ಲೇಖನದ ಶೀರ್ಷಿಕೆಯಂತೆಯೇ ಮಧ್ಯಪ್ರಾಚ್ಯ ಕೂಡ ಕ್ಲಿಷ್ಟ, ಗೊಂದಲಮಯ. ತೈಲವನ್ನು ಒಡಲಲ್ಲಿ ತುಂಬಿಕೊಂಡಿರುವ ಮಧ್ಯಪ್ರಾಚ್ಯ ಕೊಂಚ ಕನಲಿದರೂ, ಆ ಬೇನೆ ಜಗತ್ತಿನ ಇತರ ರಾಷ್ಟ್ರಗಳಿಗೆ ಬಹುಬೇಗ ಹಬ್ಬುತ್ತದೆ. ಅಲ್ಲಿನ ಪ್ರತೀ ಬೆಳವಣಿಗೆಯು ಜಾಗತಿಕ ಅರ್ಥವ್ಯವಸ್ಥೆಗೆ ಏದುಸಿರು ಬರುವಂತೆ ಮಾಡುತ್ತದೆ. ಈ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಹಲವು ದೇಶಗಳು ಪೈಪೋಟಿಗೆ ನಿಲ್ಲುತ್ತವೆ. ಶಿಯಾ ಹಾಗೂ ಸುನ್ನಿ ಮುಸ್ಲಿಂ ಪಂಗಡಗಳ ಬಡಿದಾಟದ ಅಂಗಳವೂ ಮಧ್ಯಪ್ರಾಚ್ಯವೇ ಆಗಿರುವುದರಿಂದ ಒಂದಿಲ್ಲೊಂದು ಜಟಾಪಟಿಗೆ ಕಾರಣವಾಗಿ ಜಗತ್ತಿನ ಗಮನ ಸೆಳೆಯುತ್ತದೆ.
ಅಮೆರಿಕ ಹಾಗೂ ಇರಾನ್ ನಡುವೆ ಇತ್ತೀಚೆಗೆ ಸಣ್ಣದಾಗಿ ಆರಂಭವಾದ ಜಟಾಪಟಿ, ಮೇಜರ್ ಜನರಲ್ ಖಾಸಿಂ ಸುಲೇಮಾನಿಯ ಹತ್ಯೆಯೊಂದಿಗೆ ಉದ್ವಿಗ್ನಗೊಂಡಿತು. ಸುಲೇಮಾನಿಯ ಹತ್ಯೆಯು ಯುದ್ಧಕ್ಕೆ ಮುನ್ನುಡಿ ಎಂದೇ ಇಡೀ ಜಗತ್ತು ಭಾವಿಸಿಕೊಂಡಿತ್ತು. ಆದರೆ ಹಾಗೇನೂ ಆಗಲಿಲ್ಲ. ಕಳೆದ 40 ವರ್ಷಗಳ ಇತಿಹಾಸದಲ್ಲಿ, ಅಮೆರಿಕ– ಇರಾನ್ ನಡುವೆ ಇಂತಹ ನಾಲ್ಕಾರು ಘರ್ಷಣೆಗಳು ನಡೆದಿವೆ. ಶೀತಲ ಸಮರದ ಅವಧಿಯಲ್ಲಿ ಅಮೆರಿಕದ ಮಿತ್ರ ರಾಷ್ಟ್ರವಾಗಿಯೇ ಇರಾನ್ ಇತ್ತು. ಅಮೆರಿಕದ ಸಖ್ಯದಲ್ಲಿ ತನ್ನ ಸೇನಾ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕೆಂಬ ಅಭಿಲಾಷೆ ಇರಾನಿಗಿತ್ತು. ಆದರೆ 1979ರಲ್ಲಿ ಘಟಿಸಿದ ‘ಇಸ್ಲಾಮಿಕ್ ಕ್ರಾಂತಿ’ ಬೇರೊಂದು ತಿರುವು ನೀಡಿತು.
ಮುಸ್ಲಿಮೇತರ ಪಶ್ಚಿಮ ದೇಶಗಳ ಕೈಗೊಂಬೆಯಂತಿದ್ದ ರೆಜಾ ಶಾ ಪಹ್ಲವಿಯನ್ನು ಪದಚ್ಯುತಗೊಳಿಸಿದ ಇಸ್ಲಾಂ ಧರ್ಮಗುರು ಆಯತೊಲ್ಲಾ ಖೊಮೇನಿ, ಕಟ್ಟಾ ಶಿಯಾ ಇಸ್ಲಾಮಿಕ್ ಮೂಲಭೂತವಾದಿ ಸರ್ಕಾರವನ್ನು ಟೆಹರಾನ್‌ನಲ್ಲಿ ಸ್ಥಾಪಿಸಿದರು. ಪದಚ್ಯುತಗೊಂಡಿದ್ದ ಶಾ, ಅಮೆರಿಕದಲ್ಲಿ ರಾಜಕೀಯ ಆಶ್ರಯ ಕೋರಿದರು. ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಆ ಮನವಿಗೆ ಸಮ್ಮತಿಸಿದರು. ಆದರೆ ಶಾನನ್ನು ತನಗೆ ಒಪ್ಪಿಸಬೇಕೆಂದು ಇರಾನ್ ಪಟ್ಟುಹಿಡಿಯಿತು.
ಒತ್ತಡ ಹೇರಲೋ ಎಂಬಂತೆ 1979ರ ನವೆಂಬರ್‌ನಲ್ಲಿ, ಟೆಹರಾನಿನಲ್ಲಿನ ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಮೂಲಭೂತವಾದಿ ಸಂಘಟನೆಗೆ ಸೇರಿದ ತರುಣರ ಗುಂಪೊಂದು ವಶಪಡಿಸಿಕೊಂಡಿತು. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 52 ಮಂದಿಯನ್ನು 444 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿತು. ಇಲ್ಲಿಂದ ಇರಾನ್- ಅಮೆರಿಕದ ಸಂಬಂಧ ಹಳಸಿತು. ಇದನ್ನೇ ಟ್ರಂಪ್ ತಮ್ಮ ಟ್ವೀಟ್ ಮೂಲಕ 52 ಎಂದು ನೆನಪಿಸಿದ್ದು. ನಂತರ 1981ರ ಜುಲೈ 3ರಂದು ಪರ್ಷಿಯನ್ ಗಲ್ಫ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ಯುದ್ಧನೌಕೆ, ಇರಾನಿಗೆ ಸೇರಿದ್ದ ನಾಗರಿಕ ವಿಮಾನವನ್ನು ಹೊಡೆದುರುಳಿಸಿತು.
ಯುದ್ಧವಿಮಾನ ಎಂದು ತಪ್ಪಾಗಿ ಭಾವಿಸಿದ್ದರಿಂದ ಈ ಕೃತ್ಯ ನಡೆದಿದೆ ಎಂದು ಸಬೂಬು ಹೇಳಿತು. ಆದರೆ ಆ ನಾಗರಿಕ ವಿಮಾನದಲ್ಲಿದ್ದ 290 ದುರ್ದೈವಿಗಳು ತಮ್ಮ ಯಾವುದೇ ತಪ್ಪಿಲ್ಲದೆ ಸಾವನ್ನಪ್ಪಿದ್ದರು. ಇದು 52 ಎಂಬ ಟ್ರಂಪ್ ಟ್ವೀಟ್‌ಗೆ ಉತ್ತರವಾಗಿ ಇರಾನ್ ಅಧ್ಯಕ್ಷ ರೌಹಾನಿ ನೆನಪಿಸಿದ 290ರ ಪ್ರಸಂಗ.
ಹೀಗೆ ಇರಾನ್– ಅಮೆರಿಕದ ನಡುವೆ ಬೆಳೆದ ವೈಷಮ್ಯವು ಹಲವು ಕಾರಣಗಳು ಸೇರಿಕೊಂಡಾಗ ಹಿರಿದಾಯಿತು. 2012ರ ಜನವರಿಯಲ್ಲಿ ಟೆಹರಾನ್‌ನಲ್ಲಿ ಇರಾನ್ ಅಣು ವಿಜ್ಞಾನಿಯೊಬ್ಬರ ಹತ್ಯೆ ನಡೆಯಿತು. ಇದು ಇಸ್ರೇಲ್ ಮತ್ತು ಅಮೆರಿಕದ ಕೃತ್ಯ ಎಂದು ಇರಾನ್ ಆರೋಪಿಸಿತು. ಆಗ ದೊಡ್ಡ ಮಟ್ಟದಲ್ಲಿ ಕೇಳಿಬಂದ ಹೆಸರೇ ಖಾಸಿಂ ಸುಲೇಮಾನಿ. ‘ನೀವು ಯುದ್ಧ ಆರಂಭಿಸಿದ್ದೀರಿ, ನಾವು ಅಂತ್ಯಗೊಳಿಸುತ್ತೇವೆ’ ಎಂದು ಖುದ್ಸ್ ಪಡೆಯ ಮುಖ್ಯಸ್ಥ ಸುಲೇಮಾನಿ ಅಬ್ಬರಿಸಿದ್ದರು.
ಖುದ್ಸ್ ಪಡೆ ಅಸಾಂಪ್ರದಾಯಿಕ ಯುದ್ಧ ಮತ್ತು ಮಿಲಿಟರಿ ಬೇಹುಗಾರಿಕೆಯಲ್ಲಿ ನೈಪುಣ್ಯ ಹೊಂದಿರುವ ಇರಾನ್ ಮಿಲಿಟರಿಯ (ಐಆರ್‌ಜಿಸಿ) ಒಂದು ಘಟಕ. ಹಾಗಾಗಿ ಪ್ರತೀಕಾರಕ್ಕೆ ಸುಲೇಮಾನಿ, ನೇರ ಯುದ್ಧವನ್ನು ಆಯ್ದುಕೊಳ್ಳಲಿಲ್ಲ, ಬದಲಿಗೆ ಜಗತ್ತಿನ ನಾನಾ ಭಾಗದಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ. ಒಂದು ತಿಂಗಳ ಅವಧಿಯಲ್ಲೇ ದೆಹಲಿಯ ಇಸ್ರೇಲ್ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಆತ್ಮಾಹುತಿ ದಾಳಿ ನಡೆಯಿತು. ಅದರ ಬೆನ್ನಲ್ಲೇ ಜಾರ್ಜಿಯಾ ಹಾಗೂ ಥಾಯ್ಲೆಂಡ್‌ಗಳಲ್ಲಿ ಅಂತಹುದೇ ದಾಳಿಗಳು ನಡೆದವು. ಇರಾನಿನ ಪ್ರತೀಕಾರ ನಿರೀಕ್ಷಿಸಿ ಗಡಿಯಲ್ಲಿ ಸೈನಿಕರನ್ನು ಜಾಗೃತವಾಗಿಟ್ಟು ಕುಳಿತಿದ್ದ ಇಸ್ರೇಲ್ ನಾಯಕರಿಗೆ, ದೂರದ ದೇಶಗಳಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಷ್ಟು ಸುಲೇಮಾನಿಯ ಖುದ್ಸ್ ಪಡೆ ಬೆಳೆದಿದೆ ಎಂಬ ಸಂಗತಿಯೇ ಗಾಬರಿ ಹುಟ್ಟಿಸಿತ್ತು. ಆಗ ಸುಲೇಮಾನಿ ಮೇಲೆ ಅಮೆರಿಕ ಕಣ್ಣಿಟ್ಟಿತು.
ಸುಲೇಮಾನಿ ತಂತ್ರಗಾರಿಕೆ ಇರಾನ್ ವಿರೋಧಿಗಳನ್ನು ದಾರಿ ತಪ್ಪಿಸುವಂತೆ ಇರುತ್ತಿತ್ತು. ಆತ ಮೊದಲಿಗೆ ಅಲ್‌ಕೈದಾ ಮತ್ತು ತಾಲಿಬಾನ್ ವಿರುದ್ಧದ ಅಮೆರಿಕದ ಕಾರ್ಯಾಚರಣೆಯನ್ನು ಬೆಂಬಲಿಸಿದ್ದ. ಅದಕ್ಕೆ ಕಾರಣ, ಅವು ಸುನ್ನಿ ಉಗ್ರ ಸಂಘಟನೆಗಳು ಎಂಬುದಾಗಿತ್ತು. ನಂತರ ಸುನ್ನಿ ಉಗ್ರರು ಅಫ್ಗಾನಿಸ್ತಾನದಿಂದ ಇರಾಕ್‌ನತ್ತ ಹೋಗಲು ಸಹಾಯ ಮಾಡಿದ. ಅಮೆರಿಕ ದ್ವೇಷಿ ಸದ್ದಾಂ ಹುಸೇನ್ ಜೊತೆಗೆ ಈ ಸಂಘಟನೆಗಳು ಸೇರಿಕೊಂಡರೆ ಪ್ರಯೋಜನವಾದೀತು ಎಂಬ ಲೆಕ್ಕಾಚಾರ ಈ ತಂತ್ರಗಾರಿಕೆಯ ಹಿಂದಿತ್ತು. ಸದ್ದಾಂ ಹುಸೇನ್ ಅಧ್ಯಾಯ ಮುಗಿದ ಬಳಿಕ ಇರಾಕ್‌ನಲ್ಲಿ ಉಂಟಾದ ನಿರ್ವಾತವನ್ನು ತುಂಬಲು ಸುಲೇಮಾನಿ ಯೋಜನೆ ರೂಪಿಸಿದ.
ಲೆಬನಾನ್ ಮೂಲದ ಹಿಜ್‌ಬುಲ್ಲಾ, ಪ್ಯಾಲೆಸ್ಟೀನ್ ಮೂಲದ ಹಮಾಸ್‌ನಂತಹ ಉಗ್ರ ಸಂಘಟನೆಗಳಿಗೆ ನೀರೆರೆದು ಅಮೆರಿಕಕ್ಕೆ ತಲೆನೋವಾದ. ಇದು ಸಾಲದೆಂಬಂತೆ, ಸುನ್ನಿ ಪ್ರಾಬಲ್ಯದ ಸೌದಿ ಅರೇಬಿಯಾದಲ್ಲಿ ಆಡಳಿತವಿರೋಧಿ ಅಲೆ ಎಬ್ಬಿಸುವ ಕೆಲಸಕ್ಕೆ ಕೈ ಹಾಕಿದ. ಶಿಯಾ ಪ್ರಾಬಲ್ಯವಿರುವ ಈಶಾನ್ಯ ಸೌದಿ ಅರೇಬಿಯಾವು ಸುಲೇಮಾನಿ ತಾಳಕ್ಕೆ ತಕ್ಕಂತೆ ಕುಣಿಯಿತು. ಹಿಂಸಾಚಾರ, ಅಶಾಂತಿ ಆ ಪ್ರದೇಶದಲ್ಲಿ ಹೆಚ್ಚಿತು.
ಬರಾಕ್ ಒಬಾಮ ಅವಧಿಯಲ್ಲಿ ಇರಾನ್- ಅಮೆರಿಕದ ಸಂಬಂಧ ಒಂದು ಸಮಸ್ಥಿತಿಗೆ ಬಂತು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹವಣಿಸುತ್ತಿದ್ದ ಇರಾನಿಗೆ ಅಮೆರಿಕವು ಆರ್ಥಿಕ ದಿಗ್ಬಂಧನ ಹಿಂತೆಗೆದರೆ ಸಾಕಿತ್ತು. ಕರಾರುಬದ್ಧ ಅಣ್ವಸ್ತ್ರ ಒಪ್ಪಂದಕ್ಕೆ ಅದು ಸಹಿ ಹಾಕಿತು. ಆದರೆ ಟ್ರಂಪ್ ಅಧ್ಯಕ್ಷರಾದ ತರುವಾಯ, ಈ ಒಪ್ಪಂದದ ಬಗ್ಗೆ ಅಪಸ್ವರ ತೆಗೆದರು. ತಮ್ಮ ಬೆಂಬಲಕ್ಕೆ ನಿಂತ ಯಹೂದಿಗಳನ್ನು, ಸೌದಿಯ ಸುಲ್ತಾನರನ್ನು ಖುಷಿಪಡಿಸಬೇಕು ಎಂಬ ಇಂಗಿತ ಈ ಅಪಸ್ವರದ ಹಿಂದಿತ್ತು. ಇರಾನ್- ಅಮೆರಿಕದ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ಪರಿಣಾಮವಾಗಿ, 2019ರ ಮೇ ಮತ್ತು ಜೂನ್ ತಿಂಗಳಲ್ಲಿ ಒಮನ್ ಸಮುದ್ರ ಮಾರ್ಗವಾಗಿ ಬರುತ್ತಿದ್ದ 6 ತೈಲ ನೌಕೆಗಳ ಮೇಲೆ ಸುಲೇಮಾನಿ ತಂಡ ದಾಳಿ ನಡೆಸಿತು.
ಈಗಿನ ಉದ್ವಿಗ್ನ ಸ್ಥಿತಿಯ ಮೊದಲ ಕಿಡಿ ಹೊತ್ತಿಕೊಂಡಿದ್ದೇ ಅಲ್ಲಿ. ಒಟ್ಟಿನಲ್ಲಿ, ಸುಲೇಮಾನಿ ಹತ್ಯೆ ಅಮೆರಿಕ- ಇರಾನ್ ನಡುವಿನ ಮುಸುಕಿನ ಯುದ್ಧದ ಪ್ರಮುಖ ಘಟ್ಟ. ಉಭಯ ದೇಶಗಳ ನಾಯಕರನ್ನು ದಾಳಿಗೆ ಗುರಿಯಾಗಿಸಿಕೊಳ್ಳುವಂತಿಲ್ಲ ಎಂಬ ಒಪ್ಪಂದ ಇದರೊಂದಿಗೆ ಮುರಿದುಬಿದ್ದಿದೆ. ಮುಂದೇನು ಎಂಬುದನ್ನು ಬಲ್ಲವರಿಲ್ಲ. ಸುಲೇಮಾನಿ ಕಟ್ಟಿದ ಖುದ್ಸ್ ಪಡೆ ಈಗಾಗಲೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಾರ್ಯಾಚರಣೆಗೆ ಇಳಿಯುವಷ್ಟು ಉಪಸ್ಥಿತಿ ಹೊಂದಿದೆ. ಹಾಗಾಗಿ ಭಾರತ- ಇರಾನ್ ಬಾಂಧವ್ಯ ಉತ್ತಮವಾಗಿದ್ದರೂ ಎಚ್ಚರಿಕೆಯಂತೂ ಇರಲೇಬೇಕು. 52ಕ್ಕೆ ಉತ್ತರವಾಗಿ 290ನ್ನು ಇತಿಹಾಸ ನೆನಪಿಸಿದೆ. ಮೊನ್ನೆ ಇರಾನ್ ಅಚಾತುರ್ಯದಿಂದ ಉಕ್ರೇನ್ ವಿಮಾನದಲ್ಲಿದ್ದ 176 ಮಂದಿ ಅಕಾರಣವಾಗಿ ಸತ್ತಿದ್ದಾರೆ. ಈ 176ಕ್ಕೆ ಉತ್ತರ ಏನಿದ್ದೀತೋ? ಯಾರು ಯಾವ ಬೆಲೆ ತೆರಬೇಕಾದೀತೋ ಬಲ್ಲವರಾರು?
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.