಲಿ ಹಣ ಹೂಡಲು ಆಹ್ವಾನಿಸಿ ಭಾರತ ಜಾಣ್ಮೆ ಮೆರೆದಿದೆ. ಒಂದೊಮ್ಮೆ ಈ ಎರಡು ದೇಶಗಳೂ ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಿದರೆ, ಭಯೋತ್ಪಾದನೆಯ ಮೂಲಕ ಭಾರತದೊಂದಿಗೆ ಪರೋಕ್ಷ ಯುದ್ಧದಲ್ಲಿ ತೊಡಗಿರುವ ಪಾಕಿಸ್ತಾನದ ಕೈ ಕಟ್ಟಿದಂತಾಗುತ್ತದೆ.

ಒಂದಂತೂ ನಿಜ. ಮತ, ಸಿದ್ಧಾಂತಗಳು ರಾಷ್ಟ್ರಗಳ ನಡುವಿನ ಸ್ನೇಹ, ವೈರತ್ವವನ್ನು ನಿರ್ಧರಿಸುವ ಕಾಲಘಟ್ಟ ಇದಲ್ಲ. ಬದಲಾಗಿ ಆರ್ಥಿಕ ಮತ್ತು ವ್ಯೂಹಾತ್ಮಕ ಹಿತಾಸಕ್ತಿಗಳು ದ್ವಿಪಕ್ಷೀಯ ಸಂಬಂಧ ನಿರ್ಧರಿಸುತ್ತವೆ. ಅರಬ್ ಜಗತ್ತಿನ ವಿಷಯದಲ್ಲಿ ಆಗುತ್ತಿರುವುದು ಇದೇ. ಅರಬ್ ರಾಷ್ಟ್ರಗಳಿಗೆ ಪಾಕಿಸ್ತಾನ ದೊಡ್ಡ ಮಾರುಕಟ್ಟೆ
ಯಲ್ಲ. ಬದಲಿಗೆ, ಆರ್ಥಿಕ ಸಂಕಷ್ಟ ಎದುರಾದಾಗ ಸಹಾಯಕ್ಕಾಗಿ ಕೈಚಾಚುವ ಮುಸ್ಲಿಂ ರಾಷ್ಟ್ರವಾಗಿ ಮಾತ್ರ ಉಳಿದಿದೆ. ಆಂತರಿಕವಾಗಿ ಶಕ್ತಿಶಾಲಿಯಾಗಿರದ ಯಾವುದೇ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುವುದಿಲ್ಲ. ಭಯೋತ್ಪಾದನೆ ವಿಷಯದಲ್ಲಿನ ದ್ವಂದ್ವ ನೀತಿ, ಆರ್ಥಿಕ ದಿವಾಳಿತನದಿಂದಾಗಿ ಪಾಕಿಸ್ತಾನ ಏಕಾಂಗಿಯಾಗುತ್ತಿದೆ. ಭಾರತದ ಮೇಲಿನ ದ್ವೇಷ, ಅಸೂಯೆಯು ಪಾಕಿಸ್ತಾನವನ್ನು ಇನ್ನಷ್ಟು ಬಡಕಲು ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.